ಸಾರ್ವಜನಿಕ ಕುಂದುಕೊರತೆ : ಸೆ.25ರ ಅಂತ್ಯಕ್ಕೆ 10,313 ದೂರು ಅರ್ಜಿಗಳು ನಿಗದಿತ ಅವಧಿಯೊಳಗೆ ಇತ್ಯರ್ಥವಾಗಿಲ್ಲ
ಬೆಂಗಳೂರು : ಸರಕಾರಿ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಿರುವ ವಿವಿಧ ಸೇವೆಗಳಲ್ಲಿನ ನ್ಯೂನತೆ ಮತ್ತು ಸಾರ್ವಜನಿಕ ಕುಂದುಕೊರತೆ ಕುರಿತು ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿತ 7 ದಿನಗಳ ಅವಧಿಯೊಳಗೇ ಇತ್ಯರ್ಥಗೊಳಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದರೂ ಸಹ 2026ರ ಸೆ.25ರ ಅಂತ್ಯಕ್ಕೆ ಒಟ್ಟಾರೆ 10,313 ದೂರು ಅರ್ಜಿಗಳು ನಿಗದಿತ ಅವಧಿಯೊಳಗೆ ಇತ್ಯರ್ಥವಾಗಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ವಿಶೇಷವಾಗಿ ಅಧಿಕಾರಿಗಳು ಕುಂದುಕೊರತೆಗಳನ್ನು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಸಾಮಾನ್ಯ ಮತ್ತು ಅಸ್ಪಷ್ಟ ಕಾರಣಗಳನ್ನು ನೀಡುತ್ತಿದ್ದಾರೆ. ಇಲಾಖೆಯ ಸೇವಾ ವಿತರಣೆ ಮಟ್ಟದಲ್ಲಿಯೂ ಕ್ಷೇತ್ರ ಅನುಷ್ಠಾನಾಧಿಕಾರಿಗಳು ಗಂಭೀರವಾಗಿ ನಿರ್ಲಕ್ಷ್ಯ ವಹಿಸಿರುವ ಅನೇಕ ಪ್ರಕರಣಗಳು ಕಂಡು ಬಂದಿವೆ. ಪ್ರಜಾಸೇವೆ ಅಭಿಯಾನಕ್ಕೆ ರಾಜ್ಯ ಸರಕಾರವು ಅಪಾರ ಪ್ರಮಾಣದಲ್ಲಿ ಖರ್ಚು ಮಾಡುತ್ತಿದ್ದರೂ ಸಹ ನಾಗರೀಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ.
ಮತ್ತೊಂದು ವಿಶೇಷವೆಂದರೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ನಗರಾಭಿವೃದ್ಧಿ ಇಲಾಖೆಯು, ಸೇವಾ ವಿತರಣೆ ಮಟ್ಟದಲ್ಲಿ ಗಂಭೀರವಾದ ನಿರ್ಲಕ್ಷ್ಯ ವಹಿಸಿದೆ.
ಸಾರ್ವಜನಿಕರು ಇಲಾಖೆಗಳಿಗೆ ನಿರಂತರವಾಗಿ ಕುಂದುಕೊರತೆ ಅರ್ಜಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಪ್ರಜಾಸೇವೆ ಅಭಿಯಾನದಲ್ಲಿಯೂ ಬೆಟ್ಟದಷ್ಟು ಸಂಖ್ಯೆಯಲ್ಲಿನ ಕುಂದುಕೊರತೆ ಅರ್ಜಿಗಳನ್ನು ನೋಂದಣಿ ಮಾಡುತ್ತಿದ್ದಾರೆ. ಆದರೂ ಸಹ ಈ ಅರ್ಜಿಗಳು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳ್ಳುತ್ತಿಲ್ಲ. ಇಲಾಖೆ ಮುಖ್ಯಸ್ಥರು ಅಥವಾ ಸಕ್ಷಮ ಪ್ರಾಧಿಕಾರಗಳು ಇಂತಹ ಕುಂದುಕೊರತೆಗಳ ಅರ್ಜಿಗಳಿಗೆ ಸಂಬಂಧಿಸಿದಂತೆ ಕನಿಷ್ಟ ಹಿಂಬರಹವನ್ನೂ ನೀಡುತ್ತಿಲ್ಲ.
ಕುಂದುಕೊರತೆಗಳ ದೂರರ್ಜಿ, ಮನವಿಗಳಿಗೆ ಸಂಬಂಧಿಸಿದಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2026ರ ಸೆ. 29ರಂದು ವಿಕಾಸಸೌಧದಲ್ಲಿ ಸಭೆ ನಡೆದಿತ್ತು. ಈ ಸಭೆಗೆ ಇಲಾಖೆಗಳು ಕುಂದುಕೊರತೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯ ಸದ್ಯದ ಸ್ಥಿತಿಗತಿಯ ಕುರಿತು ವಿಶ್ಲೇಷಣೆ ವರದಿ ಸಲ್ಲಿಸಿವೆ. ಈ ವಿಶ್ಲೇಷಣೆ ವರದಿಗಳ ಪ್ರಕಾರ ಸಾರ್ವಜನಿಕರ ದೂರು, ದುಮ್ಮಾನಗಳ ಅರ್ಜಿಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
2026ರ ಸೆ. 29ರಂದು ವಿಕಾಸಸೌಧದಲ್ಲಿ ಸಭೆಗೆ ಮಂಡಿಸಿರುವ ವಿಶ್ಲೇಷಣೆ ವರದಿ ಮತ್ತು ದತ್ತಾಂಶಗಳ ಕುರಿತಾದ ದಾಖಲೆಗಳು "the-file.in"ಗೆ ಲಭ್ಯವಾಗಿವೆ. ಪ್ರತಿ ಸಾರ್ವಜನಿಕ ದೂರು, ಮನವಿಗಳನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಪೋರ್ಟಲ್ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. ಐಪಿಜಿಆರ್ಎಸ್ ತಂತ್ರಾಂಶದಲ್ಲಿ ದಾಖಲಿಸಿರುವ ಕುಂದುಕೊರತೆಯನ್ನು 7 ದಿನಗಳ ಕಾಲಾವಧಿಯಲ್ಲಿ ಮತ್ತು ಮನವಿಗಳನ್ನು 30 ದಿನಗಳಲ್ಲಿ ವಿಲೇ ಮಾಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರೊಂದಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ಐಪಿಜಿಆರ್ಎಸ್ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಮತ್ತು ಎಲ್ಲಾ ದೂರುಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಾತ್ಮಕವಾಗಿ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು.
ದೂರುಗಳನ್ನು ವಿಲೇ ಮಾಡುವಾಗ ಸಮರ್ಪಕವಾದ ಷರಾ ನಮೂದಿಸಬೇಕು. ಅಥವಾ ಹಿಂಬರಹವನ್ನು ಕಡ್ಡಾಯವಾಗಿ ನೀಡಬೇಕು. ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಯೋಜನೆಯು ಅತ್ಯಂತ ಪ್ರಮುಖ ಮತ್ತು ಮಹತ್ವದ ಯೋಜನೆಯಾಗಿದೆ. ಮುಂಬರುವ ದಿನಗಳಲ್ಲಿ ಈ ತಂತ್ರಾಂಶವನ್ನು ಕೃತಕ ಬುದ್ದಿಮತ್ತೆ ಮತ್ತು ಇ-ಆಫೀಸ್ ವ್ಯವಸ್ಥೆಯೊಂದಿಗೆ ಸಂಯೋಜಿಸುತ್ತಿದೆ. ಮುಂಬರುವ ದಿನಗಳಲ್ಲಿ ಐಪಿಜಿಆರ್ಎಸ್ ಅಡಿಯಲ್ಲಿ ಬರುವ ಕುಂದುಕೊರತೆಗಳನ್ನು ಹಂತ-ಹಂತವಾಗಿ ಸಕಾಲ ಸೇವೆಗಳ ವ್ಯಾಪ್ತಿಗೆ ತರಲಾಗುತ್ತಿದೆ. ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡದ ಅಧಿಕಾರಿಗಳಿಗೆ ಸಕಾಲ ಕಾಯ್ದೆ ಅನ್ವಯ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸಾರ್ವಜನಿಕ ದೂರುಗಳ ಪರಿಹಾರ ಪ್ರಕ್ರಿಯೆಯನ್ನು ಅತ್ಯಂತ ಗಂಭೀರ ಮತ್ತು ಆದ್ಯತೆ ವಿಷಯವೆಂದು ಪರಿಗಣಿಸಬೇಕು.
ಆದರೆ 2026ರ ಸೆ. 25ರ ಅಂತ್ಯಕ್ಕೆ ಐಪಿಜಿಆರ್ಎಸ್ನಲ್ಲಿ ದಾಖಲಾಗಿದ್ದ ಒಟ್ಟು ದೂರುಗಳ ಪೈಕಿ 4,363 ದೂರುಗಳನ್ನು 47 ಇಲಾಖೆಗಳು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸದೇ ಬಾಕಿ ಇರಿಸಿಕೊಂಡಿದ್ದವು. ಅದೇ ರೀತಿ ಸಿಪಿ ಗ್ರಾಮ್ಸ್ನಲ್ಲಿ 4,378, ಮುಖ್ಯ ಕಾರ್ಯದರ್ಶಿ ಕಚೇರಿಯಿಂದ 1,244, ಮುಖ್ಯಮಂತ್ರಿ ಕಚೇರಿಯಿಂದ 328 ದೂರರ್ಜಿಗಳನ್ನು ಇತ್ಯರ್ಥಗೊಳಿಸದೇ ಬಾಕಿ ಇರಿಸಿಕೊಂಡಿದ್ದವು. ಈ ಎಲ್ಲಾ ವಿಭಾಗಗಳಿಂದ ಒಟ್ಟಾರೆ 10,313 ದೂರರ್ಜಿಗಳು ನಿಗದಿತ ಅವಧಿಯೊಳಗೆ ಇತ್ಯರ್ಥ ಮಾಡಿಲ್ಲ.
ಈ ಬಗ್ಗೆ ಪ್ರಜಾಸೇವಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಎಲ್ಲಾ ಇಲಾಖೆಗಳ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ 2026ರ ಸೆ.15ರಂದು ಪತ್ರ ಬರೆದಿದ್ದರು.