ಸಾಂದರ್ಭಿಕ ಚಿತ್ರ (Photo: NDTV)

ಬದರಿನಾಥ ಪಟ್ಟಣದ ಸುತ್ತಲಿನ ಪರ್ವತಗಳ ಮೇಲಿನ ಕಡಿದಾದ ಇಳಿಜಾರುಗಳಲ್ಲಿ ನೇತಾಡುತ್ತಿರುವಂತೆ ಕಾಣುವ ಹಿಮನದಿಗಳು ಒಡೆದು ದೊಡ್ಡ ಪ್ರಮಾಣದ ಹಿಮಪಾತ ಸಂಭವಿಸುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಹಿಮಾಲಯದ ಪ್ರಮುಖ ಪಟ್ಟಣವಾದ ಬದರಿನಾಥದ ಮೇಲಿರುವ ತೂಗು ಹಿಮನದಿಗಳಿಂದ ಸಂಭವಿಸಬಹುದಾದ ಹಿಮಪಾತಗಳು ನೂರಾರು ಕಟ್ಟಡಗಳು ಮತ್ತು ಪ್ರಮುಖ ಮೂಲಸೌಕರ್ಯಗಳಿಗೆ ಅಪಾಯ ಉಂಟುಮಾಡಬಹುದು ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಎಚ್ಚರಿಸಿದೆ. ಅಲ್ಲದೆ, ಅಧಿಕಾರಿಗಳು ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಬದರಿನಾಥ ಪಟ್ಟಣದ ಸುತ್ತಲಿನ ಪರ್ವತಗಳ ಮೇಲಿರುವ ‘ತೂಗು ಹಿಮನದಿಗಳು’ ಒಡೆದು ದೊಡ್ಡ ಪ್ರಮಾಣದ ಹಿಮಪಾತ ಸಂಭವಿಸುವ ಅಪಾಯವಿದೆ. ಇದು ಪಟ್ಟಣದ ನೂರಾರು ಮನೆಗಳು, ಹೋಟೆಲ್‌ ಗಳು ಮತ್ತು ಸರ್ಕಾರಿ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಬಹುದು.

ವಿಜ್ಞಾನಿಗಳು ಉಪಗ್ರಹ ಆಧಾರಿತ ತಂತ್ರಜ್ಞಾನ ಮತ್ತು ಗಣಿತದ ಮಾದರಿಗಳನ್ನು ಬಳಸಿ ಅಪಾಯದ ತೀವ್ರತೆಯನ್ನು ಲೆಕ್ಕ ಹಾಕಿದ್ದಾರೆ. ಹಿಮವು ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ಜಾಗದಲ್ಲಿ ಮುರಿದು ಬೀಳಬಹುದು ಎಂಬುದನ್ನು ಪತ್ತೆಹಚ್ಚಿದ್ದಾರೆ. ಹಿಮಪಾತ ಸಂಭವಿಸಿದರೆ ಹಿಮದ ರಾಶಿಯು ಎಷ್ಟು ವೇಗವಾಗಿ ಮತ್ತು ಯಾವ ಮಾರ್ಗಗಳ ಮೂಲಕ ಹರಿದು ಬರಬಹುದು ಎಂಬುದನ್ನು ಕಂಪ್ಯೂಟರ್ ಸಿಮ್ಯುಲೇಶನ್ ಮೂಲಕ ಅಂದಾಜಿಸಿದ್ದಾರೆ.

ಈ ಅಧ್ಯಯನವು ಕೇವಲ ಅಪಾಯವನ್ನು ಗುರುತಿಸುವುದಕ್ಕೆ ಸೀಮಿತವಾಗಿಲ್ಲ. ಯಾವುದೇ ದೊಡ್ಡ ದುರಂತ ಸಂಭವಿಸುವ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರಾಖಂಡ ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಎಚ್ಚರಿಕೆ ನೀಡಿದೆ.

ಅಧ್ಯಯನದ ಪ್ರಕಾರ, ‘ಭಾರತದ ಮಧ್ಯ ಹಿಮಾಲಯದ ಬದರಿನಾಥ ಪಟ್ಟಣದಲ್ಲಿರುವ ತೂಗು ಹಿಮನದಿಗಳ ದೌರ್ಬಲ್ಯದ ಮೌಲ್ಯಮಾಪನ’ ಎಂಬ ಶೀರ್ಷಿಕೆಯ ಸಂಶೋಧನೆಯಲ್ಲಿ ಪವಿತ್ರ ಪಟ್ಟಣದ ಸುತ್ತಲಿನ ಮೂರು ತೂಗು ಹಿಮನದಿಗಳ ಪ್ರದೇಶಗಳನ್ನು ಪರಿಶೀಲಿಸಲಾಗಿದೆ. ಮಂಜುಗಡ್ಡೆ ಎಲ್ಲಿ ಒಡೆಯಬಹುದು ಮತ್ತು ಅದರ ಪರಿಣಾಮ ಹೇಗಿರಬಹುದು ಎಂದು ಅಂದಾಜಿಸಲು ಸಂಶೋಧಕರು ರಿಮೋಟ್ ಸೆನ್ಸಿಂಗ್ ಡೇಟಾ ಮತ್ತು ಮಾದರಿ ಆಧಾರಿತ ವಿಧಾನಗಳನ್ನು ಬಳಸಿದ್ದಾರೆ. ನಂತರ ಅಂತಹ ಹಿಮಪಾತಗಳು ಹೇಗೆ ಕೆಳಮುಖವಾಗಿ ಚಲಿಸಬಹುದು ಎಂಬುದನ್ನು ತಿಳಿಯಲು ರ‍್ಯಾಪಿಡ್ ಮಾಸ್ ಮೂವ್‌ಮೆಂಟ್ ಸಿಮ್ಯುಲೇಶನ್ (RAMMS) ಮಾದರಿಯನ್ನು ಬಳಸಿದ್ದಾರೆ.

ವಿಜ್ಞಾನಿಗಳು ಭೂಪ್ರದೇಶ ಮತ್ತು ಎತ್ತರದ ಆಧಾರದ ಮೇಲೆ ಘರ್ಷಣೆಯ ಮೌಲ್ಯಗಳನ್ನು ವಿವಿಧ ಶ್ರೇಣಿಗಳಲ್ಲಿ ಬದಲಿಸಿ, ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಚಲನಶೀಲತೆಯ ಪರಿಸ್ಥಿತಿಗಳಲ್ಲಿ ಈ ಸಿಮ್ಯುಲೇಶನ್‌ಗಳನ್ನು ನಡೆಸಿದ್ದಾರೆ. ಹಿಮದ ಹರಿವಿನ ವರ್ತನೆಯು ‘ಮುಖ್ಯವಾಗಿ ಬಿಡುಗಡೆಯಾಗುವ ಹಿಮದ ಪ್ರಮಾಣ, ಹಿಮನದಿಯ ಇಳಿಜಾರು ಮತ್ತು ಕೆಳಗಿನ ಭೂಪ್ರದೇಶದಿಂದ ಪ್ರಭಾವಿತವಾಗಿದೆ’ ಎಂದು ಅಧ್ಯಯನ ಹೇಳಿದೆ. ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಹಿಮ ಬಿಡುಗಡೆಯಾಗುವುದು ಮತ್ತು ಕಡಿದಾದ ಇಳಿಜಾರುಗಳು ಬಲವಾದ ಹರಿವಿಗೆ ಹಾಗೂ ಹಿಮವು ದೂರದವರೆಗೆ ಹರಡಲು ಕಾರಣವಾಗುತ್ತವೆ.

ಹೆಚ್ಚಿನ ಚಲನಶೀಲತೆಯ ಪರಿಸ್ಥಿತಿಯು (ಹೈ ಮೊಬಿಲಿಟಿ ಕಂಡಿಷನ್) ನಿರಂತರವಾಗಿ ಅತ್ಯಂತ ತೀವ್ರವಾದ ಫಲಿತಾಂಶಗಳನ್ನು ನೀಡಿದೆ. ಹಾಗಿದ್ದರೂ, ಕಡಿಮೆ ಮತ್ತು ಹೆಚ್ಚಿನ ಚಲನಶೀಲತೆಯ ಪರಿಸ್ಥಿತಿಗಳ ನಡುವಿನ ವ್ಯತ್ಯಾಸ ಸಾಕಷ್ಟು ಕಡಿಮೆಯಾಗಿತ್ತು. ಅಧ್ಯಯನಕಾರರ ಪ್ರಕಾರ, ಕಡಿಮೆ ಚಲನಶೀಲತೆಯಿಂದ ಹೆಚ್ಚಿನ ಚಲನಶೀಲತೆಗೆ ಬದಲಾದಾಗ ಮೂರು ಪ್ರದೇಶಗಳಲ್ಲಿ ಗರಿಷ್ಠ ಎತ್ತರವು ಶೇ. 2.3ರಿಂದ 6.7ರಷ್ಟು, ಒತ್ತಡವು ಶೇ. 2.9ರಿಂದ 3.8ರಷ್ಟು, ಹಿಮದ ಶೇಖರಣೆಯು (ಡೆಪಾಸಿಷನ್) ಶೇ. 0.9ರಿಂದ 7.4ರಷ್ಟು ಮತ್ತು ವೇಗವು ಶೇ. 1.3ರಿಂದ 1.8ರಷ್ಟು ಬದಲಾಗಿದೆ.

ಮೂರು ಸ್ಥಳಗಳ ಪೈಕಿ ಸೈಟ್ 2 ಬದರಿನಾಥಕ್ಕೆ ಅತ್ಯಂತ ಅಪಾಯಕಾರಿಯಾಗಿ ಹೊರಹೊಮ್ಮಿದೆ. ಸೈಟ್ 2ರಲ್ಲಿ ಹೆಚ್ಚಿನ ಚಲನಶೀಲತೆಯ ಸನ್ನಿವೇಶದಲ್ಲಿ 2.66 ಕಿ.ಮೀ. ಸಾರಿಗೆ ಮೂಲಸೌಕರ್ಯ, 3.87 ಹೆಕ್ಟೇರ್ ಕೃಷಿ ಭೂಮಿ ಮತ್ತು 15.57 ಹೆಕ್ಟೇರ್ ಅರಣ್ಯ ಪ್ರದೇಶದ ಜತೆಗೆ ಸುಮಾರು 398 ಕಟ್ಟಡಗಳು ಅಪಾಯಕ್ಕೆ ಸಿಲುಕಬಹುದು ಎಂದು ಮೌಲ್ಯಮಾಪನ ಸೂಚಿಸಿದೆ. ಹೆಲಿಪ್ಯಾಡ್ ಮತ್ತು ಪಾರ್ಕಿಂಗ್ ಪ್ರದೇಶಗಳು ಸೇರಿದಂತೆ ನಿರ್ಣಾಯಕ ಸೌಲಭ್ಯಗಳೂ ಅಪಾಯದ ವಲಯದೊಳಗೆ ಬರುತ್ತವೆ.

ಬಿಡುಗಡೆಯಾಗುವ ಮಂಜುಗಡ್ಡೆಯ ಪ್ರಮಾಣ ತುಲನಾತ್ಮಕವಾಗಿ ಕಡಿಮೆಯಾಗಿದ್ದರೂ, ಅನುಕೂಲಕರ ಕಾಲುವೆಯ ಆಕಾರ ಮತ್ತು ಕೆಳಮುಖ ಭೂಪ್ರದೇಶವು ಹಿಮಪಾತದ ಹರಿವಿಗೆ ವೇಗ ನೀಡಬಹುದು. ಹೀಗಾಗಿ, ಈ ಕುರಿತು ವಿವರವಾದ ಅಧ್ಯಯನದ ತುರ್ತು ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅಲ್ಲದೆ, ಹಿಮಪಾತದ ಅಪಾಯ ಕಡಿಮೆ ಮಾಡಲು ಮುಂಚಿತ ಎಚ್ಚರಿಕೆ ವ್ಯವಸ್ಥೆ, ಉತ್ತಮ ಭೂಬಳಕೆ ಯೋಜನೆ ಮತ್ತು ಸ್ಥಳೀಯ ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕು ಎಂದೂ ಸಂಶೋಧನೆ ಶಿಫಾರಸು ಮಾಡಿದೆ.

ಬದರಿನಾಥ ಭಾರತದ ಪ್ರಮುಖ ಯಾತ್ರಾ ಪಟ್ಟಣಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ಯಾತ್ರಿಕರನ್ನು ಆಕರ್ಷಿಸುತ್ತದೆ. ಹೀಗಾಗಿ, ಇಲ್ಲಿ ವಿಶೇಷ ಮುನ್ನೆಚ್ಚರಿಕೆ ಮತ್ತು ಸಿದ್ಧತೆ ಅಗತ್ಯವಾಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor