Photo Credit : indianexpress.com

ನವೆಂಬರ್ 3ರಂದು ಜಗತ್ತಿನ ಅತಿದೊಡ್ಡ ಆರ್ಥಿಕತೆಯಾದ ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳ ಫಲಿತಾಂಶವು ಅಮೆರಿಕದ ರಾಷ್ಟ್ರೀಯ ಶಾಸಕಾಂಗ, ರಾಜ್ಯಗಳ ರಾಜ್ಯಪಾಲರ ಹುದ್ದೆಗಳು ಹಾಗೂ ಸಾವಿರಾರು ಸ್ಥಳೀಯ ಸಂಸ್ಥೆಗಳ ಅಧಿಕಾರದ ಸಮೀಕರಣವನ್ನು ನಿರ್ಧರಿಸುತ್ತದೆ. ಸಂಸತ್ತಿನ (ಕಾಂಗ್ರೆಸ್) ಎರಡು ಪ್ರಮುಖ ಭಾಗಗಳಾದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಪ್ರತಿನಿಧಿಗಳ ಸಭೆ) ಎರಡರಲ್ಲೂ ತೀವ್ರ ಸ್ಪರ್ಧೆ ಏರ್ಪಡಲಿದೆ.

ಭಾರತವು ಸಂಸದೀಯ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಮಧ್ಯಂತರ ಚುನಾವಣೆಗಳ ಈ ಮಾದರಿಯನ್ನು ಅನುಸರಿಸುವುದಿಲ್ಲ. ಆದರೆ ಅಮೆರಿಕದಲ್ಲಿ ಸರ್ಕಾರ ಬದಲಾಗದಿದ್ದರೂ, ಈ ಚುನಾವಣೆಗಳು ಪ್ರಮುಖ ನೀತಿ ನಿರ್ಧಾರಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ.

ಅಮೆರಿಕದ ಫೆಡರಲ್ (ಕೇಂದ್ರ) ಸರ್ಕಾರವು ಮೂರು ಮುಖ್ಯ ಅಂಗಗಳಾಗಿ ವಿಂಗಡಿಸಲ್ಪಟ್ಟಿದೆ.

ಕಾರ್ಯಾಂಗವು ಅಧ್ಯಕ್ಷರು (ಪ್ರಸ್ತುತ ಡೊನಾಲ್ಡ್ ಟ್ರಂಪ್) ಮತ್ತು ಅವರ ಆಡಳಿತವನ್ನು ಒಳಗೊಂಡಿರುತ್ತದೆ.

ಜನರಿಂದ ನೇರವಾಗಿ ಆಯ್ಕೆಯಾಗುವ ಶಾಸಕಾಂಗವೇ ಅಮೆರಿಕದ ಕಾಂಗ್ರೆಸ್ (ಸಂಸತ್ತು). ಇದು 'ಸೆನೆಟ್' ಮತ್ತು 'ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್' ಎಂಬ ಎರಡು ಸದನಗಳನ್ನು ಹೊಂದಿದೆ. ಕೊನೆಯದಾಗಿ, ನ್ಯಾಯಾಂಗವು ಸುಪ್ರೀಂ ಕೋರ್ಟ್ ಮತ್ತು ಫೆಡರಲ್ ನ್ಯಾಯಾಲಯಗಳನ್ನು ಒಳಗೊಂಡಿರುತ್ತದೆ. ಅಮೆರಿಕವು ಅಧಿಕಾರ ವಿಭಜನೆಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ.

ಎರಡು ಸದನಗಳ ಶಾಸಕಾಂಗ ಹೊಂದಿರುವ ಅಮೆರಿಕದಲ್ಲಿ ಅಧ್ಯಕ್ಷರು ಶಾಸಕಾಂಗಕ್ಕಿಂತ ಸ್ವತಂತ್ರವಾಗಿ ಆಯ್ಕೆಯಾಗುತ್ತಾರೆ.

ಕೆಳಮನೆಯಾದ 'ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್' 435 ಮಂದಿ ನೇರವಾಗಿ ಆಯ್ಕೆಯಾಗುವ ಸದಸ್ಯರನ್ನು ಹೊಂದಿದ್ದು, ಇವರ ಅಧಿಕಾರಾವಧಿ ಎರಡು ವರ್ಷಗಳು. ಈ ಸದನದ ಸ್ಥಾನಗಳನ್ನು ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಹಂಚಲಾಗುತ್ತದೆ. ಉದಾಹರಣೆಗೆ, ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ರಾಜ್ಯಗಳು ವೈಯೋಮಿಂಗ್ ಅಥವಾ ಐಯೋವಾಗೆ ಹೋಲಿಸಿದರೆ ಹೆಚ್ಚು ಸ್ಥಾನಗಳನ್ನು ಹೊಂದಿವೆ. ಇನ್ನು ಮೇಲ್ಮನೆಯಾದ 'ಸೆನೆಟ್' 100 ಸದಸ್ಯರನ್ನು ಒಳಗೊಂಡಿದೆ. ಇಲ್ಲಿ ಜನಸಂಖ್ಯೆಯನ್ನು ಲೆಕ್ಕಿಸದೆ, ಪ್ರತಿ ರಾಜ್ಯವೂ ಆರು ವರ್ಷಗಳ ಅಧಿಕಾರಾವಧಿ ಹೊಂದಿರುವ ಇಬ್ಬರು ಸೆನೆಟರ್‌ ಗಳಿಂದ ಪ್ರತಿನಿಧಿಸಲ್ಪಡುತ್ತದೆ.

►ಶಾಸಕಾಂಗ ಪ್ರಕ್ರಿಯೆ ಮತ್ತು ಅಧಿಕಾರದ ಹಂಚಿಕೆ

ಎಲ್ಲಾ 50 ರಾಜ್ಯಗಳಿಗೂ ಅನ್ವಯವಾಗುವ ಫೆಡರಲ್ ಮಸೂದೆಯು ಕಾಯ್ದೆಯಾಗಿ ಜಾರಿಯಾಗಬೇಕಾದರೆ, ಅದನ್ನು ಅಧ್ಯಕ್ಷರ ಅಂಕಿತಕ್ಕೆ ಕಳುಹಿಸುವ ಮೊದಲು 'ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್' ಮತ್ತು 'ಸೆನೆಟ್' ಎರಡೂ ಸದನಗಳು ಅನುಮೋದಿಸಬೇಕು.

ಸದನದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷವನ್ನು 'ಬಹುಮತದ ಪಕ್ಷ' ಎಂದು ಕರೆಯಲಾಗುತ್ತದೆ. ಇದು ಸದನದ ನಾಯಕತ್ವವನ್ನು ಆಯ್ಕೆ ಮಾಡುವ ಅಧಿಕಾರವನ್ನು ಆ ಪಕ್ಷಕ್ಕೆ ನೀಡುತ್ತದೆ. ಕೆಳಮನೆಯ ಸ್ಪೀಕರ್ (ಪ್ರಸ್ತುತ ಲುಯಿಸಿಯಾನದ ಮೈಕ್ ಜಾನ್ಸನ್) ಸದನದ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಕಾರ್ಯಸೂಚಿಯನ್ನು ನಿಯಂತ್ರಿಸುತ್ತಾರೆ. ಸೆನೆಟ್‌ ನಲ್ಲಿ ಬಹುಮತದ ನಾಯಕರು ನಡಾವಳಿಗಳನ್ನು ಮುನ್ನಡೆಸುತ್ತಾರೆ.

ಕಾಂಗ್ರೆಸ್ ನ ಎರಡೂ ಸದನಗಳು ವಿಭಿನ್ನ ಅಧಿಕಾರಗಳನ್ನು ಹೊಂದಿವೆ. ಫೆಡರಲ್ ಆದಾಯವನ್ನು ಹೆಚ್ಚಿಸುವ ಮಸೂದೆಗಳನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನಲ್ಲಿ ಮಂಡಿಸಬೇಕು. ಫೆಡರಲ್ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪ್ರಕ್ರಿಯೆ ಆರಂಭಿಸುವ ಪ್ರತ್ಯೇಕ ಅಧಿಕಾರವೂ ಈ ಸದನಕ್ಕಿದೆ. ಸೆನೆಟ್ ಅಧ್ಯಕ್ಷರ ನೇಮಕಾತಿಗಳನ್ನು ದೃಢೀಕರಿಸುತ್ತದೆ, ಒಪ್ಪಂದಗಳಿಗೆ ಅನುಮೋದನೆ ನೀಡುತ್ತದೆ ಮತ್ತು ದೋಷಾರೋಪಣೆ ವಿಚಾರಣೆಗಳನ್ನು ನಡೆಸುತ್ತದೆ.

ಮಸೂದೆಯು ಕಾನೂನಾಗಲು ಎರಡೂ ಸದನಗಳ ಸಮ್ಮತಿ ಅಗತ್ಯ. ಹೀಗಾಗಿ, ಯಾವುದಾದರೂ ಒಂದು ಸದನದ ನಿಯಂತ್ರಣವನ್ನು ಹೊಂದುವುದು ಅಧ್ಯಕ್ಷರ ಶಾಸಕಾಂಗ ಕಾರ್ಯಸೂಚಿಗೆ ಅತ್ಯಂತ ನಿರ್ಣಾಯಕವಾಗಿರುತ್ತದೆ.

►ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳು ಎಂದರೇನು?

ಅಧ್ಯಕ್ಷರ ನಾಲ್ಕು ವರ್ಷಗಳ ಅಧಿಕಾರಾವಧಿಯ ಸರಿಯಾಗಿ ಅರ್ಧಭಾಗದಲ್ಲಿ ಮಧ್ಯಂತರ ಚುನಾವಣೆಗಳು ನಡೆಯುತ್ತವೆ.

ಈ ಚುನಾವಣೆಗಳಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಎಲ್ಲಾ 435 ಸ್ಥಾನಗಳು ಮತ್ತು ಸೆನೆಟ್ ನ 100 ಸ್ಥಾನಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು (33 ಅಥವಾ 34 ಸ್ಥಾನಗಳು) ಸ್ಥಾನಗಳಿಗೆ ಸ್ಪರ್ಧೆ ನಡೆಯುತ್ತದೆ. ಈ ಚುನಾವಣೆಗಳು ಅಧಿಕಾರದಲ್ಲಿರುವ ಅಧ್ಯಕ್ಷರ ಆಡಳಿತ ಮತ್ತು ಕಾರ್ಯವೈಖರಿಯ ಮೇಲಿನ ಜನಮತಗಣನೆಯಂತೆ ಕಾರ್ಯನಿರ್ವಹಿಸುತ್ತವೆ.

ಅಮೆರಿಕದ ಚುನಾವಣೆಗಳು ಹೆಚ್ಚು ವಿಕೇಂದ್ರೀಕೃತ ಸ್ವರೂಪವನ್ನು ಹೊಂದಿವೆ.

ಅತಿ ಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿಯೇ ಗೆಲ್ಲುವ ಮಾದರಿಯಲ್ಲಿ ಚುನಾವಣೆಗಳು ನಡೆಯುತ್ತವೆ. ಸಾರ್ವತ್ರಿಕ ಚುನಾವಣೆಗೆ ಮುನ್ನ, ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ರಾಜ್ಯ ಮಟ್ಟದ 'ಪ್ರೈಮರೀಸ್' ಅಥವಾ 'ಕಾಕಸ್'ಗಳ ಮೂಲಕ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ.

ಮತದಾರರ ನೋಂದಣಿ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಚುನಾವಣೆಗಳು ಒಂದೇ ಸಮಯದಲ್ಲಿ ನಡೆಯುವುದರಿಂದ, ದೇಶದಾದ್ಯಂತ ಯಾವುದೇ ಇಬ್ಬರು ಮತದಾರರು ಒಂದೇ ರೀತಿಯ ಮತಪತ್ರವನ್ನು ಪಡೆಯುವುದಿಲ್ಲ. ತಮ್ಮ ರಾಜ್ಯದ ಕಾನೂನುಗಳನ್ನು ಆಧರಿಸಿ, ಅಮೆರಿಕನ್ನರು ಅಂಚೆ ಮತಪತ್ರದ ಮೂಲಕ, ಅವಧಿಗೂ ಮುನ್ನವೇ ನೇರವಾಗಿ ಅಥವಾ ಚುನಾವಣಾ ದಿನದಂದು ಮತ ಚಲಾಯಿಸಬಹುದು. ಈ ಕಾರಣದಿಂದಾಗಿ, ಅಂತಿಮ ಫಲಿತಾಂಶಗಳು ಪ್ರಕಟವಾಗಲು ಕೆಲವು ದಿನಗಳೇ ಬೇಕಾಗಬಹುದು.

►2028ರವರೆಗಿನ ಆಡಳಿತದ ಹಾದಿ

ಈ ಚುನಾವಣಾ ಫಲಿತಾಂಶಗಳು 2028ರ ಸಾರ್ವತ್ರಿಕ ಚುನಾವಣೆಯವರೆಗೆ ದೇಶವನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತವೆ.

ರಿಪಬ್ಲಿಕನ್ ಪಕ್ಷದ ಗೆಲುವು ಅಧ್ಯಕ್ಷ ಟ್ರಂಪ್ ಅವರಿಗೆ ತಮ್ಮ ಕಾರ್ಯಸೂಚಿಯನ್ನು ಮುನ್ನಡೆಸಲು ಬಲ ನೀಡುತ್ತದೆ. ಅದೇ ಡೆಮಾಕ್ರಟಿಕ್ ಪಕ್ಷ ಕೆಳಮನೆಯಲ್ಲಿ ಬಹುಮತ ಪಡೆದರೆ, ಅದು ಟ್ರಂಪ್ ಅವರ ನೀತಿಗಳಿಗೆ ಶಾಸಕಾಂಗ ತಡೆ ಒಡ್ಡುವುದರ ಜತೆಗೆ ಅವುಗಳ ಮೇಲೆ ನಿಗಾ ಇರಿಸುತ್ತದೆ. ಡೆಮಾಕ್ರಟ್‌ ಗಳಿಗೆ ಪ್ರಚಂಡ ಜಯ ಸಿಕ್ಕರೆ, ಅಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಳಿಸುವ ನಿಟ್ಟಿನಲ್ಲಿ ದೋಷಾರೋಪಣೆ ಪ್ರಕ್ರಿಯೆ ಆರಂಭಿಸಲು ಅವರಿಗೆ ಶಕ್ತಿ ಸಿಗುತ್ತದೆ. ಇದಕ್ಕೆ ಸೆನೆಟ್‌ ನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುತ್ತದೆ.

►2026ರ ಮಧ್ಯಂತರ ಚುನಾವಣಾ ಕಣ ಹೇಗಿದೆ?

119ನೇ ಕಾಂಗ್ರೆಸ್ ಪ್ರಸ್ತುತ ತೀರಾ ಅಲ್ಪ ಬಹುಮತದ ಅಂತರವನ್ನು ಹೊಂದಿದೆ. ಮಧ್ಯಂತರ ಚುನಾವಣೆಗಳು ಸಹಜವಾಗಿಯೇ ಅಧಿಕಾರದಲ್ಲಿರುವ ಅಧ್ಯಕ್ಷರ ಮೇಲಿನ ಜನಮತಗಣನೆಯಾಗಿರುತ್ತವೆ. 2026ರ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ.

ಚುನಾವಣಾ ಕಣವು ತೀವ್ರ ಸ್ಪರ್ಧೆಯಿಂದ ಕೂಡಿದೆ. ಆದರೆ ಐತಿಹಾಸಿಕ ಟ್ರೆಂಡ್ಗಳು ಯಾವಾಗಲೂ ಅಧ್ಯಕ್ಷರ ಪಕ್ಷಕ್ಕೆ ಹಿನ್ನಡೆಯನ್ನೇ ಸೂಚಿಸಿವೆ. ಕಳೆದ 23 ಮಧ್ಯಂತರ ಚುನಾವಣಾ ಚಕ್ರಗಳಲ್ಲಿ, ವಿರೋಧಿ ಅಲೆ ಮತ್ತು ಮತದಾರರ ಬೇಸರದಿಂದಾಗಿ ಅಧಿಕಾರದಲ್ಲಿರುವ ಅಧ್ಯಕ್ಷರ ಪಕ್ಷವು ಸರಾಸರಿ 27 ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಥಾನಗಳನ್ನು ಮತ್ತು ಮೂರು ಸೆನೆಟ್ ಸ್ಥಾನಗಳನ್ನು ಕಳೆದುಕೊಂಡಿದೆ.

ಪ್ರಸ್ತುತ ಸೆನೆಟ್‌ ನಲ್ಲಿ ರಿಪಬ್ಲಿಕನ್ ಪಕ್ಷವು 53-47ರ ಮುನ್ನಡೆ ಕಾಯ್ದುಕೊಂಡಿದೆ. ಸೆನೆಟ್ ನ ನಿಯಂತ್ರಣ ಪಡೆಯಲು ಡೆಮಾಕ್ರಟ್‌ ಗಳಿಗೆ ಹೆಚ್ಚುವರಿಯಾಗಿ ನಾಲ್ಕು ಸ್ಥಾನಗಳ ಅಗತ್ಯವಿದ್ದು, ಟೆಕ್ಸಾಸ್, ಮೇನ್, ಒಹಾಯೊ ಮತ್ತು ಅಲಸ್ಕಾದಂತಹ ರಾಜ್ಯಗಳಲ್ಲಿ ತೀವ್ರ ಪೈಪೋಟಿ ಎದುರಾಗಿದೆ. ಇನ್ನೊಂದೆಡೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನಲ್ಲಿ ರಿಪಬ್ಲಿಕನ್ನರ ಬಹುಮತವು ತೀರಾ ಕಡಿಮೆ ಇದ್ದು, ಸಾರ್ವಜನಿಕ ಅಭಿಪ್ರಾಯ ಸಂಗ್ರಹಗಳು ಡೆಮಾಕ್ರಟ್‌ ಗಳು ಮತ್ತೆ ಅಧಿಕಾರ ಹಿಡಿಯುವ ಸ್ಪಷ್ಟ ಸಾಧ್ಯತೆಯನ್ನು ತೋರಿಸುತ್ತಿವೆ.

2025ರಲ್ಲಿ ತಮ್ಮ ಎರಡನೇ ಅವಧಿಯ ಆಡಳಿತವನ್ನು ಆರಂಭಿಸಿದ ನಂತರ, ಡೊನಾಲ್ಡ್ ಟ್ರಂಪ್ ಅವರ ಸರ್ಕಾರವು ಚುನಾವಣಾ ಭರವಸೆಗಳನ್ನು ಅತ್ಯಂತ ಬಿರುಸಿನಿಂದ ಜಾರಿಗೆ ತರುತ್ತಿದೆ. ಫೆಡರಲ್ ಸರ್ಕಾರಿ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಭರವಸೆಯಂತೆ, ಟ್ರಂಪ್ ಅವರ 'ಸರ್ಕಾರಿ ದಕ್ಷತೆ ಇಲಾಖೆ' (DOGE) ಬಜೆಟ್‌ ನಲ್ಲಿ ಭಾರೀ ಕಡಿತ ಮಾಡಿದ್ದು, ಸುಮಾರು 2,64,000 ಫೆಡರಲ್ ಉದ್ಯೋಗಗಳನ್ನು ರದ್ದುಗೊಳಿಸಿದೆ.

ಇದು ಕನ್ಸರ್ವೇಟಿವ್ (ರಿಪಬ್ಲಿಕನ್) ನಾಯಕರ ಭರವಸೆಗಳನ್ನು ಈಡೇರಿಸಿದ್ದರೂ, ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಂಪೆನಿಗಳ ಆದಾಯ ಚೇತರಿಸಿಕೊಂಡಿದ್ದರೂ, ಮೂಲ ಹಣದುಬ್ಬರ ಪ್ರಮಾಣವು ಇತ್ತೀಚೆಗೆ ಶೇ. 2.6ಕ್ಕೆ ಏರಿಕೆಯಾಗಿದ್ದು, ಜೀವನ ವೆಚ್ಚದ ಏರಿಕೆಯು ಮತದಾರರಿಗೆ ಪ್ರಮುಖ ಕಳವಳಕಾರಿ ವಿಷಯವಾಗಿ ಉಳಿದಿದೆ.

ಇರಾನ್ ಯುದ್ಧ ಹಾಗೂ ಟ್ರಂಪ್ ಆಡಳಿತದ ಕಠಿಣ ವಾಣಿಜ್ಯ ನೀತಿಗಳು, ವಿಶೇಷವಾಗಿ 'ಟ್ರಂಪ್ ಸುಂಕಗಳು', ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿವೆ.

ಈ ವರ್ಷದ ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೇನೆ ನಡೆಸಿದ ದಾಳಿಯ ನಂತರ, ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ಪ್ರತಿದಾಳಿಯು ಜಾಗತಿಕ ಇಂಧನ ಪೂರೈಕೆ ಶೃಂಖಲೆಯನ್ನು ತೀವ್ರವಾಗಿ ಹಾನಿಗೊಳಿಸಿದೆ. ಇದರಿಂದಾಗಿ ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆ ಪ್ರತಿ ಗ್ಯಾಲನ್‌ ಗೆ 4.50 ಡಾಲರ್ಗೆ ಏರಿಕೆಯಾಗಿದೆ.

ಅದೇ ಸಮಯದಲ್ಲಿ, ಟ್ರಂಪ್ ಅವರು ಕಾಯ್ದೆಗಳ ಮೂಲಕ ತಮ್ಮ ಸ್ವದೇಶಿ ಆರ್ಥಿಕ ರಕ್ಷಣಾ ನೀತಿಯನ್ನು ತಕ್ಷಣವೇ ಜಾರಿಗೆ ತಂದಿದ್ದಾರೆ. ಆಮದುಗಳ ಮೇಲೆ ಶೇ. 10ರಷ್ಟು ಮೂಲಭೂತ ಜಾಗತಿಕ ಸುಂಕವನ್ನು ವಿಧಿಸಿರುವುದಲ್ಲದೆ, ಚೀನಾದ ವಸ್ತುಗಳ ಮೇಲಿನ ಸುಂಕವನ್ನು ಶೇ. 125ರಷ್ಟು ಹೆಚ್ಚಿಸಿದ್ದಾರೆ. ಇನ್ನು ಒಳನಾಡಿನ ವಿಷಯಕ್ಕೆ ಬಂದರೆ, ಕಾನೂನುಬಾಹಿರ ವಲಸಿಗರನ್ನು ಗಡಿಪಾರು ಮಾಡುವ ಅವರ ಯೋಜನೆಗಳಿಗೆ ಅಮೆರಿಕದ ಸುಪ್ರೀಂ ಕೋರ್ಟ್ ಕಟ್ಟುಪಾಡುಗಳನ್ನು ವಿಧಿಸಿದೆಯಾದರೂ, ಆಡಳಿತವು ಕಾನೂನುಬದ್ಧ ವಲಸೆ ಮತ್ತು ಆಶ್ರಯ ನೀಡುವ ನಿಯಮಗಳನ್ನು ತೀವ್ರವಾಗಿ ಕಡಿತಗೊಳಿಸಿದೆ.

►ಅಮೆರಿಕ ಮಧ್ಯಂತರ ಚುನಾವಣೆಗಳು ಭಾರತ ಮತ್ತು ಜಗತ್ತಿಗೆ ಏಕೆ ಮುಖ್ಯ?

ಅಮೆರಿಕದ ಸಂವಿಧಾನವು ವಿದೇಶಿ ವ್ಯಾಪಾರವನ್ನು ನಿಯಂತ್ರಿಸುವ ಮತ್ತು ಬಜೆಟ್ ಅನುಮೋದಿಸುವ ಅಧಿಕಾರವನ್ನು ಕಾಂಗ್ರೆಸ್‌ ಗೆ ನೀಡಿದೆ. ಭಾರತದ ಪಾಲಿಗೆ ಅಮೆರಿಕದೊಂದಿಗಿನ ತಂತ್ರಜ್ಞಾನ, ವಾಣಿಜ್ಯ ಮತ್ತು ರಕ್ಷಣಾ ಬಾಂಧವ್ಯಗಳು ಅತ್ಯಂತ ಪ್ರಮುಖವಾಗಿವೆ.

2025ರ ಸೆಪ್ಟೆಂಬರ್‌ ನಲ್ಲಿ, ಸ್ವದೇಶಿ ಉದ್ಯೋಗಿಗಳನ್ನು ರಕ್ಷಿಸುವ ಉದ್ದೇಶದಿಂದ ಟ್ರಂಪ್ ಆಡಳಿತವು ಎಚ್-1ಬಿ (H-1B) ವೀಸಾ ನಿಯಮಗಳನ್ನು ಬದಲಾಯಿಸಿತು ಮತ್ತು ಹೊಸ ಅರ್ಜಿಗಳಿಗೆ ಬೃಹತ್ 1,00,000 ಡಾಲರ್ ಶುಲ್ಕವನ್ನು ವಿಧಿಸಿತು. ಎಚ್-1ಬಿ ವೀಸಾ ಪಡೆಯುವವರಲ್ಲಿ ಶೇ. 70ಕ್ಕೂ ಹೆಚ್ಚು ಮಂದಿ ಭಾರತೀಯರೇ ಆಗಿರುವುದರಿಂದ, ಈ ಏಕಪಕ್ಷೀಯ ನಿರ್ಧಾರವು ಭಾರತದ 200 ಬಿಲಿಯನ್ ಡಾಲರ್ ಮೌಲ್ಯದ ಐಟಿ ಸೇವೆಗಳ ರಫ್ತು ಉದ್ಯಮಕ್ಕೆ ಭಾರೀ ಹೊಡೆತ ನೀಡಿತು. ಇದು ಭಾರತೀಯ ವಿದ್ಯಾರ್ಥಿಗಳ ದಾಖಲಾತಿ ಮತ್ತು ಉದ್ಯೋಗಿಗಳ ವಲಸೆಯ ಮೇಲೆಯೂ ತೀವ್ರ ಪರಿಣಾಮ ಬೀರಿದೆ.

ವಾಣಿಜ್ಯ ಸಂಬಂಧಗಳಲ್ಲಿಯೂ ಅಷ್ಟೇ ಏರಿಳಿತ ಕಂಡುಬಂದಿದೆ.

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಮುಂದುವರಿಸಿದ್ದಕ್ಕೆ ಪ್ರತಿಯಾಗಿ, 2025ರಲ್ಲಿ ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಭಾರೀ ಸುಂಕವನ್ನು ಹೇರಿತ್ತು. ತೀವ್ರ ದ್ವಿಪಕ್ಷೀಯ ಮಾತುಕತೆಗಳ ನಂತರ, ಭಾರತ ನೀಡಿದ ಕೆಲವು ವಿನಾಯಿತಿಗಳಿಗೆ ಪ್ರತಿಯಾಗಿ, 2026ರ ಆರಂಭದಲ್ಲಿ ಈ ಸುಂಕವನ್ನು ತಾತ್ಕಾಲಿಕವಾಗಿ ಶೇ. 18ಕ್ಕೆ ಇಳಿಸಲಾಯಿತು.

ಮತ್ತೊಂದೆಡೆ, ಚೀನಾದ ಸೆಮಿಕಂಡಕ್ಟರ್ ಪ್ರಾಬಲ್ಯವನ್ನು ಎದುರಿಸಲು ನೂತನವಾಗಿ ಆರಂಭಿಸಲಾದ 'ಟ್ರಸ್ಟ್' (TRUST - Transforming Relationship Utilising Strategic Technology) ಯೋಜನೆಯ ಮೂಲಕ ಉಭಯ ದೇಶಗಳ ನಡುವಿನ ತಾಂತ್ರಿಕ ಮತ್ತು ರಕ್ಷಣಾ ಸಹಕಾರವು ಮತ್ತಷ್ಟು ಗಟ್ಟಿಯಾಗಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನಲ್ಲಿ ಡೆಮಾಕ್ರಟಿಕ್ ಪಕ್ಷವು ಬಹುಮತ ಪಡೆದರೆ, ಅದು ಟ್ರಂಪ್ ಅವರ ಸುಂಕಗಳು ಮತ್ತು ಮಧ್ಯಪ್ರಾಚ್ಯದಲ್ಲಿನ ಮಿಲಿಟರಿ ಕಾರ್ಯಾಚರಣೆಗಳ ಮೇಲೆ ಕಠಿಣ ನಿಗಾ ಇಡಲು ಸಹಾಯ ಮಾಡುತ್ತದೆ. ಇದು ಭಾರತೀಯ ರಫ್ತುದಾರರಿಗೆ ರಾಜತಾಂತ್ರಿಕ ಮತ್ತು ಆರ್ಥಿಕ ಸಡಿಲಿಕೆಯನ್ನು ನೀಡುವ ಸಾಧ್ಯತೆಯಿದೆ.

ಈ ಮಧ್ಯೆ, ಅಮೆರಿಕದ ಪೂರೈಕೆ ಶೃಂಖಲೆಗಳಿಗೆ ಆದ್ಯತೆ ನೀಡುವ ವಿಷಯದಲ್ಲಿ ಉಭಯ ಪಕ್ಷಗಳೂ ಒಂದೇ ನಿಲುವು ಹೊಂದಿರುವುದರಿಂದ, ಸದ್ಯಕ್ಕೆ ಯಾವುದೇ ಪಕ್ಷವೂ ಈ ಆರ್ಥಿಕ ರಕ್ಷಣಾ ನೀತಿಯಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor