ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಸ್ಥಾಪನೆಗೆ ಸರ್ಕಾರದ ನಿರ್ಧಾರ: ಈಗಿರುವ ನ್ಯಾಯಾಲಯಗಳಲ್ಲಿ ಇನ್ನೂ 2.49 ಲಕ್ಷ ಪ್ರಕರಣಗಳು ಬಾಕಿ!

ಕಾರ್ತಿಕ್ ಮಾಧವಪೆದ್ದಿ & IndiaSpend - newslaundry. com ವರದಿ

Update: 2026-07-27 21:45 IST

Photo Credit : newslaundry.com

"ನಮ್ಮ ಯುವಜನತೆಯ ಭವಿಷ್ಯ ಮತ್ತು ಕಲ್ಯಾಣಕ್ಕಿಂತ ಮತ್ತಾವುದೂ ಮುಖ್ಯವಲ್ಲ!" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 23ರಂದು 'ಎಕ್ಸ್' ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ತ್ವರಿತ ಮತ್ತು ಕಠಿಣ ಶಿಕ್ಷೆ ಖಾತರಿಪಡಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ" ಎಂದು ಅವರು ತಿಳಿಸಿದ್ದಾರೆ.

ಆದರೆ, ಅದೇ ದಿನ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿದ ಮಾಹಿತಿಯ ಪ್ರಕಾರ, 2026ರ ಎಪ್ರಿಲ್ ವೇಳೆಗೆ ದೇಶದಲ್ಲಿರುವ 775 ಫಾಸ್ಟ್ ಟ್ರ್ಯಾಕ್ ವಿಶೇಷ ಕೋರ್ಟ್‌ ಗಳಲ್ಲಿ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ - ಪೋಕ್ಸೊ ಅಡಿಯಲ್ಲಿನ ಪ್ರಕರಣಗಳಿಗಾಗಿ ಸ್ಥಾಪಿಸಲಾದ 398 ಪ್ರತ್ಯೇಕ ಕೋರ್ಟ್‌ ಗಳು ಸೇರಿ) 2.49 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಹೊಣೆಗಾರಿಕೆ ಆಗ್ರಹಿಸಿ ವಿದ್ಯಾರ್ಥಿಗಳು ದಿಲ್ಲಿಯ ಜಂತರ್ ಮಂತರ್‌ ನಿಂದ ಸಂಸತ್ತಿನವರೆಗೆ ಮೆರವಣಿಗೆ ನಡೆಸಿದ ಮೂರು ದಿನಗಳ ನಂತರ ಪ್ರಧಾನಿಯವರಿಂದ ಈ ಹೇಳಿಕೆ ಬಂದಿದೆ. ಪ್ರತಿಭಟನಾ ನಿರತರ ಮೇಲೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದು, ಹತ್ತಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಪೆಲೆಟ್ ಗನ್‌ ಗಳನ್ನು ಬಳಸಿದ್ದಾರೆ ಎಂದು ಗಾಯಗೊಂಡ ಕೆಲವು ಪ್ರತಿಭಟನಾಕಾರರು ಆರೋಪಿಸಿದ್ದರೆ, "ದಿಲ್ಲಿ ಪೊಲೀಸರ ಬಳಿ ಪೆಲೆಟ್ ಗನ್‌ ಗಳೇ ಇಲ್ಲ. ಪ್ರಸ್ತುತ ಪ್ರತಿಭಟನೆಯಲ್ಲಿ ಅವುಗಳನ್ನು ಬಳಸಿಲ್ಲ" ಎಂದು ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

"ಅಧೀನ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮುಂಬರುವ ಐದು ವರ್ಷಗಳಲ್ಲಿ ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗದಿದ್ದರೂ, ಗಮನಾರ್ಹವಾಗಿ ಕಡಿಮೆ ಮಾಡಲು 2000ನೇ ಇಸವಿಯಲ್ಲಿ 11ನೇ ಹಣಕಾಸು ಆಯೋಗವು ಮೊದಲ ಬಾರಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು" ಎಂದು ಐಸಿಗ್ನಲ್ (ISignal) 2020ರ ಡಿಸೆಂಬರ್‌ನಲ್ಲಿ ವರದಿ ಪ್ರಕಟಿಸಿತ್ತು.

14ನೇ ಹಣಕಾಸು ಆಯೋಗದ ಶಿಫಾರಸುಗಳು ಮತ್ತು ರಿಟ್ ಅರ್ಜಿಯೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿದ 2019ರ ಆದೇಶದಂತೆ, ಕೇಂದ್ರ ಸರ್ಕಾರವು 2019ರ ಅಕ್ಟೋಬರ್‌ನಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳ ಸ್ಥಾಪನೆಗಾಗಿ ಕೇಂದ್ರ ಪುರಸ್ಕೃತ ಯೋಜನೆಯೊಂದನ್ನು ಜಾರಿಗೆ ತಂದಿತು. 2019ರಲ್ಲಿ ಯೋಜನೆ ಪ್ರಾರಂಭವಾದಂದಿನಿಂದ 2026ರ ಮಾರ್ಚ್‌ ವರೆಗೆ ಈ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳು 3,66,124 ಪ್ರಕರಣಗಳನ್ನು ವಿಲೇವಾರಿ ಮಾಡಿವೆ ಎಂದು ನ್ಯಾಯಾಂಗ ಇಲಾಖೆಯ ಅಂಕಿ-ಅಂಶಗಳು ತೋರಿಸುತ್ತವೆ.

ಪ್ರಸ್ತುತ ಇರುವ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳ ಅನುಭವಗಳು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಕೋರ್ಟ್‌ ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ವಿನ್ಯಾಸಗೊಳಿಸಬಹುದು ಎಂಬುದರ ಕುರಿತು ಪ್ರತಿಕ್ರಿಯೆ ಕೋರಿ 'ಐಸಿಗ್ನಲ್' ಕೇಂದ್ರ ಕಾನೂನು ಸಚಿವಾಲಯವನ್ನು ಸಂಪರ್ಕಿಸಿದೆ. ಆದರೆ, ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿಲ್ಲ.

►ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳು ಆತಂಕಕ್ಕೆ ಪರಿಹಾರವಲ್ಲ

"ದೇಶದ ಯುವಜನತೆಯನ್ನು ರಸ್ತೆಗೆ ತಂದಿರುವ ಸಮಸ್ಯೆಯನ್ನು ಈ ವ್ಯವಸ್ಥೆಯು ಯಾವ ರೀತಿಯಲ್ಲಿ ಬಗೆಹರಿಸುತ್ತದೆ?" ಎಂದು ವಕೀಲೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಗ್ರೋವರ್ ಪ್ರಶ್ನಿಸಿದ್ದಾರೆ. "ಇದು ಕಠಿಣವಾದರೂ, ನಮ್ಮ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುತ್ತಿರುವ ಸಾರ್ವಜನಿಕ ಚರ್ಚೆಯನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಷ್ಟೇ" ಎಂದು ಅವರು ಹೇಳಿದ್ದಾರೆ.

"ದೇಶದ ಭವಿಷ್ಯ ಮತ್ತು ಯಶಸ್ಸು ಯುವಜನರ ಭವಿಷ್ಯ ಹಾಗೂ ಯಶಸ್ಸಿನೊಂದಿಗೆ ಬೆಸೆದುಕೊಂಡಿದೆ. ಇನ್ನು 50 ವರ್ಷಗಳ ನಂತರ ದೇಶವಾಗಿ ನಾವು ಎಲ್ಲಿದ್ದೇವೆ ಎಂಬುದು ನಮ್ಮ ಯುವಜನರು ಎಷ್ಟು ಉತ್ತಮ ವೃತ್ತಿಪರ ಶಿಕ್ಷಣ ಪಡೆಯುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಈ ನಡೆಯನ್ನು 'ಗಿಮಿಕ್' ಎಂದು ಬಣ್ಣಿಸಿದ ಗ್ರೋವರ್, ಚರ್ಚೆಯನ್ನು ಹಾದಿತಪ್ಪಿಸಲು ಮತ್ತು ಸರ್ಕಾರ ಏನೋ ಕ್ರಮ ಕೈಗೊಳ್ಳುತ್ತಿದೆ ಎಂದು ತೋರಿಸಲು ಮಾಡಿದ ತಾತ್ಕಾಲಿಕ ಉಪಾಯ ಎಂದಿದ್ದಾರೆ. "ನಾವು ಇದನ್ನು ಈಗಾಗಲೇ ಪ್ರಯತ್ನಿಸಿದ್ದೇವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳಲ್ಲಿ 'ಫಾಸ್ಟ್' ಎಂಬುದು ಯಾವುದೂ ಇಲ್ಲ ಎಂಬುದೇ ಇದರ ಬೇಸರದ ಸಂಗತಿ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ವಿವರಿಸಲು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳನ್ನು ಗ್ರೋವರ್ ಉದಾಹರಿಸಿದ್ದಾರೆ. ಭಾರತದ ಅಪರಾಧ ಪ್ರಕ್ರಿಯಾ ಸಂಹಿತೆಯಾದ 'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023' ಪ್ರಕಾರ, ಇಂತಹ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾದ ಎರಡು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳಬೇಕು. 2023ರ ಮೇ ತಿಂಗಳಲ್ಲಿ ನಡೆದ ಮಣಿಪುರ ಜನಾಂಗೀಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೋವರ್ ಅವರು 2026ರ ಜುಲೈ 24ರಂದು ವಾದ ಮಂಡಿಸಿದ್ದರು. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಚುರುಕುಗೊಳಿಸಲು ವಿಶೇಷ ನ್ಯಾಯಾಲಯಗಳನ್ನು ರಚಿಸಲು ಪ್ರಸ್ತಾಪಿಸಿದ್ದರು. "ದೇಶವು ಅತ್ಯಂತ ಗಂಭೀರವಾಗಿ ಪರಿಗಣಿಸುವ ವಿಷಯಗಳ ಸ್ಥಿತಿಯೂ ಹೀಗಿದೆ" ಎಂದು ಗ್ರೋವರ್ ಖೇದ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳನ್ನು ಎದುರಿಸಲು ಕಠಿಣ ಕಾನೂನುಗಳಿದ್ದರೂ ಅಪರಾಧಗಳು ಕಡಿಮೆಯಾಗುತ್ತಿಲ್ಲ ಎಂದು ಬೃಂದಾ ಗ್ರೋವರ್ ಹೇಳಿದ್ದಾರೆ. "ಈ ಕಾನೂನುಗಳೇ ಅಪರಾಧ ತಡೆಯಲು ಸಾಧ್ಯವಾಗದಿರುವಾಗ, ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳು ಮುಂದಿನ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವೇ?" ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಕರಣಗಳ ತ್ವರಿತ ವಿಲೇವಾರಿಗೆ ಕೇವಲ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳಿದ್ದರೆ ಸಾಲದು. ಈ ಕೋರ್ಟ್‌ ಗಳಿಗೆ ನೆರವಾಗಲು ಪೊಲೀಸ್ ಅಥವಾ ಇತರ ತನಿಖಾ ಸಂಸ್ಥೆಗಳ ಪ್ರತ್ಯೇಕ ಮತ್ತು ದಕ್ಷ ತಂಡ ಇರುವುದು ಅಷ್ಟೇ ಮುಖ್ಯ ಎಂದು 'ಇಂಡಿಯಾ ಜಸ್ಟಿಸ್ ರಿಪೋರ್ಟ್' ಮುಖ್ಯಸ್ಥ ವಲಯ್ ಸಿಂಗ್ ಹೇಳಿದ್ದಾರೆ.

"ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಸಾಕ್ಷ್ಯಗಳು ಅತ್ಯಂತ ಸಂಕೀರ್ಣವಾಗಿರುತ್ತವೆ" ಎಂದು ವಿವರಿಸಿದ ಗ್ರೋವರ್, ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ಒಳಗೊಂಡ ಅತ್ಯಂತ ಜಾಗರೂಕ ಮತ್ತು ವಿವರವಾದ ತನಿಖೆಯ ಅಗತ್ಯವಿದೆ ಎಂದಿದ್ದಾರೆ. "ಆದರೆ ನಡೆಯುತ್ತಿರುವ ತನಿಖೆ ಎಷ್ಟು ಕೌಶಲ್ಯಪೂರ್ಣವಾಗಿದೆ ಮತ್ತು ಸೂಕ್ತವಾಗಿದೆ ಎಂಬುದರ ಕುರಿತು ಚರ್ಚೆಯೇ ನಡೆಯುತ್ತಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಈ ತನಿಖಾ ಇಲಾಖೆಗಳಲ್ಲಿ ಸಂಪನ್ಮೂಲಗಳ ಕೊರತೆಯಿದೆ. "ಸೈಬರ್ ಅಪರಾಧ ತಡೆಯುವ ಸಾಮರ್ಥ್ಯವು ಕೆಲವೇ ಕೆಲವು ಪೊಲೀಸ್ ಇಲಾಖೆಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ" ಎಂದು ಸಿಂಗ್ ತಿಳಿಸಿದ್ದಾರೆ. ಸೈಬರ್ ಅಪರಾಧಗಳು 2020ರಲ್ಲಿ ಸುಮಾರು 50,000 ಇದ್ದು, 2024ರ ವೇಳೆಗೆ 1 ಲಕ್ಷಕ್ಕೂ ಹೆಚ್ಚಾಗಿವೆ ಎಂದ ಅವರು, "ಪ್ರಸ್ತುತ ರಾಜ್ಯ ಪೊಲೀಸ್ ಪಡೆಗಳಲ್ಲಿರುವ ಸೈಬರ್ ತನಿಖಾ ಸಾಮರ್ಥ್ಯ ತೀರಾ ಅಪೂರ್ಣವಾಗಿದೆ" ಎಂದು ಹೇಳಿದ್ದಾರೆ.

►ವಿಳಂಬ ಮತ್ತು ಮಿತಿಗಳು

2026ರ ಮಾರ್ಚ್‌ ನಲ್ಲಿ ಲೋಕಸಭೆಗೆ ನೀಡಿದ ಉತ್ತರದಲ್ಲಿ ಸರ್ಕಾರವು ಯೋಜನೆಯ ವಿಸ್ತರಣೆಯ ಸಂದರ್ಭದಲ್ಲಿ ನಡೆಸಲಾದ ತೃತೀಯ ಪಕ್ಷದ ಮೌಲ್ಯಮಾಪನಗಳನ್ನು ಉಲ್ಲೇಖಿಸಿತ್ತು. "ವರದಿಗಳು ಯೋಜನೆಯ ಧನಾತ್ಮಕ ಪ್ರಭಾವವನ್ನು ಎತ್ತಿಹಿಡಿದಿದ್ದು, ಇದನ್ನು ಮುಂದುವರಿಸಲು ಶಿಫಾರಸು ಮಾಡಿವೆ" ಎಂದು ಸರ್ಕಾರ ಹೇಳಿತ್ತು.

ಆದರೆ, ಅದೇ ತಿಂಗಳಲ್ಲಿ ಪ್ರಕರಣಗಳ ವಿಳಂಬಕ್ಕೆ "ಭೌತಿಕ ಮೂಲಸೌಕರ್ಯದ ಲಭ್ಯತೆ, ಪ್ರಕರಣಗಳ ಸಂಕೀರ್ಣತೆ, ಸಾಕ್ಷ್ಯಾಧಾರಗಳ ಸ್ವರೂಪ, ವಕೀಲರು, ತನಿಖಾ ಸಂಸ್ಥೆಗಳು, ಸಾಕ್ಷಿಗಳು ಮತ್ತು ದೂರುದಾರರ ಸಹಕಾರ ಹಾಗೂ ಕಟ್ಟುನಿಟ್ಟಾದ ನಿಯಮಾವಳಿಗಳ ಪಾಲನೆ" ಕಾರಣ ಎಂದು ತಿಳಿಸಿತ್ತು. ಜೊತೆಗೆ, "ಪದೇ ಪದೇ ವಿಚಾರಣೆ ಮುಂದೂಡುವುದು ಕೂಡ ವಿಳಂಬಕ್ಕೆ ಮುಖ್ಯ ಕಾರಣ" ಎಂದಿತ್ತು.

"ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಪ್ರಾಥಮಿಕ ಜವಾಬ್ದಾರಿ ಆಯಾ ಸರ್ಕಾರಗಳ ಮೇಲಿದೆ" ಎಂದು ಕೇಂದ್ರ ಸರ್ಕಾರವು ಜುಲೈ 23ರಂದು ರಾಜ್ಯಸಭೆಗೆ ತಿಳಿಸಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ 'ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ಮೂಲಸೌಕರ್ಯ ಅಭಿವೃದ್ಧಿ' ಯೋಜನೆಯಡಿ ರಾಜ್ಯಗಳಿಗೆ 4,519 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ನ್ಯಾಯಾಲಯದ ಸಭಾಂಗಣಗಳು, ವಸತಿ ಸಮುಚ್ಚಯಗಳು, ವಕೀಲರ ಸಭಾಂಗಣಗಳು, ಶೌಚಾಲಯಗಳು ಮತ್ತು ಡಿಜಿಟಲ್ ಕಂಪ್ಯೂಟರ್ ಕೊಠಡಿಗಳು ಈ ಯೋಜನೆಯ ಮುಖ್ಯ ಭಾಗಗಳಾಗಿವೆ.

2022ರ ನವೆಂಬರ್‌ನಲ್ಲಿ 'ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ' ನಡೆಸಿದ ಅಧ್ಯಯನವೊಂದರಲ್ಲಿ, 486 ಪೋಕ್ಸೊ (POCSO) ಕೋರ್ಟ್‌ ಗಳು ವಿಲೇವಾರಿ ಮಾಡಿದ ಪ್ರಕರಣಗಳನ್ನು ಪರಿಶೀಲಿಸಿದಾಗ, ಒಂದು ಪ್ರಕರಣ ಮುಗಿಸಲು ಸರಾಸರಿ 510 ದಿನಗಳು (ಸುಮಾರು 17 ತಿಂಗಳು) ತೆಗೆದುಕೊಂಡಿರುವುದು ಕಂಡುಬಂದಿದೆ. 2020ರಲ್ಲಿ ದಿಲ್ಲಿಯಲ್ಲಿ ಪ್ರಕರಣದ ಸರಾಸರಿ ಅವಧಿ ಅತ್ಯಂತ ಹೆಚ್ಚಾಗಿದ್ದು, 1,284 ದಿನಗಳು, ಅಂದರೆ ಸುಮಾರು 42 ತಿಂಗಳುಗಳಾಗಿದ್ದವು. ಇದು ಒಂದು ಪದವಿ ಶಿಕ್ಷಣ ಪೂರ್ಣಗೊಳಿಸಲು ತಗಲುವ ಅವಧಿಗಿಂತ ಕೇವಲ ಆರು ತಿಂಗಳು ಕಡಿಮೆ.

ಪೋಕ್ಸೊ (POCSO) ಕೋರ್ಟ್‌ ಗಳಿಗೆ ನಿಗದಿಪಡಿಸಿದ ಕಾಲಮಿತಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಈ ಅಧ್ಯಯನ ತೋರಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ರನ್ನು ನೇಮಿಸದೇ ಇರುವುದು ಅಥವಾ ನೇಮಕಗೊಂಡರೂ ಅವರು ಇತರ ಪ್ರಕರಣಗಳನ್ನು ನಿರ್ವಹಿಸುತ್ತಿರುವುದರಿಂದ ಸಂಪನ್ಮೂಲಗಳ ಅಭಾವ ಉಂಟಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು 'ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ'ಯ 'ಜಲ್ದಿ' (JALDI) ತಂಡದ ಹಿರಿಯ ಸಂಶೋಧಕಿ ಜ್ಯೋತಿಕಾ ರಂಧಾವಾ ಹೇಳಿದ್ದಾರೆ.

ವಿಧಿವಿಜ್ಞಾನ (ಫೊರೆನ್ಸಿಕ್) ಇಲಾಖೆಗಳು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ಸಮಯ ತೆಗೆದುಕೊಳ್ಳುತ್ತವೆ ಮತ್ತು ಪೊಲೀಸರು ಚಾರ್ಜ್‌ ಶೀಟ್ ಸಲ್ಲಿಸಲು ಕಾಲಾವಕಾಶ ತೆಗೆದುಕೊಳ್ಳುತ್ತಾರೆ ಎಂದು ವಿವರಿಸಿದ ಅವರು, ಈ ಸಂಬಂಧಿತ ಇಲಾಖೆಗಳಲ್ಲೂ ಸಂಪನ್ಮೂಲಗಳ ಅಭಾವವಿದೆ ಎಂದು ತಿಳಿಸಿದ್ದಾರೆ.

"ವಿಶೇಷ ನ್ಯಾಯಾಲಯಗಳು, ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳು, ಮಾನವ ಹಕ್ಕುಗಳ ನ್ಯಾಯಾಲಯಗಳು, ಬಾಲನ್ಯಾಯ ಮಂಡಳಿಗಳು, ಗ್ರಾಹಕರ ಕುಂದುಕೊರತೆ ನಿವಾರಣಾ ವ್ಯವಸ್ಥೆಗಳು ಮತ್ತು ವಾಣಿಜ್ಯ ನ್ಯಾಯಾಲಯಗಳಂತಹ ವಿಶೇಷ ವ್ಯವಸ್ಥೆಗಳನ್ನು ಕೆಲಸದ ವೇಗ ಹೆಚ್ಚಿಸಲು ಸ್ಥಾಪಿಸಲಾಗಿದೆಯಾದರೂ, ಸಾಮಾನ್ಯ ನ್ಯಾಯಾಲಯಗಳು ಎದುರಿಸುತ್ತಿರುವ ಸಂಪನ್ಮೂಲಗಳ ಕೊರತೆ ಮತ್ತು ಹೆಚ್ಚುವರಿ ಕೆಲಸದ ಒತ್ತಡದ ಕಾರಣಗಳಿಂದಾಗಿಯೇ ಇವೂ ಸಹ ನಿರೀಕ್ಷಿತ ಫಲಿತಾಂಶ ನೀಡಲು ವಿಫಲವಾಗುತ್ತಿವೆ" ಎಂದು 2025ರ 'ಇಂಡಿಯಾ ಜಸ್ಟಿಸ್ ರಿಪೋರ್ಟ್' ಉಲ್ಲೇಖಿಸಿದೆ.

ನ್ಯಾಷನಲ್ ಜುಡಿಷಿಯಲ್ ಡೇಟಾ ಗ್ರಿಡ್‌ ನ ಮಾಹಿತಿಯ ಪ್ರಕಾರ, ಜುಲೈ 23ರ ವೇಳೆಗೆ ಭಾರತದ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 1.39 ಕೋಟಿ ಕ್ರಿಮಿನಲ್ ಪ್ರಕರಣಗಳ ಪೈಕಿ ಶೇ. 35ರಷ್ಟು ಪ್ರಕರಣಗಳು ವಕೀಲರು ಲಭ್ಯವಿಲ್ಲದ ಕಾರಣ ವಿಳಂಬವಾಗಿವೆ. ಇನ್ನು ಶೇ. 24ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಶೇ. 17ರಷ್ಟು ಪ್ರಕರಣಗಳು ಸಾಕ್ಷಿಗಳ ಕೊರತೆಯಿಂದ ಮತ್ತು ಶೇ. 11ರಷ್ಟು ಪ್ರಕರಣಗಳು 'ವಿವಿಧ ಕಾರಣಗಳ ತಡೆಯಾಜ್ಞೆ'ಯಿಂದಾಗಿ ಬಾಕಿಯಾಗಿವೆ.

ಫಾಸ್ಟ್ ಟ್ರ್ಯಾಕ್ ಕೋರ್ಟ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಪ್ರತಿ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ನಲ್ಲಿ ಒಬ್ಬ ನ್ಯಾಯಾಂಗ ಅಧಿಕಾರಿ ಮತ್ತು ಏಳು ಬೆಂಬಲ ಸಿಬ್ಬಂದಿ ಇರಬೇಕು. ಅಲ್ಲದೆ, "ಈ ಕೋರ್ಟ್‌ ಗಳ ಹೆಚ್ಚುವರಿ ಜವಾಬ್ದಾರಿಯನ್ನು ಹಾಲಿ ಇರುವ ನ್ಯಾಯಾಂಗ ಅಧಿಕಾರಿ ಅಥವಾ ಸಿಬ್ಬಂದಿಗೆ ನೀಡಬಾರದು" ಎಂದು ನಿಯಮ ಹೇಳುತ್ತದೆ. ಇದರ ಜೊತೆಗೆ, ಪ್ರಕರಣಗಳ ತ್ವರಿತ ವಿಲೇವಾರಿಗೆ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ಅವಕಾಶವಿದೆ.

ಆದರೆ, ಪ್ರಾಯೋಗಿಕವಾಗಿ ಇತರ ಸಾಮಾನ್ಯ ನ್ಯಾಯಾಲಯಗಳನ್ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳಾಗಿ ಮರುನಾಮಕರಣ ಮಾಡಲಾಗುತ್ತಿದ್ದು, ಅವು ಇತರ ಪ್ರಕರಣಗಳನ್ನೂ ನಿರ್ವಹಿಸುತ್ತಿರುವುದರಿಂದ ಮತ್ತಷ್ಟು ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ರಂಧಾವಾ ಹೇಳಿದ್ದಾರೆ.

ಬೃಂದಾ ಗ್ರೋವರ್ ಇದನ್ನು ಒಪ್ಪುತ್ತಾ, "ಸಾಮಾನ್ಯ ನ್ಯಾಯಾಲಯವನ್ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ಆಗಿ ಬದಲಾಯಿಸಿದಾಗ, ಅದು ಎರಡು ಕೋರ್ಟ್‌ ಗಳ ಕೆಲಸದ ಹೊರೆಯನ್ನು ಹೊರಬೇಕಾಗುತ್ತದೆ" ಎಂದಿದ್ದಾರೆ.

ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳ ಕಾರ್ಯನಿರ್ವಹಣೆಯನ್ನು ಗಮನಿಸಿದರೆ, ಅವುಗಳಿಗೆ ಪ್ರತ್ಯೇಕ ನ್ಯಾಯಾಧೀಶರ ಕೊರತೆಯಿದೆ. ಜೊತೆಗೆ, ಮೂಲಸೌಕರ್ಯ, ಐಟಿ ಸೇವೆಗಳು ಮತ್ತು ಕಾರ್ಯದರ್ಶಿ ಸಿಬ್ಬಂದಿಯ ರೂಪದಲ್ಲಿ ಸಂಪನ್ಮೂಲಗಳ ತೀವ್ರ ಅಭಾವವನ್ನು ಎದುರಿಸುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.

ಯೋಜನೆಯ ಆರಂಭದಲ್ಲಿ, ಒಂದು ವರ್ಷದೊಳಗೆ 1.60 ಲಕ್ಷ ಪೋಕ್ಸೊ ಪ್ರಕರಣಗಳು ಸೇರಿದಂತೆ ಒಟ್ಟು 1.66 ಲಕ್ಷ ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿತ್ತು ಎಂದು ಸಚಿವಾಲಯದ 2023ರ ವರದಿ ತಿಳಿಸಿದೆ. ಯೋಜನೆ ಮುಗಿದ ನಂತರವೂ ಇತ್ಯರ್ಥವಾಗದ ಪ್ರಕರಣಗಳನ್ನು ಸಾಮಾನ್ಯ ನ್ಯಾಯಾಲಯಗಳಿಗೆ ಅಥವಾ ಇತರ ವಿಶೇಷ ನ್ಯಾಯಾಲಯಗಳಿಗೆ ವರ್ಗಾಯಿಸಲಾಗುತ್ತದೆ.

►ಮುಂದಿರುವ ಹಾದಿ

ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಗಳ ಉದ್ದೇಶವನ್ನು ಈಡೇರಿಸಲು ಸರ್ಕಾರವು ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಸಂಪನ್ಮೂಲ ಮತ್ತು ಸಾಮರ್ಥ್ಯವನ್ನು ಒದಗಿಸಬೇಕು ಎಂದು ರಂಧಾವಾ ತಿಳಿಸಿದ್ದಾರೆ. ಬರುವ ಪ್ರಕರಣಗಳ ಸಂಖ್ಯೆಗೆ ಅನುಗುಣವಾಗಿ ಬಜೆಟ್, ಕೋರ್ಟ್‌ ಹಾಲ್‌ ಗಳು ಮತ್ತು ನ್ಯಾಯಾಧೀಶರ ಸಂಖ್ಯೆಯನ್ನು ಸರ್ಕಾರ ವಾಸ್ತವಿಕವಾಗಿ ಅಂದಾಜಿಸಬೇಕಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವಿಷಯಗಳಲ್ಲಿ ರಾಜ್ಯಗಳ ನಡುವಿನ ಸಮನ್ವಯ, ತರಬೇತಿ ಪಡೆದ ತನಿಖಾಧಿಕಾರಿಗಳು, ತಾಂತ್ರಿಕ ಜ್ಞಾನ ಮತ್ತು ಕಾರ್ಯವಿಧಾನದ ತಿಳುವಳಿಕೆ ಅತ್ಯಗತ್ಯ ಎಂದು ಸಿಂಗ್ ಹೇಳಿದ್ದಾರೆ. ಮಧ್ಯವರ್ತಿಗಳ ಜಾಲ ಮತ್ತು ಪತ್ತೆಹಚ್ಚಲು ಕಷ್ಟಕರವಾದ ಹಣಕಾಸಿನ ವಹಿವಾಟುಗಳ ಮೂಲಕ ಸೋರಿಕೆ ನಡೆಯುವುದರಿಂದ, ಇದರ 'ಮಾಸ್ಟರ್‌ಮೈಂಡ್' ಅನ್ನು ಪತ್ತೆಹಚ್ಚಲು ಮಾನವಶಕ್ತಿ ಮತ್ತು ತಾಂತ್ರಿಕ ಸಾಮರ್ಥ್ಯ ಎರಡೂ ಅಗತ್ಯವಿದೆ.

ದೇಶಾದ್ಯಂತ ವಿಧಿವಿಜ್ಞಾನ (ಫೊರೆನ್ಸಿಕ್) ಪ್ರಯೋಗಾಲಯಗಳಲ್ಲಿ ವೈಜ್ಞಾನಿಕ ಅಧಿಕಾರಿಗಳ ಹುದ್ದೆಗಳ ಪೈಕಿ ಶೇ. 50ರಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು 2025ರ ವರದಿ ತೋರಿಸಿದೆ. "ಪೊಲೀಸ್ ಇಲಾಖೆಯಲ್ಲಿ ತನಿಖಾ ವಿಭಾಗ ಮತ್ತು ಕಾನೂನು ಸುವ್ಯವಸ್ಥೆ ವಿಭಾಗಗಳನ್ನು ಪ್ರತ್ಯೇಕಿಸುವ ಕಾರ್ಯ ಇನ್ನೂ ಪೂರ್ಣವಾಗಿ ಜಾರಿಯಾಗಿಲ್ಲ. ಹೀಗಾಗಿ ತನಿಖೆಗಳು ಮಂದಗತಿಯಲ್ಲಿ ಸಾಗುತ್ತಿವೆ" ಎಂದು ಸಿಂಗ್ ವಿವರಿಸಿದ್ದಾರೆ.

ಸೌಜನ್ಯ: newslaundry.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News