ಡೌನ್ಲೋಡ್ ಗೆ ಸಿಗುತ್ತಿದೆ Kimi K3; ಜಾಗತಿಕ AI ದಿಗ್ಗಜರಿಗೆ ಭೀತಿ ಮೂಡಿಸಿದ Moonshot

Update: 2026-07-27 18:23 IST

Photo Credit : kimi.com

ಚೀನೀ ಮಾಡೆಲ್ಗಳು ವಿಸ್ತೃತ ಬಳಕೆಗೆ ದೊಡ್ಡ ಮಾಡೆಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಭಿನ್ನ ಅಭಿಪ್ರಾಯಗಳಿಗೆ ಕಾರಣವಾಗಿದೆ.

ನಾವು ನಿತ್ಯದ ಬಳಕೆಗೆ OpenAI ನ ಚಾಟ್ಜಿಪಿಟಿ ಮತ್ತು ಗೂಗಲ್ನ ಜೆಮಿನಿಯಂತಹ AI ಮಾಡೆಲ್ಗಳನ್ನು ಬಳಸುತ್ತಿದ್ದೇವೆ. ಆದರೆ ಅವುಗಳು ನಮಗೆ ಸೀಮಿತ ಬಳಕೆಯ ಅವಕಾಶಗಳನ್ನು ಮಾತ್ರ ಕೊಡುತ್ತಿವೆ. ಆದರೆ ಇದೀಗ ಚೀನೀ ಮಾಡೆಲ್ಗಳು ವಿಸ್ತೃತ ಬಳಕೆಗೆ ದೊಡ್ಡ ಮಾಡೆಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿರುವುದು ಅಮೆರಿಕದ ಸಿಲಿಕಾನ್ ವ್ಯಾಲಿಯನ್ನು ತಲ್ಲಣಗೊಳಿಸಿದೆ.

ಕೆಲವು ದಿನಗಳ ಹಿಂದೆ ಚೀನಾದ Moonshot AI ಕಂಪನಿಯು ಈವರೆಗೂ ನಿರ್ಮಾಣವಾಗಿರುವ ಅತಿದೊಡ್ಡ 2.8 ಟ್ರಿಲಿಯನ್ ಪ್ಯಾರಾಮೀಟರ್ ಸೆಟ್ನ ಓಪನ್-ವೈಟ್ ಮಾಡೆಲ್ Kimi K3 ಅನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆಯು ಅಮೆರಿಕದ ಕಂಪನಿಗಳಾದ Anthropic ನ Claude Fable ಮತ್ತು OpenAI ನ GPT-5.6 Sol ಗಳೇ ಅತ್ಯುತ್ತಮ AI ಮಾಡೆಲ್ಗಳೆನ್ನುವ ಗೌರವವನ್ನು ಕಡಿಮೆ ಮಾಡಿದೆ. ಇದೀಗ Moonshot AI ಕಂಪನಿಯು Kimi K3 ನ ಓಪನ್ ವೇಟ್ಗಳನ್ನು ಜುಲೈ 27ರಿಂದ ಸಾರ್ವಜನಿಕಗೊಳಿಸಲಾಗುವುದು ಎಂದು ಹೇಳಿದೆ.

Kimi K3 ಸ್ಥಳೀಯವಾಗಿ ಬಳಸುವುದು ಹೇಗೆ?

ಓಪನ್ ವೇಟ್ ಎಂದರೆ AI ಮಾಡೆಲ್ಗಳನ್ನು ತರಬೇತಿ ನೀಡಲು ಬಳಸಲಾಗುವ ಪ್ಯಾರಾಮೀಟರ್ಗಳ ಸೆಟ್ಗಳನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ, Kimi K3 ಡೌನ್ಲೋಡ್ಗೆ ಲಭ್ಯವಾದ ನಂತರ ನಿಮ್ಮ ಸಾಧನದಲ್ಲಿ ಅದನ್ನು ಸ್ಥಳೀಯವಾಗಿ ರನ್ ಮಾಡಬಹುದು. ಟೋಕನ್ಗಳ ವೆಚ್ಚಗಳ ಬಗ್ಗೆ ಚಿಂತಿಸದೆ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಮಾರ್ಪಡಿಸಬಹುದು. ಉಬರ್ ಮತ್ತು ವಾಲ್ಮಾರ್ಟ್ನಂತಹ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳು Claude Code ನಂತಹ AI ಸಾಧನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಪುನರ್ವಿರ್ಮಿಶಸಬೇಕಾಗಿ ಬಂದ ಟೋಕನ್ ವೆಚ್ಚಗಳೇ ಇಲ್ಲದಂತೆ ಮಾಡಿದೆ Kimi K3!

Kimi K3 ಯು 2.8 ಟ್ರಿಲಿಯನ್ಗಿಂತ ಹೆಚ್ಚಿನ ಪ್ಯಾರಾಮೀಟರ್ಗಳನ್ನು ಹೊಂದಿರುವ ದೊಡ್ಡ ಮಾದರಿಯಾಗಿರುವ ಕಾರಣ ನಿಮ್ಮ ಲ್ಯಾಪ್ಟಾಪ್ನಲ್ಲಿ ಅದನ್ನು ಚಲಾಯಿಸಲು ಸಾಧ್ಯವಿಲ್ಲ. ನಿಮಗೆ ಎಂಟರ್ಪ್ರೈಸ್-ಗ್ರೇಡ್ ಮೂಲಸೌಕರ್ಯದ ಅಗತ್ಯ ಬೀಳಬಹುದು. ಆದರೆ ಲೇಖನ ಬರೆಯುವವರೆಗೂ Moonshot AI ಕಂಪನಿಯು Kimi K3 ನ ಓಪನ್ ವೇಟ್ ಅನ್ನು ಡೌನ್ಲೋಡ್ಗೆ ನೀಡಿಲ್ಲ.

OpenAI ಮತ್ತು Anthropic ಇರುವ ಸಮಸ್ಯೆಯೇನು?

ಚೀನಾದ AI ಮಾಡೆಲ್ಗಳು ಸುಧಾರಿಸಿಕೊಳ್ಳುತ್ತಿರುವಂತೆ ಸಿಲಿಕಾನ್ ವ್ಯಾಲಿಯಲ್ಲಿ ದೊಡ್ಡ ಬಿರುಕು ಉಂಟಾಗುತ್ತಿದೆ. Kimi K3 ಮತ್ತು Zai’s GLM 5.2 ನಂತಹ ಮಾಡೆಲ್ಗಳು ಅಮೆರಿಕದ ಫ್ರಂಟಿಯರ್ ಮಾಡೆಲ್ಗಳ (ಫ್ರಂಟಿಯರ್ ಮಾಡೆಲ್ ಎಂದರೆ ಅತಿ ಹೆಚ್ಚು ಶಕ್ತಿಶಾಲಿ ಮತ್ತು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಇರುವ ವ್ಯವಸ್ಥೆ. ಇದು ಅಪಾರ ಪ್ರಮಾಣದ ಗಣನಾ ಶಕ್ತಿಯನ್ನು ಬಳಸಿ ತರಬೇತಿ ಪಡೆದ ಅತ್ಯಂತ ಪ್ರಮುಖ ತಳಹದಿ ಮಾಡೆಲ್ ಆಗಿರುತ್ತದೆ.) ಸಮೀಪಕ್ಕೆ ಬರುತ್ತಿದ್ದಂತೆ, OpenAI ಮತ್ತು Anthropic ಚಿಂತೆಗೆ ಬಿದ್ದಿವೆ. ಏಕೆಂದರೆ ಚೀನಾದ ಮಾಡೆಲ್ಗಳನ್ನು ಬಳಸುವುದು ಬಳಕೆದಾರರಿಗೆ ಹೆಚ್ಚು ಅಗ್ಗವೆನಿಸುತ್ತಿವೆ.

ಹೀಗಾಗಿ ಚೀನಾದ AI ಮಾಡೆಲ್ಗಳ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸುವಂತೆ OpenAI ಮತ್ತು Anthropic ಟ್ರಂಪ್ ಆಡಳಿತದ ಮುಂದೆ ಲಾಬಿ ಮಾಡುತ್ತಿವೆ. ಅಮೆರಿಕದ ಸ್ಟಾರ್ಟಪ್ಗಳು ಚೀನೀ ಮಾಡೆಲ್ಗಳ ಬಳಕೆ ಇಂಟಲೆಕ್ಚುವಲ್ ಪ್ರಾಪರ್ಟಿ (ಬೌದ್ಧಿಕ ಆಸ್ತಿ) ಕಳ್ಳತನ ಮತ್ತು ರಾಷ್ಟ್ರೀಯ ಭದ್ರತೆಯ ಕಳವಳಕ್ಕೆ ಕಾರಣವಾಗಬಹುದು ಎಂದು ಹೇಳುತ್ತಿವೆ.

Anthropic ಈ ಹಿಂದೆಯೇ ಚೀನೀ AI ಪ್ರಯೋಗಾಲಯಗಳು ತಮ್ಮದೇ ಆದ ತರಬೇತಿ ನೀಡಲು ತನ್ನ AI ಮಾದರಿಗಳನ್ನು ಬಟ್ಟಿ ಇಳಿಸುತ್ತಿದೆ (ಡಿಸ್ಟಿಲಿಂಗ್) ಎಂದು ಆರೋಪಿಸಿದೆ. ಭಟ್ಟಿ ಇಳಿಸುವಿಕೆ ಎಂದರೆ ಮೂಲಭೂತವಾಗಿ ಸಣ್ಣ AI ಮಾಡೆಲ್ಗಳು ದೊಡ್ಡ AI ಮಾಡೆಲ್ಗಳ ಪ್ರತಿಕ್ರಿಯೆಗಳನ್ನು ಅಧ್ಯಯನ ಮಾಡುವ ಮೂಲಕ ಕಲಿಯುವ ಪ್ರಕ್ರಿಯೆಯಾಗಿದೆ. ಇದಕ್ಕೆ ಮೊದಲು ಶ್ವೇತಭವನದ ಸಲಹೆಗಾರ ಮೈಕೆಲ್ ಕ್ರಾಟ್ಸಿಯೋಸ್ ಅವರೂ Moonshot AI ತನ್ನ Kimi K3 ಗೆ ತರಬೇತಿ ನೀಡಲು ಆಂಥ್ರೋಪಿಕ್ನ ಮಾಡೆಲ್ಗಳನ್ನು ಭಟ್ಟಿ ಇಳಿಸುತ್ತಿದೆ ಎಂದು ಆರೋಪಿಸಿದ್ದರು.

ಅದೇ ಸಮಯದಲ್ಲಿ ಅಮೆರಿಕದಲ್ಲಿ ಅನೇಕ ತಂತ್ರಜ್ಞಾನ ಕಂಪನಿಗಳು ಓಪನ್-ವೇಟ್ AI ಮಾಡೆಲ್ಗಳನ್ನು ಬಹಿರಂಗವಾಗಿ ಬೆಂಬಲಿಸಿವೆ. “ಓಪನ್ ವೇಟ್ ಮತ್ತು ಅಮೆರಿಕನ್ AI ನಾಯಕತ್ವ” ಎಂದು ಶೀರ್ಷಿಕೆಯ ಜಂಟಿ ಪತ್ರಕ್ಕೆ ಅಮೆರಿಕದ 25 ತಂತ್ರಜ್ಞಾನ ಕಂಪನಿಗಳು ಸಹಿ ಹಾಕಿವೆ. ಈ ಪತ್ರದಲ್ಲಿ ಡೌನ್ಲೋಡ್ ಮಾಡಬಹುದಾದ AI ಮಾಡೆಲ್ಗಳ ಮೇಲೆ ಅಕಾಲಿಕ ನಿರ್ಬಂಧಗಳನ್ನು ಹಾಕಬಾರದು ಎಂದು ಕೇಳಿಕೊಂಡಿವೆ.

Nvidia, Microsoft, Meta, IBM, Dell ಮತ್ತು Palantir ಮೊದಲಾದ ದೊಡ್ಡ ತಂತ್ರಜ್ಞಾನಗಳು ಪತ್ರಕ್ಕೆ ಸಹಿ ಹಾಕಿವೆ. ಈವರೆಗೂ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಒಂದೂ ಪೋಸ್ಟ್ ಹಾಕಿರದ Nvidia ದ ಮುಖ್ಯಸ್ಥ ಜೆನ್ಸನ್ ಹುವಾಂಗ್ ತಮ್ಮ ಮೊದಲ ಪೋಸ್ಟ್ನಲ್ಲಿ ಈ ಪತ್ರವನ್ನು ಹಂಚಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News