ಪದೇಪದೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ; ನಟ ಧನುಷ್ ಪ್ರತಿಕ್ರಿಯೆ ಏನು?

Update: 2026-07-27 21:10 IST

ನಟ ಧನುಷ್ | Photo Credit : PTI  

ಇತರೆ ಉತ್ತಮ ಸಿನಿಮಾಗಳಿದ್ದರೂ ತಮಗೆ ಪದೇಪದೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿರುವುದು ಆನ್‌ಲೈನ್‌ ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ನಟ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ.

ತಮಿಳು ನಟ ಧನುಷ್ ಅವರು ತಮ್ಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸುತ್ತ ಕೇಳಿಬರುತ್ತಿರುವ ಟೀಕೆಗಳಿಗೆ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಈ ವರ್ಷ ಅವರು ತಮ್ಮ ನಿರ್ದೇಶನದ ‘ರಾಯನ್’ ಸಿನಿಮಾಗೆ ಅತ್ಯುತ್ತಮ ತಮಿಳು ನಿರ್ದೇಶಕ ಪ್ರಶಸ್ತಿ ಹಾಗೂ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಶೇಷ ಉಲ್ಲೇಖ ಪ್ರಶಸ್ತಿ ಪಡೆದಿರುವುದು ಚರ್ಚೆಗೆ ಕಾರಣವಾಗಿತ್ತು. ಇತರ ಉತ್ತಮ ಸಿನಿಮಾಗಳಿದ್ದರೂ ಧನುಷ್ ಅವರಿಗೆ ಪದೇಪದೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆದಿದ್ದವು.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ ನಟ, “ಈ ವರ್ಷ ಅನೇಕ ಉತ್ತಮ ತಮಿಳು ಸಿನಿಮಾಗಳು ಬಿಡುಗಡೆಯಾಗಿವೆ” ಎಂದು ಒಪ್ಪಿಕೊಂಡರು. ಆದರೆ ಜನರು ತಮ್ಮ ಸಾಧನೆ ಹಾಗೂ ಸಿನಿಮಾ ನಿರ್ಮಿಸಲು ಪಟ್ಟ ಶ್ರಮವನ್ನು ಕಡೆಗಣಿಸಬಾರದು ಎಂದೂ ಅವರು ಹೇಳಿದರು.

“‘ರಾಯನ್’ ಸಿನಿಮಾಗಾಗಿ ನನಗೆ ಈ ವರ್ಷ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಖಂಡಿತವಾಗಿಯೂ ಅದಕ್ಕಿಂತ ಉತ್ತಮ ಸಿನಿಮಾಗಳು ಇದ್ದವು. ಆ ಸಿನಿಮಾಗಳ ಅಭಿಮಾನಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಾನು ಅವರನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ” ಎಂದು ಯಾವುದೇ ನಿರ್ದಿಷ್ಟ ಸಿನಿಮಾವನ್ನು ಉಲ್ಲೇಖಿಸದೆ ಹೇಳಿದರು.

ಅದಾದ ಬಳಿಕ, ತಮಗೆ ಹಿಂದೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ ಎಂದುಕೊಂಡಿದ್ದ ಕೆಲವು ಸಿನಿಮಾಗಳಿಗೆ ಪ್ರಶಸ್ತಿ ದೊರೆಯಲಿಲ್ಲ ಎಂಬುದನ್ನೂ ಅವರು ಹೇಳಿದರು. ಅಂತಹ ಸಿನಿಮಾಗಳ ಪಟ್ಟಿಯನ್ನೇ ಮುಂದಿಟ್ಟು, ತಮಗೆ ದೊರೆತ ರಾಷ್ಟ್ರ ಪ್ರಶಸ್ತಿಯನ್ನು ಸಮರ್ಥಿಸಿಕೊಂಡರು.

“ನನಗೆ ‘ಒರು ಕನಾ ಕಾಲಂ’ ಸಿನಿಮಾಗೆ ಪ್ರಶಸ್ತಿ ಸಿಗುವ ನಿರೀಕ್ಷೆ ಇತ್ತು. ಆಗ ನಾನು ಚಿಕ್ಕವನಿದ್ದೆ. ಆದರೂ ಪ್ರಶಸ್ತಿ ಸಿಗಲಿಲ್ಲ. ನಂತರ ‘ಪುದುಪೆಟ್ಟೈ’ಗೆ ಸಿಗುತ್ತದೆ ಎಂದುಕೊಂಡೆ” ಎನ್ನುತ್ತಾ, ತಾವು ಪ್ರಶಸ್ತಿಯ ನಿರೀಕ್ಷೆ ಇಟ್ಟ ಸಿನಿಮಾಗಳ ಪಟ್ಟಿಯನ್ನೇ ಓದಿದರು.

ತಮ್ಮ ಸಾಧನೆಯನ್ನು ತಿರಸ್ಕರಿಸುವ ಬದಲು ಅದನ್ನು ಸಂಭ್ರಮಿಸಬೇಕೆಂದು ಜನರನ್ನು ಅವರು ಕೇಳಿಕೊಂಡರು. “ಕೆಲವು ವಿಷಯಗಳು ನೀವು ಎಷ್ಟೇ ಪ್ರಯತ್ನಿಸಿದರೂ ತಾವಾಗಿಯೇ ಬರಬೇಕು; ನನ್ನ ಮಟ್ಟಿಗೆ ಹಾಗೆಯೇ ಆಗಿದೆ. ನನಗೆ ಅವಕಾಶ ಸಿಕ್ಕಿತು. ಚಿತ್ರ ಹೇಗೆ ಬಂದರೂ ಅದರಲ್ಲಿ ನನ್ನ ಪ್ರಯತ್ನ ನಿಜವಾಗಿದೆ. ಒಬ್ಬ ತಮಿಳಿಗನಾಗಿ ನನಗೆ ಒಂದೇ ಬಾರಿಗೆ ಎರಡು ರಾಷ್ಟ್ರ ಪ್ರಶಸ್ತಿಗಳು ಬಂದಿವೆ. ಇದನ್ನು ಬದಿಗಿಡಬೇಡಿ, ಸಂಭ್ರಮಿಸಿ” ಎಂದು ಅವರು ಹೇಳಿದರು.

ಅವರು ನಟ ಅಜಿತ್ ಕುಮಾರ್ ಅವರ ಮಾತುಗಳನ್ನು ಉಲ್ಲೇಖಿಸಿ, “ಅಜಿತ್ ಸರ್ ಹೇಳಿದಂತೆ, ಸ್ವತಃ ಸೋಲೊಪ್ಪಿಕೊಳ್ಳುವವರೆಗೂ ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ಘೋಷಣೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ, ಕಾರ್ತಿ ಮತ್ತು ಅರವಿಂದ್ ಸ್ವಾಮಿ ನಟಿಸಿದ ‘ವೇಯಝಗನ್’ ಹಾಗೂ ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ನಟಿಸಿದ ‘ಮಹಾರಾಜ’ ಸಿನಿಮಾಗಳು ‘ರಾಯನ್’ಗಿಂತ ಉತ್ತಮವಾಗಿದ್ದವು ಎಂದು ಹಲವರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News