2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 'Gen Z' ಪ್ರತಿಭಟನೆ ಪ್ರಭಾವ ಬೀರಲಿದೆಯೇ?
ಪ್ರಶಾಂತ್ ಶ್ರೀವಾಸ್ತವ – theprint. in ವರದಿ
ಮುಖ್ಯಮಂತ್ರಿ ಆದಿತ್ಯನಾಥ್ , ಅಖಿಲೇಶ್ ಯಾದವ್ | Photo Credit : ANI
ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ 'Gen Z' ಯುವಜನರ ಪ್ರತಿಭಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 2027ರ ವಿಧಾನಸಭಾ ಚುನಾವಣೆಗೆ ಮುನ್ನ ಈ ಚಳವಳಿ ರಾಜ್ಯಕ್ಕೂ ಹರಡಬಹುದು ಎಂಬ ಕಳವಳದ ನಡುವೆ ಉತ್ತರ ಪ್ರದೇಶ ಸರಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಬುಧವಾರ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್, ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ "ವಿದ್ಯಾರ್ಥಿಗಳಲ್ಲಿ ದ್ವೇಷವನ್ನು ಹರಡುತ್ತಿವೆ ಮತ್ತು ಅವರನ್ನು ಪ್ರಚೋದಿಸುತ್ತಿವೆ" ಎಂದು ಆರೋಪಿಸಿದರು. "ಸಮಾಜವಾದಿ ಪಾರ್ಟಿ ಮತ್ತು ಕಾಂಗ್ರೆಸ್ ವಿದ್ಯಾರ್ಥಿಗಳಲ್ಲಿ ದ್ವೇಷ ಹರಡುತ್ತಾ ಅವರನ್ನು ಎತ್ತಿಕಟ್ಟುತ್ತಿವೆ" ಎಂಬ ಮುಖ್ಯಮಂತ್ರಿಯವರ ಹೇಳಿಕೆಯು, ಬೆಳೆಯುತ್ತಿರುವ ಈ ಪ್ರತಿಭಟನೆಯನ್ನು ಕಂಡು ಸರಕಾರ ಆತಂಕಗೊಂಡಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳ ಪ್ರಕಾರ, ಪ್ರತಿಭಟನೆಗಳು ಬೃಹತ್ ರೂಪ ಪಡೆದುಕೊಳ್ಳದಂತೆ ತಡೆಯಲು ಮತ್ತು ಕಟ್ಟೆಚ್ಚರ ವಹಿಸಲು ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಲಾಗಿದೆ. ಯಾವುದೇ ಪ್ರತಿಭಟನೆಗಳು ಕಂಡುಬಂದರೂ ಅವುಗಳನ್ನು ಆದಷ್ಟು ಬೇಗ ಶಮನಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಈ ತಂತ್ರ ಸದ್ಯಕ್ಕೆ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಪ್ರಯಾಗ್‌ರಾಜ್ ಮತ್ತು ಕಾನ್ಪುರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗಳನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಚದುರಿಸಿದ್ದಾರೆ.
ರಾಜ್ಯದ ಹಲವು ಭಾಗಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಗಳು ವರದಿಯಾಗುತ್ತಿದ್ದು, ಈ ಚಳವಳಿಯು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಆದರೆ ರಾಜ್ಯ ಆಡಳಿತಾಧಿಕಾರಿಗಳು ಹೀಗೆ ಭಾವಿಸುವುದಿಲ್ಲ. ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು 'The Print'ಗೆ ನೀಡಿರುವ ಮಾಹಿತಿಯ ಪ್ರಕಾರ, ಜಂತರ್ ಮಂತರ್ ಪ್ರತಿಭಟನೆಯು ರಾಜ್ಯದ ಚುನಾವಣಾ ರಾಜಕೀಯದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆಯಿಲ್ಲ.
"ಪ್ರಶ್ನೆಪತ್ರಿಕೆ ಸೋರಿಕೆ ಒಂದು ಸಮಸ್ಯೆಯಾಗಿದ್ದರೂ, ಮತದಾರರಿಗೆ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ದೊಡ್ಡ ಕಳವಳದ ವಿಷಯವಾಗಿದೆ. ಯೋಗಿ ಸರಕಾರದಲ್ಲಿ ತಾವು ಹೆಚ್ಚು ಸುರಕ್ಷಿತವಾಗಿದ್ದೇವೆ ಎಂದು ಜನರು ನಂಬಿದ್ದಾರೆ. ಸಮಾಜವಾದಿ ಪಾರ್ಟಿ ಆಡಳಿತದ ಸಮಯದಲ್ಲಿ ಅಪರಾಧ ಮತ್ತು ಹಫ್ತಾ ವಸೂಲಿ ಬೆದರಿಕೆಗಳ ಕುರಿತು ಆತಂಕವಿತ್ತು. ಯಾವುದೇ ಪ್ರತಿಭಟನೆಯು ದೊಡ್ಡ ಚಳವಳಿಯಾಗಿ ಬೆಳೆಯದಂತೆ ತಡೆಯಲು ಆಡಳಿತ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಯಾವುದೇ ರೀತಿಯ ಅಶಾಂತಿಯನ್ನು ಸಹಿಸದ ಕಟ್ಟುನಿಟ್ಟಿನ ಆಡಳಿತಗಾರ ಎಂಬ ಇಮೇಜ್ ಹೊಂದಿದ್ದಾರೆ" ಎಂದು ಹೇಳಿದರು.
►ವಿಶ್ಲೇಷಕರು ಏನಂತಾರೆ?
ರಾಷ್ಟ್ರೀಯ ಮಟ್ಟದ ಪ್ರತಿಭಟನೆಗಳು, ವಿಶೇಷವಾಗಿ ಯುವ ಮತದಾರರು ಭಾಗವಹಿಸಿದಾಗ, ಆಗಾಗ್ಗೆ ರಾಜಕೀಯ ಪರಿಣಾಮಗಳನ್ನು ಬೀರುತ್ತವೆ ಎಂದು 'The Print' ಜತೆ ಮಾತನಾಡಿದ ಉತ್ತರ ಪ್ರದೇಶದ ರಾಜಕೀಯ ವಿಶ್ಲೇಷಕ ಪ್ರೊ. ಕವಿರಾಜ್ ಹೇಳಿದ್ದಾರೆ.
"ರಾಷ್ಟ್ರೀಯ ಮಟ್ಟದ ಪ್ರತಿಭಟನೆಗಳು ವ್ಯಾಪಕ ಚರ್ಚೆಗೆ ಕಾರಣವಾಗುತ್ತವೆ ಮತ್ತು ಪ್ರಭಾವ ಬೀರುತ್ತವೆ. ಈ ಚಳವಳಿಯನ್ನು ಯುವಜನರು ಮುನ್ನಡೆಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಮೊದಲ ಅಥವಾ ಎರಡನೇ ಬಾರಿಯ ಮತದಾರರು. ಅವರಿಗೆ ಸಮಸ್ಯೆಯೇ ಪ್ರಮುಖವಾಗಿದ್ದು, ಅದರ ಮೇಲೆಯೇ ಗಮನ ಕೇಂದ್ರೀಕರಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿರುವ ಐದು ರಾಜ್ಯಗಳ ಪ್ರಸ್ತುತ ಸರಕಾರಗಳಿಗೆ ಇದು ಸವಾಲಾಗಿದೆ. ಈ ಚಳವಳಿಯು ಉತ್ತರ ಪ್ರದೇಶದ ರಾಜಕೀಯದ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ" ಎಂದಿದ್ದಾರೆ ಅವರು.
ಲಕ್ನೋದ ಗಿರಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಶಿಲ್ಪ್ ಶಿಖಾ ಸಿಂಗ್ ಅವರ ಪ್ರಕಾರ, ಚುನಾವಣಾ ಪರಿಣಾಮಗಳನ್ನು ಈಗಲೇ ಊಹಿಸುವುದು ಸರಿಯಲ್ಲ. ಏಕೆಂದರೆ ರಾಜಕೀಯ ನಿರೂಪಣೆಗಳು ಚುನಾವಣೆಯ ಹತ್ತಿರದಲ್ಲಷ್ಟೇ ಸ್ಪಷ್ಟ ರೂಪ ಪಡೆಯುತ್ತವೆ.
"2024ರ ಲೋಕಸಭಾ ಚುನಾವಣೆಯ ಸಮಯದಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ ವಿಷಯವಾಗಿತ್ತು. ಆದರೆ 'ಸಂವಿಧಾನ ಬಚಾವೋ' ವಿಚಾರವು ಇದನ್ನು ಹಿಂದಿಕ್ಕಿತ್ತು. 2027ರ ವಿಧಾನಸಭಾ ಚುನಾವಣೆ ಹತ್ತಿರವಾದಾಗಷ್ಟೇ ಯಾವ ವಿಚಾರವು ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂಬುದು ಸ್ಪಷ್ಟವಾಗಲಿದೆ" ಎಂದು ಹೇಳಿದರು.
►'Gen Z' ಯುವಕರನ್ನು ತಲುಪಲು ಎಸ್‌ಪಿ ಯೋಜನೆ
ಸಮಾಜವಾದಿ ಪಾರ್ಟಿಯ ಸಂಸದೆ ಡಿಂಪಲ್ ಯಾದವ್ ಅವರು ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಂತರ, ಎಸ್‌ಪಿ ಈ ವಿಷಯವನ್ನು 'Gen Z ಸಂವಾದ' ಎಂಬ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಕೊಂಡೊಯ್ಯಲು ಯೋಚಿಸುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿವಿಧ ಜಿಲ್ಲೆಗಳಲ್ಲಿ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ. ಎಸ್‌ಪಿ ಪದಾಧಿಕಾರಿಗಳ ಪ್ರಕಾರ, ಅಖಿಲೇಶ್ ಯಾದವ್ ಈ ಯೋಜನೆಯನ್ನು ಅಂತಿಮಗೊಳಿಸಲು ಲಕ್ನೋ ತಲುಪಿದ್ದಾರೆ.
'The Print' ಜತೆ ಮಾತನಾಡಿದ ಎಸ್‌ಪಿ ವಕ್ತಾರ ಮನೋಜ್ ಕಾಕಾ, ಈ ಚಳವಳಿಯು ಈಗಾಗಲೇ ರಾಜ್ಯದ ಮನೆಮನೆಗಳನ್ನು ತಲುಪಿದೆ ಎಂದು ಹೇಳಿದರು. "ಉತ್ತರ ಪ್ರದೇಶದ ಪ್ರತಿಯೊಂದು ಮನೆಯಲ್ಲೂ Gen Z ಯುವಕರಿದ್ದಾರೆ. ಅವರು ವಿಷಯಗಳನ್ನು ಅರಿತಿದ್ದಾರೆ ಮತ್ತು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ, ದುಬಾರಿ ಶಿಕ್ಷಣ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಅವರಿಗೆ ಪ್ರಮುಖ ಕಳವಳಕಾರಿ ವಿಷಯಗಳಾಗಿವೆ. ಅವರು ಈಗ ನಿಲ್ಲುವುದಿಲ್ಲ. ಅವರು ಭಾರತೀಯ ಜನತಾ ಪಾರ್ಟಿ ವಿರುದ್ಧವಾಗಿ ಮತ ಚಲಾಯಿಸುತ್ತಾರೆ. ನಾವು ಕೂಡ ನಮ್ಮ ನಿಲುವನ್ನು ಮಂಡಿಸುತ್ತೇವೆ" ಎಂದು ಅವರು ಹೇಳಿದರು.
'Gen Z' ಚಳವಳಿಯು ಮುಂಬರುವ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂದರು. Gen Z ಪ್ರತಿಭಟನೆಯು ಖಂಡಿತವಾಗಿಯೂ ಚುನಾವಣಾ ಪರಿಣಾಮವನ್ನು ಬೀರುತ್ತದೆ. ಜಂತರ್ ಮಂತರ್ ಮಾದರಿಯಲ್ಲೇ ಉತ್ತರ ಪ್ರದೇಶದಲ್ಲೂ ಜಂಟಿ ಪ್ರತಿಭಟನೆಗೆ ನಾವು ಚಿಂತನೆ ನಡೆಸಿದ್ದೇವೆ. ಸಾಧಾರಣ ನಾಗರಿಕರೂ ಭಾಗವಹಿಸಲು ಸಾಧ್ಯವಾಗುವಂತೆ ಇದನ್ನು ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆಸದೆ, ನಾಗರಿಕ ಸಮಾಜದ ಬೆಂಬಲದೊಂದಿಗೆ ನಡೆಸಲಾಗುವುದು" ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಸುಧಾಂಶು ಬಾಜಪೇಯಿ ಹೇಳಿದ್ದಾರೆ.
ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಮಾತನಾಡಿ, ಹಿಂದಿನ ಚುನಾವಣೆಗಳ ಮುನ್ನವೂ ಇಂತಹ ಭವಿಷ್ಯವಾಣಿಗಳನ್ನು ನುಡಿಯಲಾಗಿತ್ತು, ಆದರೆ ಅವು ನಿಜವಾಗಲಿಲ್ಲ ಎಂದು ವಾದಿಸಿದರು. "ರೈತರ ಪ್ರತಿಭಟನೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಚಳವಳಿ ಮತ್ತು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ, ಈ ವಿಷಯಗಳು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಪದೇ ಪದೇ ಹೇಳಲಾಗಿತ್ತು. ಆದರೆ ಅದು ಸಂಭವಿಸಲಿಲ್ಲ ಮತ್ತು ಫಲಿತಾಂಶಗಳು ನಮ್ಮ ಪರವಾಗಿದ್ದವು. ಈ ಬಾರಿಯೂ ವಿರೋಧ ಪಕ್ಷಗಳು ನಿರೂಪಣೆಯನ್ನು ಕಟ್ಟಲು ಯತ್ನಿಸಬಹುದು. ಆದರೆ ಫಲಿತಾಂಶವು ಮತ್ತೆ ಬಿಜೆಪಿಯ ಪರವಾಗಿಯೇ ಬರಲಿದೆ" ಎಂದು ಅವರು ಹೇಳಿದರು.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗದಂತಹ ವಿಷಯಗಳ ಸುತ್ತ ಯುವಕರನ್ನು ಒಗ್ಗೂಡಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿದ್ದರೂ, ಬಿಜೆಪಿ ಚುನಾವಣೆಯನ್ನು ಉತ್ತಮ ಆಡಳಿತ ಹಾಗೂ ಕಾನೂನು-ಸುವ್ಯವಸ್ಥೆಯ ಸುತ್ತವೇ ಕೇಂದ್ರೀಕರಿಸಲು ನಿರ್ಧರಿಸಿದಂತೆ ತೋರುತ್ತಿದೆ.
ತಮ್ಮ ಗೋರಖ್‌ಪುರ ಭಾಷಣದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್, ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ ನೇಮಕಾತಿಯಲ್ಲಿ ಹಿಂದಿನ ಸಮಾಜವಾದಿ ಪಾರ್ಟಿ ಸರಕಾರ ಅಕ್ರಮ ಎಸಗಿದೆ ಎಂದು ಆರೋಪಿಸಿದರು. 86 ಹುದ್ದೆಗಳಲ್ಲಿ 56 ಹುದ್ದೆಗಳನ್ನು ಒಂದೇ ಜಾತಿಯ ಅಭ್ಯರ್ಥಿಗಳಿಗೆ ನೀಡಲಾಗಿತ್ತು ಮತ್ತು ಅರ್ಹತೆಯಿಲ್ಲದ ಅಭ್ಯರ್ಥಿಯನ್ನು ಟಾಪರ್ ಮಾಡಲಾಗಿತ್ತು ಎಂದು ಅವರು ಆರೋಪಿಸಿದರು. ವಿರೋಧ ಪಕ್ಷಗಳು ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುತ್ತಿವೆ, ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ದ್ವೇಷ ಹರಡುತ್ತಿವೆ ಮತ್ತು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿವೆ ಎಂದು ಹೇಳಿದರು.
"ಸಾಮಾನ್ಯ ನಾಗರಿಕರಿಗಿಂತ ಮಾಫಿಯಾಗಳ ಮೇಲೆಯೇ ವಿರೋಧ ಪಕ್ಷಗಳಿಗೆ ಹೆಚ್ಚಿನ ಸಹಾನುಭೂತಿಯಿದೆ. ಇಂದು ಉತ್ತರ ಪ್ರದೇಶವು ಮಾಫಿಯಾ-ಮುಕ್ತ, ಗೂಂಡಾ-ಮುಕ್ತ, ಗಲಭೆ-ಮುಕ್ತ ಮತ್ತು ಕರ್ಫ್ಯೂ-ಮುಕ್ತವಾಗಿದೆ. ಈ ಬದಲಾವಣೆಯನ್ನು ಸ್ವೀಕರಿಸಲು ವಿರೋಧ ಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರ ಆಡಳಿತದ ಅವಧಿಯಲ್ಲಿ ರಾಜ್ಯವು ಗಲಭೆ, ಕರ್ಫ್ಯೂ, ಲೂಟಿ ಮತ್ತು ಕಾನೂನುಬಾಹಿರತೆಗೆ ಸಾಕ್ಷಿಯಾಗಿತ್ತು" ಎಂದು ಹೇಳಿದ್ದಾರೆ.
ಹಿಂದಿನ ಎಸ್‌ಪಿ ಸರಕಾರದ ವೈಫಲ್ಯಗಳ ಪ್ರಸ್ತಾಪವು ಮುಖ್ಯಮಂತ್ರಿಯವರ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪ್ರಮುಖವಾಗಿ ಮುಂದುವರಿಯಲಿದೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, 2027ರ ಚುನಾವಣೆಯನ್ನು 'ಆದಿತ್ಯನಾಥ್ ಅವರ ಕಟ್ಟುನಿಟ್ಟಿನ ಆಡಳಿತ' ಮತ್ತು 'ಸಮಾಜವಾದಿ ಪಾರ್ಟಿ ಅವಧಿಯ ಕಾನೂನುಬಾಹಿರ ಚಟುವಟಿಕೆ' ನಡುವಿನ ಆಯ್ಕೆಯಾಗಿ ನಿಲ್ಲಿಸುವುದು ಬಿಜೆಪಿಯ ತಂತ್ರವಾಗಿದೆ.
ಸೌಜನ್ಯ: theprint.in