ಪ್ರಾರ್ಥನಾ ಮಂದಿರಗಳ ಮೇಲೆ ಸರಣಿ ದಾಳಿ; ಭಗಿನಿಯರ ಮೇಲೂ ದೌರ್ಜನ್ಯದ ಆರೋಪ; ಬಳಿಕ ಬಜರಂಗದಳ ತೊರೆದ ಮಹೇಂದ್ರ ಕುಮಾರ್
ಮಂಗಳೂರು: ಕರ್ನಾಟಕದಲ್ಲಿ ಬಿಜೆಪಿ ತನ್ನ ಮೊದಲ ಸ್ವತಂತ್ರ ಸರ್ಕಾರ ರಚಿಸಿ ಮೂರು ತಿಂಗಳಷ್ಟೇ ಕಳೆದಿತ್ತು. ‘ದಕ್ಷಿಣ ಭಾರತದ ಹೆಬ್ಬಾಗಿಲು ತೆರೆಯಿತು’ ಎಂದು ಬಿಜೆಪಿ ಸಂಭ್ರಮಿಸುತ್ತಿದ್ದ ಆ ದಿನಗಳಲ್ಲಿ ಕರಾವಳಿಯಲ್ಲಿ ಕೋಮು ಧ್ರುವೀಕರಣದ ಆರೋಪಗಳು ಕೇಳಿಬಂದಿದ್ದವು. 2008ರ ಸೆಪ್ಟೆಂಬರ್ 14ರಂದು ಮಂಗಳೂರು, ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ವಿವಿಧೆಡೆ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ಸರಣಿ ದಾಳಿಗಳು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ದಾಖಲಾದವು.
ರವಿವಾರದ ಪ್ರಾರ್ಥನೆಗೆ ಜನರು ಚರ್ಚುಗಳತ್ತ ತೆರಳುತ್ತಿದ್ದ ಮುಂಜಾನೆ ಮಂಗಳೂರಿನ ಕುಲಶೇಖರ, ಮಿಲಾಗ್ರಿಸ್, ತೊಕ್ಕೊಟ್ಟು ಸೇರಿದಂತೆ ಹಲವು ಕಡೆಗಳ ಪ್ರಾರ್ಥನಾಲಯಗಳಿಗೆ ಗುಂಪುಗಳು ನುಗ್ಗಿ ದಾಂಧಲೆ ನಡೆಸಿದವು. ದೊಣ್ಣೆ, ಕಲ್ಲು ಹಾಗೂ ಸರಳುಗಳನ್ನು ಹಿಡಿದಿದ್ದ ಉದ್ರಿಕ್ತರು ಬಲಿಪೀಠಗಳನ್ನು ಧ್ವಂಸಗೊಳಿಸಿದರು. ಶಿಲುಬೆಗಳನ್ನು ತುಳಿದರು. ಮೇಣದಬತ್ತಿಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಪ್ರಾರ್ಥನೆಯಲ್ಲಿ ತೊಡಗಿದ್ದ ವೃದ್ಧರು ಹಾಗೂ ಮಹಿಳೆಯರ ಮೇಲೂ ಕಲ್ಲುಗಳು ಬಿದ್ದವು ಎಂದು ವರದಿಯಾಗಿತ್ತು.
ಬಜರಂಗದಳದ ಕಾರ್ಯಕರ್ತರು ಪೂರ್ವಯೋಜಿತ ರೀತಿಯಲ್ಲಿ ಹಲವು ಜಿಲ್ಲೆಗಳ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು ಎಂಬ ಆರೋಪ ಕೇಳಿಬಂತು. ದಕ್ಷಿಣ ಕನ್ನಡ ಜಿಲ್ಲೆಯ ಒಂಭತ್ತು, ಉಡುಪಿ ಜಿಲ್ಲೆಯ ಮೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂರು ಕಡೆ ಸೇರಿದಂತೆ 15ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆದಿತ್ತು.
ಅಡೋರೇಷನ್ ಮೊನಾಸ್ಟರಿಗೂ ನುಗ್ಗಿದ ಗುಂಪು
ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಆವರಣದಲ್ಲಿದ್ದ ಶತಮಾನಗಳ ಇತಿಹಾಸ ಹೊಂದಿರುವ ‘ಅಡೋರೇಷನ್ ಮೊನಾಸ್ಟರಿ’ಯ ಭಗಿನಿಯರ ಪ್ರಾರ್ಥನಾಲಯದ ಮೇಲೂ ದಾಳಿ ನಡೆಯಿತು.
ಬೆಳಿಗ್ಗೆ ಸುಮಾರು 10 ಗಂಟೆಗೆ 10ರಿಂದ 15 ಜನರ ಗುಂಪು ಆಶ್ರಮದೊಳಗೆ ನುಗ್ಗಿತು. ಪ್ರಪಂಚದ ಸಂಪರ್ಕದಿಂದ ದೂರವಿದ್ದು, ಬಾಗಿಲು ಮುಚ್ಚಿದ ಆವರಣದಲ್ಲಿ ಧಾರ್ಮಿಕ ವ್ರತದೊಂದಿಗೆ ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಿದ್ದ ಸುಮಾರು 10 ಭಗಿನಿಯರು ಅಲ್ಲಿ ಇದ್ದರು.
ದಾಳಿಕೋರರು ಆಶ್ರಮದಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದರು. ಏಸುಕ್ರಿಸ್ತನ ಮೂರ್ತಿಯನ್ನು ಮುರಿದರು. ಬಲಿಪೀಠ, ಧಾರ್ಮಿಕ ಸಂಕೇತಗಳು ಹಾಗೂ ಪೀಠೋಪಕರಣಗಳನ್ನು ಹಾನಿಗೊಳಿಸಿದರು ಎಂದು ಹೇಳಲಾಗಿದೆ.
ಇದರ ಬೆನ್ನಲ್ಲೇ ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ಚರ್ಚ್, ಪೆರ್ಮನ್ನೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್, ಕೋಡಿಕಲ್‌ನ ಸಿಎಸ್‌ಐ ಚರ್ಚ್, ಜೆಪ್ಪುವಿನ ಸೇಂಟ್ ಜೋಸೆಫ್ ಚರ್ಚ್, ತೊಕ್ಕೊಟ್ಟು ಮತ್ತು ವಾಮಂಜೂರಿನ ಪ್ರಾರ್ಥನಾ ಮಂದಿರಗಳ ಮೇಲೂ ಸರಣಿ ದಾಳಿಗಳು ನಡೆದವು.
ಉಡುಪಿ ಜಿಲ್ಲೆಯ ಶಿರ್ವ, ಮೂಡುಬೆಳ್ಳೆ, ಕಾರ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಚರ್ಚ್ ಗಳಿಗೂ ದುಷ್ಕರ್ಮಿಗಳು ನುಗ್ಗಿದರು. ಪವಿತ್ರ ಬೈಬಲ್ ಹಾಗೂ ಧಾರ್ಮಿಕ ಗ್ರಂಥಗಳ ಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಲಾಯಿತು. ಪೀಠೋಪಕರಣಗಳು, ಸಂಗೀತ ವಾದ್ಯಗಳು ಮತ್ತು ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಲಾಯಿತು.
ಈ ದಾಳಿಗಳಿಂದ ಕ್ರೈಸ್ತ ಸಮುದಾಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ.
ಅಡೋರೇಷನ್ ಮೊನಾಸ್ಟರಿಯಲ್ಲಿ ದಾಳಿಕೋರರು ತೆರಳಿದ ಬಳಿಕ ಭಗಿನಿಯರು ಪೊಲೀಸರಿಗೆ ಕರೆ ಮಾಡಿ ರಕ್ಷಣೆ ಕೋರಿದರು. ಆದರೆ ಪೊಲೀಸರು ದಾಳಿಕೋರರ ವಿರುದ್ಧ ತನಿಖೆ ನಡೆಸುವ ಬದಲು ಭಗಿನಿಯರನ್ನೇ ವಿಚಾರಣೆ ನಡೆಸಿದರು ಎಂಬ ಆರೋಪ ಕೇಳಿಬಂತು.
‘ಈ ಮೊನಾಸ್ಟರಿ ನಡೆಸಲು ನಿಮ್ಮ ಬಳಿ ಲೈಸೆನ್ಸ್ ಇದೆಯೇ? ನಿಮ್ಮ ಸಂಸ್ಥೆಗೆ ವಿದೇಶಿ ಸಂಸ್ಥೆಗಳೊಂದಿಗೆ ಸಂಪರ್ಕವಿದೆಯೇ? ನಿಮಗೆ ವಿದೇಶದಿಂದ ಹಣ ಬರುತ್ತಿದೆಯೇ?’ ಎಂದು ಪೊಲೀಸರು ಪ್ರಶ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಸಂತ್ರಸ್ತರಿಗೆ ಸಾಂತ್ವನ ಹೇಳುವ ಬದಲು ಜಿಲ್ಲಾಡಳಿತ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು.
ಈ ಘಟನೆ ಕೇವಲ ಧಾರ್ಮಿಕ ಕಟ್ಟಡಗಳ ಮೇಲಿನ ದಾಳಿಯಲ್ಲ. ಸಂವಿಧಾನದ 25ನೇ ವಿಧಿ ನೀಡಿರುವ ಧಾರ್ಮಿಕ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕ್ರೈಸ್ತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಕ್ರೈಸ್ತ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಜೆರೋಮ್ ಡಿಸೋಜ ಪಾನೀರ್, 2008 ಇಡೀ ಕ್ರೈಸ್ತ ಸಮುದಾಯಕ್ಕೆ ಕರಾಳ ದಿನವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
‘ಮುಂಜಾನೆಯೇ ವಿವಿಧ ಕಡೆಗಳಲ್ಲಿ ಬಜರಂಗದಳದ ಕಾರ್ಯಕರ್ತರು ಕ್ರೈಸ್ತರ ಮೇಲೆ ಏಕಾಏಕಿ ದಾಳಿ ನಡೆಸಿದರು. ಸುದ್ದಿ ತಿಳಿದ ತಕ್ಷಣ ಇಡೀ ಸಮುದಾಯ ಬೆಚ್ಚಿಬಿತ್ತು. ಎಲ್ಲರೂ ಆತಂಕ ಹಾಗೂ ಗಾಬರಿಗೆ ಒಳಗಾದರು. ಇದು ನಮ್ಮ ಸಮುದಾಯಕ್ಕೆ ಎಂದಿಗೂ ಮರೆಯಲಾಗದ ಕರಾಳ ದಿನ’ ಎಂದು ಅವರು 'ವಾರ್ತಾ ಭಾರತಿ'ಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
‘ನಾವೇ ಮಾಡಿದ್ದು’ ಎಂದಿದ್ದ ಮಹೇಂದ್ರ ಕುಮಾರ್
ದಾಳಿಗಳ ಬಳಿಕ ಮಾಧ್ಯಮಗಳ ಮುಂದೆ ಬಂದಿದ್ದ ಅಂದಿನ ಬಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್, ‘ಈ ದಾಳಿಗಳನ್ನು ನಾವೇ ಮಾಡಿದ್ದು, ಇದರ ಸಂಪೂರ್ಣ ಹೊಣೆಯನ್ನು ನಾವೇ ಹೊರುತ್ತೇವೆ’ ಎಂದು ಹೇಳಿಕೊಂಡಿದ್ದರು.
‘ಅಕ್ರಮ ಮತಾಂತರ ನಡೆಯುತ್ತಿದೆ. ಅದಕ್ಕೆ ತಕ್ಕ ಶಾಸ್ತಿ ಮಾಡಿದ್ದೇವೆ’ ಎಂಬುದು ಅವರು ನೀಡಿದ್ದ ಕಾರಣವಾಗಿತ್ತು.
ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಅವರ ಪ್ರಕಾರ, ಮಂಗಳೂರು, ಚಿಕ್ಕಮಗಳೂರು, ಹಾಸನ ಸೇರಿದಂತೆ ಬೆಂಗಳೂರಿನವರೆಗೂ ಮುಂಜಾನೆ 7ರಿಂದ 8 ಗಂಟೆಯ ಸುಮಾರಿಗೆ ಬಜರಂಗದಳದ ನೇತೃತ್ವದಲ್ಲಿ ಚರ್ಚುಗಳ ಮೇಲೆ ವ್ಯವಸ್ಥಿತ ದಾಳಿ ನಡೆದಿತ್ತು.
ದಾಳಿಯ ನೇತೃತ್ವ ವಹಿಸಿದ್ದ ಮಹೇಂದ್ರ ಕುಮಾರ್ ಮಾಧ್ಯಮಗಳ ಮುಂದೆ ಬಂದು ‘ನಾವೇ ದಾಳಿ ಮಾಡಿದ್ದೇವೆ, ನಾವೇ ಇದರ ಸಂಪೂರ್ಣ ಹೊಣೆ ಹೊರುತ್ತೇವೆ. ಚರ್ಚುಗಳಲ್ಲಿ ಮತಾಂತರ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದರಿಂದಲೇ ದಾಳಿ ಮಾಡಿದ್ದೇವೆ’ ಎಂದು ಒಪ್ಪಿಕೊಂಡಿದ್ದರು ಎಂದು ಐವನ್ ಡಿಸೋಜ ತಿಳಿಸಿದ್ದಾರೆ.
ಪ್ರತಿಭಟಿಸಿದವರ ಮೇಲೂ ಲಾಠಿ
ದಾಳಿಗಳನ್ನು ಖಂಡಿಸಿ ಬೀದಿಗಿಳಿದ ಕ್ರೈಸ್ತ ಸಮುದಾಯದ ಯುವಕರು, ಭಗಿನಿಯರು ಹಾಗೂ ಪಾದ್ರಿಗಳ ಮೇಲೂ ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂಬ ಆರೋಪ ಕೇಳಿಬಂತು.
ಕಣ್ಣೀರು ಹಾಕುತ್ತಿದ್ದ ಕ್ರೈಸ್ತ ಭಗಿನಿಯರನ್ನು ರಸ್ತೆಯಲ್ಲಿ ಎಳೆದಾಡಲಾಯಿತು. ದಾಳಿ ನಡೆಸಿದವರನ್ನು ಬಂಧಿಸುವ ಬದಲು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಿದ 150ಕ್ಕೂ ಹೆಚ್ಚು ಕ್ರೈಸ್ತ ಯುವಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು ಎಂದು ಸಮುದಾಯದ ಮುಖಂಡರು ಆರೋಪಿಸಿದರು.
ಪೊಲೀಸರ ವರ್ತನೆ ಕುರಿತು ಆಲ್ವಿನ್ ಜೆರೋಮ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ನಿರ್ವಹಿಸಬೇಕಿದ್ದ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ವರ್ತಿಸುವ ಬದಲು ಬಿಜೆಪಿ ಕಾರ್ಯಕರ್ತರು ಮತ್ತು ಗೂಂಡಾಗಳಂತೆ ವರ್ತಿಸಿ ನಿರಪರಾಧಿ ಭಗಿನಿಯರ ಮೇಲೆ ದೌರ್ಜನ್ಯ ಎಸಗಿದರು ಎಂದು ಅವರು ಆರೋಪಿಸಿದ್ದಾರೆ.
ಇನ್ಸ್‌ಪೆಕ್ಟರ್ ಗಣಪತಿಯವರನ್ನು ಉಲ್ಲೇಖಿಸಿದ ಅವರು, ಅಂತಿಮ ದಿನಗಳಲ್ಲಿ ಅವರು ಮಾನಸಿಕ ಅಸ್ವಸ್ಥರಾಗಿ ದಾರುಣವಾಗಿ ಮೃತಪಟ್ಟರು ಎಂದು ಹೇಳಿದ್ದಾರೆ.
ಯಡಿಯೂರಪ್ಪ ಸರ್ಕಾರದ ವಿರುದ್ಧ ಆಕ್ರೋಶ
ಆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಡಾ. ವಿ.ಎಸ್. ಆಚಾರ್ಯ ಗೃಹ ಸಚಿವರಾಗಿದ್ದರು.
ಸರ್ಕಾರ ಈ ಘಟನೆಯನ್ನು ಲಘುವಾಗಿ ಪರಿಗಣಿಸಿತ್ತು ಎಂಬ ಆರೋಪಗಳು ಕೇಳಿಬಂದವು. ‘ಅಲ್ಲಿ ಏನು ದೊಡ್ಡ ಅನಾಹುತ ನಡೆದಿದೆ? ಯಾರಾದರೂ ಸತ್ತಿದ್ದಾರಾ? ಸೆಕ್ಷನ್ 307 ಹಾಕುವಂತಹ ಕೊಲೆ ಯತ್ನವೇನೂ ಆಗಿಲ್ಲವಲ್ಲ’ ಎಂಬ ಹೇಳಿಕೆ ಸರ್ಕಾರದ ಉನ್ನತ ಸ್ಥಾನದಲ್ಲಿದ್ದವರಿಂದ ಬಂದಿತ್ತು ಎಂದು ಸಮುದಾಯದ ಮುಖಂಡರು ನೆನಪಿಸಿಕೊಂಡಿದ್ದಾರೆ.
ಐವನ್ ಡಿಸೋಜ ಅವರ ಪ್ರಕಾರ, ದಾಳಿ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿದಾಗ ಸುಮಾರು 150 ಕ್ರೈಸ್ತ ಯುವಕರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಆದರೆ ಬಜರಂಗದಳದವರನ್ನು ಬೆರಳೆಣಿಕೆಯಷ್ಟು ಮಾತ್ರ ವಶಕ್ಕೆ ಪಡೆಯಲಾಯಿತು.
ಗೃಹ ಸಚಿವ ಆಚಾರ್ಯ ಅವರು ‘ಏನಾಗಿದೆ ಅಷ್ಟು ದೊಡ್ಡ ಅಪರಾಧ? ಅಲ್ಲಿ ಕೊಲೆ ಯತ್ನವೇನೂ ಆಗಿಲ್ಲ, ಯಾರ ಜೀವವೂ ಹೋಗಿಲ್ಲ’ ಎಂದು ಹೇಳಿಕೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
‘ಜೀವ ಹೋದರೆ ಅಥವಾ ಹಲ್ಲೆಗೊಳಗಾದರೆ ಕಾಲಕ್ರಮೇಣ ಮರೆಯಬಹುದು. ಆದರೆ ನಾವು ಆರಾಧಿಸುವ ಏಸುವಿನ ಮೂರ್ತಿಯ ಕೈಕಾಲುಗಳನ್ನು ಮುರಿದು, ಪವಿತ್ರ ಚರ್ಚುಗಳ ಮೇಲೆ ದಾಳಿ ನಡೆಸಿ ನಂಬಿಕೆಗೆ ಹೊಡೆದ ಈ ಘೋರ ಅಪರಾಧವನ್ನು ಯಾವ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಸಮುದಾಯ ಕಣ್ಣೀರಿಟ್ಟಿತ್ತು’ ಎಂದು ಐವನ್ ಡಿಸೋಜ ಹೇಳಿದ್ದಾರೆ.
ಸೋಮಶೇಖರ್ ಆಯೋಗ
ಸಾರ್ವಜನಿಕ ಆಕ್ರೋಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಆಕ್ಷೇಪಗಳ ಹಿನ್ನೆಲೆಯಲ್ಲಿ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ನೇತೃತ್ವದಲ್ಲಿ ಏಕವ್ಯಕ್ತಿ ವಿಚಾರಣಾ ಆಯೋಗ ರಚಿಸಿತು.
ಆಯೋಗ ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿತು. ಆರಂಭಿಕ ಮಧ್ಯಂತರ ವರದಿಯಲ್ಲಿ ಸಂಘ ಪರಿವಾರ ಮತ್ತು ಸರ್ಕಾರದ ಲೋಪಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದ ಆಯೋಗ, 2011ರಲ್ಲಿ ಸಲ್ಲಿಸಿದ ಅಂತಿಮ ವರದಿಯಲ್ಲಿ ಭಿನ್ನ ನಿಲುವು ತಳೆದಿತು ಎಂಬ ಟೀಕೆ ವ್ಯಕ್ತವಾಯಿತು.
ಆಡಳಿತಾರೂಢ ಸರ್ಕಾರ ಮತ್ತು ಸಂಘ ಪರಿವಾರಕ್ಕೆ ಆಯೋಗ ಕ್ಲೀನ್‌ಚಿಟ್ ನೀಡಿತು.
ಚರ್ಚುಗಳ ಕಿಟಕಿಗಳಿಗೆ ಕಲ್ಲು ಬೀಳದಂತೆ ಸ್ಟೀಲ್ ಮೆಶ್ ಅಳವಡಿಸಬೇಕು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಮೂರ್ತಿಗಳಿಗೆ ರಕ್ಷಣೆ ಒದಗಿಸಬೇಕು ಎಂಬ ಸಲಹೆಗಳನ್ನು ಆಯೋಗ ನೀಡಿತ್ತು ಎಂದು ಟೀಕಿಸಲಾಯಿತು.
ಐವನ್ ಡಿಸೋಜ ಅವರ ಪ್ರಕಾರ, ‘ಚರ್ಚುಗಳ ಕಿಟಕಿ ಗಾಜುಗಳು ಒಡೆಯದಂತೆ ಹೊರಗಡೆ ಸ್ಟೀಲ್ ಫ್ರೇಮ್ ಅಳವಡಿಸಿ, ರಸ್ತೆ ಬದಿಯ ಮೂರ್ತಿಗಳಿಗೆ ರಕ್ಷಣೆ ಒದಗಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿ ನಿಮ್ಮ ಚರ್ಚುಗಳನ್ನು ನೀವೇ ರಕ್ಷಿಸಿಕೊಳ್ಳಿ’ ಎಂದು ಆಯೋಗ ಹೇಳಿತೇ ವಿನಃ, ಕೃತ್ಯದಲ್ಲಿ ನೇರವಾಗಿ ಭಾಗಿಯಾದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಲಿಲ್ಲ.
ಚರ್ಚುಗಳ ಮೇಲೆ ಕಲ್ಲು ತೂರಿದ ಬಜರಂಗದಳದ ಕಾರ್ಯಕರ್ತರು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಹಂತಹಂತವಾಗಿ ಖುಲಾಸೆಗೊಂಡರು.
ದಾಳಿಯ ಹೊಣೆ ಹೊತ್ತಿದ್ದ ಮಹೇಂದ್ರ ಕುಮಾರ್ ವಿರುದ್ಧ ದೇಶದ್ರೋಹ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಸುಮಾರು ಒಂದು ದಶಕದ ವಿಚಾರಣೆಯ ಬಳಿಕ 2019ರಲ್ಲಿ ಮಂಗಳೂರು ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣಗಳು ಬಿದ್ದುಹೋದವು.
ಇನ್ನೊಂದೆಡೆ, ನ್ಯಾಯಕ್ಕಾಗಿ ಬೀದಿಗಿಳಿದು ಪೊಲೀಸರ ಲಾಠಿ ಏಟು ಎದುರಿಸಿದ್ದ 338ಕ್ಕೂ ಹೆಚ್ಚು ಕ್ರೈಸ್ತ ಯುವಕರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನು ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ 2011ರಲ್ಲಿ ಸರ್ಕಾರ ಹಿಂಪಡೆಯಬೇಕಾಯಿತು.
ಸಂಘ ಪರಿವಾರಕ್ಕೆ ಕ್ಲೀನ್‌ಚಿಟ್ ನೀಡಿದ್ದ ಸೋಮಶೇಖರ್ ಆಯೋಗದ ವಿವಾದಾತ್ಮಕ ವರದಿಯನ್ನು 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ತಿರಸ್ಕರಿಸಿತು.
ಆದರೆ ಅಷ್ಟರಲ್ಲಾಗಲೇ ವರ್ಷಗಳು ಕಳೆದಿದ್ದವು. ಸಾರ್ವಜನಿಕವಾಗಿ ನಡೆದ ಈ ಘಟನೆಯಲ್ಲಿ ಕಾನೂನಿನ ಪ್ರಕಾರ ಯಾರೊಬ್ಬರೂ ಅಂತಿಮವಾಗಿ ತಪ್ಪಿತಸ್ಥರಾಗಿ ದಾಖಲಾಗಲಿಲ್ಲ ಎಂಬುದು ಸಮುದಾಯದ ನೋವಾಗಿ ಉಳಿಯಿತು.
ಬಜರಂಗದಳ ತೊರೆದು ಕ್ಷಮೆಯಾಚಿಸಿದ ಮಹೇಂದ್ರ ಕುಮಾರ್
ಈ ಪ್ರಕರಣದ ಗಮನಾರ್ಹ ತಿರುವು ಮಹೇಂದ್ರ ಕುಮಾರ್ ಅವರ ಜೀವನದಲ್ಲಿ ಕಂಡುಬಂತು.
ದಾಳಿಗಳ ಹೊಣೆ ಹೊತ್ತಿದ್ದ ಮಹೇಂದ್ರ ಕುಮಾರ್ ವಿರುದ್ಧ ದೇಶದ್ರೋಹ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಸುಮಾರು 45 ದಿನಗಳ ಜೈಲುವಾಸದ ಅವಧಿಯಲ್ಲಿ ಅವರ ಚಿಂತನೆ ಬದಲಾಯಿತು ಎಂದು ಹೇಳಲಾಗಿದೆ.
ಸಂಘ ಪರಿವಾರದ ಹಿರಿಯ ನಾಯಕರು ತಮ್ಮನ್ನು ಅಧಿಕಾರದ ದಾಳವಾಗಿ ಬಳಸಿಕೊಂಡು ಬಳಿಕ ಕೈಬಿಟ್ಟರು ಎಂಬ ಅರಿವು ಅವರಿಗೆ ಮೂಡಿತು ಎಂದು ಹೇಳಲಾಗಿದೆ.
ಜೈಲಿನಿಂದ ಹೊರಬಂದ ಬಳಿಕ ಅವರು ಬಜರಂಗದಳಕ್ಕೆ ಶಾಶ್ವತವಾಗಿ ವಿದಾಯ ಹೇಳಿದರು. ಸಂಘಟನೆಯನ್ನು ತೊರೆಯುವುದರ ಜೊತೆಗೆ ವಿವಿಧ ವೇದಿಕೆಗಳಲ್ಲಿ ತಾವು ಮಾಡಿದ ತಪ್ಪಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದರು.
‘ನನ್ನನ್ನು ಅಧಿಕಾರದ ಹಪಾಹಪಿಗೆ ಬಳಸಿಕೊಂಡರು. ಧರ್ಮದ ಹೆಸರಿನಲ್ಲಿ ಬಡ ಯುವಕರನ್ನು ಗೂಂಡಾಗಳನ್ನಾಗಿ ಮಾಡಿದರು. ಕ್ರೈಸ್ತರ ಮೇಲೆ ದಾಳಿ ಮಾಡಿದ್ದು ನನ್ನ ಬದುಕಿನ ಅತಿ ದೊಡ್ಡ ತಪ್ಪು’ ಎಂದು ಅವರು ಗದ್ಗದಿತ ಕಂಠದಲ್ಲಿ, ತುಂಬಿದ ಕಣ್ಣುಗಳಿಂದ ಕ್ಷಮೆಯಾಚಿಸಿದ್ದರು ಎಂದು ಹೇಳಲಾಗಿದೆ.
ಬಜರಂಗದಳದ ಮುಖಂಡರಾಗಿದ್ದ ಅವರು ನಂತರ ಸಂವಿಧಾನ, ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯ ಪರವಾಗಿ ಮಾತನಾಡುವ ಪ್ರಮುಖ ಧ್ವನಿಯಾಗಿ ಬದಲಾದರು.
ಆಲ್ವಿನ್ ಜೆರೋಮ್ ಡಿಸೋಜ ಅವರ ಪ್ರಕಾರ, ದಾಳಿಯಲ್ಲಿ ಭಾಗಿಯಾಗಿದ್ದ ಮಹೇಂದ್ರ ಕುಮಾರ್ ಬಳಿಕ ತೀವ್ರವಾಗಿ ಪಶ್ಚಾತ್ತಾಪಪಟ್ಟಿದ್ದರು. ಸಂಘಟನೆಯನ್ನು ತೊರೆದ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ್ದ ಅವರು, ‘ನಾನು ಬಜರಂಗದಳದಲ್ಲಿದ್ದು ಇಂತಹ ಕೃತ್ಯ ಎಸಗಿದ್ದಕ್ಕೆ ದೇವರು ನನಗೆ ತಕ್ಕ ಶಿಕ್ಷೆಯನ್ನು ಕೊಟ್ಟಿದ್ದಾರೆ’ ಎಂದು ಸ್ವತಃ ಒಪ್ಪಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
2019 ಮತ್ತು 2020ರಲ್ಲಿ ದೇಶಾದ್ಯಂತ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳು ನಡೆದ ಸಂದರ್ಭದಲ್ಲಿ ಮಹೇಂದ್ರ ಕುಮಾರ್ ಮಂಗಳೂರು ಮತ್ತು ಬೆಂಗಳೂರಿನ ಬೃಹತ್ ವೇದಿಕೆಗಳಲ್ಲಿ ಕೇಂದ್ರ ಸರ್ಕಾರದ ಒಡೆದು ಆಳುವ ನೀತಿಯ ವಿರುದ್ಧ ಮಾತನಾಡಿದರು.
‘ನನ್ನ ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ನನಗೆ ಈ ಸಂವಿಧಾನವೇ ದಾರಿ ತೋರಿಸಿದೆ. ಈ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯಲು ಬಿಡುವುದಿಲ್ಲ’ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದರು.
ಹಿಂದೆ ದ್ವೇಷದ ಪ್ರತೀಕವಾಗಿ ಗುರುತಿಸಿಕೊಂಡಿದ್ದ ಕರಾವಳಿಯಲ್ಲೇ ಅವರು ನಂತರ ಸೌಹಾರ್ದತೆಯ ಪರವಾಗಿ ನಿಂತ ವ್ಯಕ್ತಿಯಾಗಿ ಸ್ವೀಕಾರ ಪಡೆದರು. 2020ರಲ್ಲಿ ಹೃದಯಾಘಾತದಿಂದ ಅವರು ದಿಢೀರ್ ನಿಧನರಾದಾಗ ಜಾತಿ-ಧರ್ಮದ ಭೇದವಿಲ್ಲದೆ ಸಾವಿರಾರು ಜನರು ಸಂತಾಪ ಸೂಚಿಸಿದರು.
ದ್ವೇಷದ ಹಾದಿ ಹಿಡಿದ ವ್ಯಕ್ತಿಯೊಬ್ಬರು ಪಶ್ಚಾತ್ತಾಪದ ಮೂಲಕ ಮನುಷ್ಯತ್ವದ ಹಾದಿಗೆ ಮರಳಿದ ಅಪರೂಪದ ನಿದರ್ಶನವಾಗಿ ಅವರ ಬದುಕಿನ ಬದಲಾವಣೆಯನ್ನು ಕಾಣಬಹುದು ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ.
2013ರ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ
2008ರ ಚರ್ಚ್ ದಾಳಿಗಳ ರಾಜಕೀಯ ಪರಿಣಾಮವೂ ಕರಾವಳಿಯಲ್ಲಿ ಕಂಡುಬಂತು.
2013ರ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಸೋತಿತು. ಕರಾವಳಿ ಕರ್ನಾಟಕದ ಮತದಾರರು ಆಡಳಿತದ ವಿರುದ್ಧ ತಮ್ಮ ಅಸಮಾಧಾನವನ್ನು ಚುನಾವಣೆಯ ಮೂಲಕ ವ್ಯಕ್ತಪಡಿಸಿದರು ಎಂದು ಕ್ರೈಸ್ತ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟರು.
ಆಲ್ವಿನ್ ಜೆರೋಮ್ ಡಿಸೋಜ ಅವರ ಪ್ರಕಾರ, ಆ ಗಲಾಟೆಯ ಪ್ರತಿಫಲವಾಗಿ ಬಿಜೆಪಿ ರಾಜ್ಯದಲ್ಲಿ ನೆಲಕಚ್ಚಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಏಳು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿತು.
‘ಇದು ನಮ್ಮ ರಾಜಕೀಯ ಶಕ್ತಿಯಿಂದಾದ ಫಲವಲ್ಲ. ನೊಂದ ಸಮುದಾಯ ಕಣ್ಣೀರಿಟ್ಟು ಮಾಡಿದ ಪ್ರಾರ್ಥನೆಯ ಫಲ. ನಮ್ಮಲ್ಲಿ ತೋಳ್ಬಲ ಬಳಸಿ ಗಲಾಟೆ ಮಾಡುವ ಶಕ್ತಿಯೂ ಇಲ್ಲ, ಇಚ್ಛೆಯೂ ಇಲ್ಲ. ನಾವು ಶಾಂತಿಪ್ರಿಯರು. ಅದನ್ನೇ ಬಂಡವಾಳ ಮಾಡಿಕೊಂಡು ಸಂಘ ಪರಿವಾರ ನಮ್ಮ ಮೇಲೆ ದಾಳಿ ನಡೆಸಿತ್ತು. ಆದರೆ ಅದರಲ್ಲಿ ಭಾಗಿಯಾದ ರಾಜಕೀಯ ವ್ಯಕ್ತಿಗಳಿಗೆ ತಕ್ಕ ಶಾಸ್ತಿಯಾಗಿದ್ದು ನಮಗೆ ನೆಮ್ಮದಿ ತಂದಿದೆ’ ಎಂದು ಅವರು ಹೇಳಿದ್ದಾರೆ.
ಚುನಾವಣೆಗಳು ಸಮೀಪಿಸಿದಾಗಲೆಲ್ಲಾ ‘ಮತಾಂತರ’ದ ಹಳೆಯ ಆರೋಪವನ್ನು ಮತ್ತೆ ಮುನ್ನೆಲೆಗೆ ತರುವುದು ಸಂಘ ಪರಿವಾರದ ಚಾಳಿಯಾಗಿದೆ ಎಂಬುದು ಕ್ರೈಸ್ತ ಸಮುದಾಯದ ಆರೋಪ.
ಕ್ರೈಸ್ತರು ನಿಜವಾಗಿಯೂ ಬಲವಂತದ ಮತಾಂತರ ನಡೆಸುತ್ತಿದ್ದರೆ, ದೇಶದ ಜನಸಂಖ್ಯೆಯಲ್ಲಿ ಅವರ ಪ್ರಮಾಣ ದಶಕಗಳಿಂದ ಶೇಕಡಾ ಎರಡರಿಂದ ಮೂರರಷ್ಟೇ ಇರುವುದೇಕೆ ಎಂಬ ಪ್ರಶ್ನೆಯನ್ನು ಸಮುದಾಯದ ಮುಖಂಡರು ಮುಂದಿಟ್ಟಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಕಠಿಣ ಮತಾಂತರ ವಿರೋಧಿ ಕಾಯ್ದೆ ಜಾರಿಗೆ ತರಲಾಯಿತು. ಕಾನೂನಿನಲ್ಲಿ ನಿಖರ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಪ್ರಾರ್ಥನಾ ಕೂಟಗಳನ್ನು ಅಕ್ರಮವೆಂದು ಬಿಂಬಿಸಿ ಹಳ್ಳಿಹಳ್ಳಿಗಳಲ್ಲಿ ಸಣ್ಣಪುಟ್ಟ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸುವುದು ಮುಂದುವರಿಯಿತು ಎಂದು ಕ್ರೈಸ್ತ ಮುಖಂಡರು ಆರೋಪಿಸಿದ್ದಾರೆ.
ಆಲ್ವಿನ್ ಜೆರೋಮ್ ಡಿಸೋಜ ಅವರ ಪ್ರಕಾರ, ‘ಕ್ರೈಸ್ತರು ಯಾರಿಗೂ ತೊಂದರೆ ಕೊಡುವುದಿಲ್ಲ, ಯಾರ ಮೇಲೂ ದಬ್ಬಾಳಿಕೆ ಮಾಡುವುದಿಲ್ಲ. ಆದರೆ ಚುನಾವಣೆಗಳು ಬಂದಾಗಲೆಲ್ಲಾ ನಮ್ಮ ಮೇಲೆ ಮತಾಂತರದ ಸುಳ್ಳು ಗೂಬೆ ಕೂರಿಸಲಾಗುತ್ತದೆ. ಒಂದು ವೇಳೆ ಕ್ರೈಸ್ತರು ನಿಜವಾಗಿಯೂ ಬಲವಂತದ ಮತಾಂತರ ಮಾಡುತ್ತಿದ್ದರೆ ನಮ್ಮ ಜನಸಂಖ್ಯೆ ಶೇಕಡಾ ಮೂರರಲ್ಲೇ ಉಳಿಯುತ್ತಿರಲಿಲ್ಲ. ಇವತ್ತಿಗೆ ಶೇಕಡಾ 25ಕ್ಕೆ ತಲುಪಬೇಕಿತ್ತು.’
ಚುನಾವಣೆಯಲ್ಲಿ ಸೋಲುವ ಭೀತಿ ಎದುರಾದಾಗಲೆಲ್ಲಾ ಕ್ರೈಸ್ತರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಮತ್ತು ಸಮುದಾಯವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಮತಾಂತರ ವಿರೋಧಿ ಕಾನೂನಿನ ಕುರಿತು ಮಾತನಾಡಿದ ಐವನ್ ಡಿಸೋಜ, ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಮತಾಂತರ ವಿರೋಧಿ ಮಸೂದೆ ತಂದಾಗ ವಿಧಾನಸಭೆಯಲ್ಲಿ ‘ಈ ಮಸೂದೆ ತರಲು ಕಾರಣವೇನು? ಮತಾಂತರಕ್ಕೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳು ದಾಖಲಾಗಿವೆ?’ ಎಂದು ಪ್ರಶ್ನಿಸಿದ್ದಾಗಿ ತಿಳಿಸಿದ್ದಾರೆ.
ಸರ್ಕಾರದ ಬಳಿ ಯಾವುದೇ ಅಧಿಕೃತ ಪ್ರಕರಣಗಳಿರಲಿಲ್ಲ ಮತ್ತು ಈ ಪ್ರಶ್ನೆಗೆ ಉತ್ತರ ಕೂಡ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಕೇವಲ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು, ಚರ್ಚುಗಳಲ್ಲಿ ಬೋಧನೆ ಮಾಡುವವರನ್ನು ಭಯದ ನೆರಳಿನಲ್ಲಿ ಇರಿಸುವ ದುರುದ್ದೇಶದಿಂದಲೇ ಕಾಯ್ದೆ ಜಾರಿಗೆ ತರಲಾಯಿತು ಎಂಬುದು ಅವರ ಆರೋಪ.
ಮಂಗಳೂರಿನ 2008ರ ಚರ್ಚ್ ದಾಳಿ ಕೇವಲ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಮೇಲಿನ ಹಲ್ಲೆಯಾಗಿರಲಿಲ್ಲ; ಅಧಿಕಾರದ ಲಾಲಸೆಗೆ ಸಾಮಾಜಿಕ ಬಾಂಧವ್ಯವನ್ನು ಹೇಗೆ ಬಲಿಕೊಡಬಹುದು ಎಂಬುದಕ್ಕೆ ಅದು ಕರಾಳ ನಿದರ್ಶನ ಎಂದು ಕ್ರೈಸ್ತ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಕಲ್ಲು ತೂರಿದವರು, ಅದಕ್ಕೆ ಕುಮ್ಮಕ್ಕು ನೀಡಿದ ರಾಜಕೀಯ ನಾಯಕರು, ದಾಳಿಯ ಹೊಣೆ ಹೊತ್ತು ಬಳಿಕ ಪಶ್ಚಾತ್ತಾಪದ ಹಾದಿ ಹಿಡಿದ ಮಹೇಂದ್ರ ಕುಮಾರ್ ಹಾಗೂ ಘಟನೆಗಳನ್ನು ಸಹಿಸಿಕೊಂಡು ಸಂವಿಧಾನದ ಮೇಲೆ ನಂಬಿಕೆ ಉಳಿಸಿಕೊಂಡ ಕ್ರೈಸ್ತ ಸಮುದಾಯ—ಇವೆಲ್ಲವೂ ಆ ಕಾಲಘಟ್ಟದ ಇತಿಹಾಸದ ಭಾಗಗಳಾಗಿವೆ.
ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಸಮಾಜದಲ್ಲಿ ಬಿತ್ತಿದ ದ್ವೇಷದ ಪರಿಣಾಮಗಳು ಮಾಯಲು ದಶಕಗಳೇ ಬೇಕಾಗುತ್ತವೆ. ಪ್ರತಿಯೊಬ್ಬ ನಾಗರಿಕನೂ ಭಯವಿಲ್ಲದೆ ದೇವರಿಗೆ ಕೈಮುಗಿಯುವ ಹಕ್ಕನ್ನು ಕಾಪಾಡುವುದೇ ಪ್ರಜಾಪ್ರಭುತ್ವದ ಮೂಲ ಆಶಯ ಎಂಬುದನ್ನು ಈ ಘಟನೆ ನೆನಪಿಸುತ್ತದೆ.
ಐವನ್ ಡಿಸೋಜ ಅವರ ಪ್ರಕಾರ, ಭಾರತದ ಪ್ರತಿಯೊಬ್ಬ ಪ್ರಜೆಗೂ ತಾನು ಇಷ್ಟಪಟ್ಟ ಧರ್ಮವನ್ನು ಸ್ವೀಕರಿಸುವ, ಪಾಲಿಸುವ, ಬೋಧಿಸುವ ಮತ್ತು ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ಸಂವಿಧಾನ ನೀಡಿದೆ.
‘ಸಂವಿಧಾನಬದ್ಧ ಹಕ್ಕುಗಳಿದ್ದರೂ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸಂವಿಧಾನಕ್ಕೆ ವಿರುದ್ಧವಾಗಿ ದೌರ್ಜನ್ಯ ಎಸಗಲಾಗುತ್ತಿದೆ. ಇದು ಇಂದಿಗೂ ಅನೇಕ ಕಡೆಗಳಲ್ಲಿ ಮುಂದುವರಿದಿರುವುದು ಅತ್ಯಂತ ದುರದೃಷ್ಟಕರ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.