US Open ಗೆದ್ದ ಸಂಭ್ರಮ; ಮಧುಮೇಹದ ವಿರುದ್ಧದ ಹೋರಾಟದಲ್ಲಿ ತಾಯಿಯೇ ಶಕ್ತಿ ಎಂದ ಝ್ವರೆವ್
ನಾಲ್ಕು ವರ್ಷ ಪ್ರಾಯದಲ್ಲಿ ‘ಮಧುಮೇಹ’ ಇರುವುದು ಪತ್ತೆ
ಅಲೆಕ್ಸಾಂಡರ್ ಝ್ವೆರವ್ | Photo Credit : AP , PTI
ವಿಜಯದ ನಂತರದ ಭಾಷಣದಲ್ಲಿ ತಮ್ಮ ಟೆನಿಸ್ ಜೀವನದಲ್ಲಿ ತಾಯಿಯೇ ಅತ್ಯಂತ ಮುಖ್ಯ ವ್ಯಕ್ತಿಯೆಂದು ಬಣ್ಣಿಸಿದ ಅಲೆಕ್ಸಾಂಡರ್ ಝ್ವೆರವ್ ಅವರು, ನಾಲ್ಕು ವರ್ಷ ಪ್ರಾಯದಲ್ಲಿ ‘ಮಧುಮೇಹ’ ಇರುವುದು ಪತ್ತೆಯಾದಾಗ ತಾಯಿ ನೀಡಿದ ಬೆಂಬಲ ನೆನಪಿಸಿಕೊಂಡರು. --
ಅಲೆಕ್ಸಾಂಡರ್ ಝ್ವೆರವ್ ಅವರ ಯುಎಸ್ ಓಪನ್ ಗೆಲುವು ಬಹಳ ವರ್ಷಗಳ ನಂತರ ಸಿಕ್ಕ ಗೆಲುವಿಗಿಂತ ಮಿಗಿಲಾದ ಯಶಸ್ಸಾಗಿತ್ತು. ಫೈನಲ್ನಲ್ಲಿ ಬೆನ್ ಶೆಲ್ಟನ್ ಅವರನ್ನು ಸೋಲಿಸಿದ ಕೆಲವೇ ಕ್ಷಣಗಲ್ಲಿ ಈ ಜರ್ಮನ್ ಆಟಗಾರ ತಮ್ಮ ತಾಯಿ ಐರಿನಾ ಅವರಿಗೆ ಭಾವನಾತ್ಮಕ ಗೌರವ ಸಲ್ಲಿಸಿದರು. ಮಧುಮೇಹದ ವಿರುದ್ಧದ ಹೋರಾಟದ ನಡುವೆಯೂ ತಮ್ಮ ಟೆನ್ನಿಸ್ ಕನಸುಗಳನ್ನು ನನಸಾಗಿಸಲು ತಾಯಿ ನೀಡಿದ ಬೆಂಬಲ ಸ್ಮರಿಸಿದರು.
ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಝ್ವೆರವ್ ಅವರು ಶೆಲ್ಟನ್ ಅವರನ್ನು 6-3, 7-6(2), 5-7, 6-2 ಅಂತರದಿಂದ ಸೋಲಿಸಿ, ತಮ್ಮ ಚೊಚ್ಚಲ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ವರ್ಷದ ಎರಡನೇ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡರು. ವಿಜಯದ ನಂತರದ ಭಾಷಣದಲ್ಲಿ ತಮ್ಮ ಟೆನಿಸ್ ಜೀವನದಲ್ಲಿ ತಾಯಿಯೇ ಅತ್ಯಂತ ಮುಖ್ಯ ವ್ಯಕ್ತಿಯೆಂದು ಬಣ್ಣಿಸಿದ ಅವರು, ನಾಲ್ಕು ವರ್ಷ ಪ್ರಾಯದಲ್ಲಿ ‘ಮಧುಮೇಹ’ ಇರುವುದು ಪತ್ತೆಯಾದಾಗ ತಾಯಿ ನೀಡಿದ ಬೆಂಬಲ ನೆನಪಿಸಿಕೊಂಡರು.
“ನನ್ನ ಪಂದ್ಯಗಳನ್ನು ಎಂದಿಗೂ ನೇರವಾಗಿ ವೀಕ್ಷಿಸದೆ ಇದ್ದರೂ ಟೆನಿಸ್ ಜೀವನದಲ್ಲಿ ಮತ್ತು ಒಟ್ಟು ಬದುಕಿನಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿರುವ ಮತ್ತೊಬ್ಬರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ 4 ವರ್ಷದ ಮಗನಿಗೆ ಮಧುಮೇಹವಿದೆ ಎಂದು ತಿಳಿದಾಗ ಮತ್ತು ಮಗುವಿನ ಜೀವನ ಮತ್ತು ಕ್ರೀಡಾ ಚಟುವಟಿಕೆ ಸೀಮಿತವಾಗಿರುತ್ತವೆ ಎಂದು ವೈದ್ಯರು ಹೇಳಿದಾಗ, ಆಸ್ಪತ್ರೆಯಿಂದ ಹೊರಬಂದು “ನನ್ನ ಮಗ ತಾನು ಬಯಸಿದ ಸ್ಥಾನ ತಲುಪಿಯೇ ತೀರುತ್ತಾನೆ” ಎಂದು ಹೇಳಲು ಒಬ್ಬ ಅತ್ಯಂತ ದೃಢಮನಸ್ಸಿನ ತಾಯಿಯ ಅಗತ್ಯವಿರುತ್ತದೆ” ಎಂದು ಅವರು ಹೇಳಿದರು.
ಝ್ವೆರವ್ ಅವರಿಗೆ ನಾಲ್ಕನೇ ವಯಸ್ಸಿನಲ್ಲಿ ‘ಟೈಪ್ 1’ ಮಧುಮೇಹ ಇರುವುದು ಪತ್ತೆಯಾಯಿತು. 2022ರಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಗುವವರೆಗೂ ಅವರು ತಮ್ಮ ಆರೋಗ್ಯ ಸ್ಥಿತಿ ಗೌಪ್ಯವಾಗಿಟ್ಟಿದ್ದರು. ತರುವಾಯ ಅಲೆಕ್ಸಾಂಡರ್ ಝ್ವೆರೆವ್ ಫೌಂಡೇಶನ್ ಸ್ಥಾಪಿಸಿದ್ದರು. ಈ ಫೌಂಡೇಶನ್ ಮಧುಮೇಹ ಪೀಡಿತ ಮಕ್ಕಳಿಗೆ ಬೆಂಬಲ ನೀಡುವ ಜೊತೆಗೆ ಇನ್ಸುಲಿನ್ ಮತ್ತು ಅಗತ್ಯ ಔಷಧಿ ಲಭ್ಯತೆಯನ್ನು ಸುಧಾರಿಸುವ ಗುರಿ ಹೊಂದಿದೆ.
ಮಧುಮೇಹದಿಂದಾಗಿ ತಮ್ಮ ಜೀವನದ ಕ್ರೀಡಾ ಚಟುವಟಿಕೆ ಮಿತಿಗೊಳ್ಳಬಹುದು ಎಂದು ವೈದ್ಯರು ಕುಟುಂಬಕ್ಕೆ ಎಚ್ಚರಿಕೆ ನೀಡಿದ ಹೊರತಾಗಿಯೂ ತಾಯಿಯ ದೃಢವಾದ ನಂಬಿಕೆಯೇ ಝ್ವೆರವ್ ಅವರ ಟೆನಿಸ್ ಪಯಣದ ಪ್ರಮುಖ ಭಾಗವಾಯಿತು. ಈಗ ಝ್ವೆರೆವ್ ಅವರ ಪಾಲಿಗೆ ಈ ಋತುಮಾನವು ಎರಡು ಪ್ರಮುಖ ಮೈಲಿಗಲ್ಲುಗಳನ್ನು ತಂದುಕೊಟ್ಟಿದೆ. ಈ ವರ್ಷದ ಆರಂಭದಲ್ಲಿ ಫ್ರೆಂಚ್ ಓಪನ್ನಲ್ಲಿ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನಂತರ ಅವರು ಇದೀಗ ಯುಎಸ್ ಓಪನ್ ಪ್ರಶಸ್ತಿ ಪಡೆದಿದ್ದಾರೆ.
2020ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಡೊಮಿನಿಕ್ ಥೀಮ್ ವಿರುದ್ಧ ಎರಡು ಸೆಟ್ಗಳ ಮುನ್ನಡೆ ಕಳೆದುಕೊಂಡು ನಿರಾಶೆ ಅನುಭವಿಸಿದ್ದ ಅವರಿಗೆ ಈ ಬಾರಿಯ ಗೆಲುವು ಮಹತ್ವದ್ದಾಗಿತ್ತು. ಈ ಬಾರಿ ಸಂಯಮ ಕಾಯ್ದುಕೊಂಡು ಪ್ರಶಸ್ತಿ ಗೆದ್ದಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ತಮ್ಮ ಸಾಧನೆಗೆ ಮಿತಿ ನಿರ್ಧರಿಸಲು ಎಂದಿಗೂ ಅವಕಾಶ ನೀಡದಿದ್ದ ವ್ಯಕ್ತಿಯನ್ನು ವಿಶೇಷವಾಗಿ ನೆನಪಿಸಿಕೊಂಡರು.