Saudi Arabia | ಮದೀನಾದಲ್ಲಿ 110 ದಶಲಕ್ಷ ಟನ್ ಯುರೇನಿಯಂಯುಕ್ತ ಅದಿರು ಪತ್ತೆ: ವರದಿ
ಅಬ್ದುಲ್ ಅಝೀಝ್ ಬಿನ್ ಸಲ್ಮಾನ್| Photo Credit : PTI
ರಿಯಾದ್: ಸೌದಿ ಅರೇಬಿಯಾದ ಮದೀನಾ ಪ್ರದೇಶದಲ್ಲಿ ಯುರೇನಿಯಂ ಹಾಗೂ ಇತರ ಅಪರೂಪದ ಖನಿಜಗಳನ್ನು ಒಳಗೊಂಡಿರುವ ಸುಮಾರು 110 ದಶಲಕ್ಷ ಟನ್ ಅದಿರು ಸಂಪನ್ಮೂಲ ಪತ್ತೆಯಾಗಿದೆ ಎಂದು ಸೌದಿ ಇಂಧನ ಸಚಿವ, ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸಲ್ಮಾನ್ ತಿಳಿಸಿದ್ದಾರೆ.
ಮದೀನಾದ ‘ಜಬಲ್ ಸಯೀದ್’ ಯೋಜನೆಯಲ್ಲಿ ನಡೆಸಿದ ಪರಿಶೋಧನೆ ಮತ್ತು ಭೂವೈಜ್ಞಾನಿಕ ಅಧ್ಯಯನದಲ್ಲಿ ಈ ಸಂಪನ್ಮೂಲ ಪತ್ತೆಯಾಗಿದೆ. ಸುಮಾರು 110 ದಶಲಕ್ಷ ಟನ್ ಅದಿರಿನಲ್ಲಿ ಉತ್ತಮ ಪ್ರಮಾಣದ ಯುರೇನಿಯಂ ಇರುವುದರ ಜತೆಗೆ, ವಿಶೇಷವಾಗಿ ಭಾರವಾದ ಧಾತುಗಳು ಸೇರಿದಂತೆ ಅಪರೂಪದ ಖನಿಜಗಳು ಹೆಚ್ಚಿನ ಸಾಂದ್ರತೆಯಲ್ಲಿ ಇವೆ ಎಂದು ಸಚಿವರು ಹೇಳಿದ್ದಾರೆ ಎಂದು ‘Arab News’ ವರದಿ ಮಾಡಿದೆ.
ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಾದ ಮಕ್ಕಾ ಮತ್ತು ಮದೀನಾ ಇರುವ ಸೌದಿ ಅರೇಬಿಯಾದಲ್ಲಿ ಈ ಘೋಷಣೆ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಮುಂದುವರಿದಿರುವ ಸಂದರ್ಭದಲ್ಲೇ ಹೊರಬಿದ್ದಿದೆ. ಪ್ರವಾದಿ ಮುಹಮ್ಮದ್ ಅವರು ಕ್ರಿ.ಶ. 622ರಲ್ಲಿ ಮಕ್ಕಾದಿಂದ ಮದೀನಾಕ್ಕೆ ವಲಸೆ ಬಂದಿದ್ದರು. ಬಳಿಕ ಮದೀನಾ ಪ್ರಮುಖ ಕೇಂದ್ರವಾಗಿ ಬೆಳೆದಿತ್ತು.
ಅಮೆರಿಕದ ಸೇನಾ ನೆಲೆಗಳಿಗೆ ಆತಿಥ್ಯ ನೀಡುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಇರಾನ್ ನ ಕೆಂಗಣ್ಣಿಗೆ ಗುರಿಯಾಗಿದೆ. ಮತ್ತೊಂದೆಡೆ, ಯೆಮನ್ ನಲ್ಲಿ ಮತ್ತೆ ಸಕ್ರಿಯವಾಗಿರುವ ಹೌದಿ ಬಂಡುಕೋರರು ಕೆಂಪು ಸಮುದ್ರದತ್ತ ಸೌದಿಯ ಕಡಲ ಮಾರ್ಗದ ಪ್ರವೇಶಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪ್ರಮುಖ ಕಾರಣಗಳಲ್ಲಿ ಇರಾನ್ ನ ಪರಮಾಣು ಕಾರ್ಯಕ್ರಮವೂ ಒಂದಾಗಿದೆ. ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬಳಸುವ ಉದ್ದೇಶ ಇರಾನ್ ಗೆ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಅದರ ಪರಮಾಣು ಕಾರ್ಯಕ್ರಮವನ್ನು ತಡೆಯಲು ಮುಂದಾಗಿವೆ. ಆದರೆ, ತನ್ನ ಪರಮಾಣು ಕಾರ್ಯಕ್ರಮವು ಶಾಂತಿಯುತ ನಾಗರಿಕ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಇರಾನ್ ಹೇಳುತ್ತಿದೆ.
ಸುನ್ನಿ ಪ್ರಾಬಲ್ಯದ ಸೌದಿ ಅರೇಬಿಯಾ, ಶಿಯಾ ಪ್ರಾಬಲ್ಯದ ಇರಾನ್ ನ ಪ್ರಾದೇಶಿಕ ಪ್ರಭಾವವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ.
ಇಂಧನ ವೈವಿಧ್ಯೀಕರಣಕ್ಕೆ ಒತ್ತು
ಅರಬ್ ರಾಷ್ಟ್ರಗಳ ಪೈಕಿ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಸೌದಿ ಅರೇಬಿಯಾ, ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂಧನ ಮತ್ತು ಖನಿಜ ಸಂಪನ್ಮೂಲಗಳನ್ನು ವೈವಿಧ್ಯಗೊಳಿಸುತ್ತಿದೆ.
ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ‘ವಿಷನ್ 2030’ ಯೋಜನೆಯಡಿ ದೇಶೀಯವಾಗಿ ಯುರೇನಿಯಂ ಹೊರತೆಗೆಯುವಿಕೆ ಹಾಗೂ ನಾಗರಿಕ ಪರಮಾಣು ಶಕ್ತಿ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮದೀನಾದಲ್ಲಿ ಯುರೇನಿಯಂಯುಕ್ತ ಅದಿರು ಪತ್ತೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಸೌದಿ ಅರೇಬಿಯಾದಲ್ಲಿ ನಾಗರಿಕ ಪರಮಾಣು ಕಾರ್ಯಕ್ರಮ ಅಭಿವೃದ್ಧಿಪಡಿಸಲು ಅಮೆರಿಕದೊಂದಿಗೆ ಒಪ್ಪಂದ ಏರ್ಪಟ್ಟಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಜುಲೈನಲ್ಲಿ ಉಭಯ ದೇಶಗಳು ದ್ವಿಪಕ್ಷೀಯ ರಕ್ಷಣಾ ಒಪ್ಪಂದಕ್ಕೂ ಸಹಿ ಹಾಕಿದ್ದವು. ಇದು ದಶಕಗಳ ಅವಧಿಯ ಬಹು ಶತಕೋಟಿ ಡಾಲರ್ ಮೌಲ್ಯದ ಪಾಲುದಾರಿಕೆಗೆ ಅಡಿಪಾಯ ಹಾಕಿದೆ.
ಒಪ್ಪಂದದಡಿ ಅಮೆರಿಕದ ಕಂಪೆನಿಗಳು ಸೌದಿಯ ನಾಗರಿಕ ಪರಮಾಣು ಶಕ್ತಿ ಕಾರ್ಯಕ್ರಮ ಅಭಿವೃದ್ಧಿಪಡಿಸಲು ನೆರವಾಗಲಿವೆ. ಜತೆಗೆ, ಅಮೆರಿಕದ ಮೇಲ್ವಿಚಾರಣೆಯಿಲ್ಲದೆ ತನ್ನದೇ ನೆಲದಲ್ಲಿ ಯುರೇನಿಯಂ ಅನ್ನು ಸಂಸ್ಕರಿಸುವ (ಎನ್‌ರಿಚ್‌ಮೆಂಟ್) ಆಯ್ಕೆಯನ್ನೂ ಸೌದಿ ಅರೇಬಿಯಾ ಪಡೆಯಲಿದೆ.