Photo: India Today

ರಾಹುಲ್ ಗಾಂಧಿ ಅವರ ದಿನದ ಮೊದಲ ಕರೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮೀಸಲಾಗಿರುತ್ತದೆ. ಘೋಷಣೆಗಳು, ಬ್ಯಾರಿಕೇಡ್‌ ಗಳು ಮತ್ತು ಕ್ಯಾಮೆರಾಗಳು ಆವರಿಸುವ ಮೊದಲು, ಈ ಇಬ್ಬರೂ ಸಹೋದರ-ಸಹೋದರಿಯರು ದಿನದ ಕಾರ್ಯಯೋಜನೆಯ ಬಗ್ಗೆ ಚರ್ಚಿಸುತ್ತಾರೆ. ಅಜೆಂಡಾವನ್ನು ರೂಪಿಸಲು ಪ್ರಿಯಾಂಕಾ ತಮ್ಮ ಸಹೋದರನಿಗೆ ಸಹಾಯ ಮಾಡುತ್ತಾರೆ. ಇದರ ನಂತರ ರಾಹುಲ್ ತಮ್ಮ ತಂಡದೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸುತ್ತಾರೆ. ಅಲ್ಲಿ ರಾಜಕೀಯ ನಡೆಗಳು, ಸಂದೇಶಗಳು ಮತ್ತು ದೃಶ್ಯಗಳ ಬಗ್ಗೆ ಚರ್ಚಿಸಲಾಗುತ್ತದೆ. ರಾಹುಲ್ ಅವರು ಹಿರಿಯ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸುವ ಮೊದಲು ಈ ಸಭೆಯು ಗಂಟೆಗಳ ಕಾಲ ನಡೆಯಬಹುದು. ಅಲ್ಲದೆ, 'INDIA' ಒಕ್ಕೂಟದ ಶಕ್ತಿ ಪ್ರದರ್ಶನವನ್ನು ಯೋಜಿಸಿದಾಗ, ರಾಹುಲ್ ಸ್ವತಃ ಮೈತ್ರಿಕೂಟದ ಪಾಲುದಾರರನ್ನು ಸಂಪರ್ಕಿಸುತ್ತಾರೆ. ರಾಹುಲ್ ಗಾಂಧಿ ಅವರು ಕಣಕ್ಕಿಳಿಯುವ ಹೊತ್ತಿಗೆ ಅಂದಿನ ಕಾರ್ಯಯೋಜನೆ ಸಿದ್ಧವಾಗಿರುತ್ತದೆ. ಸಂಜೆ ಪ್ರೈಮ್‌-ಟೈಮ್‌ಗೆ ತಕ್ಕಂತೆ ಅತ್ಯಂತ ನಾಟಕೀಯ ಸನ್ನಿವೇಶವು ಮಧ್ಯಾಹ್ನದ ನಂತರಕ್ಕೆ ಸಿದ್ಧವಾಗಿರುತ್ತದೆ.

ಸಂಜೆ ಪತ್ರಿಕೆಗಳ ಸಂಪಾದಕರು ಮುಖಪುಟದ ಬಗ್ಗೆ ಸಭೆ ನಡೆಸಲು ಸಿದ್ಧತೆ ನಡೆಸುವಾಗ, ವರದಿಗಾರರು ತಮ್ಮ ವರದಿಗಳನ್ನು ಕಳುಹಿಸಲು ಸಿದ್ಧರಾಗುವಾಗ, ಟೆಲಿವಿಷನ್ ಸುದ್ದಿಮನೆಗಳು ಪ್ರೈಮ್‌-ಟೈಮ್‌ ಚರ್ಚೆಗಳಿಗೆ ಸಜ್ಜಾಗುವಾಗ ಮತ್ತು ಯುವಕರು ಕಾಲೇಜು ಹಾಗೂ ಕೆಲಸ ಮುಗಿಸಿ ವಾಪಸ್ ಬಂದು ಇನ್‌ಸ್ಟಾಗ್ರಾಂ ರೀಲ್ಸ್ ಅಥವಾ ಎಕ್ಸ್‌ನ ವೈರಲ್ ಕ್ಲಿಪ್‌ಗಳನ್ನು ನೋಡಲು ಆರಂಭಿಸುವಾಗ, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ಪ್ರತಿಭಟನೆ ಆರಂಭವಾಗುತ್ತದೆ. ಇದರ ಸಂಪೂರ್ಣ ಗಮನ ರಾಹುಲ್ ಗಾಂಧಿ ಅವರ ಮೇಲಿರುತ್ತದೆ.

ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಹೊರಗಿನ ಪ್ರತಿಭಟನೆಯಿಂದ ಹಿಡಿದು, ಅಕ್ಟೋಬರ್‌ ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಸರಣಿ ಪ್ರತಿಭಟನೆಗಳವರೆಗೆ, ರಾಹುಲ್ ಅವರ ಬೀದಿ ರಾಜಕಾರಣವು ಒಂದು ಸ್ಪಷ್ಟ ಮತ್ತು ಗೋಚರಿಸುವ ಲಯವನ್ನು ಪಡೆದುಕೊಂಡಿದೆ. ಅಲ್ಲಿ ಸಂಘರ್ಷಗಳು, ಪೊಲೀಸ್ ಬ್ಯಾರಿಕೇಡ್‌ಗಳು, ಘೋಷಣೆಗಳು ಮತ್ತು ಮಧ್ಯಾಹ್ನದ ನಂತರ ಆರಂಭವಾಗಿ ಸಂಜೆಯವರೆಗೆ ಸುದ್ದಿಯನ್ನು ಜೀವಂತವಾಗಿರಿಸುವ ದೀರ್ಘಾವಧಿಯ ಧರಣಿಗಳು ಇರುತ್ತವೆ. ಕೆಲವೊಮ್ಮೆ ವಿರೋಧ ಪಕ್ಷದ ಸಂಸದರೊಂದಿಗೆ ಮಧ್ಯಾಹ್ನದ ಊಟದ ಸಭೆಗಳೂ ಇರುತ್ತವೆ. ಕನ್ನಾಟ್ ಪ್ಲೇಸ್‌ನ ಹೋಟೆಲ್‌ ಗಳಲ್ಲಿ ನಡೆಯುವ ಈ ಊಟ ಮತ್ತು ಚಹಾ ಕೂಟಗಳೇ ಸುದ್ದಿಗಳ ಮುಖ್ಯ ಶೀರ್ಷಿಕೆಗಳಾಗಿರುತ್ತವೆ.

56 ವರ್ಷದ ಕಾಂಗ್ರೆಸ್ ನಾಯಕನ ರಾಜಕೀಯ ತಂತ್ರಗಾರಿಕೆಯಲ್ಲಿ ಈ ಸಮಯದ ಆಯ್ಕೆಯು ಒಂದು ಗಮನಾರ್ಹ ವೈಶಿಷ್ಟ್ಯವಾಗಿದೆ. ಇದು ತಮ್ಮ ಕಾರ್ಯಕರ್ತರನ್ನು ಒಟ್ಟುಗೂಡಿಸಲು, ದೃಶ್ಯ ವೈಭವದಿಂದ ಕೂಡಿದ ಪ್ರದರ್ಶನಗಳನ್ನು ಆಯೋಜಿಸಲು ಹಾಗೂ ಸಂಜೆಯ ಸುದ್ದಿಗಳ ಮೂಲಕ ತಮ್ಮ ಸಮಸ್ಯೆಗಳನ್ನು ಚಾಲ್ತಿಯಲ್ಲಿಡಲು ಅವರಿಗೂ ಮತ್ತು ಕಾಂಗ್ರೆಸ್‌ಗೂ ಅವಕಾಶ ನೀಡುತ್ತದೆ. ಟೆಲಿವಿಷನ್ ವೀಕ್ಷಣೆಯ ಶೈಲಿಗಳು ಬದಲಾಗುತ್ತಿದ್ದರೂ, ರಾಜಕೀಯ ನಿರೂಪಣೆಯನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸುವ ಮುಖ್ಯವಾಹಿನಿಯ ಮಾಧ್ಯಮಗಳ ಸಾಮರ್ಥ್ಯವು ಇನ್ನೂ ಮೌಲ್ಯಯುತವಾಗಿ ಉಳಿದಿದೆ.

ಈ ಸಮಯದ ಆಯ್ಕೆಯು "ನಿಧಾನವಾಗಿ ಕಾವುಕೊಡುವ ಆಟವನ್ನು ಮುಂದುವರಿಸುವ ಕಾಂಗ್ರೆಸ್ ಪಕ್ಷದ ಉದ್ದೇಶಪೂರ್ವಕ ತಂತ್ರವಾಗಿದೆ" ಎಂದು ಹಿರಿಯ ಪತ್ರಕರ್ತ ಮತ್ತು ಲೇಖಕ ರಶೀದ್ ಕಿದ್ವಾಯಿ ಹೇಳುತ್ತಾರೆ.

ಕಾಂಗ್ರೆಸ್ ಪಕ್ಷವನ್ನು ದಶಕಗಳಿಂದ ಗಮನಿಸುತ್ತಾ ಬಂದಿರುವ ಕಿದ್ವಾಯಿ, 'ಇಂಡಿಯಾ ಟುಡೆ ಡಿಜಿಟಲ್' ಜತೆ ಮಾತನಾಡಿ, UPA ಆಡಳಿತದ ಅವಧಿಯಲ್ಲಿ (2004–2014) ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗಳು ರಾತ್ರಿ 7ರಿಂದ 9ರ ನಡುವೆ ಹೇಗೆ ನಡೆಯುತ್ತಿದ್ದವು ಎಂಬುದನ್ನು ನೆನಪಿಸಿಕೊಂಡರು. "ಪ್ರೈಮ್‌-ಟೈಮ್‌ ಟಿವಿ ಸುದ್ದಿಗಳು ಅವುಗಳನ್ನು ತಪ್ಪಿಸಿಕೊಳ್ಳುತ್ತಿದ್ದವು. ಮರುದಿನ ಪತ್ರಿಕೆಗಳಿಗೆ ಕೇವಲ ಸಂಕ್ಷಿಪ್ತ ವರದಿಗಳು ಮಾತ್ರ ಸಿಗುತ್ತಿದ್ದವು" ಎಂದು ಕಿದ್ವಾಯಿ ಹೇಳುತ್ತಾರೆ.

ಕನಿಷ್ಠ ನಾಲ್ಕು ದಶಕಗಳ ಕಾಲ ರಾಷ್ಟ್ರೀಯ ರಾಜಕಾರಣವನ್ನು ವರದಿ ಮಾಡಿರುವ ಹಿರಿಯ ಪತ್ರಕರ್ತೆ ಮತ್ತು ಲೇಖಕಿ ನೀರ್ಜಾ ಚೌಧರಿ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ತನ್ನ ಹಿಂದಿನ "ಸಂವಹನ ವೈಫಲ್ಯಗಳಿಂದ" ಪಾಠ ಕಲಿತಿದೆ ಎಂದು ನಂಬುತ್ತಾರೆ. "ರಾಹುಲ್ ಗಾಂಧಿ ಮತ್ತು ಪಕ್ಷದ ಈಗಿನ ತಂತ್ರಗಾರಿಕೆಯನ್ನು ನೋಡಿದರೆ, ಕಾಂಗ್ರೆಸ್ ಪಕ್ಷವು ವೇಗವಾಗಿ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ರೀತಿಯಲ್ಲೂ ರಾಹುಲ್ ಗಾಂಧಿ ಅವರ ಹೊಸ ಶೈಲಿಯನ್ನು ಕಾಣಬಹುದು. ಕಾಂಗ್ರೆಸ್ ಬಗ್ಗೆ ವರದಿ ಮಾಡುವ 'ಇಂಡಿಯಾ ಟುಡೆ ಟಿವಿ'ಯ ವರದಿಗಾರ ರಾಹುಲ್ ಗೌತಮ್ ಮಾತನಾಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕಾರ್ಯಕ್ರಮಗಳನ್ನು ನಿರ್ವಹಿಸಲು ಮೀಸಲಾದ ತಂಡವನ್ನು ರಚಿಸಿದ್ದಾರೆ ಮತ್ತು ಅವುಗಳ ಯೋಜನೆಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ (AICC) ಹಸ್ತಕ್ಷೇಪ ತೀರಾ ಕಡಿಮೆ ಇದೆ ಎಂದರು.

ಹೆಸರು ಬಹಿರಂಗಪಡಿಸಲು ಇಚ್ಛಿಸದ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುವ ಮತ್ತೊಬ್ಬ ಹಿರಿಯ ಪತ್ರಕರ್ತರು 'ಇಂಡಿಯಾ ಟುಡೆ ಡಿಜಿಟಲ್' ಜತೆ ಮಾತನಾಡಿ, "ಪ್ರಸ್ತುತ ದೃಶ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ" ಎಂದಿದ್ದಾರೆ.

ಈ ಬದಲಾವಣೆಯು ಕೇವಲ ರಾಹುಲ್ ಗಾಂಧಿ ಅವರು ಕ್ಯಾಮೆರಾಗಳ ಮುಂದೆ ಯಾವಾಗ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಅವರು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಮೇಲೆಯೂ ಪರಿಣಾಮ ಬೀರಿದೆ. ಒಮ್ಮೆ "ಆವೇಶದ ರಾಜಕಾರಣಿ" ಎಂದು ಬಿಂಬಿತರಾಗಿದ್ದ ಅವರು, ಈಗ ಹೆಚ್ಚು ಧೈರ್ಯಶಾಲಿ ಮತ್ತು ಆತ್ಮವಿಶ್ವಾಸದಿಂದ ಕೂಡಿದವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ರಸ್ತೆಗಿಳಿದು ಹೋರಾಡಲು ಹಾಗೂ ತಮ್ಮ ವಿರೋಧಿಗಳಿಗೆ ರಾಜಕೀಯ ಸಂದೇಶ ತಲುಪಿಸಲು ಈ ಸಂಘರ್ಷವನ್ನು ಬಳಸಿಕೊಳ್ಳಲು ಸಿದ್ಧರಾಗಿದ್ದಾರೆ.

ಧರಣಿ ಸತ್ಯಾಗ್ರಹಗಳನ್ನು ಸಂಸತ್ತಿನಿಂದ ಬೀದಿಗೆ ತಂದ ರಾಹುಲ್ ಗಾಂಧಿ

ದಶಕಗಳಿಂದ ಹೊಸದಿಲ್ಲಿಯಲ್ಲಿ ವಿರೋಧ ಪಕ್ಷಗಳು ನಡೆಸುವ ಪ್ರಮುಖ ಪ್ರತಿಭಟನೆಗಳು ಸಂಸತ್ತಿನ ಸಮಯಕ್ಕೆ ಅನುಗುಣವಾಗಿಯೇ ನಡೆಯುತ್ತಿದ್ದವು. ನಾಯಕರು ಹಗಲಿನಲ್ಲಿ ಒಂದೆಡೆ ಸೇರಿ, ಘೋಷಣೆಗಳನ್ನು ಕೂಗಿ, ಪ್ರತಿಭಟನೆಗಳನ್ನು ನಡೆಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ ಸಂಜೆಯ ವೇಳೆಗೆ 'ಮಕರ ದ್ವಾರ'ದಿಂದ ಬರುವ ಆ ದೃಶ್ಯಗಳು ಸುದ್ದಿ ಬುಲೆಟಿನ್‌ ಗಳಿಂದ ಮತ್ತು ಮೊಬೈಲ್ ಫೋನ್‌ಗಳಿಂದ ಮರೆಯಾಗುತ್ತಿದ್ದವು.

ಆದರೆ ಪರೀಕ್ಷಾ ಅಕ್ರಮಗಳ ವಿರುದ್ಧ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಡೆಸಿದ ಹೋರಾಟವು ಈ ಪದ್ಧತಿಯನ್ನು ಬದಲಾಯಿಸಿತು. ಇದು ತೀವ್ರ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ನಡೆದ ಮೊದಲ ಯುವ ಪ್ರತಿಭಟನೆಯಾಗಿತ್ತು. ಈ ಪ್ರತಿಭಟನೆಗಳು ಜೂನ್‌ನಿಂದ ಕಾವು ಪಡೆದುಕೊಂಡಿದ್ದವು. ಸೋನಮ್ ವಾಂಗ್ಚುಕ್ ಅವರ ಬೆಂಬಲ ಇದಕ್ಕೆ ಇನ್ನಷ್ಟು ಬಲ ತಂದಿತು. ಪ್ರತಿಭಟನಾಕಾರರು ಜವಾಬ್ದಾರಿಯನ್ನು ಹೊರುವಂತೆ ಮತ್ತು ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದರು.

ರಾಹುಲ್ ಗಾಂಧಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಬೆಂಬಲಿಸಿದರು. ಆದರೆ ಜುಲೈ 21ರಂದು ಅವರು ಕೈಗೊಂಡ ಒಂದು "ದಿಢೀರ್" ನಡೆ ಕಾಂಗ್ರೆಸ್ ಬೀದಿ ಪ್ರತಿಭಟನೆಗಳನ್ನು ನಡೆಸುವ ರೀತಿಯಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಜುಲೈ 20ರಂದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ, ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಮತ್ತು ಇತರ ವಿರೋಧ ಪಕ್ಷದ ನಾಯಕರೊಂದಿಗೆ ಪ್ರಧಾನಿ ಮೋದಿಯವರ ನಿವಾಸದ ಹೊರಗೆ ಧರಣಿ ಕುಳಿತರು. ಪೊಲೀಸರು ಆ ಸ್ಥಳವನ್ನು ತೆರವುಗೊಳಿಸಿ ರಾಹುಲ್, ಪ್ರಿಯಾಂಕಾ ಮತ್ತು ಇತರ ನಾಯಕರನ್ನು ಬಂಧಿಸುವವರೆಗೆ ಈ ಪ್ರತಿಭಟನೆ ಗಂಟೆಗಳ ಕಾಲ ಮುಂದುವರಿಯಿತು.

ಕೆಲವೇ ದಿನಗಳ ನಂತರ, ಅಂದರೆ ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ರಾಹುಲ್ ಅವರು ಈ ಬೆಳವಣಿಗೆಯನ್ನು ಪ್ರತಿಭಟನಾನಿರತ ವಿದ್ಯಾರ್ಥಿಗಳ ಗೆಲುವು ಎಂದು ಸ್ವಾಗತಿಸಿದರೂ, ಇತರ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಸ್ಪಷ್ಟಪಡಿಸಿದರು. CJP ಈ ಗೆಲುವನ್ನು ಸಂಭ್ರಮಿಸಿತು. ರಾಹುಲ್ ಗಾಂಧಿ ವಿದ್ಯಾರ್ಥಿಗಳ ಬೇಡಿಕೆಯನ್ನು ಗಟ್ಟಿಯಾಗಿ ಧ್ವನಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದರೂ, ಪ್ರಧಾನ್ ಅವರ ರಾಜೀನಾಮೆ CJPಯ ಮೊದಲ ಯಶಸ್ಸಾಗಿತ್ತು. ಆಗಸ್ಟ್ 21ರಂದು, ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬನ ವಿರುದ್ಧ ಪೆಲೆಟ್ ಗನ್ ಬಳಸಿದ್ದಕ್ಕಾಗಿ FIR ದಾಖಲಿಸುವಂತೆ ಆಗ್ರಹಿಸಿ ರಾಹುಲ್ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಮತ್ತೊಂದು ಧರಣಿ ನಡೆಸಿದರು.

ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್ ಆರಂಭದ ವೇಳೆಗೆ ಗಮನವು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರತ್ತ ತಿರುಗಿತು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಹುಲ್, ಅವರ ರಾಜೀನಾಮೆಗೆ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಿದರು. ಅಕ್ಟೋಬರ್ 6ರಂದು, ರಾಹುಲ್ ಅವರು 'ಇಂಡಿಯಾ' ಒಕ್ಕೂಟದ ಸಂಸದರೊಂದಿಗೆ ಚುನಾವಣಾ ಆಯೋಗದ ಪ್ರಧಾನ ಕಚೇರಿಯತ್ತ ಮೆರವಣಿಗೆ ನಡೆಸಿದರು. ಪೊಲೀಸ್ ಬ್ಯಾರಿಕೇಡ್‌ಗಳು ಮೆರವಣಿಗೆಯನ್ನು ತಡೆದವು. ಹೀಗಾಗಿ ಸಂಘರ್ಷವು ಆಕಾಶವಾಣಿ ಭವನದ ಆವರಣಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ರಾಹುಲ್ ಮತ್ತು ಇತರ ನಾಯಕರು ದೀರ್ಘಾವಧಿಯ ಧರಣಿ ನಡೆಸಿದರು. ನಾಯಕರ ಬಂಧನ ಮತ್ತು ಕಾವೇರಿದ ಸನ್ನಿವೇಶಗಳೊಂದಿಗೆ ಈ ರಾಜಕೀಯ ನಾಟಕೀಯ ಪ್ರತಿಭಟನೆಯು ಸಂಜೆಯವರೆಗೂ ಮುಂದುವರಿಯಿತು.

ಮರುದಿನ ಕನ್ನಾಟ್ ಪ್ಲೇಸ್‌ ನ ಉಪಾಹಾರ ಗೃಹವೊಂದರಲ್ಲಿ ವಿರೋಧ ಪಕ್ಷದ ಸಂಸದರ ಮಧ್ಯಾಹ್ನದ ಊಟದ ಸಭೆಯನ್ನು ಕರೆಯಲಾಯಿತು. ರಾಹುಲ್ ಮತ್ತು ಇತರ 'ಇಂಡಿಯಾ' ಒಕ್ಕೂಟದ ನಾಯಕರು ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದರು. ಪೊಲೀಸರು ಅವರನ್ನು ತಡೆದು ಹಲವಾರು ನಾಯಕರನ್ನು ಮತ್ತೊಮ್ಮೆ ವಶಕ್ಕೆ ಪಡೆದರು. ಅಕ್ಟೋಬರ್ 12ರಂದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ನ್ಯಾಯಾಂಗದ ಮಧ್ಯಪ್ರವೇಶವನ್ನು ಕೋರಿ 'ಇಂಡಿಯಾ' ಒಕ್ಕೂಟವು ಸುಪ್ರೀಂ ಕೋರ್ಟ್‌ನತ್ತ ನಡೆಸಿದ ಮೆರವಣಿಗೆಯಲ್ಲಿ ರಾಹುಲ್ ಭಾಗವಹಿಸಿದರು.

ಬೇಡಿಕೆಗಳು ಬೇರೆ ಬೇರೆಯಾಗಿದ್ದರೂ, ಪ್ರತಿಭಟನೆಯ ರೂಪ ಮಾತ್ರ ಪರಿಚಿತವಾಗುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧದ ರಾಜಕೀಯ ಅಸಮಾಧಾನ, ಬೀದಿಗಳಲ್ಲಿ ಪ್ರತಿಭಟನೆ, ಪೊಲೀಸರೊಂದಿಗೆ ಸಂಘರ್ಷ ಹಾಗೂ ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಜೆಯ ಸುದ್ದಿಗೆ ವಸ್ತುವಾಗುವುದು ಇದರ ವಿಶೇಷತೆಯಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಧ್ಯಾಹ್ನ ಹಾಗೂ ಸಂಜೆ ಪ್ರತಿಭಟನೆ ನಡೆಸುವುದರಿಂದ, ಟಿವಿ ಪ್ರಸಾರಗಳು, ಆನ್‌ಲೈನ್ ಅಪ್‌ಡೇಟ್‌ ಗಳು ಮತ್ತು ಮರುದಿನ ಬೆಳಗಿನ ಪತ್ರಿಕಾ ವರದಿಗಳು ಭಿನ್ನವಾದ ವೇಗದಲ್ಲಿ ಸಾಗಲು ಸಾಧ್ಯವಾಗುತ್ತದೆ. ಇದರ ಜೊತೆಗೆ ರಾಹುಲ್ ಗಾಂಧಿ ಅವರ ಅನಿರೀಕ್ಷಿತ ಪ್ರತಿಭಟನೆಯ ಸಾಧ್ಯತೆಯೂ ಸದಾ ಇರುತ್ತದೆ.

ರಾಹುಲ್ ಪ್ರತಿಭಟನೆಗಳ ಹಿಂದಿನ ಪ್ರೈಮ್-ಟೈಮ್ ಲೆಕ್ಕಾಚಾರ

ನೆಹರೂ-ಗಾಂಧಿ ಕುಟುಂಬದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ರಶೀದ್ ಕಿದ್ವಾಯಿ, ರಾಹುಲ್ ನಡೆಸುವ ಈ ಪ್ರತಿಭಟನೆಗಳ ಸಮಯವು ಕೇವಲ ಕಾಕತಾಳೀಯವಲ್ಲ ಎಂದು ವಾದಿಸುತ್ತಾರೆ. ಇದು ಕೇವಲ ವ್ಯವಸ್ಥಾಪನಾ ಅನುಕೂಲಕ್ಕಾಗಿ ಮಾಡಿದ ಕಾರ್ಯವಲ್ಲ. UPA ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗಳು (CWC) ಸಂಜೆ 7ರಿಂದ 9ರ ನಡುವೆ ಹೇಗೆ ನಡೆಯುತ್ತಿದ್ದವು ಮತ್ತು ಚರ್ಚೆಗಳು ತಡರಾತ್ರಿಯವರೆಗೂ ಹೇಗೆ ಮುಂದುವರಿಯುತ್ತಿದ್ದವು ಎಂಬುದನ್ನು ಅವರು ನೆನಪಿಸಿಕೊಂಡರು. ಇದರ ಪರಿಣಾಮವಾಗಿ ಮಾಧ್ಯಮಗಳಲ್ಲಿ ಅತ್ಯಂತ ಕಡಿಮೆ ಪ್ರಚಾರ ಸಿಗುತ್ತಿತ್ತು ಎಂದು ಅವರು ಹೇಳಿದರು.

ರಾಹುಲ್ ಅವರ ಈಗಿನ ಶೈಲಿಯು ಸುದ್ದಿ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತಾದ ಹೆಚ್ಚಿನ ಅರಿವನ್ನು ಬಿಂಬಿಸುತ್ತದೆ. ಸಾಮಾನ್ಯವಾಗಿ ರಾಹುಲ್ ಮತ್ತು ವಿರೋಧ ಪಕ್ಷಗಳ ವಿರುದ್ಧವಾಗಿವೆ ಎಂದು ಭಾವಿಸಲಾದ ಮುಖ್ಯವಾಹಿನಿಯ ಮಾಧ್ಯಮಗಳು, ಸಂಜೆ 6ರಿಂದ 9ರ ಪ್ರೈಮ್‌-ಟೈಮ್‌ ಚರ್ಚೆಗಳಲ್ಲಿ ರಾಹುಲ್ ಅವರನ್ನು ಮುನ್ನೆಲೆಗೆ ತರಲು ಮತ್ತು ಅವರು ಎತ್ತುವ ವಿಷಯಗಳನ್ನು ಚರ್ಚಿಸಲು ಒತ್ತಾಯಿಸಲ್ಪಡುತ್ತವೆ. ಇನ್ನೊಂದೆಡೆ, ಪತ್ರಿಕೆ ಮತ್ತು ಆನ್‌ಲೈನ್ ವರದಿಗಾರರಿಗೆ ಮಾಮೂಲಿ ವರದಿಗಳಿಗಿಂತ ವಿವರವಾದ ಸುದ್ದಿಗಳನ್ನು ಸಿದ್ಧಪಡಿಸಲು ಹೆಚ್ಚಿನ ಸಮಯ ಮತ್ತು ವಿಷಯ ಸಿಗುತ್ತದೆ ಎಂದು ಕಿದ್ವಾಯಿ ಹೇಳುತ್ತಾರೆ.

ರಾಹುಲ್ ಅವರ ತಂಡದಲ್ಲಿ ಇಂತಹ ಸಣ್ಣ ಸಂಗತಿಗಳಿಗೂ ಗಮನ ನೀಡುವ ಮತ್ತು ಅಂದಿನ ಪ್ರಧಾನಿಯವರ ದಿನದ ಕಾರ್ಯಕ್ರಮಗಳನ್ನೂ ಪರಿಗಣಿಸುವ ಪರಿಣಿತರಿದ್ದಾರೆ. ಕಿದ್ವಾಯಿ ಅವರ ಪ್ರಕಾರ, ಈ ತಂತ್ರಗಾರಿಕೆಯನ್ನು ಕೇವಲ ಒಂದು ದಿನದ ಶೀರ್ಷಿಕೆ ಸೃಷ್ಟಿಸಲು ಅಲ್ಲ, ಬದಲಿಗೆ ರಾಜಕೀಯ ವೇಗವನ್ನು ಸದಾ ಕಾಯ್ದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

ಉದಾಹರಣೆಗೆ, ರಾಹುಲ್ ಗಾಂಧಿ ಪೊಲೀಸ್ ಬ್ಯಾರಿಕೇಡ್ ಏರುತ್ತಿರುವ ಅತ್ಯಂತ ನಾಟಕೀಯ ಚಿತ್ರವು ಪ್ರತಿಭಟನೆ ಮುಗಿದ ಬಹುಕಾಲದ ನಂತರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇರುತ್ತದೆ.

ರಾಹುಲ್ ಗಾಂಧಿಯವರ ಮಧ್ಯಾಹ್ನದ ನಂತರದ ಪ್ರತಿಭಟನೆಗಳ ಅನುಕೂಲಗಳು

'ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್' ಪುಸ್ತಕದ ಲೇಖಕಿ ನೀರ್ಜಾ ಚೌಧರಿ, ಯುವ ಸಮುದಾಯಕ್ಕೆ ಟೆಲಿವಿಷನ್ ಇಂದಿಗೂ ರಾಜಕೀಯ ಮಾಹಿತಿಯ ಮುಖ್ಯ ಮೂಲವಾಗಿದೆ ಎಂದು ಭಾವಿಸುವುದರ ವಿರುದ್ಧ ಎಚ್ಚರಿಸುತ್ತಾರೆ. ಅನೇಕ ಯುವಕರು ಮತ್ತು ಮಧ್ಯಮ ವರ್ಗದ ಭಾರತೀಯರು ಈಗ ಸಾಮಾಜಿಕ ಮಾಧ್ಯಮಗಳ ಮೂಲಕವೇ ಸುದ್ದಿಗಳನ್ನು ವೀಕ್ಷಿಸುತ್ತಾರೆ. ಆದರೆ ಕಾಂಗ್ರೆಸ್ ತನ್ನ ಸಂದೇಶವನ್ನು ತಲುಪಿಸುವಲ್ಲಿ ಹೆಚ್ಚು ಪರಿಣತಿ ಪಡೆದುಕೊಂಡಿದೆ. ಇಂದು ಕಾಂಗ್ರೆಸ್ ರೂಪಿಸುತ್ತಿರುವ ಮಾದರಿಯನ್ನು ಇತರ ಪಕ್ಷಗಳೂ ಗಮನಿಸುವ ಸಾಧ್ಯತೆಯಿದೆ ಎಂದು ಚೌಧರಿ ಅಭಿಪ್ರಾಯಪಡುತ್ತಾರೆ.

ಮಧ್ಯಾಹ್ನದ ನಂತರ ಪ್ರತಿಭಟನೆಗಳನ್ನು ಆಯೋಜಿಸುವುದರಲ್ಲಿ ಪ್ರಾಯೋಗಿಕ ಅನುಕೂಲವೂ ಇದೆ. ಮೆರವಣಿಗೆಗಳನ್ನು ಆಯೋಜಿಸಲು ನಾಯಕರು ಮತ್ತು ಕಾರ್ಯಕರ್ತರನ್ನು ಒಟ್ಟುಗೂಡಿಸಲು, ಸಾರಿಗೆ ವ್ಯವಸ್ಥೆ ಮಾಡಲು ಹಾಗೂ ಇತರ ವ್ಯವಸ್ಥಾಪನೆಗಳನ್ನು ಸಂಯೋಜಿಸಲು ಸಮಯ ಬೇಕಾಗುತ್ತದೆ ಎಂದು ಚೌಧರಿ ಹೇಳುತ್ತಾರೆ. ಆದರೆ ಮಧ್ಯಾಹ್ನದ ಪ್ರತಿಭಟನೆಗಳು ಹೊಸ ಆವಿಷ್ಕಾರ ಎಂಬ ಕಲ್ಪನೆಯನ್ನು ಅವರು ನಿರಾಕರಿಸಿದರು.

"ರಾಷ್ಟ್ರೀಯ ರಾಜಕಾರಣವನ್ನು ವರದಿ ಮಾಡಿದ ನನ್ನ ನಾಲ್ಕು ದಶಕಗಳ ಅನುಭವದಲ್ಲಿ, ರಾಜಕೀಯ ಮೆರವಣಿಗೆಗಳು, ಪ್ರತಿಭಟನೆಗಳು ಮತ್ತು ಪತ್ರಿಕಾಗೋಷ್ಠಿಗಳು ಹೆಚ್ಚಾಗಿ ಮಧ್ಯಾಹ್ನದ ನಂತರವೇ ನಡೆದಿವೆ" ಎಂದು ನೀರ್ಜಾ ಚೌಧರಿ ಹೇಳಿದ್ದಾರೆ.

ಬೋಫೋರ್ಸ್ ಹಗರಣದ ಹಿನ್ನೆಲೆಯಲ್ಲಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ತಿರುಗಿಬಿದ್ದಿದ್ದ ಅಂದಿನ ಹಿರಿಯ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಬಂಡಾಯ ನಾಯಕ ವಿ.ಪಿ. ಸಿಂಗ್ ಅವರ ನೇತೃತ್ವದಲ್ಲಿ 1987ರಲ್ಲಿ ನಡೆದ ಮೆರವಣಿಗೆಯನ್ನು ಚೌಧರಿ ಸ್ಮರಿಸಿಕೊಂಡರು. ಪತ್ರಕರ್ತರು ಬೆಳಿಗ್ಗೆ 6 ಗಂಟೆಗೆ ಅವರ ನಿವಾಸದಲ್ಲಿ ಸೇರಲು ಸೂಚಿಸಲಾಗಿತ್ತು. ಕಾಂಗ್ರೆಸ್‌ನಿಂದ ಹೊರಬಂದು ರಾಜೀವ್ ಗಾಂಧಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುತ್ತಿದ್ದ ಸಿಂಗ್, ಬಲ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದರು. ತೀನ್ ಮೂರ್ತಿ ಭವನದಲ್ಲಿ ಜನಸಂದಣಿ ಮತ್ತು ವಾಹನಗಳ ಸಾಲು ಸಿದ್ಧವಾದಾಗ, ಅವರು ಸರಳವಾಗಿ, "ಚಲೇಂ (ಹೋಗೋಣ)" ಎಂದರು. ಸಾವಿರಾರು ಜನರು ಉತ್ತರ ಪ್ರದೇಶದ ಮುಜಾಫರ್ ನಗರದ ಕಡೆಗೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದರು.

"ಅದು ಒಂದು ಬೃಹತ್ ಪ್ರತಿಭಟನಾ ಮೆರವಣಿಗೆಯಾಗಿತ್ತು. ಸಾವಿರಾರು ಜನರು ಸೇರಿದ್ದರು. ಕುಸಿದುಬಿದ್ದ ವೇದಿಕೆಯೊಂದರ ಮೇಲೆ ನಾನು ಇದ್ದೆ. ಮಧ್ಯಾಹ್ನದ ನಂತರ ನಡೆದ ಆ ಪ್ರತಿಭಟನೆಯನ್ನು ನಾನು ಎಂದಿಗೂ ಮರೆಯುವುದಿಲ್ಲ" ಎಂದು ನೀರ್ಜಾ ಚೌಧರಿ ಹೇಳಿದ್ದಾರೆ.

ದೊಡ್ಡ ಮಟ್ಟದ ಪ್ರತಿಭಟನೆಗಳು ಭಾರತೀಯ ರಾಜಕಾರಣದ ಭಾಗವಾಗಿ ಬಹಳ ಕಾಲದಿಂದ ನಡೆದುಕೊಂಡು ಬಂದಿವೆ. ಈಗ ಬದಲಾಗಿರುವುದು ಏನೆಂದರೆ, ಈ ಪ್ರತಿಭಟನೆಗಳು ಟೆಲಿವಿಷನ್ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತವೆ.

"ಕಾಂಗ್ರೆಸ್‌ನ ಸಿದ್ಧತೆಗಳು ಬೆಳಿಗ್ಗೆ 9 ಅಥವಾ 10ರ ಸುಮಾರಿಗೆ ಪ್ರಾರಂಭವಾಗುತ್ತವೆ. ರಾಹುಲ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ಮೊದಲು ಜನರನ್ನು ಒಟ್ಟುಗೂಡಿಸುವುದು ಮತ್ತು ವ್ಯವಸ್ಥೆಗಳನ್ನು ಮಾಡುವುದು ನಡೆಯುತ್ತದೆ. ಜನಸಂದಣಿ ಮತ್ತು ದೃಶ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ನಾಯಕನಿಗೆ, ಜನರನ್ನು ಒಗ್ಗೂಡಿಸಲು ಬೇಕಾಗುವ ಸಮಯವು ಅತ್ಯಂತ ನಿರ್ಣಾಯಕವಾಗಿದೆ" ಎಂದು 'ಇಂಡಿಯಾ ಟುಡೆ ಟಿವಿ'ಯ ವರದಿಗಾರ ರಾಹುಲ್ ಗೌತಮ್ ಹೇಳಿದರು.

ಆದ್ದರಿಂದ, ಮಧ್ಯಾಹ್ನದ ವೇಳೆಯು ಕಾಂಗ್ರೆಸ್‌ಗೆ ಸಂಘಟಿಸಲು ಸಮಯವನ್ನೂ ಹಾಗೂ ಸಂಜೆಯ ರಾಜಕೀಯ ಚರ್ಚೆಯ ಮೇಲೆ ಪ್ರಭಾವ ಬೀರಲು ಅವಕಾಶವನ್ನೂ ಕಲ್ಪಿಸುತ್ತದೆ.

ಬೀದಿ ಪ್ರತಿಭಟನೆಯ ಹಿಂದೆ ರಾಹುಲ್ ಅವರ ಬೆಳಗಿನ ದಿನಚರಿ

"ಬೀದಿ ಪ್ರತಿಭಟನೆಯ ಹಿಂದೆ ಹೆಚ್ಚು ವ್ಯವಸ್ಥಿತವಾದ ದಿನಚರಿಯಿದೆ" ಎಂದು ಕಾಂಗ್ರೆಸ್ ಅನ್ನು ಹತ್ತಿರದಿಂದ ಗಮನಿಸುವ, ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಪತ್ರಕರ್ತರೊಬ್ಬರು ಹೇಳಿದ್ದಾರೆ. ರಾಹುಲ್ ಗಾಂಧಿ ತಮ್ಮ ದಿನವನ್ನು ಸಾಮಾನ್ಯ ಸಮಯದಲ್ಲಿ ಪ್ರಾರಂಭಿಸುತ್ತಾರೆ. ಫಿಟ್‌ನೆಸ್ ದಿನಚರಿಯನ್ನು ಮುಗಿಸಿ, ಉಪಾಹಾರ ಸೇವಿಸಿದ ನಂತರ ಪ್ರಿಯಾಂಕಾ ಅವರೊಂದಿಗೆ ಅಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ನಂತರ ಅವರು ತಮ್ಮ ತಂಡದೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುತ್ತಾರೆ. ರಾಜಕೀಯ ತಂತ್ರಗಾರಿಕೆ, ಸಂದೇಶ ಕಳುಹಿಸುವಿಕೆ ಮತ್ತು ಮುಂಬರುವ ಕಾರ್ಯಕ್ರಮಗಳ ಪ್ರಸ್ತುತಿಯ ಕುರಿತು ಚರ್ಚೆಗಳು ಗಂಟೆಗಳ ಕಾಲ ಮುಂದುವರಿಯಬಹುದು ಎಂದು ಆ ಪತ್ರಕರ್ತರು ಹೇಳಿರುವುದಾಗಿ 'ಇಂಡಿಯಾ ಟುಡೆ' ವರದಿ ಉಲ್ಲೇಖಿಸಿದೆ.

ಹಿರಿಯ ಕಾಂಗ್ರೆಸ್ ನಾಯಕರು ಸಹ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಆದರೆ ಜಂಟಿ ಕಾರ್ಯಕ್ರಮವನ್ನು ನಿಗದಿಪಡಿಸಿದಾಗ ರಾಹುಲ್ ಸ್ವತಃ 'ಇಂಡಿಯಾ' ಒಕ್ಕೂಟದ ನಾಯಕರನ್ನು ಸಂಪರ್ಕಿಸುತ್ತಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ವಿರೋಧ ಪಕ್ಷದ ಮಿತ್ರಪಕ್ಷಗಳೊಂದಿಗೆ ಸಮನ್ವಯವನ್ನು ನಿರ್ವಹಿಸುತ್ತಿದ್ದ ಹಿಂದಿನ ವ್ಯವಸ್ಥೆಯಿಂದ ಈ ನೇರ ಸಂಪರ್ಕವು ಭಿನ್ನವಾಗಿದೆ ಎಂದು 'ಇಂಡಿಯಾ ಟುಡೆ ಟಿವಿ'ಯ ರಾಹುಲ್ ಗೌತಮ್ ಹೇಳಿದರು. 'ಇಂಡಿಯಾ' ಒಕ್ಕೂಟವನ್ನು ಒಳಗೊಂಡ ಪ್ರತಿಭಟನೆಗೆ ಕೇವಲ ನಾಯಕರು ಬೀದಿಗಿಳಿಯುವ ನಿರ್ಧಾರಕ್ಕಿಂತ ಹೆಚ್ಚಿನ ತಯಾರಿ ಬೇಕಾಗುತ್ತದೆ. ಪಕ್ಷಗಳು ಭಾಗವಹಿಸುವಿಕೆಯನ್ನು ಸಮನ್ವಯಗೊಳಿಸಬೇಕು, ಬೇಡಿಕೆಗಳ ಬಗ್ಗೆ ಒಮ್ಮತಕ್ಕೆ ಬರಬೇಕು ಮತ್ತು ಸ್ಪಷ್ಟ ರಾಜಕೀಯ ಸಂದೇಶವನ್ನು ನೀಡಬಲ್ಲ ಕಾರ್ಯಕ್ರಮವನ್ನು ಆಯೋಜಿಸಬೇಕು.

ಈ ವಿವರಗಳನ್ನು ನಿರ್ವಹಿಸಲು ರಾಹುಲ್ ವಿಶೇಷ ತಂಡವನ್ನು ರಚಿಸಿದ್ದಾರೆ ಮತ್ತು ಯೋಜನೆ ಹಾಗೂ ಪ್ರಸ್ತುತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದು ದಿಲ್ಲಿ ಮೂಲದ ಹಿರಿಯ ಪತ್ರಕರ್ತರು ತಿಳಿಸಿದರು. ರಾಹುಲ್ ನಿತ್ಯವೂ ತಡವಾಗಿ ಏಳುತ್ತಾರೆಂಬ ಆರೋಪವನ್ನು ಅವರು ತಳ್ಳಿಹಾಕುತ್ತಾ, ಅವರನ್ನು "ಫಿಟ್‌ನೆಸ್ ಉತ್ಸಾಹಿ" ಎಂದು ಬಣ್ಣಿಸಿದರು.

ಹಿರಿಯ ಪತ್ರಕರ್ತರ ಈ ವಿವರಣೆಯು ಇದು ಬೃಹತ್ ಮತ್ತು ಸಮನ್ವಯದ ಕಾರ್ಯಾಚರಣೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಇದರಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅತ್ಯಂತ ಗೋಚರಿಸುವ ಒಂದು ಭಾಗವಷ್ಟೇ. ಆದರೆ, ಸಿದ್ಧತೆಯ ಹೆಚ್ಚಿನ ಭಾಗವು ರಾಹುಲ್ ಪ್ರತಿಭಟನಾ ಸ್ಥಳಕ್ಕೆ ತಲುಪುವ ಮುಂಚೆಯೇ ನಡೆಯುತ್ತದೆ.

ಖಾನ್ ಚಾಚಾ ರೋಲ್ಸ್ ಮತ್ತು ಮಧ್ಯಾಹ್ನದ ಊಟದ ರಾಜಕೀಯ

ರಾಹುಲ್ ಅವರ ಪ್ರತಿಭಟನೆಯ ದಿನಚರಿಯಲ್ಲಿ ವಿನೋದದ ಮಗ್ಗುಲೂ ಇದೆ. ಕಾಂಗ್ರೆಸ್ ನೇತೃತ್ವದ ಈ ರಾಜಕೀಯ ನಾಟಕದಲ್ಲಿ ಆಹಾರವು ಅನಿರೀಕ್ಷಿತವಾಗಿ ಪ್ರಮುಖ ಪಾತ್ರ ವಹಿಸಿದೆ.

ಖಾನ್ ಚಾಚಾ ರೋಲ್, ಸಾಗರ್ ರತ್ನದಲ್ಲಿ ಮಧ್ಯಾಹ್ನದ ಊಟ ಮತ್ತು ಕನ್ನಾಟ್ ಪ್ಲೇಸ್‌ನ ಮೋಯೆಟ್ಸ್‌ ನಲ್ಲಿನ ಉಪಾಹಾರ—ಇವೆಲ್ಲವೂ ಜ್ಞಾನೇಶ್ ಕುಮಾರ್ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಯ ವರದಿಗಳಲ್ಲಿ ಜಾಗ ಪಡೆದುಕೊಂಡವು. ರಾಹುಲ್ 'ಸ್ಟಿಂಗ್' ಎನರ್ಜಿ ಡ್ರಿಂಕ್‌ನ ಒಂದು ಗುಟುಕನ್ನೂ ಕುಡಿದರು. ಅದನ್ನು ತಮ್ಮ ಸಹೋದರಿ ಪ್ರಿಯಾಂಕಾಗೆ ನೀಡಿದಾಗ, ಅವರು ಅದನ್ನು ನಿರಾಕರಿಸಿದರು.

ಜೀವನಶೈಲಿ ಮತ್ತು ಆಹಾರ ವಿಷಯಗಳನ್ನು ವರದಿ ಮಾಡುವ 'ಇಂಡಿಯಾ ಟುಡೆ ಡಿಜಿಟಲ್'ನ ಮೇಧಾ ಚಾವ್ಲಾ, ರಾಹುಲ್ ಮತ್ತು ಇತರ ವಿರೋಧ ಪಕ್ಷದ ರಾಜಕಾರಣಿಗಳು ಪ್ರತಿಭಟನೆಗೆ ತೆರಳುವ ಮುನ್ನ ಏನು ತಿಂದರು ಎಂಬುದನ್ನು ಪರಿಶೀಲಿಸಿದರು.

ಸಾಗರ್ ರತ್ನದಲ್ಲಿ ರಾಹುಲ್ ಪನೀರ್ ಬಟರ್ ಮಸಾಲಾ ಜೊತೆಗೆ ಅರ್ಧ ರೋಟಿ ತಿಂದರು. ಮೋಯೆಟ್ಸ್‌ನಲ್ಲಿ ಅವರು 'ಇಂಡಿಯಾ' ಒಕ್ಕೂಟದ ಸುಮಾರು 100 ಸಂಸದರೊಂದಿಗೆ ಸಸ್ಯಾಹಾರಿ ಊಟದ ಕೂಟದಲ್ಲಿ ಭಾಗವಹಿಸಿದರು. ಇದರಲ್ಲಿ ಬಾದಾಮ್ ಶೋರ್ಬಾ, ದಹಿ ಭಲ್ಲಾ, ದಾಲ್ ಮಖನಿ, ವಿವಿಧ ರೀತಿಯ ರೋಟಿಗಳು ಮತ್ತು ಐಸ್‌ಕ್ರೀಂ ಸೇರಿದ್ದವು.

ಈ ಊಟಗಳು ಕೇವಲ ತಿಂಡಿಗಳ ಪಟ್ಟಿಗಷ್ಟೇ ಸೀಮಿತವಾಗಿರದೆ, ರಾಜಕೀಯ ಉದ್ದೇಶವನ್ನೂ ಪೂರೈಸುತ್ತವೆ. ವಿರೋಧ ಪಕ್ಷದ ನಾಯಕರಿಗೆ ಪರಸ್ಪರ ಸಮಾಲೋಚಿಸಲು, ತಮ್ಮ ಮುಂದಿನ ನಡೆಗಳನ್ನು ಸಂಯೋಜಿಸಲು ಮತ್ತು ಮುಂದಿನ ನಡೆಯ ಬಗ್ಗೆ ಜಗತ್ತು ಕಾಯುವಂತೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಅವಕಾಶ ಸಿಗುತ್ತದೆ.

ಈ ಫೋಟೊಗಳು ನಂತರ ಬೀದಿಗಳಲ್ಲಿ ನಡೆಯುವ ಸಂಘರ್ಷಕ್ಕೆ ಮಾನವೀಯ ಸ್ಪರ್ಶದ ವ್ಯತ್ಯಾಸವನ್ನು ನೀಡುತ್ತವೆ. ಒಂದು ಕ್ಷಣದಲ್ಲಿ ನಾಯಕರು ಊಟವನ್ನು ಹಂಚಿಕೊಳ್ಳುತ್ತಾರೆ, ಮರುಕ್ಷಣವೇ ಅವರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಎದುರಿಸುತ್ತಾರೆ. ರಾಜಕೀಯ ಸುದ್ದಿಗಳು ಛಾಯಾಚಿತ್ರಗಳು, ಕಿರು ವಿಡಿಯೊಗಳು, ಭಾಷಣಗಳು ಮತ್ತು ಸನ್ನಿವೇಶಗಳ ಮೂಲಕ ತಲುಪುವ ಈ ಯುಗದಲ್ಲಿ, ಅರ್ಧ ರೋಟಿಯ ಊಟವೂ ಚರ್ಚೆಯ ವಸ್ತುವಾಗಬಹುದು.

ರಾಹುಲ್ ಗಾಂಧಿಯವರ ಆಕ್ರಮಣಕಾರಿ ವ್ಯಕ್ತಿತ್ವಕ್ಕೆ ಚುನಾವಣಾ ಪರೀಕ್ಷೆ

ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಪತ್ರಕರ್ತರು, ರಾಹುಲ್ ಅವರ ಸಾರ್ವಜನಿಕ ನಡವಳಿಕೆ ಮತ್ತು ಪ್ರಸ್ತುತಿಯೂ ಸುಧಾರಿಸಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ಯಾವಾಗಲೂ ತಮ್ಮ ನಡವಳಿಕೆಯಲ್ಲಿ ಸಭ್ಯರಾಗಿದ್ದರು, ಆದರೆ ಆವೇಶಕ್ಕೆ ಒಳಗಾಗುತ್ತಿದ್ದರು ಎಂದು ಅವರು ಹೇಳಿದರು. ರಾಹುಲ್ ಈಗ ಹೆಚ್ಚು ಆಕ್ರಮಣಕಾರಿ ಮತ್ತು ಆತ್ಮವಿಶ್ವಾಸದಿಂದ ಕೂಡಿದವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ಮತ್ತು ಜ್ಞಾನೇಶ್ ಕುಮಾರ್ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಗಳು ಈ ಬದಲಾವಣೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿವೆ.

ರಾಹುಲ್ ಗಂಟೆಗಟ್ಟಲೆ ಧರಣಿ ಕುಳಿತುಕೊಳ್ಳುವುದು, ಪೊಲೀಸರೊಂದಿಗೆ ಸಂಘರ್ಷಕ್ಕಿಳಿಯುವುದು ಮತ್ತು ಬಂಧನಕ್ಕೊಳಗಾದ ನಂತರವೂ ಪದೇ ಪದೇ ಬೀದಿಗಿಳಿದು ಹೋರಾಡುವುದು, ರಾಜಕೀಯ ಹೋರಾಟವನ್ನು ಮುಂದುವರಿಸಲು ಸಿದ್ಧರಿರುವ ನಾಯಕ ಎಂಬ ಸ್ಪಷ್ಟ ವ್ಯಕ್ತಿತ್ವವನ್ನು ಸ್ಥಾಪಿಸಲು ನೆರವಾಗಿದೆ. ಆದರೆ, ಈ ಜನಪ್ರಿಯತೆಗೆ ತನ್ನದೇ ಆದ ಮಿತಿಗಳಿವೆ.

ಟೆಲಿವಿಷನ್ ಪ್ರಸಾರ ಮತ್ತು ವೈರಲ್ ಚಿತ್ರಗಳು ವಿಷಯವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಬಲ್ಲವು. ಆದರೆ ಸಾರ್ವಜನಿಕರು ಕಾಂಗ್ರೆಸ್‌ನ ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆ ಅಥವಾ ಪಕ್ಷವು ಈ ಗಮನವನ್ನು ಮತಗಳಾಗಿ ಪರಿವರ್ತಿಸುತ್ತದೆ ಎಂದು ಇವು ಖಾತರಿಪಡಿಸುವುದಿಲ್ಲ. ಕಿಕ್ಕಿರಿದ ಪ್ರತಿಭಟನೆಯು ಸಂಘಟನಾತ್ಮಕ ಶಕ್ತಿಯನ್ನು ಬಿಂಬಿಸಬಹುದೇ ಹೊರತು, ಅದು ವ್ಯಾಪಕ ಚುನಾವಣಾ ಬೆಂಬಲವನ್ನು ಸೂಚಿಸಬೇಕೆಂದೇನೂ ಇಲ್ಲ.

ರಾಹುಲ್ ಅವರ ಸುತ್ತಲಿನ ನಿರೀಕ್ಷೆಗಳು ಈ ಸವಾಲನ್ನು ಇನ್ನಷ್ಟು ಹೆಚ್ಚಿಸಿವೆ.

ನೆಹರೂ-ಗಾಂಧಿ ಕುಟುಂಬದ ಸದಸ್ಯರೆಲ್ಲರೂ ದೊಡ್ಡ ರಾಜಕೀಯ ಮೈಲುಗಲ್ಲುಗಳನ್ನು ಸಾಧಿಸಿದ್ದಾರೆ. ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಪ್ರಧಾನಮಂತ್ರಿಗಳಾದರು, ರಾಜೀವ್ ಗಾಂಧಿ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರು ಹಾಗೂ ಸೋನಿಯಾ ಗಾಂಧಿ ಅವರು 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅನ್ನು ಸತತ ಗೆಲುವಿನತ್ತ ಮುನ್ನಡೆಸಿದರು. ಈಗ ರಾಹುಲ್ ಗಾಂಧಿ ತಮ್ಮ ಛಾಪನ್ನು ಮೂಡಿಸುವ ಸಮಯ ಬಂದಿದೆ ಎಂದು ಪಕ್ಷದ ನಾಯಕರು ನಂಬಿದ್ದಾರೆ ಎಂದು ಕಿದ್ವಾಯಿ ಹೇಳಿದರು.

ಈ ನಿರೀಕ್ಷೆಯು ಅವರ ರಾಜಕಾರಣದ ಮೇಲೆ ಮತ್ತಷ್ಟು ಹೊರೆಯನ್ನು ಹೇರಿದೆ. ಕಾಂಗ್ರೆಸ್ ಕೇವಲ ಗಮನ ಸೆಳೆಯಬಲ್ಲದು ಮಾತ್ರವಲ್ಲದೆ, ವಿಶಾಲವಾದ ವಿರೋಧ ಪಕ್ಷಗಳನ್ನು ಮುನ್ನಡೆಸಬಹುದು, ಹೋರಾಟವನ್ನು ಮುಂದುವರಿಸಬಹುದು ಮತ್ತು ಸುದ್ದಿಯಿಂದಾಚೆಗೂ ಬಿಜೆಪಿಯನ್ನು ಎದುರಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಬೇಕು.

"ಯುವ ಮತ್ತು ಮಧ್ಯಮ ವರ್ಗದ ಮತದಾರರು ರಾಹುಲ್ ಅವರನ್ನು ವಿಭಿನ್ನವಾಗಿ ನೋಡಲು ಆರಂಭಿಸುತ್ತಿದ್ದಾರೆ. CJP ಸೃಷ್ಟಿಸಿದ ಅಲೆ ಮತ್ತು ಅದನ್ನು ಮುನ್ನೆಲೆಗೆ ತರುವಲ್ಲಿ ರಾಹುಲ್ ವಹಿಸಿದ ಪಾತ್ರವೇ ಇದಕ್ಕೆ ಕಾರಣ" ಎಂದು ನೀರ್ಜಾ ಚೌಧರಿ ಹೇಳುತ್ತಾರೆ.

ರಾಹುಲ್ ಅವರ ದಿನಚರಿಯು ಹೆಚ್ಚು ವ್ಯವಸ್ಥಿತವಾದ ರಾಜಕೀಯ ಶೈಲಿಯ ನೋಟವನ್ನು ನೀಡುತ್ತದೆ. ಪ್ರಿಯಾಂಕಾ ಅವರಿಗೆ ಮೊದಲ ಕರೆ. ಅಂದಿನ ಯೋಜನೆಗಳನ್ನು ಅಂತಿಮಗೊಳಿಸಲು ವಿಡಿಯೊ ಕಾನ್ಫರೆನ್ಸ್‌ಗಳು. ಪಕ್ಷದ ಕಾರ್ಯಕರ್ತರು ಒಟ್ಟುಗೂಡುತ್ತಾರೆ, ವಿರೋಧ ಪಕ್ಷದ ಮಿತ್ರಪಕ್ಷಗಳು ಒಂದೆಡೆ ಸೇರುತ್ತವೆ ಮತ್ತು ಮಧ್ಯಾಹ್ನದ ವೇಳೆಗೆ ಹೋರಾಟವು ದಿಲ್ಲಿಯ ಬೀದಿಗಳಲ್ಲಿ ನಡೆಯುತ್ತದೆ. ಕೆಲವೊಮ್ಮೆ ಬ್ಯಾರಿಕೇಡ್ ಇರುತ್ತದೆ, ಕೆಲವೊಮ್ಮೆ ದೀರ್ಘಾವಧಿಯ ಧರಣಿ ಇರುತ್ತದೆ. ಸಂಘರ್ಷ ಆರಂಭವಾಗುವ ಮುನ್ನ ಒಂದು ಬೌಲ್ ಪನೀರ್ ಬಟರ್ ಮಸಾಲಾ ಇರುತ್ತದೆ.

ಕಾಂಗ್ರೆಸ್ ಅನ್ನು ನಿರಂತರವಾಗಿ ಸುದ್ದಿಯಲ್ಲಿರಿಸಲು ರಾಹುಲ್ ಗಾಂಧಿ ಹೊಸ ದಾರಿಯನ್ನು ಕಂಡುಕೊಂಡಿರಬಹುದು. ಆದರೆ ಬೀದಿಗಳಲ್ಲಿ ಸಿಗುವ ಈ ಜನಪ್ರಿಯತೆಯ ಗಮನವು ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಎಂಬ ಕುತೂಹಲವಿದೆ.

ಸೌಜನ್ಯ: India today

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor