Photo Credit : scroll.in

ಉಚಿತ ಶಾಲಾ ಬಿಸಿಯೂಟ ಯೋಜನೆಗಳ ಕುರಿತಾದ ಚರ್ಚೆಗಳು ಸಾಮಾನ್ಯವಾಗಿ ಅರ್ಹತೆ, ಪೌಷ್ಟಿಕಾಂಶ ಮತ್ತು ಆರೋಗ್ಯ, ಯೋಜನೆಯ ವೆಚ್ಚ ಹಾಗೂ ಮಕ್ಕಳ ಬಡತನ ನಿವಾರಣೆಯ ಸುತ್ತಲೇ ಗಿರಕಿ ಹೊಡೆಯುತ್ತವೆ. ಇವೆಲ್ಲವೂ ಮುಖ್ಯವಾದ ಪ್ರಶ್ನೆಗಳೇ. ಆದರೆ, ಹೆಚ್ಚು ಗಮನ ಸೆಳೆಯದ ಮತ್ತೊಂದು ಪ್ರಮುಖ ಪ್ರಶ್ನೆಯಿದೆ. ಅದೇನೆಂದರೆ, ಶಾಲೆಯಲ್ಲಿ ನೀಡುವ ಆಹಾರವನ್ನು ಕುಟುಂಬಗಳು ಹೇಗೆ ಅರ್ಥೈಸಿಕೊಳ್ಳುತ್ತವೆ ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು.

ಜಗತ್ತಿನಾದ್ಯಂತ ಶಾಲಾ ಊಟದ ಯೋಜನೆಗಳನ್ನು ಕಾಡುತ್ತಿರುವ 'ಅರ್ಹತೆ ಮತ್ತು ಬಳಕೆಯ ನಡುವಿನ ಅಂತರ'ವನ್ನು (ಅಂದರೆ, ಅರ್ಹರಾಗಿದ್ದರೂ ಯೋಜನೆಯನ್ನು ಬಳಸಿಕೊಳ್ಳದಿರುವುದು) ಸರಿಪಡಿಸಲು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಬಹಳ ಮುಖ್ಯವಾಗಿದೆ.

ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಭಾರತವು ಒಂದು ಉತ್ತಮ ಉದಾಹರಣೆಯಾಗಿದೆ. ಈಗ 'ಪಿಎಂ ಪೋಷಣ್' (PM Poshan) ಎಂದು ಕರೆಯಲ್ಪಡುವ ಭಾರತದ ಮಧ್ಯಾಹ್ನದ ಬಿಸಿಯೂಟ ಯೋಜನೆಯು 2025ರಲ್ಲಿ 30ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ವಿಶ್ವದ ಅತಿ ದೊಡ್ಡ ಮತ್ತು ಅತಿ ದೀರ್ಘಕಾಲದಿಂದ ನಡೆಯುತ್ತಿರುವ ಶಾಲಾ ಆಹಾರ ಯೋಜನೆಗಳಲ್ಲಿ ಒಂದಾಗಿದೆ. ದೇಶಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಿ-ಪ್ರೈಮರಿಯಿಂದ 8ನೇ ತರಗತಿಯವರೆಗೆ (ಸುಮಾರು 6ರಿಂದ 14 ವರ್ಷ ವಯಸ್ಸಿನ) ಓದುತ್ತಿರುವ 11.2 ಕೋಟಿ ಮಕ್ಕಳಿಗೆ ಶಾಲಾ ದಿನಗಳಲ್ಲಿ ಈ ಯೋಜನೆಯಡಿ ಉಚಿತವಾಗಿ ಬಿಸಿಯೂಟ ನೀಡಲಾಗುತ್ತದೆ.

ಕುಟುಂಬಗಳು ಶಾಲಾ ಬಿಸಿಯೂಟವನ್ನು ಹೇಗೆ ನೋಡುತ್ತವೆ ಮತ್ತು ಅವರ ಅಭಿಪ್ರಾಯವೇನು ಎಂಬುದರ ಕುರಿತು ದಿ ಕಾನ್ವರ್ಸೇಷನ್ (https://theconversation.com/three-decades-of-free-school-meals-in-india-dignity-aspiration-and-the-social-meaning-of-food-295715) ನಡೆಸಿದ ಅಧ್ಯಯನವು ಮಹತ್ವದ ಒಳನೋಟಗಳನ್ನು ನೀಡಿದೆ. ಇದಕ್ಕಾಗಿ ದಿ ಕಾನ್ವರ್ಸೇಷನ್ ತಂಡ ಉತ್ತರ ಪ್ರದೇಶ ಮತ್ತು ಗೋವಾದ 86 ಕುಟುಂಬಗಳ ಸದಸ್ಯರನ್ನು ಸಂದರ್ಶಿಸಿದೆ. 134 ವಯಸ್ಕರು ಮತ್ತು 112 ಮಕ್ಕಳೊಂದಿಗೆ ನಡೆಸಿದ ಸುದೀರ್ಘ ಮಾತುಕತೆಗಳನ್ನು ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ.

ಮಕ್ಕಳ ಪೌಷ್ಟಿಕಾಂಶ ಮತ್ತು ಶಾಲಾ ಹಾಜರಾತಿಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರೆ, ಈ ಯೋಜನೆಯ ಮಹತ್ವವು ಕೇವಲ ಈ ಎರಡು ಅಂಶಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ. ಮಕ್ಕಳು ಆಹಾರದ ರುಚಿ ಮತ್ತು ಅದು ತಮ್ಮ ಹೊಟ್ಟೆ ತುಂಬಿಸುತ್ತದೆಯೇ ಎಂಬುದರ ಬಗ್ಗೆ ಮಾತನಾಡಿದರು. ಇನ್ನೊಂದೆಡೆ, ಪೋಷಕರು ನಾವು ಕೇಳಿದಾಗ ಮಾತ್ರ ಊಟದ ಪೌಷ್ಟಿಕಾಂಶದ ಬಗ್ಗೆ ಪ್ರಸ್ತಾಪಿಸಿದರು. ಅದರ ಬದಲಾಗಿ, ಅವರು ಈ ಯೋಜನೆಯನ್ನು ತಮ್ಮ ಕನಸುಗಳು, ಸ್ವಾಭಿಮಾನ ಮತ್ತು ಅನಿಶ್ಚಿತ ಬದುಕಿನ ಒತ್ತಡಗಳ ಜೊತೆ ತುಲನೆ ಮಾಡಿ ನೋಡಿದ್ದಾರೆ.

ಕಡಿಮೆ ಆದಾಯದ ಕುಟುಂಬಗಳಿಗೆ ಉಚಿತ ಶಾಲಾ ಊಟವನ್ನು ಒಪ್ಪಿಕೊಳ್ಳುವುದು ಕೇವಲ 'ಹೌದು' ಅಥವಾ 'ಇಲ್ಲ' ಎಂಬ ಸರಳ ನಿರ್ಧಾರವಲ್ಲ. ಮನೆಯಲ್ಲಿರುವ ಆಹಾರ, ಶಾಲೆಗೆ ಹೋಗಿ ಬರಲು ತಗಲುವ ಖರ್ಚು, ಮನೆಗೆಲಸ ಮತ್ತು ಕುಟುಂಬದ ದುಡಿಮೆಯಲ್ಲಿ ಮಕ್ಕಳ ಪಾಲು ಹಾಗೂ ಭವಿಷ್ಯದ ಕುರಿತಾದ ಅವರ ನಿರೀಕ್ಷೆಗಳು ಹೀಗೆ ಕುಟುಂಬದ ಎಲ್ಲಾ ಅಗತ್ಯಗಳೊಂದಿಗೆ ಇದನ್ನು ತೂಗಿ ನೋಡಲಾಗುತ್ತದೆ. ಕುಟುಂಬಗಳು ಈ ಲೆಕ್ಕಾಚಾರವನ್ನು ಹೇಗೆ ಹಾಕುತ್ತವೆ ಎಂಬುದರ ಮೇಲೆಯೇ, ಶಾಲಾ ಬಿಸಿಯೂಟ ಯೋಜನೆಯು ನಿಜವಾಗಿಯೂ ತಲುಪಬೇಕಾದ ಮಕ್ಕಳನ್ನು ತಲುಪುತ್ತದೆಯೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ.

►ಆಹಾರಕ್ಕಿದೆ ಸಾಮಾಜಿಕ ಅರ್ಥ

ಶಾಲಾ ಬಿಸಿಯೂಟವು ಇತರರಿಗೆ ಏನು ಸಂದೇಶ ರವಾನಿಸುತ್ತದೆ ಎಂಬ ಅಂಶವೂ ಅದರ ಬಳಕೆಯ ಮೇಲೆ ಪ್ರಭಾವ ಬೀರಿದೆ. ಊಟಕ್ಕಾಗಿ ಸಾಲಿನಲ್ಲಿ ನಿಲ್ಲುವುದು, ಮಾಸಿಕ ರಿಜಿಸ್ಟರ್ ನಲ್ಲಿ ತಮ್ಮ ಹೆಸರು ಬರೆಸುವುದು ಅಥವಾ ಊಟ ಕಡಿಮೆ ಬಿದ್ದಾಗ ಮತ್ತೊಮ್ಮೆ ಕೇಳುವುದು ಕೆಲವು ಮಕ್ಕಳಿಗೆ ಮುಜುಗರ ತರುತ್ತಿತ್ತು. ಇವೆಲ್ಲವೂ ತಮ್ಮ ಬಡತನ ಅಥವಾ ಹಸಿವಿನ ಅನಿವಾರ್ಯತೆಯನ್ನು ಸಹಪಾಠಿಗಳು ಮತ್ತು ಶಿಕ್ಷಕರ ಮುಂದೆ ಬಹಿರಂಗಪಡಿಸಿದಂತಾಗುತ್ತಿತ್ತು. ಕೆಲವು ಮಕ್ಕಳಿಗೆ ಊಟದ ಅಗತ್ಯವಿದ್ದಷ್ಟೇ, ಆ ಅಗತ್ಯವನ್ನು ಇತರರು ಹೇಗೆ ನೋಡುತ್ತಾರೆ ಎಂಬುದು ಕೂಡ ಮುಖ್ಯವಾಗಿತ್ತು.

ಮಕ್ಕಳು ಹೇಗೆ ಊಟ ಮಾಡುತ್ತಾರೆ ಎಂಬುದಕ್ಕೆ ಪೋಷಕರು ಕೂಡ ಭಾವನಾತ್ಮಕ ಅರ್ಥಗಳನ್ನು ಕಲ್ಪಿಸಿಕೊಂಡಿದ್ದರು. ಶಾಲಾ ಊಟವನ್ನು ಅವಲಂಬಿಸುವುದು ಕುಟುಂಬವನ್ನು ಪೋಷಿಸುವ ತಮ್ಮ ಜವಾಬ್ದಾರಿಗೆ ವಿರುದ್ಧವಾದುದು ಎಂದು ಕೆಲವು ಹೆತ್ತವರು ಭಾವಿಸಿದರು. ಇನ್ನೊಂದೆಡೆ, ತಾಯಂದಿರು ತಮ್ಮ ಮಮತೆಯ ಸಂಕೇತವಾಗಿ ಮನೆಯಿಂದಲೇ ಊಟದ ಡಬ್ಬಿ ಕಟ್ಟಿಕೊಡುವುದನ್ನು ಮುಂದುವರಿಸಿದರು.

ಜಾತಿ ಮತ್ತು ವರ್ಗ ಕೂಡ ಊಟದ ರೀತಿಯನ್ನು ನಿರ್ಧರಿಸುತ್ತಿದ್ದವು. ಮಡಿವಂತಿಕೆಯ ಕಾರಣದಿಂದಾಗಿ ಕೆಲವು ಕುಟುಂಬಗಳು ತಮ್ಮ ಮಕ್ಕಳಿಗೆ ಮನೆಯಿಂದಲೇ ತಟ್ಟೆಗಳನ್ನು ಕಳುಹಿಸುತ್ತಿದ್ದವು. ಇನ್ನು ಕೆಲವು ಅನುಕೂಲಸ್ಥ ಪೋಷಕರು, ಸಹಾಯದ ಅಗತ್ಯವಿರುವ ಬಡ ಮಕ್ಕಳಿಂದ ತಮ್ಮ ಮಕ್ಕಳನ್ನು ದೂರವಿಡುವ ಉದ್ದೇಶದಿಂದ ಶಾಲಾ ಬಿಸಿಯೂಟದಿಂದ ಸಂಪೂರ್ಣವಾಗಿ ದೂರವಿಟ್ಟಿದ್ದರು.

ಉಚಿತ ಬಿಸಿಯೂಟವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ಲಭ್ಯವಿರುವುದರಿಂದ, ಶಾಲೆಯ ಆಯ್ಕೆಯೇ ಆಹಾರದ ಆಯ್ಕೆಯೂ ಆಗಿಬಿಟ್ಟಿದೆ. ಈ ಯೋಜನೆಯ ಲಾಭ ಪಡೆಯಬಹುದಾಗಿದ್ದ ಕೆಲವು ಕುಟುಂಬಗಳು, ಉಚಿತ ಊಟವನ್ನೇ ಬಿಟ್ಟು ತಮ್ಮ ಮಕ್ಕಳನ್ನು ಕಡಿಮೆ ಶುಲ್ಕದ ಖಾಸಗಿ ಶಾಲೆಗಳಿಗೆ ಸೇರಿಸಿವೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಹೆಚ್ಚಿನ ಜವಾಬ್ದಾರಿ, ಮಕ್ಕಳತ್ತ ಹೆಚ್ಚು ಗಮನಹರಿಸುವ ಶಿಕ್ಷಕರು ಮತ್ತು ಉತ್ತಮ ಭವಿಷ್ಯದ ನಿರೀಕ್ಷೆಯಿಂದ ಅವರು ಈ ಶಾಲೆಗಳತ್ತ ಮುಖ ಮಾಡಿದ್ದಾರೆ.

ಇದರರ್ಥ ಅವರಿಗೆ ಆಹಾರ ಮುಖ್ಯವಾಗಿರಲಿಲ್ಲ ಎಂದಲ್ಲ. ಖಾಸಗಿ ಶಾಲೆಯ ಶುಲ್ಕ ಕಟ್ಟಲು ಕೆಲವು ಕುಟುಂಬಗಳು ಮನೆಯಲ್ಲಿನ ಆಹಾರದ ಖರ್ಚನ್ನೇ ಕಡಿತಗೊಳಿಸಿವೆ. ಈ ಕುಟುಂಬಗಳ ಪಾಲಿಗೆ, ಇಂದು ಕಡಿಮೆ ತಿನ್ನುವುದು ಭವಿಷ್ಯದ ಭರವಸೆಗಾಗಿ ತೆರುವ ಬೆಲೆಯಾಗಿತ್ತು. ಯೋಜನೆಯ ದೃಷ್ಟಿಕೋನದಿಂದ ಗೊಂದಲಮಯವಾಗಿ ಕಾಣುವ ಇಂತಹ ನಿರ್ಧಾರಗಳು, ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಕುಟುಂಬದ ದೃಷ್ಟಿಯಲ್ಲಿ ಅರ್ಥಪೂರ್ಣವಾಗಿ ಕಾಣುತ್ತವೆ.

ಈ ಯೋಜನೆಯನ್ನು ಒಬ್ಬ ವಿದ್ಯಾರ್ಥಿಯನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗಿದೆ. ಆದರೆ, ಆಹಾರದ ಅಭದ್ರತೆಯನ್ನು ಇಡೀ ಕುಟುಂಬವೇ ಅನುಭವಿಸುತ್ತಿರುತ್ತದೆ. ಅತ್ಯಂತ ಬಡ ಕುಟುಂಬಗಳಿಗೆ, ಉಚಿತ ಶಿಕ್ಷಣದ ಹಿಂದಿರುವ ನಿತ್ಯದ ಪ್ರಯಾಣ ವೆಚ್ಚ ಅಥವಾ ದೊಡ್ಡ ಮಕ್ಕಳು ದುಡಿದು ತರಬಹುದಾದ ಆದಾಯದ ಮುಂದೆ ಒಂದು ಹೊತ್ತಿನ ಊಟ ದೊಡ್ಡದಾಗಿ ಕಾಣಿಸಲಿಲ್ಲ. ಹೀಗಾಗಿ ಕೆಲವು ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳಲಾಯಿತು ಅಥವಾ ಶಾಲೆಯನ್ನೇ ಬಿಡಿಸಲಾಯಿತು. ಇದರ ಅತಿ ಹೆಚ್ಚಿನ ಹೊರೆ ಬಿದ್ದಿದ್ದು ಹೆಣ್ಣುಮಕ್ಕಳ ಮೇಲೆ. ತಮಗಿಂತ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳಲು ಮತ್ತು ಮನೆ ನಿಭಾಯಿಸಲು ಹೆಣ್ಣುಮಕ್ಕಳೇ ಹೆಚ್ಚಾಗಿ ಶಾಲೆಯನ್ನು ಅರ್ಧಕ್ಕೆ ಬಿಡಬೇಕಾಯಿತು.

ಇವೆಲ್ಲವೂ ಈ ಯೋಜನೆಯ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ದಿಢೀರ್ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಶಾಲಾ ಬಿಸಿಯೂಟವೇ ಜೀವನಾಧಾರವಾಯಿತು. ಕೆಲವೊಮ್ಮೆ ಮಕ್ಕಳು ತರಕಾರಿ ತಿನ್ನಲು ಸಾಧ್ಯವಾಗುತ್ತಿದ್ದ ಏಕೈಕ ಜಾಗವೂ ಅದೇ ಆಗಿತ್ತು. ಒಂದು ಕುಟುಂಬಕ್ಕೆ ಅಷ್ಟೇನೂ ಮುಖ್ಯವಲ್ಲದ ಈ ಯೋಜನೆಯು, ಮತ್ತೊಂದು ಕುಟುಂಬಕ್ಕೆ ಅತ್ಯಗತ್ಯವಾದ ರಕ್ಷಣಾ ಕವಚವಾಗಿ ಕೆಲಸ ಮಾಡಿದೆ.

►ಭಾರತದಿಂದ ಜಗತ್ತಿಗೆ ಸಿಗುವ ಪಾಠಗಳು

ಯೋಜನೆಗೆ ಅರ್ಹರಾಗಿರುವುದು ಮತ್ತು ಅದನ್ನು ನಿಜವಾಗಿಯೂ ಬಳಸಿಕೊಳ್ಳುವುದರ ನಡುವಿನ ಹಂತದಲ್ಲೇ ಕುಟುಂಬಗಳ ಅನಿವಾರ್ಯ ಆಯ್ಕೆಗಳು ಮತ್ತು ಸಾಮಾಜಿಕ ಭಾವನೆಗಳು ಕೆಲಸ ಮಾಡುತ್ತವೆ. ಸರ್ಕಾರದ ನೆರವು ಪಡೆಯುತ್ತಿದ್ದೇನೆ ಎಂದು ಇತರರಿಗೆ ತಿಳಿದರೆ ಮುಜುಗರವಾಗುತ್ತದೆ ಎಂದು ಭಾವಿಸುವ ಮಗು, ಅಥವಾ ಅದನ್ನು ಸ್ವೀಕರಿಸಿದರೆ ಸಮಾಜ ತಮ್ಮನ್ನು ಕೀಳಾಗಿ ನೋಡುತ್ತದೆ ಎಂದು ಅಂದುಕೊಳ್ಳುವ ಪೋಷಕರು ಯೋಜನೆಯ ಅರ್ಹತಾ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರಬಹುದು. ಆದರೆ, ಒಂದು ಯೋಜನೆ ಯಶಸ್ವಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಇವರಿಬ್ಬರ ನಿರ್ಧಾರಗಳೇ ರೂಪಿಸುತ್ತವೆ. ಯೋಜನೆಗಳು ಸಾಮಾನ್ಯವಾಗಿ ಎಷ್ಟು ಜನ ಅರ್ಹರಿದ್ದಾರೆ ಮತ್ತು ಎಷ್ಟು ಮಂದಿ ಊಟ ಮಾಡಿದ್ದಾರೆ ಎಂಬ ಲೆಕ್ಕವನ್ನಷ್ಟೇ ಇಡುತ್ತವೆ. ಆದರೆ, ಕುಟುಂಬಗಳು ಏಕೆ ಭಾಗವಹಿಸುತ್ತಿವೆ ಅಥವಾ ಏಕೆ ದೂರ ಉಳಿಯುತ್ತಿವೆ ಎಂಬುದನ್ನು ಅವು ಅಪರೂಪಕ್ಕೊಮ್ಮೆ ಕೇಳುತ್ತವೆ.

ಭಾರತದ ಸಾರ್ವತ್ರಿಕ ಬಿಸಿಯೂಟ ವ್ಯವಸ್ಥೆಯು ಇಲ್ಲಿ ಒಂದು ಪ್ರಮುಖ ಮತ್ತು ಪ್ರಾಯೋಗಿಕ ಪಾಠವನ್ನು ನೀಡುತ್ತದೆ. ಶಾಲೆಯಲ್ಲಿ ಪ್ರತಿಯೊಂದು ಮಗುವೂ ಒಂದೇ ರೀತಿಯ ಊಟ ಮಾಡುವಾಗ, ಆ ಊಟವು ಆ ಕುಟುಂಬದ ಆರ್ಥಿಕ ಪರಿಸ್ಥಿತಿ ಏನೆಂಬುದನ್ನು ಬಹಿರಂಗಪಡಿಸುವುದಿಲ್ಲ. ಇಂಗ್ಲೆಂಡ್ ಮತ್ತು ಇತರ ದೇಶಗಳು ಆದಾಯದ ಆಧಾರದ ಮೇಲೆ ಊಟ ನೀಡುವ ಬಗ್ಗೆ ಹಾಗೂ ಶಾಲಾ ಆಹಾರದ ಸ್ವರೂಪದ ಬಗ್ಗೆ ಚರ್ಚಿಸುತ್ತಿರುವ ಈ ಹೊತ್ತಿನಲ್ಲಿ, ಸಾಮಾಜಿಕ ಕಳಂಕ ಮತ್ತು ಕುಟುಂಬದ ಭಾವನೆಗಳಿಗೆ ಆ ನಿರ್ಧಾರಗಳ ಕೇಂದ್ರ ಸ್ಥಾನ ನೀಡಬೇಕಿದೆ.

ಮಕ್ಕಳ ತಟ್ಟೆಗೆ ಆಹಾರ ಬಡಿಸುವುದು ಅತ್ಯಗತ್ಯ. ಆದರೆ, ಆ ಒಂದು ಹೊತ್ತಿನ ಊಟವು ಕುಟುಂಬದ ಬದುಕಿನಲ್ಲಿ ಯಾವ ಅರ್ಥವನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೂಡ ಶಾಲಾ ಬಿಸಿಯೂಟ ಯೋಜನೆಗಳನ್ನು ಉದ್ದೇಶಿತ ರೀತಿಯಲ್ಲಿ ಯಶಸ್ವಿಗೊಳಿಸಲು ಅಷ್ಟೇ ಮುಖ್ಯವಾಗಿದೆ.

ಸೌಜನ್ಯ: scroll.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com