ಜೆನ್ಸೆನ್ ಹುವಾಂಗ್ | Photo Credit : AP

ಚಿಪ್ ತಯಾರಿಕಾ ದೈತ್ಯ Nvidia ಮಂಡಳಿಯು ಜೆನ್ಸನ್ ಹುವಾಂಗ್ ಅವರನ್ನು ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮತ್ತು ಮಂಡಳಿಯ ನಿರ್ದೇಶಕರಾಗಿ ಮರುನೇಮಕ ಮಾಡಿದೆ. ರಾಜೀನಾಮೆ ಅಂಗೀಕರಿಸಿದ 11 ದಿನಗಳ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಕೆಲವೇ ದಿನಗಳ ಹಿಂದೆ ಅವರನ್ನು ಮತ್ತೆ ಸಿಇಒ ಆಗಿ ನೇಮಿಸುವ ಉದ್ದೇಶವಿಲ್ಲ ಎಂದು ಮಂಡಳಿ ಹೇಳಿದ್ದರೂ, ಇದೀಗ ತನ್ನ ನಿರ್ಧಾರವನ್ನು ಬದಲಿಸಿದೆ.

ಮಹಿಳೆಯರೊಂದಿಗಿನ ವಿವಾಹೇತರ ಸಂಬಂಧಗಳ ಆರೋಪ, ಅವರಲ್ಲಿ ಒಬ್ಬರು ಚೀನಾದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಶಂಕೆ, ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಹಾಗೂ Nvidiaದ ಚಿಪ್ ಗಳನ್ನು ಚೀನಾಕ್ಕೆ ರಫ್ತಿನ ಕುರಿತ ತನಿಖೆ, ಹೀಗೆ ಹಲವು ವಿವಾದಗಳ ನಡುವೆ ಹುವಾಂಗ್ ರಾಜೀನಾಮೆ ನೀಡಿದ್ದರು.

ಆದರೆ, ಮಂಡಳಿಯೊಂದಿಗಿನ ಸರಣಿ ಚರ್ಚೆಗಳು, ಅಮೆರಿಕ ಸರಕಾರದ ಹಿರಿಯ ಅಧಿಕಾರಿಗಳ ಅಭಿಪ್ರಾಯ, ಉದ್ಯೋಗಿಗಳು ಮತ್ತು ಹೂಡಿಕೆದಾರರ ಬೆಂಬಲ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದ ಬಳಿಕ ಹುವಾಂಗ್ ಮತ್ತೆ ಕಂಪೆನಿಯ ನಾಯಕತ್ವಕ್ಕೆ ಮರಳಿದ್ದಾರೆ.

ಮಂಡಳಿಯು ಹುವಾಂಗ್ ಅವರೊಂದಿಗೆ ನಡೆಸಿದ ಚರ್ಚೆಗಳ ಬಳಿಕ ಅವರ ಹೇಳಿಕೆಗಳಲ್ಲಿನ ಪ್ರಾಮಾಣಿಕತೆ ಮತ್ತು ಕಂಪೆನಿಯನ್ನು ಮುನ್ನಡೆಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಅವರ ಮರುನೇಮಕದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿಲ್ಲ ಎಂಬ ತೀರ್ಮಾನಕ್ಕೂ ಬಂದಿದೆ. ಆದರೆ, ಅವರ ವಿರುದ್ಧದ ಆರೋಪಗಳು ಮತ್ತು ವಿದೇಶಿ ಗೂಡಾಚಾರಿಣಿಯೊಂದಿಗಿನ ಸಂಪರ್ಕ ಪ್ರಯತ್ನಕ್ಕೆ ಸಂಬಂಧಿಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ.

►ಬಿಕ್ಕಟ್ಟಿಗೆ ಕಾರಣವೇನು?

ಈ ವಿವಾದಕ್ಕೆ ಹಲವು ವಾರಗಳಿಂದ ಪ್ರಕಟವಾಗುತ್ತಿದ್ದ ವರದಿಗಳು ಕಾರಣವಾಗಿದ್ದವು. ಅ. 29ರಂದು 'ನ್ಯೂಯಾರ್ಕ್ ಟೈಮ್ಸ್' ಪ್ರಕಟಿಸಿದ ವರದಿಯ ಪ್ರಕಾರ, ಸಿಂಗಾಪುರ ಮೂಲದ ಮೆಗಾಸ್ಪೀಡ್ (Megaspeed) ಕಂಪೆನಿಯ ಮಾಜಿ ಕಾರ್ಯನಿರ್ವಾಹಕಿ ಆಲಿಸ್ ಹುವಾಂಗ್ ಅವರು ಚೀನಾದ ಗುಪ್ತಚರ ಸಂಸ್ಥೆಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಶಂಕಿಸಿದ್ದರು.

ಮೆಗಾಸ್ಪೀಡ್ ಎನ್ವಿಡಿಯಾದ ಗ್ರಾಹಕ ಸಂಸ್ಥೆಯಾಗಿದ್ದು, ಆಲಿಸ್ ಹುವಾಂಗ್ ಅವರ ಮೇಲಿನ ಎಲೆಕ್ಟ್ರಾನಿಕ್ ಕಣ್ಗಾವಲಿನ ವೇಳೆ ಜೆನ್ಸನ್ ಹುವಾಂಗ್ ಅವರೊಂದಿಗೆ ನಿಕಟ ಸಂಬಂಧವಿರುವುದು ಬಹಿರಂಗವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ, ಜೆನ್ಸನ್ ಹುವಾಂಗ್ ಅವರಿಗೆ ಆಲಿಸ್ ಹುವಾಂಗ್ ಚೀನಾಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂಬ ವಿಷಯ ತಿಳಿದಿರಲಿಲ್ಲ ಎಂದು ಅಮೆರಿಕದ ಅಧಿಕಾರಿಗಳು ನಂಬಿದ್ದರು ಎನ್ನಲಾಗಿದೆ.

ವಿದೇಶಿ ಗುಪ್ತಚರ ಸಂಸ್ಥೆಗಳು ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಎಚ್ಚರಿಸಲು ಅಧಿಕಾರಿಗಳು ನೀಡುವ 'ರಕ್ಷಣಾತ್ಮಕ ಮಾಹಿತಿ ನೀಡಿಕೆ' (Defensive briefing) ಜೆನ್ಸನ್ ಹುವಾಂಗ್ ಅವರಿಗೆ ನೀಡಲಾಗಿರಲಿಲ್ಲ ಎಂಬುದೂ ವರದಿಯ ಪ್ರಮುಖ ಅಂಶವಾಗಿತ್ತು.

► ಟ್ರಂಪ್‌ ಗೆ ವಿಮಾನದಲ್ಲೇ ಎಚ್ಚರಿಕೆ ನೀಡಲಾಗಿತ್ತೇ?

ಅಮೆರಿಕದ ಸರ್ಕಾರಿ ಅಧಿಕಾರಿಯೊಬ್ಬರು 'ನ್ಯೂಯಾರ್ಕ್ ಟೈಮ್ಸ್'ಗೆ ತಿಳಿಸಿದ ಪ್ರಕಾರ, ಮೇ ತಿಂಗಳಲ್ಲಿ ಚೀನಾಕ್ಕೆ ತೆರಳುವ ತಮ್ಮ ನಿಯೋಗದೊಂದಿಗೆ ಸೇರಿಕೊಳ್ಳುವಂತೆ ಟ್ರಂಪ್ ಅವರು ಜೆನ್ಸನ್ ಹುವಾಂಗ್ ಅವರಿಗೆ ಕೊನೆಯ ಕ್ಷಣದಲ್ಲಿ ಆಹ್ವಾನ ನೀಡಿದ್ದರು.

ಆಲಿಸ್ ಹುವಾಂಗ್ ಕುರಿತ ಗುಪ್ತಚರ ಮಾಹಿತಿ ತಿಳಿದ ಬಳಿಕ, ಅಧ್ಯಕ್ಷೀಯ ವಿಮಾನ 'ಏರ್ ಫೋರ್ಸ್ ಒನ್'ನಲ್ಲಿ ಟ್ರಂಪ್ ಅವರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.

ಚೀನಾ ನೀತಿಯ ವಿಷಯದಲ್ಲಿ ಕಠಿಣ ನಿಲುವು ಹೊಂದಿರುವ ಮಾರ್ಕೊ ರೂಬಿಯೊ, ಟ್ರಂಪ್ ಅವರಿಗೆ ಮಾಹಿತಿ ನೀಡುವ ವೇಳೆ ಗುಪ್ತಚರ ಟಿಪ್ಪಣಿಯಲ್ಲಿದ್ದ ವಿಷಯವನ್ನು ಅತಿರಂಜಿತವಾಗಿ ವಿವರಿಸಿದ್ದರು ಎಂದು ಕೆಲವು ವರದಿಗಳು ಹೇಳಿದ್ದವು.

►ನವೆಂಬರ್ 8: ವಿವಾಹೇತರ ಸಂಬಂಧ ಒಪ್ಪಿಕೊಂಡ ಹುವಾಂಗ್

ನ. 8ರಂದು ಜೆನ್ಸನ್ ಹುವಾಂಗ್ ತಮ್ಮ ವಿವಾಹೇತರ ಸಂಬಂಧವನ್ನು ಒಪ್ಪಿಕೊಂಡರು. ಈ ಬೆಳವಣಿಗೆಯ ಬೆನ್ನಲ್ಲೇ ಎನ್ವಿಡಿಯಾ ಮಂಡಳಿಯು ಪ್ರಕರಣದ ಕುರಿತು ಸ್ವತಂತ್ರ ತನಿಖೆ ಆರಂಭಿಸುವುದಾಗಿ ಘೋಷಿಸಿತು.

ಮರುದಿನ, ಆಲಿಸ್ ಹುವಾಂಗ್ ಗೂಢಚಾರಿಣಿಯಾಗಿರುವುದು ತಮಗೆ ತಿಳಿದಿರಲಿಲ್ಲ ಎಂದು ಜೆನ್ಸನ್ ಹುವಾಂಗ್ ಹೇಳಿದ್ದಾರೆ ಎಂದು ಟ್ರಂಪ್ ತಿಳಿಸಿದರು.

''ನಾನು ಅವರನ್ನು ನಿಜವಾಗಿಯೂ ನಂಬುತ್ತೇನೆ'' ಎಂದು ಟ್ರಂಪ್ ಹೇಳಿದ್ದರು.

ಚೀನಾದ ಸರಕಾರವು ಗೂಢಚರ್ಯೆಯ ಆರೋಪಗಳನ್ನು ತಳ್ಳಿಹಾಕಿದೆ. ಆಲಿಸ್ ಹುವಾಂಗ್ ಅವರ ಹಿಂದಿನ ಉದ್ಯೋಗದಾತ ಕಂಪೆನಿ ಮೆಗಾಸ್ಪೀಡ್ ಕೂಡ ಕಾನೂನುಬದ್ಧ ಮತ್ತು ನ್ಯಾಯಸಮ್ಮತ ವ್ಯವಹಾರ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿತ್ತು. ಆಲಿಸ್ ಹುವಾಂಗ್ ಆ. 30, 2025ರಂದು ಅಧಿಕೃತವಾಗಿ ಕಂಪೆನಿಯನ್ನು ತೊರೆದಿದ್ದಾರೆ ಎಂದು ಅದು ತಿಳಿಸಿತ್ತು.

ಆದರೆ, ವಿವಾಹೇತರ ಸಂಬಂಧದ ವಿಚಾರವೂ ಹುವಾಂಗ್ ಅವರ ನಾಯಕತ್ವದ ಮೇಲೆ ಪರಿಣಾಮ ಬೀರಿತು.

''ನಾನು ನನ್ನ ಕುಟುಂಬಕ್ಕೆ ಮತ್ತು ನಿಮ್ಮೆಲ್ಲರಿಗೂ ಕ್ಷಮೆಯಾಚಿಸುತ್ತೇನೆ. ನಾನು ನನ್ನ ಪತ್ನಿಗೆ ದ್ರೋಹ ಮಾಡಿದ್ದೇನೆ. ನನ್ನ ಈ ಕೃತ್ಯವು ನನ್ನ ಪತ್ನಿ ಮತ್ತು ನಮ್ಮ ಮಕ್ಕಳಿಗೆ ನೋವುಂಟುಮಾಡಿದೆ. ನಾನು ಮಾಡಿದ್ದಕ್ಕೆ ಯಾವುದೇ ಸಮರ್ಥನೆಯಿಲ್ಲ. ನಾನು ತುಂಬಾ ವಿಷಾದಿಸುತ್ತೇನೆ'' ಎಂದು ಅವರು ಹೇಳಿದ್ದರು.

ನಂತರ ಆಲಿಸ್ ಹುವಾಂಗ್ ಅವರೊಂದಿಗಿನ ಸಂಬಂಧವೊಂದೇ ಅವರ ವೈಯಕ್ತಿಕ ಜೀವನದಲ್ಲಿನ ವಿವಾಹೇತರ ಸಂಬಂಧವಾಗಿರಲಿಲ್ಲ ಎಂಬ ವರದಿಗಳೂ ಪ್ರಕಟವಾದವು.

►ನವೆಂಬರ್ 12: ಸಿಇಒ ಹುದ್ದೆಗೆ ರಾಜೀನಾಮೆ

ನವೆಂಬರ್ 12ರಂದು ಜೆನ್ಸನ್ ಹುವಾಂಗ್ ಅವರು ಎನ್ವಿಡಿಯಾದ ಅಧ್ಯಕ್ಷ, ಸಿಇಒ ಮತ್ತು ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದಾಗಿ ಕಂಪೆನಿ ಘೋಷಿಸಿತು. ಅವರ ರಾಜೀನಾಮೆ ತಕ್ಷಣದಿಂದ ಜಾರಿಗೆ ಬಂದಿತ್ತು.

ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ (Colette Kress) ಅವರನ್ನು ಮಧ್ಯಂತರ ಸಿಇಒ ಆಗಿ ನೇಮಿಸಲಾಯಿತು.

63 ವರ್ಷದ ಹುವಾಂಗ್ ಅವರು ಎನ್ವಿಡಿಯಾದ ಸಹೋದ್ಯೋಗಿ ಕಿಂಬರ್ಲಿ ಪೊವೆಲ್ ಅವರೊಂದಿಗೂ ವಿವಾಹೇತರ ಸಂಬಂಧ ಹೊಂದಿದ್ದರು ಮತ್ತು ಮತ್ತೊಬ್ಬ ಎನ್ವಿಡಿಯಾ ಉದ್ಯೋಗಿಯೊಂದಿಗೆ ಆತ್ಮೀಯ ಸಂಬಂಧವಿತ್ತು ಎಂಬ ವರದಿಗಳು ರಾಜೀನಾಮೆಗೆ ಮುನ್ನ ಪ್ರಕಟವಾಗಿದ್ದವು.

ಟ್ರಂಪ್ ಈ ಬೆಳವಣಿಗೆಯನ್ನು ಭಯಾನಕ ಎಂದು ಹೇಳಿದ್ದರು. ಆದರೆ, ಹುವಾಂಗ್ ಅವರ ಬಗ್ಗೆ ತಮ್ಮ ಬೆಂಬಲವನ್ನು ಮುಂದುವರಿಸಿದ್ದರು.

ರಾಜೀನಾಮೆ ಮತ್ತು ವಿವಾದದ ಹಿನ್ನೆಲೆಯಲ್ಲಿ ಎನ್ವಿಡಿಯಾ ಷೇರುಗಳು ತೀವ್ರ ಕುಸಿತ ಕಂಡಿದ್ದವು. ದಿನದ ವಹಿವಾಟಿನಲ್ಲಿ ಷೇರುಗಳು ಶೇ. 30ಕ್ಕಿಂತ ಹೆಚ್ಚು ಕುಸಿದವು ಎಂದು ವರದಿ ತಿಳಿಸಿತ್ತು.

► ನವೆಂಬರ್ 13-14: ಹುವಾಂಗ್ ಪರ ಅಭಿಯಾನ ಆರಂಭ

ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ನೇಮಿಸಬೇಕೆಂಬ ಅಭಿಯಾನ ಆರಂಭವಾಯಿತು.

ಎಕ್ಸ್ (X) ಮತ್ತು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ನ. 13ರಂದು, ''ಜೆನ್ಸನ್ ಅವರನ್ನು ಮರು ನೇಮಕ ಮಾಡಲು ಅಭಿಯಾನ ನಡೆಯುತ್ತಿದೆ. ನಾನೂ ಅದಕ್ಕೆ ಸಹಿ ಹಾಕುತ್ತಿದ್ದೇನೆ'' ಎಂದು ಪೋಸ್ಟ್ ಮಾಡಿದ್ದರು.

ಹುವಾಂಗ್ ಇಲ್ಲದೆ ಎನ್ವಿಡಿಯಾ ಪ್ರಮುಖ ಒಪ್ಪಂದಗಳನ್ನು ಕಳೆದುಕೊಳ್ಳಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದರು. ಹಲವು ವ್ಯವಹಾರಗಳು ಹುವಾಂಗ್ ಅವರ ವೈಯಕ್ತಿಕ ಮಾತುಕತೆ ಮತ್ತು ವಿಶ್ವಾಸದ ಮೇಲೆ ನಡೆಯುತ್ತವೆ; ಎಲ್ಲವೂ ಲಿಖಿತ ಒಪ್ಪಂದಗಳ ಮೂಲಕವೇ ನಡೆಯುವುದಿಲ್ಲ ಎಂದು ಮಸ್ಕ್ ಹೇಳಿದ್ದರು.

'ಸ್ಟ್ಯಾಂಡ್ ವಿತ್ ಜೆನ್ಸನ್' (Stand with Jensen) ಎಂಬ ಆನ್ಲೈನ್ ಅಭಿಯಾನದ ಮೂಲಕ ಮಂಡಳಿಗೆ ಮನವಿ ಸಲ್ಲಿಸಲಾಯಿತು. ಸ್ವತಂತ್ರ ತನಿಖೆಯಲ್ಲಿ ಸತ್ಯಾಂಶಗಳು ಹೊರಬರುವವರೆಗೆ ಹುವಾಂಗ್ ಅವರನ್ನು ತೆಗೆದುಹಾಕುವುದು ಕಂಪೆನಿಯ ಹಿತಾಸಕ್ತಿಗೆ ವಿರುದ್ಧ ಎಂಬುದಕ್ಕೆ ಬಲವಾದ ಸಾಕ್ಷ್ಯ ನೀಡದ ಹೊರತು, ಅವರನ್ನು ಮರಳಿ ಕರೆತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.

ಎನ್ವಿಡಿಯಾದ ಪ್ರಮುಖ ಷೇರುದಾರರೂ ಮಂಡಳಿಗೆ ಕರೆ ಮಾಡಿ ಹುವಾಂಗ್ ಅವರ ಮರುನೇಮಕಕ್ಕೆ ಒತ್ತಾಯಿಸಿದ್ದರು.

► ನವೆಂಬರ್ 15: ಸಿಲಿಕಾನ್ ವ್ಯಾಲಿಯ ಬೆಂಬಲ

ಹುವಾಂಗ್ ಅವರು ಎನ್ವಿಡಿಯಾಗೆ ಮರಳುವ ಸಾಧ್ಯತೆಯ ಕುರಿತು ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದರು ಎಂದು ವರದಿಯಾಯಿತು. ಅವರ ಸ್ನೇಹಿತರು ಮತ್ತು ಸಹಾಯಕರು ಶ್ವೇತಭವನದ ಬೆಂಬಲ ಪಡೆಯಲು ಹಾಗೂ ಮರುನೇಮಕದ ಪರವಾಗಿ ಲಾಬಿ ನಡೆಸಲು ಸಿಲಿಕಾನ್ ವ್ಯಾಲಿಯ ಪ್ರಮುಖ ಕಾರ್ಯನಿರ್ವಾಹಕರ ತಂಡವೊಂದನ್ನು ಸಂಘಟಿಸುತ್ತಿದ್ದರು ಎಂದು 'financial times' ವರದಿ ಮಾಡಿತ್ತು.

ಆದರೆ, ಟ್ರಂಪ್ ಆಡಳಿತದ ಮತ್ತೊಬ್ಬ ಪ್ರಮುಖ ಸದಸ್ಯ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಎನ್ವಿಡಿಯಾ ಕಂಪೆನಿಯ ಹೊರಗಿನಿಂದ ಹೊಸ ನಾಯಕನನ್ನು ಹುಡುಕುವ ಬಗ್ಗೆ ಮಾತನಾಡಿದ್ದರು.

''ಕಂಪೆನಿಯೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಅವರಿಗೆ ನಾಟಕೀಯ ಬದಲಾವಣೆಯ ಅಗತ್ಯವಿದೆ'' ಎಂದು ಬೆಸೆಂಟ್ ಫಾಕ್ಸ್ ನ್ಯೂಸ್ ಗೆ ತಿಳಿಸಿದ್ದರು.

► ನವೆಂಬರ್ 16: ಟ್ರಂಪ್ ಬಹಿರಂಗ ಬೆಂಬಲ

ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ನೇಮಿಸುವಂತೆ ಎನ್ವಿಡಿಯಾ ಮಂಡಳಿಗೆ ಒತ್ತಾಯಿಸುವ ಪ್ರಯತ್ನಕ್ಕೆ ಟ್ರಂಪ್ ಬೆಂಬಲ ವ್ಯಕ್ತಪಡಿಸಿದರು.

ಆಲಿಸ್ ಹುವಾಂಗ್ ಬಗ್ಗೆ ಮಾರ್ಕೊ ರೂಬಿಯೊ ನೀಡಿದ್ದ ಎಚ್ಚರಿಕೆ ಕುರಿತು ಕೇಳಿದಾಗ, ''ನಾನು ಅದನ್ನು ಕೇಳಿಲ್ಲ. ಆಕೆ ಗೂಢಚಾರಿಣಿಯೆಂದು ನನಗೆ ತಿಳಿದಿಲ್ಲ'' ಎಂದು ಟ್ರಂಪ್ ಹೇಳಿದ್ದರು.

ಇದೇ ವೇಳೆ, ಅಮೆರಿಕದ ವಾಣಿಜ್ಯ ಇಲಾಖೆ ಮತ್ತು ನ್ಯಾಯ ಇಲಾಖೆ ಮೆಗಾಸ್ಪೀಡ್ ಕಂಪೆನಿಯ ವಿರುದ್ಧ ತನಿಖೆ ನಡೆಸುತ್ತಿರುವುದಾಗಿ ದೃಢಪಡಿಸಿದವು. ಸೂಕ್ಷ್ಮ ಅರೆವಾಹಕಗಳು ಮತ್ತು AI ಚಿಪ್ ಗಳು ಚೀನಾಕ್ಕೆ ಅಕ್ರಮವಾಗಿ ವರ್ಗಾವಣೆಯಾಗಿರುವ ಸಾಧ್ಯತೆಯ ಕುರಿತು ತನಿಖೆ ನಡೆಯುತ್ತಿತ್ತು.

► ನವೆಂಬರ್ 17: ಮರಳುವ ಇಚ್ಛೆ ವ್ಯಕ್ತಪಡಿಸಿದ ಹುವಾಂಗ್; ಮಂಡಳಿ ನಿರಾಕರಣೆ

ರಾಜೀನಾಮೆ ನೀಡಿದ ಬಳಿಕ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ಕಂಪೆನಿಯ ಹಿತಾಸಕ್ತಿಗೆ ಅನುಗುಣವಾಗಿ ಮಂಡಳಿಯು ನಿರ್ಧರಿಸಿದರೆ ಸಿಇಒ ಆಗಿ ಮರಳಲು ತಾನು ಗೌರವಿಸಲ್ಪಡುವುದಾಗಿ ಜೆನ್ಸನ್ ಹುವಾಂಗ್ ಹೇಳಿದರು.

ಆದರೆ, ಮಂಡಳಿಯು ಅವರ ಪ್ರಸ್ತಾಪವನ್ನು ತಿರಸ್ಕರಿಸಿತು.

''ಎನ್ವಿಡಿಯಾ ಮಂಡಳಿಯು ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಮತ್ತು ಜೆನ್ಸನ್ ಅವರನ್ನು ಸಿಇಒ ಆಗಿ ಮರುಸ್ಥಾಪಿಸಲು ಉದ್ದೇಶಿಸಿಲ್ಲ'' ಎಂದು ಮಂಡಳಿಯ ಅಧ್ಯಕ್ಷ ಹಾರ್ವೆ ಜೋನ್ಸ್ ತಿಳಿಸಿದ್ದರು.

ಶಾಶ್ವತ ಸಿಇಒ ಆಯ್ಕೆ ಮಾಡಲು ಕಾರ್ಯನಿರ್ವಾಹಕ ನೇಮಕಾತಿ ಸಂಸ್ಥೆ ಹೈಡ್ರಿಕ್ ಆ್ಯಂಡ್ ಸ್ಟ್ರಗಲ್ಸ್ (Heidrick & Struggles) ಅನ್ನು ನೇಮಿಸಿಕೊಂಡಿರುವುದಾಗಿಯೂ ಅವರು ಹೇಳಿದ್ದರು.

ಇದೇ ವೇಳೆ, ಸುಧಾರಿತ H200 ಪ್ರೊಸೆಸರ್ ಗಳು ಸೇರಿದಂತೆ ಹೈಟೆಕ್ ಡೇಟಾ ಸೆಂಟರ್ ಉತ್ಪನ್ನಗಳನ್ನು ಚೀನಾಕ್ಕೆ ಸಾಗಿಸುತ್ತಿಲ್ಲ ಎಂದು ಎನ್ವಿಡಿಯಾ ಸ್ಪಷ್ಟಪಡಿಸಿತ್ತು.

ಡಿಸೆಂಬರ್ 1 ಮತ್ತು 2ರಂದು ಅಮೆರಿಕದ ಹೌಸ್ ವಿದೇಶಾಂಗ ವ್ಯವಹಾರಗಳು, ಗುಪ್ತಚರ ಸಮಿತಿಗಳು ಹಾಗೂ ಚೀನೀ ಕಮ್ಯುನಿಸ್ಟ್ ಪಕ್ಷದ ಕುರಿತ ಆಯ್ಕೆ ಸಮಿತಿಯ ಮುಂದೆ ಜೆನ್ಸನ್ ಹುವಾಂಗ್ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂಬ ಮಾಹಿತಿ ಪ್ರಕಟವಾಗಿತ್ತು.

► ನವೆಂಬರ್ 18-20: ತೀವ್ರಗೊಂಡ ತನಿಖೆಗಳು

ವೈಯಕ್ತಿಕ ಸಂಬಂಧಗಳ ವಿವಾದದ ಜೊತೆಗೆ, ಚೀನಾಕ್ಕೆ ಪ್ರಮುಖ AI ಚಿಪ್ ಗಳ ಸಂಭಾವ್ಯ ರಫ್ತು ಹಾಗೂ ಅಮೆರಿಕದ ರಫ್ತು ನಿಯಂತ್ರಣಗಳನ್ನು ಉಲ್ಲಂಘಿಸಿರುವ ಸಾಧ್ಯತೆಯ ಕುರಿತ ತನಿಖೆಗಳು ಎನ್ವಿಡಿಯಾದ ಮೇಲೆ ಒತ್ತಡ ಹೆಚ್ಚಿಸಿದವು.

ರಿಪಬ್ಲಿಕನ್ ಪಕ್ಷದ ಸೆನೆಟ್ ಬ್ಯಾಂಕಿಂಗ್ ಸಮಿತಿಯ ಅಧ್ಯಕ್ಷ ಟಿಮ್ ಸ್ಕಾಟ್, ಜೆನ್ಸನ್ ಹುವಾಂಗ್ ಮತ್ತು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರಿಗೆ ಸಾರ್ವಜನಿಕವಾಗಿ ಸಾಕ್ಷ್ಯ ನೀಡುವಂತೆ ಪತ್ರ ಬರೆದಿದ್ದರು.

ಲುಟ್ನಿಕ್ ಅವರು ತಮ್ಮ ಪುತ್ರರು ಮತ್ತು ತಮ್ಮ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆಗೆ ಲಾಭವಾಗುವಂತೆ ಎನ್ವಿಡಿಯಾದೊಂದಿಗೆ ಕ್ರಮ ಕೈಗೊಂಡಿದ್ದಾರೆಯೇ ಎಂಬ ಕುರಿತು ಡೆಮಾಕ್ರಟ್ ಗಳು ತನಿಖೆ ಆರಂಭಿಸಿದ್ದರು.

ಹೌಸ್ ಎನರ್ಜಿ ಮತ್ತು ಕಾಮರ್ಸ್ ಸಮಿತಿಯ ಅಧ್ಯಕ್ಷ ಬ್ರೆಟ್ ಗುತ್ರೀ, ಎನ್ವಿಡಿಯಾದ ಮಧ್ಯಂತರ ಸಿಇಒ ಕೊಲೆಟ್ ಕ್ರೆಸ್ ಅವರನ್ನು ಸಮಿತಿಯ ಮುಂದೆ ಹಾಜರಾಗುವಂತೆ ಕೇಳಿಕೊಂಡಿದ್ದರು. ಮೆಗಾಸ್ಪೀಡ್ ಕಂಪೆನಿಗೆ ಅಮೆರಿಕದ ರಫ್ತು ನಿಯಂತ್ರಣಗಳನ್ನು ತಪ್ಪಿಸಲು ಎನ್ವಿಡಿಯಾ ಸಹಾಯ ಮಾಡಿತೇ ಎಂಬುದನ್ನು ಸ್ಪಷ್ಟಪಡಿಸುವುದು ಇದರ ಉದ್ದೇಶವಾಗಿತ್ತು.

ಇದೇ ವೇಳೆ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC) ಕಂಪೆನಿಯ ಲೆಕ್ಕಪತ್ರಗಳಲ್ಲಿ ಸಂಭಾವ್ಯ ಸಮಸ್ಯೆಗಳ ಕುರಿತು ತನಿಖೆ ನಡೆಸುತ್ತಿದೆ ಎಂಬ ವರದಿಗಳ ನಡುವೆ ನ. 20ರಂದು ಎನ್ವಿಡಿಯಾ ಷೇರುಗಳು ಮತ್ತಷ್ಟು ಕುಸಿತ ಕಂಡಿದ್ದವು.

► ನವೆಂಬರ್ 21-22: ಮರುನೇಮಕದ ಪರ ಹೆಚ್ಚಿದ ಒತ್ತಡ

''ಜೆನ್ಸನ್‌ ಗೆ ಎರಡನೇ ಅವಕಾಶ ನೀಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ'' ಎಂದು ಟ್ರಂಪ್ ವರದಿಗಾರರಿಗೆ ಹೇಳಿದ್ದರು. ಎನ್ವಿಡಿಯಾವನ್ನು ''ಅಮೆರಿಕಕ್ಕೆ ಬಹಳ ಮುಖ್ಯವಾದ ಕಂಪೆನಿ'' ಎಂದೂ ಅಭಿಪ್ರಾಯಪಟ್ಟಿದ್ದರು.

ಆಲಿಸ್ ಹುವಾಂಗ್ ಅವರ ಚೀನಾದ ಬೇಹುಗಾರಿಕೆ ಸಂಸ್ಥೆಯೊಂದಿಗಿನ ನಂಟಿನ ಬಗ್ಗೆ ಟ್ರಂಪ್ ಅವರ ಸಲಹೆಗಾರರು ಎರಡು ಬಾರಿ ಎಚ್ಚರಿಕೆ ನೀಡಿದ್ದರೂ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಟ್ರಂಪ್ ನಿರಾಕರಿಸಿದ್ದರು ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಚೀನಾದ ರಾಜ್ಯ ಭದ್ರತಾ ಸಚಿವಾಲಯವು ಆಲಿಸ್ ಹುವಾಂಗ್ ಅವರನ್ನು ನೇಮಿಸಿಕೊಂಡಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಶಂಕಿಸಿತ್ತು. ಅವರ ವ್ಯವಹಾರ ಪಾಲುದಾರ ಕಾಂಗ್ ವೀ ಅವರು ಸಚಿವಾಲಯದೊಂದಿಗೆ ಕೆಲಸ ಮಾಡಿದ್ದರು ಎಂಬುದಕ್ಕೆ ಗುಪ್ತಚರ ಇಲಾಖೆ ಪುರಾವೆಗಳನ್ನು ಕಂಡುಕೊಂಡಿದೆ ಎಂದು ವರದಿಯಾಗಿತ್ತು.

ಆದರೆ, ಈ ಆರೋಪಗಳನ್ನು ಚೀನಾ ನಿರಾಕರಿಸಿತ್ತು.

ಟ್ರಂಪ್ ತಮ್ಮ ಟ್ರುತ್ ಸೋಷಿಯಲ್ ಖಾತೆಯಲ್ಲಿ, ''ಎನ್ವಿಡಿಯಾ ಮಂಡಳಿಯು ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ನೇಮಿಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಕಂಪೆನಿಗೆ ಮತ್ತು ಅಮೆರಿಕಕ್ಕೆ ಉತ್ತಮ ವಿಷಯವಾಗಿರುತ್ತದೆ'' ಎಂದು ಪೋಸ್ಟ್ ಮಾಡಿದ್ದರು.

ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕೂಡ ತಮ್ಮ ಹಿಂದಿನ ನಿಲುವನ್ನು ಬದಲಿಸಿ, ಜೆನ್ಸನ್ ಹುವಾಂಗ್ ಅವರಿಗೆ ಆಲಿಸ್ ಗೂಢಚಾರಿಣಿಯೇ ಎಂಬುದು ತಿಳಿದಿರಲಿಲ್ಲ ಎಂದು ತಾನು ನಂಬುವುದಾಗಿ ಹೇಳಿದ್ದರು.

► ನವೆಂಬರ್ 22: ಮಂಡಳಿಯ ನಿರ್ಧಾರ

ಎನ್ವಿಡಿಯಾ ಷೇರು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿದ ದಾಖಲೆಗಳ ಪ್ರಕಾರ, ನ.22ರಂದು ಮಂಡಳಿಯು ಜೆನ್ಸನ್ ಹುವಾಂಗ್ ಅವರನ್ನು ಮರುನೇಮಕ ಮಾಡುವ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರ ತಕ್ಷಣದಿಂದ ಜಾರಿಗೆ ಬಂದಿತ್ತು.

► ನವೆಂಬರ್ 23: ಮತ್ತೆ ಎನ್ವಿಡಿಯಾ ಮುಖ್ಯಸ್ಥರಾಗಿ ಹುವಾಂಗ್

ನ. 23ರಂದು ಮರುನೇಮಕದ ಅಧಿಕೃತ ಪ್ರಕಟಣೆ ಹೊರಬಿದ್ದಿತು. ಜೆನ್ಸನ್ ಹುವಾಂಗ್ ಅವರನ್ನು ಅಧ್ಯಕ್ಷ, ಸಿಇಒ ಮತ್ತು ಮಂಡಳಿಯ ನಿರ್ದೇಶಕರಾಗಿ ಮರುಸ್ಥಾಪಿಸಲು ಮಂಡಳಿಯು ಸರ್ವಾನುಮತದಿಂದ ನಿರ್ಧರಿಸಿತು.

ಮಂಡಳಿಯೊಂದಿಗಿನ ಹಲವು ಚರ್ಚೆಗಳು ಮತ್ತು ಸಭೆಗಳ ಬಳಿಕ, ಹುವಾಂಗ್ ಅವರ ಪ್ರಾಮಾಣಿಕತೆ ಹಾಗೂ ಕಂಪೆನಿಯನ್ನು ಮುನ್ನಡೆಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ಮೂಡಿದೆ ಎಂದು ಮಂಡಳಿ ತಿಳಿಸಿತು. ಅಮೆರಿಕ ಸರಕಾರದ ಹಿರಿಯ ಅಧಿಕಾರಿಗಳ ಅಭಿಪ್ರಾಯವನ್ನೂ ಪಡೆದುಕೊಂಡಿದ್ದು, ಅವರ ಮರುನೇಮಕದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಹೇಳಿದೆ.

''ಹೊಸ ಕೈಗಾರಿಕಾ ಕ್ರಾಂತಿಯ ಆರಂಭದಲ್ಲಿ ಎನ್ವಿಡಿಯಾಗೆ ಮರಳಲು ಮತ್ತು ವಿಶ್ವದ ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನ ಕಂಪೆನಿಗಳಲ್ಲಿ ಒಂದನ್ನು ಮುನ್ನಡೆಸಲು ನನಗೆ ಗೌರವವಾಗಿದೆ'' ಎಂದು ಜೆನ್ಸನ್ ಹುವಾಂಗ್ ಹೇಳಿದ್ದರು.

ತನಿಖೆ ಪೂರ್ಣಗೊಳ್ಳುವವರೆಗೆ ಮಂಡಳಿಯ ಸ್ವತಂತ್ರ ಸಮಿತಿಯು ತನ್ನ ಕಾರ್ಯ ಮುಂದುವರಿಸಲಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹುವಾಂಗ್ ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಭದ್ರತೆ ಮತ್ತು ರಫ್ತು ನಿಯಂತ್ರಣದ ಅಪಾಯಗಳನ್ನು ಮೇಲ್ವಿಚಾರಣೆ ಮಾಡಲು ಮಂಡಳಿಯು ಪ್ರತ್ಯೇಕ ಸಮಿತಿಯನ್ನೂ ರಚಿಸಿದೆ. ಕಂಪೆನಿಯ ಅನುಸರಣಾ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯ ಅನುಸರಣಾ ಅಧಿಕಾರಿಯನ್ನು (Chief Compliance Officer) ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನೂ ಆರಂಭಿಸಿದೆ.

ಜೆನ್ಸನ್ ಹುವಾಂಗ್ ಅವರ ಮರುನೇಮಕದ ಸುದ್ದಿ ಹೊರಬೀಳುತ್ತಿದ್ದಂತೆ ಎನ್ವಿಡಿಯಾ ಷೇರುಗಳು ಶೇ. 30ಕ್ಕಿಂತ ಹೆಚ್ಚು ಏರಿಕೆ ಕಂಡವು ಎಂದು ವರದಿ ತಿಳಿಸಿದೆ.

ಟ್ರಂಪ್ ಅವರು ಹುವಾಂಗ್ ಅವರನ್ನು ''ಮಹಾನ್ ದೇಶಭಕ್ತ'' ಎಂದು ಕರೆದಿದ್ದಾರೆ. ಆಲಿಸ್ ಹುವಾಂಗ್ ಬೀಜಿಂಗ್ ನಲ್ಲಿದ್ದಾರೆ ಎಂದು ವರದಿಯಾಗಿದೆ.

ಸೌಜನ್ಯ: AP, Reuters, Bloomberg

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.