Photo Credit : magnific ai-image

ಹೊಸದಿಲ್ಲಿ: ಕಚೇರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿನ ಕಂಪ್ಯೂಟರ್ ಗಳಲ್ಲಿ WhatsApp Web ಬಳಸಬೇಡಿ ಎಂದು ಕೇಂದ್ರ ಸರಕಾರದ ಸೈಬರ್ ಅಪರಾಧ ನಿಗ್ರಹ ಘಟಕವಾದ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಈ ಕುರಿತು ನೂತನ ಸಲಹಾಸೂಚಿ ಬಿಡುಗಡೆ ಮಾಡಿರುವ ನ್ಯಾಷನಲ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ ನ ನ್ಯಾಷನಲ್ ಸೈಬರ್ ಕ್ರೈಂ ಥ್ರೆಟ್ ಅನಲಿಟಿಕ್ಸ್ ಯೂನಿಟ್, ಕಂಪ್ಯೂಟರ್ ನಲ್ಲಿ WhatsApp Web ಲಾಗಿನ್ ಆಗಿಯೇ ಉಳಿದಿದ್ದರೆ ಅನಧಿಕೃತ ವ್ಯಕ್ತಿಗಳು ಬಳಕೆದಾರರ ಸಂದೇಶಗಳು, ಸಂಪರ್ಕಗಳು ಹಾಗೂ ಗುಂಪು ಸಂವಾದಗಳನ್ನು ನೋಡಬಹುದು ಎಂದು ಎಚ್ಚರಿಸಿದೆ.

ಬಳಕೆದಾರರ ಖಾತೆಯನ್ನು ದುರುಪಯೋಗಪಡಿಸಿಕೊಂಡು, ನೈಜ ಖಾತೆದಾರರಂತೆ ಸೋಗು ಹಾಕಿ ಇತರರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ವಂಚನೆ ಹಾಗೂ ಇನ್ನಿತರ ಹಗರಣಗಳನ್ನು ನಡೆಸುವ ಅಪಾಯವಿದೆ ಎಂದು ತಿಳಿಸಿದೆ.

ಕೇವಲ ಬ್ರೌಸರ್ ವಿಂಡೊ ಅಥವಾ ಟ್ಯಾಬ್ ಮುಚ್ಚಿದರೆ WhatsApp Web ಲಾಗಿನ್ ಅವಧಿ ಕೊನೆಗೊಳ್ಳುವುದಿಲ್ಲ. ಹೀಗಾಗಿ ಅನಧಿಕೃತ ಪ್ರವೇಶ ತಡೆಯಲು ಪ್ರತಿ ಬಾರಿ ಬಳಕೆ ಮುಗಿದ ಬಳಿಕ ಲಾಗೌಟ್ ಆಗಬೇಕು ಎಂದು ಸಲಹೆ ನೀಡಿದೆ.

ಇತರರು ಬಳಸಬಹುದಾದ ಕಚೇರಿ ಕಂಪ್ಯೂಟರ್ ಗಳು, ಹಂಚಿಕೆಯ ಕಂಪ್ಯೂಟರ್ ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಕಂಪ್ಯೂಟರ್ ಗಳಲ್ಲಿ WhatsApp Web ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.

ಕಂಪ್ಯೂಟರ್ ನಲ್ಲಿ WhatsApp Web ಬಳಸುವಾಗ ಸರಕಾರಿ, ಸಾಂಸ್ಥಿಕ, ಹಣಕಾಸು, ಗೋಪ್ಯ ಅಥವಾ ಇತರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಸಲಹಾಸೂಚಿಯಲ್ಲಿ ಎಚ್ಚರಿಸಲಾಗಿದೆ.

ಸೈಬರ್ ಕೆಫೆಗಳು, ಸಾರ್ವಜನಿಕ ಸ್ಥಳಗಳು, ಹೋಟೆಲ್ ಗಳ ವ್ಯವಹಾರ ಕೇಂದ್ರಗಳು, ಬಾಡಿಗೆಗೆ ಪಡೆದ ಕಂಪ್ಯೂಟರ್ ಗಳು ಅಥವಾ ಇತರ ವಿಶ್ವಾಸಾರ್ಹವಲ್ಲದ ಸಾಧನಗಳಲ್ಲಿ WhatsApp Webಗೆ ಲಾಗಿನ್ ಆಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದೆ. ಅನಿವಾರ್ಯವಾಗಿ ಕಂಪ್ಯೂಟರ್ ನಲ್ಲಿ WhatsApp Web ಬಳಸಬೇಕಾದರೆ, ಇನ್ಕಾಗ್ನಿಟೊ ಅಥವಾ ಪ್ರೈವೇಟ್ ಬ್ರೌಸಿಂಗ್ ಮೋಡ್ ಬಳಸುವಂತೆ ಶಿಫಾರಸು ಮಾಡಿದೆ.

ತಮ್ಮ ಖಾತೆಯಿಂದ ಅನಿರೀಕ್ಷಿತವಾಗಿ ಸಂದೇಶಗಳು ರವಾನೆಯಾಗುವುದು, ಸಂಪರ್ಕಗಳಿಂದ ಅಸಹಜ ಪ್ರತಿಕ್ರಿಯೆಗಳು ಬರುವುದು ಅಥವಾ ವಿವರಿಸಲಾಗದ ಇತರ ಚಟುವಟಿಕೆಗಳು ಕಂಡುಬಂದರೆ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಇಂತಹ ಚಟುವಟಿಕೆಗಳು ಖಾತೆಗೆ ಅನಧಿಕೃತ ಪ್ರವೇಶ ನಡೆದಿರುವ ಸೂಚನೆಯಾಗಿರಬಹುದು ಎಂದು ಎಚ್ಚರಿಸಿದೆ.

ಡಿಜಿಟಲ್ ಸಾಧನಗಳು, ಕಂಪ್ಯೂಟರ್ ಗಳು, ಬ್ರೌಸರ್ ಗಳು ಹಾಗೂ ಭದ್ರತಾ ಸಾಫ್ಟ್ವೇರ್ ಗಳನ್ನು ನವೀಕರಿಸಿಟ್ಟುಕೊಳ್ಳಬೇಕು. ಅನುಮಾನಾಸ್ಪದ ಡೌನ್ಲೋಡ್ಗಳು, ಅಪರಿಚಿತ ಫೈಲ್ ಗಳು ಹಾಗೂ ಕ್ರ್ಯಾಕ್ ಮಾಡಿದ ಸಾಫ್ಟ್ವೇರ್ ಗಳನ್ನು ಬಳಸಬಾರದು ಎಂದೂ WhatsApp Web ಬಳಕೆದಾರರಿಗೆ ಸೂಚಿಸಿದೆ.

ಪ್ರತಿ ಬಾರಿ WhatsApp Web ಬಳಕೆ ಮುಗಿದ ಬಳಿಕ ಲಾಗೌಟ್ ಆಗಬೇಕು, ವಿಶ್ವಾಸಾರ್ಹವಲ್ಲದ ಕಂಪ್ಯೂಟರ್ ಗಳನ್ನು ಬಳಸುವುದನ್ನು ತಪ್ಪಿಸಬೇಕು ಹಾಗೂ ಖಾತೆಯಲ್ಲಿನ ಅಸಹಜ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಎಂದು I4C ಸಲಹೆ ನೀಡಿದೆ. ಇದರಿಂದ ಖಾತೆ ಹ್ಯಾಕ್ ಆಗುವ ಹಾಗೂ ಹಣಕಾಸು ವಂಚನೆಗೆ ಒಳಗಾಗುವ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸದಾನಂದ ಗಂಗನಬೀಡು , ವಾರ್ತಾಭಾರತಿ

contributor