Photo: PTI

ಹಲವು ವರ್ಷಗಳಿಂದ ಭಾರತ ಅತ್ಯಂತ ಅಪಾಯಕಾರಿ H5N1 ವೈರಸ್‌ ನಿಂದ ಹರಡುವ ಹಕ್ಕಿ ಜ್ವರದ (avian influenza) ನಿರಂತರ ದಾಳಿಯನ್ನು ಎದುರಿಸುತ್ತಿದೆ. ಈ ರೋಗವು ಮುಖ್ಯವಾಗಿ ಕೋಳಿಗಳಿಗೆ ತಗುಲುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಹುಲಿ, ಚಿರತೆ ಮತ್ತು ಇತರ ಸಸ್ತನಿಗಳಲ್ಲೂ ಈ ವೈರಸ್ ಪತ್ತೆಯಾಗುತ್ತಿದೆ. ಅಲ್ಲದೆ, ಇದು ಮನುಷ್ಯರಿಗೂ ಸೋಂಕು ತಗುಲಿಸುತ್ತಿದ್ದು, ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಸವಾಲಾಗುವ ಆತಂಕವನ್ನು ಹುಟ್ಟುಹಾಕಿದೆ.

ಈಗ, ಭೋಪಾಲ್‌ ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) 'ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆ'ಯ (NIHSAD) ವಿಜ್ಞಾನಿಗಳು ಕೋಳಿಗಳಿಗಾಗಿ H5N1 ವಿರುದ್ಧ ಭಾರತದ ಮೊದಲ ಸ್ವದೇಶಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರತಿ ಡೋಸ್‌ ಗೆ ಕೇವಲ 1ರಿಂದ 2 ರೂ. ವೆಚ್ಚವಾಗುವ ಈ ಲಸಿಕೆಯನ್ನು ಕೇಂದ್ರ ಕೃಷಿ ಸಚಿವ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶುಕ್ರವಾರ (ನ. 20) ಭೋಪಾಲ್ ನಲ್ಲಿ ಬಿಡುಗಡೆಗೊಳಿಸಿದರು.

► ಭಾರತಕ್ಕೆ ಹಕ್ಕಿ ಜ್ವರ ಲಸಿಕೆಯ ಅಗತ್ಯ

ಭಾರತದಲ್ಲಿ ಮೊದಲ ಬಾರಿಗೆ 2006ರಲ್ಲಿ ಮಹಾರಾಷ್ಟ್ರದ ನವಾಪುರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೆ ದೇಶದಲ್ಲಿ 500ಕ್ಕೂ ಹೆಚ್ಚು ಬಾರಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಚೌಹಾಣ್ ಮಾಹಿತಿ ನೀಡಿದ್ದಾರೆ. ಈ ರೋಗದಿಂದಾಗಿ ಲಕ್ಷಾಂತರ ಕೋಳಿಗಳು ಸಾವನ್ನಪ್ಪಿವೆ ಮತ್ತು ರೋಗ ಹರಡದಂತೆ ಅವುಗಳನ್ನು ಸಾಮೂಹಿಕವಾಗಿ ನಾಶಪಡಿಸಲಾಗಿದೆ. ಇದು ರೈತರು ಮತ್ತು ಇಡೀ ಕೋಳಿ ಸಾಕಣೆ ಉದ್ಯಮಕ್ಕೆ ಭಾರೀ ನಷ್ಟ ಉಂಟುಮಾಡಿದೆ.

2011ರಿಂದ ಭಾರತದ ಕೋಳಿಗಳಲ್ಲಿ ಕಾಣಿಸಿಕೊಂಡ ಬಹುಪಾಲು ಹಕ್ಕಿ ಜ್ವರ ಪ್ರಕರಣಗಳಿಗೆ H5N1 Clade 2.3.2.1a ಎಂಬ ನಿರ್ದಿಷ್ಟ ಗುಂಪಿನ ವೈರಸ್ ಕಾರಣವಾಗಿದೆ. ಈಗ ಅಭಿವೃದ್ಧಿಪಡಿಸಿರುವ ಲಸಿಕೆಯು ಇದೇ ವೈರಸ್ ಅನ್ನು ಗುರಿಯಾಗಿಸಿಕೊಂಡಿದೆ.

'ಕ್ಲೇಡ್' ಎಂದರೆ ಒಂದೇ ಮೂಲದಿಂದ ಬಂದ, ಅನುವಂಶಿಕವಾಗಿ ಸಂಬಂಧ ಹೊಂದಿರುವ ವೈರಸ್ ಗಳ ಗುಂಪು ಅಥವಾ ವಂಶಾವಳಿ. H5N1 ಎಂಬುದು ವೈರಸ್ ನ ಉಪವಿಧವಾಗಿದ್ದು, 2.3.2.1a ಎಂಬುದು ಅದರ ನಿರ್ದಿಷ್ಟ ಅನುವಂಶಿಕ ಗುಂಪು ಅಥವಾ ವಂಶಾವಳಿಯನ್ನು ಸೂಚಿಸುತ್ತದೆ. ಇನ್ಫ್ಲುಯೆನ್ಸಾ ವೈರಸ್ ಗಳು ಕಾಲಕಾಲಕ್ಕೆ ತಮ್ಮ ರೂಪವನ್ನು ಬದಲಾಯಿಸುತ್ತಲೇ ಇರುವುದರಿಂದ, ಆಯಾ ಪ್ರದೇಶದಲ್ಲಿ ಹರಡುತ್ತಿರುವ ವೈರಸ್‌ ಗೆ ತಕ್ಕಂತೆ ಲಸಿಕೆಯನ್ನು ತಯಾರಿಸುವುದು ಬಹಳ ಮುಖ್ಯವಾಗುತ್ತದೆ.

ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ್ದ NIHSAD ಪ್ರಧಾನ ವಿಜ್ಞಾನಿ ಡಾ. ಎಸ್. ನಾಗರಾಜನ್ ಅವರು 'ದಿ ಇಂಡಿಯನ್ ಎಕ್ಸ್ಪ್ರೆಸ್' ಜೊತೆ ಮಾತನಾಡಿ, "ಹಕ್ಕಿ ಜ್ವರದಿಂದ ಕೋಳಿ ಸಾಕಣೆ ಉದ್ಯಮಕ್ಕೆ ಭಾರೀ ಆರ್ಥಿಕ ನಷ್ಟವಾಗಿದೆ. ಆದ್ದರಿಂದ, ರೈತರ ಆರ್ಥಿಕ ನಷ್ಟವನ್ನು ತಗ್ಗಿಸಲು ಮತ್ತು ಈ ವೈರಸ್ ಮನುಷ್ಯರಲ್ಲಿ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯಲು Clade 2.3.2.1a H5N1 ವೈರಸ್ ಅನ್ನು ನಿಯಂತ್ರಿಸುವ ಈ ಲಸಿಕೆ ಅತ್ಯಂತ ಮಹತ್ವದ್ದಾಗಿದೆ" ಎಂದು ತಿಳಿಸಿದ್ದಾರೆ.

ಈ ಲಸಿಕೆಯನ್ನು ಕೋಳಿಗಳನ್ನು ರಕ್ಷಿಸಲು ತಯಾರಿಸಲಾಗಿದೆಯೇ ಹೊರತು ಮನುಷ್ಯರಿಗಲ್ಲ. ಪಕ್ಷಿಗಳಲ್ಲಿ ಈ ವೈರಸ್ ಹರಡುವಿಕೆಯನ್ನು ತಗ್ಗಿಸುವುದೇ ಇದರ ಪ್ರಮುಖ ಸಾರ್ವಜನಿಕ ಆರೋಗ್ಯ ಪ್ರಯೋಜನವಾಗಿದೆ. ಇದರಿಂದ ಸೋಂಕಿತ ಕೋಳಿಗಳ ಸಂಪರ್ಕಕ್ಕೆ ಬರುವ ಜನರಿಗೆ ರೋಗ ಹರಡುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

► ಲಸಿಕೆ ಅಭಿವೃದ್ಧಿಯಲ್ಲಿ ಎದುರಾದ ಸವಾಲುಗಳು

ಹೆಚ್ಚಿನ ಅಪಾಯಕಾರಿ ಪ್ರಾಣಿ ರೋಗಗಳ ಪತ್ತೆ, ಕಣ್ಗಾವಲು ಮತ್ತು ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಭೋಪಾಲ್ ನ ICAR-NIHSAD ಸಂಸ್ಥೆಯಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಸಂಸ್ಥೆಯು ಹಲವು ವರ್ಷಗಳಿಂದ ಹಕ್ಕಿ ಜ್ವರದ ಕುರಿತು ಕೆಲಸ ಮಾಡುತ್ತಿದೆ. ಭಾರತದಲ್ಲಿ ಹರಡುತ್ತಿರುವ ವಿವಿಧ ರೀತಿಯ ವೈರಸ್ ಗಳ ಮೇಲೆ ನಿಗಾ ಇಡುವುದು, ವೈರಸ್ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡುವುದು ಮತ್ತು ವಿವಿಧ ಪ್ರಾಣಿ ಪ್ರಭೇದಗಳಿಗೆ ಸೋಂಕು ತಗುಲಿಸುವ ಅದರ ಸಾಮರ್ಥ್ಯವನ್ನು ಪರೀಕ್ಷಿಸುವುದು ಈ ಸಂಶೋಧನೆಯಲ್ಲಿ ಸೇರಿದೆ.

ಲಸಿಕೆ ಅಭಿವೃದ್ಧಿಪಡಿಸಲು ತೆಗೆದುಕೊಂಡ ಸಮಯವೇ ಅತಿ ದೊಡ್ಡ ಸವಾಲಾಗಿತ್ತು. ಈ ಲಸಿಕೆಯನ್ನು ಸಿದ್ಧಪಡಿಸಲು ಸಾಕಷ್ಟು ಶ್ರಮ ಮತ್ತು ಸಮರ್ಪಣಾ ಮನೋಭಾವ ಬೇಕಾಯಿತು. ಅತಿ ಕಡಿಮೆ ಸಮಯದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಮಯದೊಂದಿಗೆ ಸೆಣಸಾಡುವುದೇ ದೊಡ್ಡ ಸವಾಲಾಗಿತ್ತು ಎಂದು ಡಾ. ನಾಗರಾಜನ್ ಹೇಳಿದ್ದಾರೆ.

ಈ ಕೆಲಸದ ಒತ್ತಡವು ಪ್ರಯೋಗಾಲಯದ ಹೊರಗೂ ವಿಸ್ತರಿಸಿತ್ತು. ವಿಜ್ಞಾನಿಗಳು ವಾರಾಂತ್ಯ ಮತ್ತು ರಜಾದಿನಗಳಲ್ಲೂ ಕೆಲಸ ಮಾಡಿದ್ದು, ಸಂಶೋಧನೆಯ ಅವಧಿಯುದ್ದಕ್ಕೂ ಕಟ್ಟುನಿಟ್ಟಾದ ಜೈವಿಕ ಸುರಕ್ಷತಾ ನಿಯಮಗಳನ್ನು ಪಾಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಯೋಗಾಲಯಕ್ಕೆ ಹೋಗುವ ಮೊದಲು ಮತ್ತು ಹೊರಬಂದ ನಂತರ ಸ್ಯಾನಿಟೈಸೇಶನ್ ಮಾಡುವುದು, ಕಡ್ಡಾಯ ಸ್ನಾನದ ಪ್ರಕ್ರಿಯೆಗಳು ಮತ್ತು ಸಂಸ್ಥೆಯ ಹೊರಗೆ ಸೋಂಕು ಹರಡುವ ಸಾಧ್ಯತೆಯನ್ನು ತಪ್ಪಿಸಲು ಮನೆಯಲ್ಲಿ ಸಾಕುಪ್ರಾಣಿಗಳನ್ನು ಸಾಕದಂತೆ ನಿರ್ಬಂಧ ಹೇರುವಂತಹ ಕ್ರಮಗಳು ಇದರಲ್ಲಿ ಸೇರಿದ್ದವು.

► ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ?

ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ (WOAH) ನಿಗದಿತ ಮಾರ್ಗಸೂಚಿಗಳ ಪ್ರಕಾರ ಈ ಲಸಿಕೆಯು ಸುರಕ್ಷತೆ, ದಕ್ಷತೆ ಮತ್ತು ಸಾಮರ್ಥ್ಯ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ. ನಾಗರಾಜನ್ ಅವರ ಪ್ರಕಾರ, ಬೂಸ್ಟರ್ ಡೋಸ್ ನೀಡಿದ ನಂತರದ 24 ವಾರಗಳ ವೀಕ್ಷಣಾ ಅವಧಿಯಲ್ಲಿ, ಈ ಲಸಿಕೆಯು ನಿಗದಿತ H5N1 ವೈರಸ್ ವಿರುದ್ಧ ಶೇ. 100ರಷ್ಟು ರಕ್ಷಣೆ ನೀಡಿದೆ ಎಂಬುದು ಪ್ರಾಯೋಗಿಕ ಪರೀಕ್ಷೆಗಳಿಂದ ತಿಳಿದುಬಂದಿದೆ.

ಈ 24 ವಾರಗಳ ಫಲಿತಾಂಶವು ಪ್ರಾಯೋಗಿಕ ಹಂತದಲ್ಲಿ ಬೂಸ್ಟರ್ ಡೋಸ್ ನೀಡಿದ ನಂತರ ಗಮನಿಸಿದ ಅವಧಿಗೆ ಮಾತ್ರ ಸಂಬಂಧಿಸಿದೆ. ದೊಡ್ಡ ಪ್ರಮಾಣದಲ್ಲಿ ಬಳಸಿದಾಗ ಲಸಿಕೆಯ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು, ಪ್ರಯೋಗಕ್ಕೆ ಒಳಪಟ್ಟ ಕೋಳಿಗಳ ಸಂಖ್ಯೆ, ಪ್ರಯೋಗದ ವಿಧಾನ ಮತ್ತು ವಾಣಿಜ್ಯ ಕೋಳಿ ಫಾರಂಗಳಲ್ಲಿ ಇದರ ಕಾರ್ಯಕ್ಷಮತೆಯ ಕುರಿತು ಹೆಚ್ಚಿನ ವಿವರಗಳು ನೆರವಾಗಲಿವೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಈ ಲಸಿಕೆಯು ಒಂದು ಕೋಳಿಯಿಂದ ಇನ್ನೊಂದು ಕೋಳಿಗೆ ವೈರಸ್ ಹರಡುವುದನ್ನು ತಡೆದಿದೆ. ಪ್ರಯೋಗದ ಸಮಯದಲ್ಲಿ ಲಸಿಕೆ ಹಾಕಿದ ಕೋಳಿಗಳನ್ನು ಲಸಿಕೆ ಹಾಕದ ಕೋಳಿಗಳ ಜೊತೆ ಇರಿಸಲಾಗಿತ್ತು. ಈ ವೇಳೆ, ಲಸಿಕೆ ಪಡೆದ ಕೋಳಿಗಳಿಂದ ಲಸಿಕೆ ಪಡೆಯದ ಕೋಳಿಗಳಿಗೆ ವೈರಸ್ ಹರಡಿಲ್ಲ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಇದು ಬಹಳ ಮುಖ್ಯವಾಗಿದೆ, ಏಕೆಂದರೆ ಕೋಳಿಗಳಿಗೆ ತೀವ್ರ ರೋಗ ಬಾರದಂತೆ ತಡೆಯುವ ಲಸಿಕೆಯು ಫಾರಂಗಳಲ್ಲಿ ಕೋಳಿಗಳ ಸಾವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ವೈರಸ್ ಹರಡುವಿಕೆಯನ್ನು ತಡೆಯುವುದರಿಂದ ಪಕ್ಷಿಗಳಲ್ಲಿ ಸೋಂಕು ಹಬ್ಬುವುದು ನಿಯಂತ್ರಣಕ್ಕೆ ಬರುತ್ತದೆ ಮತ್ತು ಮುಂದೆ ರೋಗ ಉಲ್ಬಣಗೊಳ್ಳುವ ಅಪಾಯವೂ ತಗ್ಗುತ್ತದೆ.

►ಕೋಳಿ ಸಾಕಣೆದಾರರಿಗೆ ಇದರಿಂದ ಏನು ಪ್ರಯೋಜನ?

ಈ ಲಸಿಕೆಯ ಪ್ರತಿ ಡೋಸ್ ಬೆಲೆಯನ್ನು 1ರಿಂದ 2 ರೂ.ಗೆ ನಿಗದಿಪಡಿಸಲಾಗಿದ್ದು, ಕೋಳಿ ಸಾಕಣೆದಾರರಿಗೆ ಇದು ತುಂಬಾ ಅಗ್ಗವಾಗಿದೆ. ವಿಶೇಷವಾಗಿ ಮೊಟ್ಟೆ ಇಡುವ ಕೋಳಿಗಳು ಮತ್ತು ಬೆಳವಣಿಗೆಯ ಹಂತದಲ್ಲಿರುವ ಕೋಳಿಗಳನ್ನು ರೋಗ ಮತ್ತು ಸಾವಿನಿಂದ ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮೊಟ್ಟೆ ಉತ್ಪಾದನೆಗಾಗಿ ಸಾಕುವ ಕೋಳಿಗಳನ್ನು 'Layers' ಎಂದೂ, ಪ್ರೌಢಾವಸ್ಥೆಗೆ ಬೆಳೆಯುತ್ತಿರುವ ಕೋಳಿಗಳನ್ನು 'growers' ಎಂದೂ ಕರೆಯುತ್ತಾರೆ. ಇವುಗಳಿಗೆ ಸೋಂಕು ತಗುಲದಂತೆ ತಡೆಯುವುದರಿಂದ ರೈತರು ಆರ್ಥಿಕ ನಷ್ಟ ಮತ್ತು ಉತ್ಪಾದನೆಯಲ್ಲಿ ಆಗುವ ಅಡೆತಡೆಗಳಿಂದ ಪಾರಾಗಬಹುದು.

ಸರಿಯಾದ ರೀತಿಯಲ್ಲಿ ಲಸಿಕೆ ನೀಡುವುದರಿಂದ ಕೋಳಿಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದನ್ನು ಹಾಗೂ ಸಾವನ್ನು ತಡೆಯಬಹುದು, ಜೊತೆಗೆ ಲಸಿಕೆ ಪಡೆಯದ ಇತರ ಪಕ್ಷಿಗಳಿಗೆ ಸೋಂಕು ಹರಡದಂತೆ ತಡೆಯಬಹುದು ಎಂದು ಡಾ. ನಾಗರಾಜನ್ ಹೇಳಿದ್ದಾರೆ. ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಮೂಲಕ ಪರಿಸರ ಮಾಲಿನ್ಯವನ್ನೂ ಇದು ಕಡಿಮೆ ಮಾಡಬಲ್ಲದು.

ಇನ್ನೂ ಈ ಲಸಿಕೆಯು ರೈತರ ವಾಣಿಜ್ಯ ಬಳಕೆಗೆ ಮುಕ್ತವಾಗಿ ಲಭ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ಉತ್ಪಾದಿಸಿ ಕೋಳಿ ಸಾಕಣೆದಾರರಿಗೆ ತಲುಪಿಸಲು ತಯಾರಕ ಕಂಪೆನಿಗಳಿಗೆ ತಂತ್ರಜ್ಞಾನವನ್ನು ಹಸ್ತಾಂತರಿಸುವುದು ಮುಂದಿನ ಹಂತವಾಗಿದೆ. ತಂತ್ರಜ್ಞಾನ ಹಸ್ತಾಂತರ ಪ್ರಕ್ರಿಯೆಯನ್ನು "ಆದಷ್ಟು ಬೇಗ ಆರಂಭಿಸಲಾಗುವುದು" ಮತ್ತು ಲಸಿಕೆಯು ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಮಯವು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ನಿಗದಿಪಡಿಸುವ ಪ್ರಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ನಾಗರಾಜನ್ ತಿಳಿಸಿದ್ದಾರೆ.

► ಭಾರತದ ಪ್ರಾಣಿ ರೋಗ ಸಂಶೋಧನೆಗೆ ಇದರ ಮಹತ್ವವೇನು?

NIHSAD ಸಂಸ್ಥೆಯು ಈ ಹಿಂದೆಯೂ ಗಂಬೊರೊ, ಬ್ರೂಸೆಲ್ಲಾ ಅಬಾರ್ಟಸ್, ಕ್ಲಾಸಿಕಲ್ ಸ್ವೈನ್ ಫೀವರ್ ಮತ್ತು ಆಫ್ರಿಕನ್ ಸ್ವೈನ್ ಫೀವರ್‌ ನಂತಹ ರೋಗಗಳಿಗೆ ಸ್ವದೇಶಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ರೋಗಗಳ ಮೇಲೆ ನಿಗಾ ಇಡುವುದು, ರೋಗನಿರ್ಣಯ ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಲ್ಲ ರೋಗಾಣುಗಳ ಕುರಿತು ಅಧ್ಯಯನ ನಡೆಸುವುದನ್ನೂ ಈ ಸಂಸ್ಥೆಯ ಸಂಶೋಧನೆ ಒಳಗೊಂಡಿದೆ.

ಭಾರತದ ಕೋಳಿಗಳಲ್ಲಿ ಹೆಚ್ಚಿನ ಪ್ರಮಾಣದ ಹಕ್ಕಿ ಜ್ವರಕ್ಕೆ ಕಾರಣವಾಗಿರುವ ನಿರ್ದಿಷ್ಟ ವೈರಸ್ ಗುಂಪಿಗೆ (ಕ್ಲೇಡ್) ವಿಶೇಷವಾಗಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ನೀಡುವ ಮೂಲಕ ಈ H5N1 ಲಸಿಕೆಯು ಸಂಸ್ಥೆಯ ಸಾಧನೆಗೆ ಮತ್ತೊಂದು ಗರಿ ಮೂಡಿಸಿದೆ.

ಪ್ರಾಣಿ ಮತ್ತು ಪಕ್ಷಿಗಳ ರೋಗಗಳ ಲಸಿಕೆಗಾಗಿ ಭಾರತವು ಬೇರೆ ದೇಶಗಳ ಮೇಲೆ ಅವಲಂಬಿತವಾಗಿರಲಿಲ್ಲ ಎಂದು ನಾಗರಾಜನ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈ ಸಾಧನೆಯು ವಿದೇಶಿ ಲಸಿಕೆಗಳ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವುದಕ್ಕಿಂತ ಹೆಚ್ಚಾಗಿ, ಭಾರತದಲ್ಲಿ ಹರಡುತ್ತಿರುವ ನಿರ್ದಿಷ್ಟ ವೈರಸ್‌ ಗೆ ತಕ್ಕಂತೆ ಸ್ವದೇಶಿ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಕ್ಕೆ ಸಾಕ್ಷಿಯಾಗಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor