×
Ad

ಇರಾನ್ ಆಟಗಾರರ ಅಸಮಾಧಾನ; ತಂಡಕ್ಕೆ ನೀಡಿದ ಅನಾದರವನ್ನು ಖಂಡಿಸಿದ ಘಾಲೆನೋಯಿ, ತಾರೆಮಿ

Update: 2026-06-15 22:10 IST

 ಅಮೀರ್ ಘಾಲೆನೋಯಿ , ಮೆಹದಿ ತಾರೆಮಿ | Photo Credit : aljazeera.com

ಇರಾನ್ ತನ್ನ ಕಠಿಣ ಗ್ರೂಪ್ ಹಂತದ ಪಂದ್ಯಗಳನ್ನು ನ್ಯೂಜಿಲೆಂಡ್, ಬೆಲ್ಜಿಯಂ ಮತ್ತು ಈಜಿಪ್ಟ್ ವಿರುದ್ಧ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಆಡಲಿದೆ.

ತಿಂಗಳುಗಳ ಕಾಲ ನಡೆದ ಯುದ್ಧದ ನಂತರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕ ಮತ್ತು ಇರಾನ್ ಸಿದ್ಧವಾಗುತ್ತಿರುವ ಕೆಲವೇ ಗಂಟೆಗಳ ಮೊದಲು, ಇರಾನ್ನ ಫುಟ್ಬಾಲ್ ತಂಡ 2026ರ ಫಿಫಾ ವಿಶ್ವಕಫ್ ನ ತಮ್ಮ ಮೊದಲ ಪಂದ್ಯಕ್ಕಾಗಿ ಲಾಸ್ ಏಂಜಲೀಸ್ಗೆ ಆಗಮಿಸಿದೆ.

ಭಾನುವಾರ ವಿಶ್ವಕಪ್ ಆತಿಥೇಯ ನಗರಕ್ಕೆ ಆಗಮಿಸಿದ ನಂತರ ಇರಾನ್ನ ವ್ಯವಸ್ಥಾಪಕ ಅಮೀರ್ ಘಾಲೆನೋಯಿ ರಾಜಕೀಯದ ಬಗ್ಗೆ ಅಲ್ಲ, ಫುಟ್ಬಾಲ್ ಬಗ್ಗೆ ಮಾತನಾಡಲು ಬಯಸಿದ್ದರು. ಫಿಫಾ ಅಧಿಕಾರಿಗಳು ವರದಿಗಾರರು ಫುಟ್ಬಾಲ್ಗೆ ಸಂಬಂಧಿಸಿದ ಪ್ರಶ್ನೆಗಳನ್ನಷ್ಟೇ ಕೇಳಬೇಕು ಎಂದು ಎಚ್ಚರಿಕೆ ನೀಡಿದ್ದರು ಮತ್ತು ಘಾಲೆನೋಯಿ ಅವರೂ ಒಪ್ಪಿದ್ದರು.

ಆದರೆ ರಾಜಕೀಯ ಅಲ್ಲಿಯೂ ಇತ್ತು. ವೀಸಾ ನಿರಾಕರಣೆ ಹಾಗೂ ಮೆಕ್ಸಿಕೋ ಗಡಿಯಲ್ಲಿ ತಂಗಲು ವ್ಯವಸ್ಥೆ ಮಾಡಿರುವಂತಹ ಬೆಳವಣಿಗೆಗಳು ಚರ್ಚೆಗೆ ಬಂದವು. ಹೀಗಾಗಿ ಘಾಲೆನೋಯಿ ಸುಮ್ಮನಿರಲಿಲ್ಲ. ಅಮೆರಿಕ ವಿಶ್ವಕಪ್ ಆಯೋಜಿಸುತ್ತಿರುವಾಗ ಆಡಲು ಬಂದವರಿಗೆ ತಂಗಲು ಸೂಕ್ತ ಸ್ಥಳ ನೀಡದೆ ಇರುವುದು ಇರಾನ್ಗೆ ಸವಾಲು ಸೃಷ್ಟಿಸಿದೆ ಎಂದು ಅವರು ಹೇಳಿದರು.

ಇಂತಹ ನಡವಳಿಕೆಗಳು ಆಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ನಾವು ಗೆದ್ದರೂ ಅಥವಾ ಸೋತರೂ ಬಹಳ ಕಷ್ಟದ ಭಾವನೆಯನ್ನು ಎದುರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಸ್ಟ್ರೈಕರ್ ಮೆಹದಿ ತಾರೆಮಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮಾಲಿಯಾದ ರೆಫ್ರಿಗೆ ಅಮೆರಿಕ ಪ್ರವೇಶ ನಿರಾಕರಿಸಿರುವುದನ್ನು ಉಲ್ಲೇಖಿಸಿದ ಅವರು, ‘‘ಇರಾನ್ ಮಾತ್ರವಲ್ಲ, ಅನೇಕ ಮಂದಿ ಸಮಸ್ಯೆಗಳನ್ನು ಎದುರಿಸಿದ್ದಾರೆ’’ ಎಂದು ಹೇಳಿದರು.

‘‘ನಾವು ಯಾವಾಗಲೂ ಮಾತನಾಡುವ ಶಾಂತಿ ಮತ್ತು ಸಂತೋಷದ ಸುಂದರ ಅನುಭವ ನಮಗಾಗಿಲ್ಲ. ಜನರು ವಿಶ್ವಕಪ್ಗಾಗಿ ಎದುರು ನೋಡುವ ಸಂವೇದನೆ ಈ ಬಾರಿ ಬಹುಶಃ ಅದೇ ರೀತಿಯಲ್ಲಿ ಅವರಿಗೆ ಅನುಭವವಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಇಂತಹ ಉದ್ವಿಗ್ನತೆಯ ಸ್ಥಿತಿ ಸಂತೋಷವನ್ನು ದುರ್ಬಲಗೊಳಿಸುತ್ತದೆ. ಫಿಫಾದ ಸಂದೇಶವನ್ನೂ ದುರ್ಬಲಗೊಳಿಸುತ್ತದೆ’’ ಎಂದು ತಾರೆಮಿ ಹೇಳಿದ್ದಾರೆ.

ಇರಾನ್ ವಿಶ್ವಕಪ್ಗೆ ಅರ್ಹತೆ ಪಡೆದ ಮೊದಲ ತಂಡಗಳಲ್ಲಿ ಒಂದಾಗಿದೆ. ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ ತಂಡವು ಏಷ್ಯನ್ ಅರ್ಹತಾ ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಕೇವಲ ಒಂದು ಸೋಲು ಮತ್ತು ಎರಡು ಡ್ರಾ ಅನುಭವಿಸಿದೆ.

ಇಂತಹ ಫಾರ್ಮ್ ಇದ್ದರೂ, ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ನಂತರ ಫುಟ್ಬಾಲ್ನಲ್ಲಿ ತಂಡ ಭಾಗವಹಿಸುವುದೇ ಅನುಮಾನವಾಗಿತ್ತು.

ಇದೀಗ ನ್ಯೂಜಿಲೆಂಡ್, ಬೆಲ್ಜಿಯಂ ಮತ್ತು ಈಜಿಪ್ಟ್ ವಿರುದ್ಧದ ಕಠಿಣ ಗ್ರೂಪ್ ಹಂತದ ಪಂದ್ಯಗಳು ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News