ಸಿಂಹುಲಿಗಳ ಬಗ್ಗೆ ನಿಮಗೆ ಗೊತ್ತೆ? ಸಿಂಹ ಮತ್ತು ಹುಲಿಯಿಂದ ಜನಿಸಿದ ಈ ಸಂತತಿಯ ಅಗತ್ಯವಿದೆಯೆ?
ಸಾಂದರ್ಭಿಕ ಚಿತ್ರ (AI)
ಆಧುನಿಕ ಸಿಂಹುಲಿಗಳು ಮನುಷ್ಯರೇ ಸೆರೆಯಲ್ಲಿರಿಸಿ ಸೃಷ್ಟಿಸಿದವುಗಳೇ ವಿನಾ ನೈಸರ್ಗಿಕವಾಗಿ ಜನಿಸಿಲ್ಲ. ಹೀಗಾಗಿ ಸಿಂಹುಲಿಗಳು ನೋಡಲು ಆಕರ್ಷಕವಾಗಿ ಕಂಡರೂ, ಸಂರಕ್ಷಣೆಯ ಯಶೋಗಾಥೆಯಂತೂ ಅಲ್ಲ.
ವಿಶ್ವದ ಎರಡು ಶಕ್ತಿಶಾಲಿ ಪ್ರಾಣಿಗಳಿಗೆ ಸಂತತಿಯಾದಾಗ ಏನಾಗುತ್ತದೆ? ನಿಮಗೆ ಸಿಂಹುಲಿ (Liger) ಸಿಗುತ್ತದೆ! ಸಿಂಹ ಮತ್ತು ಹುಲಿ ಎರಡರ ಲಕ್ಷಣಗಳನ್ನು ಸಂಯೋಜಿಸುವ ಈ ಅಪರೂಪದ ಹೈಬ್ರಿಡ್, ಬಹುತೇಕ ಸಂದರ್ಭಗಳಲ್ಲಿ ತನ್ನ ಪೋಷಕರಿಗಿಂತ ದೊಡ್ಡದಾಗಿ ಬೆಳೆಯುತ್ತದೆ. ಸಿಂಹದಂತಹ ವೈಶಿಷ್ಟ್ಯಗಳು, ಹುಲಿಯ ಪಟ್ಟೆಗಳು ಹಾಗೂ ನಂಬಲಾಗದಷ್ಟು ದೊಡ್ಡ ಗಾತ್ರವು ಇದರ ವಿಶೇಷತೆ. ಸಿಂಹುಲಿಗಳು ನೈಸರ್ಗಿಕವಾಗಿ ರೂಪುಗೊಂಡ ಪ್ರಾಣಿಗಳಲ್ಲ; ಸಿಂಹ ಮತ್ತು ಹುಲಿಗಳನ್ನು ಸೆರೆಯಲ್ಲಿ ಜೊತೆಯಾಗಿ ಇರಿಸಿ ಮನುಷ್ಯರು ಸೃಷ್ಟಿಸಿದ ಸಂಕರ ಪ್ರಭೇದವಾಗಿದೆ.
ಮೊದಲಿಗೆ ಸಿಂಹುಲಿ ಎಂದರೇನು?
ಸಿಂಹುಲಿ ಅಥವಾ ಲೈಗರ್ ಎಂದರೆ ಗಂಡು ಸಿಂಹ ಮತ್ತು ಹೆಣ್ಣು ಹುಲಿಯ ಸಂತಾನೋತ್ಪತ್ತಿಯಿಂದ ಉಂಟಾಗುವ ಪ್ರಭೇದ. ಸಿಂಹಗಳು ಮತ್ತು ಹುಲಿಗಳು ಒಂದೇ ಪ್ಯಾಂಥೆರಾ (Panthera) ಜೀನಸ್‌ಗೆ ಸೇರಿರುವುದರಿಂದ ಅವುಗಳು ಅನುವಂಶಿಕವಾಗಿ ಪರಸ್ಪರ ಸಂತಾನೋತ್ಪತ್ತಿ ನಡೆಸುವಷ್ಟು ಸಮಾನವಾಗಿವೆ. ಆದರೆ ಇದು ಕಾಡಿನಲ್ಲಿ ನಡೆಯುವುದಿಲ್ಲ. ಏಕೆಂದರೆ ಸಿಂಹಗಳು ಮತ್ತು ಹುಲಿಗಳು ಒಂದೇ ಪ್ರದೇಶದಲ್ಲಿ ಸಹಜವಾಗಿ ಜೊತೆಯಾಗಿ ವಾಸಿಸುವುದು ಅತ್ಯಂತ ಅಪರೂಪ.
ಕಾಡು ಸಿಂಹಗಳು ಬಹುತೇಕ ಆಫ್ರಿಕಾದಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಗೀರ್ ಅರಣ್ಯದಲ್ಲಿ ಏಷ್ಯಾಟಿಕ್ ಸಿಂಹಗಳು ಸಣ್ಣ ಸಂಖ್ಯೆಯಲ್ಲಿ ಇವೆ. ಹುಲಿಗಳು ಏಷ್ಯಾದ ವಿವಿಧ ಭಾಗಗಳಲ್ಲಿ ನೆಲೆಸಿವೆ. ಅವುಗಳ ಆವಾಸಸ್ಥಾನ, ನಡವಳಿಕೆ ಮತ್ತು ಜೀವನಶೈಲಿಯೂ ಭಿನ್ನವಾಗಿದೆ. ಸಿಂಹಗಳು ಗುಂಪಿನಲ್ಲಿ ಬದುಕುವುದನ್ನು ಇಷ್ಟಪಡುತ್ತವೆ. ಆದರೆ ಹುಲಿಗಳು ಏಕಾಂಗಿಯಾಗಿ ಬದುಕಲು ಇಷ್ಟಪಡುತ್ತವೆ.
ಇದೇ ಕಾರಣದಿಂದ ಎಲ್ಲಾ ಸಿಂಹುಲಿಗಳು ಸೆರೆಯಲ್ಲೇ ಜನಿಸಿವೆ. ಸಿಂಹ ಮತ್ತು ಹುಲಿಯ ಮೊದಲ ಸಂಕರ ಸಂತಾನೋತ್ಪತ್ತಿಯ ಉಲ್ಲೇಖ 1700ರ ದಶಕದಲ್ಲೇ ದಾಖಲಾಗಿರುವುದಾಗಿ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ತಿಳಿಸಿದೆ.
ಇದಕ್ಕೆ ವಿರುದ್ಧವಾಗಿ, ಗಂಡು ಹುಲಿ ಮತ್ತು ಸಿಂಹಿಣಿಯ ಸಂತಾನೋತ್ಪತ್ತಿಯಿಂದ ಹುಟ್ಟುವ ಮರಿಯನ್ನು ಟೈಗಾನ್ (Tigon) ಎಂದು ಕರೆಯಲಾಗುತ್ತದೆ. ಇದು ಮತ್ತೊಂದು ವಿಭಿನ್ನ ಸಂಕರ ತಳಿಯಾಗಿದೆ.
ಸಿಂಹುಲಿಗಳು ದೈತ್ಯವಾಗಿರಲು ಕಾರಣವೇನು?
ದೈತ್ಯ ಗಾತ್ರವೇ ಸಿಂಹುಲಿಗಳ ಪ್ರಮುಖ ಆಕರ್ಷಣೆ. ಬೆಕ್ಕು ಪ್ರಭೇದಗಳಲ್ಲಿ ಇವುಗಳನ್ನು ವಿಶ್ವದ ಅತಿದೊಡ್ಡ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ. ಕೆಲವು ಸಿಂಹುಲಿಗಳು 400 ಕೆ.ಜಿ.ಗಿಂತಲೂ ಹೆಚ್ಚು ತೂಕ ಹೊಂದಿರುತ್ತವೆ. ಅಪರೂಪದ ಕೆಲವು ಉದಾಹರಣೆಗಳಲ್ಲಿ 1,000 ಕೆ.ಜಿ.ಗೂ ಅಧಿಕ ತೂಕ ದಾಖಲಾಗಿರುವ ವರದಿಗಳಿವೆ.
ಅತಿದೊಡ್ಡ ಸಿಂಹುಲಿಗಳು 3.3 ಮೀಟರ್ ಗಿಂತಲೂ ಹೆಚ್ಚು ಉದ್ದಕ್ಕೆ ಬೆಳೆಯುತ್ತವೆ. ಇದಕ್ಕೆ ಪ್ರಮುಖ ಕಾರಣ ತಳಿಶಾಸ್ತ್ರ. ಗಂಡು ಸಿಂಹದಿಂದ ಬರುವ ಬೆಳವಣಿಗೆಯನ್ನು ಉತ್ತೇಜಿಸುವ ಜೀನ್ ಗಳು ಮತ್ತು ಹೆಣ್ಣು ಹುಲಿಯಿಂದ ಬೆಳವಣಿಗೆಯನ್ನು ನಿಯಂತ್ರಿಸುವ ಸಂಕೇತಗಳ ಕೊರತೆಯಿಂದಾಗಿ, ಈ ಸಂಕರ ಪ್ರಭೇದ ಅಸಾಮಾನ್ಯ ಗಾತ್ರಕ್ಕೆ ಬೆಳೆಯುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.
ಅವುಗಳು ಹೇಗೆ ಕಾಣಿಸುತ್ತವೆ?
* ಸಿಂಹದ ಮುಖ ಮತ್ತು ವಿಶಾಲ ದೇಹ
* ಮಂದವಾದ ಹುಲಿ ಪಟ್ಟೆಗಳು
* ಹೊನ್ನಿನ ಅಥವಾ ಮರಳು ಬಣ್ಣದ ಚರ್ಮ
* ಕೆಲವು ಗಂಡುಗಳಲ್ಲಿ ಸಣ್ಣ ಕೇಸರ
* ಹುಲಿಯಂತೆಯೇ ಈಜುವುದರ ಮೇಲೆ ವಿಶೇಷ ಆಸಕ್ತಿ
* ತಳಿಶಾಸ್ತ್ರದ ವ್ಯತ್ಯಾಸಗಳಿಂದಾಗಿ ಯಾವುದೇ ಎರಡು ಸಿಂಹುಲಿಗಳು ಸಂಪೂರ್ಣ ಒಂದೇ ರೀತಿಯಾಗಿ ಕಾಣಿಸುವುದಿಲ್ಲ
ಸಂರಕ್ಷಣೆಗೆ ಉಪಯೋಗವಿದೆಯೆ?
ಸಿಂಹುಲಿಗಳು ನೋಡಲು ಸುಂದರವಾಗಿ ಕಾಣಬಹುದು. ಆದರೆ ಸಂರಕ್ಷಣಾವಾದಿಗಳು ಮತ್ತು ಪ್ರಾಣಿ ಕಲ್ಯಾಣ ತಜ್ಞರು ಇವುಗಳನ್ನು ಸಾಕಬೇಕೇ ಎಂಬ ಪ್ರಶ್ನೆಯನ್ನು ಬಹುಕಾಲದಿಂದ ಎತ್ತುತ್ತಿದ್ದಾರೆ.
ಸಿಂಹುಲಿಗಳ ಸಂತಾನೋತ್ಪತ್ತಿಯಿಂದ ಸಿಂಹ ಅಥವಾ ಹುಲಿಗಳ ಕಾಡು ಜನಸಂಖ್ಯೆಯನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಇದಲ್ಲದೆ, ಸಂಕರ ತಳಿಯಾಗಿರುವ ಕಾರಣ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
* ಕೀಲು ಮತ್ತು ಚಲನಶೀಲತೆ ಸಮಸ್ಯೆಗಳು
* ಹೃದಯದ ಮೇಲೆ ಹೆಚ್ಚುವರಿ ಒತ್ತಡ
* ಬೆಳವಣಿಗೆಗೆ ಸಂಬಂಧಿಸಿದ ತೊಡಕುಗಳು
* ನರವೈಜ್ಞಾನಿಕ ಸಮಸ್ಯೆಗಳು
* ಸಂತಾನೋತ್ಪತ್ತಿ ಸಮಸ್ಯೆಗಳು; ವಿಶೇಷವಾಗಿ ಗಂಡು ಸಿಂಹುಲಿಗಳಲ್ಲಿ ಫಲವತ್ತತೆ ಕೊರತೆ
ಆಧುನಿಕ ಸಿಂಹುಲಿಗಳು ಮನುಷ್ಯರೇ ಸೆರೆಯಲ್ಲಿರಿಸಿ ಸೃಷ್ಟಿಸಿದವುಗಳೇ ವಿನಾ ನೈಸರ್ಗಿಕವಾಗಿ ಜನಿಸಿಲ್ಲ. ಹೀಗಾಗಿ ಸಿಂಹುಲಿಗಳನ್ನು ನೋಡುವುದು ರೋಮಾಂಚಕಾರಿ ಅನುಭವವಾಗಿರಬಹುದು. ಆದರೆ ಅವು ಸಂರಕ್ಷಣೆಯ ಯಶೋಗಾಥೆಯ ಪ್ರತೀಕವಲ್ಲ ಎಂಬುದನ್ನು ತಜ್ಞರು ಒತ್ತಿ ಹೇಳುತ್ತಾರೆ.