ಭಾರತೀಯ ಅಂತರಿಕ್ಷ ಹ್ಯಾಕಥಾನ್ ಆಯೋಜಿಸುತ್ತಿರುವ ISRO; ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆ ಏನು?
Photo Credit : @isro
ಹ್ಯಾಕಥಾನ್ ಮೂಲಕ ಭಾರತದ ಅತ್ಯಂತ ಸಂಕೀರ್ಣವಾದ ಖಗೋಳ ಮತ್ತು ಹವಾಮಾನ ಸಂಬಂಧಿತ ಸವಾಲುಗಳಿಗೆ ಕ್ರೌಡ್-ಸೋರ್ಸ್ ಪರಿಹಾರಗಳನ್ನು ಪಡೆಯುವ ಗುರಿ ಹೊಂದಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾರತೀಯ ಅಂತರಿಕ್ಷ ಹ್ಯಾಕಥಾನ್ (BAH) 2026ರ ಮೂರನೇ ಆವೃತ್ತಿಗೆ ಚಾಲನೆ ನೀಡಿದೆ. ಭಾರತದಲ್ಲಿ ಬೆಳೆಯುತ್ತಿರುವ ಬಾಹ್ಯಾಕಾಶ-ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಕಲ್ಪನೆಗಳಿಗೆ ಕೊಡುಗೆ ನೀಡಲು ವಿದ್ಯಾರ್ಥಿಗಳ ಹೊಸ ಕಲ್ಪನೆಗಳನ್ನು ಆಹ್ವಾನಿಸಲಾಗಿದೆ. ಇನ್ನೋವೇಶನ್ ವೇದಿಕೆಯಾದ Hack2skill ಮೂಲಕ ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳನ್ನು ಸಾಕಾರಗೊಳಿಸಬಹುದು. ಈ ರಾಷ್ಟ್ರೀಯ ಉಪಕ್ರಮವು ಭಾರತದ ಅತ್ಯಂತ ಸಂಕೀರ್ಣವಾದ ಖಗೋಳ ಮತ್ತು ಹವಾಮಾನ ಸಂಬಂಧಿತ ಸವಾಲುಗಳಿಗೆ ಕ್ರೌಡ್-ಸೋರ್ಸ್ ಪರಿಹಾರಗಳನ್ನು ಒದಗಿಸುವ ಗುರಿ ಹೊಂದಿದೆ.
ಈಗಿನ ಸ್ಪರ್ಧೆಯು ಪ್ರಸ್ತುತ ಮಾನ್ಯತೆಪಡೆದ ಭಾರತೀಯ ಸಂಸ್ಥೆಗಳಲ್ಲಿ ದಾಖಲಾಗಿರುವ ಪದವಿಪೂರ್ವ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಸಂಶೋಧನಾ ವಿದ್ವಾಂಸರಿಗೆ ಮಾತ್ರ ತೆರೆದಿರುತ್ತದೆ. ವೃತ್ತಿರಪರರು ಭಾಗವಹಿಸುವಂತಿಲ್ಲ. ತಂಡಗಳು ಮೂರರಿಂದ ನಾಲ್ವರು ಸದಸ್ಯರನ್ನು ಹೊಂದಿರಬೇಕು. ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕ್ರಾಸ್ ಕಾಲೇಜು ಮತ್ತು ಕ್ರಾಸ್ ವಿಶ್ವವಿದ್ಯಾಲಯಗಳ ಸಹಯೋಗದ ಮೂಲಕ ಒಂದೇ ತಂಡವನ್ನು ರಚಿಸಲು ಅವಕಾಶವಿದೆ.
ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://hack2skill.com/login?redirect=/event/bah2026/registration?utm_source=hack2skill&utm_medium=homepage
ಭೂಮಿಯ ಮೇಲಿನ ಬಾಹ್ಯಾಕಾಶ ಪರಿಶೋಧನೆಯೊಂದಿಗೆ ಸಂಪನ್ಮೂಲ ನಿರ್ವಹಣೆಯನ್ನು ಸಂಯೋಜಿಸುವ 15 ಸಮಸ್ಯೆ ಹೇಳಿಕೆಗಳನ್ನು ಇಸ್ರೋ ಬಿಡುಗಡೆ ಮಾಡಿದೆ. ಭಾರತದ ಹವಾಮಾನದ AI ಚಾಲಿತ ಡಿಜಿಟಲ್ ಟ್ವಿನ್ ಅಭಿವೃದ್ಧಿಪಡಿಸುವುದು ಮೊದಲ ಉದ್ದೇಶವಾಗಿದೆ. ಜೊತೆಗೆ ಭವಿಷ್ಯದ ರೋವರ್ ಪ್ರಯಾಣ ಯೋಜನೆಗಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭೂಗತ ಮಂಜುಗಡ್ಡೆಯನ್ನು ಅಧ್ಯಯನ ಮಾಡಲು ಚಂದ್ರಯಾನ್-2 ರಾಡಾರ್ ಡೇಟಾವನ್ನು ವಿಶ್ಲೇಷಿಸುವುದು ಸವಾಲುಗಳಲ್ಲಿ ಸೇರಿವೆ.
ಇತರ ಸಮಸ್ಯೆಗಳಲ್ಲಿ ಆದಿತ್ಯ-ಎಲ್1 ಡೇಟಾ ಬಳಸಿಕೊಂಡು ಸೌರ ಜ್ವಾಲೆಗಳನ್ನು ಮುನ್ಸೂಚಿಸುವುದು, ಬೆಳಕಿನ ವಕ್ರಾಕೃತಿಗಳಿಂದ ಬಾಹ್ಯ ಗ್ರಹಗಳನ್ನು ಗುರುತಿಸುವುದು ಮತ್ತು ಉಪಗ್ರಹ ಚಿತ್ರಗಳಿಂದ ಮೋಡಗಳನ್ನು ತೆಗೆದು ಹಾಕಲು ಜನೆರೇಟಿವ್ AI ಅನ್ನು ಬಳಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಹ್ಯಾಕಥಾನ್ ನೋಂದಣಿ ಮತ್ತು ಕಲ್ಪನೆ ಸಲ್ಲಿಕೆ ಪ್ರಕ್ರಿಯೆಯು 2026 ಜೂನ್ 10ರಂದು ಪ್ರಾರಂಭವಾಗಿದೆ. ಭಾಗವಹಿಸುವವರು ಸವಾಲುಗಳ ತಾಂತ್ರಿಕ ವ್ಯಾಪ್ತಿ ಅರ್ಥಮಾಡಿಕೊಳ್ಳಲು ನೆರವಾಗಲು ಇಸ್ರೋ ಜೂನ್ 15 ಮತ್ತು 16ರಂದು ಎರಡು ಸಮಸ್ಯೆಯ ವಿವರಣಾತ್ಮಕ ಸೆಷನ್ ನಡೆಸಲಿದೆ. ನೋಂದಣಿ ವಿಂಡೋ 2026 ಜುಲೈ 1ರಂದು ಕೊನೆಯಾಗಲಿದೆ.
ಮೌಲ್ಯಮಾಪನ ಪ್ರಕ್ರಿಯೆಯ ನಂತರ 2026 ಜುಲೈ 10 ರಂದು ISRO ಶಾರ್ಟ್‌ಲಿಸ್ಟ್ ಮಾಡಿದ ತಂಡಗಳನ್ನು ಘೋಷಿಸುತ್ತದೆ. ಜುಲೈ 21ರಂದು ಸೇರ್ಪಡೆ ಸೆಷನ್ ನಡೆಯಲಿದೆ. ನಂತರ 2026 ಆಗಸ್ಟ್ 6 ಮತ್ತು 7ರಂದು 30 ಗಂಟೆಗಳ ಲೈವ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಹ್ಯಾಕಥಾನ್‌ನಲ್ಲಿ ಉಚಿತವಾಗಿ ಭಾಗವಹಿಸಬಹುದು. ಆಸಕ್ತ ತಂಡಗಳು ಅಧಿಕೃತವಾಗಿ Hack2skill ಇವೆಂಟ್ ಗೆ ಫೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ತಂಡಗಳು ಪ್ರೊಟೊಟೈಪ್ ನಿರ್ಮಿಸುವ ಅಗತ್ಯವಿಲ್ಲ. ಬದಲಾಗಿ ಕಲ್ಪನೆಯನ್ನು ಪ್ರಸ್ತಾಪದ ರೂಪದಲ್ಲಿ ಸಲ್ಲಿಸಬಹುದು. ಅದಕ್ಕಾಗಿ ವೇದಿಕೆಯಲ್ಲಿಯೇ ಟೆಂಪ್ಲೇಟ್ ಗಳು ಸಿಗುತ್ತವೆ.
ಅಂತಿಮ ಸುತ್ತಿಗೆ ಆಯ್ಕೆಯಾದವರು ಅಭಿವೃದ್ಧಿ ಪ್ರಕ್ರಿಯೆಲ್ಲಿ ISRO ವಿಜ್ಞಾನಿಗಳು ಮತ್ತು ಡೊಮೇನ್ ತಜ್ಞರಿಂದ ತಾಂತ್ರಿಕ ಮಾರ್ಗದರ್ಶನ ಪಡೆಯಲಿದ್ದಾರೆ. ರಾಷ್ಟ್ರೀಯ ಮನ್ನಣೆ ಜೊತೆಗೆ ಲೈವ್ ಸ್ಪೇಸ್ ಯೋಜನೆಗಳಲ್ಲಿ ಕೆಲಸ ಮಾಡಲು ISRO ದಲ್ಲಿ ಅಧಿಕೃತ ಇಂಟರ್ನ್‌ಶಿಪ್ ಅವಕಾಶಗಳಿಗಾಗಿ ಭಾಗವಹಿಸುವವರನ್ನು ಪರಿಗಣಿಸಬಹುದು. ಫೈನಲ್ ನಲ್ಲಿ ಭಾಗವಹಿಸುವವರಿಗೆ II AC ರೈಲು ಪ್ರಯಾಣದ ದರಗಳನ್ನು ಮರುಪಾವತಿಸಲಾಗುತ್ತದೆ.