ವಿಮಾನದ ವೇಗವನ್ನೂ ಮೀರಿಸುವ ರೈಲು ನಿರ್ಮಾಣಕ್ಕೆ ಜಪಾನ್ ಮತ್ತು ಚೀನಾ ಪೈಪೋಟಿ!
ಸಾಂದರ್ಭಿಕ ಚಿತ್ರ | Photo Credit : canva
ಸಾಮಾನ್ಯ ರೈಲುಗಳಂತಲ್ಲದೆ ಮ್ಯಾಗ್ಲೆವ್ ರೈಲುಗಳು ಕಾಂತೀಯ ಚುಂಬಕ ಶಕ್ತಿಯ ಮೂಲಕ ಹಳಿಗಳ ಮೇಲೆ ತೇಲುತ್ತಾ ಸಾಗುವ ಸಾರಿಗೆ ವ್ಯವಸ್ಥೆಯಾಗಿರುತ್ತದೆ.
ಜಪಾನ್ ಮತ್ತು ಚೀನಾ ವಿಶ್ವದ ಅತಿ ವೇಗದ ರೈಲುಗಳನ್ನು ನಿರ್ಮಿಸಲು ಪೈಪೋಟಿ ನಡೆಸುತ್ತಿವೆ. ಎರಡೂ ದೇಶಗಳು ಅದಕ್ಕಾಗಿ ಮ್ಯಾಗ್ಲೆವ್ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿವೆ. ಮ್ಯಾಗ್ಲೆವ್ ತಂತ್ರಜ್ಞಾನ ಎಂದರೆ ರೈಲುಗಳು ಚಕ್ರಗಳ ಮೇಲೆ ಓಡುವುದಿಲ್ಲ. ಬದಲಿಗೆ ಕಾಂತೀಯ ಚುಂಬಕ (Magnet) ಶಕ್ತಿಯ ಮೂಲಕ ಹಾದಿಯ ಮೇಲೆ ತೇಲುತ್ತಾ ಸಾಗುವ ಸಾರಿಗೆ ವ್ಯವಸ್ಥೆ. ಇದರಿಂದ ಘರ್ಷಣೆ ಕಡಿಮೆಯಾಗುತ್ತದೆ ಮತ್ತು ಅತ್ಯಂತ ವೇಗವನ್ನು ಸಾಧಿಸಲು ಸಹಾಯವಾಗುತ್ತದೆ. ಈ ತಂತ್ರಜ್ಞಾನದ ಮೂಲಕ ಸುಮಾರು 600 km/h (373 mph) ವೇಗವನ್ನು ತಲುಪಬಹುದು.
ಚೀನಾ CRRC ಮೂಲಕ ಮ್ಯಾಗ್ಲೆವ್ ರೈಲನ್ನು ಅಭಿವೃದ್ಧಿಪಡಿಸುತ್ತಿದೆ. ಜಪಾನ್ ಕೂಡ ತನ್ನ ಚುವೊ ಶಿಂಕನ್ಸೆನ್ ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತಿದೆ. ಇದು ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟಿಕ್ ಲೆವಿಟೇಶನ್ ಅಥವಾ SCMAGLEV ತಂತ್ರಜ್ಞಾನವನ್ನು ಬಳಸುತ್ತದೆ. ಪರೀಕ್ಷೆಯ ಸಮಯದಲ್ಲಿ ಜಪಾನಿನ ರೈಲು ಅಭೂತಪೂರ್ವ 603 km/h ವೇಗವನ್ನು ತಲುಪಿದೆ.
ಜಪಾನ್ ಸರ್ಕಾರ ಹೇಳಿರುವ ಪ್ರಕಾರ ಜಪಾನ್ನ ಮ್ಯಾಗ್ಲೆವ್ ತಂತ್ರಜ್ಞಾನ ಮೂಲಭೂತವಾಗಿ ವಿಭಿನ್ನವಾಗಿದೆ. SCMAGLEV ಅಭಿವೃದ್ಧಿಪಡಿಸುತ್ತಿರುವ ಸೆಂಟ್ರಲ್ ಜಪಾನ್ ರೈಲ್ವೇ ಕಂಪನಿಯ (ಜ್ಯೂನಿಯರ್ ಸೆಂಟ್ರಲ್) ಹಿರಿಯ ಕಾರ್ಪೋರೇಟ್ ಕಾರ್ಯನಿರ್ವಾಹಕ ಅಧಿಕಾರಿ ನೊರಿಯುಕಿ ಶಿರಾಕುನಿ ವಿವರಿಸಿರುವ ಪ್ರಕಾರ, “ಜಪಾನಿನ ಹೊರಗೆ ಅಭಿವೃದ್ಧಿಪಡಿಸಲಾದ ಮ್ಯಾಗ್ಲೆವ್ ತಂತ್ರಜ್ಞಾನವು ದೊಡ್ಡದಾದ, ಸೂಪರ್ ಕಂಡಕ್ಟಿಂಗ್ ಅಲ್ಲದ ಕಾಯ್ಲ್ಗಳನ್ನು ಬಳಸುತ್ತದೆ. ಹೀಗಾಗಿ ರೈಲನ್ನು 1 cm [0.4 inch] ಮಾತ್ರ ಎತ್ತರಕ್ಕೆ ಏರಿಸಬಹುದು ಮತ್ತು 430 km/h [267 mph] ವೇಗವನ್ನು ತಲುಪಬಹುದು.”
“SCMAGLEV ನ ಸುರಕ್ಷತೆ ಮತ್ತು ಸೌಕರ್ಯವು ಜಪಾನ್ನ ಹೆಮ್ಮೆಯ ಸಾಧನೆಗಳಲ್ಲಿ ಒಂದಾದ ಶಿಂಕನ್ಸೆನ್ ಬುಲೆಟ್ ರೈಲಿನ ಹಿಂದಿನ ಸಿದ್ಧಾಂತವನ್ನು ಆಧರಿಸಿದೆ. SCMAGLEV ಅನುಷ್ಠಾನ ಸೇರಿದಂತೆ ಈ ಪ್ರಮುಖ ಸಾರಿಗೆ ವ್ಯವಸ್ಥೆಯನ್ನು ಜಪಾನ್ನ ಮುಂದುವರಿದ ಕೈಗಾರಿಕಾ ಸಾಮರ್ಥ್ಯಗಳಿಲ್ಲದೆ ಅರಿತುಕೊಳ್ಳಲು ಸಾಧ್ಯವಿಲ್ಲ” ಎಂದು ಶಿರಾಕುನಿ ಹೇಳಿದ್ದಾರೆ
ಚುವೊ ಶಿಂಕನ್ಸೆನ್ ಟೋಕಿಯೊ ಮತ್ತು ನಾಗೋಯಾ ನಡುವಿನ ಪ್ರಯಾಣವನ್ನು ಹೆಚ್ಚು ವೇಗಗೊಳಿಸುತ್ತದೆ. ಪ್ರಸ್ತುತ ಸೇವೆಯನ್ನು ಅವಲಂಬಿಸಿ ರೈಲು ಪ್ರಯಾಣವು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮ್ಯಾಗ್ಲೆವ್ ಮಾರ್ಗವು ಕಾರ್ಯರೂಪಕ್ಕೆ ಬಂದ ಮೇಲೆ ಅದೇ ಪ್ರಯಾಣವು 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಮಾರ್ಗವು ಸುಮಾರು 286 km ಕಿಮೀ ದೂರ ಕ್ರಮಿಸಲಿದ್ದು, ಪ್ರಯಾಣಿಕರು ಜಪಾನಿನ ಎರಡು ಪ್ರಮುಖ ನಗರಗಳ ನಡುವೆ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಚೀನೀ ಮ್ಯಾಗ್ಲೆವ್ಗಳ ಸಂಶೋಧನೆ ಮತ್ತು ಅಭಿವೃದ್ಧಿ ತಂಡದ ನೇತೃತ್ವ ವಹಿಸಿರುವ CRRC ಉಪ ಮುಖ್ಯ ಎಂಜಿನಿಯರ್ ಡಿಂಗ್ ಸನ್ಸನ್, ಹೊಸ ಹೈಸ್ಪೀಡ್ ಮ್ಯಾಗ್ಲೆವ್ ಬೀಜಿಂಗ್ ಮತ್ತು ಶಾಂಘೈನ ನಡುವಿನ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಚೀನಾದ ಪ್ರಕಾರ, ಈ ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣದ ಸಿದ್ಧತೆ ಮತ್ತು ಸಮಯ ಪರಿಗಣಿಸಿದಾಗ 4.5 ಗಂಟೆಗಳು ಬೇಕಾಗುತ್ತವೆ. ಹೈ ಸ್ಪೀಡ್ ರೈಲು ಪ್ರಯಾಣವು 5.5 ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ. ಹೊಸ ಮ್ಯಾಗ್ಲೆವ್ ವ್ಯವಸ್ಥೆಯು ಒಟ್ಟು ಪ್ರಯಾಣದ ಸಮಯವನ್ನು 3.5 ಗಂಟೆಗಳಿಗೆ ಇಳಿಸುತ್ತದೆ.
ಚೀನಾದ ಹೊಸ ಹೈಸ್ಪೀಡ್ ಮ್ಯಾಗ್ಲೆವ್ ರೈಲು ಸಾರ್ವಜನಿಕ ಬಳಕೆಗೆ ಯಾವಾಗ ಸಿದ್ಧವಾಗಲಿದೆ ಎನ್ನುವ ಬಗ್ಗೆ ಖಚಿತತೆಯಿಲ್ಲ. ಯೋಜನೆ ಅಭಿವೃದ್ಧಿಯ ಹಂತದಲ್ಲಿದ್ದು, ಪರೀಕ್ಷಿಸಲಾಗುತ್ತಿರುವ ಕಾರಣ ಪ್ರಯಾಣಿಕರು ಹೆಚ್ಚು ಸಮಯ ಕಾಯಬೇಕಾಗಿ ಬರಬಹುದು. ಆದರೆ ಜಪಾನ್ ತನ್ನ ಮ್ಯಾಗ್ಲೆವ್ ಯೋಜನೆಗೆ ಸ್ಪಷ್ಟ ಸಮಯ ಹೊಂದಿದೆ. ಟೋಕಿಯೋ ಮತ್ತು ನಾಗೋಯಾವನ್ನು ಸಂಪರ್ಕಿಸುವ ಚುವೊ ಶಿಂಕನ್ಸೆನ್ನ ಮೊದಲ ಹಂತವನ್ನು ಮೂಲತಃ 2027ರಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಕೃಪೆ: NDTV