ಸುಸ್ಥಿರ ಅಭಿವೃದ್ಧಿ, ಮಾಹಿತಿ ಹಂಚಿಕೆ, ಹವಾಮಾನ ನಿಧಿ ಅಗತ್ಯವನ್ನು ನೆನಪಿಸಿದ ನೇಪಾಳ ಪ್ರವಾಹ
► ಅಥಿರಾ ಪೆರಿಂಚೆರಿ – thewire. in ವರದಿ
ಆಗಸ್ಟ್ 26ರಂದು ನೇಪಾಳದ ಭೋಟೇಕೋಶಿ ನದಿಯ ದಂಡೆಗಳಿಗೆ ಕೆಸರು ಮಿಶ್ರಿತ, ಬೃಹತ್ ಅಲೆಗಳು ಅಪ್ಪಳಿಸಿದವು. ಮನೆಗಳು, ಶಾಲೆಗಳು, ಕಟ್ಟಡಗಳು ಹಾಗೂ ಅಣೆಕಟ್ಟುಗಳನ್ನು ತನ್ನೊಂದಿಗೆ ಕೊಚ್ಚಿಕೊಂಡು ಹೋದ ಕೆಸರಿನ ರಾಶಿ, ಕೊನೆಗೆ ವಿಶಾಲವಾದ ಬೂದು ಬಣ್ಣದ ಖಾಲಿ ಗುರುತನ್ನು ಮಾತ್ರ ಉಳಿಸಿಹೋಯಿತು. ಹನ್ನೆರಡು ದಿನಗಳ ನಂತರ, ಸುಮಾರು 1,350 ಜನರು ಸಾವನ್ನಪ್ಪಿದ್ದಾರೆ. ಸುಮಾರು 5,000 ಜನರು ಇಂದಿಗೂ ಪತ್ತೆಯಾಗಿಲ್ಲ.
ಉಪಗ್ರಹ ಮತ್ತು ಫೋಟೊಗಳ ಸಾಕ್ಷ್ಯಗಳ ಪ್ರಕಾರ, ನೇಪಾಳ-ಚೀನಾ ಗಡಿಯ ರಸುವಾ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ನೀರ್ಗಲ್ಲು ಕುಸಿತವೇ ಇದಕ್ಕೆ ಮುಖ್ಯ ಕಾರಣ. ಬೆಟ್ಟದ ಒಂದು ಭಾಗ ಕುಸಿದು ಸಾವಿರಾರು ಅಡಿ ಕೆಳಗೆ ಬಿದ್ದಿತ್ತು. ಇದರ ತೀವ್ರತೆಗೆ ಭೂಮಿ ಕಂಪಿಸಿದ್ದು, ವಿಜ್ಞಾನಿಗಳು ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪವನ್ನು ದಾಖಲಿಸಿದ್ದಾರೆ.
ಈ ಘಟನೆಯಲ್ಲಿ ಹವಾಮಾನ ಬದಲಾವಣೆಯ ಪಾತ್ರದ ಕುರಿತು ಇಂದಿಗೂ ಚರ್ಚೆಗಳು ನಡೆಯುತ್ತಿವೆಯಾದರೂ, ವಿಜ್ಞಾನ ಸ್ಪಷ್ಟವಾಗಿದೆ. ನೀರ್ಗಲ್ಲುಗಳು ಕರಗುವುದರಿಂದ ಹಿಡಿದು ಪರ್ಮಾಫ್ರಾಸ್ಟ್ ಹಿಮ ಕರಗುವವರೆಗೆ, ಇಡೀ ಹಿಮಾಲಯ ಶ್ರೇಣಿಯಾದ್ಯಂತ ಹವಾಮಾನ ಬದಲಾವಣೆಯ ಲಕ್ಷಣಗಳು ಗೋಚರಿಸುತ್ತಿವೆ. ಹಿಮಾಲಯ ಪ್ರದೇಶದಲ್ಲಿ ಉತ್ತಮ ಅಭಿವೃದ್ಧಿ ಮಾದರಿಗಳ ಅಗತ್ಯವನ್ನು ವಿಜ್ಞಾನಿಗಳು ಮತ್ತು ಹೋರಾಟಗಾರರು ಎತ್ತಿ ತೋರಿಸಿದ್ದಾರೆ. ಜೊತೆಗೆ ದೇಶಗಳ ನಡುವೆ ಮಾತ್ರವಲ್ಲದೆ ಭಾರತದ ಒಳಗಿನ ಸಂಶೋಧನಾ ತಂಡಗಳು, ಸಂಸ್ಥೆಗಳು ಮತ್ತು ಇಲಾಖೆಗಳ ನಡುವೆಯೂ ಮಾಹಿತಿ ಹಂಚಿಕೊಳ್ಳುವುದು ಮುಖ್ಯ ಎಂದು ಒತ್ತಿ ಹೇಳಿದ್ದಾರೆ. ನೇಪಾಳವು 2.56 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿ, ಮನೆ ಹಾಗೂ ಮೂಲಸೌಕರ್ಯಗಳನ್ನು ಕಳೆದುಕೊಂಡಿದ್ದು, ಮರುನಿರ್ಮಾಣವೇ ಈಗ ಪ್ರಮುಖ ಆದ್ಯತೆಯಾಗಿದೆ.
ಇಂತಹ ವಿಕೋಪಗಳು ಸಂಭವಿಸಿದಾಗ ಎಲ್ಲಾ ದೇಶಗಳೂ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲೇ ಹವಾಮಾನ ನಿಧಿಗಳು ನೆರವಿಗೆ ಬರಬೇಕು ಎಂದು ತಜ್ಞರು ಹೇಳುತ್ತಾರೆ.
►ಹವಾಮಾನ ಬದಲಾವಣೆಯ ಪಾತ್ರವೇನು?
ನೇಪಾಳ-ಚೀನಾ ಗಡಿಯ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ 4.4 ತೀವ್ರತೆಯ ಭೂಕಂಪವೇ ಭೋಟೇಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು ಎಂದು ವಿಜ್ಞಾನಿಗಳು ಆರಂಭದಲ್ಲಿ ಭಾವಿಸಿದ್ದರು. ಆದರೆ, ಲ್ಯಾಂಗ್ಟ್ಯಾಂಗ್ ಲಿರುಂಗ್ (ಚೀನಾ ಗಡಿಯಲ್ಲಿರುವ ನೇಪಾಳದ ಶೃಂಗ) ಪ್ರದೇಶದಲ್ಲಾದ ನೀರ್ಗಲ್ಲು ಕುಸಿತವೇ 5.2 ತೀವ್ರತೆಯ ಈ ಭೂಕಂಪಕ್ಕೆ ಪ್ರಮುಖ ಕಾರಣ ಎಂದು ‘ಯುಎಸ್ ಜಿಯೋಲಾಜಿಕಲ್ ಸರ್ವೇ’ ನಂತರ ಸ್ಪಷ್ಟಪಡಿಸಿತು. ಕೆಲವು ದಿನಗಳ ಬಳಿಕ ಹೆಚ್ಚಿನ ಉಪಗ್ರಹ ದತ್ತಾಂಶಗಳು ಲಭ್ಯವಾದಾಗ, ಹಿಮ ಮತ್ತು ಬಂಡೆಗಳು ಒಟ್ಟಾಗಿ ಕುಸಿದಿರುವುದು ಬೆಳಕಿಗೆ ಬಂದಿತು. ಪರ್ವತದ ಆಧಾರ ಬಂಡೆಗಳ ವೈಫಲ್ಯದಿಂದಾಗಿ ಬೆಟ್ಟದ ಒಂದು ಭಾಗ ಕುಸಿದು ಸಾವಿರಾರು ಅಡಿ ಕೆಳಗೆ ಬಿದ್ದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಹಿಮವನ್ನು ಪುಡಿಮಾಡಿ, ಕಸ-ಕಡ್ಡಿಗಳನ್ನು ಒಟ್ಟುಗೂಡಿಸಿಕೊಂಡು ವೇಗವಾಗಿ ಕೆಳಮುಖವಾಗಿ ಹರಿದಿದೆ.
ಹವಾಮಾನ ಬದಲಾವಣೆಯಿಂದ ನೀರ್ಗಲ್ಲುಗಳು ಕರಗಿ ಈ ಹಿಮ-ಬಂಡೆ ಕುಸಿತ ಸಂಭವಿಸಿದೆಯೇ? ಈ ಘಟನೆಗೆ ಹವಾಮಾನ ಬದಲಾವಣೆಯೇ ಮುಖ್ಯ ಕಾರಣ ಎಂದು ಖಚಿತವಾಗಿ ಹೇಳುವುದು ಕಷ್ಟ ಎಂದು ಭೌಗೋಳಿಕ ವಿಜ್ಞಾನಿಯೊಬ್ಬರು ‘ದಿ ವೈರ್’ಗೆ ತಿಳಿಸಿದ್ದಾರೆ. ಆದರೆ ಕಾಠ್ಮಂಡು ಮೂಲದ ‘ಇಸಿಮೋಡ್’ (ICIMOD) ಸಂಸ್ಥೆಯ ಹಿರಿಯ ಹಿಮಗೋಳ ತಜ್ಞ ಫಾರೂಕ್ ಆಝಂ ಅವರ ಪ್ರಕಾರ, ಇದು ಹವಾಮಾನ ಮತ್ತು ಭೌಗೋಳಿಕ ಕಾರಣಗಳೆರಡರ ಮಿಶ್ರಣವಾಗಿರಬಹುದು.
"ಇದು ನೇಪಾಳದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಕೋಪಗಳಲ್ಲಿ ಒಂದಾಗಿದೆ. ಹಿಮನದಿಗಳು ಹಿಂದೆ ಸರಿಯುತ್ತಿದ್ದು, ಕೆಳಗಿನ ಬಂಡೆಯ ಮೇಲ್ಮೈಗಳನ್ನು ತೆರೆದಿಡುತ್ತಿವೆ. ಇವುಗಳ ಆಲ್ಬೆಡೋ (ಸೂರ್ಯನ ಬೆಳಕನ್ನು ಪ್ರತಿಫಲಿಸುವ ಶಕ್ತಿ) ಕಡಿಮೆಯಿರುವುದರಿಂದ ಇವು ಹೆಚ್ಚಿನ ಶಾಖವನ್ನು ಹೀರಿಕೊಳ್ಳುತ್ತವೆ. ನೀರ್ಗಲ್ಲುಗಳು ಕರಗಿದಾಗ ಸಡಿಲವಾದ ಮಣ್ಣು ಮತ್ತು ತ್ಯಾಜ್ಯ ಉಳಿಯುತ್ತದೆ. ಆದ್ದರಿಂದ ಇದು ಹವಾಮಾನ ಬದಲಾವಣೆ ಮತ್ತು ಭೌಗೋಳಿಕ ಪ್ರಕ್ರಿಯೆ ಎರಡರ ಪರಿಣಾಮದಂತೆ ಕಾಣುತ್ತದೆ" ಎಂದು ಸೆಪ್ಟೆಂಬರ್ 4ರಂದು ನಡೆದ ಆನ್ಲೈನ್ ಚರ್ಚೆಯಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಜ್ಞಾನ ಸ್ಪಷ್ಟವಾಗಿದೆ: ಹಿಮಾಲಯ ಪ್ರದೇಶದಾದ್ಯಂತ ಹವಾಮಾನ ಬದಲಾವಣೆಯ ಪರಿಣಾಮಗಳು ಈಗಾಗಲೇ ಕಾಣಿಸಿಕೊಳ್ಳುತ್ತಿವೆ. ಭಾರತವೂ ಇದರ ಬಿಸಿಯನ್ನು ಅನುಭವಿಸುತ್ತಿದೆ.
‘ಪರ್ಮಾಫ್ರಾಸ್ಟ್’ ಕರಗುತ್ತಿದೆ. ಇದು ಕನಿಷ್ಠ ಎರಡು ಸತತ ವರ್ಷಗಳ ಕಾಲ ಸೊನ್ನೆ ಡಿಗ್ರಿ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿರುವ ಮಣ್ಣು ಅಥವಾ ಬಂಡೆಯ ಪದರವಾಗಿದ್ದು, ಭಾರೀ ಪ್ರಮಾಣದ ಇಂಗಾಲವನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಲಿಂಡೂರ್ ಗ್ರಾಮದಲ್ಲಿ ಸಂಭವಿಸಿದ ಪರ್ಮಾಫ್ರಾಸ್ಟ್ ಕರಗುವಿಕೆಯಿಂದ ಭೂಮಿ ಕುಸಿತದ ಕುರಿತು ‘ಸೈಂಟಿಫಿಕ್ ರಿಪೋರ್ಟ್ಸ್’ನಲ್ಲಿ ಪ್ರಕಟವಾದ ಅಧ್ಯಯನವು, ವರ್ಷಕ್ಕೆ 7.9ರಿಂದ -6.8 ಸೆಂ.ಮೀ ವರೆಗೆ ಭೂಮಿ ಕುಸಿಯುತ್ತಿರುವುದನ್ನು ಪತ್ತೆಹಚ್ಚಿದೆ. 1950ರಿಂದ 2024ರವರೆಗಿನ ದತ್ತಾಂಶಗಳು ಗ್ರಾಮದಲ್ಲಿ ತಾಪಮಾನವು ಪ್ರತಿ ವರ್ಷ 0.02°Cನಂತೆ ಹೆಚ್ಚುತ್ತಿರುವುದನ್ನು ಮತ್ತು ಮಳೆಯ ಮಾದರಿಯಲ್ಲಿ ಬದಲಾವಣೆಯಾಗಿರುವುದನ್ನು ತೋರಿಸಿವೆ. ಸ್ಥಳೀಯ ಭೌಗೋಳಿಕತೆ ಮತ್ತು ಬೆಟ್ಟದ ನೀರ್ಗಲ್ಲುಗಳ ಕುಸಿತದ ವೇಗವನ್ನು ಹೆಚ್ಚಿಸಿ, ಪ್ರದೇಶದಲ್ಲಿ ಬಿರುಕುಗಳು ಮೂಡಲು ಕಾರಣವಾಗಿವೆ ಎಂದು ಅಧ್ಯಯನ ಉಲ್ಲೇಖಿಸಿದೆ.
ನೀರ್ಗಲ್ಲುಗಳು ಕುಗ್ಗುತ್ತಿವೆ. ಲಡಾಖ್ನ ಡ್ರಾಸ್ ಜಲಾನಯನ ಪ್ರದೇಶದ 77 ಹಿಮನದಿಗಳ 2000ರಿಂದ 2020ರವರೆಗಿನ ಉಪಗ್ರಹ ಚಿತ್ರಗಳು, ಇಲ್ಲಿನ ಒಟ್ಟು ಹಿಮನದಿ ಪ್ರಮಾಣವು 5.31 ± 0.33 ಚದರ ಕಿ.ಮೀ.ನಷ್ಟು ಕುಗ್ಗಿದೆ ಎಂಬುದನ್ನು ತೋರಿಸುತ್ತವೆ. ಹಿಮಾಲಯದಲ್ಲಿ ಹಿಮನದಿಗಳು ಕರಗುತ್ತಿದ್ದಂತೆ, ಹಿಮನದಿ ಸರೋವರಗಳ ಸಂಖ್ಯೆ ಮತ್ತು ಗಾತ್ರ ಹೆಚ್ಚಾಗಿದೆ. ಇಸ್ರೋ ಪ್ರಕಾರ, 2016-17ರಲ್ಲಿ ಹಿಮಾಲಯದ ನದಿ ಜಲಾನಯನ ಪ್ರದೇಶಗಳಲ್ಲಿ ಗುರುತಿಸಲಾದ 10 ಹೆಕ್ಟೇರ್ ಗಿಂತ ದೊಡ್ಡದಾದ 2,431 ಸರೋವರಗಳಲ್ಲಿ, 676 ಹಿಮನದಿ ಸರೋವರಗಳು 1984ರಿಂದೀಚೆಗೆ "ಗಣನೀಯವಾಗಿ ವಿಸ್ತರಿಸಿವೆ". ಭಾರತದಲ್ಲಿ ಇಂತಹ 130 ಸರೋವರಗಳಿವೆ. ಈ 676 ಸರೋವರಗಳಲ್ಲಿ 601 ಸರೋವರಗಳು ತಮ್ಮ ಮೂಲ ಗಾತ್ರಕ್ಕಿಂತ ಎರಡಕ್ಕಿಂತ ಹೆಚ್ಚು ಪಟ್ಟು ದೊಡ್ಡದಾಗಿವೆ. ಹಿಮನದಿ ಸರೋವರಗಳು ವಿಸ್ತರಿಸುವುದರಿಂದ, 2023ರಲ್ಲಿ ಸಿಕ್ಕಿಂನ ದಕ್ಷಿಣ ಲಹೋನಾಕ್ ಸರೋವರದಲ್ಲಿ ಸಂಭವಿಸಿದಂತೆ ‘ಹಿಮನದಿ ಸರೋವರ ಸ್ಪೋಟದ ಪ್ರವಾಹ’ (GLOF) ಸಂಭವಿಸುವ ಅಪಾಯ ಹೆಚ್ಚಿರುತ್ತದೆ.
ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳ ನಡುವೆ, ಮಾನವ ಚಟುವಟಿಕೆಗಳಿಂದಾಗಿ ಈ ನೈಸರ್ಗಿಕ ಪರಿಸರ ವೇಗವಾಗಿ ಬದಲಾಗುತ್ತಿದ್ದು, ಭಾರತ ಸೇರಿದಂತೆ ಪರ್ವತ ಸಾಲುಗಳನ್ನು ಹೊಂದಿರುವ ಎಲ್ಲಾ ದೇಶಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದಕ್ಕೆ ನೇಪಾಳದ ಪ್ರವಾಹವೇ ಮುನ್ನೆಚ್ಚರಿಕೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.
►ಅಭಿವೃದ್ಧಿ ಮಾದರಿಗಳ ಕುರಿತು ಪ್ರಶ್ನೆಗಳು
ಹಿಮಾಚಲ ಪ್ರದೇಶದ ‘ಹಿಮಧಾರ ಎನ್ವಿರಾನ್ಮೆಂಟ್ ರಿಸರ್ಚ್ ಅಂಡ್ ಆಕ್ಷನ್ ಕಲೆಕ್ಟಿವ್’ ಸಂಸ್ಥೆಯ ಸಹ-ಸಂಸ್ಥಾಪಕಿ ಮಾನ್ಸಿ ಅಶೆರ್ ಅವರ ಪ್ರಕಾರ, ಹಿಮಾಲಯ ಪ್ರದೇಶದ ಭಾರತೀಯ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಪ್ರಸ್ತುತ ಅಭಿವೃದ್ಧಿ ಮಾದರಿಯ ಸೂಕ್ಷ್ಮತೆಯನ್ನು ತುರ್ತಾಗಿ ಪರಿಶೀಲಿಸುವ ಅಗತ್ಯವಿದೆ. ನಾವು ಮುನ್ನೆಲೆಗೆ ತರುತ್ತಿರುವ ಆಧುನಿಕ ಮೂಲಸೌಕರ್ಯಗಳು ವೇಗ ಮತ್ತು ಸಾಗಣೆಯ ಸರಳತೆಗೆ ಮಾತ್ರ ಆದ್ಯತೆ ನೀಡುತ್ತಿವೆ ಎಂದು ಅವರು ಹೇಳಿದರು. ಉದಾಹರಣೆಗೆ, ನಾಲ್ಕು ಪಥಗಳ ರಸ್ತೆಯ ಮುಖ್ಯ ಉದ್ದೇಶ ಪ್ರಯಾಣದ ಸಮಯವನ್ನು ಕಡಿತಗೊಳಿಸುವುದಾಗಿದೆ. ಅದಕ್ಕಾಗಿ ಪರ್ವತ ಪ್ರದೇಶಗಳ ಸಹಜ ಅಂಕುಡೊಂಕು ದಾರಿಗಳನ್ನು ಅಡಚಣೆ ಎಂದು ನೋಡಲಾಗುತ್ತಿದೆ.
"ಅಂಕುಡೊಂಕು ದಾರಿಗಳನ್ನು ತೆರವುಗೊಳಿಸಲು, ಬೆಟ್ಟಗಳನ್ನು ಕೊರೆಯಬೇಕು ಅಥವಾ ಮೇಲ್ಮೈಯನ್ನು ಅಗೆಯಬೇಕು. ಎರಡೂ ಸಂದರ್ಭಗಳಲ್ಲಿ ಅಪಾರ ಪ್ರಮಾಣದ ಮಣ್ಣು ಮತ್ತು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಿಂದ ಭೂಸವೆತ, ಅರಣ್ಯ ನಾಶ ಹಾಗೂ ಭೂವೈಜ್ಞಾನಿಕ ಅಸ್ಥಿರತೆ ಉಂಟಾಗುತ್ತದೆ. ಈ ತ್ಯಾಜ್ಯವನ್ನು ಬೆಟ್ಟದ ಇಳಿಜಾರುಗಳಲ್ಲಿ ಚೆಲ್ಲಲಾಗುತ್ತದೆ ಅಥವಾ ನದಿಗಳಿಗೆ ಎಸೆಯಲಾಗುತ್ತದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾದಾಗ ಇದು ಕೆಳಭಾಗದಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಗುತ್ತದೆ. ನಾವು ಪದೇ ಪದೇ ಅದೇ ರೀತಿಯ ಪುನರ್ನಿರ್ಮಾಣ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಈ ವಿನಾಶದ ಸರಣಿ ಮುಂದುವರಿಯುತ್ತಿದೆ" ಎಂದು ಅವರು ಹೇಳಿರುವುದಾಗಿ ‘ದಿ ವೈರ್’ ವರದಿ ಉಲ್ಲೇಖಿಸಿದೆ.
ಇಂತಹ ಅಭಿವೃದ್ಧಿ ಮಾದರಿಯು ಜನರು, ಪರಿಸರ ಮತ್ತು ಸಾರ್ವಜನಿಕ ಖಜಾನೆಯ ಮೇಲೆ ಭಾರೀ ಆರ್ಥಿಕ ಹೊರೆ ಹೇರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನೇಪಾಳ ಸಾಲದ ಸುಳಿಗೆ ಸಿಲುಕಿದೆ, ಹಿಮಾಚಲ ಪ್ರದೇಶವು ಭಾರೀ ವಿತ್ತೀಯ ಕೊರತೆಯನ್ನು ಎದುರಿಸುತ್ತಿದೆ. ಇವುಗಳಿಗೆ ನೈಸರ್ಗಿಕ ವಿಕೋಪಗಳ ಕೊಡುಗೆಯೂ ದೊಡ್ಡದಾಗಿದೆ. ಆದ್ದರಿಂದ ಇದಕ್ಕೆ ಕಾರಣವಾಗುತ್ತಿರುವ ನಮ್ಮ ಆರ್ಥಿಕ ವ್ಯವಸ್ಥೆಯ ಸೂಕ್ಷ್ಮತೆಯ ಕುರಿತು ಚರ್ಚಿಸುವ ಅಗತ್ಯವಿದೆ. ವ್ಯಾಪಾರ ವಹಿವಾಟು ಸುಲಭಗೊಳಿಸುವ ಆತುರದಲ್ಲಿ ಹಿಮಾಲಯದ ವಿಜ್ಞಾನ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಲಭ್ಯ ದತ್ತಾಂಶಗಳನ್ನು ಬದಿಗಿಡಲಾಗಿದೆ" ಎಂದು ಅವರು ಹೇಳಿದರು.
ನಾಗರಿಕ ಸಮಾಜ ಸಂಘಟನೆಗಳು, ಪರಿಸರ ಸಂಸ್ಥೆಗಳು ಮತ್ತು ಹೋರಾಟಗಾರರನ್ನು ಒಳಗೊಂಡ ‘ಪೀಪಲ್ ಫಾರ್ ಹಿಮಾಲಯ’ ಸಮೂಹವು, ಅಭಿವೃದ್ಧಿಯ ಹೆಸರಿನಲ್ಲಿ ಈ ಪ್ರದೇಶದಲ್ಲಿ ನಡೆಯುತ್ತಿರುವ ವೇಗದ ಬದಲಾವಣೆಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ.
"ಕಳೆದ ಕೆಲವು ದಶಕಗಳಲ್ಲಿ ಹಿಮಾಲಯ ಪ್ರದೇಶವು ಜಲವಿದ್ಯುತ್, ಪ್ರವಾಸೋದ್ಯಮ, ರಸ್ತೆಗಳು, ಸುರಂಗಗಳು, ನಗರೀಕರಣ ಮತ್ತು ಇತರ ಮೂಲಸೌಕರ್ಯ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ" ಎಂದು ಸೆಪ್ಟೆಂಬರ್ 7ರಂದು ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಈ ಯೋಜನೆಗಳು ಪ್ರದೇಶಕ್ಕೆ ಅಲ್ಪಾವಧಿಯ ಆರ್ಥಿಕ ಅವಕಾಶಗಳನ್ನು ತಂದಿರಬಹುದು. ಆದರೆ ಅದೇ ಸಮಯದಲ್ಲಿ ನದಿಗಳು, ಬೆಟ್ಟದ ಇಳಿಜಾರುಗಳು, ಅರಣ್ಯಗಳು ಮತ್ತು ಜನವಸತಿ ಪ್ರದೇಶಗಳನ್ನು ಶಾಶ್ವತವಾಗಿ ಹಾನಿಗೊಳಿಸಿವೆ. ಜನರು ವಾಸಿಸುವ ಸ್ಥಳ, ನೀರಿನ ಹರಿವಿನ ದಾರಿ ಮತ್ತು ಬೆಟ್ಟಗಳ ಸ್ವರೂಪ ಸಂಪೂರ್ಣವಾಗಿ ಬದಲಾಗಿದೆ. ಆದ್ದರಿಂದ, ಭೂವೈಜ್ಞಾನಿಕ ಹಾಗೂ ಹವಾಮಾನ ಪ್ರಕ್ರಿಯೆಗಳು ಮತ್ತು ಅಪಾಯವನ್ನು ಹೆಚ್ಚಿಸಿರುವ ಅಭಿವೃದ್ಧಿ ನೀತಿಗಳ ನಡುವಿನ ಸಮ್ಮಿಲನದಿಂದಲೇ ಈ ವಿಕೋಪದ ಅಪಾಯಗಳು ಸೃಷ್ಟಿಯಾಗುತ್ತಿವೆ" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸೋನಮ್ ವಾಂಗ್ಚುಕ್ ಸ್ಥಾಪಿಸಿದ ‘ಸೆಕ್ಮೊಲ್’ (SECMOL-Students’ Educational and Cultural Movement of Ladakh) ಸೇರಿದಂತೆ ಸುಮಾರು 80 ಸಂಸ್ಥೆಗಳು ಹಾಗೂ ರವಿ ಚೋಪ್ರಾ (ಉತ್ತರಾಖಂಡದ ಚಾರ್ ಧಾಮ್ ಹೆದ್ದಾರಿ ಅಗಲೀಕರಣ ಯೋಜನೆಯ ಪರಿಸರ ಪರಿಣಾಮಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯ ಅಧ್ಯಕ್ಷರು) ಸೇರಿದಂತೆ 115 ಪ್ರಮುಖ ವ್ಯಕ್ತಿಗಳು ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
►ಸಡಿಲಗೊಂಡ ಕಾಯ್ದೆಗಳು
ನಾವು ಈ ಪ್ರದೇಶವನ್ನು ನಿರ್ವಹಿಸುತ್ತಿರುವ ರೀತಿಯಲ್ಲೂ ಹಲವು ಸಮಸ್ಯೆಗಳಿವೆ. ಇದನ್ನು ಭದ್ರತಾ ದೃಷ್ಟಿಯಿಂದ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ತಾಣವಾಗಿ ನೋಡಲಾಗುತ್ತಿದೆ ಎಂದು ಅರಣ್ಯ ಹಕ್ಕುಗಳ ತಿದ್ದುಪಡಿ ಕಾಯ್ದೆಯನ್ನು ಉದಾಹರಿಸುತ್ತಾ ಮಾನ್ಸಿ ಅಶೆರ್ ತಿಳಿಸಿದರು. 2023ರಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡ ಈ ಕಾಯ್ದೆಯು, ಗಡಿ ಪ್ರದೇಶದ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಆಯಕಟ್ಟಿನ ಯೋಜನೆಗಳಿಗೆ ಅರಣ್ಯ ಮಂಜೂರಾತಿಯಿಂದ ವಿನಾಯಿತಿ ನೀಡುತ್ತದೆ. ಇದರರ್ಥ ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿನ ಬಹುತೇಕ ಯೋಜನೆಗಳು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಪರಿಸರ ಮಂಜೂರಾತಿ ಮತ್ತು ಪರಿಸರ ಪ್ರಭಾವದ ಮೌಲ್ಯಮಾಪನಕ್ಕೆ ಸಂಬಂಧಿಸಿದ ಹಾಲಿ ಕಾಯ್ದೆಗಳನ್ನು ಸಡಿಲಗೊಳಿಸಿರುವುದು ಮತ್ತೊಂದು ಕಳವಳಕಾರಿ ವಿಚಾರವಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ, ಭಾರತ ಸೇರಿದಂತೆ ಇಡೀ ಹಿಮಾಲಯ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಒಂದು ಅಂದಾಜಿನ ಪ್ರಕಾರ, ಭಾರತವು ಅರುಣಾಚಲ ಪ್ರದೇಶ, ಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಸುಮಾರು 100 ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಯೋಜಿಸಿದೆ.
ಜಲವಿದ್ಯುತ್ ಯೋಜನೆಗಳು ನವೀಕರಿಸಬಹುದಾದ ಇಂಧನ ಮೂಲವಾಗಿದ್ದು, ಹವಾಮಾನ ಬದಲಾವಣೆಯ ತೀವ್ರತೆ ತಗ್ಗಿಸಲು ಇವುಗಳನ್ನು ಶಿಫಾರಸು ಮಾಡಲಾಗುತ್ತಿದೆ. ಹೀಗಾಗಿ ಇವುಗಳನ್ನು "ಪರಿಸರಸ್ನೇಹಿ ಯೋಜನೆಗಳು" ಎಂದು ಕರೆಯಲಾಗುತ್ತಿದೆ ಎಂದು ಅಶೆರ್ ಉಲ್ಲೇಖಿಸಿದ್ದಾರೆ. ಆದರೆ ಇದನ್ನು ಅವರು "ಪರಿಸರಸ್ನೇಹಿ ಎಂಬ ನಾಟಕ" ಎಂದು ಕರೆಯುತ್ತಾರೆ. ಅಂದರೆ ಯೋಜನೆಯು ನಿಜವಾಗಿರುವುದಕ್ಕಿಂತ ಹೆಚ್ಚಿನ ಸುಸ್ಥಿರತೆಯನ್ನು ಹೊಂದಿದೆ ಎಂದು ತಪ್ಪು ಮಾಹಿತಿ ನೀಡುವುದಾಗಿದೆ.
ಆದ್ದರಿಂದ ಈ ರಾಜಕೀಯ ಮತ್ತು ಆರ್ಥಿಕ ಮಾದರಿಯಿಂದಾಗಿ ಉಂಟಾಗುತ್ತಿರುವ ಸೂಕ್ಷ್ಮ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ನೀತಿ ನಿರೂಪಣೆ ಅಥವಾ ಆಡಳಿತ ಯಾವುದೇ ಇರಲಿ, ಇದಕ್ಕೆ ಕಾರಣವಾದ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವುದು ಮುಖ್ಯ ಎಂದಿದ್ದಾರೆ ಅವರು.
►ಮಾಹಿತಿ ಹಂಚಿಕೆ ಮತ್ತು ಭೌಗೋಳಿಕ ರಾಜಕೀಯ
ಮಾಹಿತಿ ಹಂಚಿಕೆ ಮತ್ತು ಜ್ಞಾನ ಉತ್ಪಾದನೆಯು ಆಡಳಿತದೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ ಎಂದಿದ್ದಾರೆ ಅಶೆರ್. ಆದರೆ ಪ್ರಸ್ತುತ ಗಮನವು ಪಾರದರ್ಶಕವಲ್ಲದ, ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಬರುವ ಜ್ಞಾನ ಉತ್ಪಾದನೆಯ ಮೇಲಷ್ಟೇ ಇದೆ.
"ವಿವಿಧ ಸಂಸ್ಥೆಗಳ ಬಳಿ ಅಪಾರ ಮಾಹಿತಿಯಿದೆ. ಆದರೆ ಅದು ನೀತಿಗಳ ಬದಲಾವಣೆಗೆ ನೆರವಾಗುತ್ತಿಲ್ಲ. ಹಾಗಾಗಿ ನಾಗರಿಕರು, ವಿಜ್ಞಾನಿಗಳು, ಹೋರಾಟಗಾರರು ಮತ್ತು ಪರಿಸರ ಪ್ರೇಮಿಗಳು ಇದಕ್ಕೆ ಕಾರಣವನ್ನು ಪ್ರಶ್ನಿಸುತ್ತಿದ್ದಾರೆ."
ಉದಾಹರಣೆಗೆ, ಹಿಮಾಚಲ ದುರಂತ ನಿರ್ವಹಣಾ ಪ್ರಾಧಿಕಾರವು ಜಿಲ್ಲಾ ಮಟ್ಟದಲ್ಲಿ ಸಿದ್ಧಪಡಿಸಿದ ಅಪಾಯದ ಪಟ್ಟಿಯನ್ನು ಪಂಚಾಯತಿಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಹಂಚಿಕೊಂಡರೆ, ಸಂಪನ್ಮೂಲಗಳ ನಿರ್ವಹಣೆ ಹಾಗೂ ಭೂ ಬಳಕೆಯ ಕುರಿತು ಪಂಚಾಯತಿಯ ಪ್ರತಿಯೊಂದು ಉಪ-ಜಲಾನಯನ ಪ್ರದೇಶದ ಮಟ್ಟದಲ್ಲಿ ಜನಭಾಗವಹಿಸುವಿಕೆಯೊಂದಿಗೆ ಯೋಜನೆ ರೂಪಿಸಬಹುದು ಎಂದು ಅವರು ತಿಳಿಸಿದರು.
ಮತ್ತೊಂದೆಡೆ, ದೇಶಗಳ ನಡುವೆ ದೊಡ್ಡ ಮಟ್ಟದಲ್ಲಿ ಮಾಹಿತಿ ಹಂಚಿಕೆಯಾಗುವ ಪ್ರಶ್ನೆಯೂ ಇದೆ. ದೇಶಗಳ ನಡುವೆ ಕೆಲವು ಮಾಹಿತಿ ಹಂಚಿಕೆ ಒಪ್ಪಂದಗಳಿವೆಯಾದರೂ, ಅವುಗಳಲ್ಲಿ ಕೆಲವು ಕೇವಲ ಪ್ರವಾಹದ ಅವಧಿಯಲ್ಲಿ ಮಾತ್ರ ಅನ್ವಯಿಸುತ್ತವೆ ಎಂದು ಡಬ್ಲ್ಯೂಆರ್ಐ (WRI) ಇಂಡಿಯಾದ ಹವಾಮಾನ, ಅರ್ಥಶಾಸ್ತ್ರ ಮತ್ತು ಹಣಕಾಸು ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ಉಲ್ಕಾ ಕೆಲ್ಕರ್ ಉಲ್ಲೇಖಿಸಿದ್ದಾರೆ.
"ಹವಾಮಾನ ಮಾದರಿಯು ಬದಲಾಗುತ್ತಿರುವುದರಿಂದ ವರ್ಷವಿಡೀ ಮಾಹಿತಿ ಹಂಚಿಕೆಯ ಅಗತ್ಯವಿದೆ. ಹವಾಮಾನ ಬದಲಾವಣೆಯು ಒಂದಕ್ಕೊಂದು ಬೆಸೆದುಕೊಂಡಿರುವ ಸಾಲು ಸಾಲು ಅಪಾಯಗಳನ್ನು ತರುತ್ತಿದೆ ಎಂಬುದನ್ನು ನಾವು ಗುರುತಿಸಬೇಕಾಗಿದೆ. ಈ ಮೊದಲು ವರದಿಗಳಲ್ಲಿ ಬಳಸುತ್ತಿದ್ದ ಈ ಮಾತುಗಳು ಕೇವಲ ವ್ಯಾಖ್ಯಾನಗಳಂತೆ ಕಾಣುತ್ತಿದ್ದವು. ಆದರೆ ಈಗ ನಾವದನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ ಮತ್ತು ಇದು ಹಠಾತ್ ವಿಕೋಪಗಳಿಗೆ ಕಾರಣವಾಗಲಿದೆ. ಪ್ರತಿಯೊಬ್ಬರನ್ನು ಸಮಯಕ್ಕೆ ಸರಿಯಾಗಿ ಎಚ್ಚರಿಸುವುದು ಯಾವಾಗಲೂ ಸಾಧ್ಯವಿಲ್ಲ, ಅಲ್ಲದೆ ಯಾವುದೇ ಸ್ಥಳವೂ ಸುರಕ್ಷಿತವಾಗಿ ಉಳಿದಿಲ್ಲ" ಎಂದಿದ್ದಾರೆ ಅವರು.
ಸಾರ್ಕ್ (SAARC) ಸಂಸ್ಥೆಯು ಹಿಮಾಲಯನ್ ದೇಶಗಳ ನಡುವೆ ಮಾಹಿತಿ ಹಂಚಿಕೆಗಾಗಿ ಹವಾಮಾನ ಕೇಂದ್ರವನ್ನು ಸ್ಥಾಪಿಸಲು ಶ್ರಮಿಸಿದೆ. ಹಿಮಾಲಯ ಪ್ರದೇಶದ ಅಂತರಸರ್ಕಾರಿ ಸಂಸ್ಥೆಯಾದ ‘ಇಸಿಮೋಡ್’ (ICIMOD) ನದಿಗಳ ಮೇಲ್ಭಾಗ ಹಾಗೂ ಕೆಳಭಾಗದಲ್ಲಿರುವ ಚೀನಾ, ಭಾರತ ಮತ್ತು ಬಾಂಗ್ಲಾದೇಶದಂತಹ ದೇಶಗಳನ್ನು ಒಳಗೊಂಡಿದ್ದು, ಮಾಹಿತಿ ಹಂಚಿಕೆಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.
"ಆದರೆ ಭೌಗೋಳಿಕ ರಾಜಕೀಯವು ಇಂತಹ ಸಹಕಾರ ಮತ್ತು ಪಾಲುದಾರಿಕೆಯ ಮಾರ್ಗಗಳಿಗೆ ಅಡ್ಡಿಪಡಿಸುತ್ತಿದೆ. ಉದಾಹರಣೆಗೆ, ದೇಶಗಳ ನಡುವೆ ಅಪಾರ ಮಾಹಿತಿಯನ್ನು ಹಂಚಿಕೊಳ್ಳಲು ನೆರವಾಗುತ್ತಿದ್ದ ಸಿಂಧೂ ನದಿ ನೀರು ಒಪ್ಪಂದಕ್ಕೆ ಧಕ್ಕೆಯಾಗಿದೆ. ಚೀನಾದಿಂದ ಕೊನೆಯ ಬಾರಿಗೆ ವ್ಯವಸ್ಥಿತ ಮಾಹಿತಿ ಹಂಚಿಕೆಯಾಗಿದ್ದು 2022 ಅಥವಾ 2023ರಲ್ಲಿ ಎನ್ನಲಾಗಿದೆ. ಹೀಗಾಗಿ ಮಾಹಿತಿ ರವಾನೆಯಲ್ಲಿ ತಡೆಗಳು ಉಂಟಾಗಿವೆ."
ಆದರೆ ಹೊಸದಿಲ್ಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ಭಾರತವು ಆಯೋಜಿಸಲಿರುವ ಮುಂಬರುವ ಬ್ರಿಕ್ಸ್ ಶೃಂಗಸಭೆಯು ಈ ನಿಟ್ಟಿನಲ್ಲಿ ಒಂದು "ಪ್ರಮುಖ ಅವಕಾಶ"ವಾಗಲಿದೆ. ಪ್ರಸ್ತುತ ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ವಿಕೋಪ ಸಿದ್ಧತೆಯನ್ನು ಶೃಂಗಸಭೆಯ ಪ್ರಕಟಣೆಯ ಕಾರ್ಯಸೂಚಿಗೆ ಸೇರಿಸಲು ಹಾಗೂ ಮಾನವೀಯ ಸಹಕಾರ ಮತ್ತು ಮಾಹಿತಿ ಹಂಚಿಕೆ ವ್ಯವಸ್ಥೆಯನ್ನು ಘೋಷಿಸಲು ಇದೊಂದು ಉತ್ತಮ ಅವಕಾಶವಾಗಿದೆ" ಎಂದು ಕೆಲ್ಕರ್ ಹೇಳಿದ್ದಾರೆ.
‘ಪೀಪಲ್ ಫಾರ್ ಹಿಮಾಲಯ’ ಸಮೂಹವು ಸೆಪ್ಟೆಂಬರ್ 7ರ ಸಾರ್ವಜನಿಕ ಹೇಳಿಕೆಯಲ್ಲಿ ಮಂಡಿಸಿರುವ ಆರು ತುರ್ತು ಬೇಡಿಕೆಗಳಲ್ಲಿ ಒಂದೆಂದರೆ, ಹಿಮಾಲಯ ಪ್ರದೇಶದ ದೇಶಗಳು ಮತ್ತು ರಾಜ್ಯಗಳು "ಸಂಪನ್ಮೂಲ ಹಂಚಿಕೆ, ಮಾಹಿತಿ ರವಾನೆ ಹಾಗೂ ವಿಕೋಪಗಳ ಸಮಯದಲ್ಲಿ ಪರಸ್ಪರ ನೆರವಿಗಾಗಿ ಪಾರದರ್ಶಕ ವ್ಯವಸ್ಥೆ ಮತ್ತು ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕ ಸಹಕಾರಕ್ಕೆ ತಕ್ಷಣವೇ ಶ್ರಮಿಸಬೇಕು" ಎಂದಿದೆ.
ಎಲ್ಲಾ ಹವಾಮಾನ ಮಾಹಿತಿ ಮತ್ತು ಜ್ಞಾನ ಉತ್ಪಾದನೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಗೆ ಅದು ಕರೆ ನೀಡಿದೆ.
"ವಿಜ್ಞಾನ, ಪ್ರತ್ಯಕ್ಷ ಅನುಭವ ಮತ್ತು ಸ್ಥಳೀಯ ಜ್ಞಾನವನ್ನು ಒಳಗೊಂಡ ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಇದರಲ್ಲಿ ಸೇರಿದೆ. ಕೇವಲ ತಂತ್ರಜ್ಞಾನವನ್ನು ಮಾತ್ರ ನೆಚ್ಚಿಕೊಳ್ಳದೆ, ನೈಜ ಸಮಯದ ಮೇಲ್ವಿಚಾರಣೆಯನ್ನು ಸಮುದಾಯದ ಜ್ಞಾನ, ಹಿಂದಿನ ದುರಂತಗಳ ನೆನಪುಗಳು ಮತ್ತು ಸ್ಥಳೀಯ ಕಲಿಕೆಗಳೊಂದಿಗೆ ಸಂಯೋಜಿಸುವುದು ಅಗತ್ಯವಾಗಿದೆ. ಮೇಲ್ಮಟ್ಟದ ಮತ್ತು ತಜ್ಞರ ಆಧಾರಿತ ಜ್ಞಾನ ಉತ್ಪಾದನೆಗೆ ಮಾತ್ರ ಅಸಮಾನವಾಗಿ ಸಂಪನ್ಮೂಲ ಹಂಚಿಕೆ ಮಾಡುವುದನ್ನು ನಾವು ಖಂಡಿಸುತ್ತೇವೆ."
ಜಾಗತಿಕ ಹಾಗೂ ದೇಶೀಯ ಮಟ್ಟದಲ್ಲಿ ಹವಾಮಾನ ನಷ್ಟ ಮತ್ತು ಹಾನಿಯ ಭಾಗವಾಗಿ ನೇರ ಪರಿಹಾರ ನೀಡಲು ಕಾನೂನುಬದ್ಧ ಚೌಕಟ್ಟನ್ನು ರೂಪಿಸಬೇಕು ಎಂದೂ ಈ ಸಮೂಹವು ಒತ್ತಾಯಿಸಿದೆ.
►ಹವಾಮಾನ ನಿಧಿಗಾಗಿ ಒತ್ತಾಯ
ಸೆಪ್ಟೆಂಬರ್ 4ರಂದು ನೇಪಾಳದ ವಿಕೋಪ ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರು ಕನಿಷ್ಠ 2.56 ಬಿಲಿಯನ್ ಅಮೆರಿಕನ್ ಡಾಲರ್ (387.5 ಬಿಲಿಯನ್ ನೇಪಾಳಿ ರೂಪಾಯಿ) ಮೌಲ್ಯದ ಆಸ್ತಿ, ಮನೆ ಹಾಗೂ ಮೂಲಸೌಕರ್ಯಗಳು ನಷ್ಟವಾಗಿವೆ ಎಂದು ರಾಯಿಟರ್ಸ್ಗೆ ತಿಳಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುಮಾರು 20,000 ಮನೆಗಳನ್ನು ಪುನರ್ನಿರ್ಮಿಸಬೇಕಾಗಿದೆ.
ಇತ್ತೀಚಿನ ಪ್ರವಾಹದಿಂದ ಉಂಟಾದ ವಿನಾಶಕ್ಕೆ ಜಾಗತಿಕವಾಗಿ ಅತಿ ಹೆಚ್ಚು ಹಸಿರುಮನೆ ಅನಿಲ ಹೊರಸೂಸುವ ದೇಶಗಳಿಂದ (ಅಮೆರಿಕ, ಚೀನಾ ಮತ್ತು ಭಾರತ) ಹವಾಮಾನ ಸಂಬಂಧಿತ ಪರಿಹಾರವಾಗಿ "ಸಹಾಯವಲ್ಲ, ನ್ಯಾಯ" ಬೇಕು ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖಾನಾಲ್ ಹೇಳಿರುವುದಾಗಿ ಸೆಪ್ಟೆಂಬರ್ 2ರಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಬಳಿಕ ಸ್ಪಷ್ಟನೆ ನೀಡಿದ ಖಾನಾಲ್, ತಾವು ಅಥವಾ ನೇಪಾಳ ಸರ್ಕಾರವು ಭಾರತ, ಚೀನಾ ಅಥವಾ ಅಮೆರಿಕದಿಂದ ಅಂತಹ ಯಾವುದೇ ಪರಿಹಾರವನ್ನು ಕೋರಿಲ್ಲ ಎಂದಿದ್ದಾರೆ. "ಈ ವಿಕೋಪವನ್ನು ಹವಾಮಾನ ಬದಲಾವಣೆ ಮತ್ತು ನೇಪಾಳದ ಮೇಲಾಗಿರುವ ಅದರ ಪ್ರಭಾವದ ದೃಷ್ಟಿಕೋನದಿಂದ ಜಾಗತಿಕ ಸಮುದಾಯ ನೋಡಬೇಕು ಎಂಬುದಷ್ಟೇ ನಮ್ಮ ಮನವಿಯಾಗಿದೆ" ಎಂದು ಅವರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಸೆಪ್ಟೆಂಬರ್ 4ರಂದು ಈ ವಿಷಯದಲ್ಲಿ ಭಾರತವು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಇದರ ಜವಾಬ್ದಾರಿಯನ್ನು ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಹೊರಿಸಿದೆ.
"ಹವಾಮಾನ ಬದಲಾವಣೆಯು ಒಂದು ಸಾರ್ವತ್ರಿಕ ಸವಾಲಾಗಿದ್ದು, ಈ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳು ಸಾಧಾರಣ. ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಸಾಮರ್ಥ್ಯಗಳ ತತ್ವವನ್ನು ಆಧರಿಸಿರಬೇಕು ಎಂಬುದು ಭಾರತದ ನಿಲುವಾಗಿದೆ. ಐತಿಹಾಸಿಕವಾಗಿ ಇಂಗಾಲದ ಹೊರಸೂಸುವಿಕೆಗೆ ಕಾರಣರಾದ ಹಾಗೂ ಪ್ರಸ್ತುತ ಬಿಕ್ಕಟ್ಟಿಗೆ ಹೆಚ್ಚಿನ ಕೊಡುಗೆ ನೀಡಿದ ಅಭಿವೃದ್ಧಿ ಹೊಂದಿದ ದೇಶಗಳು, ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಈ ಸವಾಲನ್ನು ಎದುರಿಸಲು ಹಣಕಾಸು ಹಾಗೂ ತಂತ್ರಜ್ಞಾನ ವರ್ಗಾವಣೆಯ ಮೂಲಕ ಅಭಿವೃದ್ಧಿಶೀಲ ದೇಶಗಳನ್ನು ಬೆಂಬಲಿಸಲು ಮುಂಚೂಣಿಯಲ್ಲಿ ನಿಲ್ಲಬೇಕು" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ನೆರೆಹೊರೆಯ ದೇಶವಾಗಿ ಭಾರತವು ನೇಪಾಳ ಸರ್ಕಾರ ಮತ್ತು ಜನರಿಗೆ ತನ್ನ ಬೆಂಬಲವನ್ನು ನೀಡಿದೆ ಹಾಗೂ ಅದನ್ನು ಮುಂದುವರಿಸಲಿದೆ ಎಂದರು.
ನೇಪಾಳದಂತಹ ಸಂಕಷ್ಟಕ್ಕೆ ಈಡಾಗುವ ಮತ್ತು ಅಭಿವೃದ್ಧಿಶೀಲ ದೇಶಗಳು ಹವಾಮಾನ ಬಿಕ್ಕಟ್ಟಿಗೆ ಕಾರಣವಲ್ಲ. ಕೈಗಾರಿಕೀಕರಣದ ಹೆಸರಿನಲ್ಲಿ 200ಕ್ಕೂ ಹೆಚ್ಚು ವರ್ಷಗಳಿಂದ ಪಳೆಯುಳಿಕೆ ಇಂಧನಗಳನ್ನು ಬಳಸಿಕೊಂಡು ಶ್ರೀಮಂತವಾಗಿರುವ ಅಭಿವೃದ್ಧಿ ಹೊಂದಿದ ದೇಶಗಳೇ ಇದಕ್ಕೆ ಹೆಚ್ಚಿನ ಜವಾಬ್ದಾರರಾಗಿದ್ದಾರೆ ಎಂದು ನೇಪಾಳ ಪ್ರವಾಹದ ನಂತರ ಪರಿಸರ ಹೋರಾಟಗಾರ ಹರ್ಜೀತ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಶ್ರೀಮಂತ ದೇಶಗಳು ಪಳೆಯುಳಿಕೆ ಇಂಧನಗಳಿಂದ ದೂರ ಸರಿಯುವ ತಮ್ಮ ಜವಾಬ್ದಾರಿಯನ್ನು ಪೂರೈಸುವಲ್ಲಿ ವಿಫಲವಾಗಿವೆ. ಅಲ್ಲದೆ ಈ ಪರಿಣಾಮಗಳನ್ನು ಎದುರಿಸಲು ಮತ್ತು ಸಿದ್ಧರಾಗಲು ಅಭಿವೃದ್ಧಿಶೀಲ ದೇಶಗಳಿಗೆ ಅಗತ್ಯವಿರುವಷ್ಟು ಹಣವನ್ನು ನೀಡಲು ಸಹ ವಿಫಲವಾಗಿವೆ," ಎಂದು ಅವರು ಹೇಳಿದರು.
ಅಭಿವೃದ್ಧಿಶೀಲ ದೇಶಗಳಿಗೆ ಪ್ರತಿ ವರ್ಷ ಕೋಟ್ಯಂತರ ಡಾಲರ್ ಅಗತ್ಯವಿದೆ, ಆದರೆ ಅವರಿಗೆ ಸಿಗುತ್ತಿರುವುದು ಕೆಲವೇ ಶತಕೋಟಿಗಳು ಮಾತ್ರ. ಅದೂ ಕೂಡ ಬಹುತೇಕ ಸಾಲದ ರೂಪದಲ್ಲಿಯೇ ಸಿಗುತ್ತಿದೆ ಎಂದು ಅವರು ತಿಳಿಸಿದರು. ಹೋರಾಟಗಾರರ ಶ್ರಮದಿಂದ ‘ನಷ್ಟ ಮತ್ತು ಹಾನಿ ನಿಧಿ’ ರೂಪುಗೊಂಡಿದ್ದರೂ, ಅದರಲ್ಲಿ ಪ್ರಸ್ತುತ ಒಂದು ಬಿಲಿಯನ್ ಡಾಲರ್ ಗಿಂತ ಕಡಿಮೆ ಹಣವಿದೆ ಎಂದರು.
ಜನರ ಜೀವನವನ್ನು ಪುನರ್ನಿರ್ಮಿಸಲು ನೇಪಾಳಕ್ಕೆ ಈಗ ಅಪಾರ ಹಣದ ಅಗತ್ಯವಿದೆ, ಆದರೆ ಹಣ ಎಲ್ಲಿದೆ? ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಮಾಲಿನ್ಯ ಉಂಟುಮಾಡುವ ಪಳೆಯುಳಿಕೆ ಇಂಧನ ಕಂಪನಿಗಳು ಈ ನಿಧಿಗೆ ಹಣ ನೀಡುವಂತೆ ನಾವು ಅವರ ಮೇಲೆ ಒತ್ತಡ ಹೇರಬೇಕಾಗಿದೆ," ಎಂದಿದ್ದಾರೆ ಸಿಂಗ್.
►ಪ್ರಾದೇಶಿಕ ಹವಾಮಾನ ನಿಧಿ ಏಕೆ ನೆರವಾಗಬಹುದು?
ಹವಾಮಾನ ಬದಲಾವಣೆಯ ಪರಿಣಾಮಗಳು ವ್ಯಾಪಕವಾಗುತ್ತಿದ್ದು, ಪದೇ ಪದೇ ಸಂಭವಿಸುತ್ತಿರುವುದರಿಂದ ವಿಮೆ ಎಂಬುದು ಈಗ ರಕ್ಷಣೆಯಾಗಿ ಉಳಿದಿಲ್ಲ ಎಂದು ಕೆಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ ಪ್ರಾದೇಶಿಕ ವಿಕೋಪ ಅಥವಾ ದುರಂತ ಪರಿಹಾರ ನಿಧಿಯು ಉಪಯುಕ್ತವಾಗಲಿದೆ.
"ಇದು ಸರ್ಕಾರಿ ಪರಿಹಾರ, ಅಂತರರಾಷ್ಟ್ರೀಯ ಪರಿಹಾರ, ವಿಮೆ ಮತ್ತು ಮರು-ವಿಮೆಗಳನ್ನು ಮಾರುಕಟ್ಟೆ ದರಗಳ ಆಧಾರದಲ್ಲಿ ಒಟ್ಟುಗೂಡಿಸುವ ವ್ಯವಸ್ಥೆಯಾಗಿದೆ. ವಿಶಾಲ ವ್ಯಾಪ್ತಿಯ ವಿಕೋಪಗಳು ಸಂಭವಿಸಿದಾಗ ಈ ಪ್ರಾದೇಶಿಕ ನಿಧಿಯು ನೆರವಿಗೆ ಬರಲು ಸಾಧ್ಯವಾಗುತ್ತದೆ."
ವಿಮೆಗೆ ಪರ್ಯಾಯವಾಗಿ ಪ್ರಾದೇಶಿಕ ವಿಮಾ ವ್ಯವಸ್ಥೆಯಂತಹ ಮಾರ್ಗಗಳನ್ನು ಕಂಡುಕೊಳ್ಳಬಹುದು ಎಂದಿದ್ದಾರೆ ಅವರು.
ಭಾರತವು ಈಗಾಗಲೇ ಹವಾಮಾನ ಹಣಕಾಸಿಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ಉಲ್ಲೇಖಿಸಿದ ಕೆಲ್ಕರ್, "ನಾವು ಕೇವಲ ಹಣಕಾಸು ಪಡೆಯುವವರಲ್ಲ, ಕೊಡುಗೆ ನೀಡುವವರೂ ಹೌದು. 2013ರಿಂದ 2023ರವರೆಗಿನ ಅವಧಿಯಲ್ಲಿ ಸುಮಾರು 10 ಬಿಲಿಯನ್ ಡಾಲರ್ ಗಿಂತ ಸ್ವಲ್ಪ ಕಡಿಮೆ ಹಣಕಾಸು ನೆರವು ನೀಡುವ ಮೂಲಕ, ಭಾರತವು ಮೂರನೇ ಅತಿ ದೊಡ್ಡ ಅಭಿವೃದ್ಧಿಶೀಲ ದಾನಿ ದೇಶವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಒಟ್ಟಾಗಿ ಮಾಡಲು ಸಾಕಷ್ಟು ಅವಕಾಶಗಳಿವೆ" ಎಂದು ಹೇಳಿದ್ದಾರೆ.
ಸೌಜನ್ಯ: thewire.in