Photo Credit : thewire.in



ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನವನ್ನು ಬಿಂಬಿಸುವ ‘ಸರಳ, ಭಾವನಾತ್ಮಕ’ ಸಂಗೀತ ಆಧಾರಿತ ಬೀದಿ ನಾಟಕಗಳು, ‘ಬದಲಾವಣೆ ತಂದ’ ಯೋಜನೆಗಳನ್ನು ಪ್ರದರ್ಶಿಸಲು ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳ ಬಳಕೆ ಹಾಗೂ ವಡನಗರ ಮತ್ತು ವಾರಾಣಸಿ ನಡುವೆ ಪವಿತ್ರ ಜಲವನ್ನು ಹೊತ್ತೊಯ್ಯುವ 250 ಬೈಕ್ ಗಳಲ್ಲಿನ 500 ಸವಾರರು, ಮಹಾಯಜ್ಞ– ಮೋದಿ ಅವರ ಹುಟ್ಟುಹಬ್ಬ ಮತ್ತು ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಸಾರ್ವಜನಿಕ ಜೀವನಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ರೂಪಿಸಿರುವ ತಿಂಗಳ ಅವಧಿಯ 14 ಕಾರ್ಯಕ್ರಮಗಳಲ್ಲಿನ ಭಾಗವಿದು.

ಸೆಪ್ಟೆಂಬರ್ 2ರಂದು ಹರಿಯಾಣ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಆಡಳಿತ ಕಾರ್ಯದರ್ಶಿಗಳ ಸಭೆಯ ನಡಾವಳಿಗಳ ದಾಖಲೆಗಳು ‘the wire’ಗೆ ಲಭ್ಯವಾಗಿವೆ. ಸರ್ಕಾರಿ ಯಂತ್ರವನ್ನು ಈ ತಿಂಗಳ ಅವಧಿಯ ಚಟುವಟಿಕೆಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಿಜೆಪಿ ಆಡಳಿತವಿರುವ ಇತರ ರಾಜ್ಯ ಸರ್ಕಾರಗಳಲ್ಲಿ ಕಾರ್ಯಕ್ರಮಗಳು ಹೇಗೆ ನಡೆಯಲಿವೆ ಎಂಬ ವಿವರಗಳೂ ಇದರಲ್ಲಿವೆ.

ಕಳೆದ 12 ವರ್ಷಗಳಲ್ಲಿ, 2023ರಲ್ಲಿ ದಿಲ್ಲಿಯಲ್ಲಿ ನಡೆದ G20 ಶೃಂಗಸಭೆ ಅಥವಾ ಪ್ರಸ್ತುತ ಬ್ರಿಕ್ಸ್ ಶೃಂಗಸಭೆಯಂತಹ ಪ್ರಮುಖ ಸಭೆಗಳಿದ್ದರೂ, ಬಿಜೆಪಿ ಮೋದಿಯವರ ಚಿತ್ರವನ್ನೇ ಪ್ರಮುಖವಾಗಿ ಬಿಂಬಿಸಲು ಯತ್ನಿಸಿದೆ. ಬಿಜೆಪಿ ಮತ್ತು ಅದರ ನಾಯಕರು ಮೋದಿಯವರ ಹುಟ್ಟುಹಬ್ಬವನ್ನು ವ್ಯಕ್ತಿಪೂಜೆಗೆ ಸೀಮಿತಗೊಳಿಸಿದ್ದಾರೆ. ಕಳೆದ ವರ್ಷ ಅವರು 75ನೇ ವರ್ಷಕ್ಕೆ ಕಾಲಿಟ್ಟಾಗ ನಡೆದ ಆಚರಣೆಗಳು ಅದ್ದೂರಿಯಾಗಿದ್ದವು. ಅವರ ನಿವೃತ್ತಿಯ ಕುರಿತಾದ ಊಹಾಪೋಹಗಳನ್ನು ದೂರತಳ್ಳುವ ಸ್ಪಷ್ಟ ಪ್ರಯತ್ನ ಅಲ್ಲಿ ಕಂಡುಬಂದಿತ್ತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಯುವಜನರ ಪ್ರತಿಭಟನೆಗಳು ನಡೆದ ಕೆಲವೇ ತಿಂಗಳುಗಳಲ್ಲಿ ಈ ಆಚರಣೆ ಬಂದಿದ್ದರೂ, ಮೋದಿ ಅವರ ಹುಟ್ಟುಹಬ್ಬ ಮತ್ತು 25 ವರ್ಷಗಳ ಸಾರ್ವಜನಿಕ ಜೀವನವನ್ನು ಪ್ರಚಾರ ಮಾಡಲು ಈ ಬಾರಿಯೂ ಅಂಥದ್ದೇ ಪ್ರಯತ್ನಗಳು ನಡೆಯುತ್ತಿವೆ.

ಕಳೆದ ತಿಂಗಳು, ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್ ತಮ್ಮ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡದೊಂದಿಗೆ ನಡೆಸಿದ ಮೊದಲ ಸಭೆಯ ನಂತರ, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮಹತ್ವದ ಘೋಷಣೆ ಮಾಡಿದರು. ಪ್ರತಿವರ್ಷ ಮೋದಿ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸುವ ‘ಸೇವಾ ಪಾಕ್ಷಿಕ’ದ ಜೊತೆಗೆ, ಈ ಬಾರಿ ಅವರ 25 ವರ್ಷಗಳ ಸಾರ್ವಜನಿಕ ಜೀವನದ ನೆನಪಿಗಾಗಿ ತಿಂಗಳ ಅವಧಿಯ ಆಚರಣೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ತಾವ್ಡೆ, “ಪ್ರತಿವರ್ಷ ಸೆಪ್ಟೆಂಬರ್ 17ರಂದು ಪ್ರಧಾನಿಯವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ದೇಶಾದ್ಯಂತ ‘ಸೇವಾ ಪಾಕ್ಷಿಕ’ ಆಚರಿಸುತ್ತದೆ. ಮೋದಿ ಅವರ ಇಡೀ ಜೀವನ ಸೇವೆಗೆ ಮುಡಿಪಾಗಿದ್ದು, ಈ ಕಾರಣಕ್ಕಾಗಿ ಪಕ್ಷವು ಸೇವಾ ಪಾಕ್ಷಿಕ ಆಚರಿಸಿಕೊಂಡು ಬಂದಿದೆ. ಈ ಅಕ್ಟೋಬರ್ 7ಕ್ಕೆ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ 25 ವರ್ಷ ಪೂರೈಸಲಿದೆ. ಆದ್ದರಿಂದ, ಮೋದಿ ಅವರ ಸೇವೆಯನ್ನು ಬಿಂಬಿಸುವ ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ವನ್ನು ದೇಶಾದ್ಯಂತ ಆರಂಭಿಸಲು ಪಕ್ಷ ನಿರ್ಧರಿಸಿದೆ” ಎಂದು ಹೇಳಿದ್ದಾರೆ.

ಈ ತಿಂಗಳ ಅವಧಿಯ ಆಚರಣೆಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ನಡೆಯಲಿದೆ. ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ದೀಪ ಬೆಳಗಿಸುವ ಮೂಲಕ ಆಚರಣೆ ಆರಂಭವಾಗಲಿದ್ದು, ಅವರ 25 ವರ್ಷಗಳ ಸಾರ್ವಜನಿಕ ಜೀವನವನ್ನು ಬಿಂಬಿಸುವ ಸಂಗೀತ ಮತ್ತು ನಾಟಕ ಪ್ರದರ್ಶನಗಳು ನಡೆಯಲಿವೆ.

ಮೋದಿ ಅವರ 25 ವರ್ಷಗಳ ‘ಸಾರ್ವಜನಿಕ ಸೇವೆ ಮತ್ತು ಸುಶಾಸನ’ದ ನೆನಪಿಗಾಗಿ 1.25 ಲಕ್ಷ ಸಾರ್ವಜನಿಕ ಪ್ರತಿನಿಧಿಗಳ ಬೃಹತ್ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಮಹಾರಾಷ್ಟ್ರ, ಗುಜರಾತ್, ಬೆಂಗಳೂರು, ದಿಲ್ಲಿ ಮತ್ತು ಕೋಲ್ಕತ್ತಾದ ಐದು ಪ್ರಾದೇಶಿಕ ಕೇಂದ್ರಗಳಲ್ಲಿ ನವೋದ್ಯಮಗಳು, ವೃತ್ತಿಪರರು ಮತ್ತು ಸಂಶೋಧಕರ ಮೂಲಕ ಯುವಕರನ್ನು ತಲುಪಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ, ಅನಿವಾಸಿ ಭಾರತೀಯರು ಒಂದು ಗಂಟೆಯ ವರ್ಚುವಲ್ ಮಹಾಯಜ್ಞಗಳಲ್ಲಿ ಭಾಗವಹಿಸಲಿದ್ದಾರೆ.

ಉತ್ತರ ಪ್ರದೇಶ, ಹರಿಯಾಣ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ಬಿಜೆಪಿ ಆಡಳಿತವಿರುವ ರಾಜ್ಯಗಳು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗಿನ ಕಾರ್ಯಕ್ರಮಗಳ ಕಾರ್ಯಾಚರಣೆಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಿ ಸಿದ್ಧತೆ ಆರಂಭಿಸಿವೆ.

ಸೆಪ್ಟೆಂಬರ್ 1ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಅಭಿಯಾನದ ಕಾರ್ಯಯೋಜನೆ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸಿದರು. ಪ್ರಮುಖ ಸ್ಮಾರಕಗಳಲ್ಲಿ ಲೇಸರ್ ಶೋ, ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ವಿಶೇಷ ಪೂಜೆಗಳು, ಗ್ರಾಮ ಸಭೆಗಳು ಮತ್ತು ಸಾರ್ವಜನಿಕರೊಂದಿಗೆ ನೇರ ಸಂವಾದಗಳು ಇದರಲ್ಲಿ ಸೇರಿವೆ.

ಸೆಪ್ಟೆಂಬರ್ 7ರಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ರಾಜ್ಯದಲ್ಲಿ ಈ ಅಭಿಯಾನದ ಅನುಷ್ಠಾನದ ಕುರಿತು ಸಭೆ ನಡೆಸಿದರು. ಅದೇ ದಿನ ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ಕೂಡ ಈ ಕುರಿತು ಸಂಪುಟ ಸಭೆ ನಡೆಸಿದರು.

ಕಾರ್ಯಕ್ರಮಗಳ ಪಟ್ಟಿ ಉದ್ದವಿದೆ!

‘The wire’ಗೆ ಸೆಪ್ಟೆಂಬರ್ 2ರಂದು ಹರಿಯಾಣ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಆಡಳಿತ ಕಾರ್ಯದರ್ಶಿಗಳ ಸಭೆಯ ನಡಾವಳಿಗಳ ದಾಖಲೆಗಳು ಲಭ್ಯವಾಗಿವೆ. ಈ ಸಭೆಯಲ್ಲಿ ಅಭಿಯಾನದ 14 ಕಾರ್ಯಕ್ರಮಗಳ ಅನುಷ್ಠಾನ, ಜವಾಬ್ದಾರಿಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ವಿವರಿಸಲಾಗಿದೆ.

ತಿಂಗಳ ಅವಧಿಯ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ‘ಆಶೀರ್ವಾದದ ದೀಪ’, ‘25 ಕೋಟಿ ಮಕ್ಕಳ ಕನಸಿನ ಭಾರತ’, ‘ನಮೋ ಸೇವಾ ಗಾಥಾ’, ‘ಆಂಗನ್ ಕಾ ಉತ್ಸವ’, ‘ಕಹಾನಿ ಬದಲಾವ್ ಕಿ’, ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’, ‘ಸೇವಾ ಜ್ಯೋತಿ ಯಾತ್ರೆ’, ‘ವಡನಗರದಿಂದ ವಾರಾಣಸಿ– ಜಲ, ಜನ ಮತ್ತು ಸೇವಾ ಸಂಕಲ್ಪ ಯಾತ್ರೆ’, ‘ಸೇವಾ ಮೇರಾ ಯೋಗದಾನ್’, ‘ಸೇವಾ ಸೇತು ಅಭಿಯಾನ’, ‘ರಂಗೋಲಿ ರಾಷ್ಟ್ರ’, ‘ನ್ಯಾಷನಲ್ ಇನ್ನೋವೇಶನ್ ಚಾಲೆಂಜ್’, ‘ಜನಸೇವಕ ಮಹಾಕುಂಭ– ಪಂಚಾಯತಿಯಿಂದ ಸಂಸತ್ತಿನವರೆಗೆ’ ಮತ್ತು ‘ಮಹಾಯಜ್ಞದಲ್ಲಿ ವಿದೇಶಿಯರ ಸಹಭಾಗಿತ್ವ’ ಎಂಬ 14 ವಿಭಾಗಗಳಿವೆ.

ಮೋದಿ ಅವರ ಹುಟ್ಟುಹಬ್ಬವಾದ ಸೆಪ್ಟೆಂಬರ್ 17ರ ಸಾಯಂಕಾಲ ಬೂತ್ ಮಟ್ಟದಲ್ಲಿ ‘ಆಶೀರ್ವಾದದ ದೀಪ’ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಮತ್ತು ಕೋವಿಡ್ ಲಸಿಕೆ ಪಡೆದವರು ದೀಪ ಬೆಳಗಿಸಲಿದ್ದಾರೆ.

ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ‘25 ಕೋಟಿ ಮಕ್ಕಳ ಕನಸಿನ ಭಾರತ’ ಕಾರ್ಯಕ್ರಮ ನಡೆಯಲಿದೆ. ಈ ಅವಧಿಯಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ‘ವಿಕಸಿತ ಭಾರತ’ ವಿಷಯದ ಕುರಿತು ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಶಾಲಾ ಶಿಕ್ಷಣ ಇಲಾಖೆಯು ಈ ಕುರಿತು ಸುತ್ತೋಲೆ ಹೊರಡಿಸಲಿದ್ದು, ಶಿಕ್ಷಕರಿಗೆ ಮಾಹಿತಿ ನೀಡುವುದು, ಪ್ರತಿ ಶಾಲೆಗೆ ನೋಡಲ್ ಅಧಿಕಾರಿಯನ್ನು ನೇಮಿಸುವುದು, ಪ್ರದರ್ಶನಗಳನ್ನು ಏರ್ಪಡಿಸುವುದು ಮತ್ತು ರಾಜ್ಯ ಮಟ್ಟದ ವಿಜೇತರಿಗೆ ಮುಖ್ಯಮಂತ್ರಿಗಳ ಸಹಿಯುಳ್ಳ ಪ್ರಶಸ್ತಿ ಪತ್ರ ವಿತರಿಸುವ ಕೆಲಸ ಮಾಡಲಿದೆ.

ಸಭೆಯ ವಿವರಗಳ ಪ್ರಕಾರ, ‘ನಮೋ ಸೇವಾ ಗಾಥಾ’ ಅಡಿಯಲ್ಲಿ ರಾಜ್ಯದ ಕಲೆ ಮತ್ತು ಸಂಸ್ಕೃತಿ ಇಲಾಖೆಯು ಸೆಪ್ಟೆಂಬರ್ 17ರಿಂದ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನದ ಕುರಿತು “ಸರಳ, ಭಾವನಾತ್ಮಕ” ಸಂಗೀತ ಆಧಾರಿತ ಬೀದಿ ನಾಟಕಗಳನ್ನು ಆಯೋಜಿಸಲಿದೆ. ಇವು ಶಾಲೆಗಳು, ಕಾಲೇಜುಗಳು, ಪಂಚಾಯತಿಗಳು ಮತ್ತು ಸಮುದಾಯ ಭವನಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಸೆಪ್ಟೆಂಬರ್ 25ರಿಂದ ಅಕ್ಟೋಬರ್ 7ರ ನಡುವೆ ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಮೂರು ದಿನಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಇಬ್ಬರು ಅಥವಾ ಮೂವರು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿಯಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಗುತ್ತದೆ.

‘ಕಹಾನಿ ಬದಲಾವ್ ಕಿ’ ಭಾಗವಾಗಿ ರಾಷ್ಟ್ರಮಟ್ಟದ ಸ್ಪರ್ಧೆ ಮತ್ತು ‘ಪ್ರತಿ ಶಕ್ತಿ ಕೇಂದ್ರಕ್ಕೆ 10 ರೀಲ್ಸ್’ ಪ್ರಚಾರದ ಮೂಲಕ ದಿನಕ್ಕೆ ಇಬ್ಬರ ನೈಜ ಫಲಾನುಭವಿಗಳ ಯಶಸ್ಸಿನ ಕಥೆಗಳನ್ನು ಬಿಂಬಿಸಲಾಗುತ್ತದೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆಯಡಿ, ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಗಳು ಮತ್ತು ಇನ್ಫ್ಲುಯೆನ್ಸರ್ ಗಳನ್ನು ರಾಜ್ಯಕ್ಕೆ ಕರೆತರಲು ಹಾಗೂ ಸ್ಥಳೀಯ ಕ್ರಿಯೇಟರ್ ಗಳನ್ನು ಇತರ ರಾಜ್ಯಗಳಿಗೆ ಕಳುಹಿಸಲು ಸರ್ಕಾರ ವ್ಯವಸ್ಥೆ ಮಾಡಲಿದೆ. ಇದು ಇನ್ಫ್ಲುಯೆನ್ಸರ್ ಗಳನ್ನು ದೇಶಾದ್ಯಂತ ಕಳುಹಿಸುವ ರಾಷ್ಟ್ರೀಯ ಯೋಜನೆಯ ಭಾಗವಾಗಿದೆ ಎಂದು ಸಭೆಯ ದಾಖಲೆಗಳು ತೋರಿಸುತ್ತವೆ.

“ಈ ವಿಭಾಗದ ಅಡಿಯಲ್ಲಿ ಇನ್ ಫ್ಲುಯೆನ್ಸರ್ ಗಳು, ಯೂಟ್ಯೂಬರ್ ಗಳು ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಳು ಪ್ರಮುಖ ಯೋಜನೆಗಳು ಮತ್ತು ಸ್ಥಳಗಳಿಗೆ ಭೇಟಿ ನೀಡಲು ಅನುಕೂಲ ಮಾಡಿಕೊಡಲಾಗುತ್ತದೆ. ಅಲ್ಲದೆ, ದೇಶದ 50 ಪ್ರಮುಖ ಸ್ಥಳಗಳಿಗೆ ಸ್ಥಳೀಯ ಕ್ರಿಯೇಟರ್ಗಳನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತದೆ,” ಎಂದು ಸಭೆಯ ದಾಖಲೆಗಳು ತಿಳಿಸಿವೆ.

‘ಸೇವಾ ಜ್ಯೋತಿ ಯಾತ್ರೆ’ಯ ಭಾಗವಾಗಿ ಗ್ರಾಮಗಳಿಂದ ಜಿಲ್ಲಾ ಮಟ್ಟದ ಪಂಜಿನ ಮೆರವಣಿಗೆಗಳು ನಡೆಯಲಿದ್ದು, ‘ವಿಕಸಿತ ಭಾರತ 2047’ಕ್ಕಾಗಿ ಸಾರ್ವಜನಿಕವಾಗಿ ಸಂಕಲ್ಪ ಸ್ವೀಕರಿಸಲಾಗುತ್ತದೆ.

ರಾಷ್ಟ್ರಮಟ್ಟದಲ್ಲಿ ‘ವಡನಗರದಿಂದ ವಾರಾಣಸಿ: ಜಲ, ಜನ ಮತ್ತು ಸೇವಾ ಸಂಕಲ್ಪ ಯಾತ್ರೆ’ ನಡೆಯಲಿದ್ದು, 250 ಬೈಕ್ಗಳಲ್ಲಿ 500 ಸವಾರರು ಪವಿತ್ರ ಜಲವನ್ನು ಹೊತ್ತೊಯ್ಯಲಿದ್ದಾರೆ. ಈ ವಾಹನಗಳಿಗೆ ಎಲ್ಇಡಿ ದೀಪಗಳ ಅಲಂಕಾರವಿರಲಿದೆ.

ತಿಂಗಳು ಪೂರ್ತಿ ನಡೆಯಲಿರುವ ‘ಸೇವಾ ಮೇರಾ ಯೋಗದಾನ್’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಅವಕಾಶ ನೀಡಲಾಗುವುದು. ಜಿಲ್ಲಾ ಪೌರಾಯುಕ್ತರು ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ರಕ್ತದಾನ, ವೃದ್ಧಾಶ್ರಮ ಭೇಟಿ, ಸಸಿ ನೆಡುವುದು, ಸ್ವಚ್ಛತೆ ಸೇವೆ, ಆರೋಗ್ಯ ತಪಾಸಣೆ ಶಿಬಿರಗಳು, ಡಿಜಿಟಲ್ ಸಾಕ್ಷರತೆ, ಸೈಬರ್ ಭದ್ರತೆ, ಯೋಗ, ಮಾದಕವಸ್ತು ಮುಕ್ತ ಭಾರತ ಮತ್ತು ನದಿ ತೀರಗಳ ಶುಚೀಕರಣ ಸೇರಿದಂತೆ 25 ಸೇವಾ ಚಟುವಟಿಕೆಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

‘ಸೇವಾ ಸೇತು ಅಭಿಯಾನ’ದಡಿ ಸರ್ಕಾರಿ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲು ತಾಲೂಕು ಮಟ್ಟದಲ್ಲಿ ಸೇವಾ ಶಿಬಿರಗಳನ್ನು ಆಯೋಜಿಸಲಾಗುವುದು. ‘ರಂಗೋಲಿ ರಾಷ್ಟ್ರ’ ಕಾರ್ಯಕ್ರಮದಲ್ಲಿ ನೈಸರ್ಗಿಕ ಸಾಮಗ್ರಿಗಳನ್ನು ಬಳಸಿ ರಾಷ್ಟ್ರೀಯತೆ, ಕಲ್ಯಾಣ ಯೋಜನೆಗಳು, ಸಾಂಸ್ಕೃತಿಕ ಪರಂಪರೆ ಮತ್ತು ವಿಕಸಿತ ಭಾರತ 2047 ಕುರಿತು ರಂಗೋಲಿಗಳನ್ನು ಬಿಡಿಸಲಾಗುವುದು. ಆಯ್ದ ನಗರಗಳಲ್ಲಿ ಮಾನವ ರಂಗೋಲಿಗಳು ಹಾಗೂ ಬೃಹತ್ ‘ಭಾರತ್ ಮಂಡಲ’ ರೂಪಿಸಲಾಗುವುದು ಎಂದು ದಾಖಲೆಗಳು ಹೇಳಿವೆ.

ನ್ಯಾಷನಲ್ ಇನ್ನೋವೇಶನ್ ಚಾಲೆಂಜ್ ಅಡಿಯಲ್ಲಿ ಮಹಾರಾಷ್ಟ್ರ, ಗುಜರಾತ್, ಬೆಂಗಳೂರು, ದಿಲ್ಲಿ ಮತ್ತು ಕೋಲ್ಕತ್ತಾದ ಐದು ಪ್ರಾದೇಶಿಕ ಕೇಂದ್ರಗಳಲ್ಲಿ ಆನ್ಲೈನ್ ಅರ್ಜಿಗಳು, ನೇರ ಪ್ರಾತ್ಯಕ್ಷಿಕೆಗಳು ಮತ್ತು ತೀರ್ಪುಗಾರರ ಮೌಲ್ಯಮಾಪನದ ಮೂಲಕ ನವೋದ್ಯಮಗಳು, ವೃತ್ತಿಪರರು ಹಾಗೂ ಸಂಶೋಧಕರನ್ನು ತಲುಪಲು ಯೋಜನೆ ರೂಪಿಸಲಾಗಿದೆ.

‘ಜನಸೇವಕ ಮಹಾಕುಂಭ– ಪಂಚಾಯತಿಯಿಂದ ಸಂಸತ್ತಿನವರೆಗೆ’ ಕಾರ್ಯಕ್ರಮಕ್ಕಾಗಿ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೇಂದ್ರ ರೈಲ್ವೆ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಂಚಾಯತ್ ರಾಜ್ ಸಚಿವಾಲಯದೊಂದಿಗೆ ಒಗ್ಗೂಡಿ ಕೆಲಸ ಮಾಡಲಿದೆ. ಮೋದಿ ಅವರ 25 ವರ್ಷಗಳ “ಸಾರ್ವಜನಿಕ ಸೇವೆ ಮತ್ತು ಉತ್ತಮ ಆಡಳಿತ”ದ ನೆನಪಿಗಾಗಿ 1.25 ಲಕ್ಷ ಸಾರ್ವಜನಿಕ ಪ್ರತಿನಿಧಿಗಳ ಬೃಹತ್ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.

“ಗೌರವಾನ್ವಿತ ಪ್ರಧಾನಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸುಶಾಸನದ ನೆನಪಿಗಾಗಿ ದಿಲ್ಲಿ, ಗುರುಗ್ರಾಮ, ಘಾಜಿಯಾಬಾದ್, ಸೂರಜ್ಕುಂಡ್ ಅಥವಾ ವಾರಾಣಸಿಯಂತಹ ಸ್ಥಳಗಳಲ್ಲಿ ಸರಪಂಚರು ಸೇರಿದಂತೆ ಸುಮಾರು 1.25 ಲಕ್ಷ ಸಾರ್ವಜನಿಕ ಪ್ರತಿನಿಧಿಗಳ ಬೃಹತ್ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಇದರ ಹೆಚ್ಚಿನ ವಿವರಗಳನ್ನು ಬಳಿಕ ಹಂಚಿಕೊಳ್ಳಲಾಗುವುದು,” ಎಂದು ಸಭೆಯ ದಾಖಲೆಗಳು ತಿಳಿಸಿವೆ.

ಮಹಾಯಜ್ಞದಲ್ಲಿ ವಿದೇಶಿ ಭಾಗಿತ್ವ ಕಾರ್ಯಕ್ರಮದಡಿ, ಜಾಗತಿಕ ಸೂರ್ಯೋದಯದ ಸಮಯಕ್ಕೆ ತಕ್ಕಂತೆ ಆಯ್ದ 25 ದೇಶಗಳಲ್ಲಿ ಆಯೋಜಿಸಲಾಗುವ ಒಂದು ಗಂಟೆಯ ಮಹಾಯಜ್ಞಗಳಲ್ಲಿ ಅನಿವಾಸಿ ಭಾರತೀಯರು ಭಾಗವಹಿಸಲಿದ್ದಾರೆ.

ಈ ವರ್ಷದ ಜೂನ್ ನಲ್ಲಿ, ಟಿಎಂಸಿ ಮಾಜಿ ಸಂಸದ ಸಾಕೇತ್ ಗೋಖಲೆ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಲಭ್ಯವಾದ ಉತ್ತರದಲ್ಲಿ, ಮೋದಿ ಅವರ ಪ್ರಚಾರಕ್ಕಾಗಿ ಸರ್ಕಾರ 2,586 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂಬ ಅಂಶ ಹೊರಬಿದ್ದಿತ್ತು.

ಫೆಬ್ರವರಿಯಲ್ಲಿ, ಮೋದಿ ಸರ್ಕಾರವು 2024–25 ಹಣಕಾಸು ವರ್ಷದಲ್ಲಿ ಪತ್ರಿಕಾ ಜಾಹೀರಾತುಗಳಿಗಾಗಿ 119.79 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಿತ್ತು. ಇದಕ್ಕೂ ಮೊದಲು ಡಿಸೆಂಬರ್ನಲ್ಲಿ ಸಂಸತ್ತಿನಲ್ಲಿ ನೀಡಿದ ಮತ್ತೊಂದು ಲಿಖಿತ ಉತ್ತರದಲ್ಲಿ, ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಜಾಹೀರಾತು ವೆಚ್ಚ ಒಟ್ಟು ಸುಮಾರು 2,447 ಕೋಟಿ ರೂಪಾಯಿ ತಲುಪಿದ್ದು, ಸರಾಸರಿ ದಿನಕ್ಕೆ ಸುಮಾರು 1.34 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಲಾಗಿತ್ತು.

ಕಳೆದ ವರ್ಷ ಮೋದಿ ಅವರ 75ನೇ ಹುಟ್ಟುಹಬ್ಬದ ನೆನಪಿಗಾಗಿ, ದಿನಪತ್ರಿಕೆಗಳು, ರಾಜಕಾರಣಿಗಳು, ಕ್ರೀಡಾಪಟುಗಳು, ಚಿತ್ರತಾರೆಯರು, ಉದ್ಯಮಿಗಳು, ಖಾಸಗಿ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲರೂ ಮೋದಿ ಅವರ ಜನ್ಮದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದರು.

ಮೋದಿ ಅವರ ಹುಟ್ಟುಹಬ್ಬ ಹಾಗೂ ಸಾರ್ವಜನಿಕ ಜೀವನದ 25 ವರ್ಷಗಳ ಆಚರಣೆಗೆ ‘ಸೇವಾ ಸಂಕಲ್ಪ ಅಭಿಯಾನ’ದ ಕಾರ್ಯಕ್ರಮಗಳು

‘ಆಶೀರ್ವಾದದ ದೀಪ’: ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ದೀಪ ಬೆಳಗಿಸುವುದು.

‘25 ಕೋಟಿ ಮಕ್ಕಳ ಕನಸಿನ ಭಾರತ’: ‘ವಿಕಸಿತ ಭಾರತ’ ವಿಷಯದ ಕುರಿತು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳ ಆಯೋಜನೆ.

‘ನಮೋ ಸೇವಾ ಗಾಥಾ’: ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನದ ಕುರಿತು ‘ಸರಳ, ಭಾವನಾತ್ಮಕ’ ಸಂಗೀತ ಆಧಾರಿತ ಬೀದಿ ನಾಟಕ ಪ್ರದರ್ಶನ.

‘ಆಂಗನ್ ಕಾ ಉತ್ಸವ್’: ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ಇಬ್ಬರು ಅಥವಾ ಮೂವರು ಕಾರ್ಯಕರ್ತೆಯರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

‘ಕಹಾನಿ ಬದಲಾವ್ ಕಿ’: ರಾಷ್ಟ್ರಮಟ್ಟದ ಸ್ಪರ್ಧೆ ಮತ್ತು ‘ಪ್ರತಿ ಶಕ್ತಿ ಕೇಂದ್ರಕ್ಕೆ 10 ರೀಲ್ಸ್’ ಪ್ರಚಾರದ ಮೂಲಕ ದಿನಕ್ಕೆ ಇಬ್ಬರು ನೈಜ ಫಲಾನುಭವಿಗಳ ಯಶಸ್ಸಿನ ಕಥೆಗಳನ್ನು ಬಿಂಬಿಸುವುದು.

‘ವಿಕಸಿತ ಭಾರತ ಸಂಕಲ್ಪ ಯಾತ್ರೆ’: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು, ಯೂಟ್ಯೂಬರ್ಗಳು ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಗಳು ಪ್ರಮುಖ ಯೋಜನೆಗಳು ಹಾಗೂ ಸ್ಥಳಗಳಿಗೆ ಭೇಟಿ ನೀಡಲು ಸರ್ಕಾರದ ಬೆಂಬಲ.

‘ಸೇವಾ ಜ್ಯೋತಿ ಯಾತ್ರೆ’: ಗ್ರಾಮಗಳಿಂದ ಆರಂಭವಾಗಿ ಜಿಲ್ಲಾ ಕೇಂದ್ರಗಳವರೆಗೆ ನಡೆಯುವ ಪಂಜಿನ ಮೆರವಣಿಗೆ ಮತ್ತು ‘ವಿಕಸಿತ ಭಾರತ 2047’ಕ್ಕಾಗಿ ಸಾರ್ವಜನಿಕ ಸಂಕಲ್ಪ ಸ್ವೀಕಾರ.

‘ವಡನಗರದಿಂದ ವಾರಾಣಸಿ: ಜಲ, ಜನ ಮತ್ತು ಸೇವಾ ಸಂಕಲ್ಪ ಯಾತ್ರೆ’: ಎಲ್ಇಡಿ ದೀಪಗಳಿಂದ ಅಲಂಕರಿಸಲ್ಪಟ್ಟ 250 ಬೈಕ್ಗಳಲ್ಲಿ 500 ಸವಾರರು ವಡನಗರ ಮತ್ತು ವಾರಾಣಸಿ ನಡುವೆ ಪವಿತ್ರ ಜಲವನ್ನು ಹೊತ್ತೊಯ್ಯುವುದು.

‘ಸೇವಾ ಮೇರಾ ಯೋಗದಾನ್’: ರಕ್ತದಾನ, ವೃದ್ಧಾಶ್ರಮ ಭೇಟಿ, ಸಸಿ ನೆಡುವುದು, ಸ್ವಚ್ಛತೆಯೇ ಸೇವೆ, ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಸೇರಿದಂತೆ 25 ಸೇವಾ ಚಟುವಟಿಕೆಗಳಲ್ಲಿ ಸಾರ್ವಜನಿಕರ ಭಾಗಿತ್ವ.

‘ಸೇವಾ ಸೇತು ಅಭಿಯಾನ’: ಸರ್ಕಾರಿ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲು ತಾಲೂಕು ಮಟ್ಟದಲ್ಲಿ ಸೇವಾ ಶಿಬಿರಗಳ ಆಯೋಜನೆ.

‘ರಂಗೋಲಿ ರಾಷ್ಟ್ರ’: ನೈಸರ್ಗಿಕ ಸಾಮಗ್ರಿಗಳನ್ನು ಬಳಸಿ ರಾಷ್ಟ್ರೀಯತೆ, ಕಲ್ಯಾಣ ಯೋಜನೆಗಳು, ಸಾಂಸ್ಕೃತಿಕ ಪರಂಪರೆ ಮತ್ತು ವಿಕಸಿತ ಭಾರತ 2047 ಕುರಿತು ರಂಗೋಲಿ ಪ್ರದರ್ಶನ. ಆಯ್ದ ನಗರಗಳಲ್ಲಿ ಮಾನವ ರಂಗೋಲಿ ಹಾಗೂ ಬೃಹತ್ ‘ಭಾರತ ಮಂಡಲ’ ನಿರ್ಮಾಣ.

‘ನ್ಯಾಷನಲ್ ಇನ್ನೋವೇಶನ್ ಚಾಲೆಂಜ್’: ಮಹಾರಾಷ್ಟ್ರ, ಗುಜರಾತ್, ಬೆಂಗಳೂರು, ದಿಲ್ಲಿ ಮತ್ತು ಕೋಲ್ಕತ್ತಾದ ಐದು ಪ್ರಾದೇಶಿಕ ಕೇಂದ್ರಗಳಲ್ಲಿ ಸಂಶೋಧಕರ ಭಾಗಿತ್ವ.

‘ಜನಸೇವಕ ಮಹಾಕುಂಭ– ಪಂಚಾಯತಿಯಿಂದ ಸಂಸತ್ತಿನವರೆಗೆ’: ಮೋದಿ ಅವರ 25 ವರ್ಷಗಳ “ಸಾರ್ವಜನಿಕ ಸೇವೆ ಮತ್ತು ಉತ್ತಮ ಆಡಳಿತ”ದ ನೆನಪಿಗಾಗಿ 1.25 ಲಕ್ಷ ಸಾರ್ವಜನಿಕ ಪ್ರತಿನಿಧಿಗಳ ಬೃಹತ್ ರಾಷ್ಟ್ರೀಯ ಸಮಾವೇಶ.

‘ಮಹಾಯಜ್ಞದಲ್ಲಿ ವಿದೇಶಿ ಭಾಗಿತ್ವ’: ಆಯ್ದ 25 ದೇಶಗಳಲ್ಲಿ ಆಯೋಜಿಸಲಾಗುವ ಒಂದು ಗಂಟೆಯ ಮಹಾಯಜ್ಞಗಳಲ್ಲಿ ಅನಿವಾಸಿ ಭಾರತೀಯರು ಭಾಗವಹಿಸಲಿದ್ದಾರೆ.

ಸೌಜನ್ಯ: thewire.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor