ಹಲವು ಹೆಸರು, CBI ಅಧಿಕಾರಿಗಳ ಸೋಗಿನಲ್ಲಿ ವಂಚಿಸುವುದೇ ಈತನ ಕಾಯಕ: ಮೋಸ್ಟ್ ವಾಂಟೆಡ್ ವಂಚಕ ಸ್ಯಾಮ್ ಆ್ಯಂಟನಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದು ಹೇಗೆ?
ಕಿರಣ್ ಪರಾಶರ್ – indianexpress. com ವರದಿ
ಸ್ಯಾಮ್ ಅಂತೋನಿ | Photo Credit : indianexpress.com
ಸುಮಾರು ಮೂರು ದಶಕಗಳಿಂದ ಆತ ಸ್ಯಾಮ್ ಪೀಟರ್, ರಾಹುಲ್ ಪೀಟರ್, ಡ್ಯಾನಿ ಥರಕ್ಕನ್, ರಾಜೇಶ್ ರಾಬಿನ್ಸನ್ ಮತ್ತು ಆ್ಯಂಟನಿ ಫ್ರಾನ್ಸಿಸ್ ಎಂಬ ಹೆಸರುಗಳನ್ನು ಬಳಸುತ್ತಿದ್ದ. ವರ್ಷಗಳು ಕಳೆದಂತೆ ಆತ ಇನ್ನೂ ಹಲವು ಹೆಸರುಗಳನ್ನು ಬಳಸಿರಬಹುದು. "ನಮಗೆ ಸದ್ಯಕ್ಕೆ ಈ ಐದು ಹೆಸರುಗಳಷ್ಟೇ ತಿಳಿದಿವೆ" ಎಂದು ಪೊಲೀಸರು ಹೇಳುತ್ತಾರೆ.
ಪೊಲೀಸರ ಪಾಲಿಗೆ ಆತನ ಹೆಸರಿನ ಅರ್ಥ ಒಂದೇ: ವಂಚನೆಯಲ್ಲಿ ಅಸಾಧಾರಣ ನೈಪುಣ್ಯ ಹೊಂದಿದ್ದ ಮಹಾ ವಂಚಕ. ಶ್ರೀಮಂತರನ್ನು ಗುರಿಯಾಗಿಸಿಕೊಂಡು CBI ಅಧಿಕಾರಿಗಳ ಸೋಗಿನಲ್ಲಿ ವಂಚಿಸುವ 'ಸ್ಪೆಷಲ್ 26' ಬಾಲಿವುಡ್ ಸಿನಿಮಾದ ಶೈಲಿಯಲ್ಲೇ ಈತನೂ ಕಾರ್ಯನಿರ್ವಹಿಸುತ್ತಿದ್ದ.
ಸೆಪ್ಟೆಂಬರ್ 1ರಂದು, ಬಹುಕಾಲದಿಂದ ಪೊಲೀಸರಿಗೆ ಬೇಕಾಗಿದ್ದ 64 ವರ್ಷದ ಸ್ಯಾಮ್ ಆ್ಯಂಟನಿ ಅಲಿಯಾಸ್ ಸ್ಯಾಮ್ ಪೀಟರ್ನನ್ನು ಕರಾವಳಿಯ ಮಂಗಳೂರು ನಗರ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ. 2019ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಆತ ಎಷ್ಟು ಸುಲಭವಾಗಿ ತನ್ನ ಅಸಲಿ ಗುರುತನ್ನು ಮರೆಮಾಚಿ ಬೇರೆಯವನೆಂದು ನಂಬಿಸುತ್ತಿದ್ದ ಎಂಬುದು ಪೊಲೀಸರನ್ನು ಇಂದಿಗೂ ಅಚ್ಚರಿಗೊಳಿಸಿದೆ.
"ಆತ ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಾನೆ ಮತ್ತು ಆತನಿಗೆ ಕಾನೂನಿನ ಬಗ್ಗೆ ಅದ್ಭುತ ಜ್ಞಾನವಿದೆ. ಆತನ ಹಿನ್ನೆಲೆ ತಿಳಿಯದ ವ್ಯಕ್ತಿಯೊಬ್ಬ ಆತನೊಂದಿಗೆ 10 ನಿಮಿಷ ಮಾತನಾಡಿದರೆ, ತಾನೊಬ್ಬ ಪ್ರಭಾವಿ ಉದ್ಯಮಿ ಅಥವಾ ಕೇಂದ್ರ ಸಂಸ್ಥೆಯ ಹಿರಿಯ ಅಧಿಕಾರಿ ಎಂದು ಆತ ಎದುರಿಗಿದ್ದವರನ್ನು ಸುಲಭವಾಗಿ ನಂಬಿಸಿಬಿಡುತ್ತಾನೆ" ಎಂದು ಬಂಧನದ ಬಳಿಕ ಆತನನ್ನು ವಿಚಾರಣೆ ನಡೆಸಿದ ಮಂಗಳೂರು ಪೂರ್ವ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಹೇಳುತ್ತಾರೆ.
ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ವಿವರಿಸಿದ್ದು ಹೀಗೆ: ದೃಢಕಾಯ ಶರೀರ, ಉತ್ತಮ ಉಡುಪು, ಇನ್-ಶರ್ಟ್ ಮಾಡಿ, ಹೊಳೆಯುವ ಶೂ ಧರಿಸಿ, ಉನ್ನತ ಅಧಿಕಾರಿಯಂತೆಯೇ ವ್ಯವಹರಿಸುವ ಶೈಲಿ ಆತನದ್ದಾಗಿತ್ತು. ಆತನ ಇಂಗ್ಲಿಷ್ ಭಾಷಾ ಪ್ರೌಢಿಮೆಯಿಂದಾಗಿಯೇ ಜನ ಆತನಿಗೆ ಗೌರವ ನೀಡುತ್ತಿದ್ದರು ಎಂದು ಅಧಿಕಾರಿ ಹೇಳುತ್ತಾರೆ.
ಬಂಧನದ ಬಳಿಕ ಪೊಲೀಸರು ಆತನ ಪೂರ್ಣ ವಿವರ ನೀಡಿ, ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಆತನ ಇತ್ತೀಚಿನ ಚಿತ್ರದಲ್ಲಿ, ಆತನ ದೊಡ್ಡ ಕಂದು ಕಣ್ಣುಗಳು ಉಬ್ಬಿದಂತೆ ಕಾಣುತ್ತವೆ. ಅಗಲವಾದ ಮೂಗು, ಮೀಸೆ ಇದೆ. ಮುಂಭಾಗದಲ್ಲಿ ಕೂದಲು ಸ್ವಲ್ಪ ಕಡಿಮೆಯಾಗಿದ್ದರೂ, ತಲೆಯಲ್ಲೆಲ್ಲ ದಟ್ಟವಾದ ಕೂದಲಿದೆ. ತಾನು ಕೂದಲಿಗೆ ಬಣ್ಣ ಹಚ್ಚುವುದಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.
64 ವರ್ಷದ ವ್ಯಕ್ತಿಗೆ ಹೋಲಿಸಿದರೆ ಆತನ ಕೂದಲು ಕಡುಕಪ್ಪಾಗಿದೆ. 5 ಅಡಿ 8 ಇಂಚು ಎತ್ತರವಿರುವ ಆತ ದೃಢಕಾಯ ಶರೀರ ಹೊಂದಿದ್ದಾನೆ. ಎಲ್ಲಿ ಹೋದರೂ ತನ್ನತ್ತ ಗಮನ ಸೆಳೆಯುವ ಆತ, ಮಾತನಾಡುವ ಮುನ್ನ ಎದುರಿಗಿರುವವರ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಆತನ ಪ್ರತಿಯೊಂದು ಮಾತುಗಳು ತೂಕಬದ್ಧವಾಗಿದ್ದು, ಆಜ್ಞಾಪಿಸುವ ಧ್ವನಿಯಲ್ಲಿರುತ್ತಿದ್ದವು.
ಕೊಲ್ಲಂನಿಂದ ಎಂಬಿಎ ಪದವಿ ಪಡೆದಿರುವ ಆ್ಯಂಟನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಆತನ ಹೆಂಡತಿ ಮತ್ತು ಮಕ್ಕಳು ಆತನೊಂದಿಗೆ ವಾಸಿಸುತ್ತಿರಲಿಲ್ಲ ಎನ್ನಲಾಗಿದೆ.
►ಸಮಸ್ಯೆ ಇದ್ದಲ್ಲಿ ಆ್ಯಂಟನಿ ಇರುತ್ತಿದ್ದ
ಆ್ಯಂಟನಿಯ 'ಕಾರ್ಯವೈಖರಿ' ಅತ್ಯಂತ ಸರಳವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಬ್ಯಾಂಕ್ ವಂಚನೆ, ತೆರಿಗೆ ವಿವಾದ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಸಂಬಂಧಿಸಿದ ಆರ್ಥಿಕ ಸಂಕಷ್ಟಗಳಲ್ಲಿ ಸಿಲುಕಿದ್ದ ಶ್ರೀಮಂತ ಉದ್ಯಮಿಗಳನ್ನು ಆತ ಸಂಪರ್ಕಿಸುತ್ತಿದ್ದ. ನಂತರ ಅವರಿಂದ ಭಾರೀ ಪ್ರಮಾಣದ 'ಶುಲ್ಕ' ಪಡೆದು, ಅವರ ಕಾನೂನು ಸಮಸ್ಯೆಗಳನ್ನು ಪರಿಹರಿಸಿಕೊಡುವುದಾಗಿ ನಂಬಿಸುತ್ತಿದ್ದ.
ಸಾಮಾನ್ಯವಾಗಿ ಆತ ತನ್ನನ್ನು 'ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ' (NCIB) ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. NCIB ಎಂಬುದು ಅಪರಾಧಗಳ ವಿರುದ್ಧ ಜಾಗೃತಿ ಮೂಡಿಸುವ ಒಂದು ಸ್ವತಂತ್ರ ಸರ್ಕಾರೇತರ ಸಂಸ್ಥೆಯಾಗಿದೆ. ಆದರೆ ಆ್ಯಂಟನಿ ಇದನ್ನು ದೇಶದ ಪ್ರಮುಖ ತನಿಖಾ ಸಂಸ್ಥೆಗಳಲ್ಲಿ ಒಂದೆಂದು ತನ್ನ ಸಂತ್ರಸ್ತರಿಗೆ ಬಿಂಬಿಸುತ್ತಿದ್ದ.
ಹಲವರು ಈ ವಂಚನೆಯ ಬಲೆಗೆ ಬಿದ್ದರು, ಕೆಲವರಂತೂ ಪೊಲೀಸರಿಗೆ ದೂರು ನೀಡಲು ಮುಂದಾಗಲಿಲ್ಲ. "ಕೇಂದ್ರ ತನಿಖಾ ಸಂಸ್ಥೆಗಳಿಗೆ ಸಂಬಂಧಿಸಿದ ವಿವಾದಗಳು ಎಲ್ಲೆಲ್ಲಿ ಇರುತ್ತಿದ್ದವೋ, ಅಲ್ಲೆಲ್ಲಾ ಆ್ಯಂಟನಿ ಹಾಜರಿರುತ್ತಿದ್ದ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಆತನಿಗೆ ಇಂತಹ ವಿಚಾರಗಳು ಹೇಗೆ ತಿಳಿಯುತ್ತಿದ್ದವು ಎಂಬುದು ತನಿಖಾಧಿಕಾರಿಗಳನ್ನು ಇಂದಿಗೂ ಕಾಡುತ್ತಿರುವ ಪ್ರಶ್ನೆ. "ಆತನಿಗೆ ಮಾಧ್ಯಮಗಳ ಮೂಲಕ ಮಾಹಿತಿ ಸಿಗುತ್ತಿತ್ತೋ ಅಥವಾ ಕೇಂದ್ರ ಸಂಸ್ಥೆಗಳಲ್ಲಿನ ಮೂಲಗಳನ್ನು ಆತ ಬಳಸಿಕೊಳ್ಳುತ್ತಿದ್ದನೋ? ಆತನ ಮಾಹಿತಿಯ ಮೂಲಗಳನ್ನು ನಾವಿನ್ನೂ ಪತ್ತೆಹಚ್ಚಬೇಕಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಒಮ್ಮೆ ಸೂಕ್ತ ವ್ಯಕ್ತಿಯನ್ನು ಗುರುತಿಸಿದ ಬಳಿಕ, ತನ್ನ ಸೋಗು ನಿಜವೆಂದು ನಂಬಿಸಲು ಬೇಕಾದ ಅಗತ್ಯ ಸಾಕ್ಷ್ಯಗಳನ್ನು ಆತ ಸಿದ್ಧಪಡಿಸುತ್ತಿದ್ದ: ನಕಲಿ ಸಂದೇಶಗಳು, ನಕಲಿ ದಾಳಿಯ ವಿಡಿಯೋಗಳು ಹಾಗೂ NCBI ಮತ್ತು ಇತರ ಸಂಸ್ಥೆಗಳ ನಕಲಿ ಲೆಟರ್ಹೆಡ್ಗಳನ್ನು ಆತ ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆ್ಯಂಟನಿಯ ಕಾರ್ಯವೈಖರಿಯನ್ನು ವಿವರಿಸಲು ಪೊಲೀಸ್ ಅಧಿಕಾರಿಗಳು ಉದ್ಯಮಿ ಅಬ್ದುಲ್ ಶರೀಫ್ ಅವರ ಪ್ರಕರಣವನ್ನು ಉದಾಹರಿಸುತ್ತಾರೆ. 2018ರಲ್ಲಿ, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ಚಿನ್ನದ ಸಾಗಣೆಯನ್ನು ವಶಪಡಿಸಿಕೊಂಡ ಬಳಿಕ ಶರೀಫ್ ಅವರ ಸಹೋದರ ಶಿಯಾಬುದ್ದೀನ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಿಚಾರಣೆ ನಡೆಸುತ್ತಿತ್ತು. "ಆ್ಯಂಟನಿಗೆ ಹೇಗೋ ಈ ವಿಷಯ ತಿಳಿದುಬಂದಿದೆ. ಆತ ಐದು ಜನರ ತಂಡವನ್ನು ರಚಿಸಿಕೊಂಡು, ತಾನು NCBIಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ಶರೀಫ್ ಅವರನ್ನು ಸಂಪರ್ಕಿಸಿದ್ದ. ಲಂಚದ ಬದಲಾಗಿ ಸಹೋದರನ ಮೇಲಿನ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಭರವಸೆ ನೀಡಿದ್ದ" ಎಂದು ಅಧಿಕಾರಿ ಹೇಳುತ್ತಾರೆ. ಮುಂದಿನ 10 ತಿಂಗಳುಗಳಲ್ಲಿ ಆ್ಯಂಟನಿ ಶರೀಫ್ ಅವರಿಂದ ವಿವಿಧ ಕಂತುಗಳಲ್ಲಿ 1.13 ಕೋಟಿ ರೂ. ಸುಲಿಗೆ ಮಾಡಿದ್ದ ಎನ್ನಲಾಗಿದೆ.
ತಾನು ವಂಚನೆಗೊಳಗಾಗಿದ್ದೇನೆ ಎಂಬುದು ಶರೀಫ್ ಅವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು. ಬಳಿಕ ಶರೀಫ್ ದೂರು ನೀಡಿದ್ದು, 2019ರ ಆಗಸ್ಟ್ 27ರಂದು ಕರ್ನಾಟಕದ ಕೊಣಾಜೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಯಿತು.
2019ರಲ್ಲಿ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಆ್ಯಂಟನಿ ವಿರುದ್ಧ ದಾಖಲಾದ ಮತ್ತೊಂದು ಪ್ರಕರಣವನ್ನು ನೆನಪಿಸಿಕೊಳ್ಳುವ ಪೊಲೀಸ್ ಅಧಿಕಾರಿ, ಆತ NCBI ಅಧಿಕಾರಿ ಎಂದು ಹೇಳಿಕೊಂಡು ಕಚೇರಿಯೊಂದನ್ನು ತೆರೆದಿದ್ದ. ಏಳು ತಿಂಗಳ ಕಾಲ ಅದನ್ನು ನಡೆಸಿ, ಬಾಡಿಗೆ ನೀಡದೆ ಪರಾರಿಯಾಗಿದ್ದ ಎಂದು ತಿಳಿಸಿದ್ದಾರೆ.
ಆ್ಯಂಟನಿ ನಿರ್ದಿಷ್ಟವಾದ ಗ್ಯಾಂಗ್ ನಡೆಸುತ್ತಿರಲಿಲ್ಲ. "ಆದರೆ ಆತನಿಗೆ ಖಾಯಂ ಪಾಲುದಾರನೊಬ್ಬನಿದ್ದ. ಆತ ಬೆಂಗಳೂರಿನ ವಕೀಲ" ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ.
►ದೀರ್ಘ ಅಪರಾಧ ಹಿನ್ನೆಲೆ
ಪೊಲೀಸರು ಆತನ ದಾಖಲೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದಾಗ, ಆತನ ಅಪರಾಧದ ಹಾದಿ 1997ರಷ್ಟು ಹಿಂದಿನದ್ದು ಎಂದು ಗೊತ್ತಾಗುತ್ತದೆ. "ಮೊದಲನೆಯದು ಛತ್ತೀಸ್ಗಢದ ಖೈರಾಗಢ್ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣ" ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ.
ಒಂದು ವರ್ಷದ ಬಳಿಕ, 1998ರಲ್ಲಿ, ಕರ್ನಾಟಕದಲ್ಲಿ ಆತನ ವಿರುದ್ಧದ ಮೊದಲ ಪ್ರಕರಣವು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಯಿತು. ಆದರೆ ಈ ಪ್ರಕರಣವೇ ರಾಜ್ಯದಲ್ಲಿ ಆತನ ಚಟುವಟಿಕೆಗಳ ಆರಂಭವಾಗಿರಲಿಕ್ಕಿಲ್ಲ ಎಂದು ಪೊಲೀಸರು ನಂಬಿದ್ದಾರೆ. "ದಾಖಲೆಗೆ ಸೇರದ ಇತರ ಪ್ರಕರಣಗಳೂ ಇದ್ದಿರಬಹುದು" ಎಂದು ಅಧಿಕಾರಿ ಹೇಳುತ್ತಾರೆ.
ಪೊಲೀಸರು ಆತನನ್ನು ಕೊನೆಯ ಬಾರಿಗೆ ಬಂಧಿಸಿದ್ದು 2019ರಲ್ಲಿ.
ಆ ವರ್ಷದ ಆಗಸ್ಟ್ 16ರಂದು, NCBIಯ ಹಿರಿಯ ಅಧಿಕಾರಿಯೊಬ್ಬರು ಮಂಗಳೂರಿನ ಸಾಯಿ ಆರ್ಯ ಲಾಡ್ಜ್ನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಪೊಲೀಸ್ ಅಧಿಕಾರಿ ಮಾರುತಿ ಎಸ್. ವಿ. ಅವರಿಗೆ ಸಿಕ್ಕಿತ್ತು. ಈ ಹಿರಿಯ NCBI ಅಧಿಕಾರಿ ಮುಖ್ಯ ತನಿಖೆಗಾಗಿ ಬಂದಿರುವುದಾಗಿ ಹೇಳಿಕೊಂಡಿದ್ದರು ಎಂದು ಮಾರುತಿ ಎಸ್. ವಿ. ನೆನಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕೇಂದ್ರ ತನಿಖಾ ಸಂಸ್ಥೆಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತವೆ. ಹೀಗಾಗಿ, ಮಾರುತಿ ಅವರಿಗೆ ಅನುಮಾನ ಮೂಡಿತು.
ಅವರು ಸ್ಥಳಕ್ಕೆ ಹೋದಾಗ, ಆಗ ಸ್ಯಾಮ್ ಪೀಟರ್ ಎಂದು ಸೋಗು ಹಾಕಿದ್ದ ಆ್ಯಂಟನಿ ತನ್ನ ಸಹಚರರೊಂದಿಗೆ ಇರುವುದು ಕಂಡುಬಂದಿದೆ. ಅವರ ಬಳಿ ರಿವಾಲ್ವರ್ ಗಳಿದ್ದವು. ಆ್ಯಂಟನಿ ತನ್ನ NCBI ಅಧಿಕಾರಿಯ ನಾಟಕವನ್ನು ಮುಂದುವರಿಸಲು ಯತ್ನಿಸಿದರೂ, ಅದು ಫಲ ನೀಡಲಿಲ್ಲ.
ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆ್ಯಂಟನಿ ಮತ್ತು ಆತನ ಸಹಚರರಾದ ಮದನ್, ಬೋಪಣ್ಣ, ಚಿನ್ನಪ್ಪ, ಸುನಿಲ್ ರಾಜು, ಕೋದಂಡರಾಮ್, ಅಬ್ದುಲ್ ಲತೀಫ್ ಹಾಗೂ ಮೊಹಿದ್ದೀನ್ ಚೆರಿಯನ್ ಅವರನ್ನು ಬಂಧಿಸಿದರು. ಪೊಲೀಸರು ಬಂದೂಕುಗಳನ್ನು (ಒಂದು ರಿವಾಲ್ವರ್ ಮತ್ತು ಪಿಸ್ತೂಲ್), ನಕಲಿ ಗುರುತಿನ ಚೀಟಿಗಳನ್ನು, ನಗದು, ವಾಹನಗಳನ್ನು (ಮಹೀಂದ್ರಾ ಕ್ಸೈಲೋ ಮತ್ತು ಜೀಪ್ ಸೇರಿದಂತೆ), ಮೊಬೈಲ್ ಫೋನ್ಗಳನ್ನು ಹಾಗೂ 15.7 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಂಡರು. ಆ್ಯಂಟನಿ ವಿರುದ್ಧ ಸೋಗು ಹಾಕುವಿಕೆ, ಕ್ರಿಮಿನಲ್ ಪಿತೂರಿ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಮತ್ತು ರಾಜ್ಯ ಲಾಂಛನದ ದುರುಪಯೋಗದ ಆರೋಪಗಳನ್ನು ಹೊರಿಸಲಾಯಿತು.
ಹಲವು ರಾಜ್ಯಗಳಿಗೆ ಬೇಕಾಗಿದ್ದ ವ್ಯಕ್ತಿಯನ್ನು ತಾವು ಬಂಧಿಸಿದ್ದೇವೆ ಎಂಬುದು ಪೊಲೀಸರಿಗೆ ಕೊನೆಗೆ ಅರಿವಾಯಿತು. 2007ರಲ್ಲಿ ಆತನ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿತ್ತು.
"ಈ ಪ್ರಕರಣದ ತನಿಖೆ ನಡೆಸಿದ ಕೆಲವು ಸಿಬ್ಬಂದಿ, ಆ್ಯಂಟನಿ ಅಪರಾಧಗಳನ್ನು ಮಾಡಲು ಪ್ರಾರಂಭಿಸಿದಾಗ ಹುಟ್ಟಿರಲೇ ಇಲ್ಲ" ಎಂದು ಪೊಲೀಸ್ ಅಧಿಕಾರಿಯೊಬ್ಬರು ನಗುತ್ತಾ ಹೇಳುತ್ತಾರೆ. ವರ್ಷಗಳ ಕಾಲ ಆರೋಪಿಯು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳುತ್ತಾ, ತನ್ನ ಗುರುತನ್ನು ಬದಲಾಯಿಸಿಕೊಳ್ಳುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ.
"ಸಾಮಾನ್ಯವಾಗಿ, ಆತ ಒಂದೇ ಸ್ಥಳದಲ್ಲಿ ಹಲವು ಅಪರಾಧಗಳನ್ನು ಎಸಗಿ, ನಂತರ ಮತ್ತೊಂದು ರಾಜ್ಯದ ಹೊಸ ಸ್ಥಳಕ್ಕೆ ಪರಾರಿಯಾಗಿ ಮತ್ತೆ ಅಪರಾಧ ಕೃತ್ಯ ಆರಂಭಿಸುತ್ತಿದ್ದ. ಉದಾಹರಣೆಗೆ, ಛತ್ತೀಸ್ ಗಢದಲ್ಲಿ ಅಪರಾಧ ಎಸಗಿದ ಬಳಿಕ ಕರ್ನಾಟಕಕ್ಕೆ ಬಂದಿದ್ದ, ಬಳಿಕ ಬಿಹಾರ, ಚೆನ್ನೈ, ಮಹಾರಾಷ್ಟ್ರ, ಉತ್ತರ ಪ್ರದೇಶ ಹೀಗೆ ವಿವಿಧೆಡೆ ತೆರಳಿದ್ದ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಆತನಿಗೆ ಅಪಾರ ಸಂಪರ್ಕಗಳಿದ್ದು, ಅದೇ ಆತನಿಗೆ ಸುರಕ್ಷಿತ ತಾಣವಾಗಿತ್ತು ಎಂದು ಅಧಿಕಾರಿ ಹೇಳುತ್ತಾರೆ. ತನ್ನ ಡಿಜಿಟಲ್ ಅಥವಾ ಆರ್ಥಿಕ ಗುರುತುಗಳು ಎಲ್ಲೂ ಸಿಗದಂತೆ ಆತ ಎಚ್ಚರ ವಹಿಸುತ್ತಿದ್ದ.
ಆತ ಎಂದಿಗೂ ತನ್ನ ಹೆಸರಿನಲ್ಲಿ ಮೊಬೈಲ್ ಸಿಮ್ ಕಾರ್ಡ್ ನೋಂದಾಯಿಸಿರಲಿಲ್ಲ. ಅಲ್ಲದೆ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ, ತನ್ನ ಹೆಸರಿನ ಖಾತೆಗಳ ಮೂಲಕ ಯಾವುದೇ ಹಣಕಾಸು ವಹಿವಾಟು ನಡೆಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
"ತನಿಖೆಯ ಸಮಯದಲ್ಲಿ, ಆತನಿಗೆ ಲಕ್ನೋದಲ್ಲಿ ಗೆಳತಿಯೊಬ್ಬಳಿದ್ದು, ಆಕೆ ಆತನಿಗೆ ಆಗಾಗ ಹಣ ವರ್ಗಾಯಿಸುತ್ತಿದ್ದಳು ಎಂಬುದು ತಿಳಿದುಬಂದಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಕೆಯನ್ನು ಇನ್ನೂ ವಿಚಾರಣೆಗೆ ಒಳಪಡಿಸಬೇಕಾಗಿದೆ.
►ಪರಾರಿಯಾಗುತ್ತಿದ್ದ ವೇಳೆ ಬಂಧನ
2023ರಲ್ಲಿ ಆ್ಯಂಟನಿಗೆ ಜಾಮೀನು ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಮಯ ವ್ಯರ್ಥ ಮಾಡದ ಆತ ತಕ್ಷಣವೇ ತಲೆಮರೆಸಿಕೊಂಡಿದ್ದ. ಮುಂದಿನ ಮೂರು ವರ್ಷಗಳ ಕಾಲ ಪೊಲೀಸರು ಆತನನ್ನು ಹುಡುಕಲು ಸತತ ಪ್ರಯತ್ನ ನಡೆಸಿದರೂ ಯಾವುದೇ ಯಶಸ್ಸು ಸಿಗಲಿಲ್ಲ. ಕೊನೆಗೆ ಆತನ ಸುಳಿವು ಸಂಪೂರ್ಣವಾಗಿ ಕಳೆದುಹೋಯಿತು.
ಮೂರು ತಿಂಗಳ ಹಿಂದೆ, ದೀರ್ಘಕಾಲದಿಂದ ಬಾಕಿಯಿರುವ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದ ಮಂಗಳೂರು ನಗರ ಪೊಲೀಸರಿಗೆ ಆ್ಯಂಟನಿಯ ಫೈಲ್ ಸಿಕ್ಕಿದೆ. ಈ ಬಾರಿಯಾದರೂ ಆತನನ್ನು ಬಂಧಿಸಲೇಬೇಕೆಂದು ಪಣತೊಟ್ಟ ಪೊಲೀಸರು, ಆತನ ಸುಳಿವು ಪತ್ತೆಹಚ್ಚಲು ಸಿಟಿ ಕ್ರೈಮ್ ಬ್ರಾಂಚ್ (CCB) ಅಡಿಯಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿದರು.
"ನಮ್ಮ ಬಳಿ ಆತನ ಸಂಪರ್ಕ ಸಂಖ್ಯೆಯಾಗಲಿ ಅಥವಾ ಆತನ ಸ್ಥಳದ ಬಗ್ಗೆ ಯಾವುದೇ ವಿವರಗಳಾಗಲಿ ಇರಲಿಲ್ಲ. ಆತ ಕೇರಳದವನು ಮತ್ತು ತನ್ನ ಹೆಚ್ಚಿನ ಸಮಯವನ್ನು ಚೆನ್ನೈನಲ್ಲಿ ಕಳೆದಿದ್ದಾನೆ ಎಂಬುದು ಮಾತ್ರ ನಮಗೆ ತಿಳಿದಿತ್ತು" ಎಂದು ಪೊಲೀಸ್ ಅಧಿಕಾರಿಯೊಬ್ಬರು ನೆನಪಿಸಿಕೊಳ್ಳುತ್ತಾರೆ.
"ಹೀಗಾಗಿ, ನಾವು ಎರಡೂ ರಾಜ್ಯಗಳಲ್ಲಿ ಆತನಿಗಾಗಿ ಹುಡುಕಾಟ ಪ್ರಾರಂಭಿಸಿದೆವು. ಹಿಂದೆ ಆತನ ಸಹಚರರಾಗಿದ್ದವರನ್ನು ಸಂಪರ್ಕಿಸುವ ಮೂಲಕ ಕಾರ್ಯಾಚರಣೆ ಆರಂಭಿಸಿದೆವು."
ಆಗ ಪೊಲೀಸರಿಗೆ ಅವರು ನಿರೀಕ್ಷಿಸದ ವಿಷಯವೊಂದು ತಿಳಿದುಬಂದಿದೆ.
ಆ್ಯಂಟನಿ ಕೇರಳದ ರಾಜಕಾರಣಿಯೊಬ್ಬರೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಂಡು, ಪ್ರಮುಖ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಆತ ಇತ್ತೀಚೆಗೆ ಕೇರಳದಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ. ಈ ಕಾರ್ಯಕ್ರಮದ ಫೋಟೋಗಳು ನಮಗೆ ಸಿಕ್ಕಿದವು. ಅದರ ಆಧಾರದ ಮೇಲೆಯೇ ನಾವು ಕೊನೆಗೂ ಆತನನ್ನು ಬಂಧಿಸಿದೆವು ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದಾಗಲೂ ಆತ ನಕಲಿ ದಾಖಲೆಗಳನ್ನು ಇಟ್ಟುಕೊಂಡು, ಬೇರೆ ಹೆಸರಿನಲ್ಲಿ ವಾಸಿಸುತ್ತಿದ್ದ ಎಂದು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ರಫೀಕ್ ಕೆ. ಎಂ. ತಿಳಿಸಿದ್ದಾರೆ. "ಆಗ ಆತನ ಹೆಸರು ಡ್ಯಾನಿಯಲ್ ಥರಕ್ಕನ್, 'NCBIಯ ನಿವೃತ್ತ ಹಿರಿಯ ಅಧಿಕಾರಿ'ಯಾಗಿದ್ದ" ಎಂದು ಅವರು ಹೇಳಿದ್ದಾರೆ.
ಮಂಗಳೂರು ನಗರ ಪೊಲೀಸರು ಈಗ ಆ್ಯಂಟನಿ ಭಾಗಿಯಾಗಿರಬಹುದಾದ 17 ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. "ಆತನ ವಿರುದ್ಧ ಬಾಕಿಯಿರುವ ಪ್ರಕರಣಗಳಿವೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ಪತ್ರ ಬರೆದಿದ್ದೇವೆ" ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ. ಎಚ್. ತಿಳಿಸಿದ್ದಾರೆ. ಮಂಗಳೂರು ಪೂರ್ವ ಪೊಲೀಸರು 2019ರ ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.
ಬಂಧನದ ಬಳಿಕವೂ ಆ್ಯಂಟನಿಯ ವಂಚನೆಯ ತಂತ್ರಗಳು ನಿಲ್ಲಲಿಲ್ಲ. ಸಾರ್ವಜನಿಕವಾಗಿ ಹೆಸರಾಗಿದ್ದ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ತಪ್ಪಾಗಿ ಬಂಧಿಸಲಾಗಿದೆ ಎಂದು ಹೇಳಿ, ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೇರಳದಿಂದ ಸತತ ಕರೆಗಳು ಬರಲು ಶುರುವಾದವು.
"ವಕೀಲರು, ಉದ್ಯಮಿ ಮತ್ತು ಮತ್ತೊಬ್ಬ ಪ್ರಭಾವಿ ವ್ಯಕ್ತಿಯಿಂದ ನನಗೆ ಕರೆಗಳು ಬಂದವು... ಡ್ಯಾನಿಯಲ್ (ಆ್ಯಂಟನಿ) ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಅವರು ಹೇಳಿದರು. ಅವರಿಗೆ ಅರ್ಥ ಮಾಡಿಸಲು ನಾನು ಆತನ ಹಳೆಯ ಅಪರಾಧ ಹಿನ್ನೆಲೆಯನ್ನು ಹಂಚಿಕೊಳ್ಳಬೇಕಾಯಿತು" ಎಂದು ಅಧಿಕಾರಿ ತಿಳಿಸಿದ್ದಾರೆ.
ಸೌಜನ್ಯ: indianexpress.com