×
Ad

ಕಲ್ಲಡ್ಕ ಭಟ್ ವಿರುದ್ದ ವಿಚಾರಣೆ ನಡೆದ್ರೆ ಸರಿ ಹೋಗ್ತಾರೆ

► 'ದ್ವೇಷ ಭಾಷಣ ಮಾಡದೇ ಸುಮ್ಮನಿರೋಕೆ ಆಗಲ್ವಾ ?' ► ಭಟ್ ಧ್ವೇಷ ಭಾಷಣದ ಬಗ್ಗೆ ಹೈಕೋರ್ಟ್ ಅಭಿಪ್ರಾಯ

Update: 2026-06-16 19:43 IST

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ್ ದ್ವೇಷ ಭಾಷಣ ಪ್ರಕರಣದ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆದಿದ್ದು, ದ್ವೇಷ ಭಾಷಣಗಳ ಬಗ್ಗೆ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದ್ವೇಷ ಭಾಷಣದ ತುಣುಕನ್ನು ಆಲಿಸಿದ ನ್ಯಾಯಮೂರ್ತಿಗಳು 'ಹೀಗೆಲ್ಲಾ ಭಾಷಣ ಮಾಡುವವರ ವಿರುದ್ದ ಕೋರ್ಟ್ ಪ್ರೊಸಿಡಿಂಗ್ಸ್ ನಡೆಯಬೇಕು. ಆಗ ಬುದ್ದಿ ಬರುತ್ತೆ' ಎಂದು ಜಸ್ಟಿಸ್ ಎಂ ನಾಗಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ದಾಖಲಾದ ಎಫ್ಐಆರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಈಶ್ವರಿ ಪದ್ಮುಂಜ ದಾಖಲಿಸಿದ ಎಫ್ಐಆರ್ ಸೇರಿದಂತೆ ನಾಲ್ಕು ಪ್ರಕರಣಗಳಿಗೆ ತಡೆಯಾಜ್ಞೆ ಮತ್ತು ರದ್ದು ಕೋರಿ ಪ್ರಭಾಕರ ಭಟ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ನಾಲ್ಕೂ ಅರ್ಜಿಗಳ ವಿಚಾರಣೆ ಹೈಕೋರ್ಟ್ ಮುಂದೆ ಬಂದಿದ್ದು, ಎರಡು ಪ್ರಕರಣಗಳ ದೂರುದಾರರ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ವಾದಿಸಿದರು.

"ಶ್ರೀರಂಗಪಟ್ಟಣದಲ್ಲಿ ಹನುಮಜಯಂತಿಗೆ ಪ್ರಭಾಕರ ಭಟ್ ಮುಖ್ಯ ಭಾಷಣಕಾರ ಆಗಿದ್ದರು. ಅವರು ಹನುಮನ ವಿಚಾರಗಳನ್ನು ಮಾತನಾಡಬೇಕು. ಹನುಮಂತನಿಗೂ ಮುಸ್ಲಿಮರಿಗೂ ಸಂಬಂಧವೇ ಇಲ್ಲ. ಆದರೆ ಹನುಮ ಜಯಂತಿಯಲ್ಲಿ ಮುಸ್ಲಿಮರ ವಿಷಯ ಪ್ರಸ್ತಾಪಿಸುತ್ತಾರೆ. "ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ" ಎಂದು ಭಾಷಣ ಮಾಡುತ್ತಾರೆ ಎಂದು ಎಸ್ ಬಾಲನ್ ಅವರು ಪ್ರಭಾಕರ ಭಟ್ ಅವರ ಭಾಷಣದ ಬರಹ ರೂಪವನ್ನು ಓದಲು ಮುಂದಾದರು. ಈ ಸಂದರ್ಭದಲ್ಲಿ ಕೋರ್ಟ್ ಮೈಕ್ ಅನ್ನು ಆಫ್ ಮಾಡಲು ಸೂಚಿಸಿದ ನ್ಯಾಯಾಧೀಶರು ಭಟ್ ಭಾಷಣದ ತುಣುಕನ್ನು ಆಲಿಸಿದರು.

'ಈ ರೀತಿ ಭಾಷಣ ಮಾಡುವವರು ಕೋರ್ಟ್ ಪ್ರೊಸಿಡಿಂಗ್ಸ್ ಎದುರಿಸಲಿ ಬಿಡಿ. ಅವರಿಗೆ 80 ವರ್ಷವಾಗಿದೆ ಅಂತೀರಿ. ಈ ರೀತಿ ಯಾಕೆ ಮಾತಾಡಬೇಕು. ಒಮ್ಮೆ ಕೇಸು ಎದುರಿಸಿದರೆ ಬುದ್ದಿ ಬರುತ್ತದೆ' ಎಂದು ಏಕಸದಸ್ಯ ನ್ಯಾಯಪೀಠದಲ್ಲಿದ್ದ ಜಸ್ಟಿಸ್ ಎಂ ನಾಗಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ಪದಾಂಕಿತ ಹಿರಿಯ ವಕೀಲ ಅರುಣ್ ಶ್ಯಾಂ ಅವರು ಕಲ್ಲಡ್ಕ ಪ್ರಭಾಕರ ಭಟ್ ಪರವಾಗಿ ವಾದ ಮಂಡಿಸಿ "ಇಲ್ಲಿ ಸಂತ್ರಸ್ತರೇ ಇಲ್ಲ. ಹೋರಾಟಗಾರರು ಈ ಕೇಸ್ ದಾಖಲಿಸಿದ್ದಾರೆ. ಅವರು ಭಾಷಣ ಮಾಡುತ್ತಾರೆ. ಅದು ಕೆಲವರಿಗೆ ದ್ವೇಷ ಭಾಷಣದಂತೆ ಕೇಳುತ್ತದೆ. ಪ್ರಭಾಕರ ಭಟ್ ದ್ವೇಷ ಭಾಷಣ ಮಾಡಿಯೂ ಇಲ್ಲ, ಮಾಡುವುದೂ ಇಲ್ಲ" ಎಂದರು.

"ಶ್ರೀರಂಗಪಟ್ಟಣದಲ್ಲಿ ಭಟ್ ಗೆ ಜಾಮೀನು‌ ನೀಡುವಾಗ ಇನ್ನು ಮುಂದೆ ಇದೇ ರೀತಿ ಅಪರಾಧವನ್ನು ಪುನರಾವರ್ತಿಸಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಅದನ್ನು ಉಲ್ಲಂಘನೆ ಮಾಡಿ ಪುತ್ತೂರು ವ್ಯಾಪ್ತಿಯ ಉಪ್ಪಳಿಗೆಯಲ್ಲಿ ಮುಸ್ಲಿಂ ಮಹಿಳೆಯರು ನಾಯಿ ಮರಿಯಂತೆ ಹೆರುತ್ತಾರೆ ಎಂದು ದ್ವೇಷ ಭಾಷಣ ಮಾಡಿದ್ದರು. ಈ ರೀತಿ ಕಲ್ಲಡ್ಕ ಭಟ್ ಮಾಡಿದ 12 ಭಾಷಣಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಇಲ್ಲಿ ತಡೆಯಾಜ್ಞೆ ಪಡೆದುಕೊಂಡು ಅಥವಾ ಕೇಸು ರದ್ದು ಮಾಡಿಸಿಕೊಂಡು ಮತ್ತೆ ಭಾಷಣ ಮಾಡುತ್ತಾರೆ. ಬೆಳಗ್ಗೆದ್ದು ಇವತ್ತು ಎಲ್ಲಿ ಯಾರ ವಿರುದ್ದ ವಿಷಕ್ಕಲಿ ಎಂದು ಭಟ್ ಯೋಚನೆ ಮಾಡಿ ಸಿದ್ದತೆ ಮಾಡಿಕೊಳ್ಳುತ್ತಾರೆ" ಎಂದು ಎಸ್ ಬಾಲನ್ ವಾದಿಸಿದರು.

"ಅವರಿಗೆ ಸುಮ್ಮನಿರಲು ಆಗುವುದಿಲ್ಲವೇ ? ದ್ವೇ ಷ ಭಾಷಣ ಮಾಡದೇ ಭಾಷಣ ಮಾಡಲು ಆಗುವುದಿಲ್ಲವೇ ?" ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪ್ರಶ್ನಿಸಿದರು.

"ಶ್ರೀರಂಗಪಟ್ಟಣ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಅವರ ಧ್ವನಿ ಮಾಧರಿಯನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದ್ದು ಅದು ಖಾತರಿಯಾಗಿದೆ" ಎಂದು ಎಸ್ ಬಾಲನ್ ಹೇಳಿದರು. ವಕೀಲೆ ರಕ್ಷಿತಾ ಸಿಂಗ್ ಸಹಕರಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ನಾಲ್ಕು ಪ್ರಕರಣಗಳ ಮುಂದಿನ ವಿಚಾರಣೆ ಜುಲೈ 03 ಕ್ಕೆ ಮುಂದೂಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ನವೀನ್ ಸೂರಿಂಜೆ

contributor

Similar News