12 ವರ್ಷಗಳಲ್ಲಿ ಒಂದೇ ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ: ಓಸ್ಲೋ ಫ್ರೀಡಂ ಫೋರಂ ನಲ್ಲಿ ಪತ್ರಕರ್ತೆ ಸುಪ್ರಿಯಾ ಶರ್ಮಾ
"ಪತ್ರಿಕಾ ಸ್ವಾತಂತ್ರ್ಯದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ"
Screengrab: Maktoob \ youtube.com
ಓಸ್ಲೋ ಫ್ರೀಡಂ ಫೋರಂನಲ್ಲಿ ಮಾತನಾಡಿದ scroll.in ನ ಕಾರ್ಯನಿರ್ವಾಹಕ ಸಂಪಾದಕಿ ಸುಪ್ರಿಯಾ ಶರ್ಮಾ, ಸ್ವತಂತ್ರ ಮಾಧ್ಯಮಗಳ ಮೇಲಿನ ಒತ್ತಡ, ಪತ್ರಕರ್ತರ ಮೇಲಿನ ದಮನ ಮತ್ತು ಪ್ರಜಾಪ್ರಭುತ್ವದ ಸ್ಥಿತಿಗತಿ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸತ್ಯವನ್ನು ವರದಿ ಮಾಡುವಾಗ ಪತ್ರಕರ್ತರು ಎದುರಿಸುವ ಅಪಾಯಗಳು ಮತ್ತು ಸವಾಲುಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಸತ್ಯವನ್ನು ಜನರಿಗೆ ತಲುಪಿಸಬೇಕು ಎಂದು ಪತ್ರಿಕೋದ್ಯಮವನ್ನು ಆರಿಸಿಕೊಂಡರು. ಆದರೆ ಇಂದು ಸತ್ಯವನ್ನು ಬಹಿರಂಗಪಡಿಸುವುದೇ ಅಪಾಯಕಾರಿಯಾಗಿದೆ ಎಂದು ಸುಪ್ರಿಯಾ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಆತಂಕದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ...
2020ರ ಬೇಸಿಗೆಯಲ್ಲಿ ನಾನು ಮನೆಯಿಂದ ಕೆಲಸ ಮಾಡುತ್ತಾ ವರದಿಯೊಂದನ್ನು ಬರೆಯುತ್ತಿದ್ದೆ. ಆಗ ನನ್ನ ಸಹ ಪತ್ರಕರ್ತರೊಬ್ಬರಿಂದ ಫೋನ್ ಕರೆ ಬಂತು. "ನಿನ್ನ ವಿರುದ್ಧ ಎಫ್‌ಐಆರ್ ಇದೆಯಾ?" ಎಂದು ಪ್ರಶ್ನಿಸಿದರು.
ಪೊಲೀಸರು ಅಪರಾಧದ ತನಿಖೆಯನ್ನು ಪ್ರಾರಂಭಿಸುವಾಗ ಎಫ್‌ಐಆರ್ ಅನ್ನು ದಾಖಲಿಸುತ್ತಾರೆ. ನನ್ನ ವಿರುದ್ಧದ ಎಫ್‌ಐಆರ್ ನಲ್ಲಿ ನಾನು ಭಾರತದ ತಾರತಮ್ಯ ವಿರೋಧಿ ಕಾನೂನಿನ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಲಾಗಿತ್ತು. ಅದರಲ್ಲಿ ನಾನು ನನ್ನದೊಂದು ವರದಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯೊಬ್ಬರ ಮಾತುಗಳನ್ನು ತಪ್ಪಾಗಿ ಉಲ್ಲೇಖಿಸಿ ಅವರ ಬಡತನವನ್ನು ಅಣಕಿಸಿದ್ದೇನೆ ಎಂದು ಬರೆಯಲಾಗಿತ್ತು. ಅಂದರೆ, ನಾನು ಮಾಡದ ಅಪರಾಧಕ್ಕಾಗಿ ಬಂಧನಕ್ಕೆ ಒಳಗಾಗಬಹುದು.
ನಾನು ಆ ಮಹಿಳೆಯ ಮಾತುಗಳನ್ನು ನಿಖರವಾಗಿ ಉಲ್ಲೇಖಿಸಿದ್ದೇನೆ ಎಂದು ಸಾಬೀತುಪಡಿಸಲು ನನ್ನ ಬಳಿ ರೆಕಾರ್ಡಿಂಗ್ ಇತ್ತು. ಆ ಮಹಿಳೆಯ ಹೆಸರು 'ಮಾಲಾದೇವಿ'. ಅವರೊಬ್ಬರು ಸ್ವಚ್ಛತಾ ಕಾರ್ಮಿಕರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತನ್ನ ಕುಟುಂಬಕ್ಕೆ ಆಹಾರ ಒದಗಿಸಲು ಅವರು ಕಷ್ಟ ಪಡುತ್ತಿದ್ದರು. ಆ ಮಹಿಳೆಯ ಕಥೆಯಲ್ಲಿ ಅಸಾಮಾನ್ಯವಾದದ್ದು ಏನಿರಲಿಲ್ಲ. ಆ ಬೇಸಿಗೆಯಲ್ಲಿ ಲಕ್ಷಾಂತರ ಭಾರತೀಯರು ದಿನಗೆಲಸ ಮತ್ತು ಕೂಲಿ ಕಳೆದುಕೊಂಡು ಹಸಿವಿನಿಂದ ಬಳಲಿದ್ದರು. ಆದರೆ, ಮಾಲಾದೇವಿಯ ಕಥೆ ಸುದ್ದಿಯಾಗಿದ್ದೇನೆಂದರೆ, ಅವರು ವಾಸಿಸುತ್ತಿದ್ದ ಗ್ರಾಮವನ್ನು ಭಾರತದ ಪ್ರಧಾನಮಂತ್ರಿ ಮಾದರಿ ಗ್ರಾಮ ನಿರ್ಮಾಣ ಕಾರ್ಯಕ್ರಮದಡಿ ದತ್ತು ತೆಗೆದುಕೊಂಡಿದ್ದರು. ದೇಶದ ಅತ್ಯುನ್ನತ ನಾಯಕನ ನೇರ ಸಂಪರ್ಕವೂ, ಆ ಗ್ರಾಮಸ್ಥರನ್ನು ಹಸಿವಿನಿಂದ ರಕ್ಷಿಸಲಿಲ್ಲ. ನನ್ನ ಆ ವರದಿಯಿಂದ ಯಾರು ನೊಂದರು ಎಂದು ನನಗೆ ತಿಳಿಯದು.
ಮಾಲಾದೇವಿ ಅನಕ್ಷರಸ್ಥರಾಗಿದ್ದರು. ಆದ್ದರಿಂದ, ಅವರಂತೂ ಅಲ್ಲ. ಹಾಗಾಗಿ, ಎಫ್‌ಐಆರ್ ನನ್ನನ್ನು ಆಶ್ಚರ್ಯಗೊಳಿಸಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿಯಾದಾಗಿನಿಂದ ಹೋರಾಟಗಾರರ ಮತ್ತು ಪತ್ರಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಸಾಮಾನ್ಯವಾಗಿತ್ತು. ಆದ್ದರಿಂದ, ನನಗೆ ಯಾವ ಭಾವನೆಯೂ ಆಗಲಿಲ್ಲ. ನನಗೆ ಕೋಪವೂ ಬಂದಿಲ್ಲ, ಆಕ್ರೋಶವೂ ಉಂಟಾಗಲಿಲ್ಲ, ಭಯವೂ ಆಗಲಿಲ್ಲ. ಬದಲಿಗೆ, ಜೈಲಿಗೆ ಹೋಗಬೇಕಾದರೆ ಏನೇನು ತೆಗೆದುಕೊಂಡು ಹೋಗಬೇಕು ಎಂಬುವುದನ್ನು ಯೋಚಿಸಲು ಆರಂಭಿಸಿದೆ. ಒಂದು ಟೂತ್ ಬ್ರಷ್, ಸ್ಯಾನಿಟರಿ ನ್ಯಾಪ್ಕಿನ್‌ಗಳು, ಕೆಲವು ಪುಸ್ತಕಗಳು ಇತ್ಯಾದಿ.
scroll.in ನ ಸಂಪಾದಕರು ನರೇಶ್ ಫರ್ನಾಂಡಿಸ್ ಅವರು ನನಗೆ ಫೋನ್ ಕರೆ ಮಾಡಿ ಪೊಲೀಸರು ಬರಬಹುದೆಂದು ಎಚ್ಚರಿಸಿದರು. ಅವರು (ನನಗೆ) ಮನೆ ಬಿಡಲು ಸೂಚಿಸಿದರು. ನಾನು ನಿರಾಕರಿಸಿದಾಗ ಅವರು ಒಬ್ಬ ಹೆಸರಾಂತ ಮಾನವ ಹಕ್ಕುಗಳ ವಕೀಲರನ್ನು ಕರೆದರು.
"ಸುಪ್ರಿಯಾ, ಅವರಿಗೆ ಎಲ್ಲವನ್ನೂ ಸುಲಭವಾಗಿಸಬೇಡ. ಕನಿಷ್ಠ ಅವರು ನಿನ್ನನ್ನು ಹುಡುಕುವ ಕೆಲಸವನ್ನಾದರೂ ಮಾಡಲಿ" ಅವರು ಅವರು ಹೇಳಿದರು. ಹಾಗಾಗಿ, ಮುಂಜಾನೆ ಬೆಳಕು ಮೂಡುವ ಹೊತ್ತಿಗೆ ಮನೆ ಬಿಟ್ಟು ಹೊರನಡೆದೆ. ಎರಡು ತಿಂಗಳವರೆಗೆ ಮನೆಗೆ ಮರಳಲು ಸಾಧ್ಯವಾಗುವುದಿಲ್ಲ ಎಂಬುವುದು ಆಗ ನನಗೆ ತಿಳಿದಿರಲಿಲ್ಲ. ವಕೀಲರಿಗೆ ನನ್ನನ್ನು ಬಂಧನದಿಂದ ರಕ್ಷಿಸಲು ಎರಡು ತಿಂಗಳು ಬೇಕಾಯಿತು. ಒಟ್ಟಾರೆ ನೋಡಿದರೆ, ಅದು ಒಂದು ಸಣ್ಣ ತೊಂದರೆಯಷ್ಟೇ ಆಗಿತ್ತು. ನಾನು ಜೈಲಿಗೆ ಹೋಗಲಿಲ್ಲ. ಆದರೆ, ಮೋದಿ ಆಡಳಿತದಲ್ಲಿ ಇತರ ಅನೇಕರು ಹೋಗಿದ್ದಾರೆ.
ನಾಗರಿಕ ಹಕ್ಕುಗಳ ಕಾರ್ಯಕರ್ತರು ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಇನ್ನೂ ಕೆಲವರು ಅಲ್ಲಿದ್ದಾರೆ. ಕಾರಣ, ಅವರನ್ನು ಕರಾಳ ಕಾನೂನಿನಡಿ ಬಂಧಿಸಲಾಗಿದೆ. ಪತ್ರಕರ್ತರನ್ನೂ ಬಿಟ್ಟಿಲ್ಲ.
ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಮೋದಿಯ ಪಕ್ಷದ ಆಳ್ವಿಕೆ ಇರುವ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣದ ವಿರುದ್ಧದ ಪ್ರತಿಭಟನೆಯನ್ನು ವರದಿ ಮಾಡಲು ಹೋಗಿದ್ದಾಗ ಭಯೋತ್ಪಾದನಾ ವಿರೋಧಿ ಕಾನೂನಡಿ ಅವರನ್ನು ಬಂಧಿಸಲಾಯಿತು. ಅವರು 28 ತಿಂಗಳು ಜೈಲಿನಲ್ಲಿ ಕಳೆದರು.
ಮುಹಮ್ಮದ್ ಝುಬೇರ್, ಅವರೊಬ್ಬರು ಫ್ಯಾಕ್ಟ್-ಚೆಕರ್ (ಸುದ್ದಿಗಳನ್ನು ಧೃಢಪಡಿಸುವವರು). ಅವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ನೆಪದಲ್ಲಿ ಬಂಧಿಸಲ್ಪಟ್ಟರು. ಅವರು ಮಾಡಿದ್ದ ಆ ಟ್ವೀಟ್ ನಾಲ್ಕು ವರ್ಷ ಹಳೆಯದು. ಅದರಲ್ಲಿದ್ದ ಚಿತ್ರ 1980ರ ಒಂದು ಕಾಮಿಡಿ ಚಲನಚಿತ್ರದ್ದು. 40 ವರ್ಷ ಯಾರಿಗೂ ಸಮಸ್ಯೆಯಾಗಿಲ್ಲ. ಆದರೆ, ಈಗ ಹಠಾತ್ತನೆ ನೋವಾಗಿದೆ. ಕಾರಣ ಏನಂದರೆ ಸರ್ಕಾರ ಆ ಪತ್ರಕರ್ತನನ್ನು ಬಂಧಿಸಲು ಬಯಸಿತ್ತು. ಕಪ್ಪನ್ ಮತ್ತು ಝುಬೇರ್ ಇಬ್ಬರೂ ಪತ್ರಕರ್ತರು ಮಾತ್ರವಲ್ಲ, ಇಬ್ಬರೂ ಮುಸ್ಲಿಮರಾಗಿದ್ದರು.
ಜೈಲಿನಲ್ಲಿರುವ ಹಲವಾರು ಹೋರಾಟಗಾರರೂ ಹಾಗೆಯೇ. ಇಲ್ಲಿ ಕಥೆ ಸಂಕೀರ್ಣಗೊಳ್ಳುತ್ತದೆ. ಭಾರತ 'ಹಿಂದೂ ಬಹುಸಂಖ್ಯಾತ ದೇಶ' ಎಂದು ನಿಮಗೆ ತಿಳಿದಿರಬಹುದು. ಆದರೆ, ನಮ್ಮ ದೇಶದ ಸಂಸ್ಥಾಪಕ ನಾಯಕರು ನಮಗೆ ಧರ್ಮ, ಜಾತಿ ಭೇದವಿಲ್ಲದೆ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕು ನೀಡುವ ಜಾತ್ಯತೀತ ಸಂವಿಧಾನವನ್ನು ನೀಡಿದ್ದಾರೆ. ನಾನು ಒಂದು ಹಿಂದೂ ಕುಟುಂಬದಲ್ಲಿ ಹುಟ್ಟಿ ಬೆಳೆದೆ. ನಮ್ಮ ದೇಶ ಬಹು ಜನಾಂಗ, ಬಹು ಭಾಷೆ, ಬಹು ಧರ್ಮ ಹೊಂದಿರುವ ದೇಶ ಎಂಬ ಅಭಿಮಾನ ನಮ್ಮ ಕುಟುಂಬಕ್ಕಿತ್ತು. ಆದರೆ, ಹಿಂದೂ ಮೇಲ್ವರ್ಗದ ಅತಿರೇಕಿಗಳಿಗೆ ಇದು ಎಂದಿಗೂ ಇಷ್ಟವಾಗಲಿಲ್ಲ. ಅವರ ಕಲ್ಪನೆಯಲ್ಲಿ ಭಾರತ ಒಂದು ಭವ್ಯ ಹಿಂದೂ ನಾಗರಿಕತೆಯ ದೇಶ. ಮುಸ್ಲಿಮರು, ಕ್ರೈಸ್ತರು, ಹಾಗೂ ಪಾಶ್ಚಿಮಾತ್ಯ ಪ್ರಭಾವದಿಂದ ಅದು ನಾಶವಾಯಿತೆಂದು ಭಾವಿಸುತ್ತಾರೆ.
ಹಿಟ್ಲರ್ ಮತ್ತು ಮುಸ್ಸೋಲಿನಿಯಿಂದ ಪ್ರೇರಿತರಾಗಿ ಅವರು ಒಂದು ಹಿಂದೂ ರಾಷ್ಟ್ರ ಸ್ಥಾಪಿಸಲು ಬಯಸಿದ್ದರು. ಮೋದಿ ಈ ವಿಚಾರಧಾರೆಯ ಉತ್ಪನ್ನ ಆಗಿದ್ದಾರೆ.
ನಾನು 12 ವರ್ಷದವಳಾಗಿದ್ದಾಗ ಇವರ ಕುರಿತು ಮೊದಲ ಬಾರಿಗೆ ತಿಳಿದೆ. ಅದು ಹಿಂದೂ ಬಲಪಂಥೀಯ ಗುಂಪು 400 ವರ್ಷ ಹಳೆಯ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದಾಗ. ಆ ಹಿಂಸಾಚಾರದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಆದರೆ, ಅಂದು ಎಲ್ಲ ರಾಜಕೀಯ ಪಕ್ಷಗಳೂ ಅದನ್ನು ಖಂಡಿಸಿದ್ದವು.
2002ರಲ್ಲಿ ನಾನು ಪತ್ರಕರ್ತೆಯಾದೆ. ದೇಶದಾದ್ಯಂತ ಸುತ್ತಲು ಪ್ರಾರಂಭಿಸಿದೆ. ಜನರ ವೈವಿಧ್ಯ, ಭಾಷೆ, ಅಭಿಪ್ರಾಯ ನನ್ನನ್ನು ಬೆರಗುಗೊಳಿಸಿತು. ರಾಜಕಾರಣಿಗಳ, ಕಾರ್ಪೊರೇಷನ್‌ಗಳ ವಿರುದ್ಧ ಪ್ರಶ್ನೆ ಕೇಳುವುದು ಕಷ್ಟಕರ ಎಂದು ತಿಳಿದುಕೊಂಡೆ. ಆಗ ಸರ್ಕಾರವನ್ನು ಪ್ರಶ್ನಿಸುವುದು ತುಲನಾತ್ಮಕವಾಗಿ ಸುಲಭವಿತ್ತು. 2014 ಚುನಾವಣೆ ಸಮೀಪಿಸುತ್ತಿದ್ದಂತೆ ನಾವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರತಿ ವೈಫಲ್ಯವನ್ನೂ ಬೆಳಕಿಗೆ ತಂದೆವು.
ಕಾಂಗ್ರೆಸ್ ಪಕ್ಷ ಆ ಚುನಾವಣೆಯಲ್ಲಿ ಸೋತಿತು. ಅದರ, ಸ್ಥಾನದಲ್ಲಿ ಬಿಜೆಪಿ (ಭಾರತೀಯ ಜನತಾ ಪಾರ್ಟಿ) ಅಧಿಕಾರಕ್ಕೆ ಬಂತು. ಎರಡು ದಶಕದ ಹಿಂದೆ ಮಸೀದಿಯೊಂದನ್ನು ಧ್ವಂಸ ಮಾಡಿದ ಹಿಂದೂ ಬಲಪಂಥೀಯ ಪಕ್ಷ. ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ದಂಗೆಕೋರರು ಒಂದು ಸಾವಿರಕ್ಕೂ ಹೆಚ್ಚು ಮುಸ್ಲಿಮರನ್ನು ಕೊಂದಾಗ ಅದನ್ನು ತಡೆಯಲಿಲ್ಲ. ಆ ಸಮಯದಲ್ಲಿ ಬಿಬಿಸಿಯವರು ನಡೆಸಿದ ಸಂದರ್ಶನದಲ್ಲಿ: "ನೀವು ಬೇರೆ ರೀತಿಯಲ್ಲಿ ಏನು ಮಾಡಬಹುದಿತ್ತು?" ಎಂದು ಪ್ರಶ್ನಿಸಿದಾಗ, ಅವರು "ನಾನು ಬಹಳ ದುರ್ಬಲನಾಗಿದ್ದ ಒಂದು ಕ್ಷೇತ್ರವಿತ್ತು. ಅದು ಮಾಧ್ಯಮವನ್ನು ಹೇಗೆ ನಿರ್ವಹಿಸಬೇಕು ಎಂಬುದು" ಎಂದು ಉತ್ತರಿಸಿದರು.
ಈಗ ದೇಶದ ಪ್ರಧಾನಮಂತ್ರಿಯಾಗಿ ಮೋದಿ ಆ ತಪ್ಪನ್ನು ಪುನರಾವರ್ತಿಸಲು ಸಿದ್ದರಿರಲಿಲ್ಲ. ಹೀಗಾಗಿ, ಅವರ ಪಕ್ಷ ಮತ್ತು ಸರ್ಕಾರ ಭಾರತವನ್ನು ಒಂದು ಸಂಪ್ರದಾಯವಾದಿ ಹಿಂದೂ ರಾಷ್ಟ್ರವಾಗಿ ರೂಪಿಸುವ ಪ್ರಯತ್ನ ಪ್ರಾರಂಭಿಸಿದರು. ಅಂತಹ ವಾತಾವರಣದಲ್ಲಿ ನೀವು ತಿನ್ನುವ ಆಹಾರಕ್ಕಾಗಿ ಕೊಲ್ಲಲ್ಪಡಬಹುದು. ಬೇರೆ ಸಮುದಾಯದ ವ್ಯಕ್ತಿಯನ್ನು ಪ್ರೀತಿಸಿದರೆ ಜೈಲಿಗೆ ಹೋಗುವ ಸಾಧ್ಯತೆಯಿರಬಹುದು ಮತ್ತು ಕೆಲವು ವಿಧದ ತಾರತಮ್ಯಗಳು ಕಾನೂನಿನಲ್ಲಿಯೇ ಸ್ಥಾನ ಪಡೆದಿವೆ ಎಂದು ಟೀಕಾಕಾರರು ಆರೋಪಿಸುತ್ತಾರೆ.
ಇದೇ ವೇಳೆ, ಮೋದಿ ಅವರು ಮಾಧ್ಯಮವನ್ನು ತಮ್ಮ ಪರವಾಗಿರುವಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಸಾಧಿಸಲು ಅವರು ಜಗತ್ತಿನ ಅನೇಕ ಅಧಿಕಾರಶಾಹಿ ಸರ್ಕಾರಗಳು ಬಳಸುವ ಪರಿಚಿತ ತಂತ್ರವನ್ನು ಬಳಸಿದರು. ಯಾವುದೇ ಪ್ರಸಾರ ಮಾಧ್ಯಮ ಸಂಸ್ಥೆ ಸರ್ಕಾರದ ಧೋರಣೆಗೆ ಅನುಗುಣವಾಗಿ ನಡೆಯದಿದ್ದರೆ, ಅದರ ಮೇಲೆ ವಿವಿಧ ರೀತಿಯ ಒತ್ತಡಗಳು ಹೇರಲ್ಪಟ್ಟವು. ನನ್ನ ಪತ್ರಿಕೋದ್ಯಮ ವೃತ್ತಿಜೀವನದ ಆರಂಭದಲ್ಲಿ ನಾನು ಕೆಲಸ ಮಾಡಿದ್ದ ಒಂದು ಸುದ್ದಿ ಜಾಲತಾಣವೂ ಅಂತಹ ಅನುಭವವನ್ನು ಎದುರಿಸಿತು. ಅದು ಬಳಿಕ ಮೋದಿ ಅವರಿಗೆ ಆಪ್ತನೆಂದು ಪರಿಗಣಿಸಲ್ಪಟ್ಟ ಒಬ್ಬ ಪ್ರಭಾವಿ ಉದ್ಯಮಿಯ ನಿಯಂತ್ರಣಕ್ಕೆ ಹೋಯಿತು. ಅವರು ಇಂದು ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ವಿಶ್ವದಲ್ಲಿ ಅತಿ ಹೆಚ್ಚು ಬಡವರು ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಅದೇ ಸಮಯದಲ್ಲಿ ಜಗತ್ತಿನ ಅತಿ ಹೆಚ್ಚು ಕೋಟ್ಯಧಿಪತಿಗಳ ಪಟ್ಟಿಯಲ್ಲಿಯೂ ಭಾರತ ಅಗ್ರಸ್ಥಾನದಲ್ಲಿದೆ.
ಇಲ್ಲಿ ಪ್ರಶ್ನಿಸಲು (ವಿಷಯಗಳು) ಬಹಳಷ್ಟಿವೆ. ಆದರೆ, ನಮ್ಮ ಪ್ರಧಾನಮಂತ್ರಿ 12 ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ.
ಇತ್ತೀಚೆಗೆ ಅವರು ವಿದೇಶ ಪ್ರವಾಸದಲ್ಲಿದ್ದಾಗ, ಒಸ್ಲೋದಲ್ಲಿ ಒಬ್ಬ ಪತ್ರಕರ್ತರು. "ನೀವು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಏಕೆ ಮುಂದೆ ಬರುವುದಿಲ್ಲ?" ಎಂದು ಕೇಳಿದರು. ಆ ಪ್ರಶ್ನೆಗೆ ಯಾವುದೇ ಉತ್ತರ ದೊರೆಯಲಿಲ್ಲ. ಬದಲಾಗಿ, ಆ ಪತ್ರಕರ್ತೆಯ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ನಡೆಯಿತು.
"ಇಷ್ಟೆಲ್ಲ ಒತ್ತಡಗಳ ನಡುವೆಯೂ ನೀವು ಇನ್ನೂ ನಿಮ್ಮ ಕೆಲಸವನ್ನು ಹೇಗೆ ಮುಂದುವರಿಸುತ್ತೀರಿ?" ಕೆವರು ಪ್ರಶ್ನಿಸುತ್ತಾರೆ. ಇದೊಂದು ಒಳ್ಳೆಯ ಪ್ರಶ್ನೆ.
ನನ್ನ ಊಹೆ ಏನೆಂದರೆ, ದೊಡ್ಡ ಮಾಧ್ಯಮ ಸಂಸ್ಥೆಗಳ ಬಹುಪಾಲು ಸರ್ಕಾರದ ಪ್ರಭಾವಕ್ಕೆ ಒಳಪಟ್ಟಿದ್ದರೂ, ಕೆಲವು ಸಣ್ಣ ಮತ್ತು ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಇನ್ನೂ ಅಸ್ತಿತ್ವದಲ್ಲಿವೆ. ಏಕೆಂದರೆ ಅವುಗಳ ಮೂಲಕ ಭಾರತವು ಇನ್ನೂ "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ" ಹಾಗೂ "ಸ್ವತಂತ್ರ ಪತ್ರಿಕಾ ವ್ಯವಸ್ಥೆ ಹೊಂದಿರುವ ರಾಷ್ಟ್ರ" ಎಂಬ ಭಾವಚಿತ್ರವನ್ನು ಉಳಿಸಿಕೊಳ್ಳಬಹುದು.
ಆದರೆ ವಾಸ್ತವದಲ್ಲಿ ಪತ್ರಿಕಾ ಸ್ವಾತಂತ್ರ್ಯದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. ನಮ್ಮ ಸುದ್ದಿ ಸಂಸ್ಥೆಯ ಗಾತ್ರವು ಹತ್ತು ವರ್ಷಗಳ ಹಿಂದೆ ಇದ್ದ ಮಟ್ಟದ ಸುಮಾರು ಮೂರನೇ ಒಂದು ಭಾಗಕ್ಕೆ ಇಳಿದಿದೆ. ನಾವು ಭಯಭೀತರಾಗಿದ್ದೇವೆ. ನಾವು ದಣಿದಿದ್ದೇವೆ.
ಒಂದು ಸಮಾಜದಲ್ಲಿ ದ್ವೇಷ ಮತ್ತು ಹಿಂಸಾಚಾರ ಸಾಮಾನ್ಯ ಸಂಗತಿಗಳಾಗಿ ಮಾರ್ಪಟ್ಟಾಗ, ಜನರು ನಿಧಾನವಾಗಿ ಸಂವೇದನವಾಗಿ ಶೂನ್ಯರಾಗುತ್ತಾರೆ. ಅದು ನಿಮ್ಮೊಳಗೆ ಒಂದು ರೀತಿಯ ಜಡತ್ವವನ್ನು ಉಂಟು ಮಾಡುತ್ತದೆ. ಆ ಜಡತ್ವದ ವಿರುದ್ಧ ಹೋರಾಡುವುದು ನಮ್ಮ ಮೊದಲ ಸವಾಲು ಆಗಿದೆ. ಎರಡನೇ ಸವಾಲು, ನಮ್ಮ ಕೆಲಸವನ್ನು ಮುಂದುವರಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಕಂಡುಕೊಳ್ಳುವುದು ಆಗಿದೆ. ಮೊದಲ ಸವಾಲಿನ ಜವಾಬ್ದಾರಿ ನಮ್ಮದಾಗಿದೆ. ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ಸಾಕ್ಷಿಯಾಗುವುದನ್ನು ನಿಲ್ಲಿಸುವುದಿಲ್ಲ. ಅಧಿಕಾರದ ಮುಂದೆ ಸತ್ಯವನ್ನು ಹೇಳುವುದನ್ನು ಬಿಡುವುದಿಲ್ಲ. ಅಧಿಕಾರಿಗಳು ಕೇಳದಿದ್ದರೂ ಸಹ ನಾವು ಸತ್ಯವನ್ನು ಹೇಳುತ್ತೇವೆ.
ಆದರೆ, ಎರಡನೇ ಸವಾಲಿನಲ್ಲಿ ನೀವು ನಮಗೆ ನೆರವಾಗಬಹುದು. ಮಾನವಕುಲದ ಸುಮಾರು ಆರನೇ ಒಂದು ಭಾಗದ ಜನರು ಭಾರತದಲ್ಲಿ ವಾಸಿಸುತ್ತಾರೆ. ನೀವು ಪ್ರಜಾಪ್ರಭುತ್ವವನ್ನು ಮೌಲ್ಯಯುತವೆಂದು ಭಾವಿಸುತ್ತಿದ್ದರೆ, ಸ್ವತಂತ್ರ ಪತ್ರಿಕೋದ್ಯಮವನ್ನು ಬೆಂಬಲಿಸಿ. ಧನ್ಯವಾದಗಳು.