×
Ad

ಜೂ. 22ರವರೆಗೆ ದೇಶಾದ್ಯಂತ ಟೆಲಿಗ್ರಾಮ್‌ಗೆ ನಿರ್ಬಂಧ; ಮೆಸೇಜ್ ಎಡಿಟ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದು ಏಕೆ?

ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ NTA

Update: 2026-06-16 17:28 IST

Photo Credit : Telegram logo

ನೀಟ್‌–ಯುಜಿ ಮರುಪರೀಕ್ಷೆಗೂ ಮುನ್ನ, ನಕಲಿ ಪ್ರಶ್ನೆಪತ್ರಿಕೆಗಳ ಹರಡುವಿಕೆ, ತಪ್ಪು ಮಾಹಿತಿ ಮತ್ತು ಪತ್ರಿಕೆ ಸೋರಿಕೆ ವದಂತಿಗಳನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ದೇಶದಾದ್ಯಂತ ಜೂನ್‌ 22ರವರೆಗೆ ಟೆಲಿಗ್ರಾಮ್‌ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಜೂನ್‌ 21ರಂದು ನಡೆಯಲಿರುವ ನೀಟ್‌ (ಯುಜಿ) 2026ರ ಮರುಪರೀಕ್ಷೆಯ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನೀಡಿದ ಶಿಫಾರಸಿನ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಲ್ಲದೆ, ಜೂನ್ 30ರವರೆಗೆ ಮೆಸೇಜ್ ಎಡಿಟ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸುವಂತೆ ಟೆಲಿಗ್ರಾಮ್ ಸಂಸ್ಥೆಗೆ ಸೂಚಿಸಿದೆ.

ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿರುವ ಸಂಘಟಿತ ಜಾಲಗಳನ್ನು ತಡೆಯಲು ಕೇವಲ ಕೆಲವು ಚಾನೆಲ್‌ಗಳನ್ನು ಬ್ಲಾಕ್ ಮಾಡುವುದು ಸಾಲದು ಎಂದು ಎನ್‌ಟಿಎ ವಾದಿಸಿತ್ತು. ಇದಾದ ನಂತರ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಈ ಕಠಿಣ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಎನ್‌ಟಿಎ ಸ್ವಾಗತಿಸಿದೆ.

ಎನ್‌ಟಿಎ ಮಾಹಿತಿ ಪ್ರಕಾರ, ಕಳೆದ ಕೆಲವು ವಾರಗಳಿಂದ ಟೆಲಿಗ್ರಾಮ್‌ನಲ್ಲಿ ಅಕ್ರಮ ಉದ್ದೇಶ ಹೊಂದಿರುವ ಹಲವು ಚಾನೆಲ್‌ಗಳು ಬಹಿರಂಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದವು. “PAPER LEAKED NEET”, “Re-NEET 2026”, “Private Mafia” ಮತ್ತು “REE NEET MAFIAA” ನಂತಹ ಹೆಸರುಗಳಲ್ಲಿ ಇವು ಸಕ್ರಿಯವಾಗಿದ್ದವು.

ಈ ಚಾನೆಲ್‌ಗಳು ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ನೀಡುವುದಾಗಿ ನಂಬಿಸಿ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಕೆಲವು ಸಾವಿರ ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೆ ಹಣದ ಬೇಡಿಕೆ ಇಟ್ಟಿದ್ದವು ಎಂದು ತಿಳಿದುಬಂದಿದೆ.

ಸುರಕ್ಷಿತ ಪರೀಕ್ಷಾ ವ್ಯವಸ್ಥೆಯನ್ನು ಹೊರತುಪಡಿಸಿ ಬೇರೆಲ್ಲೂ ಪ್ರಶ್ನೆಪತ್ರಿಕೆ ಲಭ್ಯವಿಲ್ಲ ಎಂದು ಎನ್‌ಟಿಎ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

►ಸಕ್ರಿಯವಾಗಿದ್ದವು ಹಲವು ನಕಲಿ ಚಾನೆಲ್‌ಗಳು

"ಇಂತಹ ಚಾನೆಲ್‌ಗಳು ನೀಡುವ ಯಾವುದೇ ಭರವಸೆ ಸಂಪೂರ್ಣ ವಂಚನೆಯಾಗಿದೆ" ಎಂದು ಏಜೆನ್ಸಿ ಹೇಳಿದೆ. ಅಲ್ಲದೆ, ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಇಂತಹ ಯಾವುದೇ ವದಂತಿಗಳನ್ನು ನಂಬದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮನವಿ ಮಾಡಿದೆ.

ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಮೂಲಕ ಮಧ್ಯಂತರ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗಿತ್ತು. ಆದರೆ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ, "ಕೊನೆಯ ಉಪಾಯ"ವಾಗಿ ಇಡೀ ಪ್ಲಾಟ್‌ಫಾರ್ಮ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.

►ಮೆಸೇಜ್ ಎಡಿಟ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದು ಏಕೆ?

ಇತ್ತೀಚಿನ ಹಲವು ಪರೀಕ್ಷೆಗಳಲ್ಲಿ ವಂಚಕರು ದುರುಪಯೋಗಪಡಿಸಿಕೊಂಡಿದ್ದ ಟೆಲಿಗ್ರಾಮ್‌ನ ಲೋಪದೋಷವೊಂದನ್ನು ಸರಿಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸಮರ್ಥಿಸಿಕೊಂಡಿದೆ.

ಟೆಲಿಗ್ರಾಮ್‌ನ ಸದ್ಯದ ವ್ಯವಸ್ಥೆಯ ಪ್ರಕಾರ, ಚಾನೆಲ್ ಅಡ್ಮಿನ್‌ಗಳು ತಾವು ಈ ಹಿಂದೆ ಕಳುಹಿಸಿದ ಮೆಸೇಜ್‌ಗಳನ್ನು ಎಡಿಟ್ ಮಾಡಬಹುದು. ಅಷ್ಟೇ ಅಲ್ಲ, ಮೆಸೇಜ್ ಕಳುಹಿಸಿದ ಹಳೆಯ ಸಮಯ (ಟೈಮ್‌ಸ್ಟ್ಯಾಂಪ್) ಹಾಗೇ ಇರುವಂತೆ ನೋಡಿಕೊಂಡು, ಅದರಲ್ಲಿದ್ದ ಪಿಡಿಎಫ್‌ ಫೈಲ್‌ಗಳನ್ನು ಬದಲಾಯಿಸಲು ಸಹ ಇಲ್ಲಿ ಅವಕಾಶವಿತ್ತು.

ಎನ್‌ಟಿಎ ಪ್ರಕಾರ, ವಂಚಕರು ಈ ಅವಕಾಶವನ್ನು ಬಳಸಿಕೊಂಡು ಪರೀಕ್ಷೆಯ ನಂತರ ಸುಳ್ಳು "ಪುರಾವೆ"ಗಳನ್ನು ಸೃಷ್ಟಿಸುತ್ತಿದ್ದರು. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಬಿಂಬಿಸಲು ಈ ತಂತ್ರ ಬಳಸಲಾಗುತ್ತಿತ್ತು.

ಅಡ್ಮಿನ್‌ಗಳು ಪರೀಕ್ಷೆಗಿಂತ ಮುಂಚಿತವಾಗಿ ಸಾಮಾನ್ಯ ಮೆಸೇಜ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು. ಪರೀಕ್ಷೆ ಮುಗಿದ ನಂತರ, ಆ ಮೆಸೇಜ್‌ಗಳನ್ನು ಎಡಿಟ್ ಮಾಡಿ ಅಸಲಿ ಪ್ರಶ್ನೆಪತ್ರಿಕೆಯನ್ನು ಅಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಆ ಮೆಸೇಜ್‌ ಹಳೆಯ ಸಮಯವನ್ನೇ ತೋರಿಸುತ್ತಿರುವುದರಿಂದ, ಪರೀಕ್ಷೆಗೆ ಮುಂಚೆಯೇ ಪೇಪರ್ ಸೋರಿಕೆಯಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಆ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಎಲ್ಲೆಡೆ ಹರಡುತ್ತಿದ್ದರು.

"ಪರೀಕ್ಷೆಯ ನಂತರ ಇಂತಹ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸುವ ವಂಚಕರ ಹಾದಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಈ ಆದೇಶವು ಬ್ರೇಕ್ ಹಾಕಿದೆ" ಎಂದು ಎನ್‌ಟಿಎ ಹೇಳಿಕೆಯಲ್ಲಿ ತಿಳಿಸಿದೆ.

►ವಿವಿಧ ಸಂಸ್ಥೆಗಳ ಸಂಘಟಿತ ಪ್ರಯತ್ನ

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ 'ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್' (I4C) ಸೇರಿದಂತೆ ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಎನ್‌ಟಿಎ ಹೇಳಿದೆ. ಎನ್‌ಟಿಎ, ರಾಜ್ಯ ಪೊಲೀಸ್ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮತ್ತು ತನ್ನದೇ ಆದ ನಿರಂತರ ನಿಗಾದ ಆಧಾರದ ಮೇಲೆ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಾಯದೊಂದಿಗೆ I4C ವಂಚನೆಯಲ್ಲಿ ತೊಡಗಿದ್ದ ನೂರಾರು ಟೆಲಿಗ್ರಾಮ್ ಚಾನೆಲ್‌ಗಳನ್ನು ಬಂದ್ ಮಾಡಿಸಿದೆ.

ವಿವಿಧ ರಾಜ್ಯಗಳ ತನಿಖಾ ಸಂಸ್ಥೆಗಳು ನಡೆಸಿರುವ ಸ್ವತಂತ್ರ ತನಿಖೆಗಳೂ ಸಹ ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸಿವೆ. ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಜೂನ್ 9ರಂದೇ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಟೆಲಿಗ್ರಾಮ್ ಮತ್ತು ಇತರ ಆ್ಯಪ್‌ಗಳ ಮೂಲಕ ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ನೀಡುವುದಾಗಿ ನಂಬಿಸುವ ವಂಚಕರ ಜಾಲದ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತ್ತು.

ಇದೇ ವೇಳೆ, ಅಹಮದಾಬಾದ್ ನಗರದ ಸೈಬರ್ ಕ್ರೈಮ್ ಬ್ರಾಂಚ್ ಇದೇ ರೀತಿ ವಂಚನೆ ಮಾಡುತ್ತಿದ್ದ ಅಂತರರಾಜ್ಯ ಸೈಬರ್ ವಂಚಕರ ಜಾಲದ ಸದಸ್ಯರನ್ನು ಬಂಧಿಸಿದೆ. ಇವರು ಇಂತಹ ಎಂಟು ಟೆಲಿಗ್ರಾಮ್ ಚಾನೆಲ್‌ಗಳನ್ನು ನಡೆಸುತ್ತಿದ್ದರು. ವಂಚಕರು ನಕಲಿ ಬ್ಯಾಂಕ್ ಖಾತೆಗಳ ಮೂಲಕ ಸುಮಾರು 1.5 ಕೋಟಿ ರೂಪಾಯಿ ವಹಿವಾಟು ನಡೆಸಿರುವುದನ್ನು ಮತ್ತು ಕೇವಲ ಒಂದು ತಿಂಗಳಿನಲ್ಲಿ ಸುಮಾರು 1,000 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇತರ ಹಲವು ರಾಜ್ಯಗಳಲ್ಲೂ ತನಿಖೆ ಮುಂದುವರಿದಿದೆ.

►ಸಾರ್ವಜನಿಕರಿಗೆ ಆಗುವ ಅನಾನುಕೂಲವನ್ನು ಒಪ್ಪಿಕೊಂಡ ಎನ್‌ಟಿಎ

ಈ ಕಠಿಣ ಕ್ರಮವನ್ನು ಸಮರ್ಥಿಸಿಕೊಂಡಿರುವ ಎನ್‌ಟಿಎ, ಶಿಕ್ಷಣ, ವೃತ್ತಿಪರ ಮತ್ತು ವೈಯಕ್ತಿಕ ಸಂವಹನಕ್ಕಾಗಿ ಟೆಲಿಗ್ರಾಮ್ ಅನ್ನು ನಂಬಿರುವ ಲಕ್ಷಾಂತರ ಪ್ರಾಮಾಣಿಕ ಬಳಕೆದಾರರಿಗೆ ಇದರಿಂದ ಅನಾನುಕೂಲವಾಗುತ್ತದೆ ಎಂಬುದನ್ನು ಒಪ್ಪಿಕೊಂಡಿದೆ.

"ಈ ಬಳಕೆಯ ನಿರ್ಬಂಧವು ಜೂನ್ 22, 2026ರವರೆಗೆ ಮಾತ್ರ ಇರಲಿದೆ" ಎಂದು ಏಜೆನ್ಸಿ ಸ್ಪಷ್ಟಪಡಿಸಿದೆ. ಅಲ್ಲದೆ, ಮೆಸೇಜ್ ಎಡಿಟ್ ಮಾಡುವ ಆಯ್ಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ ಬಳಕೆದಾರರಿಗೆ ಹೊಸ ಮೆಸೇಜ್‌ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದೆ.

ನೀಟ್‌ (ಯುಜಿ) 2026ರ ಮರುಪರೀಕ್ಷೆಯು ನಿಗದಿಯಂತೆ ಜೂನ್ 21ರಂದೇ ನಡೆಯಲಿದ್ದು, ಪರೀಕ್ಷಾ ಪ್ರಕ್ರಿಯೆಯ ಸುರಕ್ಷತೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಪರೀಕ್ಷಾರ್ಥಿಗಳಿಗೆ ಏಜೆನ್ಸಿ ಭರವಸೆ ನೀಡಿದೆ.

"ಕೈಗೊಂಡಿರುವ ಕ್ರಮಗಳಿಂದ ಪರೀಕ್ಷೆಯ ಸುರಕ್ಷತೆಗೆ ಯಾವುದೇ ತೊಂದರೆಯಾಗಿಲ್ಲ. ಬದಲಿಗೆ, ಪರೀಕ್ಷೆಯನ್ನು ಸುರಕ್ಷಿತವಾಗಿ ನಡೆಸುವುದೇ ಈ ಕ್ರಮದ ಮುಖ್ಯ ಉದ್ದೇಶವಾಗಿದೆ" ಎಂದು ಎನ್‌ಟಿಎ ಹೇಳಿದೆ.

►ನೀಟ್ ಮರುಪರೀಕ್ಷೆ: ರಾಜ್ಯಗಳ ಸಿದ್ಧತೆ ಪರಿಶೀಲಿಸಿದ ಕೇಂದ್ರ ಗೃಹ ಕಾರ್ಯದರ್ಶಿ

ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಸೋಮವಾರ ನೀಟ್ (ಯುಜಿ) ಮರುಪರೀಕ್ಷೆಗಾಗಿ ರಾಜ್ಯಗಳು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಮೇ 3ರಂದು ನಡೆದಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರು.

ವಿವಿಧ ಸರ್ಕಾರಿ ಇಲಾಖೆಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಗೋವಿಂದ್ ಮೋಹನ್ ಅವರು, "ವಿದ್ಯಾರ್ಥಿಗಳ ಸೌಕರ್ಯ, ಭದ್ರತಾ ವ್ಯವಸ್ಥೆಗಳು ಮತ್ತು ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ"ಗೆ ವಿಶೇಷ ಆದ್ಯತೆ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಮರುಪರೀಕ್ಷೆಯು ಜೂನ್ 21ರಂದು ನಡೆಯಲಿದೆ.

ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ವ್ಯವಸ್ಥಿತವಾಗಿ ನಡೆಸಬೇಕು ಎಂದು ಗೃಹ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಉನ್ನತ ಮಟ್ಟದ ಸಭೆಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಅಂಚೆ ಇಲಾಖೆಯ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಇವರೊಂದಿಗೆ ಸಿಆರ್‌ಪಿಎಫ್ (CRPF), ಸಿಐಎಸ್ಎಫ್ (CISF), ಬಿಸಿಎಎಸ್ (BCAS) ಮತ್ತು ಎನ್‌ಟಿಎ (NTA) ಮಹಾನಿರ್ದೇಶಕರು ಹಾಗೂ ರಕ್ಷಣಾ ಸಚಿವಾಲಯ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News