ಕರ್ನಾಟಕದಲ್ಲಿ ಇಲ್ಲಿಯವರೆಗೆ ಯಾವ್ಯಾವ ಜಾತಿಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ?
ಡಿ.ಕೆ.ಶಿವಕುಮಾರ್ | Photo : x@DKShivakumar
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಗಾದಿ ಮತ್ತು ಜಾತಿ ಸಮೀಕರಣಗಳಿಗೆ ದಶಕಗಳ ನಿಕಟ ನಂಟಿದೆ. 1947ರಲ್ಲಿ ಕೆ. ಚೆಂಗಲರಾಯ ರೆಡ್ಡಿಯವರಿಂದ ಹಿಡಿದು ಇಂದು ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ವರೆಗೆ ರಾಜ್ಯದ ಚುಕ್ಕಾಣಿ ಹಿಡಿದ ನಾಯಕರ ಹಿನ್ನೆಲೆಯನ್ನು ಗಮನಿಸಿದರೆ, ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಶಕ್ತಿಗಳ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಭೌಗೋಳಿಕ ಹಾಗೂ ಸಂಖ್ಯಾತ್ಮಕ ಬಲ ಹೊಂದಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ನಾಯಕರು ಸಿಂಹಪಾಲು ಅವಧಿಗೆ ರಾಜ್ಯವನ್ನು ಆಳಿದ್ದರೆ, ದೇವರಾಜ ಅರಸು ಅವರ ಕಾಲಘಟ್ಟವು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಹೊಸ ಮುನ್ನುಡಿ ಬರೆಯಿತು. ಬ್ರಾಹ್ಮಣ, ಕುರುಬ, ಈಡಿಗ ಹಾಗೂ ದೇವಾಡಿಗ ಸಮುದಾಯಗಳ ನಾಯಕರೂ ಸಹ ವಿಭಿನ್ನ ಕಾಲಘಟ್ಟಗಳಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಎಸ್‌ಸಿ/ ಎಸ್‌ಟಿ, ಮುಸ್ಲಿಂ ಮತ್ತು ಮಹಿಳಾ ಮುಖ್ಯಮಂತ್ರಿಯನ್ನು ರಾಜ್ಯ ಈವರೆಗೂ ಕಂಡಿಲ್ಲ ಎಂಬುದು ಇಂದಿಗೂ ರಾಜಕೀಯ ವಲಯದಲ್ಲಿ ಚರ್ಚೆಯಲ್ಲೇ ಉಳಿದಿರುವ ಸಂಗತಿಯಾಗಿದೆ.
ಯಾವ ಮುಖ್ಯಮಂತ್ರಿ ಯಾವ ಸಮುದಾಯ/ಜಾತಿಗೆ ಸೇರಿದವರು? ಸಂಪೂರ್ಣ ವಿವರ ಇಲ್ಲಿದೆ:
► ಲಿಂಗಾಯತ ಸಮುದಾಯ
ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದವರಲ್ಲಿ ಲಿಂಗಾಯತ ಸಮುದಾಯದವರ ಪಟ್ಟಿ ನೋಡಿದರೆ ಅದರಲ್ಲಿ ಬರುವ ಮೊದಲ ಹೆಸರು ಸಿದ್ದವನಹಳ್ಳಿ ನಿಜಲಿಂಗಪ್ಪ (ಎಸ್. ನಿಜಲಿಂಗಪ್ಪ) ಅವರದ್ದು. ನಿಜಲಿಂಗಪ್ಪ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಮೊದಲ ಬಾರಿ 1956 ರಿಂದ 1958ರ ವರೆಗೆ ಅಧಿಕಾರ ನಡೆಸಿದ ಅವರ ಎರಡನೇ ಅವಧಿ 1962 ಜೂನ್ 21ರಿಂದ 1968 ಮೇ 28ರವರೆಗೆ ಇತ್ತು. ಕರ್ನಾಟಕ ಏಕೀಕರಣದ ನಾಯಕತ್ವವಹಿಸಿ ಕನ್ನಡಿಗರನ್ನೆಲ್ಲ ಒಂದೇ ಸೂರಿನಡಿ ತಂದವರಿವರು. 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಾಗ ನಿಜಲಿಂಗಪ್ಪ ಮೊದಲ ಮುಖ್ಯಮಂತ್ರಿಯಾದರು. ನಿಜಲಿಂಗಪ್ಪ ಅವರ ಮೊದಲನೇ ಅವಧಿಯ ನಂತರ ಮುಖ್ಯಮಂತ್ರಿ ಗಾದಿಗೇರಿದವರು ಬಿ.ಡಿ ಜತ್ತಿ. ಜತ್ತಿ 1958 ಮೇ 16ರಿಂದ 1962 ಮಾರ್ಚ್ 9ರ ವರೆಗೆ ಸಿಎಂ ಆಗಿದ್ದರು. ಜತ್ತಿ ನಂತರ ಅಧಿಕಾರಕ್ಕೆ ಬಂದ ಎಸ್. ಆರ್. ಕಂಠಿ ಕೂಡಾ ಲಿಂಗಾಯತ ಸಮುದಾಯದವರೇ. ಕಂಠಿ ನಂತರ 1962 ರಿಂದ 1968ರ ವರೆಗೆ ನಿಜಲಿಂಗಪ್ಪ ಎರಡನೇ ಬಾರಿ ಮುಖ್ಯಮಂತ್ರಿ ಆದರು. ಇವರ ಅಧಿಕಾರಾವಧಿ ಮುಗಿದ ನಂತರ ವೀರೇಂದ್ರ ಪಾಟೀಲ್ ಅಧಿಕಾರಕ್ಕೇರಿದರು.1968ರಿಂದ 1971ರವರೆಗೆ ಇವರು ಅಧಿಕಾರದಲ್ಲಿದ್ದರು. ನಂತರ ರಾಜ್ಯ ರಾಷ್ಟ್ರಪತಿ ಆಳ್ವಿಕೆಯನ್ನು ಕಂಡಿತು. ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ ಮೊದಲಾದವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು.
ಸುಮಾರು 17 ವರ್ಷದ ನಂತರ ಲಿಂಗಾಯತ ಸಮುದಾಯವರು ಮತ್ತೆ ಮುಖ್ಯಮಂತ್ರಿಯಾದರು. 1988ರಲ್ಲಿ ಮುಖ್ಯಮಂತ್ರಿಯಾದ ಎಸ್. ಆರ್. ಬೊಮ್ಮಾಯಿ ಅಧಿಕಾರ ನಡೆಸಿದ್ದು ಒಂದು ವರ್ಷ!. ಆಮೇಲೆ ಮತ್ತೆ ರಾಷ್ಟ್ರಪತಿ ಆಡಳಿತ. 1989ರಲ್ಲಿ ವಿರೇಂದ್ರ ಪಾಟೀಲ್ ಮತ್ತೆ ಮುಖ್ಯಮಂತ್ರಿಯಾದರು. ಇದಾಗಿ ಮೂರು ಮುಖ್ಯಮಂತ್ರಿಗಳ ಆಡಳಿತವನ್ನು ಕಂಡ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಜೆ.ಎಚ್.ಪಟೇಲ್ 1996ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ಮತ್ತೆ ಲಿಂಗಾಯತ ಸಮುದಾಯದ ವ್ಯಕ್ತಿಯೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು 2007ರಲ್ಲಿ. ಆಗ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಒಂದು ವಾರ ಸಿಎಂ ಸ್ಥಾನದಲ್ಲಿದ್ದರು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದು ಮುಂದಿನ ವರ್ಷ 2008ರಲ್ಲಿ ಬಿಎಸ್ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರು. ಈ ಬಾರಿ ಅವರು 2011ರ ವರೆಗೆ ಅಧಿಕಾರದಲ್ಲಿದ್ಗರು. ಆಮೇಲೆ ಒಂದು ವರ್ಷ ಒಕ್ಕಲಿಗ ಸಮುದಾಯದ ಡಿ. ವಿ. ಸದಾನಂದ ಗೌಡ ಆಡಳಿತ ನಡೆಸಿದ ಮೇಲೆ ರಾಜ್ಯವನ್ನು ಮುನ್ನಡೆಸುವ ಚುಕ್ಕಾಣಿ ಸಿಕ್ಕಿದ್ದು ಜಗದೀಶ್ ಶೆಟ್ಟರ್ ಅವರಿಗೆ. ಅವರು ಅಧಿಕಾರದಲ್ಲಿದ್ದದ್ದು ಕೇವಲ ಒಂದು ವರ್ಷ. ಆಮೇಲೆ ಸಿದ್ದರಾಮಯ್ಯ 5 ವರ್ಷ, ಯಡಿಯೂರಪ್ಪ 6 ದಿನ, ಎಚ್.ಡಿ ಕುಮಾರ ಸ್ವಾಮಿ ಒಂದು ವರ್ಷ, ಮತ್ತೆರಡು ವರ್ಷ ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಿ ಆಡಳಿತ ನಡೆಸಿದ ನಂತರ 2021ರಲ್ಲಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. 2021ರಿಂದ 2023ರವರೆಗೆ ಅವರು ಸಿಎಂ ಸ್ಥಾನದಲ್ಲಿದ್ದರು. 2023ರಲ್ಲಿ ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದರು. ಮೇ 20 2023ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ 2026 ಮೇ 28ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
► ಒಕ್ಕಲಿಗ ಸಮುದಾಯ
ಕರ್ನಾಟಕದಲ್ಲಿ ಲಿಂಗಾಯತರಂತೆಯೇ ಪ್ರಾಬಲ್ಯ ಹೊಂದಿರುವ ಇನ್ನೊಂದು ಸಮುದಾಯವೆಂದರೆ ಒಕ್ಕಲಿಗ ಸಮುದಾಯ. ಇಲ್ಲಿವರೆಗೆ ಅಂದರೆ ನೂತನ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸೇರಿಸಿ ಈ ಸಮುದಾಯದಿಂದ ಮುಖ್ಯಮಂತ್ರಿಯಾದವರು 8 ಮಂದಿ. ಒಕ್ಕಲಿಗ ಸಮುದಾಯದಿಂದ ಮೊದಲ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿದವರು ಕೆ. ಚೆಂಗಲರಾಯ ರೆಡ್ಡಿ (ಕೆ.ಸಿ.ರೆಡ್ಡಿ). 1947ರಿಂದ 1952ರವರೆಗೆ ಅಧಿಕಾರ ನಡೆಸಿದ ಇವರೇ ಇಂದಿನ ಕರ್ನಾಟಕ ಅಸ್ತಿತ್ವಕ್ಕೆ ಬರುವ ಮುನ್ನ ಅಧಿಕಾರದಲ್ಲಿದ್ದ ಮೊದಲ ಮುಖ್ಯಮಂತ್ರಿ. ಆಮೇಲೆ 1952ರಲ್ಲಿ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದರು. ಆಮೇಲೆ ಇದೇ ಸಮುದಾಯದ ಕಡಿದಾಳ್ ಮಂಜಪ್ಪ 1956ರಲ್ಲಿ ಅಧಿಕಾರಕ್ಕೇರಿ 73 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆಮೇಲೆ ಹಲವಾರು ವರ್ಷಗಳಲ್ಲಿ ಹಲವಾರು ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅಧಿಕಾರ ನಡೆಸಿದರು. 1994ರಲ್ಲಿ ಒಕ್ಕಲಿಗ ಸಮುದಾಯದ ಎಚ್. ಡಿ. ದೇವೇಗೌಡ ಮುಖ್ಯಮಂತ್ರಿಯಾದರು. ಆನಂತರ 1999ರಲ್ಲಿ ಎಸ್. ಎಂ. ಕೃಷ್ಣ, 2006ರಲ್ಲಿ ಎಚ್. ಡಿ. ಕುಮಾರಸ್ವಾಮಿ, 2011ರಲ್ಲಿ ಡಿ. ವಿ. ಸದಾನಂದ ಗೌಡ ಮುಖ್ಯಮಂತ್ರಿಗಳಾದರು. ಇದೀಗ 2026ರಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
► ಹಿಂದುಳಿದ ವರ್ಗದವರು
ಹಾಗೆ ನೋಡಿದರೆ ಹಿಂದುಳಿದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿಗಳ ಸಂಖ್ಯೆ 4. ಅರಸ್ ಜಾತಿಗೆ ಸೇರಿದ ಡಿ. ದೇವರಾಜ ಅರಸು 1972 ಮಾರ್ಚ್ 20ರಿಂದ 1977 ಡಿಸೆಂಬರ್ 31ರವರೆಗೆ ಸಿಎಂ ಆಗಿದ್ದರು. ಆಮೇಲೆ 1978ರಲ್ಲಿ ಅವರು ಎರಡನೇ ಬಾರಿ ಸಿಎಂ ಆದರು. ರಾಜ್ಯದಲ್ಲಿ ಭೂಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಇವರ ಕೊಡುಗೆ ಅಪಾರ.
1990ರಲ್ಲಿ ಈಡಿಗ ಜಾತಿಯ ಬಂಗಾರಪ್ಪ, ದೇವಾಡಿಗ ಜಾತಿಯ ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಕುರುಬ ಜಾತಿಯವರಾದ ಸಿದ್ದರಾಮಯ್ಯ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದು ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂಟು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ ಸಿದ್ದರಾಮಯ್ಯ.
ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೇರಿದವರಲ್ಲಿ ರಾಮಕೃಷ್ಣ ಹೆಗಡೆ ಮತ್ತು ಆರ್. ಗುಂಡೂರಾವ್ ಬ್ರಾಹ್ಮಣರು.ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮೂರು ಬಾರಿ ಸಿಎಂ ಆಗಿದ್ದಾರೆ. ಅದೇ ವೇಳೆ ಆರ್. ಗುಂಡೂರಾವ್ 1980ರಲ್ಲಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗುವ ಮುನ್ನ 3 ವರ್ಷ ಅಧಿಕಾರ ನಡೆಸಿದ್ದಾರೆ. ಇನ್ನುಳಿದಂತೆ ರಜಪೂತ್ ಸಮುದಾಯಕ್ಕೆ ಸೇರಿದ ಎನ್. ಧರಂ ಸಿಂಗ್ ಅವರು 2004ರಿಂದ 2006ರವರೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿದ್ದರು.