×
Ad

COVID 19 ಸಾಂಕ್ರಾಮಿಕದ ನಂತರ ಅಮೆರಿಕನ್ ವಿದ್ಯಾರ್ಥಿಗಳು ಭಾರತವನ್ನು ಏಕೆ ಆಯ್ಕೆ ಮಾಡುತ್ತಿಲ್ಲ?

Update: 2026-06-01 22:27 IST

ಸಾಂದರ್ಭಿಕ ಚಿತ್ರ | Photo Credit : magnific

ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ಅಮೆರಿಕನ್ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 65ಕ್ಕಿಂತ ಹೆಚ್ಚು ಕುಸಿದಿದೆ. COVID 19ಸಾಂಕ್ರಾಮಿಕಕ್ಕೆ ಮುಂಚೆಯೇ ಆರಂಭವಾದ ಈ ಕುಸಿತವು ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲೂ ಮುಂದುವರಿದಿದ್ದು, ಇದುವರೆಗೆ ಚೇತರಿಸಿಕೊಂಡಿಲ್ಲ. ಭಾರತೀಯ ವಿಶ್ವವಿದ್ಯಾಲಯಗಳ ಕಡಿಮೆ ಜಾಗತಿಕ ಶ್ರೇಯಾಂಕ, ಕಟ್ಟುನಿಟ್ಟಾದ ಪಠ್ಯಕ್ರಮ ಮತ್ತು ಮೂಲಸೌಕರ್ಯಗಳ ಕೊರತೆಯು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ.

ಅಮೆರಿಕದ ವಿದೇಶಾಂಗ ಇಲಾಖೆಯಿಂದ ಧನಸಹಾಯ ಪಡೆಯುವ ‘ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್’ (IIE) ಸಂಸ್ಥೆಯ ದತ್ತಾಂಶದ ಪ್ರಕಾರ, ವಿದೇಶಗಳಲ್ಲಿ ವ್ಯಾಸಂಗ ಮಾಡುವ ಒಟ್ಟು ಅಮೆರಿಕನ್ ವಿದ್ಯಾರ್ಥಿಗಳಲ್ಲಿ ಕೇವಲ ಶೇಕಡಾ 0.52ರಷ್ಟು ವಿದ್ಯಾರ್ಥಿಗಳು ಮಾತ್ರ ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ‘Hindustan Times’ ವರದಿ ಮಾಡಿದೆ.

ಲಭ್ಯವಿರುವ ಇತ್ತೀಚಿನ ದತ್ತಾಂಶದ ಪ್ರಕಾರ, 2023–24ರಲ್ಲಿ ವಿದೇಶದಲ್ಲಿ ವ್ಯಾಸಂಗ ಮಾಡಿದ 2,98,180 ಅಮೆರಿಕನ್ ವಿದ್ಯಾರ್ಥಿಗಳಲ್ಲಿ ಕೇವಲ 1,578 ವಿದ್ಯಾರ್ಥಿಗಳು ಮಾತ್ರ ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು 2013–14ರ ಅವಧಿಗೆ ಹೋಲಿಸಿದರೆ ಶೇಕಡಾ 65.6ರಷ್ಟು ತೀವ್ರ ಕುಸಿತವಾಗಿದೆ. ಆ ಅವಧಿಯಲ್ಲಿ 4,583 ಅಮೆರಿಕನ್ ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ, ಪ್ರಸ್ತುತ 3,60,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಲ್ಲಿನ ಒಟ್ಟು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 30.8ರಷ್ಟು ಪಾಲು ಹೊಂದಿದ್ದಾರೆ. ವಿಶೇಷವೆಂದರೆ, ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತದವರೇ ಅತಿ ದೊಡ್ಡ ಪಾಲನ್ನು ಹೊಂದಿದ್ದಾರೆ.

►ಸಂಖ್ಯೆಗಳು ಕುಸಿದಿದ್ದು ಹೇಗೆ?

IIE ದತ್ತಾಂಶದ ಪ್ರಕಾರ, ಭಾರತದಲ್ಲಿ ಅಮೆರಿಕನ್ ವಿದ್ಯಾರ್ಥಿಗಳ ಸಂಖ್ಯೆಯು COVID 19 ಸಾಂಕ್ರಾಮಿಕಕ್ಕೆ ಮುಂಚೆಯೇ ಕುಸಿಯಲು ಪ್ರಾರಂಭಿಸಿತ್ತು. ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಮತ್ತಷ್ಟು ಕುಸಿತ ಕಂಡುಬಂದಿದ್ದು, ಇದುವರೆಗೆ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

2004–05ರಲ್ಲಿ 1,767 ಅಮೆರಿಕನ್ ವಿದ್ಯಾರ್ಥಿಗಳು ಭಾರತದಲ್ಲಿ ಓದಲು ಆಯ್ಕೆ ಮಾಡಿಕೊಂಡಿದ್ದರು. ಇದರಿಂದ ಅಮೆರಿಕನ್ ನಾಗರಿಕರು ವಿದೇಶದಲ್ಲಿ ವ್ಯಾಸಂಗ ಮಾಡಲು ಇಷ್ಟಪಡುವ ಪ್ರಮುಖ 25 ದೇಶಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿತ್ತು.

ವಿದ್ಯಾರ್ಥಿಗಳ ಆಸಕ್ತಿಯು ಸ್ಥಿರವಾಗಿ ಹೆಚ್ಚುತ್ತಾ ಸಾಗಿತು. 2011–12ರ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಿ 4,593 ವಿದ್ಯಾರ್ಥಿಗಳಿಗೆ ತಲುಪಿತು. ಇದರಿಂದ ಉನ್ನತ ಶಿಕ್ಷಣಕ್ಕಾಗಿ ಭಾರತವು 12ನೇ ಅತ್ಯಂತ ಜನಪ್ರಿಯ ತಾಣವಾಗಿ ಹೊರಹೊಮ್ಮಿತ್ತು. ಜಪಾನ್ ಮತ್ತು ಅರ್ಜೆಂಟೀನಾದಂತಹ ದೇಶಗಳ ನಂತರದ ಸ್ಥಾನದಲ್ಲಿ ಭಾರತವಿತ್ತು.

ಈ ಬೆಳವಣಿಗೆಯು 2016–17ರಲ್ಲಿ ಕುಸಿತದ ಹಂತವನ್ನು ಪ್ರವೇಶಿಸುವವರೆಗೆ ತನ್ನ ವೇಗವನ್ನು ಕಾಯ್ದುಕೊಂಡಿತ್ತು. COVID 19 ಸಾಂಕ್ರಾಮಿಕದ ಪರಿಣಾಮ ಈ ಕುಸಿತ ಮತ್ತಷ್ಟು ತೀವ್ರಗೊಂಡಿತು. 2019–20ರಲ್ಲಿ ಭಾರತದಲ್ಲಿದ್ದ ಅಮೆರಿಕನ್ ವಿದ್ಯಾರ್ಥಿಗಳ ಸಂಖ್ಯೆ ಅರ್ಧದಷ್ಟು ಕುಸಿಯಿತು. 2020–21ರ ವೇಳೆಗೆ ಅದು ಕೇವಲ 16ಕ್ಕೆ ಬಂದು ನಿಂತಿತು.

►ಅಮೆರಿಕನ್ ವಿದ್ಯಾರ್ಥಿಗಳು ಭಾರತವನ್ನು ಏಕೆ ಆಯ್ಕೆ ಮಾಡುತ್ತಿಲ್ಲ?

ಕಟ್ಟುನಿಟ್ಟಾದ ಪಠ್ಯಕ್ರಮ, ಮೂಲಸೌಕರ್ಯಗಳ ಕೊರತೆ ಮತ್ತು ವಿಶ್ವವಿದ್ಯಾಲಯಗಳ ಕಡಿಮೆ ಜಾಗತಿಕ ಶ್ರೇಯಾಂಕ (ರ್ಯಾಂ ಕಿಂಗ್‌)ಗಳ ಕಾರಣದಿಂದ ಶಿಕ್ಷಣಕ್ಕಾಗಿ ಭಾರತವನ್ನು ಆಯ್ಕೆ ಮಾಡಿಕೊಳ್ಳುವ ಅಮೆರಿಕನ್ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬರುತ್ತಿದೆ ಎಂದು ಶಿಕ್ಷಣ ಸಲಹೆಗಾರರು ಹೇಳಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

“ಜಾಗತಿಕ ಶ್ರೇಯಾಂಕಗಳಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಅಷ್ಟೇನೂ ಉನ್ನತ ಸ್ಥಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ. ವಿಶ್ವದಲ್ಲೇ ಉನ್ನತ ಶ್ರೇಯಾಂಕ ಹೊಂದಿರುವ ಕಾಲೇಜುಗಳಿಗೆ ಸೇರಲು ಅವಕಾಶವಿರುವಾಗ, ಯಾರಾದರೂ ಅದನ್ನು ಬಿಟ್ಟು ಭಾರತಕ್ಕೆ ಏಕೆ ಬರುತ್ತಾರೆ? ಎರಡನೆಯದಾಗಿ, ನಮ್ಮ ಪಠ್ಯಕ್ರಮವು ಮೊದಲೇ ನಿಗದಿತವಾಗಿದ್ದು, ತುಂಬಾ ಕಟ್ಟುನಿಟ್ಟಾಗಿರುತ್ತದೆ” ಎಂದು ‘ಇಂಟರ್ನ್ಯಾಷನಲ್ ಎಜುಕೇಶನ್ ಎಕ್ಸ್ಚೇಂಜ್’ ಸಂಸ್ಥೆಯನ್ನು ನಡೆಸುತ್ತಿರುವ ಮೃಣಾಲಿನಿ ಬಾತ್ರಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಕ್ಯಾಂಪಸ್ನೊಳಗೆ ವಸತಿ ಸೌಲಭ್ಯ ಒದಗಿಸಲು ಹಲವು ಕಾಲೇಜುಗಳು ವಿಫಲವಾಗಿರುವುದು ಹಾಗೂ ಭಾರತದಲ್ಲಿ ಗಳಿಸಿದ ಶೈಕ್ಷಣಿಕ ಕ್ರೆಡಿಟ್ ಗಳನ್ನು ತಮ್ಮ ದೇಶದ ವಿಶ್ವವಿದ್ಯಾಲಯಗಳಿಗೆ ವರ್ಗಾಯಿಸಿಕೊಳ್ಳುವಲ್ಲಿ ಇರುವ ತೊಂದರೆಗಳು ಕೂಡ ಅಮೆರಿಕನ್ನರ ಚಿಂತೆಗೆ ಕಾರಣವಾಗಿವೆ ಎಂದು ಬಾತ್ರಾ ಹೇಳಿದ್ದಾರೆ.

ಇದೇ ವೇಳೆ, ‘ಇಲಿನಾಯ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಅಧ್ಯಕ್ಷ ರಾಜ್ ಎಚಂಬಾಡಿ ಮಾತನಾಡಿ, ಪ್ರಯಾಣದ ನಿರ್ಬಂಧಗಳ ಕಾರಣದಿಂದ ಯುರೋಪ್ಗೆ ಹೋಲಿಸಿದರೆ ಏಷ್ಯಾದಲ್ಲಿನ ವಿದೇಶಿ ವ್ಯಾಸಂಗ ಕಾರ್ಯಕ್ರಮಗಳು ಚೇತರಿಸಿಕೊಳ್ಳಲು ಗಮನಾರ್ಹವಾಗಿ ಹೆಚ್ಚು ಸಮಯ ತೆಗೆದುಕೊಂಡಿವೆ ಎಂದಿದ್ದಾರೆ.

“ಈ ರೀತಿಯ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಸಕಾರಾತ್ಮಕ ಅಭಿಪ್ರಾಯಗಳೇ ಪ್ರಮುಖ ಪ್ರೇರಣೆಯಾಗಿರುತ್ತವೆ. ಆದರೆ ಸಾಂಕ್ರಾಮಿಕದ ಅವಧಿಯ ಹಲವು ವರ್ಷಗಳ ಅಡಚಣೆಯು ಭಾರತಕ್ಕೆ ಬರುವ ವಿದ್ಯಾರ್ಥಿಗಳ ದಾಖಲಾತಿ ಸರಪಳಿಯನ್ನು ಸಂಪೂರ್ಣವಾಗಿ ಮುರಿದುಹಾಕಿತು” ಎಂದು ಅವರು ಹೇಳಿದ್ದಾರೆ.

ಬಹಳ ದಿನಗಳಿಂದ ಭಾರತದ ಆಕರ್ಷಣೆಯು ಮುಖ್ಯವಾಗಿ ಭಾಷಾ ಪ್ರಾವೀಣ್ಯತೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಲಿಬರಲ್ ಆರ್ಟ್ಸ್ ಸುತ್ತ ಬೆಳೆದಿದ್ದರೆ, ಪ್ರಸ್ತುತ ಅಮೆರಿಕದ ಉನ್ನತ ಶಿಕ್ಷಣವು ತಾಂತ್ರಿಕ ವಿಭಾಗಗಳು ಮತ್ತು ತಕ್ಷಣದ ಉದ್ಯೋಗಾವಕಾಶಗಳ ಆಧಾರದ ಮೇಲೆ ಹೆಚ್ಚಾಗಿ ಮುನ್ನಡೆಯುತ್ತಿದೆ.

“ಭಾರತವು ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇತರ ಉದಯೋನ್ಮುಖ ಕ್ಷೇತ್ರಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಉನ್ನತ ಮೌಲ್ಯದ ಹಾಗೂ ಸ್ಪರ್ಧಾತ್ಮಕ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳಬೇಕು” ಎಂದು ಎಚಂಬಾಡಿ ಹೇಳಿದ್ದಾರೆ.

ಇಂದು ಭಾರತವು ಕೇವಲ 4,41,000 ಜನಸಂಖ್ಯೆ ಹೊಂದಿರುವ ಬೆಲೀಜ್ ದೇಶಕ್ಕಿಂತಲೂ ಕಡಿಮೆ ಅಮೆರಿಕನ್ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಅದೇ ವೇಳೆ, ವಿಯೆಟ್ನಾಂ ಮತ್ತು ಘಾನಾಗಳಿಗಿಂತ ಸ್ವಲ್ಪವೇ ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

►ಭಾರತದಿಂದ ಅಮೆರಿಕಕ್ಕೆ ಹೋಗುವವರ ಸಂಖ್ಯೆ ನಿರಂತರ ಏರಿಕೆ

ಭಾರತಕ್ಕೆ ಬರುವ ಅಮೆರಿಕನ್ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದ್ದರೆ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ನಿರಂತರವಾಗಿ ಹೆಚ್ಚುತ್ತಿದೆ.

2023–24ರಲ್ಲಿ 3,31,602 ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದು, ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳ ಅತಿ ದೊಡ್ಡ ಮೂಲವಾಗಿದ್ದ ಚೀನಾವನ್ನು ಭಾರತ ಹಿಂದಿಕ್ಕಿದೆ.

ಈ ಸಂಖ್ಯೆಯು 2024–25ರ ಅವಧಿಯಲ್ಲಿ ಮತ್ತಷ್ಟು ಶೇಕಡಾ 9.5ರಷ್ಟು ಹೆಚ್ಚಾಗಿ, ಒಟ್ಟು 3,63,019ಕ್ಕೆ ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News