×
Ad

CBSEಯ ‘ಆನ್-ಸ್ಕ್ರೀನ್ ಮಾರ್ಕಿಂಗ್’ ವ್ಯವಸ್ಥೆ ಎಂದರೇನು? ಜಾಗತಿಕ ಪದ್ಧತಿಗಳಿಗೆ ಹೋಲಿಸಿದರೆ ಇದು ಯಾವ ರೀತಿ ಇದೆ?

Update: 2026-06-01 22:35 IST

Photo Credit : indianexpress.com ,AI-generated

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಈ ವರ್ಷದ 12ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಸಂಪೂರ್ಣ ಡಿಜಿಟಲ್ ರೂಪದ ‘ಆನ್-ಸ್ಕ್ರೀನ್ ಮಾರ್ಕಿಂಗ್’ (OSM) ವ್ಯವಸ್ಥೆಗೆ ಬದಲಾಯಿಸಲು ನಿರ್ಧರಿಸಿದೆ. ಆದರೆ, ಸ್ಕ್ಯಾನ್ ಮಾಡಲಾದ ಉತ್ತರ ಪತ್ರಿಕೆಗಳು ಅಸ್ಪಷ್ಟವಾಗಿವೆ, ಪುಟಗಳು ನಾಪತ್ತೆಯಾಗಿವೆ ಹಾಗೂ ಕೆಲವು ಸಂದರ್ಭಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಮತ್ತೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ತೋರಿಸಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದ ಬೆನ್ನಲ್ಲೇ ಈ ನಿರ್ಧಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ವಿವಾದವು ಪ್ರಸ್ತುತ ತಂತ್ರಜ್ಞಾನದ ಅನುಷ್ಠಾನದ ಕಡೆಗೆ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದರೂ, ಡಿಜಿಟಲ್ ಮೌಲ್ಯಮಾಪನದ ಪರಿಕಲ್ಪನೆಯೇ ಹೊಸದಲ್ಲ. ಯುನೈಟೆಡ್ ಕಿಂಗ್ಡಮ್ ನಂತಹ ದೇಶಗಳ ಪರೀಕ್ಷಾ ಮಂಡಳಿಗಳು ವರ್ಷಗಳಿಂದ ವಿವಿಧ ರೂಪದ ಆನ್ಲೈನ್ ಮೌಲ್ಯಮಾಪನ ಪದ್ಧತಿಯನ್ನು ಬಳಸುತ್ತಿವೆ. ಇದೇ ವೇಳೆ, ತಂತ್ರಜ್ಞಾನವು ಮೌಲ್ಯಮಾಪನ ಪ್ರಕ್ರಿಯೆಗೆ ಪೂರಕವಾಗಿ ಕೆಲಸ ಮಾಡಬಹುದೇ ಹೊರತು, ಶಿಕ್ಷಕರ ವೃತ್ತಿಪರ ನಿರ್ಧಾರಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಶಿಕ್ಷಣ ತಜ್ಞರು ಎಚ್ಚರಿಸಿದ್ದಾರೆ.

►ಏನಿದು ಆನ್-ಸ್ಕ್ರೀನ್ ಮಾರ್ಕಿಂಗ್?

ಆನ್-ಸ್ಕ್ರೀನ್ ಮಾರ್ಕಿಂಗ್ ಅಥವಾ OSM ಒಂದು ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ. ಇದರಲ್ಲಿ ಶಿಕ್ಷಕರು ಉತ್ತರ ಪತ್ರಿಕೆಗಳ ಭೌತಿಕ ಪ್ರತಿಯನ್ನು ಪರಿಶೀಲಿಸುವ ಬದಲು, ಕಂಪ್ಯೂಟರ್ ಪರದೆಯ ಮೇಲೆ ಅವುಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನೋಡಿ ಮೌಲ್ಯಮಾಪನ ಮಾಡುತ್ತಾರೆ.

ವಿದ್ಯಾರ್ಥಿಗಳು ಎಂದಿನಂತೆ ಸಾಂಪ್ರದಾಯಿಕ ವಿಧಾನದಲ್ಲೇ ಉತ್ತರ ಪತ್ರಿಕೆಗಳಲ್ಲಿ ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆಯ ನಂತರ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಆರಂಭವಾಗುತ್ತದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಸುರಕ್ಷಿತ ವೇದಿಕೆಗೆ ಅಪ್ಲೋಡ್ ಮಾಡಲಾಗುತ್ತದೆ. ಬಳಿಕ ವಿದ್ಯಾರ್ಥಿಗಳ ಗುರುತನ್ನು ಮರೆಮಾಡಿ, ಡಿಜಿಟಲ್ ರೂಪದಲ್ಲಿ ಮೌಲ್ಯಮಾಪಕರಿಗೆ ವಿತರಿಸಲಾಗುತ್ತದೆ.

CBSE ಪ್ರಕಾರ, ಈ ಪರಿಕಲ್ಪನೆ ಹೊಸದೇನಲ್ಲ. ಮಂಡಳಿಯು 2014ರಲ್ಲೇ ಮೊದಲ ಬಾರಿಗೆ OSM ವ್ಯವಸ್ಥೆಯನ್ನು ಪರಿಶೀಲಿಸಿತ್ತು. ಆದರೆ, ಆಗ ಸೂಕ್ತ ಸ್ಕ್ಯಾನಿಂಗ್ ತಂತ್ರಜ್ಞಾನ ಲಭ್ಯವಿಲ್ಲದ ಕಾರಣ ಅದನ್ನು ಮುಂದುವರಿಸಿರಲಿಲ್ಲ. ಅಂದಿನ ದಿನಗಳಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡುವ ಮುನ್ನ ಅವುಗಳ ಬೈಂಡಿಂಗ್ ಭಾಗವನ್ನು ಕತ್ತರಿಸಬೇಕಾಗುತ್ತಿತ್ತು. ಇದರಿಂದ ಪುಟಗಳು ಅದಲುಬದಲಾಗುವ ಅಪಾಯವಿತ್ತು.

►ಈಗಲೇ OSM ಅಳವಡಿಸಿಕೊಳ್ಳಲು CBSE ನಿರ್ಧರಿಸಿದ್ದು ಏಕೆ?

CBSE ಪ್ರಕಾರ, ಮೌಲ್ಯಮಾಪನ ಪ್ರಕ್ರಿಯೆಯನ್ನು ಹೆಚ್ಚು ಏಕರೂಪದ, ದಕ್ಷ ಮತ್ತು ಸುರಕ್ಷಿತವಾಗಿಸುವುದು ಇದರ ಮುಖ್ಯ ಉದ್ದೇಶ. ಡಿಜಿಟಲ್ ಮೌಲ್ಯಮಾಪನದಿಂದ ಅಂಕ ನೀಡಿಕೆಯಲ್ಲಿ ಕಂಡುಬರುವ ಪ್ರಾದೇಶಿಕ ವ್ಯತ್ಯಾಸಗಳು ಕಡಿಮೆಯಾಗುತ್ತವೆ, ಅಂಕಗಳ ಒಟ್ಟು ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ಸಂಭವಿಸುವ ತಪ್ಪುಗಳನ್ನು ತಡೆಯಬಹುದು, ಮೌಲ್ಯಮಾಪಕರ ಮೇಲಿನ ನಿಗಾವನ್ನು ಸುಧಾರಿಸಬಹುದು ಹಾಗೂ ಒಟ್ಟಾರೆ ಪರೀಕ್ಷಾ ಪ್ರಕ್ರಿಯೆಯನ್ನು ಬಲಪಡಿಸಬಹುದು ಎಂದು ಮಂಡಳಿ ನಂಬಿದೆ.

ಇದನ್ನು ಅಧಿಕೃತವಾಗಿ ಜಾರಿಗೆ ತರುವ ಮುನ್ನ CBSE ಸಂಸ್ಥೆಯು ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ರಾಜ್ಯ ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಶಿಕ್ಷಕರನ್ನು ಒಳಗೊಂಡಂತೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿತ್ತು. ಆದರೆ, ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಲತಿಕಾ ಗುಪ್ತಾ ಅವರು, OSM ವ್ಯವಸ್ಥೆಯ ಮೂಲ ಪರಿಕಲ್ಪನೆಯಲ್ಲೇ ದೋಷವಿದೆ ಎಂದು ವಾದಿಸುತ್ತಾರೆ.

“ಮೌಲ್ಯಮಾಪನ ಎನ್ನುವುದು ಕೇವಲ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಫಲಿತಾಂಶ ಪ್ರಕಟಿಸುವುದಷ್ಟೇ ಅಲ್ಲ. ಶಿಕ್ಷಕರು ಮೌಲ್ಯಮಾಪನ ಕೇಂದ್ರಗಳಲ್ಲಿ ಭೇಟಿಯಾಗುತ್ತಾರೆ, ಚರ್ಚಿಸುತ್ತಾರೆ ಮತ್ತು ಒಂದು ಸಾಮೂಹಿಕ ನಿರ್ಧಾರಕ್ಕೆ ಬರುತ್ತಾರೆ. ಅಲ್ಲಿ ವಿಷಯದ ಮುಖ್ಯಸ್ಥರೂ ಇರುತ್ತಾರೆ. ಅವರು ಸಹ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಚರ್ಚೆ ನಡೆಸುತ್ತಾರೆ. ಈ ಇಡೀ ಪ್ರಕ್ರಿಯೆಯಲ್ಲಿ ಶಿಕ್ಷಕರು ವೃತ್ತಿಪರವಾಗಿ ಬೆಳೆಯುತ್ತಾರೆ” ಎಂದು ಡಾ. ಲತಿಕಾ ಗುಪ್ತಾ ಹೇಳುತ್ತಾರೆ.

►ಡಿಜಿಟಲ್ ಮೌಲ್ಯಮಾಪನದ ಬಗ್ಗೆ ಸಂಶೋಧಕರು ಏನು ಹೇಳುತ್ತಾರೆ?

ವರ್ಷಗಳಿಂದ ಆನ್ಲೈನ್ ಮೌಲ್ಯಮಾಪನ ಪದ್ಧತಿಯನ್ನು ಬಳಸುತ್ತಿರುವ ದೇಶಗಳ ಸಂಶೋಧನೆಗಳು ಸಾಮಾನ್ಯವಾಗಿ ಇದು ಅಂಕ ನೀಡಿಕೆಯಲ್ಲಿ ಹೆಚ್ಚು ಸ್ಥಿರತೆ ಮತ್ತು ಏಕರೂಪತೆಯನ್ನು ತರುತ್ತದೆ ಎಂದು ತೋರಿಸಿವೆ. ಬ್ರಿಟನ್ನ ಪರೀಕ್ಷಾ ನಿಯಂತ್ರಣ ಪ್ರಾಧಿಕಾರ ನಡೆಸಿದ ಅಧ್ಯಯನವೊಂದರಲ್ಲಿ, “ಸಾಂಪ್ರದಾಯಿಕ ಕಾಗದ ಆಧಾರಿತ ವಿಧಾನಗಳನ್ನು ಬಳಸುವವರಿಗಿಂತ ಆನ್ಲೈನ್ ಮೌಲ್ಯಮಾಪನ ವ್ಯವಸ್ಥೆಯನ್ನು ಬಳಸುವ ಮೌಲ್ಯಮಾಪಕರು ಅಂಕ ನೀಡಿಕೆಯ ನಿಯಮಾವಳಿಗಳನ್ನು ಅನ್ವಯಿಸುವಲ್ಲಿ ಹೆಚ್ಚಿನ ಸ್ಥಿರತೆಯನ್ನು ಪ್ರದರ್ಶಿಸಿದ್ದಾರೆ” ಎಂಬುದು ಕಂಡುಬಂದಿದೆ.

ಮೌಲ್ಯಮಾಪನ ವಿಭಾಗದ ಸಂಶೋಧಕರಾದ ವಿಕ್ಟೋರಿಯಾ ಕ್ರಿಸ್ಪ್ ಅವರು, ಡಿಜಿಟಲ್ ವ್ಯವಸ್ಥೆಗಳು ಗುಣಮಟ್ಟದ ಮೇಲ್ವಿಚಾರಣೆ ಮತ್ತು ಮಾನದಂಡಗಳ ಸುಧಾರಣೆಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ ಎಂದು ವಾದಿಸಿದ್ದಾರೆ.

ಆದರೆ, ತಂತ್ರಜ್ಞಾನವು ತಪ್ಪುಗಳನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಕೇಂಬ್ರಿಡ್ಜ್ ಅಸೆಸ್ಮೆಂಟ್ ಸಂಸ್ಥೆಯ ಸಂಶೋಧಕರ ಪ್ರಕಾರ, ಡಿಜಿಟಲ್ ಮೌಲ್ಯಮಾಪನವು ತಪ್ಪುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಬದಲು ಅವುಗಳ ಸ್ವರೂಪವನ್ನು ಬದಲಾಯಿಸುತ್ತದೆ. ಸ್ಕ್ಯಾನಿಂಗ್ ಗುಣಮಟ್ಟ, ಸಾಫ್ಟ್ವೇರ್ ಕಾರ್ಯಕ್ಷಮತೆ ಮತ್ತು ಅನುಷ್ಠಾನದ ದೋಷಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಪರೀಕ್ಷಾ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು.

‘The Indian Expressʼ ಪತ್ರಿಕೆಯೊಂದಿಗೆ ಮಾತನಾಡಿದ ಜಪಾನ್ನ ಫುಕುಯೋಕಾ ವಿಶ್ವವಿದ್ಯಾಲಯದ ತುಲನಾತ್ಮಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಎಡ್ವರ್ಡ್ ವಿಕರ್ಸ್, ಪ್ರಸ್ತುತ ಉದ್ಭವಿಸಿರುವ ವಿವಾದವು ಮೂಲ ಪರಿಕಲ್ಪನೆಗಿಂತ ಅದನ್ನು ಜಾರಿಗೆ ತಂದ ವಿಧಾನದ ಬಗ್ಗೆ ಹೆಚ್ಚು ಹೇಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಭಾರತೀಯ ಪರೀಕ್ಷಾ ವ್ಯವಸ್ಥೆ ಮತ್ತು ಪ್ರಸ್ತುತ ಎದುರಾಗಿರುವ ಈ ವಿವಾದದ ನಿಜವಾದ ಪ್ರಶ್ನೆ ಈ ವ್ಯವಸ್ಥೆ ಅಥವಾ ಇದರ ಹಿಂದಿರುವ ಆಲೋಚನೆಯ ಬಗ್ಗೆ ಅಲ್ಲ. ಬದಲಿಗೆ, ಇದನ್ನು ಪ್ರಾಯೋಗಿಕವಾಗಿ ಹೇಗೆ ಪರೀಕ್ಷಿಸಲಾಯಿತು ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತಾಗಿದೆ” ಎಂದು ಅವರು ಹೇಳಿದ್ದಾರೆ.

“ಕೋಟ್ಯಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಇಂತಹ ಯಾವುದೇ ಪ್ರಮುಖ ಬದಲಾವಣೆಗೆ ಶಿಕ್ಷಕರು ಮತ್ತು ಪರೀಕ್ಷಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ಅಗತ್ಯವಿರುತ್ತದೆ. ಈಗ ನಡೆದಿರುವುದನ್ನು ನೋಡಿದರೆ ಈ ವ್ಯವಸ್ಥೆ ಇನ್ನೂ ಸಿದ್ಧವಾಗಿರಲಿಲ್ಲ. ಸ್ವತಃ CBSE ಆಗಲಿ ಅಥವಾ ಶಿಕ್ಷಕರಾಗಲಿ ಇದಕ್ಕೆ ಸಜ್ಜಾಗಿರಲಿಲ್ಲ ಎಂದು ಅನಿಸುತ್ತದೆ. ಹಾಗಿದ್ದಲ್ಲಿ, ಈ ಬದಲಾವಣೆ ತರಲು ಅಷ್ಟೊಂದು ಅವಸರ ಏನಿತ್ತು?” ಎಂದು ಅವರು ಪ್ರಶ್ನಿಸಿದ್ದಾರೆ.

►ವಿದೇಶಿ ಪರೀಕ್ಷಾ ಮಂಡಳಿಗಳು ಡಿಜಿಟಲ್ ಮೌಲ್ಯಮಾಪನವನ್ನು ಹೇಗೆ ಬಳಸುತ್ತವೆ?

ಯುಕೆಯ ಪ್ರಮುಖ ಪರೀಕ್ಷಾ ಮಂಡಳಿಗಳಾದ ಅಸೆಸ್ಮೆಂಟ್ ಆಂಡ್ ಕ್ವಾಲಿಫಿಕೇಷನ್ ಅಲಯನ್ಸ್ (AQA), ಆಕ್ಸ್ಫರ್ಡ್ ಕೇಂಬ್ರಿಡ್ಜ್ ಆಂಡ್ ಆರ್ಎಸ್ಎ ಎಕ್ಸಾಮಿನೇಷನ್ಸ್ (OCR) ಹಾಗೂ ‘ಎ-ಲೆವೆಲ್ಸ್’ ಪರೀಕ್ಷೆಗಳನ್ನು ನಡೆಸುವ ಪಿಯರ್ಸನ್ ಎಡ್ಎಕ್ಸೆಲ್ (Pearson Edexcel) ಸಂಸ್ಥೆಗಳು ಹಲವು ವರ್ಷಗಳಿಂದ ಆನ್ಲೈನ್ ಮೌಲ್ಯಮಾಪನ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸುತ್ತಿವೆ.

ಇಲ್ಲಿ ಉತ್ತರ ಪತ್ರಿಕೆಗಳನ್ನು ಒಂದೇ ಕೇಂದ್ರದಲ್ಲಿ ಸ್ಕ್ಯಾನ್ ಮಾಡಿ, ಮೌಲ್ಯಮಾಪಕರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ವಿತರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಮೌಲ್ಯಮಾಪಕರು ಇಡೀ ಉತ್ತರ ಪತ್ರಿಕೆಯನ್ನು ತಪಾಸಣೆ ಮಾಡುವುದಿಲ್ಲ. ಬದಲಿಗೆ, ಸಾವಿರಾರು ಉತ್ತರ ಪತ್ರಿಕೆಗಳಲ್ಲಿರುವ ನಿರ್ದಿಷ್ಟ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನ ಮಾಡುತ್ತಾರೆ. ಇದು ಅಂಕ ನೀಡಿಕೆಯಲ್ಲಿ ಹೆಚ್ಚಿನ ಏಕರೂಪತೆಯನ್ನು ತರಲು ಸಹಾಯ ಮಾಡುತ್ತದೆ.

ಬ್ರಿಟನ್ನ ಪರೀಕ್ಷಾ ನಿಯಂತ್ರಣ ಪ್ರಾಧಿಕಾರವಾದ ಆಫ್ಕ್ವಾಲ್ (Ofqual) ಪ್ರಕಾರ, ಗುಣಮಟ್ಟದ ನಿಯಂತ್ರಣವನ್ನು ಸುಧಾರಿಸಲು, ದಕ್ಷತೆಯನ್ನು ಹೆಚ್ಚಿಸಲು ಹಾಗೂ ಮೌಲ್ಯಮಾಪಕರ ಮೇಲಿನ ನಿಗಾವನ್ನು ಬಲಪಡಿಸಲು ಆನ್ಲೈನ್ ಮೌಲ್ಯಮಾಪನವನ್ನು ಪರಿಚಯಿಸಲಾಯಿತು.

ಬ್ರಿಟನ್ನ ಈ ವ್ಯವಸ್ಥೆಯು ಏಷ್ಯಾದ ಅನೇಕ ಪರೀಕ್ಷಾ ಪದ್ಧತಿಗಳಿಗಿಂತ ಭಿನ್ನವಾಗಿದೆ ಎಂದು ವಿಕರ್ಸ್ ತಿಳಿಸಿದ್ದಾರೆ. ಏಕೆಂದರೆ ಬ್ರಿಟನ್ನ ಜಿಸಿಎಸ್ಇ (GCSE) ಮತ್ತು ಎ-ಲೆವೆಲ್ ಪರೀಕ್ಷೆಗಳು ಹೆಚ್ಚಾಗಿ ದೀರ್ಘಾವಧಿಯ ವಿವರಣಾತ್ಮಕ ಉತ್ತರಗಳು ಹಾಗೂ ಪ್ರಬಂಧ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

“ವಿದ್ಯಾರ್ಥಿಗಳ ಉತ್ತರಗಳನ್ನು ಮೌಲ್ಯಮಾಪಕರಿಗೆ ತಲುಪಿಸಲು ಮತ್ತು ಈ ಪ್ರಕ್ರಿಯೆಯನ್ನು ಹೆಚ್ಚು ದಕ್ಷಗೊಳಿಸಲು ತಂತ್ರಜ್ಞಾನವು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಆದರೆ, ವಿದ್ಯಾರ್ಥಿಗಳ ಉತ್ತರಗಳನ್ನು ಪ್ರಾಯೋಗಿಕವಾಗಿ ಮೌಲ್ಯೀಕರಿಸುವ ಶಿಕ್ಷಕರ ಜವಾಬ್ದಾರಿಯನ್ನೇ ತಂತ್ರಜ್ಞಾನವು ಸಂಪೂರ್ಣವಾಗಿ ವಹಿಸಿಕೊಳ್ಳುತ್ತದೆ ಎಂದು ಭಾವಿಸುವಾಗ ನಾವು ತುಂಬಾ ಜಾಗರೂಕರಾಗಿರಬೇಕು” ಎಂದು ವಿಕರ್ಸ್ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಆಫ್ಕ್ವಾಲ್ ಸಂಸ್ಥೆಯು ಮೌಲ್ಯಮಾಪನದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅಂತಿಮ ನಿರ್ಧಾರಗಳಿಗೆ ಮಾನವ ಮೌಲ್ಯಮಾಪಕರೇ ಜವಾಬ್ದಾರರಾಗಿರಬೇಕು ಎಂದು ಒತ್ತಿಹೇಳಿದೆ.

“ಮಾನವ ಮೌಲ್ಯಮಾಪಕರೇ ಈ ವ್ಯವಸ್ಥೆಯ ನಿಯಂತ್ರಣ ಹೊಂದಿರಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಪರೀಕ್ಷಾ ಪದ್ಧತಿಯ ಮೇಲೆ ನಂಬಿಕೆ ಇರಬೇಕಾಗುತ್ತದೆ” ಎಂದು ವಿಕರ್ಸ್ ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ 150ಕ್ಕೂ ಹೆಚ್ಚು ದೇಶಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್ (IB) ಸಂಸ್ಥೆಯು ಸಹ ಡಿಜಿಟಲ್ ಮೌಲ್ಯಮಾಪನವನ್ನು ಹೆಚ್ಚಾಗಿ ಅವಲಂಬಿಸಿದೆ. ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳನ್ನು ಪ್ರಪಂಚದಾದ್ಯಂತದ ಮೌಲ್ಯಮಾಪಕರು ಆನ್ಲೈನ್ ಮೂಲಕ ವೀಕ್ಷಿಸುತ್ತಾರೆ. ಇದೇ ವೇಳೆ, ಹಿರಿಯ ಮೌಲ್ಯಮಾಪಕರು ಮಾಡರೇಶನ್ ಮತ್ತು ಸ್ಟ್ಯಾಂಡರ್ಡೈಸೇಶನ್ ಪ್ರಕ್ರಿಯೆಗಳ ಮೂಲಕ ಅಂಕ ನೀಡಿಕೆಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತಾರೆ.

ತಂತ್ರಜ್ಞಾನವು ಕೇವಲ ಮಾನವ ಮೌಲ್ಯಮಾಪಕರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿರಬೇಕೇ ಹೊರತು, ತಂತ್ರಜ್ಞಾನವೇ ಸ್ವತಃ ಮೌಲ್ಯಮಾಪನ ಮಾಡುವುದಲ್ಲ ಎಂದು ವಿಕರ್ಸ್ ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದೆ.

►CBSEಯ ಈ ನೂತನ ವ್ಯವಸ್ಥೆಯ ಅನುಷ್ಠಾನದ ಕುರಿತು ಕೇಳಿಬರುತ್ತಿರುವ ಆತಂಕಗಳೇನು?

ಕೇವಲ ತಾಂತ್ರಿಕ ದೋಷಗಳ ಆಚೆಗೂ, ಈ ವ್ಯವಸ್ಥೆಯನ್ನು ಅತ್ಯಂತ ಆತುರವಾಗಿ ಜಾರಿಗೆ ತರಲಾಗಿದೆಯೇ ಎಂದು ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ.

“17 ಅಥವಾ 18 ವರ್ಷದ ವಿದ್ಯಾರ್ಥಿಯೊಬ್ಬ ಸತತ ಮೂರು ಗಂಟೆಗಳ ಕಾಲ ಪರೀಕ್ಷೆ ಬರೆಯುತ್ತಾನೆ. ಆತನ ಕೈಬರಹವು ಪರೀಕ್ಷೆಯುದ್ದಕ್ಕೂ ಒಂದೇ ರೀತಿ ಇರುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ನಿಮ್ಮ ಸ್ಕ್ಯಾನರ್ಗಳು ಎಷ್ಟೇ ಅತ್ಯಾಧುನಿಕವಾಗಿದ್ದರೂ ಸಹ, ಅವು ಕೆಲವು ವಿಷಯಗಳನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆಯಿರುತ್ತದೆ” ಎಂದು ಗುಪ್ತಾ ಹೇಳುತ್ತಾರೆ.

ಭೂಗೋಳಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತದಂತಹ ವಿಷಯಗಳಲ್ಲಿ ರೇಖಾಚಿತ್ರಗಳು, ಆಕೃತಿಗಳು ಮತ್ತು ಪೆನ್ಸಿಲ್ ಕೆಲಸಗಳು ಇರುತ್ತವೆ. ಇವುಗಳನ್ನು ಸ್ಕ್ಯಾನ್ ಮಾಡಿದಾಗ ಅವುಗಳ ಪ್ರತಿಗಳು ಯಾವಾಗಲೂ ಸ್ಪಷ್ಟವಾಗಿ ಮೂಡಿಬರದಿರಬಹುದು ಎಂಬುದನ್ನು ಅವರು ಗಮನಿಸಿದ್ದಾರೆ.

ಗುಪ್ತಾ ಅವರ ಪ್ರಕಾರ, ಮತ್ತೊಂದು ಪ್ರಮುಖ ಆತಂಕವೆಂದರೆ ಇದು ಶಾಲೆಗಳ ನಡುವಿನ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

“ಸುರಕ್ಷಿತ ಮೂಲಸೌಕರ್ಯ ಮತ್ತು ಆಧುನಿಕ ಯಂತ್ರಗಳನ್ನು ಖರೀದಿಸಲು ಶಕ್ತವಾಗಿರುವ ಖಾಸಗಿ ಶಾಲೆಗಳು ಉತ್ತಮ ಸ್ಥಿತಿಯಲ್ಲಿರುತ್ತವೆ. ಆದರೆ ಸರ್ಕಾರಿ ಶಾಲೆಗಳು ಆ ಸ್ಥಿತಿಯಲ್ಲಿ ಇರಲಿಕ್ಕಿಲ್ಲ. ಇದು ಸಾಂಸ್ಥಿಕವಾಗಿ ಅಸಮಾನತೆಯನ್ನು ಸೃಷ್ಟಿಸಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮೌಲ್ಯಮಾಪನದಲ್ಲಿ ಶಿಕ್ಷಕರ ಪಾತ್ರವನ್ನು ಕಡಿಮೆ ಮಾಡುವ ಈ ಒಟ್ಟಾರೆ ಸಿದ್ಧಾಂತವನ್ನೇ ಪ್ರಶ್ನಿಸಿರುವ ಅವರು, ಚೀನಾದ ‘ಗಾವೊಕಾವೊ’ ಪರೀಕ್ಷೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಬೃಹತ್ ಮಟ್ಟದಲ್ಲಿ ನಡೆಯುವ ಈ ಪರೀಕ್ಷಾ ವ್ಯವಸ್ಥೆಯು ಇಂದಿಗೂ ಮಾನವ ಮೌಲ್ಯಮಾಪನವನ್ನೇ ಹೆಚ್ಚಾಗಿ ಅವಲಂಬಿಸಿದೆ.

“ಶಿಕ್ಷಣ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಾನವೀಯ ಅಂಶವನ್ನು ಕಡಿಮೆ ಮಾಡುವುದು ಸರಿಯಾದ ಆಲೋಚನೆಯಲ್ಲ. ಇದು ಅತ್ಯಂತ ಸಮಸ್ಯಾತ್ಮಕವಾದ ಆಲೋಚನೆ” ಎಂದು ಗುಪ್ತಾ ಹೇಳಿದ್ದಾರೆ.

►ಹಾಗಿದ್ದಲ್ಲಿ, OSM ವ್ಯವಸ್ಥೆಯೇ ಮೌಲ್ಯಮಾಪನದ ಭವಿಷ್ಯವೇ?

ವಿಶ್ವದ ಬಹುತೇಕ ಪ್ರಮುಖ ಪರೀಕ್ಷಾ ಮಂಡಳಿಗಳು ಈಗಾಗಲೇ ಯಾವುದಾದರೂ ಒಂದು ರೂಪದಲ್ಲಿ ಡಿಜಿಟಲ್ ಮೌಲ್ಯಮಾಪನವನ್ನು ಅಳವಡಿಸಿಕೊಂಡಿವೆ. ಇದು ಮುಂಬರುವ ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಪಾತ್ರ ಮತ್ತಷ್ಟು ಹೆಚ್ಚಾಗಲಿದೆ ಎಂಬುದನ್ನು ಸೂಚಿಸುತ್ತದೆ.

“ಈ ಸುಧಾರಣೆಯು ಕೇವಲ ಶಿಕ್ಷಣ ಮತ್ತು ಮೌಲ್ಯಮಾಪನದ ತಾಂತ್ರಿಕ ನಿರ್ವಹಣೆಯ ಭಾಗವನ್ನು ಸುಧಾರಿಸುವ ಗುರಿಯನ್ನು ಹೊಂದಿದೆಯೇ ಹೊರತು, ಮೌಲ್ಯಮಾಪನದ ನಿಜವಾದ ಗುಣಮಟ್ಟವನ್ನು ಉತ್ತಮಪಡಿಸುವ ಉದ್ದೇಶವನ್ನಲ್ಲ” ಎಂದು ಗುಪ್ತಾ ಅಭಿಪ್ರಾಯಪಡುತ್ತಾರೆ.

ಇದೇ ವೇಳೆ, ಎಡ್ವರ್ಡ್ ವಿಕರ್ಸ್ ಅವರ ಪ್ರಕಾರ, ಡಿಜಿಟಲ್ ವ್ಯವಸ್ಥೆಗಳು ಶಿಕ್ಷಕರ ವೃತ್ತಿಪರ ನಿರ್ಧಾರಗಳಿಗೆ ಪರ್ಯಾಯವಾಗುವ ಬದಲಿಗೆ, ಅವುಗಳಿಗೆ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಉಪಯುಕ್ತ ಪಾತ್ರವನ್ನು ವಹಿಸಬಲ್ಲವು.

“ತಂತ್ರಜ್ಞಾನವು ಕೇವಲ ಮಾನವ ಮೌಲ್ಯಮಾಪಕರಿಗೆ ಸಹಾಯ ಮಾಡುವಂತಿರಬೇಕು” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News