×
Ad

ಮೆದುಳಿನ ಆರೋಗ್ಯ ಕ್ಷೀಣಿಸುವುದನ್ನು ತಡೆಯುವ ʼಪ್ರೊಟೀನ್ʼ ಕಂಡುಹಿಡಿದ ಸಂಶೋಧಕರು

Update: 2026-06-02 18:38 IST

ಸಾಂದರ್ಭಿಕ ಚಿತ್ರ | Photo Credit : magnific

ಮೆನಿನ್ ಎಂಬ ಮೆದುಳಿನ ಪ್ರೊಟೀನ್ನ ಮಟ್ಟ ಕಡಿಮೆಯಾಗುವುದರಿಂದ ಉರಿಯೂತ, ಸ್ಮರಣೆಯ ಕುಸಿತ ಮತ್ತು ಇತರ ವಯಸ್ಸು ಆಧರಿತ ಬದಲಾವಣೆಗಳನ್ನು ಪ್ರಚೋದಿಸುತ್ತದೆ.

ದೇಹಕ್ಕೆ ಎಷ್ಟು ಬೇಗನೇ ವಯಸ್ಸಾಗುತ್ತದೆ ಎನ್ನುವುದನ್ನು ನಿಯಂತ್ರಿಸಬಹುದಾದ ನಿಗೂಢ ಜೈವಿಕ ಬದಲಾವಣೆಯ ಗುರುತನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. PLOS ಬಯಾಲಜಿಯಲ್ಲಿ ಪ್ರಕಟವಾದ ಸಂಶೋಧನೆ ಹೇಳುವ ಪ್ರಕಾರ ಮೆನಿನ್ ಎಂಬ ಮೆದುಳಿನ ಪ್ರೊಟೀನ್ನ ಮಟ್ಟ ಕಡಿಮೆಯಾಗುವುದರಿಂದ ಉರಿಯೂತ, ಸ್ಮರಣೆಯ ಕುಸಿತ ಮತ್ತು ಇತರ ವಯಸ್ಸು ಆಧರಿತ ಬದಲಾವಣೆಗಳನ್ನು ದೇಹವಿಡೀ ಪ್ರಚೋದಿಸುತ್ತದೆ. ಇಲಿಗಳ ಮೇಲಿನ ಪ್ರಯೋಗದಲ್ಲಿ ಪ್ರೊಟೀನ್ ಅನ್ನು ಮರುಸ್ಥಾಪಿಸುವುದರಿಂದ ವಯಸ್ಸಾದ ಹಲವು ಚಿಹ್ನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ. ಸರಳವಾದ ಅಮಿನೋ ಆಮ್ಲದ ಔಷಧವು ಅರಿವಿನ ಕಾರ್ಯವನ್ನು ಸುಧಾರಿಸಿದೆ.

ಚಯಾಪಚಯ ಕ್ರಿಯೆ, ಹಾರ್ಮೋನ್ಗಳು, ದೇಹದ ಉಷ್ಣತೆ, ನಿದ್ರೆ ಮತ್ತು ಒತ್ತಡದ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಸಣ್ಣ ಆದರೆ ಶಕ್ತಿಯುತ ಪ್ರದೇಶವಾದ ಹೈಪೋಥಲಮಸ್ನಿಂದ ಮುದಿಯಾಗುವಿಕೆ ಬಲವಾಗಿ ಪ್ರಭಾವಿತವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಹೈಪೋಥಲಮಸ್ ಮುಪ್ಪಿಗೆ ಕೇಂದ್ರ ಕಮಾಂಡ್ ಸೆಂಟರ್ ಆಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದ ಕ್ಸಿಯಾಮೆನ್ ವಿಶ್ವವಿದ್ಯಾಲಯದ ಲೀಜ್ ಲೆಂಗ್ ಮತ್ತು ಸಹೋದ್ಯೋಗಿಗಳ ನೇತೃತ್ವದ ಅಧ್ಯಯನವು ಮೆದುಳಿನಲ್ಲಿ ಉರಿಯೂತ ನಿಗ್ರಹಿಸಲು ಸಹಾಯ ಮಾಡುವ ಪ್ರೊಟೀನ್ ಮೆನಿನ್ ಮೇಲೆ ಕೇಂದ್ರೀಕರಿಸಿದೆ. ಈ ಮೊದಲಿನ ಅಧ್ಯಯನದಲ್ಲಿ ಮೆನಿನ್ ನರದ ಉರಿಯೂತ ಚಟುವಟಿಕೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಕಂಡುಕೊಳ್ಳಲಾಗಿತ್ತು. ಈ ರಕ್ಷಣಾತ್ಮಕ ಪ್ರೊಟೀನ್ ಕಳೆದುಕೊಳ್ಳುವುದರಿಂದ ವಯಸ್ಸಾಗುವುದಕ್ಕೆ ಕಾರಣವಾಗಬಹುದೆ ಎಂದು ತಂಡವು ತಿಳಿದುಕೊಳ್ಳಲು ಬಯಸಿತ್ತು. ಅಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಇಲಿಗೆ ವಯಸ್ಸಾದಂತೆ ಹೈಪೋಥಲಮಸ್ನಲ್ಲಿ ಮೆನಿನ್ ಮಟ್ಟಗಳು ತೀವ್ರವಾಗಿ ಕುಸಿದಿದ್ದವು. ಮುಖ್ಯವಾಗಿ ಚಯಾಪಚಯ ಮತ್ತು ವ್ಯವಸ್ಥಿತ ಮುಪ್ಪಿಗೆ ಸಂಬಂಧಿಸಿದ ಪ್ರದೇಶವಾದ ವೆಂಟ್ರೊಮೀಡಿಯಲ್ ಹೈಪೋಥಲಮಸ್ (VMH)ನ ನ್ಯೂರಾನ್ಗಳಲ್ಲಿ ಈ ಕುಸಿತವು ನಿರ್ದಿಷ್ಟವಾಗಿ ಸಂಭವಿಸಿದೆ. ಗಮನಾರ್ಹ ಅಂಶವೆಂದರೆ, ಸಮೀಪದ ಬೆಂಬಲ ಕೋಶಗಳಾದ ಆಸ್ಟ್ರೋಸೈಟ್ಗಳು ಅಥವಾ ಮೈಕ್ರೋಗ್ಲಿಯಾಗಳಲ್ಲಿ ಮೆನಿನ್ ಮಟ್ಟಗಳು ಗಮನಾರ್ಹವಾಗಿ ಕಡಿಮೆಯಾಗಿರಲಿಲ್ಲ.

ಕುಸಿತದ ಅರ್ಥವೇನೆಂದು ತನಿಖೆ ಮಾಡಲು ಸಂಶೋಧಕರು ಇಲಿಯಲ್ಲಿ ಮೆನಿನ್ ಮಟ್ಟವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆಗೊಳಿಸಿದರು. ಆಗ ಗಮನಾರ್ಹ ಪರಿಣಾಮಗಳು ಕಂಡುಬಂದಿದ್ದವು. ಮೆನಿನ್ ಮಟ್ಟ ಕಡಿಮೆ ಹೊಂದಿರುವ ಕಿರಿಯ ವಯಸ್ಸಿನ ಇಲಿಗಳು ಹೆಚ್ಚಿನ ಮೆದುಳಿನ ಉರಿಯೂತ, ಚರ್ಮ ತೆಳುವಾಗುವುದು, ಮೂಳೆ ದ್ರವ್ಯರಾಶಿ ಕಡಿಮೆ, ಸಮತೋಲನದ ಕೊರತೆ, ಸ್ಮರಣೆಯ ಸಮಸ್ಯೆ ಮತ್ತು ಸಾಮಾನ್ಯ ಇಲಿಗಳಿಗೆ ಹೋಲಿಸಿದರೆ ಕಡಿಮೆ ಜೀವಿತಾವಧಿಯನ್ನು ಹೊಂದಿದ್ದವು. ಈ ಫಲಿತಾಂಶಗಳು ಮೆನಿನ್ ಮೆದುಳಿನ ಒಳಗೆ ರಕ್ಷಣಾತ್ಮಕ ‘ಮುಪ್ಪಾಗುವಿಕೆ ವಿರೋಧಿ’ ಅಂಶವಾಗಿ ಕೆಲಸ ಮಾಡಬಹುದು ಎಂದು ಸೂಚಿಸುತ್ತವೆ.

ಅತ್ಯಂತ ಅಚ್ಚರಿಯ ಆವಿಷ್ಕಾರಗಳಲ್ಲಿ ಒಂದಾಗಿತ್ತು ಡಿ-ಸೆರಿನ್! ಡಿ-ಸೆರಿನ್ ಎನ್ನುವುದು ಮೆದುಳಿನಲ್ಲಿ ನ್ಯೂರೋಟ್ರಾನ್ಸ್ಮಿಟರ್ ಆಗಿ ಕಾರ್ಯನಿರ್ವಹಿಸುವ ಒಂದು ಅಮಿನೋ ಆಮ್ಲವಾಗಿದೆ. ಡಿ-ಸೆರಿನ್ ನ್ಯೂರಾನ್ಗಳ ನಡುವಿನ ಸಂವಹನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಕಲಿಕೆ ಮತ್ತು ಸ್ಮರಣೆಗೆ ಮುಖ್ಯವಾಗಿದೆ. ಮೆನಿನ್ ಮಟ್ಟಗಳು ಕಡಿಮೆಯಾದಾಗ ಡಿ-ಸೆರಿನ್ ಉತ್ಪಾದನೆಯೂ ಕುಸಿಯಿತು. ಈ ಬಗ್ಗೆ ಸಂಶೋಧನೆ ನಡೆಸಿದ ಅಧ್ಯಯನಕಾರರು ಡಿ-ಸೆರಿನ್ ಸಿಂಥೆಸಿಸ್ಗೆ ಅಗತ್ಯವಾದ ಕಿಣ್ವದ ಚಟುವಟಿಕೆ ಕಡಿಮೆಯಾಗಿರುವುದು ಕಂಡುಕೊಂಡರು. ಡಿ-ಸೆರಿನ್ ಸಾಮಾನ್ಯವಾಗಿ ಸೋಯಾಬೀನ್, ಮೊಟ್ಟೆ, ಮೀನು ಮತ್ತು ಕಡಲೆಗಳಿಂದ ದೊರೆಯುತ್ತದೆ. ಅದನ್ನು ಆಹಾರದ ಪೂರಕ ಔಷಧಿಯಾಗಿಯೂ ನೀಡಲಾಗುತ್ತದೆ.

ಈಗಾಗಲೇ ಇತರ ಅಧ್ಯಯನಗಳು ಡಿ-ಸೆರಿನ್ ಮಟ್ಟ ಕಡಿಮೆಯಾಗುವುದು ಮತ್ತು ಮುಪ್ಪಾಗುವಿಕೆಗೆ ಸಂಬಂಧಿಸಿದ ಅರಿವಿನ ದೌರ್ಬಲ್ಯದ ನಡುವೆ ಸಂಬಂಧವಿದೆ ಎಂದು ಕಂಡುಕೊಂಡಿರುವುದರಿಂದ ಡಿ-ಸೆರಿನ್ ಸಂಬಂಧ ಸಂಶೋಧಕರ ಗಮನ ಸೆಳೆದಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News