ಕೇತನ್ ಕೊಲೆ ಪ್ರಕರಣದ ಬಳಿಕ ಸುದ್ದಿಯಲ್ಲಿರುವ ಲೋಹಗಢ ಕೋಟೆ; ಇದರ ಬಗ್ಗೆ ಗೊತ್ತೇ?
Screengrab : Liam Richards \ facebook
ಮಹಾರಾಷ್ಟ್ರದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಸಾವನ್ನಪ್ಪಿರುವ ಪ್ರಕರಣ ಭಾರೀ ತಿರುವು ಪಡೆದುಕೊಂಡಿದ್ದು, ಮೃತನ ಭಾವಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಪುಣೆಯ ಗಹುಂಜೆ ನಿವಾಸಿ 26 ವರ್ಷದ ಕೇತನ್ ಅಗರ್ವಾಲ್ ಅವರ ಶವ ಜೂನ್ 18ರಂದು ಲೋಹಗಢ ಕೋಟೆಯ ಸಮೀಪದ ಕಂದಕದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದನ್ನು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಘಟನೆ ಎಂದೇ ನಂಬಲಾಗಿತ್ತು. ನಂತರದ ತನಿಖೆಯಲ್ಲಿ ಇದು ಕೊಲೆ ಎಂಬುದು ಬೆಳಕಿಗೆ ಬಂದಿದೆ.
ಈ ಒಟ್ಟು ಪ್ರಕರಣದ ಕೇಂದ್ರಬಿಂದುವಾಗಿರುವ ಲೋಹಗಢ ಕೋಟೆಯ ಬಗ್ಗೆ ನಿಮಗೆ ಗೊತ್ತೆ?
ಲೋಹಗಢ ಕೋಟೆ ಎಂದರೆ ಮರಾಠಿಯಲ್ಲಿ ‘ಕಬ್ಬಿಣದ ಕೋಟೆ’ ಎಂದು ಅರ್ಥ ಬರುತ್ತದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲ ಸಮೀಪ ಇರುವ ಬೆಟ್ಟದ ಕೋಟೆಯಾಗಿದ್ದು, 1,033 ಮೀಟರ್ ಎತ್ತರದಲ್ಲಿದೆ. ಯುನೆಸ್ಕೊ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಮರಾಠಾ ಕೋಟೆಯಾಗಿರುವ ಇದಕ್ಕೆ ನಾಲ್ಕು ದೊಡ್ಡ ದ್ವಾರಗಳಿವೆ. ಈ ಕೋಟೆಗೆ ಚಾರಣಕ್ಕೆ ಹೋದ ಸಂದರ್ಭದಲ್ಲಿ ಕೇತನ್ ಅಗರ್ವಾಲ್ ಕೊಲೆಯಾಗಿದ್ದಾರೆ. ಆ ಚಾರಣ ಹೇಗಿರುತ್ತದೆ?
ಸಹ್ಯಾದ್ರಿ ಶ್ರೇಣಿಗಳ ಮೇಲಿನ ಆಯಕಟ್ಟಿನ ಸ್ಥಳದಲ್ಲಿರುವ ಲೋಹಗಢ ಕೋಟೆಯು ಲೋನಾವಾಲದ ಚಾರಣಗಳಲ್ಲಿ ಅತ್ಯಂತ ಸುಲಭ ಮತ್ತು ಪ್ರಮುಖ ಪ್ರವಾಸಿ ತಾಣವಾಗಿದೆ. ಪಾರ್ಕಿಂಗ್ ಪ್ರದೇಶದಿಂದ ಮೇಲಕ್ಕೆ ತಲುಪುವವರೆಗೆ ಸರಿಯಾದ ಕಲ್ಲಿನ ಮೆಟ್ಟಿಲುಗಳಿದ್ದು, ಕುಟುಂಬಗಳು ಸಹ ಅದನ್ನು ಹತ್ತಲು ಸುಲಭವಾಗುತ್ತದೆ. ಮೇಲ್ಭಾಗ ತಲುಪಿದ ನಂತರ ಇಡೀ ಕೋಟೆಯು ಸಮತಟ್ಟಾದ ಪ್ರಸ್ಥಭೂಮಿಯಾಗಿದ್ದು, ಸುತ್ತಾಡಲು ತುಂಬಾ ಸುಲಭ. ಕೋಟೆಯ ಭಾಗವಾಗಿರುವ ಮಿಂಚುಕಾಡಕ್ಕೆ ಹೋಗುವ ಮಾರ್ಗ ಮಾತ್ರ ಬಹಳ ಕಷ್ಟಕರ. ಅಲ್ಲಿಗೆ ಇಳಿಯುವಾಗ ಕಲ್ಲಿನ ಮಾರ್ಗವಿದ್ದು, ಮಳೆಗಾಲದಲ್ಲಿ ಜಾರಬಹುದು. ಆದರೆ ಸಹ-ಚಾರಣಿಗರ ಸಹಾಯದಿಂದ ಸುಲಭವಾಗಿ ಸಾಗಬಹುದು.
ಲೋಹಗಢ ಕೋಟೆ ಚಾರಣಕ್ಕೆ ಎಷ್ಟು ಸಮಯ ಬೇಕು?
ಪಾರ್ಕಿಂಗ್ ಸ್ಥಳದಿಂದ ಮೇಲಕ್ಕೆ ಹೋಗಲು ಸುಮಾರು 300 ಮೆಟ್ಟಿಲುಗಳಿವೆ. ನಿಮ್ಮ ಫಿಟ್‌ನೆಸ್‌ಗೆ ಅನುಗುಣವಾಗಿ 15–30 ನಿಮಿಷಗಳಲ್ಲಿ ಸಾಗಬಹುದು. ಜೊತೆಗೆ ಪ್ರತಿ ಪ್ರವೇಶ ದ್ವಾರದಲ್ಲೂ ಫೋಟೊಗಳಿಗೆ ಪೋಸ್ ನೀಡಬಹುದು. ಏಕೆಂದರೆ ಲೋಹಗಢ ಮಹಾರಾಷ್ಟ್ರದ ಅತ್ಯುತ್ತಮವಾಗಿ ಸಂರಕ್ಷಿತ ಕೋಟೆಗಳಲ್ಲಿ ಒಂದಾಗಿದೆ. ಮೇಲ್ಭಾಗ ತಲುಪಲು ಸುಮಾರು 45 ನಿಮಿಷಗಳು ಬೇಕಾಗಬಹುದು. ಇಡೀ ಕೋಟೆಯನ್ನು 90 ನಿಮಿಷಗಳಲ್ಲಿ ಸುತ್ತಬಹುದು. ಫೋಟೊ ತೆಗೆಯಲು ಇನ್ನೂ 30 ನಿಮಿಷ ಸೇರಿಸಿಕೊಳ್ಳಿ. ಇದು ಸಣ್ಣ ಚಾರಣವಾಗಿರುವುದರಿಂದ ಅನೇಕ ಮಂದಿ ಚಾರಣದ ಸಂಪೂರ್ಣ ಅನುಭವಕ್ಕಾಗಿ ವಿಸಾಪುರ ಕೋಟೆಯೊಂದಿಗೆ ಇದನ್ನು ಸಂಯೋಜಿಸುತ್ತಾರೆ.
ಲೋಹಗಢ ಕೋಟೆ ಚಾರಣಕ್ಕೆ ಉತ್ತಮ ಸಮಯ ಯಾವುದು?
ವರ್ಷದ ಯಾವುದೇ ಸಮಯದಲ್ಲಿ ಇಲ್ಲಿಗೆ ಹೋಗಬಹುದು. ಆದರೆ ಬೇಸಿಗೆಯಲ್ಲಿ ವಿಪರೀತ ಬಿಸಿಲಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲ ಹಾಗೂ ಚಳಿಗಾಲದ ಆರಂಭದ ಅವಧಿ ಚಾರಣಕ್ಕೆ ಉತ್ತಮ ಸಮಯವಾಗಿದೆ.
ಲೋಹಗಢ ಕೋಟೆಯ ಇತಿಹಾಸವೇನು?
ಸುಮಾರು 2,000 ವರ್ಷಗಳ ಇತಿಹಾಸವಿರುವ ಲೋಹಗಢ ಕೋಟೆಗೆ ಆರಂಭಿಕ ಅಡಿಪಾಯ ಹಾಕಿರುವುದು ಶಾತವಾಹನರು ಎನ್ನಲಾಗುತ್ತದೆ. ಆದರೂ ಇತಿಹಾಸಕಾರರ ಪ್ರಕಾರ, ಈ ಕೋಟೆಯ ನಿರ್ಮಾಣ 10ನೇ ಶತಮಾನದಿಂದ 14ನೇ ಶತಮಾನದ ನಡುವಿನ ಅವಧಿಯಲ್ಲಿ ನಡೆದಿದ್ದು, ಹಲವು ರಾಜವಂಶಗಳು ಮತ್ತು ಆಡಳಿತಗಾರರು ಹಂತ ಹಂತವಾಗಿ ಇದರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.
ವಿಕಿಪೀಡಿಯ ಪ್ರಕಾರ, ಲೋಹಗಢವು ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಬಹಮನಿಗಳು, ನಿಜಾಮರು, ಮೊಘಲರು ಹಾಗೂ ಮರಾಠರ ಆಡಳಿತಕ್ಕೆ ಒಳಪಟ್ಟಿದ್ದು, ಅನೇಕ ಬಾರಿ ಮಾಲೀಕತ್ವ ಬದಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು 1648ರಲ್ಲಿ ಕೋಟೆಯನ್ನು ವಶಪಡಿಸಿಕೊಂಡರು. ಬಳಿಕ 1665ರಲ್ಲಿ ಮೊಘಲರು ಕೋಟೆಯನ್ನು ತಮ್ಮ ವಶಕ್ಕೆ ಪಡೆದರು. 1670ರಲ್ಲಿ ಶಿವಾಜಿ ಮಹಾರಾಜರು ಮತ್ತೆ ಕೋಟೆಯನ್ನು ಮರಳಿ ಪಡೆದು, ಸೂರತ್‌ನಿಂದ ತಂದ ಸಂಪತ್ತನ್ನು ಸಂಗ್ರಹಿಸಲು ಬಳಸಿದರು. ನಂತರ ಆಂಗ್ಲ–ಮರಾಠ ಯುದ್ಧಗಳ ಬಳಿಕ ಈ ಕೋಟೆ ಬ್ರಿಟಿಷರ ವಶಕ್ಕೆ ಸೇರಿತು. ಇಂದಿಗೂ ಪ್ರವಾಸಿಗರು ಈ ಕೋಟೆಯನ್ನು ಬೃಹತ್ ಕಲ್ಲಿನ ದ್ವಾರಗಳ ಮೂಲಕವೇ ಪ್ರವೇಶಿಸಬೇಕು.
ಚರ್ಚೆಯಾಗುತ್ತಿರುವ ಲೋಹಗಢ
ಕೇತನ್ ಮರಣದ ನಂತರ ಕೋಟೆಗೆ ಸಂಬಂಧಿಸಿದ ಕೆಲವು ವಿಸ್ಮಯಕಾರಿ ಘಟನೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಈ ಕೋಟೆ ವಿಸ್ಮಯ ಮತ್ತು ಅಲೌಕಿಕ ಶಕ್ತಿಗಳಿಂದ ಕೂಡಿದ ನಿಗೂಢ ಸ್ಥಳ ಎಂಬುದು ಸ್ಥಳೀಯರ ನಂಬಿಕೆ.
ಲೋಹಗಢ ಕೋಟೆಗೆ ನಾಲ್ಕು ದ್ವಾರಗಳಿದ್ದು, ಮೊದಲನೆಯದು ಗಣೇಶ ದ್ವಾರವಾಗಿದೆ. ಈ ದ್ವಾರದ ಹಿಂದೆ ಒಂದು ರೋಚಕ ದಂತಕಥೆಯಿದೆ. ಕೋಟೆಯ ಆಡಳಿತಾಧಿಕಾರಿಯೊಬ್ಬರು ಮರಾಠರ ಕಾಲದಲ್ಲಿ ದ್ವಾರದ ನಿರ್ಮಾಣ ಮಾಡಿಸುತ್ತಿದ್ದರು. ಆಗ ಅವರ ಕನಸಿನಲ್ಲಿ ದ್ವಾರದ ಅಡಿಪಾಯ ಅಸ್ಥಿರವಾಗಿದ್ದು, ಶಾಪಗ್ರಸ್ತವಾಗಿದೆ ಎಂದು ತಿಳಿಸಲಾಯಿತಂತೆ. ಹೀಗಾಗಿ ಅಡಿಪಾಯ ಗಟ್ಟಿಯಾಗಿರಲು ನರಬಲಿ ನೀಡುವಂತೆ ಸೂಚನೆ ದೊರಕಿತ್ತೆಂದು ಹೇಳಲಾಗುತ್ತದೆ. ಅದರಂತೆ ಒಬ್ಬ ಪುರುಷ ಮತ್ತು ಮಹಿಳೆಯನ್ನು ದ್ವಾರದ ಅಡಿಪಾಯದ ಕೆಳಗೆ ಜೀವಂತವಾಗಿ ಸಮಾಧಿ ಮಾಡಲಾಯಿತು ಎಂಬ ದಂತಕಥೆ ಇದೆ. ಆದರೆ ಇದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ. ಮತ್ತೊಂದು ಕತೆಯ ಪ್ರಕಾರ, ಗಣೇಶ ದ್ವಾರದ ಸ್ಥಳವು ಸವಲೆ ಕುಟುಂಬದ ಸದಸ್ಯರ ತ್ಯಾಗದ ಸಂಕೇತವಾಗಿದೆ.
ಅಲೌಕಿಕ ಶಕ್ತಿಗಳ ತಾಣವೇ?
ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ ವೇಳೆ ಕೆಲವು ವಿಸ್ಮಯಕಾರಿ ಘಟನೆಗಳನ್ನು ಅನುಭವಿಸಿದ್ದಾಗಿ ಉಲ್ಲೇಖಿಸಿದ್ದಾರೆ. ಲೋಹಗಢ ಕೋಟೆಯಲ್ಲಿ ಹಲವು ರಹಸ್ಯ ಸುರಂಗಗಳಿವೆ ಎಂದು ಹೇಳಲಾಗುತ್ತದೆ. ಅದನ್ನು ಹೊರತುಪಡಿಸಿದರೆ, ಈ ಕೋಟೆ ಚೇಳಿನ ಬಾಲದ ಆಕಾರದಲ್ಲಿದ್ದು, ಇಂದಿಗೂ ಚೇಳುಗಳು ಕೋಟೆಯಲ್ಲಿ ಅಡಗಿಸಿರುವ ನಿಧಿಯನ್ನು ಕಾಯುತ್ತಿವೆ ಎಂಬ ನಂಬಿಕೆಯೂ ಇದೆ.
ಕೋಟೆಯಿಂದ ವಾಯುವ್ಯ ದಿಕ್ಕಿಗೆ ವಿಸ್ತರಿಸಿರುವ ಉದ್ದವಾದ, ಕಿರಿದಾದ ದಾರಿಯು ಈ ಊಹಾಪೋಹಗಳಿಗೆ ಕಾರಣವಾಗಿದೆ. ಇದರ ನಾಲ್ಕು ದೊಡ್ಡ ದ್ವಾರಗಳು ಇಂದಿಗೂ ಗಮನಾರ್ಹವಾಗಿ ಹಾಗೆಯೇ ಉಳಿದಿವೆ. ಕೋಟೆಯು ಭಾರತದ ಪುರಾತತ್ವ ಸಮೀಕ್ಷೆ (ಎಎಸ್‌ಐ)ಯ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ. ಒಟ್ಟಿನಲ್ಲಿ, ಲೋಹಗಢ ಕೇವಲ ಒಂದು ಕೋಟೆಯಲ್ಲ; ಬದಲಾಗಿ ರಹಸ್ಯ, ನಿಗೂಢತೆ ಮತ್ತು ಇತಿಹಾಸವನ್ನು ತನ್ನೊಳಗೆ ಬಚ್ಚಿಟ್ಟಿರುವ ತಾಣವಾಗಿದೆ.