×
Ad

ಕೇಂದ್ರ ಸರ್ಕಾರ ಮರುನೇಮಕ ಮಾಡಿದ ಐವರು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಗಳು ಯಾರು?

Update: 2026-06-24 21:40 IST

Photo Credit : theprint.in

ಈ ವರ್ಷದ ಜುಲೈ 1ರಿಂದ ಜಾರಿಗೆ ಬರುವಂತೆ, ಮುಂದಿನ ಮೂರು ವರ್ಷಗಳ ಅವಧಿಗೆ ಸುಪ್ರೀಂ ಕೋರ್ಟ್‌ಗೆ ಭಾರತದ ಸಾಲಿಸಿಟರ್ ಜನರಲ್ ಅವರನ್ನು ಮರುನೇಮಕ ಮಾಡಿ ಕೇಂದ್ರ ಸರ್ಕಾರವು ಈ ವಾರ ಆದೇಶ ಹೊರಡಿಸಿದೆ.

ಕ್ಯಾಬಿನೆಟ್‌ನ ನೇಮಕಾತಿ ಸಮಿತಿ (ACC) ಅನುಮೋದನೆ ನೀಡಿದ ನಂತರ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. ಈ ಸಮಿತಿಯು ಮೂಲಭೂತವಾಗಿ ಕೇಂದ್ರ ಸರ್ಕಾರದೊಳಗಿನ ಉನ್ನತ ಮಟ್ಟದ ಸಮಿತಿಯಾಗಿದ್ದು, ಸರ್ಕಾರದ ಪ್ರಮುಖ ಹುದ್ದೆಗಳಿಗೆ ಅಥವಾ ಸಾರ್ವಜನಿಕ ವಲಯದ ಉದ್ಯಮಗಳಿಗೆ ಹಿರಿಯ ಅಧಿಕಾರಿಗಳನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಭಾರತದ ಪ್ರಧಾನ ಮಂತ್ರಿಗಳು ಇದರ ಅಧ್ಯಕ್ಷರಾಗಿದ್ದು, ಗೃಹ ಸಚಿವರು ಇದರ ಸದಸ್ಯರಾಗಿರುತ್ತಾರೆ.

ಅಟಾರ್ನಿ ಜನರಲ್ ಅವರ ನಂತರ ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯ ನೇಮಕಾತಿಯನ್ನು ಅಧಿಸೂಚಿಸುವುದರ ಜೊತೆಗೆ, ಸುಪ್ರೀಂ ಕೋರ್ಟ್‌ಗಾಗಿ ಇನ್ನೂ ಐದು ಜನರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಹುದ್ದೆಗೆ ಮರುನೇಮಕ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

ಎಎಸ್‌ಜಿಗಳು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಕೇಂದ್ರ ಸರ್ಕಾರದ ದಿನನಿತ್ಯದ ಮೊಕದ್ದಮೆಗಳನ್ನು ಪ್ರತಿನಿಧಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಸಾಲಿಸಿಟರ್ ಜನರಲ್‌ಗೆ ಸಹಾಯ ಮಾಡುತ್ತಾರೆ. ಸುಪ್ರೀಂ ಕೋರ್ಟ್ ಮತ್ತು ನಿರ್ದಿಷ್ಟ ಹೈಕೋರ್ಟ್‌ಗಳಿಗಾಗಿ ಪ್ರತ್ಯೇಕ ಎಎಸ್‌ಜಿಗಳನ್ನು ನಿಯೋಜಿಸಲಾಗಿರುತ್ತದೆ.

ಕೇಂದ್ರ ಸರ್ಕಾರದಿಂದ 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಹೊಸದಾಗಿ ಮೂರು ವರ್ಷಗಳ ಅವಧಿಗೆ ಮರುನೇಮಕಗೊಂಡ ಐದು ಜನ ಎಎಸ್‌ಜಿಗಳಲ್ಲಿ ವಿಕ್ರಮಜಿತ್ ಬ್ಯಾನರ್ಜಿ, ಕೆ.ಎಂ. ನಟರಾಜ್, ಸೂರ್ಯಪ್ರಕಾಶ್ ವಿ. ರಾಜು, ಐಶ್ವರ್ಯ ಭಾಟಿ ಮತ್ತು ಎನ್. ವೆಂಕಟರಾಮನ್ ಸೇರಿದ್ದಾರೆ.

‘the print’ ಜೊತೆ ಮಾತನಾಡಿದ ಎಎಸ್‌ಜಿ ವಿಕ್ರಮಜಿತ್ ಬ್ಯಾನರ್ಜಿ ಅವರು, “ನಮಗೆ ಎಲ್ಲಾ ಪ್ರಕರಣಗಳೂ ಒಂದೇ. ಆದರೆ, ನಾವು ಪ್ರತಿಯೊಂದು ಪ್ರಕರಣದಲ್ಲೂ ನಮ್ಮ ಅತ್ಯುತ್ತಮ ಶ್ರಮವನ್ನು ಹಾಕಲು ಪ್ರಯತ್ನಿಸುತ್ತೇವೆ” ಎಂದು ಹೇಳಿದ್ದಾರೆ. ಬ್ಯಾನರ್ಜಿ ಅವರು ಆರಂಭದಲ್ಲಿ ಮಾರ್ಚ್ 2018ರಲ್ಲಿ ಎಎಸ್‌ಜಿ ಆಗಿ ನೇಮಕಗೊಂಡಿದ್ದರು. ಈ ವರ್ಷ ಅವರು ಸತತ ಮೂರನೇ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ.

ಕೇಂದ್ರದಿಂದ ಮರುನೇಮಕಗೊಂಡಿರುವ ಈ ಐದು ಜನ ಎಎಸ್‌ಜಿಗಳ ಪ್ರಮುಖ ಸಾಧನೆಗಳು, ಪ್ರಕರಣಗಳು ಮತ್ತು ಅವರ ಹಿನ್ನೆಲೆ ಬಗ್ಗೆ ‘ದಿ ಪ್ರಿಂಟ್’ ಪ್ರಕಟಿಸಿರುವ ವರದಿ ಇಲ್ಲಿದೆ.

ವಿಕ್ರಮಜಿತ್ ಬ್ಯಾನರ್ಜಿ

ಆರಂಭದಲ್ಲಿ 2018ರ ಮಾರ್ಚ್ 5ರಂದು ಕೇಂದ್ರ ಸರ್ಕಾರದಿಂದ ಮೂರು ವರ್ಷಗಳ ಅವಧಿಗೆ ಸುಪ್ರೀಂ ಕೋರ್ಟ್‌ಗೆ ಎಎಸ್‌ಜಿ ಆಗಿ ನೇಮಕಗೊಂಡಿದ್ದ ಬ್ಯಾನರ್ಜಿ ಅವರನ್ನು, 2023ರ ಜುಲೈ 1ರಂದು ಎರಡನೇ ಅವಧಿಗೆ ಮರುನೇಮಕ ಮಾಡಲಾಗಿತ್ತು. ಬ್ಯಾನರ್ಜಿ ಅವರ ಮೂರನೇ ಅವಧಿಯ ನೇಮಕಾತಿಯು 2029ರವರೆಗೆ ಇರಲಿದೆ.

ಭಾರತದ ಎಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಕಾನೂನು ರಂಗದಲ್ಲಿ ಉತ್ತಮ ಅವಕಾಶಗಳನ್ನು ಉತ್ತೇಜಿಸುವ ಸಂಸ್ಥೆಯಾದ ‘ಕಾನ್ಫೆಡರೇಶನ್ ಆಫ್ ಅಲುಮ್ನಿ ಫಾರ್ ನ್ಯಾಷನಲ್ ಲಾ ಯೂನಿವರ್ಸಿಟೀಸ್’ (CAN Foundation) ವೆಬ್‌ಸೈಟ್ ಪ್ರಕಾರ, ಬ್ಯಾನರ್ಜಿ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡ ಮೊದಲ ಎನ್‌ಎಲ್‌ಯು ಪದವೀಧರರಾಗಿದ್ದಾರೆ.

1997ರಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಬೆಂಗಳೂರು)ಯಿಂದ ಪದವಿ ಪಡೆದ ಮೂರು ವರ್ಷಗಳ ನಂತರ, ಬ್ಯಾನರ್ಜಿ ಅವರು 2000ರಲ್ಲಿ ಲೀಸೆಸ್ಟರ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಪದವಿ ಪಡೆದರು. ತಮ್ಮ ವಕೀಲ ವೃತ್ತಿಯ ಆರಂಭದ ವರ್ಷಗಳಲ್ಲಿ, ಅವರು ‘ದಿ ಸ್ಟೇಟ್ಸ್‌ಮನ್ ಲಿಮಿಟೆಡ್’ ಸಂಸ್ಥೆಯಿಂದ ವಜಾಗೊಳಿಸಲ್ಪಟ್ಟ ನೌಕರರ ಪರವಾಗಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಇದು 1947ರ ಕೈಗಾರಿಕಾ ವಿವಾದಗಳ ಕಾಯ್ದೆಗೆ ಸಂಬಂಧಿಸಿದ ಪ್ರಕರಣವಾಗಿತ್ತು. ಈ ಪ್ರಕರಣದ 2006ರ ತೀರ್ಪಿನಲ್ಲಿ, ಕಂಪನಿಯು ತನ್ನ ಕಾರ್ಮಿಕರನ್ನು ವಜಾಗೊಳಿಸುವ ಮೊದಲು ಅವರ ವಿರುದ್ಧ ಆಂತರಿಕ ವಿಚಾರಣೆ ನಡೆಸಿರಲಿಲ್ಲ ಎಂದು ನ್ಯಾಯಾಲಯವು ಹೇಳಿತ್ತು.

ಸುಮಾರು ಎಂಟು ವರ್ಷಗಳ ನಂತರ, ಅವರು ಇ.ಡಿ. ಅಂಬಾಚರನ್ ವಶಿಷ್ಠ ಮತ್ತು ಡಾ. ಅನಿರ್ಬನ್ ಗಂಗೂಲಿ ಅವರೊಂದಿಗೆ ಸಹ-ಸಂಪಾದಕರಾಗಿ 2008ರಲ್ಲಿ ‘The Truth About Teesta Setalvad’ ಎಂಬ ಪುಸ್ತಕವನ್ನು ಪ್ರಕಟಿಸಿದರು.

ಪುಸ್ತಕದ ವಿವರಣೆಯ ಪ್ರಕಾರ, ಇದು “ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದ ಕೊಡುಗೆಗಾಗಿ ಯುಪಿಎ ಸರ್ಕಾರದಿಂದ ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪಡೆದ ವ್ಯಕ್ತಿಯೊಬ್ಬರ ಚಟುವಟಿಕೆಗಳನ್ನು ಬಯಲಿಗೆಳೆಯುತ್ತದೆ”. ದೇಶದ ಗೌರವ ಮತ್ತು ಯೋಗಕ್ಷೇಮಕ್ಕಾಗಿ ಕೆಲಸ ಮಾಡುವ ಬದಲು, ಸೆತಲ್ವಾಡ್ ಅವರು “ದೇಶದ ಕಾನೂನುಗಳನ್ನು ದುರ್ಬಲಗೊಳಿಸಲು ಮತ್ತು ವಿದೇಶಿ ನೆಲದಲ್ಲಿ ನಮ್ಮ ಅತ್ಯಂತ ಗೌರವಾನ್ವಿತ, ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಕೀಳಾಗಿ ಬಿಂಬಿಸಲು ಕೆಲಸ ಮಾಡಿದಂತೆ ತೋರುತ್ತದೆ” ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

2015ರ ಜೂನ್‌ನಲ್ಲಿ ಬ್ಯಾನರ್ಜಿ ಅವರು ನಾಗಾಲ್ಯಾಂಡ್‌ನ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು. ಅದಾಗಿ ಕೇವಲ ಒಂದು ವರ್ಷದ ನಂತರ ಅವರಿಗೆ ಗುವಾಹಟಿ ಹೈಕೋರ್ಟ್ ಹಿರಿಯ ವಕೀಲ (Senior Advocate) ಸ್ಥಾನಮಾನವನ್ನು ನೀಡಿತು. ಹಿರಿಯ ವಕೀಲರಾಗುವ ಮೊದಲು, ಬ್ಯಾನರ್ಜಿ ಅವರು ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿ.ಆರ್. ರೆಡ್ಡಿ ಮತ್ತು ಪಶ್ಚಿಮ ಬಂಗಾಳದ ಮಾಜಿ ಅಡ್ವೊಕೇಟ್ ಜನರಲ್ ಜಯಂತ ಮಿತ್ರ ಅವರ ಬಳಿ ಕಿರಿಯ ವಕೀಲರಾಗಿ ಕೆಲಸ ಮಾಡಿದ್ದರು.

ಇದರ ಹೊರತಾಗಿ, ಅವರು ಕೋಲ್ಕತ್ತಾದ ವೆಸ್ಟ್ ಬೆಂಗಾಲ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಜುಡಿಷಿಯಲ್ ಸೈನ್ಸಸ್‌ನಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾನೂನು ವೆಬ್‌ಸೈಟ್ ‘SCC Online’ಗೆ 2022ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಬ್ಯಾನರ್ಜಿ ಅವರು, ಕಾನೂನು ಕ್ಷೇತ್ರದಲ್ಲಿ ದಿವಂಗತ ವಕೀಲರಾದ ಶಾಂತಿ ಭೂಷಣ್ ಮತ್ತು ಫಾಲಿ ನಾರಿಮನ್ ಹಾಗೂ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ತಮ್ಮ ಮೇಲೆ ಪ್ರಮುಖ ಪ್ರಭಾವ ಬೀರಿದ್ದಾರೆ ಎಂದು ಹೇಳಿದ್ದರು.

ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಲವು ಪ್ರಮುಖ ಪ್ರಕರಣಗಳನ್ನು ಪ್ರತಿನಿಧಿಸಿದ್ದಾರೆ. ಉದಾಹರಣೆಗೆ, 2024ರ ಫೆಬ್ರುವರಿಯಲ್ಲಿ ದೆಹಲಿ ಹೈಕೋರ್ಟ್‌ಗೆ ಮಂಜೂರಾಗಿದ್ದ ರೌಸ್ ಅವೆನ್ಯೂ ನ್ಯಾಯಾಲಯದ ಆವರಣದ ಜಾಗದಲ್ಲಿ ತನ್ನ ಕಚೇರಿಯನ್ನು ನಿರ್ಮಿಸುವ ಮೂಲಕ ಸಾರ್ವಜನಿಕ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಒತ್ತುವರಿಯನ್ನು ತೆರವುಗೊಳಿಸಲು ಸೂಕ್ತ ಕಾಲಮಿತಿಯನ್ನು ನೀಡುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿತ್ತು.

ಇವರು ನ್ಯಾಯಾಲಯ ನಿಂದನೆ ಕಾಯ್ದೆಯಡಿಯ ಪ್ರಮುಖ ಪ್ರಕರಣಗಳಲ್ಲೂ ಕೆಲಸ ಮಾಡಿದ್ದಾರೆ. ಉದಾಹರಣೆಗೆ, 2022ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಬಂದ ಪ್ರಕರಣವೊಂದರಲ್ಲಿ, ವಕೀಲ ಮಹಮೂದ್ ಪ್ರಾಚಾ ಅವರು ತಮಗೆ ನ್ಯಾಯಾಲಯ ನಿಂದನೆ ಆರೋಪದಲ್ಲಿ ದೋಷಿ ಎಂದು ತೀರ್ಪು ನೀಡಿದ್ದ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ (CAT) ಆದೇಶವನ್ನು ಪ್ರಶ್ನಿಸಿದ್ದರು. ಆದರೆ, ಟ್ರಿಬ್ಯೂನಲ್‌ನಿಂದ ಯಾವುದೇ ಸೂಕ್ತ ವಿಚಾರಣೆ ನಡೆದಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಪ್ರಾಚಾ ವಿರುದ್ಧದ CAT ಆದೇಶವನ್ನು ವಜಾಗೊಳಿಸಿತ್ತು.

ಐಶ್ವರ್ಯ ಭಾಟಿ

ಆರಂಭದಲ್ಲಿ 2020ರ ಜೂನ್ 30ರಂದು ಕೇಂದ್ರ ಸರ್ಕಾರದಿಂದ ಎಎಸ್‌ಜಿ ಹುದ್ದೆಗೆ ನೇಮಕಗೊಂಡಿದ್ದ ಭಾಟಿ ಅವರು, ಈ ಬಾರಿಯೂ ಸತತ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಭಾಟಿ ಅವರ ಈ ನೇಮಕಾತಿಯು ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಇರಲಿದೆ.

ಕಾನೂನು ವೃತ್ತಿಯಲ್ಲಿ 22 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಭಾಟಿ ಅವರು, ಎಎಸ್‌ಜಿ ಆಗಿ ನೇಮಕಗೊಳ್ಳುವ ಮುನ್ನ 2017ರಿಂದ 2020ರವರೆಗೆ ಮೂರು ವರ್ಷಗಳ ಕಾಲ ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ (AAG) ಆಗಿ ಸೇವೆ ಸಲ್ಲಿಸಿದ್ದರು.

ಭಾಟಿ ಅವರು ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಸಮಿತಿಯ ಪ್ಯಾನಲ್ ವಕೀಲರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ, ಕಲ್ಕಾಜಿ ದೇವಾಲಯದ ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದ ಪ್ರಕರಣ ಸೇರಿದಂತೆ ಸುಪ್ರೀಂ ಕೋರ್ಟ್‌ನ ಹಲವು ಪ್ರಮುಖ ಪ್ರಕರಣಗಳಲ್ಲಿ Amicus Curiae ಆಗಿ ಕಾರ್ಯನಿರ್ವಹಿಸಿದ್ದಾರೆ.

2023ರ ಆಗಸ್ಟ್‌ನಲ್ಲಿ ಅವರು ಕಾಮನ್‌ವೆಲ್ತ್ ಮಿಲಿಟರಿ ಜಸ್ಟಿಸ್ ಸಂಸ್ಥೆಯ ಸದಸ್ಯರಾಗಿ ನೇಮಕಗೊಂಡಿದ್ದರು. ಈ ಗುಂಪಿನ ಭಾಗವಾದ “ಎರಡನೇ ಭಾರತೀಯರು” ಇವರಾಗಿದ್ದಾರೆ ಎಂದು ‘the print’ ವರದಿ ಮಾಡಿತ್ತು. ಅವರು ಈ ಹಿಂದೆ ಮಿಲಿಟರಿ ಸಂಬಂಧಿತ ವಿಷಯಗಳ ಮೇಲೂ ಕೆಲಸ ಮಾಡಿದ್ದಾರೆ ಮತ್ತು ರಕ್ಷಣಾ ಸೇವೆಗಳ ಮಹಿಳಾ ಅಧಿಕಾರಿಗಳಿಗೆ ಖಾಯಂ ಕಮಿಷನ್ ನೀಡಲು ಅನುಮತಿ ನೀಡಿದ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು.

ಇದಲ್ಲದೆ, ಅವರು ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು, ಅಂಗವಿಕಲ ಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ತಂಬಾಕು ವಿರೋಧಿ ಮೊಕದ್ದಮೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. 2019ರಲ್ಲಿ ಸುಪ್ರೀಂ ಕೋರ್ಟ್ ಇವರಿಗೆ ‘ಹಿರಿಯ ವಕೀಲ’ ಸ್ಥಾನಮಾನವನ್ನು ನೀಡಿತು.

ಜೋಧ್‌ಪುರದ ಜೆಎನ್‌ವಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಚಿನ್ನದ ಪದಕದೊಂದಿಗೆ ಕಾನೂನು ಪದವಿ ಪಡೆದ ಭಾಟಿ ಅವರು, ಹಿರಿಯ ವಕೀಲರಾಗಿ ಆಯ್ಕೆಯಾಗುವುದಕ್ಕೂ ಸುಮಾರು 13 ವರ್ಷಗಳ ಮುಂಚೆಯೇ ಸುಪ್ರೀಂ ಕೋರ್ಟ್‌ನಲ್ಲಿ ‘ಅಡ್ವೊಕೇಟ್-ಆನ್-ರೆಕಾರ್ಡ್’ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು.

ಸೂರ್ಯಪ್ರಕಾಶ್ ವಿ. ರಾಜು

ಆರಂಭದಲ್ಲಿ 2020ರ ಜೂನ್ 30ರಂದು ಎಎಸ್‌ಜಿ ಆಗಿ ನೇಮಕಗೊಂಡಿದ್ದ ರಾಜು ಅವರು, 2023ರ ಜೂನ್‌ನಲ್ಲಿ ಎರಡನೇ ಅವಧಿಗೆ ಮರುನೇಮಕಗೊಂಡಿದ್ದರು. ಇದೀಗ ಅವರ ಮೂರನೇ ಮರುನೇಮಕಾತಿ ನಡೆದಿದೆ.

ಇದಕ್ಕೂ ಮುನ್ನ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದರು. 2015ರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಪೊಲೀಸ್ ಅಧಿಕಾರಿಗಳ ಪರವಾಗಿ ಇವರು ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ ಅಂತಿಮವಾಗಿ 2014ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿತ್ತು.

ರಾಜು ಅವರು ಸಿಬಿಐ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪರವಾಗಿಯೂ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜು ಅವರು ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ, ನಂತರ 1973ರಲ್ಲಿ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಪದವಿ ಪಡೆದರು.

ಎಸ್.ವಿ. ರಾಜು ಅವರು ಈ ಹಿಂದೆ ಆಸಾರಾಮ್ ಬಾಪು ಅವರ ಆಶ್ರಮದಲ್ಲಿ ನಡೆದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅವರ ಪರವಾಗಿಯೂ ವಾದ ಮಂಡಿಸಿದ್ದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಹಲವು ಪ್ರಮುಖ ನಿಬಂಧನೆಗಳನ್ನು ಎತ್ತಿಹಿಡಿದ 2022ರ ಮೈಲಿಗಲ್ಲು ತೀರ್ಪಾದ ‘ವಿಜಯ್ ಮದನ್‌ಲಾಲ್ ಚೌಧರಿ’ ಪ್ರಕರಣದ ಮರುಪರಿಶೀಲನೆ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವನ್ನು (ಇಡಿ) ಪ್ರತಿನಿಧಿಸಿದ್ದಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.

ಇದರ ಹೊರತಾಗಿ, ಬಹುಪತ್ನಿತ್ವದ ಆರೋಪ ಎದುರಿಸುತ್ತಿದ್ದ ಐಎಎಸ್ ಅಧಿಕಾರಿ ಗೌರವ್ ದಹಿಯಾ ಪರವಾಗಿ ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ರಣದೀಪ್ ಸುರ್ಜೇವಾಲಾ ವಿರುದ್ಧ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ಹೂಡಿದ್ದ ಮಾನನಷ್ಟ ಮೊಕದ್ದಮೆಗಳಲ್ಲಿ ಬ್ಯಾಂಕ್ ಪರವಾಗಿಯೂ ಅವರು ವಾದಿಸಿದ್ದರು.

ಪ್ರಮುಖವಾಗಿ, ಶರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ವಿರುದ್ಧದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಪ್ರಕರಣಗಳಲ್ಲಿ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದಾರೆ.

ಎನ್. ವೆಂಕಟರಾಮನ್

ಆರಂಭದಲ್ಲಿ 2020ರ ಜೂನ್ 30ರಂದು ಎಎಸ್‌ಜಿ ಆಗಿ ನೇಮಕಗೊಂಡಿದ್ದ ಎನ್. ವೆಂಕಟರಾಮನ್ ಅವರು, 2023ರ ಜೂನ್‌ನಲ್ಲಿ ಎರಡನೇ ಅವಧಿಗೆ ಮರುನೇಮಕಗೊಂಡಿದ್ದರು. ಶನಿವಾರದ ನೇಮಕಾತಿ ಆದೇಶದೊಂದಿಗೆ, ಇದು ಅವರ ಸತತ ಮೂರನೇ ಅವಧಿಯಾಗಿದೆ.

ತೆರಿಗೆ ಮತ್ತು ವಾಣಿಜ್ಯ ಕಾನೂನು ವಿಷಯಗಳಲ್ಲಿ ಪರಿಣತಿ ಹೊಂದಿರುವ ಎಎಸ್‌ಜಿ ವೆಂಕಟರಾಮನ್ ಅವರು, ಆರ್ಬಿಟ್ರೇಷನ್ ಕಾನೂನಿಗೆ ಸಂಬಂಧಿಸಿದ ‘ಟೈಗರ್ ಗ್ಲೋಬಲ್’ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದಾರೆ. ಆ ಪ್ರಕರಣದಲ್ಲಿ, ಭಾರತ–ಮಾರಿಷಸ್ ಒಪ್ಪಂದದ ಪ್ರಯೋಜನವನ್ನು ಪಡೆಯಲು ಬಯಸುವ ತೆರಿಗೆದಾರರಿಗೆ ಉಂಟಾಗುವ ಬಂಡವಾಳ ಲಾಭದ ಪ್ರಶ್ನೆಯನ್ನು ನ್ಯಾಯಾಲಯವು ಪರಿಶೀಲಿಸಿತ್ತು.

ವೆಂಕಟರಾಮನ್ ಅವರು ತಮ್ಮ 39ನೇ ವಯಸ್ಸಿನಲ್ಲೇ ಹಿರಿಯ ವಕೀಲರಾಗಿ ನೇಮಕಗೊಂಡ ಅತ್ಯಂತ ಕಿರಿಯ ವಕೀಲರಲ್ಲಿ ಒಬ್ಬರಾಗಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ 31 ವರ್ಷಗಳಿಗೂ ಹೆಚ್ಚು ಕಾಲ ವಕೀಲ ವೃತ್ತಿ ನಡೆಸಿರುವ ಅವರು, ಬಾಂಬೆ, ಮದ್ರಾಸ್ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿಯೂ ವಾದ ಮಂಡಿಸುತ್ತಾರೆ. ಅಲ್ಲಿ ಅವರು ಸ್ಪರ್ಧಾತ್ಮಕ ಕಾನೂನು, ತೆರಿಗೆ ಕಾನೂನು ಮತ್ತು ನಿಯಂತ್ರಣಾತ್ಮಕ (Regulatory) ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

1987ರಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪೂರ್ಣಗೊಳಿಸಿದ ನಂತರ, ಜೂನ್ 2003ರ ವೇಳೆಗೆ ಅವರು ಸ್ವತಂತ್ರವಾಗಿ ವಕೀಲ ವೃತ್ತಿ ಆರಂಭಿಸಿದರು. 2006ರಲ್ಲಿ ಅವರನ್ನು ಮದ್ರಾಸ್ ಹೈಕೋರ್ಟ್ ಹಿರಿಯ ವಕೀಲರನ್ನಾಗಿ ನೇಮಿಸಿತು.

ಪ್ರಮುಖವಾಗಿ, ಎನ್. ವೆಂಕಟರಾಮನ್ ಅವರು ಶಬರಿಮಲೆ, ವಿಧಿ 370 ರದ್ದು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (CAA)ಯ ಕಾನೂನುಬದ್ಧತೆ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಅವರು ದೇಶದ 23 ಹೈಕೋರ್ಟ್‌ಗಳು ಮತ್ತು ವಿವಿಧ ಟ್ರಿಬ್ಯೂನಲ್‌ಗಳು, ಮುಂಗಡ ತೀರ್ಪು ಪ್ರಾಧಿಕಾರಗಳು ಹಾಗೂ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ (SEBI) ಮುಂದೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವುದನ್ನು ಮುಂದುವರಿಸಿದ್ದಾರೆ.

ಕೆ.ಎಂ. ನಟರಾಜ್

ಆರಂಭದಲ್ಲಿ 2019ರ ಜನವರಿ 14ರಂದು ಕೇಂದ್ರ ಸರ್ಕಾರದಿಂದ ಎಎಸ್‌ಜಿ ಆಗಿ ನೇಮಕಗೊಂಡಿದ್ದ ಇವರು, ಜುಲೈ 2023ರಲ್ಲಿ ಮತ್ತೆ ಮರುನೇಮಕಗೊಂಡರು. ಈಗ ಅವರು ಸತತ ಮೂರನೇ ಅವಧಿಗೆ ಸೇವೆ ಸಲ್ಲಿಸಲಿದ್ದು, ಈ ಅವಧಿ ಜೂನ್ 2029ರವರೆಗೆ ಇರಲಿದೆ.

2024ರಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು, ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಗಳ ಜಾಹೀರಾತುಗಳನ್ನು ನಿಯಂತ್ರಿಸುವ ಹಾಗೂ ಉತ್ಪಾದಕರು ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸುವ ‘ನಿಯಮ 170’ರ ಉಲ್ಲಂಘನೆಯಿಂದ ಆಯುರ್ವೇದ ಮತ್ತು ಯುನಾನಿ ಔಷಧಗಳಿಗೆ ವಿನಾಯಿತಿ ನೀಡಿದ್ದ ಆಯುಷ್ ಸಚಿವಾಲಯದ ಅಧಿಸೂಚನೆಗೆ ತಡೆ ನೀಡಿದಾಗ, ನಟರಾಜ್ ಅವರು ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದರು.

ನಟರಾಜ್ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲದವರಾಗಿದ್ದು, 1992ರಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು.

ಎಎಸ್‌ಜಿ ಆಗುವ ಮೊದಲು, ಅವರು ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. 2009ರಿಂದ 2013ರವರೆಗೆ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದರು. ತದನಂತರ, 2015ರಲ್ಲಿ ಅವರನ್ನು ಮೂರು ವರ್ಷಗಳ ಅವಧಿಗೆ ದಕ್ಷಿಣ ವಲಯದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಿಸಲಾಯಿತು. ಜನವರಿ 2019ರಲ್ಲಿ ಅವರು ಸುಪ್ರೀಂ ಕೋರ್ಟ್‌ನ ಎಎಸ್‌ಜಿ ಆದರು.

ಅವರು ಎಎಜಿ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕರ್ನಾಟಕ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ವಿರುದ್ಧ ನಡೆದ 2019ರ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವನ್ನು (ಈಡಿ) ಪ್ರತಿನಿಧಿಸಿದ್ದರು. 2023ರಲ್ಲಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧ ನಡೆದ ಕ್ರಿಮಿನಲ್ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಈಡಿ ಕೆ.ಎ. ರೌಫ್ ಷರೀಫ್ ಅವರನ್ನು ಬಂಧಿಸಿದ್ದ ಪ್ರಕರಣದಲ್ಲಿ ಅವರು ಇಡಿ ಪರವಾಗಿ ಹಾಜರಾಗಿದ್ದರು.

ಕೇಂದ್ರ ಸರ್ಕಾರದ ಪರ ವಕೀಲರಾಗುವ ಮೊದಲು, ಅವರು 1996ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ಕರ್ನಾಟಕ ಹೈಕೋರ್ಟ್ ಮುಂದೆ ವಾದ ಮಂಡಿಸಿದ್ದರು. ತಾವು “ಕ್ರಿಕೆಟ್ ಪ್ರೇಮಿ” ಮತ್ತು ವಕೀಲರಾಗಿದ್ದು, 1996ರ ‘ವಿಲ್ಸ್ ವರ್ಲ್ಡ್ ಕಪ್’ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು.

ತಮ್ಮ ಅರ್ಜಿಯಲ್ಲಿ, 1996ರ ಫೆಬ್ರುವರಿ 14ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದ ‘ವಿಲ್ಸ್ ವರ್ಲ್ಡ್ ಕಪ್’ ಕ್ರಿಕೆಟ್ ಪ್ರಸಾರದ ಅವಧಿಯಲ್ಲಿ ವಿದ್ಯುತ್ ಕಡಿತ ಅಥವಾ ಲೋಡ್ ಶೆಡ್ಡಿಂಗ್ ಮಾಡದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News