×
Ad

ಭಾರತದಲ್ಲಿ ನಮಗೆ ಗೊತ್ತಿಲ್ಲದೆ ಇರುವ ಹಲವಾರು ನಗರಗಳಿವೆ; ಆಡಳಿತದ ಕಣ್ಣಿಗೆ ಇವು ಕಾಣದಿರಲು ಕಾರಣವೇನು?

Update: 2026-05-27 19:40 IST

ಸಾಂದರ್ಭಿಕ ಚಿತ್ರ | Photo Credit : PTI 

ನಮಗೆ ತಿಳಿದಿರುವ ಲಕ್ನೋ, ಪುಣೆ ಮತ್ತು ರಾಜ್‌ಕೋಟ್‌ನಂತಹ ನಗರಗಳನ್ನು ಹೊರತುಪಡಿಸಿ ಭಾರತದಲ್ಲಿ ಬೇರೆ ನಗರಗಳೂ ಇವೆಯೇ? ಹೌದು. ಸರ್ಕಾರದ ಅಧಿಕೃತ ಅಂಕಿ-ಅಂಶಗಳು ಒಪ್ಪಿಕೊಳ್ಳುವುದಕ್ಕಿಂತಲೂ ಭಾರತದಲ್ಲಿ ಹೆಚ್ಚು ನಗರಗಳು ಅಸ್ತಿತ್ವದಲ್ಲಿವೆ ಎಂದು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ (EAC-PM) ಬಿಡುಗಡೆ ಮಾಡಿರುವ ಹೊಸ ಸಂಶೋಧನಾ ವರದಿ ಹೇಳುತ್ತದೆ.

ಇದರ ಪ್ರಕಾರ, ಭಾರತದ ನಗರೀಕರಣದ ನಿಜವಾದ ಪ್ರಮಾಣವು ಸರ್ಕಾರದ ದತ್ತಾಂಶಗಳು ತೋರಿಸುವುದಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಈ ಆಡಳಿತಾತ್ಮಕ ಲೋಪದಿಂದಾಗಿ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಏಕೆಂದರೆ, ನಗರ ಮಾದರಿಯ ಸೌಲಭ್ಯಗಳಿಲ್ಲದ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ತಲೆದೂರುತ್ತಿರುವ ಕಸದ ಸಮಸ್ಯೆ ಮತ್ತು ಟ್ರಾಫಿಕ್‌ನಂತಹ ನಗರ ಮಟ್ಟದ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.

"ಭಾರತದ ಗುಪ್ತ ನಗರೀಕರಣ ಮತ್ತು ಅದರ ನೀತಿಗಳ ಮೇಲಿನ ಪರಿಣಾಮಗಳು" (India's Hidden Urbanisation & Its Policy Implications) ಎಂಬ ವರದಿಯನ್ನು ಮಂಡಳಿಯ ಸದಸ್ಯೆ ಶಮಿಕಾ ರವಿ ಮತ್ತು ಸಲಹೆಗಾರರಾದ ಮನುಜ್ ಜೋಶಿ ಹಾಗೂ ಅಪೂರ್ವ ಕುಮಾರ್ ಮಿಶ್ರಾ ಸಿದ್ಧಪಡಿಸಿದ್ದಾರೆ. ಕೋಟ್ಯಂತರ ಭಾರತೀಯರು ಇಂದು ನಗರ ಮತ್ತು ಪಟ್ಟಣಗಳ ಮಾದರಿಯಲ್ಲೇ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಆ ಪ್ರದೇಶಗಳು ಇಂದಿಗೂ ಅಧಿಕೃತ ದಾಖಲೆಗಳಲ್ಲಿ 'ಗ್ರಾಮೀಣ' ಎಂದೇ ವರ್ಗೀಕರಿಸಲ್ಪಟ್ಟಿವೆ ಎಂದು ಈ ವರದಿ ಹೇಳಿದೆ.

2011ರ ಜನಗಣತಿಯ ಪ್ರಕಾರ, ಕೇವಲ ಶೇಕಡಾ 31.1 ರಷ್ಟು ಭಾರತೀಯರು ಮಾತ್ರ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಆದರೆ, ಉಪಗ್ರಹ ಆಧಾರಿತ ಅಂದಾಜುಗಳನ್ನು ಉಲ್ಲೇಖಿಸಿರುವ ಈ ವರದಿಯು, ಭಾರತವು 2015ರ ವೇಳೆಗೆ ಈಗಾಗಲೇ ಶೇಕಡಾ 63 ರಷ್ಟು ನಗರೀಕರಣಗೊಂಡಿದೆ ಎಂಬುದನ್ನು ತೋರಿಸಿದೆ.

ಸರ್ಕಾರದ ಆಡಳಿತಾತ್ಮಕ ದಾಖಲೆಗಳಿಗೂ ಮತ್ತು ತಳಮಟ್ಟದ ವಾಸ್ತವಕ್ಕೂ ನಡುವೆ ಇರುವ ಈ ಭಾರಿ ವ್ಯತ್ಯಾಸವು ದೇಶದ ಆಡಳಿತ ವ್ಯವಸ್ಥೆ, ಸಾರ್ವಜನಿಕ ಹಣದ ಬಳಕೆ ಮತ್ತು ಮೂಲಸೌಕರ್ಯ ಯೋಜನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವರದಿಯ ಲೇಖಕರು ಎಚ್ಚರಿಸಿದ್ದಾರೆ.

ಈ ಚರ್ಚೆಯು ಈಗ ಮತ್ತೊಮ್ಮೆ ಮುಂಚೂಣಿಗೆ ಬರಲು ಪ್ರಮುಖ ಕಾರಣವಿದೆ. ದಶಕಗಳ ಅಂಕಿ-ಅಂಶಗಳನ್ನು ಪರಸ್ಪರ ಹೋಲಿಸಿ ನೋಡಲು ಸುಲಭವಾಗಲಿ ಎಂಬ ಕಾರಣಕ್ಕೆ, ಭಾರತೀಯ ರಿಜಿಸ್ಟ್ರಾರ್ ಜನರಲ್ ಅವರು ಮುಂಬರುವ 2027ರ ಜನಗಣತಿಯಲ್ಲೂ 2011ರ ಹಳೆಯ ‘ನಗರ’ ವ್ಯಾಖ್ಯಾನವನ್ನೇ ಮುಂದುವರಿಸಲು ಪ್ರಸ್ತಾಪಿಸಿದ್ದಾರೆ. ಆದರೆ, ಭಾರತದ ನಗರೀಕರಣದ ವೇಗವು ಅರ್ಧ ಶತಮಾನದ ಹಿಂದೆ ರೂಪಿಸಲಾದ ಹಳೆಯ ನಗರ-ಗ್ರಾಮೀಣ ವ್ಯಾಖ್ಯಾನಗಳನ್ನು ಮೀರಿ ಬೆಳೆದಿದೆ ಎಂದು ವರದಿ ಹೇಳುತ್ತದೆ.

ಭಾರತದಲ್ಲಿನ ಈ 'ಗುಪ್ತ ನಗರೀಕರಣ'ದ ಕುರಿತಾದ ಆತಂಕ ಹೊಸತೇನೂ ಅಲ್ಲ. ವಿಶ್ವಬ್ಯಾಂಕ್‌ ನ ‘ಅಗ್ಲೋಮರೇಷನ್ ಇಂಡೆಕ್ಸ್’ (2015ರಲ್ಲಿ ಪ್ರಕಟಿತ) ವರದಿಯ ಪ್ರಕಾರ, ಅರ್ಥಶಾಸ್ತ್ರಜ್ಞರಾದ ಉಚಿಡಾ ಹಿರೋತ್ಸುಗು ಮತ್ತು ಆಂಡ್ರ್ಯೂ ನೆಲ್ಸನ್ ಅವರು 2010ರ ದಶಕದಲ್ಲೇ ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 55.3 ರಷ್ಟು ಜನರು ಈಗಾಗಲೇ ನಗರ ಮಾದರಿಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಿದ್ದರು. ಕಾನೂನಾತ್ಮಕ ನಗರ ಮಿತಿಗಳನ್ನು ಮೀರಿ ಬೃಹತ್ ಮಟ್ಟದ 'ಗುಪ್ತ ನಗರೀಕರಣ' ನಡೆಯುತ್ತಿರುವುದನ್ನು ಈ ವರದಿ ಎತ್ತಿ ತೋರಿಸಿತ್ತು.

►ಆಡಳಿತ ವ್ಯವಸ್ಥೆಯ ಕಣ್ಣಿಗೆ ಕಾಣದ ನಗರಗಳು

ಭಾರತದ ಆಡಳಿತ ವ್ಯವಸ್ಥೆಯು ಹೊಸ ನಗರ ಮತ್ತು ಪಟ್ಟಣಗಳನ್ನು ಅಧಿಕೃತವಾಗಿ ಗುರುತಿಸುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದೇಶವು ನಗರೀಕರಣಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ವರದಿ ಹೇಳುತ್ತದೆ.

ಒಂದು ಪ್ರದೇಶವನ್ನು 'ನಗರ' ಅಥವಾ 'ಗ್ರಾಮೀಣ' ಎಂದು ವರ್ಗೀಕರಿಸುವುದರ ಆಧಾರದ ಮೇಲೆಯೇ ಅಲ್ಲಿನ ಆಡಳಿತ ರಚನೆ, ಸರ್ಕಾರಿ ಯೋಜನೆಗಳ ಅರ್ಹತೆ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಹಂಚಿಕೆ ನಿರ್ಧಾರವಾಗುತ್ತದೆ. ಆದರೆ, ಇಂದು ಕೃಷಿಯ ಬದಲಾಗಿ ಕಾರ್ಖಾನೆಗಳು, ಅಂಗಡಿಗಳು, ಕಚೇರಿಗಳು, ಸಾರಿಗೆ, ಕಟ್ಟಡ ನಿರ್ಮಾಣ ಮತ್ತು ಸೇವಾ ವಲಯದಂತಹ ನಗರ ಮಾದರಿಯ ಗುಣಲಕ್ಷಣಗಳನ್ನು ಹೊಂದಿರುವ ಅನೇಕ ಪ್ರದೇಶಗಳು ಅಧಿಕೃತ ದಾಖಲೆಗಳಲ್ಲಿ ಇಂದಿಗೂ 'ಗ್ರಾಮೀಣ' ಎಂದೇ ಉಳಿದುಕೊಂಡಿವೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳ ಈ ತಪ್ಪು ವರ್ಗೀಕರಣವು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಇದು ಸೂಕ್ತ ನೀತಿ ನಿರೂಪಣೆಗೆ ಅಡ್ಡಿಯಾಗುತ್ತದೆ, ಸಾರ್ವಜನಿಕ ಸಂಪನ್ಮೂಲಗಳು ದುರುಪಯೋಗವಾಗುವಂತೆ ಮಾಡುತ್ತದೆ. ಇದು ಭಾರತದಲ್ಲಿನ ನಗರೀಕರಣದ ನಿಜವಾದ ಪ್ರಮಾಣವನ್ನು ಮರೆಮಾಚುತ್ತದೆ. ರಾಜಕೀಯ ನಾಯಕರು ಮತ್ತು ನೀತಿ ನಿರೂಪಕರು ಸಾಮಾನ್ಯವಾಗಿ 'ಗ್ರಾಮೀಣ' ಎಂದರೆ 'ಬಡತನ' ಎಂಬ ತಪ್ಪು ಕಲ್ಪನೆಯಲ್ಲೇ ಕೆಲಸ ಮಾಡುತ್ತಾರೆ. ಹೀಗಾಗಿ, ಅವರು 'ಗ್ರಾಮೀಣ' ಎಂದು ಕರೆಯಲ್ಪಡುವ ಪ್ರದೇಶಗಳಲ್ಲೇ ಸಾರ್ವಜನಿಕ ಸೌಲಭ್ಯಗಳಿಗಾಗಿ ಹೆಚ್ಚಿನ ಹಣ ಮತ್ತು ಸಂಪನ್ಮೂಲಗಳನ್ನು ಖರ್ಚು ಮಾಡುತ್ತಾರೆ ಎಂದು ವರದಿ ಹೇಳಿದೆ.

ರಾಜ್ಯ ಸರ್ಕಾರಗಳು ಅಧಿಕೃತ ಪಟ್ಟಣಗಳನ್ನು ಪ್ರಕಟಿಸಿದರೆ, ಜನಗಣತಿ ಇಲಾಖೆಯು ಪ್ರತ್ಯೇಕವಾಗಿ ಕೆಲವು ಪ್ರದೇಶಗಳನ್ನು "ಸೆನ್ಸಸ್ ಟೌನ್‌ಗಳು" ಎಂದು ಗುರುತಿಸುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಒಂದು ಪ್ರದೇಶವನ್ನು 'ಜನಗಣತಿ ಪಟ್ಟಣ' ಅಥವಾ ಸೆನ್ಸಸ್ ಟೌನ್ ಎಂದು ಕರೆಯಲು ಕೆಲವು ನಿಯಮಗಳಿವೆ: ಅಲ್ಲಿನ ಜನಸಂಖ್ಯೆ 5,000 ಕ್ಕಿಂತ ಹೆಚ್ಚಿರಬೇಕು, ಜನಸಂಖ್ಯಾ ಸಾಂದ್ರತೆಯು ಪ್ರತಿ ಚದರ ಕಿಲೋಮೀಟರ್‌ಗೆ 400 ಕ್ಕಿಂತ ಹೆಚ್ಚಿರಬೇಕು ಮತ್ತು ಅಲ್ಲಿನ ಕನಿಷ್ಠ ಶೇಕಡಾ 75 ರಷ್ಟು ಪುರುಷ ಕಾರ್ಮಿಕರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು. ಇಂತಹ ಅನೇಕ ಪ್ರದೇಶಗಳು ಇಂದಿಗೂ ನಗರಗಳಂತೆಯೇ ಕಾರ್ಯನಿರ್ವಹಿಸುತ್ತಿದ್ದರೂ, ಆಡಳಿತಾತ್ಮಕವಾಗಿ ಅವುಗಳನ್ನು ಇಂದಿಗೂ ಗ್ರಾಮಗಳಾಗಿಯೇ ಪರಿಗಣಿಸಲಾಗಿದೆ.

ಇದರ ಪರಿಣಾಮವಾಗಿ, ಭಾರತದಲ್ಲಿ ನೋಡಲು ನಗರಗಳಂತೆ ಕಾಣುವ, ನಗರಗಳ ಮಾದರಿಯಲ್ಲೇ ಕೆಲಸ ಮಾಡುವ ಮತ್ತು ನಗರ ಮಟ್ಟದ ಆದಾಯವನ್ನು ಗಳಿಸುವ ನೂರಾರು ಪ್ರದೇಶಗಳು ಕಾಗದದ ಮೇಲಷ್ಟೇ 'ಹಳ್ಳಿ'ಗಳಾಗಿ ಉಳಿದುಕೊಂಡಿವೆ.

►ವಾಸ್ತವದಲ್ಲಿ ಭಾರತ ಎಷ್ಟು ನಗರೀಕರಣಗೊಂಡಿದೆ?

ಭಾರತವು ನಿಜವಾಗಿ ಎಷ್ಟು ಪ್ರಮಾಣದಲ್ಲಿ ನಗರೀಕರಣಗೊಂಡಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ಯಾವ ಮಾನದಂಡ ಅಥವಾ ವ್ಯಾಖ್ಯಾನವನ್ನು ಬಳಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ವರದಿಯ ಪ್ರಕಾರ, 2011ರ ಜನಗಣತಿಯ ಅನ್ವಯ ಅಧಿಕೃತವಾಗಿ ಕೇವಲ ಶೇಕಡಾ 31.1 ರಷ್ಟು ಭಾರತೀಯರು ಮಾತ್ರ ನಗರ ಪ್ರದೇಶಗಳಲ್ಲಿದ್ದರು.

ಆದರೆ, ಸಂಶೋಧಕರು ಉಲ್ಲೇಖಿಸಿರುವ ಇತ್ತೀಚಿನ ಅಧ್ಯಯನಗಳು ಸಂಪೂರ್ಣವಾಗಿ ಭಿನ್ನವಾದ ಚಿತ್ರಣವನ್ನು ನೀಡುತ್ತವೆ. ವರದಿಯಲ್ಲಿ ಉಲ್ಲೇಖಿಸಲಾದ ‘ಜನಾಗ್ರಹ ಫೌಂಡೇಶನ್’ ಎಂಬ ಚಿಂತಕರ ಚಾವಡಿಯ ಅಧ್ಯಯನದ ಪ್ರಕಾರ, 2024ರ ವೇಳೆಗೆ ಶೇಕಡಾ 28 ರಷ್ಟು ಭಾರತೀಯರು ಅಧಿಕೃತ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಮತ್ತೊಂದೆಡೆ, ‘ಗ್ಲೋಬಲ್ ಹ್ಯೂಮನ್ ಸೆಟಲ್ಮೆಂಟ್ ಲೇಯರ್’ ಸಂಸ್ಥೆಯ ಉಪಗ್ರಹ ಆಧಾರಿತ ದತ್ತಾಂಶಗಳ ಪ್ರಕಾರ, ಭಾರತವು 2015ರಲ್ಲೇ ಈಗಾಗಲೇ ಶೇಕಡಾ 63 ರಷ್ಟು ನಗರೀಕರಣಗೊಂಡಿದೆ.

"ಪ್ರಸ್ತುತ ಬಳಕೆಯಲ್ಲಿರುವ ಆಡಳಿತಾತ್ಮಕ ಮತ್ತು ಜನಗಣತಿ ಆಧಾರಿತ ವರ್ಗೀಕರಣ ವಿಧಾನವು ಭಾರತದಲ್ಲಿ ನಡೆಯುತ್ತಿರುವ ನಗರೀಕರಣದ ವೇಗ ಮತ್ತು ವ್ಯಾಪ್ತಿಯನ್ನು ನಿಖರವಾಗಿ ಅಳೆಯಲು ಸಂಪೂರ್ಣವಾಗಿ ವಿಫಲವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಇಎಸಿ-ಪಿಎಂ ವರದಿ ಸ್ಪಷ್ಟಪಡಿಸಿದೆ.

ವರದಿಯಲ್ಲಿ ಉಲ್ಲೇಖಿಸಲಾಗಿರುವ ಇತ್ತೀಚಿನ ‘ಆರ್ಥಿಕ ಸಮೀಕ್ಷೆ 2025-26’ ಈ ಸಮಸ್ಯೆಗೆ ಕೇರಳ ರಾಜ್ಯವನ್ನು ಒಂದು ಸೂಕ್ತ ಉದಾಹರಣೆಯಾಗಿ ನೀಡಿದೆ. ದಾಖಲೆಗಳ ಪ್ರಕಾರ, ಕೇರಳದಲ್ಲಿ ಅಧಿಕೃತ ನಗರೀಕರಣದ ಪ್ರಮಾಣ ಸುಮಾರು ಶೇಕಡಾ 54 ರಷ್ಟಿದೆ. ಆದರೆ, ಉಪಗ್ರಹ ಚಿತ್ರಗಳ ಮೂಲಕ ಭೌಗೋಳಿಕವಾಗಿ ನೈಜ ನಗರ ಮಾದರಿಯ ಪ್ರದೇಶಗಳನ್ನು ಲೆಕ್ಕ ಹಾಕಿದಾಗ, ಈ ಪ್ರಮಾಣವು ಬರೋಬ್ಬರಿ ಶೇಕಡಾ 81 ಕ್ಕೆ ಏರಿಕೆಯಾಗುತ್ತದೆ.

►ವಿಶ್ವಬ್ಯಾಂಕ್‌ ನ ‘ಅಗ್ಲೋಮರೇಷನ್ ಇಂಡೆಕ್ಸ್’ ಹೇಳುವುದೇನು?

ಉಪಗ್ರಹ ಆಧಾರಿತ ನಗರೀಕರಣದ ಅಂದಾಜುಗಳು ಜಗತ್ತಿನಾದ್ಯಂತ ಜನಪ್ರಿಯವಾಗುವುದಕ್ಕೂ ದಶಕಗಳ ಮುನ್ನವೇ, ವಿಶ್ವಬ್ಯಾಂಕ್ ಭಾರತದ ನಗರೀಕರಣವನ್ನು ಒಂದು ಭಿನ್ನ ದೃಷ್ಟಿಕೋನದಿಂದ ಅಳೆಯಲು ಪ್ರಯತ್ನಿಸಿತ್ತು.

ವಿಶ್ವಬ್ಯಾಂಕ್‌ನ ಈ ‘ಅಗ್ಲೋಮರೇಷನ್ ಇಂಡೆಕ್ಸ್’ ಪ್ರಮುಖವಾಗಿ ಮೂರು ಅಂಶಗಳನ್ನು ಆಧರಿಸಿ ಒಂದು ಪ್ರದೇಶವನ್ನು ನಗರ ಎಂದು ವರ್ಗೀಕರಿಸುತ್ತದೆ. ಅವುಗಳೆಂದರೆ: ಜನಸಂಖ್ಯಾ ಸಾಂದ್ರತೆ, ದೊಡ್ಡ ನಗರ ಕೇಂದ್ರಕ್ಕೆ ಹತ್ತಿರವಾಗಿರುವುದು ಮತ್ತು ಆ ನಗರ ಕೇಂದ್ರವನ್ನು ತಲುಪಲು ತಗಲುವ ಪ್ರಯಾಣದ ಸಮಯ. ಈ ವಿಶಿಷ್ಟ ವಿಧಾನವನ್ನು ಬಳಸಿದಾಗ, ಭಾರತವು 2010ರಷ್ಟು ಹಿಂದೆಯೇ ಬರೋಬ್ಬರಿ ಶೇಕಡಾ 55.3 ರಷ್ಟು ನಗರೀಕರಣಗೊಂಡಿತ್ತು ಎಂಬ ಆಶ್ಚರ್ಯಕರ ವಿಷಯ ಬೆಳಕಿಗೆ ಬಂದಿತ್ತು.

ಈ ಸಂಶೋಧನೆಯ ಫಲಿತಾಂಶಗಳು, ಭಾರತದ ನಗರೀಕರಣವು ಕೇವಲ ಮುನ್ಸಿಪಲ್ ಗಡಿಗಳು ಮತ್ತು ಅಧಿಕೃತ ನಗರ ಮಿತಿಗಳನ್ನು ದಾಟಿ ಬಹುದೂರದವರೆಗೆ ವಿಸ್ತರಿಸಿದೆ ಎಂಬುದನ್ನು ಸ್ಪಷ್ಟಪಡಿಸಿದ್ದವು.

►2027ರ ಜನಗಣತಿ ಏಕೆ ಮುಖ್ಯವಾಗುತ್ತದೆ?

ಭಾರತದ ನಗರೀಕರಣದ ಸರಿಯಾದ ಪ್ರಮಾಣವನ್ನು ಅಳೆಯುವುದು ಪ್ರಸ್ತುತ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ, ದೇಶದಲ್ಲೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿರುವ '2027ರ ಜನಗಣತಿ'ಯಲ್ಲೂ ಹಳೆಯ 2011ರ ಜನಗಣತಿಯ ‘ನಗರ’ ವ್ಯಾಖ್ಯಾನವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ.

"ಒಂದು ಪ್ರದೇಶವನ್ನು 'ಜನಗಣತಿ ಪಟ್ಟಣ' ಎಂದು ವರ್ಗೀಕರಿಸುವ ನಿಯಮವು 1971 ರಿಂದಲೂ ಬದಲಾಗಿಲ್ಲ. ಈಗ 2027ರ ಜನಗಣತಿಯಲ್ಲೂ ಅದೇ ಹಳೆಯ ನಿಯಮವನ್ನು ಮುಂದುವರಿಸಲು ಯೋಜಿಸಲಾಗಿದೆ," ಎಂದು ವರದಿ ಉಲ್ಲೇಖಿಸಿದೆ.

ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ವರದಿಯ ಲೇಖಕರ ಪ್ರಕಾರ, ಇಂದಿನ ಆಧುನಿಕ ಕಾಲದಲ್ಲೂ ಈ ಹಳೆಯ ವಿಧಾನಕ್ಕೆ ಅಂಟಿಕೊಳ್ಳುವುದು ಒಂದು ದೊಡ್ಡ ಲೋಪವಾಗಿದೆ.

ಒಂದು ಪ್ರದೇಶದಲ್ಲಿನ ಶೇಕಡಾ 75 ರಷ್ಟು ಪುರುಷ ಕಾರ್ಮಿಕರು ಕೃಷಿಯೇತರ ಕೆಲಸಗಳಲ್ಲಿ ತೊಡಗಿಸಿಕೊಂಡಿರಬೇಕು ಎಂಬ ಈ ಹಳೆಯ ನಿಯಮವು ಅಂದಿನ ಕಾಲದ ಆರ್ಥಿಕತೆಗೆ ಸರಿಹೊಂದುತ್ತಿತ್ತು. ಆದರೆ ಇಂದಿನ ಇಂಟರ್ನೆಟ್ ಆಧಾರಿತ ಕೆಲಸಗಳು, ಗಿಗ್ ಎಕಾನಮಿ, ದಿನನಿತ್ಯ ನಗರಗಳಿಗೆ ಪ್ರಯಾಣಿಸುವ ಕಾರ್ಮಿಕರು ಮತ್ತು ಮಿಶ್ರ ಜೀವನೋಪಾಯದ ಪದ್ಧತಿಗಳು ಹಳ್ಳಿ ಮತ್ತು ನಗರಗಳ ನಡುವಿನ ಸಾಂಪ್ರದಾಯಿಕ ಗೆರೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿವೆ.

ಹೀಗಾಗಿ, ಕೇವಲ ದಶಕಕ್ಕೊಮ್ಮೆ ನಡೆಯುವ ಹಳೆಯ ಜನಗಣತಿ ವಿಧಾನವನ್ನು ನೆಚ್ಚಿಕೊಳ್ಳುವ ಬದಲು, ಇಂದಿನ ತಂತ್ರಜ್ಞಾನ, ಉದ್ಯೋಗದ ಸ್ವರೂಪ ಮತ್ತು ನವೀಕೃತ ಜನಸಂಖ್ಯಾ ದತ್ತಾಂಶಗಳನ್ನು ಒಳಗೊಂಡ ಇನ್ನಷ್ಟು ಚುರುಕಾದ ಹೊಸ ವ್ಯವಸ್ಥೆಯನ್ನು ರೂಪಿಸಬೇಕು ಎಂದು ವರದಿ ಕರೆ ನೀಡಿದೆ.

►ಆಡಳಿತ ವ್ಯವಸ್ಥೆಗೆ ದೊಡ್ಡ ತಲೆನೋವಾಗಿರುವ 'ಗುಪ್ತ ನಗರೀಕರಣ'

ನಗರೀಕರಣದ ನಿಜವಾದ ಪ್ರಮಾಣವನ್ನು ದಾಖಲಿಸದೆ ಕಡಿಮೆ ಅಂದಾಜು ಮಾಡುವುದು, ಸರ್ಕಾರದ ನೀತಿ ನಿರೂಪಣೆ, ಯೋಜನೆಗಳ ಜಾರಿ ಮತ್ತು ಅವುಗಳ ಅನುಷ್ಠಾನದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವರದಿಯ ಲೇಖಕರು ವಾದಿಸಿದ್ದಾರೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅನೇಕ ಪ್ರದೇಶಗಳು ಇಂದು ಟ್ರಾಫಿಕ್ ಜಾಮ್, ಒಳಚರಂಡಿ ಸಮಸ್ಯೆ, ಕಸದ ವಿಲೇವಾರಿ ಮತ್ತು ವಸತಿ ಬೇಡಿಕೆಯಂತಹ ಸಂಪೂರ್ಣ 'ನಗರ ಮಟ್ಟದ' ಸವಾಲುಗಳನ್ನು ಎದುರಿಸುತ್ತಿವೆ. ಆದಾಗ್ಯೂ, ಇಂದಿಗೂ ಅವುಗಳನ್ನು ಹಳ್ಳಿಗಳನ್ನು ನಿರ್ವಹಿಸುವ 'ಗ್ರಾಮ ಪಂಚಾಯಿತಿ'ಗಳೇ ಮುನ್ನಡೆಸುತ್ತಿವೆ. ಹೀಗಾಗಿ, ಈ ಟ್ರಾಫಿಕ್, ಸ್ವಚ್ಛತೆ ಮತ್ತು ವಸತಿ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಿರುವ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಹೊಂದಿರುವ ನಗರಾಡಳಿತ ಸಂಸ್ಥೆಗಳ ತುರ್ತು ಅಗತ್ಯ ಈ ಪ್ರದೇಶಗಳಿಗಿದೆ.

"ವಾಸ್ತವದಲ್ಲಿ ನಗರಗಳಾಗಿ ಮಾರ್ಪಟ್ಟಿರುವ ದೇಶದ ಬಹುದೊಡ್ಡ ಭಾಗಗಳನ್ನು ಇಂದಿಗೂ ಅತ್ಯಂತ ಸೀಮಿತ ಅಧಿಕಾರ ಮತ್ತು ಕಡಿಮೆ ಸಾಮರ್ಥ್ಯ ಹೊಂದಿರುವ ಗ್ರಾಮೀಣ ಸ್ಥಳೀಯ ಸಂಸ್ಥೆಗಳೇ ಆಳುತ್ತಿವೆ" ಎಂದು ವರದಿ ಹೇಳಿದೆ.

ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆಯಾಗಿ ವರದಿ 'ಗುರುಗ್ರಾಮ'ವನ್ನು ತೋರಿಸಿದೆ. ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಬೆಳೆದಿದ್ದರೂ ಸಹ, ಗುರುಗ್ರಾಮಕ್ಕೆ 2008ರ ವರೆಗೆ ಒಂದು ನಗರ ಪಾಲಿಕೆಯೇ ಇರಲಿಲ್ಲ. ಪರಿಣಾಮವಾಗಿ, ಇಂದಿಗೂ ಆ ನಗರವು ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ತುಂಬುವ ಸಮಸ್ಯೆಯನ್ನು ಎದುರಿಸುತ್ತಿದೆ. ಟ್ರಾಫಿಕ್ ಬ್ಲಾಕ್ ಮತ್ತು ಕಳಪೆ ನಗರ ಯೋಜನೆಯಂತಹ ಗಂಭೀರ ಸಮಸ್ಯೆಗಳು ಅಲ್ಲಿವೆ.

ವಾಸ್ತವವಾಗಿ, ಮಳೆಗಾಲ ಬಂದ ತಕ್ಷಣವೇ ಗುರುಗ್ರಾಮವು ತನ್ನ 'ಮಿಲೇನಿಯಮ್ ಸಿಟಿ' ಎಂಬ ಹೆಮ್ಮೆಯ ಬಿರುದನ್ನೇ ಕಳೆದುಕೊಂಡುಬಿಡುತ್ತದೆ.

ಕೊನೆಯದಾಗಿ, ನೀತಿ ಆಯೋಗದ ಹಳೆಯ ವರದಿಯೊಂದನ್ನು ಉಲ್ಲೇಖಿಸಿರುವ ವರದಿಯು, "ನಾವು ಇದೇ ಹಳೆಯ ಧೋರಣೆಯನ್ನು ಮುಂದುವರಿಸಿದರೆ, ಭವಿಷ್ಯದಲ್ಲಿ ನಮ್ಮ ದೇಶವು ಯಾವುದೇ ಸರಿಯಾದ ಯೋಜನೆಯಿಲ್ಲದ, ಅವ್ಯವಸ್ಥಿತ ನಗರಗಳ ತಾಣವಾಗಿ ಮಾರ್ಪಡುವುದು ಗ್ಯಾರಂಟಿ" ಎಂದು ಎಚ್ಚರಿಕೆ ನೀಡಿದೆ.

►ಗುಪ್ತ ನಗರೀಕರಣದ ಸಮಸ್ಯೆಗೆ ಪರಿಹಾರವೇನು?

ಪ್ರತಿ ಬಾರಿಯೂ ಹಳೆಯ ಜನಗಣತಿ ಕಾರ್ಯಕ್ಕೆ ಕಾಯುವ ಬದಲು, ಹಗಲಿನ ಅವಧಿಯ ಉಪಗ್ರಹ ಚಿತ್ರಗಳನ್ನು ಬಳಸಿ ದೇಶದ "ಕಟ್ಟಡಗಳ ಒಟ್ಟು ಪ್ರಮಾಣವನ್ನು" ಅಳೆಯಬೇಕು ಎಂದು ವರದಿಯ ಲೇಖಕರು ಪ್ರಸ್ತಾಪಿಸಿದ್ದಾರೆ. ಇದು ಕಟ್ಟಡಗಳು ಮತ್ತು ಮೂಲಸೌಕರ್ಯಗಳ ವಿಸ್ತೀರ್ಣ ಹಾಗೂ ಅವುಗಳ ಎತ್ತರ ಎರಡನ್ನೂ ಒಟ್ಟಿಗೆ ಅಳೆಯುವ ಒಂದು ಆಧುನಿಕ ಮಾನದಂಡವಾಗಿದೆ.

"ಆದ್ದರಿಂದ, ದೇಶದ ನಗರೀಕರಣದ ಸ್ಥಿತಿಗತಿ ಮತ್ತು ನಗರ ಸಂಕೀರ್ಣಗಳ ಸರಾಸರಿ ಗಾತ್ರವನ್ನು ನಿಖರವಾಗಿ ಪತ್ತೆಹಚ್ಚಲು ಹಗಲಿನ ಉಪಗ್ರಹ ದತ್ತಾಂಶಗಳನ್ನು ಒಂದು ಆಧುನಿಕ ತಂತ್ರಜ್ಞಾನವಾಗಿ ಬಳಸಲು ನಾವು ಶಿಫಾರಸು ಮಾಡುತ್ತೇವೆ" ಎಂದು ವರದಿ ಹೇಳಿದೆ.

ಇದರೊಂದಿಗೆ, ಯಾವುದೇ ಒಂದು ಗ್ರಾಮೀಣ ಪ್ರದೇಶವು ನಿಗದಿತ ನಗರ ಗುಣಲಕ್ಷಣಗಳ ಮಿತಿಯನ್ನು ದಾಟಿದ ತಕ್ಷಣ, ಅದು ಸ್ವಯಂಚಾಲಿತವಾಗಿ 'ನಗರ' ಎಂದು ಮರುವರ್ಗೀಕರಣಗೊಳ್ಳುವಂತಹ "ಸ್ವಯಂಚಾಲಿತ ಪ್ರಚೋದಕ ವ್ಯವಸ್ಥೆ"ಯನ್ನು ಜಾರಿಗೆ ತರಬೇಕು ಎಂದು ವರದಿ ಕರೆ ನೀಡಿದೆ.

"ಭಾರತವನ್ನು 'ವಿಕಸಿತ ಭಾರತ'ವನ್ನಾಗಿ ಮಾಡುವ ದಾರಿಯಲ್ಲಿ ಮತ್ತು ಯೋಜನೆಯಿಲ್ಲದ ನಗರೀಕರಣದಿಂದ ಎದುರಾಗುವ ಆಧುನಿಕ ಸಮಸ್ಯೆಗಳನ್ನು ತಡೆಯಲು, ನಗರೀಕರಣದ ಕಡೆಗೆ ಇಂತಹದ್ದೊಂದು ವ್ಯವಸ್ಥಿತ ಮುನ್ನೋಟ ಅತ್ಯಂತ ಅಗತ್ಯವಾಗಿದೆ" ಎಂದು ವರದಿಯ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ ಈ ವರದಿಯು ನೀಡುವ ಮುಖ್ಯ ಸಂದೇಶವೇನೆಂದರೆ, ಭಾರತವು ಇನ್ಮುಂದೆ ನಗರೀಕರಣವನ್ನು ಕೇವಲ ಜನಸಂಖ್ಯೆ ಆಧಾರಿತ ಹಳೆಯ ಸರ್ಕಾರಿ ಮುದ್ರೆಗಳ ಮೂಲಕ ಅಳೆಯುವುದನ್ನು ನಿಲ್ಲಿಸಬೇಕು. ಬದಲಿಗೆ, ಉಪಗ್ರಹ ಚಿತ್ರಗಳು, ಅಲ್ಲಿ ನಡೆಯುತ್ತಿರುವ ಆರ್ಥಿಕ ಚಟುವಟಿಕೆಗಳು ಮತ್ತು ಜನರ ದಿನನಿತ್ಯದ ವಾಸ್ತವ ಬದುಕನ್ನು ನೋಡಿ ನಗರಗಳನ್ನು ಗುರುತಿಸಬೇಕಾಗಿದೆ. ಸರಳವಾಗಿ ಹೇಳಬೇಕೆಂದರೆ, ಭಾರತದ ಹೊಸ ನಗರ ಮತ್ತು ಪಟ್ಟಣಗಳು ಬೆಳೆಯಲು ಇನ್ನು ಕಾಯುತ್ತಾ ಕುಳಿತಿಲ್ಲ. ಅವು ಈಗಾಗಲೇ ಅಸ್ತಿತ್ವದಲ್ಲಿವೆ. ಆದರೆ, ಆಡಳಿತದ ಕಣ್ಣಿಗೆ ಕಾಣದೆ ಗುಪ್ತವಾಗಿ ಉಳಿದಿರುವುದು ಮಾತ್ರ ಅಲ್ಲಿನ ನಿವಾಸಿಗಳ ಪಾಲಿಗೆ ಖಂಡಿತ ಒಳ್ಳೆಯದಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News