×
Ad

ಮಂಗ, ಹಕ್ಕಿ ಹಿಕ್ಕೆ, ಕಳಪೆ ಗುಣಮಟ್ಟದ ಗಾಳಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಆವರಿಸಿದ ವಿವಾದಗಳು

Update: 2026-01-18 00:29 IST

PC | X/@India_AllSports

ಹಕ್ಕಿ ಹಿಕ್ಕೆ, ಮಂಗಗಳ ಕಾಟ, ಜೊತೆಗೆ ದಿಲ್ಲಿಯ ಕಳಪೆ ಗುಣಮಟ್ಟದ ಗಾಳಿ… ಭಾರತದ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಯಾದ BWF ಇಂಡಿಯಾ ಓಪನ್ ಸೂಪರ್ 750 ಅನ್ನು ಆವರಿಸಿಕೊಂಡಿರುವ ಅವ್ಯವಸ್ಥೆಗಳು ಮತ್ತು ವಿವಾದಗಳು ಒಂದೆರಡಲ್ಲ. ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎದುರಾದ ಈ ಸಮಸ್ಯೆಗಳನ್ನು ಉಲ್ಲೇಖಿಸಿ, ಒಬ್ಬ ಅಗ್ರ ಶ್ರೇಯಾಂಕಿತ ಆಟಗಾರ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸಿದ ಇನ್ನೂ ಹಲವರು ಇಲ್ಲಿ ಸ್ವಚ್ಛತೆ ಇಲ್ಲವೆಂದು ಟೀಕಿಸಿದ್ದಾರೆ.

ಹವಾಮಾನ ಮತ್ತು ಮಾಲಿನ್ಯದಂತಹ ಅಂಶಗಳು ತಮ್ಮ ನಿಯಂತ್ರಣದಲ್ಲಿಲ್ಲವೆಂದು ಸೂಚಿಸಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ), ಈ ಟೀಕೆಗಳಿಗೆ ಸಮರ್ಥನೆ ನೀಡಿದೆ. ಪ್ರತಿಕ್ರಿಯೆಗಳನ್ನು ಗಮನಿಸಿದ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (ಬಿಡಬ್ಲ್ಯೂಎಫ್) ಕೂಡ ಹೇಳಿಕೆ ನೀಡಿದ್ದು, ಇಂದಿರಾ ಗಾಂಧಿ ಕ್ರೀಡಾಂಗಣವು ಆಟದ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಪುನರುಚ್ಚರಿಸಿದೆ. ಆದರೆ ಸ್ವಚ್ಛತೆ ಮತ್ತು ನೈರ್ಮಲ್ಯ ಸಂಬಂಧಿತ ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿದೆ. ಆಗಸ್ಟ್‌ನಲ್ಲಿ ಇಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಂತಹ ಸಮಸ್ಯೆಗಳು ಇರಲಾರವು ಎಂದು ಎರಡೂ ಫೆಡರೇಷನ್‌ಗಳು ಸ್ಪಷ್ಟಪಡಿಸಿವೆ.

ಅಂಗಣ ಸ್ವಚ್ಛವಾಗಿಲ್ಲ

“ಇದು ಇತರ ಅಂಗಣಗಳಿಗಿಂತ ಉತ್ತಮವಾಗಿರುತ್ತದೆ ಎಂದು ನಾನು ನಿಜವಾಗಿಯೂ ಆಶಿಸಿದ್ದೆ. ಆದರೆ ಇದು ತುಂಬಾ ಕೊಳಕು. ಇದು ಆಟಗಾರರ ಆರೋಗ್ಯಕ್ಕೆ ತೊಂದರೆಯೊಡ್ಡಬಹುದು,” ಎಂದು ವಿಶ್ವದ 20ನೇ ಶ್ರೇಯಾಂಕದ ಡ್ಯಾನಿಶ್ ಆಟಗಾರ್ತಿ ಮಿಯಾ ಬ್ಲಿಚ್‌ಫೆಲ್ಡ್ ಹೇಳಿದ್ದಾರೆ. ಅಂಗಣದ ರಚನೆ ಬಗ್ಗೆ ತಕರಾರು ಇಲ್ಲದಿದ್ದರೂ, ಈ ವರ್ಷದ ಪಂದ್ಯಾವಳಿಯಲ್ಲಿ ಆಟಗಾರರ ಆರೋಗ್ಯ ಸ್ಥಿತಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ ಬ್ಲಿಚ್‌ಫೆಲ್ಡ್‌ ರ ದೂರುಗಳು ಅವರ ವೈಯಕ್ತಿಕ ಅನುಭವ ಮತ್ತು ಆರೋಗ್ಯದ ಸಂವೇದನಶೀಲತೆಯಿಂದ ಉಂಟಾಗಿರುವುದೆಂದು ಬಿಎಐ ತಿಳಿಸಿದೆ. ಈ ವರ್ಷದ ಇಂಡಿಯಾ ಓಪನ್‌ನಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಅನೇಕ ಆಟಗಾರರು ಮೆಚ್ಚಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಮಿಯಾ ಅವರ ಹೇಳಿಕೆಗಳು ಸಾಮಾನ್ಯ ಆಟದ ಪರಿಸ್ಥಿತಿಗಳು ಮತ್ತು ವೈಯಕ್ತಿಕ ಆರೋಗ್ಯ ಸೂಕ್ಷ್ಮತೆಗಳಿಗೆ ಸಂಬಂಧಿಸಿದವು; ನಿರ್ದಿಷ್ಟವಾಗಿ ಮುಖ್ಯ ಆಟದ ಮೈದಾನದ ಕುರಿತು ಅಲ್ಲ. ಅವರು ಉಲ್ಲೇಖಿಸಿದ್ದದ್ದು ಅಭ್ಯಾಸಕ್ಕೆ ಬಳಸುವ ಕೆಡಿ ಜಾಧವ್ ಕ್ರೀಡಾಂಗಣವಾಗಿದ್ದು, ಮುಖ್ಯ ಪಂದ್ಯ ನಡೆಯುವ ಅಂಗಣವಲ್ಲ ಎಂಬುದನ್ನು ಗಮನಿಸಬೇಕು.

“ಧೂಳು ಮತ್ತು ಪರಿಸರದಲ್ಲಿನ ಇತರ ಅಂಶಗಳಿಗೆ ಹೆಚ್ಚು ಸಂವೇದನಶೀಲರಾಗಿರುವ ಆಟಗಾರ್ತಿಯಾಗಿ, ಪರಿಸ್ಥಿತಿಗಳು ಕೆಲವೊಮ್ಮೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಮುಖ್ಯ ಆಟದ ಮೈದಾನವನ್ನು ಸ್ವಚ್ಛವಾಗಿ, ಕೊಳಕು ಮತ್ತು ಪಾರಿವಾಳ ಮುಕ್ತವಾಗಿ ಇರಿಸಲಾಗಿದೆ. ಹಲವಾರು ಆಟಗಾರರು ಸ್ಥಳದ ಪರಿಸ್ಥಿತಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ,” ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.

ಅಂಗಣದಲ್ಲಿ ತಾಪಮಾನ ನಿಯಂತ್ರಣ

ಅಂಗಣಗಳಲ್ಲಿನ ತಾಪಮಾನ ಕುರಿತೂ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಲ್ಲಿನ ವಾತಾವರಣ ತುಂಬಾ ತಂಪಾಗಿದೆ. ಇದರಿಂದ ಅಭ್ಯಾಸಕ್ಕೆ ಅಡ್ಡಿಯಾಗಿದೆ. ಬಹು ಪದರದ ರಕ್ಷಣಾತ್ಮಕ ಉಡುಪು ಧರಿಸಬೇಕಾಯಿತು. ಅದು ಸೂಕ್ತವಲ್ಲ,” ಎಂದು ಬ್ಲಿಚ್‌ಫೆಲ್ಡ್ ಹೇಳಿದ್ದಾರೆ.

ಆಟಗಾರರಿಗೆ ಅಂಗಣಗಳಲ್ಲಿ ಹೀಟರ್ ಅಗತ್ಯವಿದೆ ಎಂದು ಥೈಲ್ಯಾಂಡ್‌ ನ ಆಟಗಾರ್ತಿ ರಾಟ್ಚಾನೋಕ್ ಇಂಟಾನಾನ್ ಹೇಳಿದ್ದಾರೆ. “ನನಗೆ ಸ್ವಲ್ಪ ಚಳಿ ಅನಿಸಿತು. ಅಲ್ಲಿ ಬೆಚ್ಚಗಾಗಲು ಕಷ್ಟವಾಯಿತು,” ಎಂದು ಕೆನಡಾದ ಆಟಗಾರ್ತಿ ಮಿಚೆಲ್ ಲಿ ಹೇಳಿದ್ದಾರೆ.

“ಹೌದು, ದಿಲ್ಲಿಯಲ್ಲಿ ಚಳಿ ಇದೆ. ಆದ್ದರಿಂದ ನಾವು ವಾತಾವರಣ ಬಿಸಿಯಾಗಿಸುವ ಸಾಧನಗಳನ್ನು ಒದಗಿಸಿದ್ದೇವೆ. ಬಹುತೇಕ ಆಟಗಾರರು ಇದನ್ನು ಮೆಚ್ಚಿದ್ದಾರೆ. ಒಬ್ಬ ಆಟಗಾರ್ತಿಯ ಪ್ರತಿಕ್ರಿಯೆಯನ್ನೇ ಆಧಾರವಾಗಿಸಿಕೊಳ್ಳಬಾರದು,” ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಚಳಿ ಕುರಿತು ದೂರು ನೀಡಿರುವುದು ಒಬ್ಬ ಆಟಗಾರ್ತಿ ಮಾತ್ರ ಅಲ್ಲ.

ಮಂಗಗಳ ಕಾಟ

ಟೂರ್ನಿಯನ್ನು ವರದಿ ಮಾಡಲು ದಿಲ್ಲಿಗೆ ತೆರಳಿದ್ದ ಛಾಯಾಗ್ರಾಹಕಿ ಅಜ್ಲಿನ್ನಾ ದೇವಿ, ಬುಧವಾರ ಮೊದಲ ಸುತ್ತಿನ ಪಂದ್ಯಗಳ ವೇಳೆ ಮುಖ್ಯ ಕ್ರೀಡಾಂಗಣದ ಸ್ಟ್ಯಾಂಡ್‌ ಗಳಲ್ಲಿ ಮಂಗವೊಂದು ಕಾಣಿಸಿಕೊಂಡಿರುವ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ.

ತರಬೇತಿ ಸ್ಥಳವಾದ ಕೆಡಿ ಜಾಧವ್ ಹಾಲ್‌ ಗೆ ಮಂಗವೊಂದು ಪ್ರವೇಶಿಸಿದ ಬಗ್ಗೆ, ಕೊರಿಯಾದ ಡಬಲ್ಸ್ ಆಟಗಾರ್ತಿ ಕಾಂಗ್ ಮಿನ್ಹ್ಯುಕ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, “ಪ್ರಾಣಿಗಳಿಗೆ ಉಚಿತ ಪ್ರವೇಶ ನೀಡಲಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, “ಬಿಎಐ ಮತ್ತು ಸ್ಥಳದ ಸಿಬ್ಬಂದಿ ಕಳೆದ 20 ದಿನಗಳಿಂದ ನಿರಂತರವಾಗಿ ಕ್ರೀಡಾಂಗಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ಕಂಡುಬಂದಿರುವುದು ಇದೇ ಮೊದಲು. ಒಂದು ಬಾಗಿಲು ಸರಿಯಾಗಿ ಮುಚ್ಚಿರಲಿಲ್ಲ. ಈಗ ಎಲ್ಲಾ ಬಾಗಿಲುಗಳು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಲಾಗುತ್ತಿದೆ. ಕ್ರೀಡಾಂಗಣದ ಸುತ್ತಲೂ ಕಾಡು ಪ್ರದೇಶಗಳಿವೆ. ಇದು ಪರಿಸರದ ಭಾಗ. ಸುರಕ್ಷಿತ ಮತ್ತು ನಿಯಂತ್ರಿತ ಆಟದ ವಾತಾವರಣ ಕಾಪಾಡಿಕೊಳ್ಳಲು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮುಂದುವರಿಸುತ್ತೇವೆ,” ಎಂದಿದ್ದಾರೆ.

ಹೊಸದಿಲ್ಲಿಯ ವಾಯು ಮಾಲಿನ್ಯ

ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು ಒಂದು ತಿಂಗಳ ಹಿಂದಿನಷ್ಟು ಆತಂಕಕಾರಿಯಾಗಿಲ್ಲದಿದ್ದರೂ, ಇನ್ನೂ ಹಾನಿಕಾರಕ ಮತ್ತು ಅಪಾಯಕಾರಿ ಮಟ್ಟದ ಮಧ್ಯದಲ್ಲೇ ಇದೆ.

“ಇಲ್ಲಿನ ಗಾಳಿ ಕಳಪೆಯಾಗಿದೆ. ಇದು ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲು ಸೂಕ್ತ ಸ್ಥಳ ಎಂದು ನಾನು ಭಾವಿಸುವುದಿಲ್ಲ,” ಎಂದು ಡೆನ್ಮಾರ್ಕ್‌ನ ಪುರುಷರ ಸಿಂಗಲ್ಸ್ ಆಟಗಾರ ಆಂಡರ್ಸ್ ಆಂಟನ್ಸನ್ ದಿಲ್ಲಿಗೆ ಬರಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಂದ್ಯದಿಂದ ಹಿಂದೆ ಸರಿದ ಕಾರಣಕ್ಕೆ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟವು ಅವರಿಗೆ 5,000 ಡಾಲರ್ ದಂಡ ವಿಧಿಸಿದೆ.

ಅಂಗಣದಲ್ಲಿ ಹಕ್ಕಿ ಹಿಕ್ಕೆ

ಅಭ್ಯಾಸ ಅಂಗಣಗಳಲ್ಲಿ ಹಕ್ಕಿ ಹಿಕ್ಕೆಗಳಿವೆ ಎಂದು ಬ್ಲಿಚ್‌ಫೆಲ್ಡ್ ಹೇಳಿದಾಗ ಮಿಶ್ರಾ ಅದನ್ನು ನಿರಾಕರಿಸಿದ್ದರು. ಆದರೆ ಎರಡು ದಿನಗಳ ಬಳಿಕ, ಪಂದ್ಯ ನಡೆಯುತ್ತಿರುವಾಗ ಹಕ್ಕಿ ಹಿಕ್ಕೆಯಿಂದಾಗಿ ಎಚ್.ಎಸ್. ಪ್ರಣಯ್ ಮತ್ತು ಲೋ ಕಿಯನ್ ಯೂ ನಡುವಿನ ಎರಡನೇ ಸುತ್ತಿನ ಪಂದ್ಯವನ್ನು ಎರಡು ಬಾರಿ ನಿಲ್ಲಿಸಬೇಕಾಯಿತು.

ಆಟಗಾರರ ಪ್ರತಿಕ್ರಿಯೆ

“2016–17ರ ಋತುವಿನಲ್ಲಿ ದೀಪಗಳು ಆರಿದ್ದರಿಂದ ನಾನು ಡೆನ್ಮಾರ್ಕ್‌ನಲ್ಲಿ ನನ್ನ ಪಂದ್ಯಕ್ಕಾಗಿ ಒಂದು ಗಂಟೆ ಕಾಯಬೇಕಾಯಿತು. ಪ್ರಣಯ್ ಒಂದು ದಿನ ಒಂದು ಪಂದ್ಯ, ಮರುದಿನ ಮತ್ತೊಂದು ಪಂದ್ಯ ಆಡಿದ್ದೇನೆ ಎಂದು ಹೇಳಿದರು. ಇಂತಹ ಸಂಗತಿಗಳು ಆಗಾಗ ನಡೆಯುತ್ತವೆ. ಯಾವುದೇ ದೇಶವೂ ಉದ್ದೇಶಪೂರ್ವಕವಾಗಿ ಇಂಥದ್ದನ್ನು ಮಾಡುವುದಿಲ್ಲ. ಎಲ್ಲರೂ ಅತ್ಯುತ್ತಮ ವ್ಯವಸ್ಥೆ ನೀಡಲು ಬಯಸುತ್ತಾರೆ,” ಎಂದು ಭಾರತದ ಆಟಗಾರ ಶ್ರೀಕಾಂತ್ ಕಿದಂಬಿ ಪ್ರತಿಕ್ರಿಯಿಸಿದ್ದಾರೆ.

ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟದ ಪ್ರತಿಕ್ರಿಯೆ

ಯೋನೆಕ್ಸ್–ಸನ್‌ರೈಸ್ ಇಂಡಿಯಾ ಓಪನ್ 2026ರ ಸಮಯದಲ್ಲಿ, ದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಇರುವ ಪರಿಸ್ಥಿತಿಗಳನ್ನು ಪರಿಶೀಲಿಸಲು ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟವು ಆಟಗಾರರು ಮತ್ತು ತಂಡಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದೆ.

“ಸಕಾರಾತ್ಮಕ ಮತ್ತು ರಚನಾತ್ಮಕ ಪ್ರತಿಕ್ರಿಯೆಗಳು ಈ ಪಂದ್ಯಾವಳಿ ಮತ್ತು ಭವಿಷ್ಯದ ಚಾಂಪಿಯನ್‌ಶಿಪ್‌ಗಳಿಗೆ ಸಾಧ್ಯವಾದಷ್ಟು ಉತ್ತಮ ವಾತಾವರಣ ರೂಪಿಸಲು ಸಹಕಾರಿಯಾಗುತ್ತವೆ. ಆಟಗಾರರು ಹಂಚಿಕೊಂಡ ದೂರುಗಳು ಮತ್ತು ನಂತರದ ಮಾಧ್ಯಮ ವರದಿಗಳನ್ನು ನಾವು ಅಂಗೀಕರಿಸುತ್ತೇವೆ. ಆದರೆ ಸ್ಥಳದೊಳಗಿನ ಗಾಳಿಯ ಗುಣಮಟ್ಟ ಮತ್ತು ತಾಪಮಾನದ ಮೇಲೆ ಪರಿಣಾಮ ಬೀರುವ ಶೀತ ಹವಾಮಾನದಂತಹ ಕಾಲೋಚಿತ ಅಂಶಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ,” ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸಾಮಾನ್ಯ ಸ್ವಚ್ಛತೆ, ನೈರ್ಮಲ್ಯ ಮತ್ತು ಪ್ರಾಣಿಗಳ ನಿಯಂತ್ರಣ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಇನ್ನಷ್ಟು ಗಮನ ಅಗತ್ಯವಿದ್ದರೂ, ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಈ ಕಾಳಜಿಗಳಿಗೆ ತ್ವರಿತವಾಗಿ ಸ್ಪಂದಿಸಿದೆ ಎಂದು ಬಿಡಬ್ಲ್ಯೂಎಫ್ ಹೇಳಿದೆ. ಆಟದ ಅಂಗಣ, ನೆಲಹಾಸು, ಜಿಮ್ನಾಷಿಯಂ ಮತ್ತು ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿವೆ ಎಂಬುದನ್ನು ಆಟಗಾರರು ಗಮನಿಸಿದ್ದಾರೆ ಎಂದಿದೆ.

ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣವು ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸುತ್ತದೆ. ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲು ಅಗತ್ಯವಿರುವ ಆಟದ ಮೈದಾನದ ಮಾನದಂಡಗಳನ್ನು ಇದು ಪೂರೈಸುತ್ತದೆ. ಇಲ್ಲಿ ಭಾಗವಹಿಸುವವರಿಗೆ ಸುರಕ್ಷಿತ ಮತ್ತು ಉನ್ನತ ಗುಣಮಟ್ಟದ ವಾತಾವರಣವನ್ನು ಖಚಿತಪಡಿಸುವುದೇ ನಮ್ಮ ಆದ್ಯತೆ. ಇದು ಎಲ್ಲಾ ಪಾಲುದಾರರ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಬಿಡಬ್ಲ್ಯೂಎಫ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News