×
Ad

ಕೊಡಗಿನ ವಿಶಿಷ್ಟ ಭೂ ದಾಖಲೆ ವ್ಯವಸ್ಥೆ ಜಮ್ಮಾ ಬಾಣೆ: ಕರ್ನಾಟಕ ಸರಕಾರ ಭೂಕಂದಾಯ ಕಾನೂನು ತಿದ್ದುಪಡಿ ಮಾಡಿದ್ದೇಕೆ?

Update: 2026-01-18 00:16 IST

ಸ್ಥಳೀಯ ಕೊಡವ ಸಮುದಾಯಕ್ಕೆ ನೆಲೆಯಾಗಿರುವ ಸುಂದರ ಕೊಡಗು ಪ್ರದೇಶದಲ್ಲಿ ಹಳೆಯ ಭೂ ದಾಖಲೆಗಳ ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ ಕರ್ನಾಟಕ ಸರಕಾರ ತನ್ನ ಭೂ ಕಂದಾಯ ಕಾನೂನನ್ನು ತಿದ್ದುಪಡಿ ಮಾಡಿದೆ. ಕೊಡಗಿನಲ್ಲಿ ಇರುವ ವಿಶಿಷ್ಟವಾದ ಜಮ್ಮಾ ಬಾಣೆ ಭೂ ಹಿಡುವಳಿಗಳಿಗೆ ಸಂಬಂಧಿಸಿದ ಭೂ ದಾಖಲೆಗಳನ್ನು ಆಧುನೀಕರಿಸುವುದೇ ಈ ತಿದ್ದುಪಡಿಯ ಗುರಿಯಾಗಿದೆ. ಈ ಪ್ರದೇಶದಲ್ಲಿ ಬ್ರಿಟಿಷ್ ಹಾಗೂ ಕೊಡವ ರಾಜರ ಕಾಲದಿಂದ ಕುಟುಂಬಗಳು ತಲೆಮಾರುಗಳಿಂದ ಭೂ ಅನುದಾನಗಳನ್ನು ಹೊಂದಿವೆ. ಆದರೆ ದಾಖಲೆಗಳು ಹೊಸ ಪೀಳಿಗೆಗೆ ವರ್ಗಾವಣೆಗೊಂಡರೂ ಮೂಲ ಅನುದಾನಿತರ (ಪಟ್ಟೇದಾರರ) ಹೆಸರುಗಳೇ ಮುಂದುವರಿದಿವೆ. ಅಧಿಕೃತವಾಗಿ ಗುರುತಿಸಲ್ಪಟ್ಟ ಭೂ ಮಾಲೀಕತ್ವ ದಾಖಲೆಗಳ ಕೊರತೆಯಿಂದ ಪ್ರಸ್ತುತ ಮಾಲೀಕರಿಗೆ ಭೂಮಿಯನ್ನು ಖರೀದಿ–ಮಾರಾಟ ಮಾಡುವುದು ಅಥವಾ ಬ್ಯಾಂಕ್ ಸಾಲ ಪಡೆಯುವುದು ಕಷ್ಟಕರವಾಗಿದೆ.

ಜಮ್ಮಾ ಬಾಣೆ ಭೂಮಿ ಎಂದರೇನು? ಕೊಡಗಿನ ವಿಶಿಷ್ಟ ಭೂ ದಾಖಲೆ ವ್ಯವಸ್ಥೆಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಕಾನೂನು ತಿದ್ದುಪಡಿ ಮಾಡಿದ್ದೇಕೆ? ಇಲ್ಲಿದೆ ಮಾಹಿತಿ.

ಜಮ್ಮಾ ಬಾಣೆ ಭೂಮಿ ಅಂದರೆ ಏನು?

ಜಮ್ಮಾ ಬಾಣೆ ಹಿಡುವಳಿ ಕೊಡಗು ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ವಿಶಿಷ್ಟ ಭೂ ಹಿಡುವಳಿ ರೂಪವಾಗಿದ್ದು, ಇದು ರಾಜ್ಯದ ಇತರ ಭೂ ಹಿಡುವಳಿ ವರ್ಗಗಳಿಗಿಂತ ಭಿನ್ನವಾಗಿದೆ. ‘ಜಮ್ಮಾ’ ಎಂದರೆ ಆನುವಂಶಿಕ ಎಂಬ ಅರ್ಥವಿದೆ. ಈ ಜಮ್ಮಾ ಭೂಮಿಯನ್ನು ಕೊಡಗಿನ ಹಿಂದಿನ ರಾಜರು ಹಾಗೂ ಬ್ರಿಟಿಷರು 1600ರಿಂದ 1800ರ ನಡುವೆ ಸ್ಥಳೀಯ ಸಮುದಾಯಗಳಿಗೆ ಸೈನಿಕ ಸೇವೆಗೆ ಪ್ರತಿಫಲವಾಗಿ ನೀಡಿದ್ದರು. ಜಮ್ಮಾ ಭೂಮಿಗಳು ಭತ್ತದ ಕೃಷಿಗೆ ಬಳಸಲಾಗುತ್ತಿದ್ದ ಜೌಗು ಪ್ರದೇಶಗಳು ಮತ್ತು ಅರಣ್ಯದಿಂದ ಕೂಡಿದ ಎತ್ತರದ ಪ್ರದೇಶಗಳನ್ನು ಒಳಗೊಂಡಿದ್ದವು. ಈ ಪ್ರದೇಶಗಳು ನಂತರ ಕೊಡಗಿನ ಪ್ರಸಿದ್ಧ ಕಾಫಿ ಎಸ್ಟೇಟ್‌ಗಳಾಗಿ ರೂಪಾಂತರಗೊಂಡಿವೆ.

ಜಮ್ಮಾ ಬಾಣೆ ಭೂ ಮಾಲೀಕತ್ವವನ್ನು ಮೂಲ ಪಟ್ಟೇದಾರರ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ತಲೆಮಾರುಗಳಿಂದ ಹೊಸ ಮಾಲೀಕರ ಹೆಸರುಗಳನ್ನು ಪಟ್ಟೇದಾರರ ಹೆಸರಿನ ಜೊತೆಗೆ ಸೇರಿಸಲಾಗುತ್ತಿತ್ತು. ಆದರೆ ಹೊಸ ಮಾಲೀಕರನ್ನು ತೋರಿಸಲು ಭೂ ಮಾಲೀಕತ್ವದ ಹೆಸರನ್ನೇ ಬದಲಾಯಿಸುವ ಪದ್ಧತಿ ಇರಲಿಲ್ಲ.

ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಜಾರಿಗೆ ಬರುವವರೆಗೆ ಕೊಡಗು ಪ್ರದೇಶದಲ್ಲಿ ಭೂ ಮಾಲೀಕತ್ವವನ್ನು ನಿಯಂತ್ರಿಸಲು ಕೊಡಗು ಭೂ ಕಂದಾಯ ಮತ್ತು ನಿಯಂತ್ರಣ ಕಾಯ್ದೆ, 1899 ಜಾರಿಯಲ್ಲಿತ್ತು. 1964ರ ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಈ ನಿಬಂಧನೆಗಳು ಇಲ್ಲದಿದ್ದರೂ, 1899ರ ಕಾಯ್ದೆಯ ಕೆಲವು ಅಂಶಗಳನ್ನು ಕೊಡಗಿನಲ್ಲಿ ಮುಂದುವರಿಸಲಾಯಿತು.

ಕರ್ನಾಟಕ ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲಿ ವಿರಾಜಪೇಟೆಯ ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ ಅವರು, “ಕುಟುಂಬದ ಮುಖ್ಯಸ್ಥರ (ಪಟ್ಟೇದಾರರ) ಹೆಸರು ಮರಣದ ನಂತರವೂ, 40–50 ವರ್ಷಗಳಲ್ಲಿ ಮಾಲೀಕರು ಬದಲಾಗಿದ್ದರೂ ಸಹ ಭೂ ದಾಖಲೆಗಳಲ್ಲಿ ಮುಂದುವರಿದಿದೆ. ಇದನ್ನು ಸಂಪ್ರದಾಯದಂತೆ ಅನುಸರಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಸ್ಪಷ್ಟ ನಿಬಂಧನೆಗಳಿಲ್ಲದಿದ್ದರೂ ಇದು ಮುಂದುವರಿದಿದೆ” ಎಂದು ಹೇಳಿದ್ದಾರೆ.

1993ರಲ್ಲಿ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ‘ಚೆಕ್ಕೇರ ಪೂವಯ್ಯ ವಿರುದ್ಧ ಕರ್ನಾಟಕ ರಾಜ್ಯ’ ಪ್ರಕರಣದಲ್ಲಿ ಕೊಡಗಿನ ಜಮ್ಮಾ ಬಾಣೆ ಭೂಮಿಯ ಮೇಲಿನ ಮಾಲೀಕತ್ವ ಹಕ್ಕುಗಳನ್ನು ಗುರುತಿಸಿತು. 2024ರಲ್ಲಿ ಕರ್ನಾಟಕ ಹೈಕೋರ್ಟ್ 2011ರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಕಾಯ್ದೆಯನ್ನು ಎತ್ತಿಹಿಡಿದಿದ್ದು, ಇದರಿಂದ ಕೊಡವ ಕುಟುಂಬಗಳಿಗೆ ಜಮ್ಮಾ ಬಾಣೆ ಭೂಮಿಯ ಮೇಲೆ ಸಂಪೂರ್ಣ ಮಾಲೀಕತ್ವ ಹಕ್ಕು ದೊರಕಿದೆ.

2011ರ ತಿದ್ದುಪಡಿಯ ಮೂಲಕ ಈ ಹಿಂದೆ ಸರಕಾರಕ್ಕೆ ಸೇರಿದ್ದ ಹಾಗೂ ಸರಕಾರವೇ ಮಾಲೀಕರಾಗಿದ್ದ ಭೂಮಿಯ ಸಂಪೂರ್ಣ ಮಾಲೀಕತ್ವವನ್ನು ಕೊಡವ ಕುಟುಂಬಗಳಿಗೆ ನೀಡಲಾಗಿದೆ. ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಸೇರಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ-2025

ಐತಿಹಾಸಿಕವಾಗಿ ಈ ಭೂಮಿಯನ್ನು ಅವಿಭಕ್ತ ಕುಟುಂಬಗಳ ಸದಸ್ಯರು ಸಂಪ್ರದಾಯಿಕ ಹಕ್ಕುಗಳ ಆಧಾರದ ಮೇಲೆ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು. ಆದರೆ ಹಕ್ಕುಗಳ ದಾಖಲೆಗಳಲ್ಲಿ ಸ್ಪಷ್ಟ ನಮೂದುಗಳ ಕೊರತೆಯಿತ್ತು. ಕಾಲಾನಂತರದಲ್ಲಿ ಜಮ್ಮಾ ಬಾಣೆ ಹಿಡುವಳಿಗಳ ಮಾಲೀಕತ್ವ, ಆನುವಂಶಿಕತೆ, ಬದುಕುಳಿದವರು ಮತ್ತು ಪರಭಾರೆಗಳ ನಿಖರ ದಾಖಲೆ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾದವು ಎಂದು 2025ರ ಆಗಸ್ಟ್‌ನಲ್ಲಿ ನಡೆದ ಕರ್ನಾಟಕ ವಿಧಾನಸಭೆಯ ಮಳೆಗಾಲ ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಯ ಕರಡಿನಲ್ಲಿ ಹೇಳಲಾಗಿದೆ.

ನಿರ್ದಿಷ್ಟವಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರಲ್ಲಿ ಇಂತಹ ಹಿಡುವಳಿಗಳಲ್ಲಿರುವ ಅವಿಭಕ್ತ ಕುಟುಂಬ ಸದಸ್ಯರ ಹಕ್ಕುಗಳನ್ನು ದಾಖಲಿಸಲು ಸ್ಪಷ್ಟ ನಿಬಂಧನೆಗಳ ಕೊರತೆಯಿಂದ ರೂಪಾಂತರ, ನೋಂದಣಿ, ಉತ್ತರಾಧಿಕಾರ ಮತ್ತು ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ತೊಂದರೆಗಳು ಉಂಟಾಗಿವೆ. ಇದರಿಂದ ಜಮ್ಮಾ ಬಾಣೆ ಭೂಮಿಗಳ ಉತ್ತರಾಧಿಕಾರ, ಪರಭಾರೆ ಹಾಗೂ ಸವಲತ್ತುಗಳಿಗೆ ಸಂಬಂಧಿಸಿದ ಅನೇಕ ವಿವಾದಗಳು ಉದ್ಭವಿಸಿವೆ. ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಹಿಡುವಳಿಯ ವಿಶಿಷ್ಟ ಸ್ವರೂಪಕ್ಕೆ ಶಾಸನಬದ್ಧ ಮಾನ್ಯತೆ ನೀಡುವುದು ಹಾಗೂ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರ ಹಕ್ಕುಗಳನ್ನು ರೂಪಾಂತರ ಮತ್ತು ಕಂದಾಯ ದಾಖಲೆಗಳಲ್ಲಿ ಸರಿಯಾಗಿ ದಾಖಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವೆಂದು ಮಸೂದೆ ಹೇಳುತ್ತದೆ.

ರಾಜ್ಯ ಶಾಸಕಾಂಗದ ಉಪಸಮಿತಿಯ ಶಿಫಾರಸುಗಳನ್ನು ಸೇರಿಸಿ ಕಳೆದ ತಿಂಗಳು ಅಂಗೀಕರಿಸಲಾದ ಮಸೂದೆಯ ಮಾರ್ಪಡಿತ ಆವೃತ್ತಿಯಲ್ಲಿ, ಕೊಡಗು ಜಿಲ್ಲೆಯ ಭೂ ದಾಖಲೆಗಳಲ್ಲಿ ಮಾಡಲಾಗಿದ್ದ ಕೆಲವು ಬದಲಾವಣೆಗಳು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ಕ್ಕೆ ಅನುಗುಣವಾಗಿಲ್ಲವೆಂದು ಉಲ್ಲೇಖಿಸಲಾಗಿದೆ.

14.09.2000ರ ಸುತ್ತೋಲೆಯ ಆಧಾರದಲ್ಲಿ ಭೂ ದಾಖಲೆಗಳಿಗೆ ಮಾಡಲಾದ ಬದಲಾವಣೆಗಳು, ಹಕ್ಕುಗಳ ದಾಖಲೆ (RTC)ಯಲ್ಲಿನ ನಮೂದುಗಳನ್ನು ಒಳಗೊಂಡಂತೆ ಭೂ ದಾಖಲೆಗಳ ವರ್ಗೀಕರಣ ಮತ್ತು ನಿರ್ವಹಣೆಯಲ್ಲಿ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇವು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಹಾಗೂ ಕಾಯ್ದೆಯಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲ.

ಭೂಮಿ ಯೋಜನೆಯಡಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಪ್ರಮಾಣೀಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿಖರತೆ, ಏಕರೂಪತೆ ಮತ್ತು ಕಾನೂನುಬದ್ಧತೆಯ ಅಗತ್ಯವನ್ನು ಒತ್ತಿ ಹೇಳುವ ನ್ಯಾಯಾಂಗ ತೀರ್ಪುಗಳ ಬೆಳಕಿನಲ್ಲಿ, ಕಾನೂನಿನ ಸರಿಯಾದ ಪ್ರಕ್ರಿಯೆ ಅನುಸರಿಸಿ ಇಂತಹ ಕೊರತೆಗಳನ್ನು ಸರಿಪಡಿಸಲು ಕೊಡಗು ಜಿಲ್ಲೆಯ ತಹಶೀಲ್ದಾರ್‌ಗಳಿಗೆ ಅಧಿಕಾರ ನೀಡುವುದು ಅಗತ್ಯವಾಗಿದೆ ಎಂದು ಮಸೂದೆ ಸ್ಪಷ್ಟಪಡಿಸುತ್ತದೆ.

ಹೊಸ ತಿದ್ದುಪಡಿಯಲ್ಲೇನಿದೆ?

ಹೊಸ ತಿದ್ದುಪಡಿಯ ಮೂಲಕ ಕೊಡಗಿನ ತಹಶೀಲ್ದಾರ್‌ಗಳಿಗೆ (ಕಂದಾಯ ಇಲಾಖೆಯ ಸಹಾಯಕ ಆಯುಕ್ತರು) ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಪ್ರಕಾರ ಭೂ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲು ಅಧಿಕಾರ ನೀಡಲಾಗಿದೆ. “ಭೂಮಿಯ ಹಿಡುವಳಿದಾರರು, ನಿವಾಸಿಗಳು, ಮಾಲೀಕರು, ಅಡಮಾನದಾರರು, ಭೂಮಾಲೀಕರು ಅಥವಾ ಬಾಡಿಗೆದಾರರು ಅಥವಾ ಬಾಡಿಗೆ ಅಥವಾ ಆದಾಯದ ನಿಯೋಜಿತ ವ್ಯಕ್ತಿಗಳ ಹೆಸರುಗಳನ್ನು” ಒಳಗೊಂಡ ಹಕ್ಕುಗಳ ದಾಖಲೆಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಇದರಲ್ಲಿ ಸೇರಿದೆ. ಈ ತಿದ್ದುಪಡಿ ಕೊಡಗು ಜಿಲ್ಲೆಯ ಭೂ ದಾಖಲೆಗಳನ್ನು ಕಾನೂನು ವ್ಯಾಪ್ತಿಗೆ ತಂದು, ರಾಜ್ಯದ ಉಳಿದ ಭಾಗಗಳೊಂದಿಗೆ ಏಕರೂಪತೆಯನ್ನು ಖಚಿತಪಡಿಸುತ್ತದೆ ಎಂದು ಕಾನೂನು ಹೇಳುತ್ತದೆ.

ರಾಜ್ಯ ವಿಧಾನಸಭೆಯ ಚರ್ಚೆಯ ವೇಳೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಭೂ ದಾಖಲೆಗಳನ್ನು ಆಧುನೀಕರಿಸುವ ಮೊದಲು ಹಾಗೂ ಮಾಲೀಕರಿಗೆ ಭೂ ಹಕ್ಕುಗಳನ್ನು ನೀಡುವ ಮುನ್ನ ಆಕ್ಷೇಪಣೆಗಳನ್ನು ಪರಿಹರಿಸಲು ಸ್ಥಳೀಯ ತಹಶೀಲ್ದಾರ್‌ ಗಳು ಅದಾಲತ್‌ ಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಮಸೂದೆಯ ಪ್ರಾರಂಭಿಕ ಕರಡು, ಜಮ್ಮಾ ಬಾಣೆ ಹಿಡುವಳಿಗಳ ರೂಪಾಂತರ ನೋಂದಣಿಯಲ್ಲಿ ಅವಿಭಕ್ತ ಕುಟುಂಬ ಸದಸ್ಯರ ವಿವರಗಳನ್ನು ಸೇರಿಸುವುದು, ಹಕ್ಕುಗಳ ಸ್ವಾಧೀನ ವರದಿ ಮಾಡುವುದು, ಭೂ ದಾಖಲೆಗಳಲ್ಲಿ ಹಕ್ಕುಗಳ ನೋಂದಣಿ, ವಂಶಾವಳಿ, ಬದುಕುಳಿದಿರುವಿಕೆ, ಆನುವಂಶಿಕತೆ ಹಾಗೂ ಸವಲತ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸುವ ಉದ್ದೇಶದಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸೆಕ್ಷನ್‌ಗಳು 127, 128, 129 ಮತ್ತು 130 ತಿದ್ದುಪಡಿ ಮಾಡುವುದನ್ನು ಉದ್ದೇಶಿಸಿತ್ತು.

ಆದರೆ ಅಂತಿಮವಾಗಿ ಜಾರಿಗೆ ಬಂದ ಮಸೂದೆಯಲ್ಲಿ ಸೆಕ್ಷನ್ 127ಕ್ಕೆ ಉಪವಿಭಾಗವನ್ನು ಸೇರಿಸುವ ಮೂಲಕ ಮಾತ್ರ ತಿದ್ದುಪಡಿ ಮಾಡಲಾಗಿದೆ.

ಉಪವಿಭಾಗ (4)ರ ಪ್ರಕಾರ, ಇತರ ಯಾವುದೇ ನಿಯಮಗಳಿರಲಿ, ತಹಶೀಲ್ದಾರ್ ಈಗ ಅಧಿಕೃತ ಭೂ ದಾಖಲೆಗಳಲ್ಲಿ ಇರುವ ಹಳೆಯ ಅಥವಾ ತಪ್ಪಾದ ನಮೂದುಗಳನ್ನು ಅಳಿಸಲು ಅಥವಾ ಸರಿಪಡಿಸಲು ಅಧಿಕಾರ ಹೊಂದಿರುತ್ತಾರೆ. ಇದಕ್ಕಾಗಿ ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕಾಗಿಲ್ಲ. ಕುಟುಂಬ ಅರ್ಜಿ ಸಲ್ಲಿಸಿದರೂ ಅಥವಾ ತಹಶೀಲ್ದಾರ್ ಸ್ವತಃ ದೋಷವನ್ನು ಗಮನಿಸಿದರೂ ತಿದ್ದುಪಡಿ ಮಾಡಬಹುದು.

ಹಿಂದೆ ಅನೇಕ ಕುಟುಂಬಗಳ ಹೆಸರುಗಳನ್ನು ‘ಮಾಲೀಕತ್ವ’ ವಿಭಾಗದಿಂದ (ಹಳೆಯ ನೋಂದಣಿಗಳ ಕಾಲಂ 3) ‘ಬಾಡಿಗೆದಾರರು’ ಅಥವಾ ‘ವಿಶೇಷ ವರ್ಗಗಳು’ (ಕಾಲಂ 9 ಮತ್ತು 12)ಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ಸರ್ಕಾರವೇ ಭೂಮಿಯ ಮಾಲೀಕ, ಕುಟುಂಬಗಳು ಬಳಕೆದಾರರು ಮಾತ್ರ ಎಂಬ ಭಾವನೆ ಉಂಟಾಗಿತ್ತು. ಹೊಸ ಕಾನೂನು ತಹಶೀಲ್ದಾರ್‌ಗೆ ಆ ಹೆಸರುಗಳನ್ನು ‘ಮಾಲೀಕತ್ವ’ ವಿಭಾಗಕ್ಕೆ ಮರುಸ್ಥಾಪಿಸಲು ಸೂಚಿಸುತ್ತದೆ. ಇದರಿಂದ ಕೊಡವ ಕುಟುಂಬಗಳೇ ಭೂಮಿಯ ಸಂಪೂರ್ಣ ಮಾಲೀಕರು, ಸರ್ಕಾರವಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News