Maharashtra ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಠಾಕ್ರೆ–ಪವಾರ್ ಎದುರು ಬಿಜೆಪಿ ಪ್ರಾಬಲ್ಯ; 2029 ಚುನಾವಣೆಗೆ ಹೆಚ್ಚಿದ ನಿರೀಕ್ಷೆ
ಸಾಂದರ್ಭಿಕ ಚಿತ್ರ | Photo Credit : PTI
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, 29 ಮಹಾನಗರ ಪಾಲಿಕೆಗಳ 2,869 ಸ್ಥಾನಗಳಲ್ಲಿ 1,425 ಸ್ಥಾನಗಳನ್ನು ಗೆದ್ದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯಲ್ಲಿ ಜಯ ಸಾಧಿಸಿರುವ ಬಿಜೆಪಿ, ರಾಜ್ಯದ ಏಕೈಕ ಅತಿದೊಡ್ಡ ಮತ್ತು ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. 227 ಸದಸ್ಯ ಬಲದ ಬಿಎಂಸಿಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದಿದ್ದು, ಶಿವಸೇನಾ 29 ಸ್ಥಾನಗಳನ್ನು ಪಡೆದುಕೊಂಡಿದೆ. ಶಿವಸೇನಾ (ಯುಬಿಟಿ) 65 ಮತ್ತು ಎಂಎನ್‌ಎಸ್ ಆರು ಸ್ಥಾನಗಳನ್ನು ಗೆದ್ದಿವೆ. ವಂಚಿತ್ ಬಹುಜನ ಅಘಾಡಿ (ವಿಬಿಎ) ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ 24 ಸ್ಥಾನಗಳನ್ನು ಗಳಿಸಿದ್ದು, ಎಐಎಂಐಎಂ 8, ಎನ್‌ಸಿಪಿ 3, ಸಮಾಜವಾದಿ ಪಕ್ಷ 2 ಮತ್ತು ಎನ್‌ಸಿಪಿ (ಎಸ್‌ಪಿ) ಕೇವಲ ಒಂದು ಸ್ಥಾನ ಗಳಿಸಿವೆ.
ಪುಣೆ ಚುನಾವಣೆಯಲ್ಲಿ ಬಿಜೆಪಿ 119 ಸ್ಥಾನಗಳನ್ನು ಗೆದ್ದು ಪವಾರ್ ಕುಟುಂಬಕ್ಕೆ ರಾಜಕೀಯ ಹೊಡೆತ ನೀಡಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 27 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅದರ ಮಿತ್ರಪಕ್ಷ ಎನ್‌ಸಿಪಿ (ಎಸ್‌ಪಿ) ಮೂರು ಸ್ಥಾನಗಳನ್ನು ಮತ್ತು ಕಾಂಗ್ರೆಸ್ 15 ಸ್ಥಾನಗಳನ್ನು ಪಡೆದಿವೆ. ಛತ್ರಪತಿ ಸಂಭಾಜಿನಗರದಲ್ಲಿ ಬಿಜೆಪಿ 57, ಶಿವಸೇನಾ 13, ಕಾಂಗ್ರೆಸ್ 1 ಮತ್ತು ಎಐಎಂಐಎಂ 33 ಸ್ಥಾನಗಳನ್ನು ಗಳಿಸಿವೆ.
ಅಂತಿಮ ಲೆಕ್ಕಾಚಾರದ ಪ್ರಕಾರ, ಒಟ್ಟು 2,869 ಸ್ಥಾನಗಳಲ್ಲಿ ಬಿಜೆಪಿ 1,425 ಸ್ಥಾನಗಳನ್ನು ಗೆದ್ದಿದೆ. ಶಿವಸೇನಾ 399, ಕಾಂಗ್ರೆಸ್ 324, ಎನ್‌ಸಿಪಿ 167, ಶಿವಸೇನಾ (ಯುಬಿಟಿ) 155, ಎನ್‌ಸಿಪಿ (ಎಸ್‌ಪಿ) 36, ಎಂಎನ್‌ಎಸ್ 13, ಬಿಎಸ್‌ಪಿ 6, ಇತರ ಪಕ್ಷಗಳು 129, ಮಾನ್ಯತೆ ಪಡೆಯದ ಪಕ್ಷಗಳು 196 ಮತ್ತು 19 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ.
ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶಗಳು 2029ರ ಚುನಾವಣೆಗೆ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಬಿಜೆಪಿಯನ್ನು ರಾಜ್ಯದ ಏಕೈಕ ಅತಿದೊಡ್ಡ ಮತ್ತು ಬಲಿಷ್ಠ ಪಕ್ಷವಾಗಿ ಬಿಂಬಿಸಿವೆ. ಈ ಫಲಿತಾಂಶಗಳು ಮಹಾಯುತಿಯೊಳಗಿನ ಸಂಭಾವ್ಯ ಅಧಿಕಾರ ಪ್ರಾಬಲ್ಯವನ್ನು ತೋರಿಸುವುದರ ಜತೆಗೆ, ವಿರೋಧ ಪಕ್ಷವಾಗಿರುವ ಮಹಾ ವಿಕಾಸ್ ಅಘಾಡಿಯ ಭವಿಷ್ಯದ ಬಗ್ಗೆ ಸಹ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮರಾಠಿ ಮತ ಬ್ಯಾಂಕ್ ನ ಕ್ರೋಡೀಕರಣ
20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್ ಮತ್ತು ರಾಜ್ ಠಾಕ್ರೆ ಅವರ ಪ್ರಯತ್ನಗಳು ಮರಾಠಿ ಮತ ಬ್ಯಾಂಕ್ ಅನ್ನು ಕ್ರೋಢೀಕರಿಸುವ ಉದ್ದೇಶ ಹೊಂದಿದ್ದವು. ಆ ಭಾವನಾತ್ಮಕ ಆಕರ್ಷಣೆ ಮುಂಬೈನ ಪ್ರಮುಖ ಮರಾಠಿ ಮತದಾರರ ಪ್ರದೇಶಗಳಾದ ದಾದರ್, ಮಾಹಿಮ್, ಪರೇಲ್ ಸೇರಿದಂತೆ ಕೆಲವು ವಾರ್ಡ್‌ಗಳಲ್ಲಿ ಪರಿಣಾಮ ಬೀರಿತು. ಈ ಕ್ಷೇತ್ರಗಳಲ್ಲಿ ಠಾಕ್ರೆ ಬಣದ ಶಿವಸೇನಾ, ಶಿಂಧೆ ಬಣದ ಅಭ್ಯರ್ಥಿಗಳನ್ನು ಸೋಲಿಸಿತು. ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಉದ್ಧವ್ ಠಾಕ್ರೆ ಅವರಿಗೆ ಹಿನ್ನಡೆ ಎದುರಾಯಿತು.
ಉದ್ಧವ್ ಬಣಕ್ಕೆ ಹಿನ್ನಡೆ; ಫಲಿತಾಂಶಗಳು ಹೇಳುವುದೇನು?
ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣಾ ಫಲಿತಾಂಶಗಳು ಉದ್ಧವ್ ಠಾಕ್ರೆ ಮತ್ತು ಶಿವಸೇನಾ (ಯುಬಿಟಿ)ಗೆ ನಿರ್ಣಾಯಕ ತಿರುವು ತಂದಿವೆ. ಭಾರತದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲಿನ 25 ವರ್ಷಗಳ ಆಡಳಿತ ಈ ಚುನಾವಣೆಯೊಂದಿಗೆ ಅಂತ್ಯಗೊಂಡಿದೆ. ಬಿಎಂಸಿ ಕೇವಲ ಅಧಿಕಾರದ ಸಂಕೇತವಲ್ಲ; ಪಕ್ಷದ ರಾಜಕೀಯ ಪ್ರಭಾವ ಮತ್ತು ಆರ್ಥಿಕ ಬಲದ ಪ್ರಮುಖ ಮೂಲವೂ ಆಗಿತ್ತು. ಮಹಾರಾಷ್ಟ್ರದ ಪುರಸಭೆಗಳಲ್ಲಿ ಆಡಳಿತಾರೂಢ ಮಹಾಯುತಿ ಗೆಲ್ಲುವ ಮೂಲಕ ಬಿಜೆಪಿಯ ನಗರ ಪ್ರಾಬಲ್ಯ ಇನ್ನಷ್ಟು ಗಟ್ಟಿಯಾಗಿದೆ.
ಸೀಮಿತ ಸಂಪನ್ಮೂಲಗಳೊಂದಿಗೆ ಹೋರಾಡುತ್ತಾ ಉದ್ಧವ್ ಠಾಕ್ರೆ ಮುಂಬೈ ಕೇಂದ್ರಿತ ಪ್ರಚಾರ ನಡೆಸಿದ್ದರು. ಅವರು ‘ಮರಾಠಿ ಮನೂಸ್’ಗಾಗಿ ಕಲ್ಯಾಣದ ಸಂದೇಶ ಹಾಗೂ ಸೇನೆಯ ಸಾಂಪ್ರದಾಯಿಕ ತಳಮಟ್ಟದ ಜಾಲವನ್ನು ಅವಲಂಬಿಸಿದ್ದರು. ಸೋದರ ಸಂಬಂಧಿ ರಾಜ್ ಠಾಕ್ರೆಯೊಂದಿಗೆ ಯುದ್ಧತಂತ್ರದ ಸಮನ್ವಯವು ಮರಾಠಿ ಮತಗಳನ್ನು ಕ್ರೋಢೀಕರಿಸುವ ಗುರಿಯನ್ನು ಹೊಂದಿತ್ತು. ಈ ತಂತ್ರವು ಶಿವಸೇನಾ (ಯುಬಿಟಿ)ಗೆ ದಕ್ಷಿಣ–ಮಧ್ಯ ಮುಂಬೈನಲ್ಲಿ, ದಾದರ್ ನಿಂದ ಬೈಕುಲ್ಲಾದವರೆಗೆ ಬಲವಾದ ಮತಾಧಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದರೂ, ಬಿಎಂಸಿ ಅಧಿಕಾರ ಕಳೆದುಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಏಕನಾಥ್ ಶಿಂಧೆ ನೇತೃತ್ವದ ಪ್ರತಿಸ್ಪರ್ಧಿ ಬಣದೊಂದಿಗೆ ಹೋಲಿಸಿದರೆ, ಠಾಕ್ರೆ ಮುಂಬೈನಲ್ಲಿ ತನ್ನ ನೆಲೆಯನ್ನು ಉಳಿಸಿಕೊಂಡರು.
25 ವರ್ಷಗಳ ಬಳಿಕ ಬಿಎಂಸಿ ಅಧಿಕಾರ ಕಳೆದುಕೊಂಡಿದ್ದರೂ, ಠಾಕ್ರೆಗಳು ತಮ್ಮ ಮರಾಠಿ ಗುರುತಿನ ರಾಜಕೀಯವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. “ಈ ಹೋರಾಟ ಇನ್ನೂ ಮುಗಿದಿಲ್ಲ” ಎಂದು ಶಿವಸೇನಾ (ಯುಬಿಟಿ) ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಮರಾಠಿಗಳಿಗೆ ಯೋಗ್ಯ ಗೌರವ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.
ಈ ಸೋಲು ಶಿವಸೇನಾ (ಯುಬಿಟಿ)ಗೆ ತೀವ್ರ ಹೊಡೆತ
ಶ್ರೀಮಂತ ನಾಗರಿಕ ಸಂಸ್ಥೆಯ ಮೇಲಿನ ನಿಯಂತ್ರಣವು ದಶಕಗಳ ಕಾಲ ಅವಿಭಜಿತ ಶಿವಸೇನೆಗೆ ಪೋಷಕ ಜಾಲಗಳು, ಅಸ್ಮಿತೆ ಮತ್ತು ಸಾಂಸ್ಥಿಕ ಬಲಕ್ಕೆ ವಿಶಿಷ್ಟ ಪ್ರವೇಶವನ್ನು ನೀಡಿತ್ತು. ಆದರೆ ಇದೀಗ ಪಕ್ಷ ವಿರೋಧ ಪಕ್ಷದ ಸ್ಥಾನಕ್ಕೆ ಸರಿದಿದೆ. ಸೋಲಿನ ಬಳಿಕ ಪಕ್ಷಾಂತರವನ್ನು ತಡೆಯುವುದು, ಮಹಾ ವಿಕಾಸ್ ಅಘಾಡಿಯ ಪತನದಿಂದ ಪಾಠ ಕಲಿಯುವುದು ಮತ್ತು ವಿಧಾನ ಪರಿಷತ್ತಿನಲ್ಲಿ ಅವಧಿ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಸವಾಲು ಉದ್ಧವ್ ಠಾಕ್ರೆ ಎದುರಾಗಿದೆ. ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳನ್ನು ಮೀರಿ ಪ್ರಸ್ತುತವಾಗಿರಲು, ಸೇನಾ (ಯುಬಿಟಿ) ರಾಜಕೀಯವನ್ನು ಮರುಕಲ್ಪಿಸಿಕೊಳ್ಳಬೇಕಾಗಿದೆ. ಮೂಲ ಮರಾಠಿ ಮತದಾರರನ್ನು ಮೀರಿ ಆಕರ್ಷಣೆಯನ್ನು ವಿಸ್ತರಿಸುವುದು ಹಾಗೂ ನಗರ ಆಡಳಿತದ ಎರಡೂ ಹಂತಗಳನ್ನು ನಿಯಂತ್ರಿಸುತ್ತಿರುವ ಬಿಜೆಪಿಯನ್ನು ಎದುರಿಸಬಲ್ಲ ಒಕ್ಕೂಟವನ್ನು ಪುನರ್‌ನಿರ್ಮಿಸುವುದು ಅಗತ್ಯವಾಗಿದೆ.
ಪುಣೆ ಮುನ್ಸಿಪಲ್ ಚುನಾವಣೆಯಲ್ಲಿ ಪವಾರ್ ಬ್ರ್ಯಾಂಡ್‌ಗೆ ಹಿನ್ನಡೆ
ಪುಣೆ ಮತ್ತು ಪಿಂಪ್ರಿ–ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಫಲಿತಾಂಶಗಳು ಸ್ಪಷ್ಟ ರಾಜಕೀಯ ಸಂದೇಶವನ್ನು ನೀಡಿವೆ. ಈ ನಗರ ಶಕ್ತಿ ಕೇಂದ್ರಗಳಲ್ಲಿ ಒಂದು ಕಾಲದಲ್ಲಿ ನಿರ್ಣಾಯಕವೆಂದು ಪರಿಗಣಿಸಲ್ಪಟ್ಟಿದ್ದ ಪವಾರ್ ಬ್ರ್ಯಾಂಡ್ ಹಿನ್ನಡೆಯನ್ನು ಅನುಭವಿಸಿದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಎರಡು ಬಣಗಳ ನಡುವೆ ಯುದ್ಧತಂತ್ರದ ಸಮನ್ವಯ ಇದ್ದರೂ, ನಿರೀಕ್ಷಿಸಿದ ಮಟ್ಟಿಗೆ ಮತಗಳು ಬಂದಿಲ್ಲ. ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ.
ಕಳೆದ ದಶಕದಲ್ಲಿ ಪುಣೆಯ ಮತದಾರರ ಆದ್ಯತೆಗಳಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಮಧ್ಯಮ ವರ್ಗ, ಮೊದಲ ಬಾರಿಗೆ ಮತದಾನ ಮಾಡುವವರು ಮತ್ತು ಅಪಾರ್ಟ್‌ಮೆಂಟ್ ಗಳಲ್ಲಿ ವಾಸಿಸುವ ಜನರು ಸ್ಥಳೀಯ ನಾಯಕತ್ವಕ್ಕಿಂತ ಆಡಳಿತ, ಮೂಲಸೌಕರ್ಯ ಮತ್ತು ರಾಷ್ಟ್ರೀಯ ರಾಜಕೀಯ ನಿರೂಪಣೆಗಳಿಗೆ ಹೆಚ್ಚು ಸ್ಪಂದಿಸುತ್ತಿದ್ದಾರೆ. ಈ ಬದಲಾವಣೆಗೆ ಪವಾರ್ ಬ್ರ್ಯಾಂಡ್‌ಗಳು ಹೊಂದಿಕೊಳ್ಳಲು ವಿಫಲವಾದವು. ಪಿಂಪ್ರಿ–ಚಿಂಚ್‌ವಾಡ್ ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆಯಿದ್ದರೂ, ಅಲ್ಲಿ ದೊರೆತ ಫಲಿತಾಂಶಗಳು ಎನ್‌ಸಿಪಿ ಪಾಳಯವನ್ನು ನಿರಾಶೆಗೊಳಿಸಿವೆ. ಅಜಿತ್ ಪವಾರ್ ಅವರ ವೈಯಕ್ತಿಕ ಪ್ರಭಾವವಿದ್ದರೂ, ಬಲವಾದ ಸಾಂಸ್ಥಿಕ ಒಗ್ಗಟ್ಟು ಮತ್ತು ಸ್ಪಷ್ಟ ರಾಜಕೀಯ ನಿರೂಪಣೆ ಇಲ್ಲದೆ ವರ್ಚಸ್ಸು ಮಾತ್ರ ಸಾಕಾಗುವುದಿಲ್ಲ ಎಂಬುದನ್ನು ಈ ಫಲಿತಾಂಶಗಳು ಸೂಚಿಸುತ್ತವೆ.
ತೃಪ್ತಿಕರ ಸಾಧನೆ ಮಾಡಿದ ಕಾಂಗ್ರೆಸ್
ಬಿಜೆಪಿ ಮತ್ತು ಶಿವಸೇನಾ (ಶಿಂಧೆ) ನಂತರ ರಾಜ್ಯಾದ್ಯಂತ ಅತಿ ಹೆಚ್ಚು ಮುನ್ಸಿಪಲ್ ಕಾರ್ಪೊರೇಷನ್ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ, ಮಹಾರಾಷ್ಟ್ರದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಹೊರಗೆ ಬಿಜೆಪಿ ಬಳಿಕ ಕಾಂಗ್ರೆಸ್ ನ ಪ್ರಾಬಲ್ಯವಿದೆ. ಹಲವು ನಗರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸ್ಥಳೀಯ ನಾಯಕತ್ವದ ಪಾತ್ರ ಮಹತ್ವದ್ದಾಗಿದೆ. ಕೊಲ್ಹಾಪುರದಲ್ಲಿ ಸತೇಜ್ ‘ಬಂಟಿ’ ಪಾಟೀಲ್ ಮತ್ತು ಲಾತೂರಿನಲ್ಲಿ ಅಮಿತ್ ದೇಶಮುಖ್ ನಿರ್ವಹಿಸಿದ ಪಾತ್ರವು ಗಮನಾರ್ಹವಾಗಿದೆ. ಇದಕ್ಕೆ ವಿರುದ್ಧವಾಗಿ, ಸೋಲಾಪುರದಂತಹ ಸ್ಥಳಗಳಲ್ಲಿ ಸ್ಥಳೀಯ ನಾಯಕತ್ವದ ವಿಭಜನೆ ಪಕ್ಷದ ಪ್ರದರ್ಶನಕ್ಕೆ ಧಕ್ಕೆಯುಂಟುಮಾಡಿದೆ.
ಅಕೋಲಾ, ಅಮರಾವತಿ ಮತ್ತು ನಾಗ್ಪುರದಂತಹ ನಗರಗಳಲ್ಲಿ ವಿಬಿಎ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಲಾಭ ಕಂಡಿದೆ. ನವಯಾನ ಬೌದ್ಧ, ಮುಸ್ಲಿಂ ಮತದಾರರು ಮತ್ತು ಪ್ರಗತಿಪರ ವರ್ಗಗಳನ್ನು ಕ್ರೋಢೀಕರಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಆದರೆ ಥಾಣೆ, ನವಿ ಮುಂಬೈ, ಕಲ್ಯಾಣ–ಡೊಂಬಿವಿಲಿ, ವಸೈ–ವಿರಾರ್, ಪನ್ವೇಲ್ ಮತ್ತು ಉಲ್ಹಾಸ್‌ನಗರಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ. ಮುಸ್ಲಿಂ ಬಹುಸಂಖ್ಯಾತ ಭಿವಂಡಿ–ನಿಜಾಂಪುರ ಮತ್ತು ಮುಸ್ಲಿಂ–ಕ್ರಿಶ್ಚಿಯನ್ ಜನಸಂಖ್ಯೆ 20 ಶೇಕಡಕ್ಕೂ ಹೆಚ್ಚು ಇರುವ ಮೀರಾ–ಭಯಂದರ್‌ನಲ್ಲಿ ಮಾತ್ರ ಪಕ್ಷ ಉತ್ತಮ ಪ್ರದರ್ಶನ ನೀಡಿದೆ. ಹಿಂದೂ ಮಧ್ಯಮ ವರ್ಗದ ಪ್ರದೇಶಗಳಲ್ಲಿ ಪಕ್ಷದ ಹಿಡಿತ ದುರ್ಬಲವಾಗಿಯೇ ಉಳಿದಿದ್ದು, ಮುಸ್ಲಿಂ ಮತ್ತು ದಲಿತರಂತಹ ಪ್ರಮುಖ ಜನಸಂಖ್ಯಾ ಗುಂಪುಗಳಲ್ಲಿ ಬೆಂಬಲವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ.