ಕಲ್ಯಾಣ ಕರ್ನಾಟಕ: ಜನಪ್ರತಿನಿಧಿಗಳ ಜವಾಬ್ದಾರಿ
ಡಾ. ನಂಜುಂಡಪ್ಪನವರ ವರದಿ ಅತ್ಯಂತ ವೈಜ್ಞಾನಿಕವಾಗಿತ್ತು. ಹಿಂದುಳಿದ, ಅತಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕೆಂಬುದು ವರದಿಯ ಆಶಯವಾಗಿತ್ತು. ನಂಜುಂಡಪ್ಪ ವರದಿಯನ್ನು ಯಥಾವತ್ತಾಗಿ ಮತ್ತು ಸಮರ್ಪಕವಾಗಿ ಅಭಿವೃದ್ಧಿಪಡಿಸಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಮತ್ತೆ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಬೆಂಗಳೂರು-ಮೈಸೂರು ಭಾಗದಂತೆ ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸುವ ಪ್ರಮೆಯವೇ ಬರುತ್ತಿರಲಿಲ್ಲ.
ಇತ್ತೀಚೆಗೆ ಕಲಬುರಗಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆಯವರು ‘‘ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಸಿಂಗಾಪುರ ಮಾಡುವುದು ಬೇಡ. ಮೈಸೂರು-ಬೆಂಗಳೂರು ಮಟ್ಟದಲ್ಲಿ ಅಭಿವೃದ್ಧಿಪಡಿಸಿ’’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಬಗೆಗೆ ಇರುವ ಕಾಳಜಿ ನೈಜವಾದುದು. ಅವರು ಅಧಿಕಾರದಲ್ಲಿ ಇದ್ದಾಗಲೆಲ್ಲ ಅಭಿವೃದ್ಧಿ ರಾಜಕಾರಣ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಸಚಿವರಾಗಿದ್ದಾಗ ಸಂವಿಧಾನದ 371ಕಲಂಗೆ ತಿದ್ದುಪಡಿ ಮಾಡಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರೂ ಕೈ ಜೋಡಿಸಿದ್ದರು. ವೈಜನಾಥ ಪಾಟೀಲ್ ಮುಂತಾದವರ ಅವಿರತ ಹೋರಾಟವೂ ಒತ್ತಾಸೆಯಾಗಿ ನಿಂತಿತ್ತು. 2013ರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳು ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ಸೇರಿಕೊಂಡಿವೆ. ಏಳೂ ಜಿಲ್ಲೆಗಳಲ್ಲಿನ ಸರಕಾರಿ ನೌಕರಿಗಳಲ್ಲಿ ಪ್ರತಿಶತ ಎಂಭತ್ತರಷ್ಟು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಒಟ್ಟು ಸೀಟುಗಳಲ್ಲಿ ಎಂಭತ್ತರಷ್ಟು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಹೊರತು ಪಡಿಸಿದ ಜಿಲ್ಲೆಗಳಲ್ಲಿನ ಸರಕಾರಿ ಉದ್ಯೋಗಗಳು ಮತ್ತು ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳಲ್ಲಿ ಪ್ರತಿಶತ ಎಂಟು ಸ್ಥಾನಗಳು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಾಗಿವೆ. ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ತಕ್ಕ ಮಟ್ಟಿಗೆ ಅನುಕೂಲವಾಗಿದೆ. ಹಾಗೆ ನೋಡಿದರೆ, ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದ್ದಾಗ ವಿಶೇಷ ಸ್ಥಾನಮಾನದ ಬೇಡಿಕೆ ಸಲ್ಲಿಸಲಾಗಿತ್ತು. ಆಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿಯವರು ರಾಜ್ಯ ಸರಕಾರದ ಬೇಡಿಕೆಯನ್ನು ತಿರಸ್ಕರಿಸಿದ್ದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರಕಿ ದಶಕಗಳೇ ಕಳೆದಿವೆ. ಹತ್ತಾರು ಸಾವಿರ ಕೋಟಿ ಅನುದಾನ ಹರಿದು ಬಂದಿದೆ. ಹೀಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಯಾರೋ ಬಂದು ಅಭಿವೃದ್ಧಿಪಡಿಸಬೇಕು ಎಂದು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಕಲ್ಯಾಣ ಕರ್ನಾಟಕದ ಶಾಸಕರಿಗೆ ಪ್ರಮುಖ ಖಾತೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಯಾದವರು ಇದಕ್ಕಿಂತ ಹೆಚ್ಚು ಮಾಡಲಾರರು. ಆದರೆ ಸರಕಾರ ನೀಡಿದ ಅಧಿಕಾರ ಮತ್ತು ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಸಿಕೊಂಡಿದ್ದಾರೆಯೇ?
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹಿಂದುಳಿದಿರುವಿಕೆಯ ಅಧ್ಯಯನ ಕೈಗೊಳ್ಳಲು ಖ್ಯಾತ ಅರ್ಥ ಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ನಂಜುಂಡಪ್ಪ ನೇತೃತ್ವದ ಸಮಿತಿ ವ್ಯಾಪಕ ಅಧ್ಯಯನ ನಡೆಸಿ ಕರ್ನಾಟಕ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಂಜುಂಡಪ್ಪ ವರದಿ ಕೆಲವು ಶಿಫಾರಸುಗಳನ್ನು ಮಾಡಿತ್ತು. ಕಾಲ ಮಿತಿಯೊಳಗೆ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಸೂಚಿಸಿತ್ತು. ಪ್ರತೀ ವರ್ಷ ಎರಡು ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಎಂಟು ವರ್ಷಗಳ ಅವಧಿಯಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿತ್ತು. ಅಂದರೆ, ವರ್ಷಕ್ಕೆ ಎರಡು ಸಾವಿರದಂತೆ ಎಂಟು ವರ್ಷಗಳ ಕಾಲ ಮಿತಿಯೊಳಗೆ ಒಟ್ಟು ಹದಿನಾರು ಸಾವಿರ ಕೋಟಿ ಹಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ನಂಜುಂಡಪ್ಪನವರ ಖಚಿತ ಅಭಿಪ್ರಾಯವಾಗಿತ್ತು.
ಡಾ. ನಂಜುಂಡಪ್ಪನವರ ವರದಿ ಅತ್ಯಂತ ವೈಜ್ಞಾನಿಕವಾಗಿತ್ತು. ಹಿಂದುಳಿದ, ಅತಿ ಹಿಂದುಳಿದ ತಾಲೂಕುಗಳನ್ನು ಗುರುತಿಸಿ ಆದ್ಯತೆಯ ಮೇರೆಗೆ ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕೆಂಬುದು ವರದಿಯ ಆಶಯವಾಗಿತ್ತು. ನಂಜುಂಡಪ್ಪ ವರದಿಯನ್ನು ಯಥಾವತ್ತಾಗಿ ಮತ್ತು ಸಮರ್ಪಕವಾಗಿ ಅಭಿವೃದ್ಧಿಪಡಿಸಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಮತ್ತೆ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಬೆಂಗಳೂರು-ಮೈಸೂರು ಭಾಗದಂತೆ ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸುವ ಪ್ರಮೆಯವೇ ಬರುತ್ತಿರಲಿಲ್ಲ.
ಕರ್ನಾಟಕ ಸರಕಾರ 2013-14ರಿಂದ 24-25ರ ಅವಧಿಯಲ್ಲಿ ಒಟ್ಟು ರೂ. 19,778.33 ಕೋಟಿ ಅನುದಾನ ಹಂಚಿಕೆ ಮಾಡಿದೆ. ರೂ. 16,228.80 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು ಈ ಹತ್ತು ವರ್ಷಗಳ ಅವಧಿಯಲ್ಲಿ ರೂ. 13,893.32 ಕೋಟಿ ಖರ್ಚು ಮಾಡಿದೆ.
ರಾಜ್ಯ ಸರಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ಇಲ್ಲಿಯವರೆಗೆ 41,103 ಕಾಮಗಾರಿಗಳನ್ನು ಕೈಗೊಂಡಿದ್ದು ಅವುಗಳಲ್ಲಿ 32,985 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 6,507 ಕಾಮಗಾರಿಗಳು ಪ್ರಗತಿಯಲ್ಲಿವೆ. 2025-26ನೇ ಸಾಲಿಗೆ ಕರ್ನಾಟಕ ಸರಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಮತ್ತೆ 5,000 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಪ್ರಾದೇಶಿಕ ಅಸಮಾನತೆ ಅಧ್ಯಯನಕ್ಕೆ ಡಾ. ಗೋವಿಂದರಾವ್ ಸಮಿತಿ ರಚಿಸಿ ವರದಿ ತರಿಸಿಕೊಂಡಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರೆತ ಮೇಲೆ ನಿರಂತರ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರ ಸರಕಾರ ಆಡಳಿತ ನಡೆಸಿತ್ತು. ಆಗ ಡಾ. ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಖಮರುಲ್ ಇಸ್ಲಾಂ, ಶಿವರಾಜ್ ತಂಗಡಗಿ, ಬಾಬುರಾವ್ ಚಿಂಚನಸೂರ್, ಡಾ. ಎ.ಬಿ. ಮಾಲಕರೆಡ್ಡಿ ಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಸರಕಾರದ ಉತ್ತರಾರ್ಧದಲ್ಲಿ ಈಶ್ವರ್ ಖಂಡ್ರೆ, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ ಮಂತ್ರಿಗಳಾಗಿದ್ದರು. ಪ್ರಿಯಾಂಕ್ ಖರ್ಗೆಯವರು ಎಚ್.ಡಿ. ಕುಮಾರ ಸ್ವಾಮಿಯವರ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲೂ ಮಂತ್ರಿಯಾಗಿದ್ದರು.
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬಿಜೆಪಿ ಸರಕಾರ ಏನೇನೂ ಮಾಡಲಿಲ್ಲ ಒಪ್ಪಿಕೊಳ್ಳೋಣ. ಎಲ್.ಕೆ. ಅಡ್ವಾಣಿ ವಿಶೇಷ ಸ್ಥಾನಮಾನದ ಬೇಡಿಕೆ ತಿರಸ್ಕರಿಸಿದರು. ಬಿಜೆಪಿ ನಾಯಕರು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದೇ ಷರಾ ಬರೆಯೋಣ. ಆದರೆ ಕಾಂಗ್ರೆಸ್ ನಾಯಕರು ಇಷ್ಟೆಲ್ಲ ಅಧಿಕಾರ ಹೊಂದಿಯೂ ಕಲ್ಯಾಣ ಕರ್ನಾಟಕವನ್ನು ಯಾಕೆ ಬೆಂಗಳೂರು-ಮೈಸೂರು ಮಟ್ಟದಲ್ಲಿ ಅಭಿವೃದ್ಧಿಪಡಿಸಲಿಲ್ಲ?
ಡಾ. ಶರಣಪ್ರಕಾಶ್ ಪಾಟೀಲ್ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ನಿರಂತರ ಐದು ವರ್ಷಗಳ ಕಾಲ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಆ ಅವಧಿಯಲ್ಲಿ ಅವರು ಹಣ ಖರ್ಚು ಮಾಡಿದ್ದಾರೆ. ಕಟ್ಟಡ ಕಟ್ಟಿಸಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ಪ್ರದೇಶದ ವೈದ್ಯಕೀಯ ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲೂ ಡಾ. ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ. ಜಯದೇವ ಆಸ್ಪತ್ರೆ ಸೇರಿದಂತೆ ಹಲವು ವೈದ್ಯಕೀಯ ಸಂಸ್ಥೆಗಳ ಕಟ್ಟಡ ಕಟ್ಟಿಸಿದ್ದಾರೆ. ಆದರೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸರಿಸಮನಾಗಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಯಾಕೆ ಮಾಡಲಾಗಿಲ್ಲ? ಈ ಹೊತ್ತು ಕಲಬುರಗಿ ಜನತೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಅರಸಿ ಸೊಲ್ಲಾಪುರ, ಹೈದರಾಬಾದ್‌ಗೆ ಹೋಗುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ವಿಭಾಗೀಯ ಕೇಂದ್ರವಾದ ಕಲಬುರಗಿಯ ಹಣೆಬರಹ ಹೀಗಿರುವಾಗ ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿನ ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟ ಹೇಗಿರಬಹುದು?
ದೊರೆತ ಅಧಿಕಾರವನ್ನು ಜನತೆಯ ಒಳಿತಿಗಾಗಿ ಬಳಸಿಕೊಂಡಿದ್ದರೆ ಕಲ್ಯಾಣ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಿದ್ದವು. ಬೆಂಗಳೂರು ಮತ್ತು ಮೈಸೂರು ಮೆಡಿಕಲ್ ಕಾಲೇಜುಗಳು ಈ ಹೊತ್ತಿಗೂ ಗುಣಮಟ್ಟ ಕಾಯ್ದುಕೊಂಡು ಬೇಡಿಕೆ ಉಳಿಸಿಕೊಂಡಿವೆ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಇಡೀ ಭಾರತದಲ್ಲೇ ಗುಣಮಟ್ಟದ ಚಿಕಿತ್ಸೆಗೆ ಹೆಸರು ಮಾಡಿದೆ. ಡಾ. ಶರಣಪ್ರಕಾಶ್ ಪಾಟೀಲ್ ಮಂತ್ರಿಯಾಗುವ ಮುಂಚೆಯೂ ಹೆಸರು ಮಾಡಿತ್ತು. ಈಗಲೂ ಗುಣಮಟ್ಟ ಕಾಯ್ದುಕೊಂಡಿದೆ. ಕಲಬುರಗಿಯ ಜಯದೇವ ಹೃದ್ರೋಗ ಸಂಸ್ಥೆ ಯಾಕೆ ಜನರ ವಿಶ್ವಾಸಕ್ಕೆ ಪಾತ್ರವಾಗುತ್ತಿಲ್ಲ? ಕಲಬುರಗಿ ಜನತೆ ಈಗಲೂ ಸೊಲ್ಲಾಪುರ, ಹೈದರಾಬಾದ್ ನಗರಗಳಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಹುಡುಕಿ ಹೋಗುತ್ತಿದ್ದಾರೆ?
ಪ್ರಿಯಾಂಕ್ ಖರ್ಗೆಯವರು ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈಗ ಗ್ರಾಮೀಣಾಭಿವೃದ್ಧಿ, ಐಟಿ, ಬಿಟಿ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಲಬುರಗಿ ಉಸ್ತುವಾರಿ ಸಚಿವರಾಗಿದ್ದಾರೆ. ಕೆಡಿಪಿ ಸಭೆ ನಡೆದು ಎಷ್ಟು ತಿಂಗಳಾದವು? ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಎರುಡೂವರೆ ವರ್ಷಗಳನ್ನು ಕಳೆದಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಎಷ್ಟು ಹಳ್ಳಿಗಳನ್ನು ಬಯಲು ಶೌಚಾಲಯ ಮುಕ್ತ ಮಾಡಿದ್ದಾರೆ? ಮಹಾತ್ಮಾ ಗಾಂಧೀಜಿಯವರ ಕನಸಿನ ಗ್ರಾಮಗಳನ್ನು ರೂಪಿಸಲು ಯತ್ನಿಸಿದ್ದಾರೆಯೇ? ಕಲ್ಯಾಣ ಕರ್ನಾಟಕದ ಗ್ರಾಮಗಳು ಯಾಕೆ ಹಳೆ ಮೈಸೂರು ಭಾಗದ ಹಳ್ಳಿಗಳಂತೆ ಅಭಿವೃದ್ಧಿ ಹೊಂದಿಲ್ಲ? ಡಾ. ಶರಣ ಪ್ರಕಾಶ ಪಾಟೀಲ್ ಕೌಶಲ್ಯ ಅಭಿವೃದ್ಧಿ ಮಂತ್ರಿಯೂ ಆಗಿದ್ದಾರೆ. ಈಶ್ವರ್ ಖಂಡ್ರೆಯವರು ಅರಣ್ಯ ಖಾತೆಗೆ ಮಂತ್ರಿಯಾಗಿದ್ದಾರೆ. ಎನ್.ಎಸ್. ಭೋಸರಾಜು ಅವರು ವಿಜ್ಞಾನ ಮಂತ್ರಿ. ಶಿವರಾಜ್ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿ. ಕಲ್ಯಾಣ ಕರ್ನಾಟಕದ ಎಲ್ಲ ಮಂತ್ರಿಗಳು ಒಟ್ಟಿಗೆ ಸೇರಿ ಶೃದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಈ ಪ್ರದೇಶವನ್ನು ಸಿಂಗಾಪುರ ಮಾಡಬಹುದಾಗಿದೆ. ಮಾಡುವ ಮನಸ್ಸು ಇರಬೇಕಷ್ಟೆ. ಕರ್ನಾಟಕ ಸರಕಾರ ಇಂತಹ ದುರಿತ ಕಾಲದಲ್ಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತೀ ವರ್ಷ ಐದು ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಅನುದಾನದ ಸದ್ಬಳಕೆಯಾದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸಿಂಗಾಪುರ ಮೀರಿಸುವ ಹಂತಕ್ಕೆ ಅಭಿವೃದ್ಧಿಪಡಿಸಬಹುದು.
ಮಲ್ಲಿಕಾರ್ಜುನ ಖರ್ಗೆಯವರು ತಮಗೆ ದೊರೆತ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು. ಅವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೆಡಿಪಿ ಸಭೆಯನ್ನು ನಿಯಮಿತವಾಗಿ ನಡೆಸುತ್ತಿದ್ದರು. ನಾನೇ ಕಂಡಂತೆ ಸತತ ಹತ್ತು ಗಂಟೆಗಳ ಕಾಲ ಕೆಡಿಪಿ ಸಭೆ ನಡೆಸುತ್ತಿದ್ದರು. ಕಾಲ ಮಿತಿಯೊಳಗೆ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳ್ಳುವಂತೆ ಮಾಡುತ್ತಿದ್ದರು. ಕಲಬುರಗಿಯ ಪೊಲೀಸ್ ಅಕಾಡಮಿ ಕಾಲಮಿತಿಯೊಳಗೆ ನಿರ್ಮಾಣ ಮಾಡಿಸಿದ್ದರು. ಮಲ್ಲಿಕಾರ್ಜುನ ಖರ್ಗೆಯವರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾಗಿದ್ದರು. ಅವರು ಮಾಡಿದ ಅತ್ಯುತ್ತಮ ಕೆಲಸಗಳ ದಾಖಲೆ ಮೇಲೆ ಕಣ್ಣಾಡಿಸಿದರೆ ಕಾಳಜಿ ಸ್ಪಷ್ಟವಾಗುತ್ತದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವುದಿಲ್ಲ. ಬಡತನ, ನಿರುದ್ಯೋಗ ಹೆಚ್ಚಾಗಿರುವುದರಿಂದ ವಲಸೆ ಪ್ರಮಾಣ ಜಾಸ್ತಿ ಇದೆ. ವಿಶೇಷವಾಗಿ ದಲಿತ ಹಿಂದುಳಿದ ಸಮುದಾಯಕ್ಕೆ ಸೇರಿದ ಬಡವರು ಬೆಂಗಳೂರು, ಮುಂಬೈ, ಗೋವಾಗಳಿಗೆ ಬದುಕು ಅರಸಿ ಗುಳೆ ಹೋಗುತ್ತಾರೆ. ಬೆಂಗಳೂರು ಕಟ್ಟಡ ಕಾರ್ಮಿಕರಲ್ಲಿ ಕಲ್ಯಾಣ ಕರ್ನಾಟಕದವರೇ ಹೆಚ್ಚು ಜನ ಇರುವುದು ಅಲ್ಲಿನ ಎಲ್ಲ ಜನಪ್ರತಿನಿಧಿಗಳಿಗೆ ಗೊತ್ತಿರುವ ಸಂಗತಿಯೇ. ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ತಲಾ ಆದಾಯ ಕಡಿಮೆಯಿದೆ. ಎಸೆಸೆಲ್ಸಿ, ಪಿಯುಸಿ ಫಲಿತಾಂಶ ನೋಡಿದರೆ ತಲೆ ತಗ್ಗಿಸುವಂತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಈಗಲೂ ನೈಜ ಅಭಿವೃದ್ಧಿ ಕುರಿತು ಒಲವು ಹೊಂದಿಲ್ಲ. ಅವರ ದೃಷ್ಟಿಯಲ್ಲಿ ಅಭಿವೃದ್ಧಿಯೆಂದರೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು, ಕಾಮಗಾರಿಗಳನ್ನು ಕೈಗೆ ಎತ್ತಿಕೊಳ್ಳುವುದು ಅಂತಿಮವಾಗಿ ಕಮಿಷನ್ ಪಡೆದುಕೊಂಡು ಕೃತಾರ್ಥನಾಗುವುದು. ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಅಭಿವೃದ್ಧಿ ಎಂದರೆ ಇಷ್ಟೇ ಎಂದು ಭಾವಿಸಿ ಕಾರ್ಯ ನಿರ್ವಹಿಸಿದರೆ ಇನ್ನು ಉಳಿದ ಜನಪ್ರತಿನಿಧಿಗಳು ಅಭಿವೃದ್ಧಿಯನ್ನು ಹರಾಜಿಗಿಟ್ಟು ದುಡ್ಡು ಮಾಡುತ್ತಾರೆ.
ಸನ್ಮಾನ್ಯ ಈಶ್ವರ್ ಖಂಡ್ರೆಯವರು ಅರಣ್ಯ ಮಂತ್ರಿಯಾಗಿ ಎರಡೂವರೆ ವರ್ಷಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಹಸಿರಿನಿಂದ ಕಂಗೊಳಿಸುವಂತೆ ಮಾಡಬಹುದಿತ್ತು. ಆರಗ ಜ್ಞಾನೇಂದ್ರ ಟೀಕೆಗೆ ಉತ್ತರವಾಗಿ ಈಶ್ವರ್ ಖಂಡ್ರೆ ಕಾಲಮಿತಿ ಯೋಜನೆ ರೂಪಿಸಿ ಬಿಜೆಪಿಯವರು ಬೆರಗುಗಣ್ಣಿನಿಂದ ನೋಡುವಂತೆ ಮಾಡಬಹುದಿತ್ತು. ಬೆಂಗಳೂರಿನಲ್ಲಿ ಬಸವೋದ್ಯಾನ ಮಾಡುವುದು ಈಶ್ವರ್ ಖಂಡ್ರೆಯವರ ಮಹಾನ್ ಸಾಧನೆ. ಬಸವಕಲ್ಯಾಣದಲ್ಲಿ ಕದಳಿ ವನ, ಬಸವೋದ್ಯಾನ ನಿರ್ಮಾಣ ಮಾಡಿದರೆ ಅದು ಮಹಾನ್ ಸಾಧನೆ ಎನಿಸಿಕೊಳ್ಳುತ್ತದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಲ್ಲಿ ಕಲ್ಯಾಣ ಕರ್ನಾಟಕದ ಮಂತ್ರಿಗಳಿಗೆ ನಂಬಿಕೆಯಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಖಾತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಶಿವರಾಜ್ ತಂಗಡಗಿಯವರು ಮಂತ್ರಿ. ಮೊರಾರ್ಜಿ, ಕಿತ್ತೂರು ಚೆನ್ನಮ್ಮ ಹೆಸರಿನ ವಸತಿ ಶಾಲೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ರಾಹುಲ್ ಗಾಂಧಿಯವರ ಕನಸಿನ ನವೋದಯ ಶಾಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಶಿವರಾಜ್ ತಂಗಡಗಿಯವರು ಒಮ್ಮೆ ಅಲ್ಲಿಗೆ ಭೇಟಿ ನೀಡಿ ಮೊರಾರ್ಜಿ ವಸತಿ ಶಾಲೆಗಳ ಸ್ಥಿತಿಗತಿ ಅವಲೋಕಿಸಲಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಶಿವರಾಜ್ ತಂಗಡಗಿಯವರು ಕೊಪ್ಪಳ ಭಾಗದವರು. ಆದರೆ ಅವರಿಗೆ ಕಲ್ಯಾಣ ಕರ್ನಾಟಕದ ಒಬ್ಬ ಸಾಹಿತಿಯೂ ಅಕಾಡಮಿ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಎಂದು ಅನಿಸಲೇ ಇಲ್ಲ.
ಎನ್.ಎಸ್. ಭೋಸರಾಜು, ರಹೀಮ್ ಖಾನ್ ಅವರಿಗೂ ಉತ್ತಮ ಖಾತೆಗಳೇ ದೊರೆತಿವೆ. ಆದರೆ ಅವುಗಳ ಮಹತ್ವ ಅವರಿಗೆ ತಿಳಿದಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಗೆ ಆಯಾ ಇಲಾಖೆಗಳ ಮೂಲಕ ಹೇಗೆ ಒಳಿತು ಮಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ.
ಇನ್ನೂ ಕಲ್ಯಾಣ ಕರ್ನಾಟಕದ ಬಹುಪಾಲು ಜನಪ್ರತಿನಿಧಿಗಳು ಅನುದಾನ ಹಂಚಿಕೆಯಾಗುವುದನ್ನೇ ಕಾಯುತ್ತಿರುತ್ತಾರೆ. ಕಾಮಗಾರಿಗಳು ಪೂರ್ಣಗೊಳ್ಳುತ್ತವೆಯೇ ಹೊರತು ಗುಣಮಟ್ಟವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಕಲ್ಯಾಣ ಕರ್ನಾಟಕದ ಜನತೆಯ ತಲಾ ಆದಾಯ ದಿನೇ ದಿನೇ ಕುಸಿಯುತ್ತಿದೆ. ಒಂದು ಪ್ರಾಮಾಣಿಕ ಸಂಸ್ಥೆ ಸಮೀಕ್ಷೆ ನಡೆಸಲು ಮುಂದಾಗಬೇಕು. ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಪಾಲುದಾರರಾದ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ತಲಾ ಆದಾಯ ಕಳೆದ ಹತ್ತು ವರ್ಷಗಳಲ್ಲಿ ಯಾವ ಪ್ರಮಾಣದಲ್ಲಿ ಹೆಚ್ಚಿದೆ ಎಂಬುದರ ಸಮೀಕ್ಷೆ ಮಾಡಬೇಕು. ಆಗ ಕಲ್ಯಾಣ ಕರ್ನಾಟಕದ ಒಟ್ಟು ಅಭಿವೃದ್ಧಿಯ ಸ್ವರೂಪ ಅರ್ಥವಾಗುತ್ತದೆ. ಕೆಲವೊಮ್ಮೆ ಆಡಿಟ್ ವರದಿಗಳು ಸುಳ್ಳು ಹೇಳಬಹುದು.
ಕಲ್ಯಾಣ ಕರ್ನಾಟಕದ ಎಲ್ಲ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ವಾಸಿಸುವ ಸ್ವಂತ ಮನೆಗಳ ಗುಣಮಟ್ಟ, ಅವುಗಳ ವೈಭೋಗದ ಸಮೀಕ್ಷೆ ಮಾಡಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಿರ್ಮಾಣವಾದ ಪ್ರಾಥಮಿಕ, ಪ್ರೌಢ ಶಾಲಾ ಕಟ್ಟಡಗಳ ಗುಣಮಟ್ಟವನ್ನು ಪರಿಶೀಲನೆಗೆ ಒಳಪಡಿಸಬೇಕು. ಬಹುತೇಕ ಕಟ್ಟಡ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಆಸ್ಪತ್ರೆ, ಪದವಿ ಕಾಲೇಜುಗಳು ಮತ್ತು ಇನ್ನಿತರ ಕಟ್ಟಡಗಳನ್ನು ಯಾರೊಬ್ಬರ ಮನೆಯೊಂದಿಗೂ ಹೋಲಿಸಲಾಗದು. ಅಭಿವೃದ್ಧಿ ಯೋಜನೆಗಳು ಮತ್ತು ಕಾಮಗಾರಿಗಳನ್ನು ಹಿಂಡುವ ಎಮ್ಮೆ ಎಂದು ಎಲ್ಲ ಜನಪ್ರತಿನಿಧಿಗಳು ಭಾವಿಸಿದ್ದರಿಂದಲೇ ಅಭಿವೃದ್ಧಿ ಎಂಬುದು ತೋರುಂಬ ಲಾಭವಾಗಿ ಪರಿಣಮಿಸುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುನ್ನೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರ ಶಂಕು ಸ್ಥಾಪನೆಯ ಕಾರ್ಯವೂ ನಡೆದಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳು ಹೊಣೆಯರಿತು ಕಾರ್ಯ ನಿರ್ವಹಿಸದೆ ಹೋದರೆ ಆ ಭಾಗದ ಹಿಂದುಳಿದಿರುವಿಕೆಗೆ ಯಾರೂ ಪರಿಹಾರ ಹುಡುಕಲಾರರು. ಕಲ್ಯಾಣ ಕರ್ನಾಟಕದ ಅಷ್ಟೂ ಜನ ಮಂತ್ರಿಗಳು ಕೊಟ್ಟ ಕುದುರೆಯನೇರಲರಿಯದವರಾಗಿದ್ದಾರೆ. ಹಳೆ ಮೈಸೂರು ಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದಲೂ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಆ ಭಾಗದ ಜನಪ್ರತಿನಿದಿಗಳು ವಿಶೇಷ ಮುತುವರ್ಜಿ ವಹಿಸಿ ಅದನ್ನು ಉಳಿಸಿ ಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಂಡು ಮುಂದುವರಿದರೆ ಅಭಿವೃದ್ಧಿ ಖಂಡಿತ ಸಾಧ್ಯವಾಗುತ್ತದೆ. ಪ್ರಬಲ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೇ.