ಮತ್ಸ್ಯ ಬೇಟೆ: ಅಲೆಗಳ ಮೇಲೆ ಸಾಲು ಸಾಲು ಸವಾಲುಗಳು!

Update: 2024-04-22 05:02 GMT

- ಬಿ.ಕೆ.ಮನೋಜ್, ಮಂಗಳೂರು

ಮತ್ಸ್ಯ ಬೇಟೆಗಾಗಿ ಸಮುದ್ರಕ್ಕೆ ತೆರಳುವ ಮೀನುಗಾರರು ದಿನನಿತ್ಯವೂ ವಿವಿಧ ಸವಾಲುಗಳನ್ನು ಎದುರಿಸ ಬೇಕಾಗುತ್ತದೆ. ಆಳ ಸಮುದ್ರದ ಮೀನುಗಾರಿಕೆ ವೇಳೆ ಎದುರಾಗುವ ಸವಾಲು, ಅಪಾಯ, ಆತಂಕಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಸಮುದ್ರದಲ್ಲಿ ಅಬ್ಬರದ ಅಲೆಗಳ ಮೇಲೆ ಜೋಕಾಲಿಯಾಡುತ್ತಾ ಮೀನುಗಾರಿಕೆ ನಡೆಸುತ್ತಿರುವ ಸಂದರ್ಭ ತಮ್ಮ ಬೋಟ್ಗಳ ಬಳಿ ಅತೀ ವೇಗದಿಂದ ಸಾಗುವ ಸರಕು ಹಡಗುಗಳ ಧಾವಂತ, ತಟ ರಕ್ಷಣಾ ಪಡೆ ನಡೆಸುವ ತಪಾಸಣೆ-ವಿಚಾರಣೆ ಇತ್ಯಾದಿ ನಡುವೆ ಭೀತಿ-ಫಜೀತಿಗೀಡು ಮಾಡುವ ಕೆಲವೊಂದು ಆಕಸ್ಮಿಕ ಘಟನೆಗಳಿಗೂ ಎದೆಯೊಡ್ಡಬೇಕಾಗುತ್ತದೆ.

ತೆರೆಗಳ ತೆಕ್ಕೆಗೆ ಬಿದ್ದರೆ ಗೊತ್ತೇ ಆಗದು!: ಕಡಲ ಪ್ರವೇಶ ಮತ್ತು ನಿರ್ಗಮನ ದ್ವಾರದಂತಿರುವ ಹೂಳು ತುಂಬಿರುವ ಅಳಿವೆಬಾಗಿಲಿನಿಂದ ಆರಂಭಿಸಿ, ಮೀನುಗಾರಿಕೆಯ ಪ್ರತೀ ಹಂತದಲ್ಲೂ ಕಡಲಮಕ್ಕಳು ಹತ್ತಾರು ಆತಂಕದ ಕ್ಷಣಗಳನ್ನು ಅನುಭವಿಸಬೇಕಾಗುತ್ತದೆ. ಬೋಟ್ಗಳು ಅಲೆಗಳನ್ನು ಸೀಳಿಕೊಂಡು ನೆಗೆಯುತ್ತಾ ಮುನ್ನುಗ್ಗುತ್ತಿರುವಾಗ ಸಹ ಮೀನುಗಾರರ ಗಮನಕ್ಕೆ ಬಾರದಂತೆ ಅದೆಷ್ಟೋ ಮೀನುಗಾರರು ಅಲೆಗಳ ಹೊಡೆತಕ್ಕೆ ಸಿಲುಕಿ ಆಳ ಕಡಲಿಗೆ ಎಸೆಯಲ್ಪಡುತ್ತಾರೆ! ಹೀಗೆ ನೀರಿಗೆ ಬಿದ್ದ ಮೀನುಗಾರರು ಹಾಗೇ ಮೌನವಾಗಿ ನೇರ ಕಡಲ ಗರ್ಭ ಸೇರುತ್ತಾರೆ. ಕೆಲವು ಅದೃಷ್ಟಶಾಲಿಗಳು ಸಹ ಮೀನುಗಾರರಿಂದ ರಕ್ಷಿಸಲ್ಪಡುತ್ತಾರೆ. ಅಂದರೆ, ಪ್ರತಿ ಬಾರಿಯೂ ಪ್ರಾಣ ಪಣಕ್ಕಿಟ್ಟೇ ಮೀನು ಶಿಕಾರಿಗೆ ಹೋಗಿ ಬರಬೇಕಾಗಿದೆ.

ಬೇಡವಾದ ಅತಿಥಿಗಳ ಆಗಮನ: ಬಲೆಗೆ ತೊಂದರೆ ನೀಡುವ ತೊಂದೆ- ಪುಚ್ಚೆ ಮೀನು, ಕಡಲ ಹಾವು(ಕಡ್ಲ ಮರಿ), ತೊಜ್ಜಿ(ಜೆಲ್ಲಿ ಫಿಶ್) ಬಲೆಯೊಳಗೆ ಸೇರಿಕೊಂಡರೆ ಮೀನುಗಾರರ ಮುಖ ಬಾಡುತ್ತವೆ. ಯಾಕೆಂದರೆ ಮೀನುಗಾರರಿಗೆ ಲಾಭರಹಿತ ಈ ಜಲಜೀವಿಗಳಿಂದ ಬಲೆಗೆ ಹಾನಿಯಾಗುವುದಲ್ಲದೆ, ಮೀನುಗಾರರ ಶರೀರಕ್ಕೂ ಅಪಾಯಕಾರಿಯಾಗಿದೆ.

ತಿಮಿಂಗಿಲ- ಡಾಲ್ಫಿನ್ ಅನುಬಂಧ: ಮೀನುಗಾರಿಕೆ ವೇಳೆ ಸಾಗರ ಸಾಮ್ರಾಟ ಖ್ಯಾತಿಯ ತಿಮಿಂಗಿಲಗಳ ದರ್ಶನ ಭಾಗ್ಯ ಆಗಾಗ ಮೀನುಗಾರರಿಗೆ ಆಗುತ್ತಿರುತ್ತವೆ. ಭಯಭಕ್ತಿ ಜೊತೆ ಭೀತಿ ಹುಟ್ಟಿಸುವ ಆ ವಿರಾಟ್ ಸ್ವರೂಪದ ಜೀವಿಯ ಠೀವಿ, ಗಾಂಭೀರ್ಯ ವರ್ಣಿಸಲು ಅಸಾಧ್ಯ. ಹಾಗೆಯೇ ಮಾನವರ ಬೆಸ್ಟ್ ಫ್ರೆಂಡ್ ಎಂಬ ಹಿರಿಮೆ ಹೊತ್ತ ಡಾಲ್ಫಿನ್(ನಮ್ಮ ತುಳುನಾಡ ಕರಾವಳಿಯಲ್ಲಿ ಸುಯಿಂಪೆ, ಖೀರಿ, ಪಂಜಿ ಮೀನ್ ಎನ್ನುತ್ತಾರೆ)ಗಳ ಆಟ, ಹಾರಾಟ, ಕಸರತ್ತು ಬಲು ಚೆಂದ. ಮೀನುಗಾರರಿಗೆ ತೀರಾ ಸನಿಹದಿಂದ ಕಾಣ ಸಿಗುವ ಈ ಬುದ್ಧಿವಂತ ಮತ್ಸ್ಯ ಇನ್ನಿತರ ಮತ್ಸ್ಯ ಸಂಕುಲ ಮತ್ಸರಪಡುವಷ್ಟು ಮಾನವರಿಗೆ ಆಪ್ತ ಎಂಬುದರಲ್ಲಿ ಎರಡು ಮಾತಿಲ್ಲ.

ಮನ ಕರಗಿಸುವ ಡಾಲ್ಫಿನ್ ಅಳು: ಇತರ ಮೀನುಗಳೊಂದಿಗೆ ಕೆಲವೊಮ್ಮೆ ಕಡಲಾಮೆಗಳು ಹಾಗೂ ಡಾಲ್ಫಿನ್ಗಳೂ ಬಲೆಯೊಳಗೆ ಬಂಧಿಯಾಗುತ್ತವೆ. ಆಮೆಗಳಂತೂ ಬಲೆಯನ್ನು ಚಿಂದಿ ಉಡಾಯಿಸುತ್ತವೆ. ಡಾಲ್ಫಿನ್ಗಳು ಬಂಧಮುಕ್ತಕ್ಕಾಗಿ ತನ್ನ ಚಲನವಲನ ಮೂಲಕ ಗೋಗರೆಯುತ್ತವೆ. ಅಳಲು ಆರಂಭಿಸುತ್ತವೆ, ಕಣ್ಣಲ್ಲಿ ನೀರು ಜಿನುಗುತ್ತವೆ. ಡಾಲ್ಫಿನ್ಗಳ ದೀನತೆಯ ನೋಟ, ಪ್ರಾಣ ಸಂಕಟ ಕಂಡು ನಮ್ಮ ಕರಾವಳಿಯ ಸಹೃದಯಿ ಮೀನುಗಾರರು ಅವುಗಳನ್ನು ಆ ಕೂಡಲೇ ಜೋಪಾನವಾಗಿ ಮತ್ತೆ ಕಡಲಿಗೇ ಬಿಡುತ್ತಾರೆ.

ಕಡಲ ಮಧ್ಯೆ ಮತ್ಸ್ಯಗಳ್ಳರು: ಹೌದು! ಕಳ್ಳರು ಈಗ ನಮ್ಮ ಕರಾವಳಿಯ ಮೀನುಗಾರರನ್ನೂ ಕಾಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಸಮುದ್ರದಲ್ಲಿ ಕಳೆದ ಜನವರಿ ೩೦ರಂದು ಬೆಳಗ್ಗೆ ೫ರ ಸುಮಾರಿಗೆ ದರೋಡೆಕೋರರ ತಂಡವೊಂದು ಆಳಕಡಲ ಬೋಟೊಂದರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ೬ ಮಂದಿ ಮೀನುಗಾರರಿಗೆ ಹಲ್ಲೆಗೈದು ೪ ಮೊಬೈಲ್ ಫೋನ್ಗಳು ಹಾಗೂ ಲಕ್ಷಾಂತರ ರೂ. ಮೌಲ್ಯದ ೧೨ ಬಾಕ್ಸ್ ಬೆಲೆಬಾಳುವ ಮೀನುಗಳೊಂದಿಗೆ ಪರಾರಿಯಾಗಿತ್ತು. ಮತ್ಸ್ಯಕ್ಷಾಮದ ಈ ಹೊತ್ತಿನಲ್ಲಿ ಮೀನುಗಾರರು, ಮತ್ಸ್ಯ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗಾಗಿ ಬವಣೆ ಪಡುತ್ತಿದ್ದು, ಕೇಂದ್ರ- ರಾಜ್ಯ ಸರಕಾರಗಳು ಕರಾವಳಿ ತೀರದ ಈ ಬಡಪಾಯಿಗಳತ್ತ ಚಿತ್ತ ಹರಿಸಬೇಕಿದೆ.

ಕಡಲಾಳದಲ್ಲಿ ಕೊಲ್ಪುಗಳು!

ಈ ಹಿಂದೆ ಮುಳುಗಿರುವ ಸರಕು ಸಾಗಾಟದ ಅತ್ಯಾಧುನಿಕ ಬೃಹತ್ ಹಡಗುಗಳು, ಮರಮಟ್ಟುಗಳಿಂದ ನಿರ್ಮಿತ ಹಾಯಿಹಡಗು(ಮಂಜಿ)ಗಳು ಹಾಗೂ ಫಿಶಿಂಗ್ ಬೋಟ್ಗಳ ಅಳಿದುಳಿದ ಅವಶೇಷಗಳು ಸಮುದ್ರದ ಆಳದಲ್ಲಿ ಹಾಗೆಯೇ ಉಳಿದುಕೊಂಡಿರುತ್ತವೆ. ಮಂಗಳೂರು ಕರಾವಳಿಯ ಮೀನುಗಾರರು ಈ ತ್ಯಾಜ್ಯ(ಅವಶೇಷ)ಕ್ಕೆ ‘ಕೊಲ್ಪು’ ಎಂದು ಕರೆಯುತ್ತಾರೆ. ಈ ಕೊಲ್ಪುಗಳಿಗೆ ಮೀನಿನ ಬಲೆ ಸಿಲುಕಿದರೆ ಆ ಬಲೆ ಸಂಪೂರ್ಣ ಚಿಂದಿಯಾಗುವುದು ಗ್ಯಾರಂಟಿ. ಕಡಲಾಳದ ಬಂಡೆಗಲ್ಲುಗಳೂ ಕೊಲ್ಪುಗಳಾಗಿ ಮೀನುಗಾರರನ್ನು ಕಾಡುತ್ತವೆ. ಕೆಲವೊಮ್ಮೆ ಬೋಟ್ನ ಪ್ರೊಫೆಲ್ಲರ್ಗೆ ಬಲೆ, ಹಗ್ಗ ಸಿಲುಕುತ್ತವೆ. ಆಗ ಶಾರ್ಕ್ ಸಹಿತ ಇತರ ಜಲಚರಗಳ ಭೀತಿ ಮಧ್ಯೆ ಮುಳುಗಿ ಆ ಬಂಧನ ಬಿಡಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News