ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಬದುಕು: ಹಿಂದುತ್ವದ ಹೊತ್ತಿನಲ್ಲಿ ಅಂಬೇಡ್ಕರ್ ಪ್ರಣಾಳಿಕೆ

Update: 2024-04-25 12:23 GMT

Photo credit: Newslaundry/Shambhavi

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಜೀವನದುದ್ದಕ್ಕೂ ತಮ್ಮ ತಕ್ಷಣದ ಅಸ್ಮಿತೆಯನ್ನು ಕುಗ್ಗಿಸುವ ಪ್ರಯತ್ನಗಳ ವಿರುದ್ಧ ಹೋರಾಡಿದ್ದಾರೆ. ಆದರೂ ಇವರನ್ನು ಕೇವಲ ದಲಿತ ನಾಯಕನೆಂದು ಬಿಂಬಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಒಬಿಸಿ ಪ್ರಾಬಲ್ಯದ ಹಿನ್ನೆಲೆಯಿರುವ ಮೋದಿಯವರಂತಹ ವ್ಯಕ್ತಿ ಕೂಡ ಅಧಿಕಾರ ಹಿಡಿಯಲು ಸಂಕೋಚಪಡದೆ ಇರುವಾಗ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿ ಖರ್ಗೆತಮ್ಮಅಸ್ಮಿತೆಯನ್ನು ಪ್ರದರ್ಶಿಸಲು ಏಕೆ ಹಿಂಜರಿಯುತ್ತಾರೆ? ಸುದಿಪ್ತೊ ಮೊಂಡಲ್ ಅವರ ಖರ್ಗೆ ಕುರಿತ ಈ ಜೀವನ ಚರಿತ್ರೆಯ ಪ್ರಬಂಧವು ಅತ್ಯಂತ ಅಂಚಿನಲ್ಲಿರುವ ಸಮುದಾಯಗಳ ನಾಯಕರು ಎದುರಿಸುತ್ತಿರುವ ವಿಶಿಷ್ಟ ರಾಜಕೀಯ ಸವಾಲುಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

10,000 ಪದಗಳ ಈ ಪ್ರಬಂಧವು ಅಂಬೇಡ್ಕರ್ ಅವರ ಹೆಸರಿನಲ್ಲಿ ದೇಶದ ಮೊದಲ ಸಂಘಟನೆಯನ್ನು ಪ್ರಾರಂಭಿಸಲು ಸಹಾಯ ಮಾಡಿದ ತೀವ್ರಗಾಮಿ ಜಾತಿವಿರೋಧಿ ಕಾರ್ಯಕರ್ತರಾಗಿ ಖರ್ಗೆ ಅವರ ಆರಂಭವನ್ನು ವಿಶ್ಲೇಷಿಸುತ್ತದೆ. ಸಶಸ್ತ್ರ ದಂಗೆಯನ್ನು ನಂಬಿದ ಸಂಘಟನೆಯನ್ನು ತ್ಯಜಿಸಿ 1969ರಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸ್ (ಐ) ಗೆ ಸೇರಲು ಕಾರಣವೇನು? ಅವರು ಕಾಂಗ್ರೆಸ್ ಸೇರಿದ ನಂತರ ಅವರ ಮೇಲೆ ಜೀವಹಾನಿಯ ಪ್ರಯತ್ನ ಏಕೆ ನಡೆಯಿತು? ನಾವು ಮೋದಿ ಮತ್ತು ಹಿಂದುತ್ವವನ್ನು ಎದುರಿಸುತ್ತಿರುವಾಗ ಅಂಬೇಡ್ಕರ್ ವಾದಿ ಬೌದ್ಧನಾಗಿ ಖರ್ಗೆ ಅವರ ಪ್ರಯಾಣವು ಯಾವ ತಿಳಿವುಗಳನ್ನು ನೀಡುತ್ತವೆ?

-------------

ಮಾರ್ಚ್ 26ರಂದು ನಾವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ಬೆಂಗಳೂರಿನ ನಿವಾಸ 'ಸಮ್ಯಕ್'ದಲ್ಲಿ ಭೇಟಿಯಾಗಿ, ಇನ್ನೇನು ನಾವು ಚರ್ಚೆಯನ್ನು ಆರಂಭಿಸಬೇಕು ಎನ್ನುವ ಸಮಯದಲ್ಲಿ ದಕ್ಷಿಣ ರಾಜ್ಯದ ಕಾಂಗ್ರೆಸ್ಟಿಕೆಟ್ ಆಕಾಂಕ್ಷಿಯೊಬ್ಬರು ಕೋಪದಿಂದ ಕೋಣೆಯೊಳಗೆ ನುಗ್ಗಿದರು. ಆ ವ್ಯಕ್ತಿ ಸ್ಪಷ್ಟವಾಗಿ ನಮ್ಮ ಮುಂದೆ ತನ್ನ ಪಕ್ಷದ ಅಧ್ಯಕ್ಷರನ್ನು ಮುಜುಗರಕ್ಕೀಡು ಮಾಡಲು ಬಯಸಿದ್ದರು ಮತ್ತು ಕಾಂಗ್ರೆಸ್ ಜೊತೆಗಿನ ತನ್ನ 35 ವರ್ಷಗಳ ಒಡನಾಟದ ಬಗ್ಗೆ ಹಾಗೂ ತಾನು ಹೇಗೆ ಮೋಸ ಹೋಗಿದ್ದೇನೆ ಎಂಬುದರ ಬಗ್ಗೆ ರೋಷಾವೇಶದಿಂದ ಮಾತನಾಡಿದರು. ಅವರೊಂದಿಗೆ ಖಾಸಗಿಯಾಗಿ ಮಾತನಾಡಲು ಸ್ವಲ್ಪ ಅವಕಾಶ ನೀಡುವಂತೆ ಖರ್ಗೆ ನಮ್ಮನ್ನು ಕೋರಿದರು. ಆಗ ಟಿಕೆಟ್ ಆಕಾಂಕ್ಷಿ ನಾಯಕ ಇನ್ನಷ್ಟು ಜೋರು ಗಂಟಲಿನಿಂದ ಕೂಗಾಡಲು ಆರಂಭಿಸಿದರು. ಮುಚ್ಚಿದ್ದ ದಪ್ಪ ಬಾಗಿಲಿನ ಹೊರಗೂ ನಾವು ಆ ನಾಯಕನ ಕೂಗಾಟವನ್ನು ಸ್ಪಷ್ಟವಾಗಿ ಕೇಳಬಹುದಾಗಿತ್ತು. ಆತ "ನಾನು ಮೀಡಿಯಾ ಬಳಿ ಹೋಗುತ್ತೇನೆ"ಎಂದು ಬೆದರಿಸುತ್ತಿದ್ದ.

ಆಗಿಹೋದ ಯಾವುದೋ ಸಂಗತಿಯನ್ನು ಒದರುತ್ತಾ ಕೊಠಡಿಯಿಂದ ಹೊರನುಗ್ಗಿ ಬಂದ ಆ ವ್ಯಕ್ತಿಯ ನಡತೆ ಅವನ ಬ್ರಾಹ್ಮಣ್ಯವನ್ನು ಬಿಚ್ಚಿ ಹೇಳಿತು. ತನ್ನ ದೇವರುಗಳ ಹೆಸರನ್ನು ಹೇಳುತ್ತಾ 'ದೇವರು ನಿಮಗೆ ತೋರಿಸುತ್ತಾನೆ' ಎಂದು ಶಪಿಸಿದನು. ಇದಕ್ಕೆ ಪ್ರತಿಕ್ರಿಯೆಯಾಗಿ ಖರ್ಗೆ ಜೋರಾಗಿ ನಗುತ್ತಾ ಮತ್ತೊಮ್ಮೆ ತಿರುಗಿ ಬರಲು ಹೇಳಿದರು.

ಸ್ವತಃ ತನ್ನ ರಕ್ಷಣೆಗೆ ತಾಯಿತಗಳನ್ನು ಧರಿಸಿದ್ದ ವ್ಯಕ್ತಿಯೊಬ್ಬ ಬುದ್ದ-ಅಂಬೇಡ್ಕರ್ ಅವರ ಚಿತ್ರಗಳಿಂದ ಅಲಂಕೃತಗೊಂಡಿದ್ದ ಕೊಠಡಿಯಲ್ಲಿ ಅವನ ದೇವರನ್ನು ಆವಾಹಿಸಿ ಶಪಿಸಿದ್ದ. ಅವನ ಶಾಪವು ನಗುತ್ತಿರುವ ಬುದ್ಧನಿಂದ ಹಿಂಪುಟಿಯುತ್ತಿರುವಂತೆ ತೋರುತ್ತಿತ್ತು. ನಾವು ಮತ್ತೆ ಮಾತನಾಡಲು ಕುಳಿತಾಗ ಖರ್ಗೆ ಇನ್ನೂ ನಗುತ್ತಿದ್ದರು ಮತ್ತು ಇಡೀ ಪ್ರಸಂಗವನ್ನು "ನಾಟಕ" ಎಂದು ತಳ್ಳಿಹಾಕಿದರು.

ಹೊರಗೆ, ಮಾಜಿ ಕೇಂದ್ರ ಸಚಿವರೊಬ್ಬರು ತಮ್ಮ ಅನುಯಾಯಿಗಳೊಂದಿಗೆ ಅಸಹನೆಯಿಂದ ಕಾಯುತ್ತಿದ್ದರು.

ಅವರು ತಮ್ಮ ಸಂಬಂಧಿಕರಿಗೆ ಟಿಕೆಟ್ ಬಯಸಿದ್ದರು. ಆದರೆ ಅವರ ಬೇಡಿಕೆಯನ್ನು ತಿರಸ್ಕರಿಸಿದಾಗ ಪಕ್ಷ ಮತ್ತು ಅದರ ಅಧ್ಯಕ್ಷರ ಬಗ್ಗೆ ಕೆಲವು ಹಾನಿಕಾರಕ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದರು. ನಾವು ಮಾತು ಆರಂಭಿಸುವ ಮೊದಲೇ, ಖರ್ಗೆ ಅವರ ಸಹಾಯಕರೊಬ್ಬರು ಲೂಧಿಯಾನದ ಕಾಂಗ್ರೆಸ್ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ಸುರಿಂದರ್ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂಬ ಸುದ್ದಿಯನ್ನು ಹೇಳಿದರು. ನಂತರ, ಮತ್ತೊಬ್ಬ ಸಹಾಯಕ ರಿಂಗಣಿಸುವ ಫೋನಿನೊಂದಿಗೆ ಒಳಗೆ ಬಂದರು.

ಅದು ದೇಶದ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕರೊಬ್ಬರಿಂದ ಬಂದ ಕರೆಯಾಗಿತ್ತು. ಖರ್ಗೆ ಅವರು ಹತ್ತು ನಿಮಿಷಗಳ ನಂತರ ಬರುವಂತೆ ಹೇಳಿ ಸಹಾಯಕನನ್ನು ಹೊರಗೆ ಕಳುಹಿಸಿದರು. ಏಕೆಂದರೆ ಅವರು ನಮಗೆ ಹತ್ತು ನಿಮಿಷಗಳ ಸಮಯಾವಕಾಶದ ಭರವಸೆ ನೀಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಆ ಸಹಾಯಕ ಮತ್ತೆ ಒಳಬಂದು ನಾಯಕರು ಮತ್ತೆ ಮತ್ತೆ ಕರೆ ಮಾಡುತ್ತಿದ್ದಾರೆ ಎಂದು ಹೇಳಿದನು.

ಈ ನಾಯಕರೂ ಸಹ ದಕ್ಷಿಣದ ರಾಜ್ಯದಿಂದ ತನ್ನ ಅನುಯಾಯಿಗಳಲ್ಲಿ ಒಬ್ಬರಿಗೆ ಟಿಕೆಟಿಗಾಗಿ ಲಾಬಿ ಮಾಡುತ್ತಿದ್ದರು ಮತ್ತು ಶಿಫಾರಸ್ಸನ್ನು ತಿರಸ್ಕರಿಸಿದ್ದಕ್ಕಾಗಿ ಖರ್ಗೆ ಅವರ ಬಗ್ಗೆ ಅಸಮಾಧಾನ ಹೊಂದಿದ್ದರು. ಕೊನೆಗೆ ಖರ್ಗೆ ಕರೆ ಸ್ವೀಕರಿಸಿದರು.

"ಅವರು ಜನಸಂಖ್ಯೆಯ ಕೇವಲ 7.5% ರಷ್ಟಿದ್ದಾರೆ, ಅವರಿಗೆ ಎಷ್ಟು ಸ್ಥಾನಗಳು ಬೇಕು?"ಎಂದು ಖರ್ಗೆ ಅವರನ್ನು ಕೇಳಿದರು, "ಕಡಿಮೆ ಪ್ರಾತಿನಿಧ್ಯವಿರುವ ಸಮುದಾಯದಿಂದ ನಾವು ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಿಲ್ಲವೇ? ಎಸ್ಸಿ ಅಭ್ಯರ್ಥಿಯ ಬಗ್ಗೆ ಏನು ಹೇಳುತ್ತೀರಿ? ಅವರು ಜನಸಂಖ್ಯೆಯ ಶೇಕಡಾ 24ರಷ್ಟಿದ್ದಾರೆ. ನಿಮಗೆ ಎಸ್ಸಿ ಇಷ್ಟವಿಲ್ಲದಿದ್ದರೆ, ಯಾದವ ಸಮುದಾಯದಿಂದ ಯಾರನ್ನಾದರೂ ಹುಡುಕಿಕೊಳ್ಳಿ" ಅಂದರು.

ನಂತರ ಆ ನಾಯಕ ರಾಹುಲ್ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದರು. ಖರ್ಗೆ ಅವರನ್ನು ಆಡಳಿತ ಪಕ್ಷವು ಆಗಾಗ್ಗೆ ಗಾಂಧಿಗಳ ಪ್ರತಿನಿಧಿಯೆಂದು ಹೇಳುವುದನ್ನು ಕೇಳಿದ್ದ ನಾವು, ಈಗ ಖರ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಕುತೂಹಲಿಗಳಾಗಿದ್ದೆವು. ಖರ್ಗೆ ಅವರು ಈಗಾಗಲೇ ತೀರ್ಮಾನಿಸಿದ್ದೇನೆ ಎಂದು ಹೇಳಿದರು ಮತ್ತು ಸಿಟ್ಟಿನಿಂದ "ನಿಮಗೆ ಬೇಕಾದುದನ್ನು ಮಾಡಿ" ಎಂದು ಕರೆ ಕೊನೆಗೊಳಿಸಿದರು.

ಆ ನಾಯಕ ಮತ್ತೆ ಮತ್ತೆ ಕರೆ ಮಾಡುತ್ತಲೇ ಇದ್ದರು ಮತ್ತು ಸಹಾಯಕ ಮತ್ತೆ ಮತ್ತೆ ರಿಂಗಾಗುತ್ತಿರುವ ಫೋನಿನೊಂದಿಗೆ ಹಿಂತಿರುಗುತ್ತಿದ್ದನು. ಆದರೆ ಖರ್ಗೆ ಅದನ್ನುನಿರ್ಲಕ್ಷಿಸಿದರು. ಸ್ಪಷ್ಟವಾಗಿ, ಪಕ್ಷದ ಮುಖ್ಯಸ್ಥರ ಅನುಮತಿಯಿಲ್ಲದೆ ಆ ನಾಯಕ ತನ್ನ ಬಯಕೆಯಂತೆ ಮಾಡಲು ಸಾಧ್ಯವಿರಲಿಲ್ಲ.

ಇದನ್ನು ಪಕ್ಷದ ಮೇಲೆ ಖರ್ಗೆ ಹೊಂದಿದ್ದ ನಿಯಂತ್ರಣಕ್ಕೆ ಸಾಕ್ಷಿ ಎಂದು ಪರಿಭಾವಿಸಬಹುದೇ? ಪಕ್ಷದ ನಿಯಂತ್ರಣ ಇವರ ಮೇಲೆಯೇ ನಿಂತಂತಿತ್ತು ಗಾಂಧಿಗಳ ಮೇಲಲ್ಲ! ಅಂತ ಹೇಳಬಹುದೇ?

ಅದಕ್ಕೆ, "ಹಾಗೇನೂ ಇಲ್ಲ, ಎಂದು ಅವರು ಹೇಳಿದರು. "ಇದೆಲ್ಲಾ ಸಮಾಲೋಚನೆಯಾಗಿದೆ. 25 ವರ್ಷಗಳ ಕಾಲ ಅವರು (ಗಾಂಧಿಗಳು) ಪಕ್ಷವನ್ನು ಮುನ್ನಡೆಸಿರುವಾಗ ಅವರಿಂದ ನಾನು ಹೇಗೆ ಸಲಹೆಗಳನ್ನು ತೆಗೆದುಕೊಳ್ಳದೇ ಇರಲು ಸಾಧ್ಯ? (ಕೆ. ಸಿ.) ವೇಣುಗೋಪಾಲರಂತಹ ಉನ್ನತ ನಿರ್ಧಾರ ತೆಗೆದುಕೊಳ್ಳುವ ಇತರ ಯುವ ನಾಯಕರೂ ನಮ್ಮಲ್ಲಿದ್ದಾರೆ. ಎಲ್ಲರ ಅಭಿಪ್ರಾಯವೂ ಮುಖ್ಯ. ನನ್ನ ಶಕ್ತಿ ದಕ್ಷಿಣ ಭಾರತ, ನನಗೆ ಪ್ರತಿ ಜಿಲ್ಲೆಯೂ ತಿಳಿದಿದೆ.

ಮಹಾರಾಷ್ಟ್ರ, ಛತ್ತೀಸ್ಘಡ, ಹರಿಯಾಣ ಮತ್ತು ರಾಜಸ್ಥಾನಗಳ ಬಗ್ಗೆಯೂ ನನಗೆ ಆಳವಾದ ತಿಳುವಳಿಕೆ ಇದೆ. ಈ ರಾಜ್ಯಗಳ ಬಗ್ಗೆ, ನಾನು ನಿಸ್ಸಂಶಯವಾಗಿ ಒಂದು ನಿಲುವನ್ನು ತೆಗೆದುಕೊಳ್ಳುತ್ತೇನೆ ಮತ್ತು ನನ್ನ ನಿಲುವನ್ನು ಹೇಳುತ್ತೇನೆ. ಇದು ಅವರೊಂದಿಗೆ (ಗಾಂಧಿಗಳು) ಸ್ಪರ್ಧೆಯಲ್ಲ, ಇದು ಮಾತುಕತೆಗಳ ಮೂಲಕ ಪರಸ್ಪರ ಕೊಡು- ಕೊಳ್ಳುವ ಪ್ರಕ್ರಿಯೆ".

ಈಗಷ್ಟೇ ಮುಗಿಸಿದ್ದ ವಾದದಲ್ಲಿ, ಅವರು ಪ್ರಬಲ ಜಾತಿ ಅಭ್ಯರ್ಥಿಯ ಬದಲಿಗೆ ಎಸ್ಸಿ ಅಭ್ಯರ್ಥಿಯನ್ನು ಪ್ರಸ್ತಾಪಿಸುತ್ತಿದ್ದರೇ? "ಇಲ್ಲೇನು ಗೊಂದಲ? ಸಾಮಾನ್ಯ ಸ್ಥಾನದಿಂದ ಎಸ್ಸಿ ಏಕೆ ಸ್ಪರ್ಧಿಸಲು ಸಾಧ್ಯವಿಲ್ಲ, ಅದರಲ್ಲಿ ತಪ್ಪೇನಿದೆ?

ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ, ಅಂತಹ ಕ್ರಮದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಈ ಸಾಮಾಜಿಕ ನ್ಯಾಯದ ಲೆಕ್ಕದಿಂದಲೇ ಅಲ್ಲವೇ ಕಾಂಗ್ರೆಸ್ ಹಲವಾರು ಬಾರಿ ವಿಫಲವಾಗಿದ್ದು?

"ಇದರರ್ಥ ನಿಮಗೆ ನನ್ನ ಇತಿಹಾಸ ಅಥವಾ ನನ್ನ ಪಕ್ಷದ ಇತಿಹಾಸ ತಿಳಿದಿಲ್ಲ" ಎಂದು ಅವರು ಹೇಳಿದರು ಮತ್ತು ಕರ್ನಾಟಕದ ದಿವಂಗತ ಕಾಂಗ್ರೆಸ್ ಹಿರಿಯ ನಾಯಕ ಕೆ. ಎಚ್. ರಂಗನಾಥ್ ಅವರ ಉದಾಹರಣೆಯನ್ನು ನೀಡಿದರು. ಅವರು ಪರಿಶಿಷ್ಟ ಜಾತಿ (ಎಸ್ಸಿ) ಯವರಾಗಿದ್ದರೂ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎಂದು ಹೇಳಿದರು.

"ನಾನು ರಂಗನಾಥ್ ಅವರನ್ನು ಸಾಮಾನ್ಯ ಕ್ಷೇತ್ರದಿಂದ ನಿಲ್ಲುವಂತೆ ಒತ್ತಾಯಿಸಿದ್ದೆ. ನಾನು ಅಂಬೇಡ್ಕರ್ ಅನುಯಾಯಿ ಆಗಿದ್ದೇನೆ ಮತ್ತು ನನ್ನ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದ್ದೇನೆ" ಎಂದು ಅವರು ಹೇಳಿದರು ಮತ್ತು ನಂತರ ಸ್ವಾನುಭವದ ಆಸಕ್ತಿದಾಯಕ ಅಂಶವನ್ನು ಸೇರಿಸಿದರು.

"ನನ್ನ ಸೌಮ್ಯತೆಯನ್ನು ನೋಡಿ ನೀವು ತಪ್ಪು ಕಲ್ಪಿಸಿಕೊಂಡಿರಬಹುದು. ಕೆಲವು ಜನರು ಹೊರಗಿನಿಂದ ಮೇಕೆಗಳಂತೆ ಕಾಣಿಸಬಹುದು. ಆದರೆ ಒಳಗೆ ಅವು ಸಿಂಹಗಳಾಗಿರಬಹುದು”

ಖರ್ಗೆಯವರ ಅಂಬೇಡ್ಕರ್ ವಾದದಲ್ಲಿ ಕೊರತೆ ಇದೆಯಾ?

ಕೆಲವು ಟೀಕಾಕಾರರು ಅವರು ಸಾಧಿಸಿದ ಸಾಧನೆಗಳಿಗೆ (ಜೀವನದಲ್ಲಿ, ಪಕ್ಷದ ಅಧ್ಯಕ್ಷರಾಗಿ ಅವರ ಅಧಿಕಾರಾವಧಿಯಲ್ಲಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ) ಅವರ ಪ್ರಾಯೋಗಿಕ ಶೈಲಿಯ ರಾಜಕೀಯದ ಕಾರಣದಿಂದಾಗಿ ಸಾಕಷ್ಟು ಮನ್ನಣೆ ನೀಡುವುದಿಲ್ಲ ಎಂದು ಅವರಿಗೆ ತಿಳಿದಿತ್ತು.

ಬಹುಶಃ ಅವರು ತಮ್ಮ ಜೀವನದ ಬಹುಭಾಗವನ್ನು ಕಾಂಗ್ರೆಸ್ನಲ್ಲಿ ಕಳೆದಿದ್ದರಿಂದ, ಖರ್ಗೆ ಅವರನ್ನು ಅಂಬೇಡ್ಕರ್ ಐಕಾನ್ ಎಂದು ತಕ್ಷಣಕ್ಕೆ ಗುರುತಿಸಲಾಗಿಲ್ಲ. ಅವರನ್ನು ಕಾನ್ಶಿರಾಮ್ ಮತ್ತು ಮಾಯಾವತಿ ಅಥವಾಪ್ರಕಾಶ್ ಅಂಬೇಡ್ಕರ್, ಥೋಲ್ ತಿರುಮಾವಲವನ್, ಚಂದ್ರಶೇಖರ್ ಆಜಾದ್, ಆರ್. ಎಸ್. ಪ್ರವೀಣ್ ಕುಮಾರ್, ಜಿಗ್ನೇಶ್ಮೇವಾನಿಯಂತಹ ಪ್ರಾದೇಶಿಕ ನಾಯಕರಂತೆ ವಿಜೃಂಭಿಸಲಾಗುವುದಿಲ್ಲ.

ಈ ಅಂಬೇಡ್ಕರ್ ವಾದಿ ನಾಯಕರೊಂದಿಗೆ ಸಮರ್ಪಕ ಒಗ್ಗಟ್ಟನ್ನು ಸೃಷ್ಟಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಅವರ ಟೀಕಾಕಾರರು ಇವರತ್ತ ಬೆರಳು ಮಾಡುತ್ತಾರೆ. ವಾಸ್ತವವಾಗಿ, ಅವರು ಕೇವಲ ಕಾಂಗ್ರೆಸ್ ಮಾತ್ರವಲ್ಲದೆ ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವವನ್ನು ವಹಿಸಿಕೊಂಡಾಗ, ಅವರು ದೇಶದ ಅತ್ಯಂತ ಪ್ರಮುಖ ಅಂಬೇಡ್ಕರ್ ವಾದಿ ನಾಯಕರನ್ನು ಇದರ ಛತ್ರಿಯಡಿಗೆ ತರುತ್ತಾರೆ ಎಂಬ ಭರವಸೆ ಮೂಡಿತು.

ಎಐಸಿಸಿ ಅಧ್ಯಕ್ಷರು ತಮ್ಮ ಸಾಧನೆಗಳ ಸಂದರ್ಭದಲ್ಲಿ ತಮ್ಮ ಜಾತಿಯನ್ನು ಉಲ್ಲೇಖಿಸಿದಾಗ ಕೋಪಗೊಳ್ಳುತ್ತಾರೆ. ಈ ಕಾರಣಕ್ಕಾಗಿ ಅವರು ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಹಕ್ಕನ್ನು ಬಿಟ್ಟುಕೊಟ್ಟರು. ತನ್ನ ಜಾತಿ ಗುರುತಿನ ಕಾರಣದಿಂದಾಗಿ ತನ್ನ ಹೆಸರು ಸ್ಪರ್ಧೆಯಲಿದ್ದರೆ ತಾನು ಈ ಹುದ್ದೆಯನ್ನು ಬಯಸುವುದಿಲ್ಲ ಎಂದು ಅವರು ಹೇಳಿದರು.

ಅವರು ಸ್ಪರ್ಧೆಯಿಂದ ಹಿಂದೆ ಸರಿದಾಗ, ಕರ್ನಾಟಕದ ಮೊದಲ ದಲಿತ ಮುಖ್ಯಮಂತ್ರಿಯನ್ನು ನೇಮಿಸುವ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಉದಾರವಾದಿ ಪತ್ರಿಕೆಗಳಲ್ಲಿ ಟೀಕೆಗಳು ಬಂದವು. ಈ ರೀತಿಯ ಸಾಂಕೇತಿಕ ಸನ್ನೆಗಳನ್ನು ಅವರು ಅಸಹ್ಯದಿಂದ ನೋಡುತ್ತಾರೆ.

ಮೂರು ಸಂದರ್ಭಗಳಲ್ಲಿ ಸಿಎಂ ಹುದ್ದೆಗೆ ಅವರ ಹೆಸರು ಹರಿದಾಡಿತು. ಕರ್ನಾಟಕದ ಮೊದಲ ದಲಿತ ಸಿಎಂ ಆಗಲು ಸ್ಪರ್ಧಿಸುತ್ತಿರುವ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ ಎಂದು ಪತ್ರಕರ್ತರೊಬ್ಬರು ಅವರನ್ನು ಕೇಳಿದರು. ಅದಕ್ಕೆ ಖರ್ಗೆ ಕೋಪಗೊಂಡರು ಮತ್ತು ಸಂದರ್ಶನದಿಂದ ಹೊರನಡೆಯುವ ಮೊದಲು ಆ ಪತ್ರಕರ್ತನ ಮೇಲೆ ಹರಿಹಾಯ್ದರು. ಒಂಬತ್ತು ವಿಧಾನಸಭಾ ಮತ್ತು ಎರಡು ಲೋಕಸಭಾ ಚುನಾವಣೆಗಳನ್ನು ಗೆದ್ದ ನಂತರ ಅವರು ತಮ್ಮದೇ ಆದ ಉನ್ನತ ಸ್ಥಾನವನ್ನು ಬಯಸಿದ್ದರು.

ಮೋದಿಯಂತಹ ಪ್ರಬಲ ಒಬಿಸಿ ಹಿನ್ನೆಲೆಯವರು ಅಧಿಕಾರ ಹಿಡಿಯಲು ಹಿಂಜರಿಯಲಿಲ್ಲ. ಆದರೆ ಕೆಳ ಸಮುದಾಯದ ಹಿನ್ನೆಲೆಯನ್ನು ಹೊಂದಿದ್ದರೂ ಖರ್ಗೆಯವರು ತಮ್ಮ ಗುರುತನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿಲ್ಲ. ಇದರಿಂದ ಅವರು ಅಂಬೇಡ್ಕರ್ ವಾದಿಗಳ ಜಗತ್ತಿನಲ್ಲಿ ಅಷ್ಟೇನೂ ಪ್ರಸಿದ್ಧಿಯಾಗದೆ ಇದ್ದಿರಬಹುದು.

ವಾಸ್ತವವಾಗಿ, ಅಂಬೇಡ್ಕರ್ ವಾದಿಗಳೆಂದು ಕರೆಯಲ್ಪಡುವ ಕೆಲವು ಗುಂಪುಗಳು ಮೋದಿಯನ್ನು ಮಾತ್ರವೇ ಬೆಂಬಲಿಸಲಿಲ್ಲ, ಮೋದಿಯ ಬೆನ್ನಿನ ಹಿಂದೆ ಇರುವ ಶ್ರೀಮಂತ ಕಾರ್ಪೋರೇಟ್ ಗಳ ಪರವಾಗಿ ಕೂಡ ಕೆಲಸ ಮಾಡಿದ್ದಾರೆ.

ಇಂದು ಎಲ್ಲಾ ಪಕ್ಷಗಳಲ್ಲೂ ಅಂಬೇಡ್ಕರ್ ವಾದಿಗಳಿದ್ದಾರೆ. ಇದು ಆಧುನಿಕ ಭಾರತೀಯ ರಾಜಕೀಯದಲ್ಲಿ ಉಪ್ಪಿನಕಾಯಿಯಲ್ಲಿ ಉಪ್ಪು ಇದ್ದಂತಾಗಿದೆ.

ಆದರೆ ತಮ್ಮ ವೈಯಕ್ತಿಕ ನಿರೂಪಣೆ ಸಾರ್ವಜನಿಕ ವಲಯದಿಂದ ಹೊರಗಿಡುವ ಖರ್ಗೆ ಅವರ ವಿಧಾನವು ಭಾರತೀಯ ರಾಜಕೀಯದ ಊಳಿಗಮಾನ್ಯ ಸ್ಪರ್ಧೆಯಲ್ಲಿ ತಮ್ಮ ಘನತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ, ಅಲ್ಲಿ ಸವಲತ್ತು ಪಡೆದ ಜಾತಿಗಳು ತಮ್ಮ ಹಕ್ಕಿನ ಪಾಲನ್ನು ಕೋರುವವರ ಅರ್ಹತೆಯನ್ನು ಪ್ರಶ್ನಿಸುತ್ತವೆ.

ವಿದ್ಯಾರ್ಥಿ ನಾಯಕರು, ಕಾರ್ಯಕರ್ತರು ಮತ್ತು ವಿದ್ವಾಂಸರಲ್ಲಿ, ಇಂದು ಅತ್ಯಂತ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಮಾತನಾಡುವ ಅಂಬೇಡ್ಕರ್ ವಾದಿಗಳಿದ್ದರೆ, ಇವರಲ್ಲಿ ಖರ್ಗೆ ಬಗ್ಗೆ ಇನ್ನೂ ಸ್ವಲ್ಪ ಸಿನಿಕತನವಿದೆ. ಆದರೆ ಇದು ಅಂಬೇಡ್ಕರ್ ವಾದಿಯಾಗಿ ಅವರ ಜೀವನದಲ್ಲಿನ ವೈರುಧ್ಯಗಳೊಂದಿಗೆ ಕಡಿಮೆ ಸಂಬಂಧ ಹೊಂದಿದೆ. ಖರ್ಗೆ ಕುರಿತ ಮಾತುಕತೆಗಳಲ್ಲಿ ಕಾಂಗ್ರೆಸ್ ಮತ್ತು ಅಂಬೇಡ್ಕರ್ ಅವರೊಂದಿಗಿನ ಸಂಬಂಧದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. “ಅಂಬೇಡ್ಕರ್ ಅವರನ್ನು ವಂಚಿಸಿದ ಪಕ್ಷದಲ್ಲಿ ಅಂಬೇಡ್ಕರ್ ವಾದಿಯೊಬ್ಬನಿರುವುದು ಹೇಗೆ?”.

ದೇಶದಲ್ಲಿ ಇಂದಿನ ಇತರ ಯಾವುದೇ ಅಂಬೇಡ್ಕರ್ ಬೌದ್ಧ ನಾಯಕರಿಗಿಂತ ಖರ್ಗೆ ಅವರು ತಮ್ಮ ನೇತೃತ್ವದಲ್ಲಿ ಅತ್ಯಂತ ವಿಶಾಲವಾದ ರಾಜಕೀಯ ಕ್ಷೇತ್ರವನ್ನು ಹೊಂದಿದ್ದಾರೆ ಎಂಬ ಅಂಶವನ್ನು ಈ ಚರ್ಚೆ ದುರ್ಬಲಗೊಳಿಸುವುದಿಲ್ಲ. ಅಂಬೇಡ್ಕರ್ ವಾದಿ ರಾಜಕೀಯವು ಜಾಗತಿಕವಾಗುತ್ತಿರುವ ಈ ಸಮಯದಲ್ಲಿ ಖರ್ಗೆ ಅವರ ಅಂಬೇಡ್ಕರ್ ವಾದದ ಬಗ್ಗೆ ಹೆಚ್ಚು ತಿಳಿದಿಲ್ಲ ಎಂಬುದು ಇನ್ನೂ ಆಶ್ಚರ್ಯಕರವಾಗಿದೆ.

ಕಳೆದ ವರ್ಷ ನವೆಂಬರ್ ನಲ್ಲಿ, ಪ್ರಸಿದ್ಧ ಅಂಬೇಡ್ಕರ್ ವಾದಿ ವಿದ್ವಾಂಸ ಸುಖದೇವ್ ಥೋರಟ್ ಅವರು ಚೇತನ್ ಶಿಂಧೆ ಅವರೊಂದಿಗೆ ಸೇರಿ 'ಮಲ್ಲಿಕಾರ್ಜುನ ಖರ್ಗೆ: ಕಾರುಣ್ಯದೊಂದಿಗೆ ರಾಜಕೀಯ ತೊಡಗಿಸಿಕೊಳ್ಳುವಿಕೆ, ನ್ಯಾಯ ಮತ್ತು ಅಂತರ್ಗತ ಅಭಿವೃದ್ದಿ' ಎಂಬ ಪ್ರಬಂಧಗಳ ಪುಸ್ತಕವನ್ನು ಪ್ರಕಟಿಸಿದರು. ಹೊಸದಾ ಗಿ ಆಯ್ಕೆಯಾದ ಪಕ್ಷದ ಅಧ್ಯಕ್ಷರ 80ನೇ ಜನ್ಮದಿನದ ನೆನಪಿಗಾಗಿ ತರಾತುರಿಯಲ್ಲಿ ಸಂಗ್ರಹಿಸಿದ ಪುಸ್ತಕವನ್ನು ಸೋನಿಯಾ ಗಾಂಧಿ ಅವರು ಬಹಳ ಸಂಭ್ರಮದಿಂದ ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ವರದಿಗಾರನೊಂದಿಗೆ ಮಾತನಾಡಿದ ಥೋರಟ್, ಮಾಜಿ ಕೇಂದ್ರ ಸಚಿವರು "ಅಂಬೇಡ್ಕರ್ ಅವರ ವಾಸ್ತವಿಕತೆಯನ್ನು ಸಮರ್ಥವಾಗಿ ಬಳಸಿದ್ದಾರೆ" ಎಂದು ತಿಳಿದು ತನಗೆ "ಆಶ್ಚರ್ಯವಾಯಿತು" ಎಂದು ಹೇಳಿದರು.

 

ಖರ್ಗೆ ಅವರು ಕಲಬುರಗಿಯಲ್ಲಿ ಏಷ್ಯಾದ ಅತಿ ದೊಡ್ಡ ಬುದ್ಧ ವಿಹಾರಗಳಲ್ಲಿ ಒಂದನ್ನು ನಿರ್ಮಿಸಿದ್ದಾರೆ ಮತ್ತು ಪಾಲಿ ಅಧ್ಯಯನಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಅವರಿಗೆ ತಿಳಿದಿರಲಿಲ್ಲ. ಈ ಭಾಷೆಯಲ್ಲಿ ಅತ್ಯಂತ ಮುಂಚಿನ ಬೌದ್ಧ ಸುರುಳಿಗಳನ್ನು ಬರೆಯಲಾಗಿದೆ. 1945ರಲ್ಲಿ ಅಂಬೇಡ್ಕರ್ ಅವರು ಸ್ಥಾಪಿಸಿದ ಮಾದರಿಯಲ್ಲಿ ಖರ್ಗೆ ಅವರು ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದ್ದಾರೆ ಎಂದು ಪುಸ್ತಕದಲ್ಲಿನ ಒಂದು ಪ್ರಬಂಧದ ಮೂಲಕ ಅವರು ಕಂಡುಕೊಂಡರು. ಬುದ್ಧ ಮತ್ತು ಅಂಬೇಡ್ಕರ್ ಅವರ ಹೆಸರಿನಲ್ಲಿ 18 ಸಂಸ್ಥೆಗಳನ್ನು ನಡೆಸುತ್ತಿರುವ ಪಿಇಎಸ್ ಸಾವಿರಾರು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತದೆ.

(ಕಲಬುರಗಿಯಲ್ಲಿರುವ ಏಷ್ಯಾದ ಅತಿ ದೊಡ್ಡ ಬುದ್ಧ ವಿಹಾರ: Photo credit/Wikipedia)

2019ರ ಲೋಕಸಭಾ ಚುನಾವಣೆಯಲ್ಲಿ ಸೋಲುವವರೆಗೂ, ಕಲಬುರಗಿಯ ಗುರ್ಮಿಟಕಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಲು 1972ರಲ್ಲಿ ಇಂದಿರಾ ಗಾಂಧಿ ಮತ್ತು ಡಿ ದೇವರಾಜ್ ಅರಸ್ ಅವರು ಖರ್ಗೆಯವರನ್ನು ಆಯ್ಕೆ ಮಾಡಿದ ದಿನದಿಂದ ಸುಮಾರು 50 ವರ್ಷಗಳ ಕಾಲ ಇವರು ಚುನಾವಣೆಯಲ್ಲಿ ಸೋತಿರಲಿಲ್ಲ.

ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೂ, ಅವರ ಜೀವನಚರಿತ್ರೆಕಾರರೂ ಆದ ಎಚ್. ಟಿ. ಪೋಥೆ, "ಅವರು ಎಷ್ಟು ದೀರ್ಘ ಕಾಲದವರೆಗೆ ಕಾಂಗ್ರೆಸ್ಸಿನೊಂದಿಗೆ ಇದ್ದಾರೆಂದರೆ, ಅವರು ಒಂದು ಕಾಲದಲ್ಲಿ ಕ್ರಾಂತಿಕಾರಿ ಅಂಬೇಡ್ಕರ್ ವಾದಿ ಕಾರ್ಯಕರ್ತರಾಗಿದ್ದರು ಎಂಬುದನ್ನು ಜನರು ಮರೆತಿದ್ದಾರೆ" ಎಂದು ಹೇಳಿದರು. ಎರಡು ವರ್ಷಗಳ ಹಿಂದೆ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಸೇರಿದಾಗಿನಿಂದ, ಪೋಥೆಗೆ ವರದಿಗಾರರು ಮತ್ತು ಸಂಶೋಧಕರ ಕರೆಗಳು ಹರಿದುಬರುತ್ತಿವೆ. "ಅಂಬೇಡ್ಕರ್ ಅವರಂತೆ, ಖರ್ಗೆ ಇನ್ನೂ ಅನಾವರಣಗೊಳ್ಳುತ್ತಲೇ ಇದ್ದಾರೆ" ಎಂದು ಅವರು ಹೇಳಿದರು.

ಪೋಥೆ ಅವರು ಹೇಳುವಂತೆ ಅಂಬೇಡ್ಕರ್ ಚಿಂತನೆಗಳು ಮತ್ತು ಬೌದ್ಧ ಧರ್ಮದೊಂದಿಗೆ ಖರ್ಗೆ ಅವರ ಪರಿಚಯವು ಅವರು ಕಲಬುರಗಿಯಲ್ಲಿ ಬೆಳೆಯುತ್ತಿದ್ದ ಚಿಕ್ಕ ಹುಡುಗನಾಗಿದ್ದಾಗ ಸಂಭವಿಸಿತು. ಈ ನಗರವು ದೊಡ್ಡ ತ್ರಿ-ರಾಜ್ಯ ಪ್ರದೇಶದ ಭಾಗವಾಗಿತ್ತು, ಅದು ಮೊದಲು ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ ಮತ್ತು ನಂತರ ಅಂಬೇಡ್ಕರ್ ತಮ್ಮ ಶಕ್ತಿಯನ್ನು ಕೇಂದ್ರೀಕರಿಸಿದ ಸ್ಥಳವಾಗಿತ್ತು.

ಅಂಬೇಡ್ಕರ್ ಅವರ ನಿಧನದ ನಂತರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್. ಪಿ. ಐ.) ಸುಮಾರು ಒಂದು ದಶಕದವರೆಗೆ ಈ ಪ್ರದೇಶದಲ್ಲಿ ಸಕ್ರಿಯವಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಅದರ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಆರ್ ಪಿ ಐ ಟಿಕೆಟ್ ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು" ಎಂದು ಪೋಥೆ ಹೇಳಿದರು.

ಆದರೆ 1960ರ ದಶಕದ ಅಂತ್ಯದ ವೇಳೆಗೆ ಆರ್. ಪಿ. ಐ. ಯು ಅನೇಕ ಹೋರಾಟದ ಬಣಗಳಾಗಿ ವಿಭಜನೆಯಾಯಿತು. ಈ ಪ್ರದೇಶದ ಕೊನೆಯ ವಿಶ್ವಾಸಾರ್ಹ ಆರ್. ಪಿ. ಐ. ನಾಯಕರಾದ ಶಿವರಾಮ್ ಮೋಘಾ ಅವರೊಂದಿಗೆ, ಖರ್ಗೆ ಹೊಸ ಸಂಘಟನೆಯನ್ನು ಸೇರಿದರು. ಇದು ದೇಶದ ಮೊದಲ ಅಂಬೇಡ್ಕರ್ ಸಂಘಟನೆಯಾಗಿದೆ" ಎಂದು ಅವರು ಹೇಳಿದರು", ಇದನ್ನು ಅಂಬೇಡ್ಕರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ವ್ಯಕ್ತಿಯು ಪ್ರಾರಂಭಿಸಿದರು.

ಕ್ರಾಂತಿಗಳು ರಕ್ತಸಿಕ್ತವಾಗಿರಬೇಕೇ?

ಭೀಮರಾವ್ ಅಂಬೇಡ್ಕರ್ ಅವರ ಹೆಸರನ್ನು ಇಡಲಾದ ದೇಶದ ಮೊದಲ ಸಂಸ್ಥೆ ʼಭೀಮ್ ಸೇನೆʼಯಾಗಿತ್ತು. ಅಂಬೇಡ್ಕರ್ ಅವರ 77ನೇ ಜನ್ಮದಿನಾಚರಣೆಯ ನೆನಪಿಗಾಗಿ 1968ರ ಎಪ್ರಿಲ್ ತಿಂಗಳಿನಲ್ಲಿ ಕಲಬುರಗಿಯಲ್ಲಿ ಕ್ರಾಂತಿಕಾರಿ ದಲಿತ ನಾಯಕ ಬಿ. ಶ್ಯಾಮಸುಂದರ್ ಇದನ್ನು ಪ್ರಾರಂಭಿಸಿದರು.

ಭೀಮ್ ಸೇನೆಯ ಹೆಚ್ಚಿನ ಜನರು ಕೇವಲ ಒಂದು ದಶಕದ ಹಿಂದೆ ನಿಧನರಾದ ಅಂಬೇಡ್ಕರ್ ಅವರ ಅಡಿಯಲ್ಲಿ ನೇರವಾಗಿ ಕೆಲಸ ಮಾಡಿದ್ದರು. 'ಜೈಭೀಮ್' ಘೋಷಣೆಯನ್ನು ಜನಪ್ರಿಯಗೊಳಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ.

ಭೀಮ್ ಸೇನೆ ಚಳುವಳಿಗೆ ಅಂಬೇಡ್ಕರ್ ಅವರ ಹೆಸರನ್ನು ಇಡಲಾಗಿದ್ದರೂ, ಅದು ಹಿಂದಿನ ವರ್ಷ ಸ್ಫೋಟಗೊಂಡ ನಕ್ಸಲ್ಬಾರಿ ದಂಗೆಯ ಚೂರು ಚೂರು ಬಂಡೆಯಂತೆ ಕಾಣುತ್ತಿತ್ತು. ಅಂಬೇಡ್ಕರ್ ಅವರು ಬುದ್ಧನ ಅಹಿಂಸಾತ್ಮಕ ಮಾರ್ಗವನ್ನು ಆರಿಸಿಕೊಂಡು ಜಾತಿ ದಬ್ಬಾಳಿಕೆಯ ಸಮಸ್ಯೆಗೆ ಕಾನೂನು ಪರಿಹಾರಗಳನ್ನು ಬಯಸಿದರೆ, ಶ್ಯಾಮಸುಂದರ್ ಅವರು ಬೌದ್ಧಧರ್ಮವನ್ನು ತಿರಸ್ಕರಿಸಿದರು ಮತ್ತು ಭೀಮ್ ಸೇನೆಯೊಂದಿಗೆ ರಕ್ತಸಿಕ್ತ ಕ್ರಾಂತಿಗೆ ಪ್ರಯತ್ನಿಸಿದರು.

ಅಂಬೇಡ್ಕರ್ ಹೆಸರಿನಲ್ಲಿ ಅವರು ಸ್ಥಾಪಿಸಿದ ಸಂಘಟನೆಯು ಕೇಡರ್ ಆಧಾರಿತ ಸಂಘಟನೆಯಾಗಿದ್ದು, ಇದರಲ್ಲಿ ಹೆಚ್ಚಿನವರು ದಲಿತ ಯುವಕರಾಗಿದ್ದರು. ಮಹರ್ ರೆಜಿಮೆಂಟ್ ನಂತಹ ಬ್ರಿಟಿಷ್ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದ ದಲಿತ ಮಾಜಿ ಸೈನಿಕರು ಅವರಿಗೆ ಮಿಲಿಟರಿ ಶೈಲಿಯ ತರಬೇತಿಯನ್ನು ನೀಡಿದರು.

ಶ್ಯಾಮಸುಂದರ್ ಅವರು ಬೌದ್ಧ ಮಾರ್ಗವನ್ನು ತಿರಸ್ಕರಿಸಿದರೂ, ಕಾಂಗ್ರೆಸ್ ಜೊತೆಗಿನ ಮಾತುಕತೆಯಲ್ಲಿ ಅಂಬೇಡ್ಕರ್ ಅವರು ತ್ಯಜಿಸಬೇಕಾಗಿ ಬಂದಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಸಾಧಿಸಲು ಹೊರಟರು. ಅವುಗಳೆಂದರೆ: ಆಮೂಲಾಗ್ರ ಭೂ ಸುಧಾರಣೆಗಳು ಮತ್ತು ದಲಿತರ ರಾಜಕೀಯ ರಕ್ಷಣೆಗಳು.

 

(ಮಲ್ಲಿಕಾರ್ಜುನ ಖರ್ಗೆ : Photo credit: thenewsminute.com)

ದಲಿತರಿಗೆ ಪ್ರತ್ಯೇಕ ಮತಗಟ್ಟೆಗಳನ್ನು ಮತ್ತು ಎಲ್ಲಾ ಜಿಲ್ಲೆಗಳಲ್ಲಿನ ಎಲ್ಲಾ ಗ್ರಾಮಗಳ ಶೇಕಡಾ 25ರಷ್ಟನ್ನು ಶತಮಾನಗಳ ಶೋಷಣೆಯ ಪರಿಹಾರವಾಗಿ ಸಮುದಾಯಕ್ಕೆ ವರ್ಗಾಯಿಸಬೇಕೆಂದು ಭೀಮ್ ಸೇನೆಯು ಒತ್ತಾಯಿಸಿತು. ಶ್ಯಾಮಸುಂದರ್ ಅವರ ಅಭಿಪ್ರಾಯವೇನೆಂದರೆ, ಶೇಕಡ 25ರಷ್ಟು ಜನರು ಹಳ್ಳಿಗಳಲ್ಲಿ ಹಿಂದೂಗಳ ಔಪಚಾರಿಕ ವಸಾಹತುಗಳ ಹೊರಗೆ ವಾಸಿಸುತ್ತಿದ್ದರು. ಈ ಬಹಿಷ್ಕೃತರು ಸಹ ಈ ಭೂಮಿಗಳ ಒಡೆಯರು ಮತ್ತು ರಾಜಕೀಯ ಮಾಲೀಕರಾಗಬೇಕೆಂದು ಅವರು ಬಯಸಿದ್ದರು.

ಡಾ. ವಿಜಯಕುಮಾರ್ ಎಚ್. ಸಲೀಮಾನಿ ಅವರು ಅಸ್ಪೃಶ್ಯತೆಯ ನಿರ್ಮೂಲನೆ (ಎ ಕೇಸ್ ಸ್ಟಡಿ ಆಫ್ ಪೋಸ್ಟ್ ಇಂಡಿಪೆಂಡೆಂಟ್ ಕರ್ನಾಟಕ) ಎಂಬ ಪುಸ್ತಕದಲ್ಲಿ, ಶ್ಯಾಮಸುಂದರ್ ಅವರು ಅಂಬೇಡ್ಕರ್ ಅವರಿಂದ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎಂದು ಹೇಳಿದ್ದಾರೆ. "ಭಾರತವು ದಲಿತರಿಗೆ ಸೇರಿದ್ದು, ಅವರು ಮಾತ್ರ ಅದನ್ನು ಆಳುತ್ತಾರೆ" ಎಂದು ಶ್ಯಾಮಸುಂದರ್ ಹೇಳಿದ್ದನ್ನು ಪುಸ್ತಕವು ಉಲ್ಲೇಖಿಸಿದೆ. ಅಚ್ಚರಿ ಎಂದರೆ, ಡಾ. ಸಲೀಮಾನಿಯವರ ಪುಸ್ತಕವು ಖರ್ಗೆಗೆ ಸಮರ್ಪಿತವಾಗಿದೆ. ಆದರೆ ಭೀಮ್ ಸೇನೆಯಲ್ಲಿ ಅವರ ಪಾತ್ರವನ್ನು ಉಲ್ಲೇಖಿಸಿಲ್ಲ.

ದಲಿತರ ಮೇಲಿನ ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ಸೇನೆಯು ನೇರವಾದ, ಜಾಗೃತ ಶೈಲಿಯ ಕ್ರಮವನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು ಮತ್ತು ಇದು ಉತ್ತರ ಕರ್ನಾಟಕದ ಲಿಂಗಾಯತ ಊಳಿಗಮಾನ್ಯ ಹೃದಯದಲ್ಲಿ ಆತಂಕವನ್ನು ಉಂಟುಮಾಡಿತು. ಅಸ್ಪೃಶ್ಯತೆಯನ್ನು ಅನುಮೋದಿಸಿದ ಹಿಂದೂ ಧರ್ಮಗ್ರಂಥಗಳನ್ನು ಸುಡುವುದು ಅವರ ಆದ್ಯತೆಯ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಒಂದಾಗಿತ್ತು.

ಒಂದು ಕಾಲದಲ್ಲಿ ಹೈದರಾಬಾದ್ ನಿಜಾಮ ಮತ್ತು ಬ್ರಿಟಿಷ್ ಬಾಂಬೆ ಪ್ರೆಸಿಡೆನ್ಸಿಯ ಅಡಿಯಲ್ಲಿರುವ ಪ್ರದೇಶಗಳಿಂದ, ಭೀಮ್ ಸೇನೆಯು ಶೀಘ್ರದಲ್ಲೇ ದಕ್ಷಿಣ ಭಾರತದಾದ್ಯಂತ ಹರಡಿತು ಮತ್ತು ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಘಟಕಗಳನ್ನು ಹೊಂದಿತ್ತು. ಇದು ಒಂದು ಹಂತದಲ್ಲಿ ಎರಡು ಲಕ್ಷ ಸ್ವಯಂಸೇವಕರ ಕೇಡರ್ ಬಲವನ್ನು ಹೊಂದಿತ್ತು.

ಆಗಿನ ಕರ್ನಾಟಕದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ವೀರೇಂದ್ರ ಪಾಟೀಲ್ ಅವರಂತಹ ಉತ್ತರ ಕರ್ನಾಟಕದ ಇತರ ಲಿಂಗಾಯತ ನಾಯಕರು ಭೀಮ್ ಸೇನೆಯ ಮೇಲೆ ತೀವ್ರ ದಬ್ಬಾಳಿಕೆಯನ್ನು ಪ್ರಾರಂಭಿಸಿದರು.

ಭೀಮ್ ಸೇನೆಯು ತನ್ನದೇ ಆದ ಕ್ರಾಂತಿಯ ಭಾರದಿಂದ ಮತ್ತು ರಾಷ್ಟ್ರವ್ಯಾಪಿ ಪೊಲೀಸ್ ದಬ್ಬಾಳಿಕೆಯಿಂದ ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ ಕುಸಿಯಿತು. ಆದರೆ ಅದರ ಕೇಡರ್ ಸಂಘಟನಾ ಕಾರ್ಯತಂತ್ರಗಳು ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಮತ್ತು ಬಿಎಸ್ಪಿ ಸೇರಿದಂತೆ ಅಂಬೇಡ್ಕರ್ ಸಂಘಟನೆಗಳ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದ್ದವು.

ಖರ್ಗೆ ಅವರು ತಮ್ಮ ಹರೆಯದ ದಿನಗಳಲ್ಲಿ ಶ್ಯಾಮಸುಂದರ್ ಅವರಿಂದ ಹೇಗೆ ಸ್ಫೂರ್ತಿ ಪಡೆದಿದ್ದರು ಎಂಬುದರ ಬಗ್ಗೆ ಆಗಾಗ್ಗೆ ಮಾತನಾಡಿದ್ದಾರೆ.

"ತಮ್ಮ 20ರ ಹರೆಯದಲ್ಲಿ ಖರ್ಗೆ ಅವರು ಭೀಮ್ ಸೇನೆಯ ಕಲಬುರಗಿಯ ಮೊದಲ ಅಧ್ಯಕ್ಷರಾದರು ಎಂಬುದು ಹಲವರಿಗೆ ತಿಳಿದಿಲ್ಲ" ಎಂದು ಪ್ರೊ. ಪೋಥೆ ಹೇಳಿದರು. ಆದರೆ ಅವರು ಶೀಘ್ರದಲ್ಲೇ ಕ್ರಾಂತಿಕಾರಿ ರಾಜಕೀಯದ ಮಿತಿಗಳನ್ನು ಮತ್ತು ರಾಜಕೀಯ ಅಧಿಕಾರದ ಮಹತ್ವವನ್ನು ಅರಿತುಕೊಂಡರು. ಅವರು ಒಂದು ವರ್ಷದಲ್ಲಿ ಭೀಮ್ ಸೇನೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದರು (1969 ರಲ್ಲಿ).

ಟೋಪಣ್ಣ ಕೊಮ್ಟೆ ಬಹುಶಃ ಖರ್ಗೆ ಅವರ ಪ್ರಯಾಣದ 'ಕ್ರಾಂತಿಕಾರಿ' ಹಂತದ ಬದುಕಿಗೆ ಉಳಿದಿರುವ ಏಕೈಕ ಸಾಕ್ಷಿಯಾಗಿದ್ದಾರೆ. ಅವರಿಬ್ಬರು ಶಾಲಾ ಸಹಪಾಠಿಗಳಾಗಿದ್ದರು. ಒಂದು ಕಾಲದಲ್ಲಿ ಅಂಬೇಡ್ಕರ್ ಪ್ರಾರಂಭಿಸಿದ ಪರಿಶಿಷ್ಟ ಜಾತಿ ಒಕ್ಕೂಟದ (ಎಸ್ಸಿಎಫ್) ಪ್ರಮುಖ ನೆಲೆಯಾಗಿದ್ದ ಕಲಬುರಗಿಯ ವಾಡಿ ರೈಲ್ವೆ ಜಂಕ್ಷನ್ ಬಳಿಯ ಅವರ ಮನೆಯಲ್ಲಿ ಈ ವರ್ಷದ ಫೆಬ್ರವರಿಯ ಆರಂಭದಲ್ಲಿ ನಾವು ಅವರನ್ನು ಭೇಟಿಯಾದೆವು.

ಖರ್ಗೆ ಅವರ ಮೇಲೆ ಅಂಬೇಡ್ಕರ್ ಅವರ ಪ್ರಭಾವದ ಬಗ್ಗೆ ಮಾತನಾಡಲು ಟೋಪಣ್ಣ ಉತ್ಸುಕರಾಗಿದ್ದರು. "ನಾವು ಚಿಕ್ಕವರಾಗಿದ್ದಾಗ ಹುಚ್ಚರಾಗಿದ್ದೆವು. ನಾವು ಒಂದು ದಿನದಲ್ಲಿ ಜಗತ್ತನ್ನು ಬದಲಾಯಿಸಲು ಬಯಸಿದ್ದೆವು" ಎಂದು ಅವರು ಹೇಳಿದರು.

ತಮ್ಮ ತಂದೆ ಅಮೃತ್ ಕೋಮ್ಟೆ ಎಸ್‌ಸಿಎಫ್ ನಾಯಕರಾಗಿದ್ದರು ಎಂದು ಹೇಳಿದ ಟೋಪಣ್ಣ, 1950ರ ದಶಕದಲ್ಲಿ ಅಂಬೇಡ್ಕರ್ ವಾಡಿಗೆ ಭೇಟಿ ನೀಡಿದ್ದ ಹಳೆಯ ಛಾಯಾಚಿತ್ರವೊಂದನ್ನು ಹೊರತೆಗೆದರು. ಅವರು ಚಿತ್ರದಲ್ಲಿರುವ ಮಗುವನ್ನು ತೋರಿಸುತ್ತಾ, ಅದನ್ನು ತಾನು ಗುರುತಿಸಿಕೊಳ್ಳುತ್ತಾ, ಖರ್ಗೆ ಅವರು ಅಸೂಯಾಪರರಾಗಿದ್ದರು, ಹಾಗಾಗಿ ತಮ್ಮ ಸ್ಪೂರ್ತಿಯ ವ್ಯಕ್ತಿಯೊಂದಿಗೆ ಚಿತ್ರ ತೆಗೆಸಿಕೊಳ್ಳಲಿಲ್ಲ ಎಂದು ಹಗುರವಾಗಿ ಹೇಳಿದರು.

ನಂತರ, ಅವರು ಪ್ರಬುದ್ಧ ಭಾರತ್ ನಿಯತಕಾಲಿಕದ ಕೊನೆಯ ಸಂಚಿಕೆಯನ್ನು ಹೊರತೆಗೆದರು. ಅದು 1956 ರಲ್ಲಿ ಅಂಬೇಡ್ಕರ್ ಅವರ ಮರಣದ ಕೂಡಲೇ ಮುದ್ರಿಸಲ್ಪಟ್ಟ ಸಂಚಿಕೆಯಾಗಿತ್ತು.

"ನನ್ನ ತಂದೆ ʼಪ್ರಬುದ್ಧ ಭಾರತʼ ಮತ್ತು ʼಜನತಾʼ ಪತ್ರಿಕೆಗಳ ಅನೇಕ ಹಳೆಯ ಪ್ರತಿಗಳನ್ನು ಸಂರಕ್ಷಿಸಿದ್ದರು. ಇದನ್ನು ನಾವು ಬಾಲ್ಯದಲ್ಲಿ ಓದಿ ಬೆಳೆದಿದ್ದೇವೆ" ಎಂದು ಅವರು ಖರ್ಗೆ ಅವರೊಂದಿಗಿನ ತಮ್ಮ ಆರಂಭಿಕ ವರ್ಷಗಳ ಬಗ್ಗೆ ಹೇಳಿದರು. ಪ್ರಬುದ್ಧ ಭಾರತ ಮತ್ತು ಜನತಾ ಎರಡನ್ನೂ ಅಂಬೇಡ್ಕರ್ ಪ್ರಾರಂಭಿಸಿದರು ಮತ್ತು ಅವರ ಮರಣದ ನಂತರ ಅವು ಮುಚ್ಚಲ್ಪಟ್ಟವು.

 

(ಟೋಪಣ್ಣ ಕೊಮ್ಟೆ: Photo/thenewsminute.com)

ದೊಡ್ಡವರಾದಾಗ, ಟೋಪಣ್ಣ ಮತ್ತು ಖರ್ಗೆ ಇಬ್ಬರೂ ಜವಳಿ ಗಿರಣಿ ಕಾರ್ಮಿಕರನ್ನು ಸಂಘಟಿಸುವ ಒಕ್ಕೂಟದ ನಾಯಕರಾಗಿ ಮೊದಲು ರಾಜಕೀಯಕ್ಕೆ ಬಂದರು.

"ನಾನು ಸಿಪಿಐ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ) ಅಂಗಸಂಸ್ಥೆಯಲ್ಲಿದ್ದೆ ಮತ್ತು ಅವರು ಆರರ ಪಿ ಐ ಗೆ ಗೆ ಹತ್ತಿರವಿರುವ ಒಕ್ಕೂಟದಲ್ಲಿದ್ದರು"ಎಂದು ಅವರು ಹೇಳಿದರು,

"ಶ್ಯಾಮಸುಂದರ್ ಭೀಮ್ ಸೇನೆಯನ್ನು ಪ್ರಾರಂಭಿಸಿದಾಗ, ಅದು ಬೆಂಕಿಯಂತೆ ಹರಡಿತು. ಭೀಮ್ ಸೇನೆಯು ದಲಿತರಿಗೆ ಹಿಮ್ಮೆಟ್ಟಿಸುವುದು ಹೇಗೆ ಎಂಬುದನ್ನು ಕಲಿಸಿ ಕೊಟ್ಟಿತು. ಇಲ್ಲಿ ಮೊದಲ ಬಾರಿಗೆ ಭೂಮಾಲೀಕರು ಭಯಭೀತರಾಗಿರುವುದನ್ನು ನಾನು ನೋಡಿದ್ದೆ".

ಈ ತಂಡದೊಂದಿಗಿನ ಖರ್ಗೆ ಅವರ ಒಡನಾಟದ ಬಗ್ಗೆ ಅವರು ಹೀಗೆ ಹೇಳಿದರು: "ಖರ್ಗೆ ಅವರು ಬಲಿಷ್ಠ ದೇಹಿಯಾಗಿದ್ದರು ಮತ್ತು ವಿಶ್ವವಿದ್ಯಾಲಯದ ಹಾಕಿ ಆಟಗಾರರಾಗಿ ಖ್ಯಾತಿಯನ್ನು ಹೊಂದಿದ್ದರು. ಆದರೆ ಆತ ಹಿಂಸಾತ್ಮಕ ವ್ಯಕ್ತಿಯಾಗಿರಲಿಲ್ಲ. ಆತ ಆಗಬೇಕಾಗಿರಲಿಲ್ಲ, ಅಷ್ಟರಲ್ಲಾಗಲೇ ಆತ ವಕೀಲರಾಗಿದ್ದರು".

"ಪೊಲೀಸ್ ದೌರ್ಜನ್ಯದಿಂದ ಸೇನಾ ಕಾರ್ಯಕರ್ತರನ್ನು ರಕ್ಷಿಸುವುದು ಅವರ ಮುಖ್ಯ ಕೆಲಸವಾಗಿತ್ತು. ಆದರೆ ನೀವು ಭೀಮ್ ಸೇನೆಯ ಭಾಗವಾಗಲು ಕಠಿಣ ಮತ್ತು ನಿರ್ಭೀತರಾಗಿರಬೇಕಾಗಿತ್ತು. ಯಾರಾದರೂ ಸೇರಬಹುದು ಎಂಬಂತೆ ಅಲ್ಲ, ಅವರು ಆಯ್ಕೆಯಾಗಬೇಕಿತ್ತು ಮತ್ತು ಮಾಸಿಕ ಶುಲ್ಕವನ್ನು ಪಾವತಿಸಬೇಕಿತ್ತು".

ಖರ್ಗೆ ಎಂದಿಗೂ ಹೇಡಿಗಳಾಗಿರಲಿಲ್ಲ, ಆದರೆ ಭೀಮ್ ಸೇನೆಯ ವಿಪರೀತ ರಾಜಕೀಯವು ಅವರಲ್ಲಿದ್ದ ಬೌದ್ಧಧರ್ಮಕ್ಕೆ ಹೊಂದಿಕೆಯಾಗಲಿಲ್ಲ ಎಂದು ಟೋಪಣ್ಣ ಹೇಳಿದರು. "ಶ್ಯಾಮಸುಂದರ್ ಎಂದಿಗೂ ಬೌದ್ಧಧರ್ಮಕ್ಕೆ ಮತಾಂತರಗೊಂಡಿಲ್ಲ. ಆದರೆ ಖರ್ಗೆ ಮೊದಲಿನಿಂದಲೂ ಬೌದ್ಧರಾಗಿದ್ದರು" ಎಂದು ಅವರು ಹೇಳಿದರು.

"ಮತ್ತೊಂದೆಡೆ, ದೇವರಾಜ್ ಅರಸ್ ಮತ್ತು ಇಂದಿರಾ ಗಾಂಧಿ ಅವರು ಅತ್ಯಂತ ಅಂಚಿನಲ್ಲಿರುವವರಿಗೆ ಭೂಸುಧಾರಣೆಗಳು ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಪ್ರಸ್ತಾಪಿಸುವುದರೊಂದಿಗೆ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿದ್ದವು".

ಈ ಹಂತದಲ್ಲಿ ಆ ಪ್ರಸ್ತಾವನೆಯ ಬಗ್ಗೆ ಚಿಂತಿಸುವುದು ಮತ್ತು 1970 ಮತ್ತು 80 ರ ದಶಕಗಳಲ್ಲಿ ದೇಶದಲ್ಲಿ ಕ್ರಾಂತಿಕಾರಿ ದಲಿತ ರಾಜಕೀಯದ ಸ್ಥಿತಿಯ ಬಗ್ಗೆ ಯೋಚಿಸುವುದು ಉಪಯುಕ್ತವಾಗಿದೆ. ಈ ಅವಧಿ ಕಾಂಗ್ರೆಸ್ ನಲ್ಲಿ ಖರ್ಗೆ ಅವರ ಆರಂಭಿಕ ವರ್ಷಗಳಾಗಿದ್ದವು.

ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಮತ್ತು ಕರ್ನಾಟಕದ ದಲಿತ ಸಂಘರ್ಷ ಸಮಿತಿ (ಡಿ. ಎಸ್. ಎಸ್.) ಭೀಮ್ ಸೇನೆಯನ್ನು ಸ್ಥಳಾಂತರಿಸಿದವು. ಅವು ಭಾರತದಲ್ಲಿ ಜಾತಿ ವಿರೋಧಿ ಚಳವಳಿಯ ಮೇಲೆ ಆಳವಾದ ಮುದ್ರೆಯನ್ನುಹಾಕಿದರೂ, ಎರಡು ಸಂಘಟನೆಗಳು ಎಂದಿಗೂ ಸೈದ್ಧಾಂತಿಕ ಸ್ಪಷ್ಟತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಗೇಲ್ ಓಂವೆಡ್ತ್ ತಮ್ಮ ಪುಸ್ತಕ 'ದಲಿತರು ಮತ್ತು ಪ್ರಜಾಸತ್ತಾತ್ಮಕ ಕ್ರಾಂತಿ' ಯಲ್ಲಿ ಬರೆಯುತ್ತಾರೆ.

ಅಂಬೇಡ್ಕರೈಟ್ ಬೌದ್ಧ ಧರ್ಮ ಮತ್ತು ಮಾರ್ಕ್ಸ್ ವಾದದ ನಡುವಿನ ವ್ಯತ್ಯಾಸವನ್ನು ದಲಿತ ಪ್ಯಾಂಥರ್ಸ್ ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಮತ್ತು ಡಿಎಸ್ಎಸ್ ತನ್ನ ಉತ್ತುಂಗದಲ್ಲಿದ್ದಾಗ ಲೋಹಿಯಾ, ಗಾಂಧಿ ಮತ್ತು ಮಾರ್ಕ್ಸ್ ಸಿದ್ಧಾಂತಗಳ ನಡುವೆ ವಿಭಜನೆಗೊಂಡ ಸಂಘಟನೆಯಾಗಿತ್ತು. ನಂತರದ ವರ್ಷಗಳಲ್ಲಿ ಅನೇಕ ಡಿ. ಎಸ್. ಎಸ್ ನಾಯಕರು ಕಠಿಣ ಅಂಬೇಡ್ಕರ್ ವಾದಿಗಳಾದರು. ಅಂಬೇಡ್ಕರ್ ಅವರ ಹೆಚ್ಚಿನ ಬರಹಗಳು 1990ರ ದಶಕದ ಕೊನೆಯಲ್ಲಿ ಮತ್ತು 2000ರ ದಶಕದಲ್ಲಿ ಮಾತ್ರ ಲಭ್ಯವಾದವು.

1990ರ ದಶಕದ ಪ್ರಾರಂಭದ ಹೊತ್ತಿಗೆ, ಪ್ಯಾಂಥರ್ಸ್ ಮತ್ತು ಡಿ. ಎಸ್. ಎಸ್. ಅಸಂಖ್ಯಾತ ಬಣಗಳಾಗಿ ವಿಭಜನೆಗೊಂಡಿದ್ದವು. ಕರ್ನಾಟಕದ ಪ್ರತಿ ದಲಿತರ ಪ್ರದೇಶಗಳಲ್ಲಿ ಇಂದು ಅಂಬೇಡ್ಕರ್ ಪ್ರತಿಮೆ ಇದೆ ಎಂಬುದಕ್ಕೆ ಡಿಎಸ್ಎಸ್ ನಂತರದ ಬಣಗಳು ಕಾರಣವಾಗಿವೆ. ಮಾವಳ್ಳಿ ಶಂಕರ್ ನೇತೃತ್ವದ ಡಿ. ಎಸ್. ಎಸ್. (ಅಂಬೇಡ್ಕರ್ ವಾದ) ಕರ್ನಾಟಕದ ಡಿ. ಎಸ್. ಎಸ್. ನ ಪ್ರಮುಖ ಬಣಗಳಲ್ಲಿ ಒಂದಾಗಿದೆ.

ಮತ್ತೊಂದೆಡೆ, 1990ರ ದಶಕದಲ್ಲಿ ಖರ್ಗೆ ಈಗಾಗಲೇ ಐದು ಬಾರಿ ಶಾಸಕರಾಗಿದ್ದರು ಮತ್ತು ಅವರು ಪಕ್ಷದ ಪ್ರತಿಯೊಂದು ಸಚಿವ ಸಂಪುಟದಲ್ಲಿ ಪ್ರಮುಖ ಭಾಗವಾಗಿದ್ದರು.

ಕಮ್ಯುನಿಸ್ಟ್ ಆಳ್ವಿಕೆಯ ಕೇರಳ ಮತ್ತು ಪಶ್ಚಿಮ ಬಂಗಾಳದ ಹೊರತಾಗಿ ಭೂ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಏಕೈಕ ರಾಜ್ಯ ಕರ್ನಾಟಕವಾಗಿದೆ. ಭೂ ಸುಧಾರಣೆಗಳ ಶ್ರೇಯಸ್ಸು ದೇವರಾಜ್ ಅರಸ್ ಅವರಿಗೆ ಸಲ್ಲುತ್ತದೆಯಾದರೂ, ಅಂತಿಮವಾಗಿ ಈ ಭೂಮಿಯನ್ನು ಗುರುತಿಸಿ, ಅದನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ ಕೀರ್ತಿ ಅಂದಿನ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಕಂದಾಯ ಸಚಿವರಾಗಿದ್ದ ಖರ್ಗೆ ಅವರಿಗೆ ಸಲ್ಲುತ್ತದೆ.

ಖರ್ಗೆ ಅವರು ಭೂ ಸುಧಾರಣೆಯಲ್ಲಿ ಆಸಕ್ತರಾಗಿದ್ದರಿಂದ ಅವರ ಖಾತೆಗಳಲ್ಲಿ ಇದರ ಬಗ್ಗೆ ಮುತುವರ್ಜಿ ವಹಿಸುತ್ತಿದ್ದರು ಎಂದು ಅವರ ಜೀವನಚರಿತ್ರೆಕಾರ ಪೋಥೆ ಹೇಳಿದರು.

"ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅವರು 1970 ಮತ್ತು 1990ರ ನಡುವೆ ಸುಮಾರು ಒಂದು ಸಾವಿರ ಭೂ ನ್ಯಾಯಮಂಡಳಿಗಳನ್ನು ರಚಿಸಿರಬೇಕು" ಎಂದು ಪೋಥೆ ಹೇಳಿದರು.

"ಭೂ ಸುಧಾರಣೆಗಳ ಭರವಸೆಯೇ ಅವರನ್ನು ಮೊದಲು ಕಾಂಗ್ರೆಸ್ ಕಡೆಗೆ ಆಕರ್ಷಿಸಿತು".

(ವಿವಿ ಮಟ್ಟದ ಹಾಕಿ ಚಾಂಪಿಯನ್‌ ತಂಡದ ಆಟಗಾರ ಮಲ್ಲಿಕಾರ್ಜುನ ಖರ್ಗೆ: Photo/thenewsminute.com)

 

ಅಮೆರಿಕನ್ ಕಾಂಗ್ರೆಸ್ ವರ್ಸಸ್ ರಷ್ಯನ್ ಕಾಂಗ್ರೆಸ್

ಟೋಪಣ್ಣ ಅವರು “ಖರ್ಗೆ ಅವರು ದಲಿತ ಚಳವಳಿಯನ್ನು ತ್ಯಜಿಸಿ ರಾಷ್ಟ್ರೀಯ ಪಕ್ಷವೊಂದರಲ್ಲಿ ಆರಾಮದಾಯಕ ಜೀವನಕ್ಕಾಗಿ ನೆಲೆಸಿದರು ಎಂಬ ಅಪಪ್ರಚಾರದ ಅಭಿಪ್ರಾಯವಿದೆ” ಎಂದು ಹೇಳಿದರು.

"ಅವರು ಕಾಂಗ್ರೆಸ್ ಸೇರಿದ್ದಾರೆ ಎಂಬುದು ಜನರಿಗೆ ಮಾತ್ರತಿಳಿದಿದೆ, ಆದರೆ ಅವರು ಇಂದಿರಾ ಕಾಂಗ್ರೆಸ್ ಗೆ ಸೇರಿದ್ದಾರೆಯೇ ಹೊರತು ಹಳೆಯ ಕಾಂಗ್ರೆಸ್ ಗೆ ಅಲ್ಲ ಎಂಬುದನ್ನು ಜನರು ಮರೆತು ಬಿಡುತ್ತಾರೆ" ಎಂದು ಅವರು ಹೇಳಿದರು.

1967ರಲ್ಲಿ, ಇಂದಿರಾ ಗಾಂಧಿಯವರು 10 ಅಂಶಗಳ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು. ಇದರಲ್ಲಿ ಬ್ಯಾಂಕುಗಳು ಮತ್ತು ವಿಮೆಯ ರಾಷ್ಟ್ರೀಕರಣ, ಆಮದು-ರಫ್ತಿನ ಮೇಲೆ ರಾಷ್ಟ್ರೀಯ ನಿಯಂತ್ರಣ, ವ್ಯಾಪಾರ ಏಕಸ್ವಾಮ್ಯದ ಮೇಲಿನ ನಿರ್ಬಂಧಗಳು, ಹಿಂದಿನ ರಾಜಮನೆತನದವರಿಗೆ ರಾಜಧನವನ್ನು ರದ್ದುಪಡಿಸುವುದು ಮತ್ತು ಆಮೂಲಾಗ್ರ ಭೂ ಸುಧಾರಣೆಗಳು ಸೇರಿದ್ದವು. ಇದು ಕಮ್ಯುನಿಸ್ಟ್ ಪ್ರಣಾಳಿಕೆಯ ಒಂದು ಪುಟದಂತಿದ್ದು, ಅದು ಅಂಬೇಡ್ಕರ್ ಅನುಯಾಯಿಗಳನ್ನೂ ಸಂತೋಷಪಡಿಸಿತು.

ಆಕೆಯ ಈ 10 ಅಂಶಗಳ ಕಾರ್ಯಕ್ರಮದ ಪ್ರಸ್ತಾಪವು ಆ ಸಮಯದಲ್ಲಿ ಪಕ್ಷದೊಳಗಿದ್ದ ಬಹುತೇಕ ನಾಯಕರ ಹೃದಯಕ್ಕೆ ಇರಿದಂತಾಯಿತು. ಅವರೆಂದರೆ: ಅಂಬೇಡ್ಕರ್ ವಾದಿಗಳು ಹೇಳುವಂತೆ ಮೇಲ್ಜಾತಿಗಳು ಅಥವಾ ಮಾರ್ಕ್ಸ್ ವಾದಿ ಪದಗಳಲ್ಲಿ ಹೇಳುವಂತೆ ಬಂಡವಾಳಶಾಹಿಗಳು.

ಆಗ ಇಂದಿರಾ ಅವರು ಏಕಾಂಗಿಯಾದರು. ಅವರ ಎಡಪಂಥೀಯ ನೀತಿಗಳನ್ನು ಎದುರಿಸಲು ಈ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಂತ ಪ್ರಸ್ತಾಪಗಳ ಪಟ್ಟಿಯನ್ನು ಮಂಡಿಸಿದರು.

ಅವರ ಪ್ರಸ್ತಾಪಗಳೆಂದರೆ:

ಪಾಶ್ಚಿಮಾತ್ಯ ಆರ್ಥಿಕತೆಗಳೊಂದಿಗೆ, ವಿಶೇಷವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್ ಎ) ನೊಂದಿಗೆ ನಿಕಟ ಸಂಬಂಧಗಳು; ಸೋವಿಯತ್ ರಷ್ಯಾದ ಪ್ರಭಾವದಿಂದ ಬೇರ್ಪಡುವಿಕೆ; ಎಡಪಂಥೀಯ ಮತ್ತು ಜಾತಿ ವಿರೋಧಿ ಸಂಘಟನೆಗಳನ್ನುನಿಗ್ರಹಿಸುವ ಕಾರ್ಯತಂತ್ರಗಳು; ಮುಕ್ತ ಮಾರುಕಟ್ಟೆಗೆ ಉತ್ತೇಜನ ಮತ್ತು ಆರ್ಥಿಕ ಯೋಜನೆಯಿಂದ ರಾಜ್ಯವನ್ನು ಹಿಂತೆಗೆದುಕೊಳ್ಳುವುದು; ಖಾಸಗಿ ವಲಯಕ್ಕೆ ರಿಯಾಯಿತಿಗಳು ಮತ್ತು ವಿದೇಶಿ ಹೂಡಿಕೆದಾರರಿಗೆ ಬಾಗಿಲು ತೆರೆಯುವುದು.

ಯುಎಸ್ ಮತ್ತು ಯುಎಸ್ಎಸ್ಆರ್ ನಡುವಿನ ಶೀತಲ ಸಮರ ಉತ್ತುಂಗದಲ್ಲಿದ್ದಾಗ ಎರಡೂ ಕಡೆಯವರನ್ನು ಸಮನ್ವಯಗೊಳಿಸಲು ಯಾವುದೇ ಮಾರ್ಗವಿರಲಿಲ್ಲ. ಎರಡು ಮಹಾಶಕ್ತಿಗಳ ಬೆಂಬಲಿಗರ ನಡುವೆ ವಿಶ್ವದ ಇತರ ಭಾಗಗಳಲ್ಲಿ ಅಂತರ್ಯುದ್ಧಗಳು ನಡೆಯುತ್ತಿದ್ದವು. ಆ ಪೀಳಿಗೆಯ ಸಂದರ್ಭದಲ್ಲಿ ವಿಶ್ವವು ಅದರದೇನಿಟ್ಟಿನಲ್ಲಿ ಸಾಗುತ್ತಿತ್ತು. ಅದು ಕೇವಲ ಭಾರತದ ಭವಿಷ್ಯಕ್ಕೆ ಸೀಮಿತವಾಗಿರಲಿಲ್ಲ.

ಅಂತಿಮವಾಗಿ 1969ರಲ್ಲಿ ಪಕ್ಷವು ವಿಭಜನೆಯಾದಾಗ ಮತ್ತು ಇಂದಿರಾ ಗಾಂಧಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ( ಐ) ಇಂದಿರಾ ರಚಿಸಿದಾಗ, ಅವರು ಏಕಾಂಗಿಯಾದರು. ಪ್ರಾಯೋಗಿಕವಾಗಿ ಇಡೀ ಹಿರಿಯ ನಾಯಕತ್ವವು ಕಾಂಗ್ರೆಸ್ (ಒ) ಧ್ವಜದ ಅಡಿಯಲ್ಲಿ ಆಕೆಯ ವಿರುದ್ಧ ಹೋಯಿತು. ಇಂದಿರಾ ಗಾಂಧಿಯವರು ನಿರಂಕುಶವಾಗಿ ಪರಿವರ್ತನೆಗೊಂಡು 1975ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರುವುದಕ್ಕೆ ಈ ಸಿದ್ಧಾಂತಗಳ ನಡುವಿನ ಸಂಘರ್ಷವೂ ಕಾರಣವಾಗಿತ್ತು. ಈ ತುರ್ತುಪರಿಸ್ಥಿತಿಯು ಕೇವಲ ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲದೆ ಖರ್ಗೆ ಸೇರಿದಂತೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕನಿಗೂ ಕಳಂಕವಾಗಿದೆ.

 

(Photo credit: thenewsminute.com)

"1969 ರಲ್ಲಿ ಎಲ್ಲಾ ಶ್ರೀಮಂತರು ಮತ್ತು ಭೂಮಾಲೀಕರು ಕಾಂಗ್ರೆಸ್ (ಒ) ಜೊತೆ ಹೋದಾಗ ಖರ್ಗೆ ಇಂದಿರಾ ಗಾಂಧಿಯವರೊಂದಿಗೆ ಹೋದರು" ಎಂದು ಟೋಪಣ್ಣ ನೆನಪಿಸಿಕೊಂಡರು.

"ಭೂ ಸುಧಾರಣೆ ವಿರೋಧಿ ಮತ್ತು ಭೀಮ್ ಸೇನೆಯನ್ನು ಪೀಡಿಸಿದ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಕೂಡ ಕಾಂಗ್ರೆಸ್ (ಒ) ನಲ್ಲಿದ್ದರು".

"1972 ರಲ್ಲಿ ಕಾಂಗ್ರೆಸ್ (ಐ) ಟಿಕೆಟ್ ನಲ್ಲಿ ಸ್ಪರ್ಧಿಸಿದ ಮೊದಲ ವಿಧಾನಸಭಾ ಚುನಾವಣೆಯಿಂದ ಖರ್ಗೆಯವರ ಸ್ಫರ್ಧೆ ಆರಂಭವಾಯಿತು. 2019 ರಲ್ಲಿ ಮೋದಿ ಅಲೆಯಿಂದ ಸೋಲುವವರೆಗೂ ಬಹುಶಃ ಗೆಲುವು ಕಠಿಣವಾಗಿರಲಿಲ್ಲ. ಕಾಂಗ್ರೆಸ್ (ಒ) ಪಟ್ಟಿಯು ಮೇಲ್ಜಾತಿಯ ಹಿರಿಯ ರಾಜಕಾರಣಿಗಳಿಂದ ತುಂಬಿದ್ದರೆ, ಇಂದಿರಾ ಅವರ ಕಾಂಗ್ರೆಸ್ ಆಭ್ಯರ್ಥಿಗಳು ಮತ್ತು ಬೂತ್ ಮಟ್ಟದ ಕಾರ್ಯಕರ್ತರನ್ನು ಹುಡುಕಲು ಕಷ್ಟಪಡುತ್ತಿದ್ದರು.

ಖರ್ಗೆ ಅವರ ಪ್ರಧಾನ ಪ್ರಚಾರ ತಂಡವು ಸುಮಾರು 200 ಜವಳಿ ಗಿರಣಿ ಕಾರ್ಮಿಕರನ್ನು ಒಳಗೊಂಡಿತ್ತು, ಅವರು ಚುನಾವಣೆಯಲ್ಲಿ ಅವರೊಂದಿಗೆ ಕೆಲಸ ಮಾಡಲು ದೀರ್ಘ ರಜೆಯನ್ನು ತೆಗೆದುಕೊಂಡಿದ್ದರು. ಅವರು ಪ್ರಚಂಡ ಬಹುಮತದೊಂದಿಗೆ ಗೆದ್ದರು ಮತ್ತು ಕಾಂಗ್ರೆಸ್ (ಐ) 216 ಸದಸ್ಯ ಬಲದ ವಿಧಾನಸಭೆಯಲ್ಲಿ 165 ಸ್ಥಾನಗಳನ್ನು ಗಳಿಸಿತು. ಭೂ ಮಾಲೀಕರ ಪಕ್ಷವು ನಾಶವಾಯಿತು.

"ಇಲ್ಲಿಂದ ಎಲ್ಲವೂ ಸುಲಲಿತವಾಯಿತು, ಅವರು ಮಂತ್ರಿಯಾದರು ಮತ್ತು ಹಿಂತಿರುಗಿ ನೋಡಲಿಲ್ಲ ಎಂದು ನೀವು ಭಾವಿಸಬಹುದು. ಆದರೆ ಈ ಸಮಯದಲ್ಲಿ ಅವರ ಜೀವಕ್ಕೆ ಹೆಚ್ಚಿನ ಅಪಾಯವಿತ್ತು. 1989ರ ಚುನಾವಣಾ ಪ್ರಚಾರದ ವೇಳೆ ಖರ್ಗೆ ಮೇಲೆ ನಡೆದ ದಾಳಿಯ ಬಗ್ಗೆ ನಿಮಗೆ ತಿಳಿದಿದೆಯೇ? ಎಂದು ಟೋಪಣ್ಣ ಕೇಳಿದರು.

ಖರ್ಗೆ ಮೂರನೇ ಬಾರಿಗೆ ಮರು ಆಯ್ಕೆ ಬಯಸಿದ್ದರು ಮತ್ತು ಅವರ ಮೇಲೆ ಹತ್ಯೆಯ ಪ್ರಯತ್ನ ನಡೆದಾಗ ರಾಜ್ಯಮಟ್ಟದ ವ್ಯಕ್ತಿಯಾಗಿದ್ದರು ಎಂದು ಟೋಪಣ್ಣ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ಅಥವಾ ಖರ್ಗೆ ಅವರ ಜೀವನ ಚರಿತ್ರೆಗಳಲ್ಲಿ ಯಾವುದೇ ದಾಖಲೆಗಳಿಲ್ಲ, ಆದರೆ ಇದು ನಿಜವೆಂದು ಟೋಪಣ್ಣ ಪ್ರತಿಪಾದಿಸಿದರು ಮತ್ತು ಇದು ವಾಡಿ ಎಂಬ ಹಳ್ಳಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಕಂದಕೂರ್ ಎಂಬಲ್ಲಿ ಸಂಭವಿಸಿದೆ ಎಂದು ಹೇಳಿದರು.

"ಸುದ್ದಿ ತಿಳಿಯುತ್ತಿದ್ದಂತೆ ನಾವೆಲ್ಲರೂ ಸ್ಥಳಕ್ಕೆ ಧಾವಿಸಿದೆವು. ಆದರೆ ಅದು ಕೆಲವೇ ನಿಮಿಷಗಳಲ್ಲಿ ಮುಗಿದುಹೋಗಿತ್ತು. "ಖರ್ಗೆ ಅವರ ದಾಳಿಕೋರರು ಜಾನುವಾರುಗಳನ್ನು ಅವರ ದಾರಿಗೆ ಅಡ್ಡನಿಲ್ಲಿಸುವ ಮೂಲಕ ಅವರನ್ನು ತಡೆದರು ಮತ್ತು ನಂತರ ಬಂಡೆಕಲ್ಲುಗಳಿಂದ ಅವರನ್ನು ಮುಗಿಸಲು ಪ್ರಯತ್ನಿಸಿದರು. ಆದರೆ ಖರ್ಗೆ ಜಾನುವಾರುಗಳ ನಡುವೆಯೇ ಹಾದುಹೋದರು ಎಂದು ಅವರು ಹೇಳಿದರು.

ಭೀಮ್ ಸೇನಾ ಮತ್ತು ಆರ್ ಪಿ ಐ ಭೂ ಸುಧಾರಣೆಗಳಿಗಾಗಿ ಆಂದೋಲನ ಮುಂದುವರೆಸುತ್ತಿರುವಾಗ ಖರ್ಗೆ ಅವರು ಈ ಪ್ರದೇಶದ ಶ್ರೀಮಂತ ಭೂಮಾಲೀಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರು ಸಚಿವರಾದಾಗ ಮತ್ತು ಭೂಮಿಯನ್ನು ಮರು ಹಂಚಿಕೆ ಮಾಡಲು ಪ್ರಾರಂಭಿಸಿದಾಗ, ಅವರು ಆತನನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸಿ ಹತಾಶರಾದರು ಎಂದು ಟೋಪಣ್ಣ ಹೇಳಿದ್ದಾರೆ. "ಅವರು ಅದರ ಬಗ್ಗೆ ಮಾತನಾಡುವುದಿಲ್ಲ ಆದರೆ ನೀವು ಅವರನ್ನು ಕೇಳಬೇಕು" ಎಂದು ಅವರು ಹೇಳಿದರು.

ಖರ್ಗೆ ಅವರೊಂದಿಗಿನ ನಮ್ಮ ಸಣ್ಣ ಭೇಟಿಯ ಸಮಯದಲ್ಲಿ, ಈ ಪ್ರಸಂಗವು ನಮ್ಮ ಹೆಚ್ಚಿನ ಸಮಯವನ್ನು ನುಂಗಿತು. ಟೋಪಣ್ಣನ ಹೇಳಿಕೆಗಳನ್ನು ಉತ್ಪ್ರೇಕ್ಷಿತವೆಂದು ತಳ್ಳಿಹಾಕುವುದು ಅವರ ಮೊದಲ ಪ್ರತಿಕ್ರಿಯೆಯಾಗಿತ್ತು. "ಇದು ಹತ್ಯೆಯ ಪ್ರಯತ್ನವಾಗಿರಲಿಲ್ಲ. ಕತ್ತಿಗಳು, ಬಂದೂಕುಗಳು ಅಥವಾ ಯಾವುದೂ ಇಲ್ಲ. ಕೇವಲ ಕಲ್ಲು ತೂರಾಟ" ಎಂದು ಅವರು ಆರಂಭದಲ್ಲಿ ಹೇಳಿದರು.

ಅವರು ಕಾಗದದ ತುಣುಕನ್ನು ಹೊರತೆಗೆದು ಘಟನೆಯ ಸಂದರ್ಭವನ್ನು ಚಿತ್ರಿಸಲು ಪ್ರಾರಂಭಿಸಿದರು. "ಇಲ್ಲಿ ರಸ್ತೆ ಇಕ್ಕಟ್ಟಾಗಿತ್ತು. ಜೀಪು ಇಲ್ಲಿ ಸಿಕ್ಕಿಕೊಂಡಿತು. ಅವರು ದನಗಳ ಹಿಂದೆ ಅಡಗಿಕೊಂಡಿದ್ದರು. ಒಬ್ಬರು ಇಬ್ಬರಲ್ಲ, ಬಹುಶಃ ನೂರಾರು ಮಂದಿ.

"ಆತನ ಬೆಂಗಾವಲು ಪಡೆ ಜನ-ದನ ಸಮೂಹದ ಮೂಲಕ ನುಗ್ಗಿಹೋಯಿತು ಎಂಬ ಟೋಪಣ್ಣ ಹೇಳಿಕೆಯ ಬಗ್ಗೆ ನಾವು ಅವರನ್ನು ಕೇಳಿರದಿದ್ದರೆ ಅವರು ಬಹುಶಃ ಚಿತ್ರವಿಶ್ಲೇಷಣೆ ಮಾಡುವುದನ್ನು ಮುಂದುವರಿಸುತ್ತಿದ್ದರು.

"ಅದು ಅಸಂಬದ್ದ", ಅವರು ಹೇಳಿದರು, "ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರು ನಮ್ಮ ಜನರಾಗಿದ್ದರು. "ಆದಾಗ್ಯೂ, ನನ್ನ ಭೂ ಸುಧಾರಣಾ ಕಾರ್ಯಕ್ರಮಗಳ ಬಗ್ಗೆ ಅತೃಪ್ತಿ ಹೊಂದಿದ್ದ ಭೂಮಾಲೀಕರು ಈ ದಾಳಿಯ ಹಿಂದೆ ಇದ್ದಾರೆ ಎಂದು ಅವರು ದೃಢಪಡಿಸಿದರು. "ಭೂಮಾಲೀಕರ ವಿಷಯವೇನೆಂದರೆ, ಅವರು ಸ್ವತಃ ಎಂದಿಗೂ ಜಗಳಕ್ಕೆ ಹಾಜರಾಗುವುದಿಲ್ಲ. ಅವರು ಯಾವಾಗಲೂ ಗೂಂಡಾಗಳನ್ನು ನೇಮಿಸಿಕೊಳ್ಳುತ್ತಾರೆ ಅಥವಾ ತಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡಲು ಜನರನ್ನುಪ್ರಚೋದಿಸುತ್ತಾರೆ".

ಕೆಂಪು ಬಣ್ಣ, ನೀಲಿ ಬಣ್ಣ ಅಥವಾ ತ್ರಿವರ್ಣ?

ಡಿಸೆಂಬರ್ 6, 2022 ರಂದು, ಡಿ. ಎಸ್. ಎಸ್. ನ 12 ಪ್ರಮುಖ ಬಣಗಳು 40 ವರ್ಷಗಳ ನಂತರ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಒಗ್ಗೂಡಿದವು. ಕರ್ನಾಟಕದಾದ್ಯಂತದ ಒಂದು ಲಕ್ಷಕ್ಕೂ ಹೆಚ್ಚು ಡಿ. ಎಸ್. ಎಸ್. ಕಾರ್ಯಕರ್ತರು ತಮ್ಮ ಪಂಗಡಗಳ ಧ್ವಜಗಳನ್ನು ಹೊತ್ತುಕೊಂಡು ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಜಮಾಯಿಸಿದರು.

ಐತಿಹಾಸಿಕ ದಿನವಾದ ಅಂಬೇಡ್ಕರ್ ಅವರ ಪುಣ್ಯತಿಥಿ ಅಥವಾ ಮಹಾ ಪರಿನಿರ್ವಾಣ ದಿನವನ್ನು ಗುರುತಿಸಲು, ಡಿಎಸ್ಎಸ್ ನಾಯಕರು ಬಿಜೆಪಿಯನ್ನು ಖಂಡಿಸಿ ನಿರ್ಣಯವನ್ನು ಅಂಗೀಕರಿಸಿದರು ಮತ್ತು ಸಂವಿಧಾನವನ್ನು ಉಳಿಸಲು ಕರೆ ನೀಡಿದರು.

ಈ ಕರೆ ಕಾಂಗ್ರೆಸಿಗೆ ಬೆಂಬಲ ನೀಡುವ ಸ್ಪಷ್ಟ ಸಂಕೇತವಾಗಿತ್ತು. ಇಲ್ಲಿ ನಿರ್ಣಯಗಳ ಅಂಗೀಕಾರದ ಸಮಯದಲ್ಲಿ ಪಕ್ಷದ ವಿವಿಧ ವರ್ಗದ ನಾಯಕರನ್ನು ವೇದಿಕೆಗೆ ಆಹ್ವಾನಿಸಿದರು. ಕೆಲವು ತಿಂಗಳುಗಳ ನಂತರ ಬಿಡುಗಡೆಯಾದ ಕಾಂಗ್ರೆಸ್ ಪ್ರಣಾಳಿಕೆಯು ಡಿಎಸ್ಎಸ್ ನ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಒಳಗೊಂಡಿತ್ತು-ಉದಾಹರಣೆಗೆ ಜಾತಿಗಣತಿಯ ಫಲಿತಗಳನ್ನು ಬಿಡುಗಡೆ ಮಾಡುವುದು ಮತ್ತು ಪರಿಶಿಷ್ಟ ಜಾತಿಗಳಿಗೆ ಆಂತರಿಕ ಮೀಸಲಾತಿಯ ಕುರಿತು ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡುವುದು.

2023ರಲ್ಲಿ ಪಕ್ಷವು ಕರ್ನಾಟಕದಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದಾಗ, ಮಾಧ್ಯಮಗಳು ಹೆಚ್ಚಿನ ಮನ್ನಣೆಯನ್ನು ಕಾಂಗ್ರೆಸ್ ಖಾತರಿ ಯೋಜನೆಗಳಿಗೆ ನೀಡಿದವು. ಆದರೆ ಮತದಾನದ ಮಾದರಿಗಳಆಳವಾದ ವಿಶ್ಲೇಷಣೆಯು ಪಕ್ಷವು ಗಮನಾರ್ಹ ಅಲ್ಪಸಂಖ್ಯಾತಮತಗಳನ್ನು ಗಳಿಸಿದ್ದು ಮಾತ್ರವಲ್ಲದೆ ದಶಕಗಳಲ್ಲಿ ದಲಿತ ಮತಗಳ ಸುಸ್ಪಷ್ಟ ಐಕ್ಯತೆ ಸಾಧಿಸುವಲ್ಲಿಯ ಶಸ್ವಿಯಾಗಿದೆ ಎಂದು ಬಹಿರಂಗಪಡಿಸಿದೆ. ಹೊಲೆಯ-ಮಾದಿಗ ವಿಭಜನೆಯ ನಂತರವೂ ಇಬ್ಬರೂ ಒಟ್ಟಾಗಿ ಕಾಂಗ್ರೆಸ್ಸಿಗೆ ಮತ ಹಾಕಿದ್ದರು.

ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಮತ್ತು ಮತ್ತೊಬ್ಬ ಅಂಬೇಡ್ಕರ್ ವಾದಿ ಕಾಂಗ್ರೆಸ್ಸಿಗ ಎಚ್. ಸಿ. ಮಹದೇವಪ್ಪ ಅವರನ್ನು ಐತಿಹಾಸಿಕ ಡಿಎಸ್ಎಸ್ ರ್ಯಾಲಿಯ ವಿನ್ಯಾಸಕರು ಎಂದು ಅನೇಕ ನಾಯಕರು ಮತ್ತು ಕಾರ್ಯಕ್ರಮದ ಸಂಘಟಕರು ಹೇಳಿದ್ದಾರೆ. ಈ ರ್ಯಾಲಿಗಳ ಸಂಘಟನೆಯಲ್ಲಿ ನಿಜವಾಗಿಯೂ ತಮ್ಮ ಪಾತ್ರವಿದ್ದರೂ ‘ಖರ್ಗೆಗಳು’ ಅದರಲ್ಲಿ ತಮ್ಮ ಪಾತ್ರವನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಮಹದೇವಪ್ಪ ಕೂಡ ಈ ಕಾರ್ಯಕ್ರಮದ ನಿರ್ವಾಹಕನೆಂದು ಎಂದಿಗೂ ಹೇಳಿಕೊಳ್ಳಲಿಲ್ಲ.

ದಲಿತ ಕಾರ್ಯಕರ್ತ ಗುಂಪುಗಳೊಂದಿಗೆ ಬಹಿರಂಗವಾಗಿ ಬೆರೆಯುವ ಅವರ ಮಿತಭಾಷಿತ್ವ ಭಾರತದ ದಲಿತ ರಾಜಕಾರಣಿಗಳ ಜೀವನದ ಬಗ್ಗೆ ಸೂಚ್ಯವಾದ ಒಳನೋಟವನ್ನು ನೀಡುತ್ತದೆ, ದಲಿತ ರಾಜಕಾರಣಿಗಳು ಪ್ರಬಲ ಜಾತಿಗಳ ಆಡಳಿತದ ವಾತಾವರಣದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಕರ್ನಾಟಕದ ರಾಜಕೀಯದಲ್ಲಿ ಪ್ರಾಬಲ್ಯಹೊಂದಿರುವ ಸಾಮಾಜಿಕ ಗುಂಪುಗಳಿಂದ ಬಂದ ನಾಯಕರು- ಅಂದರೆ, ಉತ್ತರದ ಪಂಚಮಸಾಲಿ ಮತ್ತು ಬಣಜಿಗ ಲಿಂಗಾಯತರು, ದಕ್ಷಿಣದ ಒಕ್ಕಲಿಗರು, ರೆಡ್ಡಿಗಳು ಮತ್ತು ಕುರುಬರು ಮತ್ತು ಕರಾವಳಿಯ ಬಂಟರು, ಮೊಗವೀರರು ಮತ್ತು ಬಿಲ್ಲವರು-ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮ ಜಾ ತಿವೇದಿಕೆಗಳನ್ನು ಅಥವಾ ಧಾರ್ಮಿಕ ನಾಯಕರನ್ನು ಬಳಸಲು ಎಂದಿಗೂ ಹಿಂಜರಿಯುವುದಿಲ್ಲ. ಆದರೆ ಅಂಚಿನಲ್ಲಿರುವ ಈ ಸಮುದಾಯಗಳ ನಾಯಕರು ತಮ್ಮ ಧಾರ್ಮಿಕ ಅಥವಾ ರಾಜಕೀಯ ನಂಬಿಕೆಗಳನ್ನು ಪ್ರದರ್ಶಿಸಿದಾಗ, ಅದು ಅವರ ವಿರುದ್ಧ ಕೆಲಸ ಮಾಡುತ್ತದೆ.

ಬೆಂಗಳೂರಿನ ಹಿರಿಯ ಡಿಎಸ್ಎಸ್ ನಾಯಕರೊಬ್ಬರು, "ಅವರು ಅಧಿಕಾರದಲ್ಲಿದ್ದಾಗ ನಮಗೆ ಹೆಚ್ಚಿನ ಪ್ರತಿಫಲ ಸಿಗುವುದಿಲ್ಲ ಎಂದು ನಮಗೆ ತಿಳಿದಿದ್ದರೂ ನಾವು (ದಲಿತ ನಾಯಕರು) ಅವರನ್ನು ಬೆಂಬಲಿಸಬೇಕು" ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಬ್ಬರು ಹಿರಿಯ ಡಿಎಸ್ಎಸ್ ನಾಯಕರನ್ನು ಎಂಎಲ್ಸಿಗಳಾಗಿ ನಾಮನಿರ್ದೇಶನ ಮಾಡಲಾಗುವುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಅದು ಸಂಭವಿಸುವ ಯಾವುದೇ ಲಕ್ಷಣಗಳಿಲ್ಲ.

ಮಹದೇವಪ್ಪ ಮತ್ತು ಖರ್ಗೆ ಅವರನ್ನು ನಿರಾಸೆಗೊಳಿಸಿದ್ದಾರೆಯೇ ಎಂದು ಕೇಳಿದಾಗ, "ಖರ್ಗೆ ಅವರಂತಹ ನಾಯಕರ ಮುಂದೆ ಇಂತಹ ವಿಷಯಗಳನ್ನು ಬಲವಾಗಿ ಕೇಳುವುದು ಕಷ್ಟ. ಅವರು ಮೂರು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿದು, ಬೇರೆಯವರಿಗೆ ಅವಕಾಶ ಮಾಡಿಕೊಟ್ಟರು. ನಮ್ಮ ಜನರು ಏನನ್ನಾದರೂ ಪಡೆಯಬೇಕಾದರೆ, ಬಹಳಷ್ಟು ತ್ಯಾಗ ಮಾಡಬೇಕಾಗುತ್ತದೆ".

ಸುಮಾರು 60 ವರ್ಷಗಳಿಂದ ಅವರ ರಾಜಕೀಯವು ಸಮಾನಾಂತರವಾಗಿ ನಡೆಯುತ್ತಿದ್ದರೂ, ಖರ್ಗೆ ಅವರು ಕರ್ನಾಟಕದ ದಲಿತ ಮತ್ತು ಕಮ್ಯುನಿಸ್ಟ್ ಚಳುವಳಿಗಳೊಂದಿಗೆ ವೈಯಕ್ತಿಕವಲ್ಲದ ಮತ್ತು ಕ್ರಿಯಾತ್ಮಕ ಸಂಬಂಧವನ್ನು ಹೊಂದಿದ್ದಾರೆ.

ಕೆಂಪು ಮತ್ತು ನೀಲಿ ಧ್ವಜಗಳನ್ನು ಹಿಡಿದಿರುವ ಕಾರ್ಯಕರ್ತರು ಕಾಂಗ್ರೆಸ್ಸಿನಲ್ಲಿ ದೇವರಾಜ್ ಅರಸ್ ಮತ್ತು ಇತ್ತೀಚೆಗೆ ಸಿದ್ದರಾಮಯ್ಯರಂತಹ ದಲಿತೇತರ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ದಲಿತ ಮತ್ತು ಕಮ್ಯುನಿಸ್ಟ್ ಚಳುವಳಿಗಳೊಂದಿಗೆ ಸಂಬಂಧ ಹೊಂದಿರುವ ವಿವಿಧ ವರ್ಗದ ನಾಯಕರನ್ನು ನಾವು ಮಾತನಾಡಿಸಿದಾಗ ಇವರೆಲ್ಲ ಖರ್ಗೆ ಅವರ ಬಗ್ಗೆ ಕೆಲವು ಪ್ರಮುಖ ಟೀಕೆ ಟಿಪ್ಪಣಿಗಳನ್ನು ಹೊಂದಿರುವುದು ಗಮನಕ್ಕೆಬಂದಿತು.

ಆದರೆ ಅವರು ಅವರ ಬಗ್ಗೆ ಮಾತನಾಡುವ ಮೊದಲು, ಭೂಮಿ ಮತ್ತು ಕಾರ್ಮಿಕ ಹಕ್ಕುಗಳಿಗೆ ಅವರು ನೀಡಿದ ಕೊಡುಗೆ, ಅಸಂಘಟಿತ ಕಾರ್ಮಿಕರಿಗೆ ಅವರು ಪರಿಚಯಿಸಿದ ಆರೋಗ್ಯ ವಿಮಾ ಯೋಜನೆಗಳು, ಅವರ ಬೌದ್ಧ ವಿಹಾರ ಮತ್ತು ಶಿಕ್ಷಣ ಸಂಸ್ಥೆಗಳು, ಅವರ ಅಭಿವೃದ್ಧಿ ಯೋಜನೆಗಳು, ಉತ್ತರ ಕರ್ನಾಟಕಕ್ಕೆ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ಪಡೆಯುವ ಅವರ ಹೋರಾಟವನ್ನು ಶ್ಲಾಘಿಸುವ ಸುದೀರ್ಘ ಪಟ್ಟಿಯನ್ನು ನೀಡುತ್ತಿದ್ದರು.

ಅವರೆಲ್ಲರೂ, ಖರ್ಗೆ ಕೋಮುವಾದದ ಕೊಳಕು ರಾಜಕೀಯವನ್ನು ಎಂದಿಗೂ ಆಡಲಿಲ್ಲ ಮತ್ತು ಭ್ರಷ್ಟಾಚಾರದ ಪ್ರಕರಣದಲ್ಲಿ ಅವರ ಹೆಸರು ಎಂದಿಗೂ ಕಾಣಿಸಿಕೊಂಡಿಲ್ಲ ಎಂದು ಹೇಳಿದರು. ಅವರು ಅಂತಿಮವಾಗಿ ಖರ್ಗೆ ಅವರ ಟೀಕೆಯನ್ನು ಹಂಚಿಕೊಂಡಾಗ, ಯಾರೂ ತಮ್ಮ ಹೆಸರನ್ನು ದಾಖಲಿಸಲು ಮುಂದಾಗಲಿಲ್ಲ.

ಡಿಎಸ್ಎಸ್ ನಾಯಕರ ಟೀಕೆಗಳು ಅಚ್ಚರಿಯೇನಲ್ಲ. ಅವರು ಖರ್ಗೆ ಬಗ್ಗೆ ಕಟುವಾಗಿದ್ದರು, ಏಕೆಂದರೆ ಕಳೆದ ನಾಲ್ಕು ದಶಕಗಳಲ್ಲಿ ಅವರು ಪ್ರಾರಂಭಿಸಿದ ವಿವಿಧ ಕ್ರಾಂತಿಕಾರಿ ಆಂದೋಲನಗಳನ್ನು ಖರ್ಗೆ ಬೆಂಬಲಿಸಿದ್ದು ಕಡಿಮೆ, ಆ ಸಮಯದಲ್ಲಿ ನಾಯಕರು ಆಗಾಗ್ಗೆ ರಾಜ್ಯಾಡಳಿತದ ದಬ್ಬಾಳಿಕೆಯನ್ನು ಎದುರಿಸಿದ್ದರು.

ಆದಾಗ್ಯೂ, ಸಿ. ಪಿ. ಐ ಮತ್ತು ಸಿ. ಪಿ. ಐ (ಎಂ) ನಾಯಕರ ಟೀಕೆಗಳು ಮತ್ತಷ್ಟು ಆಳವಾದವು.

"ಖರ್ಗೆ ಮೊದಲ ಬಾರಿಗೆ ಸ್ಪರ್ಧಿಸಿದಾಗ, ಕಲಬುರಗಿಯಲ್ಲಿ ಮೇಲ್ಜಾತಿಗಳು ದಲಿತರ ಮೇಲೆ ತೀವ್ರ ದೌರ್ಜನ್ಯಗಳನ್ನು ನಡೆಸಿದ್ದರು. ಇಡೀ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದವು. ಆದರೆ ಗುರ್ಮಿಟ್ಕಲ್ ನಲ್ಲಿ ಇವುಗಳ ಪ್ರಮಾಣ ಕಡಿಮೆ ಇದ್ದವು" ಎಂದು ಒಬ್ಬ ಕಮ್ಯುನಿಸ್ಟ್ ನಾಯಕರು ಹೇಳಿದರು.

"ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಪ್ರಕರಣಗಳನ್ನು ಹೊರತುಪಡಿಸಿ, ಶಾಸಕ (ಖರ್ಗೆ) ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಆದ್ಯತೆ ನೀಡುತ್ತಿದ್ದರು".

ಟೋಪಣ್ಣ ಅವರಂತಹ ಖರ್ಗೆ ಬೆಂಬಲಿಗರು ಇಂತಹ ನಿರ್ದಿಷ್ಟ ಹೇಳಿಕೆಯನ್ನು ಎದುರಿಸಲು ತಮ್ಮ ಜೀವಿತಾವಧಿಯನ್ನು ಕಳೆದಿದ್ದಾರೆ. ಟೋಪಣ್ಣ ಹೇಳುವಂತೆ, ಬಹುತೇಕ ದೌರ್ಜನ್ಯ ಪ್ರಕರಣಗಳು ಸಾಮಾಜಿಕ ಬಹಿಷ್ಕಾರ ಅಥವಾ ಕಿರುಕುಳವನ್ನು ಒಳಗೊಂಡಿರುತ್ತಿದ್ದವು. ಅಲ್ಲಿ ದೈಹಿಕ ಹಿಂಸಾಚಾರವಿರುವುದಿಲ್ಲ. ಆದರೆ ಮೌಖಿಕ ನಿಂದನೆ ಮತ್ತು ಅವಮಾನವಿತ್ತು ಎಂದು ಹೇಳಿದ್ದಾರೆ.

"ಈ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಕಷ್ಟ" ಎಂದು ಅವರು ಹೇಳಿದರು, "ಅಂತಹ ಪ್ರಕರಣಗಳಿಗೆ ರಾಜಕೀಯ ಪರಿಹಾರದ ಅಗತ್ಯವಿದೆ". ಅಂತಹ ಪ್ರಕರಣಗಳಲ್ಲಿ ಶೋಷಿತರಿಗೆ ಒಬ್ಬ ಪ್ರಬಲ ವ್ಯಕ್ತಿ ಅಥವಾ ಶಕ್ತಿಯ ಬೆಂಬಲದ ಅಗತ್ಯವಿರುತ್ತದೆ. ಇದರಿಂದಾಗಿ ಆಗಿರುವ ಅನ್ಯಾಯವನ್ನು ಪರಿಹಾರದ ಮೂಲಕ ಅಥವಾ ಸಾರ್ವಜನಿಕವಾಗಿ ಕ್ಷಮೆ ಕೇಳುವ ಮೂಲಕ ಅಪಮಾನಿತ ವ್ಯಕ್ತಿ ಅಥವಾ ಸಮುದಾಯದ ಘನತೆಯನ್ನು ಎತ್ತಿಹಿಡಿಯುವ ಸಾಧ್ಯತೆ ಇರುತ್ತದೆ. ಇದು ನ್ಯಾಯಾಲಯಗಳಿಗೆ ಸುತ್ತುವುದಕ್ಕಿಂತ ಉತ್ತಮ ಎಂದು ಟೋಪಣ್ಣ ಹೇಳಿದರು.

ಕೋಲಾರದ ಕಂಬಾಲಪಲ್ಲಿ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಲ್ಲಿ ಶ್ರೀರಾಮಪ್ಪ (25), ನರಸಿಂಹಯ್ಯ (25), ಅಂಜನಪ್ಪ (27), ಚಿಕ್ಕಪಣ್ಣ (40), ಸುಬ್ಬಕ್ಕ (45), ಪಾಪಮ್ಮ (46) ಮತ್ತುರಾಮಕ್ಕ (70) ಎಂಬ ಏಳು ದಲಿತರು ಸಾವನ್ನಪ್ಪಿದ ನಂತರ ಖರ್ಗೆ ಸಾಕಷ್ಟು ಕೆಲಸ ಮಾಡಲಿಲ್ಲ ಎಂಬುದು ಒಂದು ಪ್ರಮುಖ ಟೀಕೆಯಾಗಿದೆ.

2000ರ ಮಾರ್ಚ್ 11ರಂದು ರೆಡ್ಡಿ-ಒಕ್ಕಲಿಗ ಗುಂಪು ಅವರನ್ನು ತಮ್ಮ ಮನೆಗಳಲ್ಲಿ ಬಂಧಿಸಿ ಜೀವಂತವಾಗಿ ಸುಟ್ಟುಹಾಕಿತು.

ಈ ಘಟನೆಯು ರಾಷ್ಟ್ರೀಯ ತಲೆಬರಹಗಳನ್ನು ಸೃಷ್ಟಿಸಿತು ಮತ್ತು ಸೋನಿಯಾ ಗಾಂಧಿ ಸೇರಿದಂತೆ ಹಲವಾರು ನಾಯಕರು ಗ್ರಾಮಕ್ಕೆ ಧಾವಿಸಿದರು. ಈ ಪ್ರಕರಣದ ದಲಿತ ಸಾಕ್ಷಿಗಳು ಪ್ರತೀಕಾರದ ಭಯದಿಂದ ತಮ್ಮ ಸಾಕ್ಷ್ಯಗಳನ್ನು ಹಿಂಪಡೆದ ನಂತರ 2008ರಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ನಂತರ 2014ರಲ್ಲಿ ಉಚ್ಚನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು.

ಆ ಸಮಯದಲ್ಲಿ ಖರ್ಗೆ ಕರ್ನಾಟಕದ ಗೃಹಸಚಿವರಾಗಿದ್ದರು. ನಾವು ಅವರನ್ನು ಆ ಬಗ್ಗೆ ಕೇಳಿದಾಗ ಅವರು ಅದು ತನ್ನ ವೃತ್ತಿಜೀವನದ ದುರ್ಬಲ ಸಂದರ್ಭಗಳಲ್ಲಿ ಒಂದಾಗಿದೆ ಎಂದು ಹೇಳಿದರು. "ಜನರ ನಡುವೆ ನಾನು ಪ್ರಬಲ ಗೃಹಸಚಿವನಲ್ಲ ಎಂಬ ಭಾವನೆಯನ್ನು ಸೃಷ್ಟಿಸಲಾಯಿತು. ಎಲ್ಲಾ 32 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಪರಾಧಿಗಳನ್ನು ಬಂಧಿಸಲಾಗಿದೆ. ಆದರೆ ತನಿಖೆಯು ಇನ್ನೂ ಪರಿಣಾಮಕಾರಿ ಮಾಡಬಹುದಿತ್ತು ಎಂಬುದು ನಿಜ" ಎಂದು ಹೇಳಿದ ಅವರು, ಆಗಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ, “ಸಿಐಡಿಯಂತಹ ಕೆಲವು ಪ್ರಮುಖ ಖಾತೆಗಳು ನನ್ನ ಬಳಿ ಇರಲಿಲ್ಲ, ಅವು ಸಿಎಂ ಬಳಿ ಇದ್ದವು" ಎಂದು ಹೇಳಿದರು. ಪ್ರಕರಣವು ವಿಚಾರಣೆಗೆ ಬಂದಾಗ, ತಮ್ಮ ಪಕ್ಷವು ಅಧಿಕಾರದಲ್ಲಿರಲಿಲ್ಲ ಎಂದು ಅವರು ಗಮನ ಸೆಳೆದರು.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಮತ್ತು ವಕೀಲ ಸಿ. ಎಸ್. ದ್ವಾರಕನಾಥ್ ಅವರು ಹತ್ಯಾಕಾಂಡ ನಡೆದಾಗ ಅಂದಿನ ಫೈರ್ ಬ್ರಾಂಡ್ ಪತ್ರಿಕೆಯಾದ ಲಂಕೇಶ್ ಪತ್ರಿಕೆಯ ವರದಿಗಾರರಾಗಿದ್ದರು. ಅವರು ಬೆಂಗಳೂರಿನಿಂದ ಕಂಬಾಲಪಲ್ಲಿ ತಲುಪಿದ ಮೊದಲ ಪತ್ರಕರ್ತರಲ್ಲಿ ಒಬ್ಬರೆಂದು ಹೇಳಲಾಗುತ್ತದೆ.

"ಘಟನೆಯ ಸುಮಾರು ಐದು ಗಂಟೆಗಳಲ್ಲಿ ನಾನು ಆ ಸ್ಥಳ ತಲುಪಿದೆ" ಎಂದು ಹೇಳಿದ ಅವರು, ಈ ಪ್ರಕರಣವು ರಾಜ್ಯದ ರಾಜಕೀಯವನ್ನು ಕತ್ತಿಯ ಅಂಚಿಗೆ ತಂದು ನಿಲ್ಲಿಸಿತು ಎಂದು ಹೇಳಿದರು. "ದಲಿತರೊಬ್ಬರು ಗೃಹಸಚಿವರಾಗಿದ್ದಾಗ ನಡೆದ ದಲಿತರ ಹತ್ಯೆಯ ಬಗ್ಗೆ ಸಾಮಾನ್ಯವಾಗಿ ಜನರು ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿಯು ಒಕ್ಕಲಿಗನಾಗಿದ್ದು ಮತ್ತು ಹಂತಕರೂ ಅದೇ ಜಾತಿಯವರಾಗಿದ್ದರು ಎಂಬ ಅಂಶವನ್ನು ಅವರು ಬಿಟ್ಟುಬಿಡುತ್ತಾರೆ".

ದ್ವಾರಕಾನಾಥ್ ಅವರ ಪ್ರಕಾರ, ಈ ಪ್ರಕರಣವು ಯುವ ವರದಿಗಾರನಾಗಿ ಅವರಿಗೆ ವಿವಿಧ ಜಾತಿ ಸಮೀಕರಣಗಳತ್ತ ನೋಡಲು ಒಂದು ಬೆಳಕಿನ ಕಿಂಡಿಯಾಯಿತು. ಕೋಲಾರದಲ್ಲಿ ಒಕ್ಕಲಿಗರಿಗೆ ದಲಿತರ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು. ಕಾರಣ, ಜನಸಂಖ್ಯೆಯ ಶೇಕಡಾ 30ರಷ್ಟಿದ್ದರೂ, ಒಂದು ದಲಿತ ಜಾತಿಯನ್ನು ಮತ್ತೊಂದು ದಲಿತ ಜಾತಿಯ ವಿರುದ್ಧ ಅವರು ಎತ್ತಿಕಟ್ಟಿದರು ಎಂದು ಅವರು ಹೇಳಿದರು.

ಆಗಾಗ್ಗೆ ಘರ್ಷಣೆಗಳಿಗೆ ಇಳಿಯುತ್ತಿದ್ದ ಹೊಲೆಯರನ್ನುನಿಗ್ರಹಿಸಲು, ಅವರು ಪಂಚಾಯಿತಿಯಿಂದ ಹಿಡಿದು ಸಂಸತ್ತಿನವರೆಗೆ ವಿವಿಧ ಮೀಸಲು ಸ್ಥಾನಗಳಲ್ಲಿ ಮಾದಿಗ ನಾಯಕರನ್ನು ಕಣಕ್ಕಿಳಿಸಲು ಮುಂದಾಗಿದ್ದರು. "ಒಬ್ಬ ಚುನಾಯಿತ ಪ್ರತಿನಿಧಿಯು ತೆರೆದ ಜಾಗದಲ್ಲಿ ಬಿದ್ದಿದ್ದ ಮೃತದೇಹಗಳ ಪಕ್ಕದಲ್ಲಿ ತಣ್ಣಗೆ ಎಳೆನೀರನ್ನು ಕುಡಿಯುತ್ತಿರುವುದನ್ನು ನಾನು ನೋಡಿದೆ". ಅಂತಹ ಪರಿಸ್ಥಿತಿಯಲ್ಲಿ ಖರ್ಗೆ ಅವರ ನಿಲುವನ್ನು ತಟಸ್ಥಗೊಳಿಸಲಾಯಿತು ಎಂದು ದ್ವಾರಕನಾಥ್ ಹೇಳಿದರು.

ಸಿಪಿಐ (ಮಾರ್ಕ್ಸ್ ವಾದಿ) ಸಂತ್ರಸ್ತರಿಗೆ ಕಾನೂನು ನೆರವನ್ನು ಒದಗಿಸಿತು ಮತ್ತು ನ್ಯಾಯಕ್ಕಾಗಿ ಚಳವಳಿಯನ್ನು ಆರಂಭಿಸಿತು ಎಂದು ದ್ವಾರಕಾನಾತ್ ಹೇಳಿದರು. ಆದರೆ ಅಲ್ಲಿಯೂ ವಿರೋಧಾಭಾಸಗಳಿದ್ದವು. ಸಿಪಿಐ (ಎಂ) ನ ನಾಯಕತ್ವ ಮತ್ತು ಮುಖ್ಯ ಭೂಮಿಕೆಯಲ್ಲಿ ಕೃಷಿ, ಭೂಹಿಡುವಳಿ ಮತ್ತು ರಾಜಕೀಯವಾಗಿ ಪ್ರಭಾವಿಗಳಾದ ರೆಡ್ಡಿ-ಒಕ್ಕಲಿಗರಿದ್ದರು. ಪ್ರಾಸಂಗಿಕವಾಗಿ, ಸಾಕ್ಷಿಗಳು ಪ್ರತಿಕೂಲವಾಗಿ ತಿರುಗಿದ ನಂತರ ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರು.

"ಕೊಲೆಗಾರರು, ನ್ಯಾಯಕ್ಕಾಗಿ ಹೋರಾಡುತ್ತಿದ್ದ ಕಾರ್ಯಕರ್ತರು, ಸಿಎಂ ಮತ್ತು ನ್ಯಾಯಾಧೀಶರೆಲ್ಲರೂ ಒಂದೇ ಜಾತಿಗೆ ಸೇರಿದವರಾಗಿದ್ದರು. ಖರ್ಗೆ ಒಬ್ಬರೇ ಏನು ಮಾಡಬಹುದಿತ್ತು? ಕಂಬಾಲಪಲ್ಲಿ ಕಥೆಯಲ್ಲಿ ನಾಯಕರಿಲ್ಲ, ಸತ್ತ ಏಳು ದಲಿತರು ಮಾತ್ರ ಇದ್ದಾರೆ" ಎಂದು ದ್ವಾರಕಾನಾಥ್ ಹೇಳಿದರು.

ಅಂಬೇಡ್ಕರ್ ವಾದದ ಅರ್ಥವೇನು?

ಮೇಲ್ಜಾತಿಯ ಪ್ರಾಬಲ್ಯವಿರುವ ಕಾಂಗ್ರೆಸ್ ನಂತಹ ಪಕ್ಷದಲ್ಲಿ ಅಂಬೇಡ್ಕರ್ ವಾದಿಯೊಬ್ಬರು ಕೆಲಸ ಮಾಡುವುದು ವಿರೋಧಾಭಾಸವೇ? ಈ ಪ್ರಶ್ನೆಯು ಕಾಂಗ್ರೆಸ್ ಪಕ್ಷದ ತಿರುವುಮರುವುಗಳ ಬಗ್ಗೆ ಆಳವಾಗಿ ಪರಿಶೀಲಿಸಲು ಪ್ರೇರೇಪಿಸುತ್ತದೆ ಮತ್ತು ಅದರೊಂದಿಗೆ, ಸ್ವತಃ ಅಂಬೇಡ್ಕರ್ ಅವರ ಕ್ರಿಯಾತ್ಮಕ ಮಾತುಕತೆಗಳ ಬಗ್ಗೆ ಸಹ

ಬ್ರಿಟಿಷರ ಅಡಿಯಲ್ಲಿ ಭಾರತದ ಕಲ್ಪನೆಯು ಮೊದಲ ಬಾರಿಗೆ ರೂಪುಗೊಳ್ಳಲು ಪ್ರಾರಂಭಿಸಿದಾಗ, ಪ್ರತ್ಯೇಕ ಪಾಕಿಸ್ತಾನದ ಕಲ್ಪನೆಯನ್ನು ಪ್ರಸ್ತಾಪಿಸುವ ಮೊದಲೇ ಅಂಬೇಡ್ಕರ್ 'ಪ್ರತ್ಯೇಕತಾವಾದಿ' ನಾಯಕರಾಗಿ ಹೊರಹೊಮ್ಮಿದರು.

ಮುಸ್ಲಿಂಲೀಗಿನ ಬೇಡಿಕೆಯಂತೆ, ಅಂಬೇಡ್ಕರ್ ಅವರ ಪ್ರತ್ಯೇಕತಾವಾದವು ಜನಾಂಗೀಯ ಅಥವಾ ಧಾರ್ಮಿಕ ರಾಷ್ಟ್ರೀಯತೆಯನ್ನು ಆಧರಿಸಿರಲಿಲ್ಲ. ಅಂಬೇಡ್ಕರ್ ಚಳುವಳಿಯು 1947ರಿಂದ ಭಾರತದ ವಿವಿಧ ಪ್ರತ್ಯೇಕತಾವಾದಿ ಚಳುವಳಿಗಳಿಗಿಂತ ಭಿನ್ನವಾಗಿದೆ. ಅವರು ತನ್ನ ಜನರಿಗೆ ಭಾರತದಲ್ಲಿ ಸ್ವಾತಂತ್ರ್ಯವನ್ನು ಬಯಸಿದ್ದರು, ಭಾರತದಿಂದ ಅಲ್ಲ. ಅಂಬೇಡ್ಕರ್ ವಾದಿ ಪ್ರತ್ಯೇಕತಾ ವಾದವು ಭೂಮಿಯ ಭರವಸೆಯನ್ನು ಆಶಿಸುತ್ತಿಲ್ಲ ಬದಲಾಗಿ ಮಾದರಿ ತಾತ್ವಿಕತೆಯ ಭರವಸೆಯನ್ನು ಕೇಳುತ್ತಿದೆ.

1920ರ ದಶಕದ ಆರಂಭದಲ್ಲಿ, ಬ್ರಿಟಿಷರು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ರಾಜಕೀಯ ಅಧಿಕಾರವನ್ನು ಹೇಗೆ ವಿಭಜಿಸಬೇಕು ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಯುವ ಅಂಬೇಡ್ಕರ್ ಅವರು 'ಅಸ್ಪೃಶ್ಯರ' ಪ್ರಶ್ನೆಯನ್ನು ಈ ಚರ್ಚೆಯ ನಡುವೆ ಪರಿಚಯಿಸಿದರು.

ಆ ಅರ್ಥದಲ್ಲಿ, ಅವರು ಭಾರತೀಯ ರಾಜಕೀಯದಲ್ಲಿ 'ತೃತೀಯ ರಂಗ'ದ ಮೂಲ ಪರಿಕಲ್ಪನೆಯ ರೂವಾರಿ ಕೂಡ ಆಗಿದ್ದಾರೆ. ಅವರು ಮೂಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದ ಮೂಲ ಹಿಂದೂ ರಾಜಕೀಯ ಪಕ್ಷಗಳ ನಡುವೆ ಸಮಾನ ಅಂತರವನ್ನು ಕಾಪಾಡಿಕೊಂಡರು.

ಸೌತ್ ಬರೋ ಆಯೋಗದ ಮುಂದೆ “ಅಸ್ಪೃಶ್ಯರು” ಎಂದು ಕರೆಯಲ್ಪಡುವವರ ಪ್ರಕರಣವನ್ನು ಮಂಡಿಸಲು ಬ್ರಿಟಿಷರು ಅವರನ್ನು ಆಹ್ವಾನಿಸಿದಾಗ ಅವರಿಗೆ ಕೇವಲ 30 ವರ್ಷ ವಯಸ್ಸು. ಬ್ರಿಟಿಷ್ ಭಾರತದಲ್ಲಿ ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸಲು 1918ರಲ್ಲಿ ಇದನ್ನು ರಚಿಸಲಾಯಿತು.

ದಲಿತರು ಭಾರತೀಯ ಸಮಾಜದಲ್ಲಿ ಪ್ರತ್ಯೇಕ ಘಟಕ ಎಂದು ಅಂಬೇಡ್ಕರ್ ಬ್ರಿಟಿಷರಿಗೆ ಹೇಳಿದರು ಮತ್ತು ಅವರಿಗೆ ಪ್ರತ್ಯೇಕ ಮತಾಧಿಕಾರವನ್ನು ಕೋರಿದರು. ಇದರರ್ಥ, ಒಂದು ಸಣ್ಣ ಸಂಖ್ಯೆಯ ಕ್ಷೇತ್ರಗಳಲ್ಲಿ ಅಥವಾ ಚುನಾವಣಾ ಕಾಲೇಜುಗಳಲ್ಲಿ (ಆಯ್ದ ಮತದಾರರ ಗುಂಪು), ದಲಿತರು ಮಾತ್ರ ದಲಿತರಿಗೆ ಮತ ಚಲಾಯಿಸಬಹುದು.

ಮುಂದಿನ ದಶಕದಲ್ಲಿ, ಪ್ರತ್ಯೇಕ ಮತಾಧಿಕಾರದ ಬೇಡಿಕೆಯನ್ನು ಬೆಂಬಲಿಸಲು ಅವರು ಬ್ರಿಟಿಷರ ಮುಂದೆ ಮೂಲ ಸಂಶೋಧನೆಯನ್ನು ಮಂಡಿಸಿದರು. ಅಂಬೇಡ್ಕರ್ ಅವರ ಕಾನೂನು ಮತ್ತು ಶೈಕ್ಷಣಿಕ ವಾದಗಳಿಂದ ಮನವೊಲಿಸಿದಾಗ ಬ್ರಿಟಿಷ್ ಪ್ರಧಾನಿ ರಾಮ್ಸೇಮೆಕ್ಡೊನಾಲ್ಡ್ ಅಂತಿಮವಾಗಿ 1932ರಲ್ಲಿ ಅವರ ಬೇಡಿಕೆಯನ್ನು ಅಂಗೀಕರಿಸಿದರು.

ಪ್ರತ್ಯೇಕ ಮತದಾರರು ಹಿಂದೂ ಸಮಾಜವನ್ನು ವಿಭಜಿಸುತ್ತಾರೆ ಎಂದು ಗಾಂಧಿ ಮೆಕ್ಡೊನಾಲ್ಡ್ ಅವರಿಗೆ ಪತ್ರ ಬರೆದರು ಮತ್ತು ಈ ವಿಷಯವನ್ನು ಕಾನೂನುಬದ್ಧವಾಗಿ ಚರ್ಚಿಸಲು ನಿರಾಕರಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಗಾಂಧಿಯವರ ಅನಾರೋಗ್ಯದ ಬಗ್ಗೆ ಆತಂಕ ಹೆಚ್ಚಾದಾಗ ಅಂಬೇಡ್ಕರ್ ಅವರು ತಮ್ಮ ಹುದ್ದೆಯಿಂದ ಹಿಂದೆ ಸರಿಯಬೇಕಾಯಿತು.

ಅಂಬೇಡ್ಕರ್ ಅವರು ಕಾಂಗ್ರೆಸ್ ನೊಂದಿಗೆ ಮರುಮಾತುಕತೆ ನಡೆಸಿದರು ಮತ್ತು ದಲಿತರಿಗೆ ಪ್ರತ್ಯೇಕ ಮತಾಧಿಕಾರದ ಬದಲಿಗೆ ಮೀಸಲು ಕ್ಷೇತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಯಾವ ಎಸ್ಸಿ ಅಥವಾ ಎಸ್ಟಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬುದನ್ನು ಪ್ರತಿಯೊಬ್ಬರೂ ನಿರ್ಧರಿಸುವಂತಹ ಕ್ಷೇತ್ರಗಳನ್ನು ಮೀಸಲಿಡುವ ವ್ಯವಸ್ಥೆಯನ್ನು ಈಗಲೂ ಅನುಸರಿಸಲಾಗುತ್ತಿದೆ.

1932ರಲ್ಲಿ ಗಾಂಧಿಯವರು ಮೇಲುಗೈಸಾಧಿಸಿರಬಹುದು, ಆದರೆ ಆಗಿನ ಹಲವು ವರ್ಷಗಳಲ್ಲಿ ಅಂಬೇಡ್ಕರ್ ಅವರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ದಲಿತರು, ಹಿಂದೂಗಳು ಮತ್ತು ಮುಸ್ಲಿಮರಿಗಿಂತ ಪ್ರತ್ಯೇಕವಾಗಿರುವವರು ಎಂಬುದನ್ನು ತೋರಿಸುವ ಮೂಲಕ, ಅಂಬೇಡ್ಕರ್ ಅವರು ಏಷ್ಯಾ ಉಪಖಂಡದಲ್ಲಿ ಹೊಸ ರಾಜಕೀಯ ಪಾಲುದಾರರನ್ನು ಪರಿಚಯಿಸಿದರು.

ಮಾರ್ಕ್ಸ್ ವಾದಿ ಅರ್ಥವನ್ನು ಹೊಂದಿಸಲು, ಅಂಬೇಡ್ಕರ್ ಅವರು ಭಾರತೀಯ ಸಮಾಜದಲ್ಲಿನ 'ವಿರೋಧಾಭಾಸ' ವನ್ನು ಬಹಿರಂಗಪಡಿಸಿದರು, ಇದು ಅತ್ಯಂತ ತುಳಿತಕ್ಕೊಳಗಾದವರಿಗೆ ರಾಜಕೀಯ ಅವಕಾಶವನ್ನು ತೆರೆಯಿತು. ಆದರೆ ಕಾರ್ಲ್ ಮಾರ್ಕ್ಸ್ ಅವರಂತೆ ಅಂಬೇಡ್ಕರ್ ಸಿದ್ಧಾಂತದ ಮಟ್ಟಕ್ಕೇ ನಿಲ್ಲಲಿಲ್ಲ. ಅವರು ಚಿಕ್ಕ ವಯಸ್ಸಿನಿಂದಲೇ ಕಾನೂನು ಮತ್ತು ರಾಜಕೀಯ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರು ರಚಿಸಿದ ಸಿದ್ಧಾಂತಗಳು ಮತ್ತು ನೀತಿಗಳು ಭಾರತೀಯ ರಾಜಕೀಯವನ್ನು ರೂಪಿಸುತ್ತಲೇ ಇದ್ದರೂ, ಅಂಬೇಡ್ಕರ್ ಮತ್ತು ಅವರು ಪ್ರಾರಂಭಿಸಿದ ರಾಜಕೀಯ ಪಕ್ಷಗಳು, ಕಾಂಗ್ರೆಸ್ಸಿನ ಪ್ರಾಬಲ್ಯದಿಂದಾಗಿ ಚುನಾವಣಾ ರಾಜಕೀಯದಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ.

1945ರಲ್ಲಿ, ಖರ್ಗೆ ಕಾಂಗ್ರೆಸ್ ಸೇರುವ ಕೇವಲ ಎರಡು ದಶಕಗಳ ಮೊದಲು, ಅಂಬೇಡ್ಕರ್ ಅವರು 'ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗೆ ಏನು ಮಾಡಿದ್ದಾರೆ' ಎಂಬ ಪುಸ್ತಕವನ್ನು ಪ್ರಕಟಿಸಿದರು.

400 ಪುಟಗಳ ಈ ದಾಖಲೆಯು, 1917ರಲ್ಲಿ ಜಾತಿ ತಾರತಮ್ಯದ ವಿರುದ್ಧ ಕಾಂಗ್ರೆಸ್ ಕೈಗೊಂಡ ಮೊದಲ ನಿರ್ಣಯದಿಂದ ಹಿಡಿದು 1937ರಲ್ಲಿ ನಡೆದ ಪ್ರಾಂತೀಯ ಸರ್ಕಾರಗಳ ಚುನಾವಣೆಗಳ ವರೆಗೆ ದಲಿತರ ಬಗೆಗಿನ ಅದರ ನೀತಿಗಳ ಬಗೆಗಿನ ಪತ್ರಿಕೋದ್ಯಮದ ದಿಟ್ಟ ತನಿಖೆಯಾಗಿದೆ.

ಆರ್ಥಿಕ ಅವ್ಯವಹಾರ, ರಾಜಕೀಯ ಅವಕಾಶವಾದ ಮತ್ತು ಎಂ. ಕೆ. ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ನಾಚಿಕೆಯಿಲ್ಲದ ಜಾತಿವಾದದ ಬಗ್ಗೆ ಪುಸ್ತಕದಲ್ಲಿ ಹಲವಾರು ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ.

ಬ್ರಿಟಿಷರು ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಗಾಂಧಿಯವರ ಕೈಚಳಕವನ್ನು ಮತ್ತುಬ್ರಿಟಿಷರೊಂದಿಗೆ ಹಲವಾರು ವರ್ಷಗಳ ಕಾನೂನು ಮಾತುಕತೆಗಳ ಮೂಲಕ ಅಂಬೇಡ್ಕರ್ ಅವರು ತಮ್ಮ ಜನರಿಗಾಗಿ ಗೆದ್ದ ಅಮೂಲ್ಯ ಪ್ರತ್ಯೇಕ ಮತಾಧಿಕಾರವನ್ನು ನಿರಾಕರಿಸುವ ಅವರ ದಬ್ಬಾಳಿಕೆಯ ತಂತ್ರಗಳನ್ನು ಇದು ಬಹಿರಂಗಪಡಿಸುತ್ತದೆ.

ಈ ಪುಸ್ತಕವು ಅಂಬೇಡ್ಕರ್ ಅವರ ಕಟುವಾದ ವ್ಯಾಖ್ಯಾನದಿಂದ ತುಂಬಿದೆ. 1923ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಅಸ್ಪೃಶ್ಯತೆಯ ಪ್ರಶ್ನೆಯನ್ನು ಐದು ವರ್ಷಗಳ ಚರ್ಚೆಗಳ ನಂತರ ಹಿಂದೂ ಮಹಾಸಭೆಗೆ ಹೊರಗುತ್ತಿಗೆ ನೀಡಲು ನಿರ್ಧರಿಸಿದಾಗ ಅವರು ಹೇಳಿದರು,

"ಹೊತ್ತಿ ಉರಿಯುತ್ತಿರುವ ಆರಂಭಕ್ಕೆ ಎಂಥ ನಾಚಿಕೆಗೇಡಿನ ಅಂತ್ಯ?! ಅಸ್ಪೃಶ್ಯರ ಉನ್ನತಿಯ ಕಾರ್ಯವನ್ನು ಕೈಗೆತ್ತಿಕೊಳ್ಳಲು ಅದಕ್ಕಿಂತಲೂ ಅಯೋಗ್ಯವಾದ ಒಂದು ಸಂಸ್ಥೆ ಇರಲಾರದು". ಅವರು ಮಹಾಸಭಾವನ್ನು "ಹಿಂದೂ ಉಗ್ರಗಾಮಿ ಸಂಘಟನೆ" ಎಂದು ಬಣ್ಣಿಸಿದರು, ಅದರ ಏಕೈಕ ಉದ್ದೇಶ ಮುಸ್ಲಿಮರ ಪ್ರಭಾವದ ವಿರುದ್ಧ ಹೋರಾಡುವುದಾಗಿದೆ ಎಂದು ಹೇಳಿದರು.

ಆದಾಗ್ಯೂ, ಪರಿಶಿಷ್ಟ ಜಾತಿಗಳಿಗೆ ಪ್ರತ್ಯೇಕ ಮತಾಧಿಕಾರವನ್ನು ನಿರಾಕರಿಸುವ ಮೂಲಕ ಕಾಂಗ್ರೆಸ್ ಹೇಗೆ ಪ್ರಯೋಜನ ಪಡೆಯಿತು ಎಂಬುದರ ಮೇಲೆ ಪುಸ್ತಕದ ಮುಖ್ಯ ಗಮನ ಕೇಂದ್ರೀಕರಿಸಿದೆ.

ಬ್ರಿಟಿಷ್ ಭಾರತದಾದ್ಯಂತ ಸಂಗ್ರಹಿಸಿದ ಚುನಾವಣಾ ದತ್ತಾಂಶದೊಂದಿಗೆ, ಕಾಂಗ್ರೆಸ್ ಹೇಗೆ ಬಹುಸಂಖ್ಯಾತ ಹಿಂದೂಗಳ ಮತಗಳನ್ನು ಬಳಸಿಕೊಂಡು ಅವರಿಗೆ ಮೀಸಲಾಗಿರುವ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿ ಎಸ್ಸಿ ಅಭ್ಯರ್ಥಿಗಳನ್ನು ಸೋಲಿಸಿತು ಎಂಬುದನ್ನು ಅವರು ತೋರಿಸಿಕೊಟ್ಟರು. ಇದು ಪಕ್ಷದ ಮೇಲ್ಜಾತಿಯ ನಾಯಕತ್ವಕ್ಕೆ ಅತ್ಯಂತ ಅಧೀನರಾಗಿದ್ದ ಎಸ್ಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅವರಿಗೆ ಅವಕಾಶ ಮಾಡಿಕೊಟ್ಟಿತು.

ಅಂಬೇಡ್ಕರ್ ಬರೆದಿದ್ದಾರೆ:

"ಬ್ರಾಹ್ಮಣ ಮತ್ತು ಮಿತ್ರ ಸಮುದಾಯಗಳ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಂತ ಹೆಚ್ಚು ವಿದ್ಯಾವಂತರಾಗಿದ್ದರು, ಬ್ರಾಹ್ಮಣರಲ್ಲದವರು ಮಧ್ಯಮ ವಿದ್ಯಾವಂತರಾಗಿದ್ದರು ಮತ್ತು ಅಸ್ಪೃಶ್ಯರು ಸಾಕ್ಷರತೆಗಿಂತ ಸ್ವಲ್ಪ ಮೇಲಿದ್ದರು. ಈ ಆಯ್ಕೆ ವಿಧಾನವು ಬಹಳ ಕುತೂಹಲಕಾರಿಯಾಗಿದೆ. ಇದರ ಹಿಂದೆ ಒಂದು ಆಳವಾದ ಹುನ್ನಾರ ವಿರುವಂತೆ ತೋರುತ್ತದೆ.

ಇದನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವ ಯಾರಿಗಾದರೂ ಬ್ರಾಹ್ಮಣರು ಮತ್ತು ಮಿತ್ರಜಾತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಸಚಿವಾಲಯದ ಮುಖ್ಯ ಭಾಗವಾಗಲು ಅವಕಾಶ ಸಿಗದಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂಬುದು ಅರಿವಿಗೆ ಬರುತ್ತದೆ. ಬೌದ್ಧಿಕವಾಗಿ ಸಮರ್ಥರಲ್ಲದ ಈ ಬ್ರಾಹ್ಮಣೇತರ ಮಂತ್ರಿಗಳು ಆ ಮೇಲ್ವರ್ಗದ ಮಂತ್ರಿಸಮುದಾಯಕ್ಕೆ ಸದಾ ವಿಧೇಯವಾಗಿರುವುದನ್ನು ಈ ಹುನ್ನಾರ ಖಾತ್ರಿಪಡಿಸುತ್ತೆ. ಇವರಿಗೆ ಕೇವಲ ಶಾಸಕಾಂಗಗಳ ಸದಸ್ಯರ ಸ್ಥಾನಮಾನಕ್ಕೆ ಏರಿದಿರುವುದನ್ನು ಹೊರತುಪಡಿಸಿ ಬೇರೆ ಗುರಿಗಳಿಲ್ಲದಂತೆ ನೋಡಿಕೊಳ್ಳಲಾಗುತ್ತದೆ.

ಅಧಿಕಾರ ಸ್ಥಾನಕ್ಕೇರಲು ಬಯಸುವ ಅಸ್ಪೃಶ್ಯರು ಅರ್ಹ ವ್ಯಕ್ತಿಯಾಗಿರಬೇಕು ಎಂದು ಹೇಳಿದಾಗ ಬಹುಶಃ ಗಾಂಧಿ ಅವರು ಈ ಹುನ್ನಾರವನ್ನು ಗಮನಿಸಿರಲಿಲ್ಲ. ಇಲ್ಲದಿದ್ದರೆ, ಕಾಂಗ್ರೆಸ್ಸಿನ ಅಸ್ಪೃಶ್ಯರಲ್ಲಿ ಅರ್ಹ ವ್ಯಕ್ತಿಗಳು ಇದ್ದಿರಲಿಲ್ಲ ಎನ್ನುವ ಬದಲು ಕಾಂಗ್ರೆಸ್ ಸಂಸದೀಯ ಮಂಡಳಿಯು ಅಸ್ಪೃಶ್ಯರಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲದಿರುವುದು ಇದಕ್ಕೆ ಕಾರಣ ಎಂದು ಅವರು ನೋಡುತ್ತಿದ್ದರು".

ಅಂಬೇಡ್ಕರ್ ಅವರ ಕಾಲದಿಂದಲೂ ಬ್ರಾಹ್ಮಣೇತರ ಸಮುದಾಯಗಳು ಚುನಾವಣಾ ರಾಜಕೀಯದಲ್ಲಿ ಬ್ರಾಹ್ಮಣರನ್ನು ನಾಟಕೀಯವಾಗಿ ಬದಲಿಸಿದ್ದರೂ, ಭಾರತದ ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸುವ ದಲಿತರ ಬಗ್ಗೆ ಅವರು ನೀಡಿದ ವಿವರಣೆಯು ಇಂದಿಗೂ ಬಹುಮಟ್ಟಿಗೆ ನಿಜವಾಗಿದೆ.

ಚುನಾವಣಾ ರಾಜಕೀಯದಲ್ಲಿ ದಲಿತ ನಾಯಕರ ಬಗ್ಗೆ ಅಂಬೇಡ್ಕರ್ ಅವರು ನೀಡಿದ ವಿವರಣೆಗೆ ಖರ್ಗೆ ಅವರ ಪ್ರಕರಣವು ಒಂದು ಅಪರೂಪದ ಹಾಗೆ ಕಾಣುತ್ತದೆ. ಅವರು ತಮ್ಮ ಕಾಲದ ಅತ್ಯಂತ ವಿದ್ಯಾವಂತ ದಲಿತರಲ್ಲಿ ಒಬ್ಬರಾಗಿದ್ದರು ಮತ್ತು ದೊಡ್ಡ ಪಕ್ಷದ ಬೆಂಬಲವಿಲ್ಲದೆ ತಮ್ಮ ಮೊದಲ ಶಾಸಕ ಚುನಾವಣೆಯಲ್ಲಿ ಗೆದ್ದರು. ಅವರು ಗೆದ್ದ ದಿನದಿಂದ ಪ್ರಮುಖ ಖಾತೆಗಳನ್ನು ಹೊಂದಿದ್ದರು ಮತ್ತು ಶೀಘ್ರದಲ್ಲೇ ಸವಲತ್ತು ಪಡೆದ ಜಾತಿಗಳ ಅನೇಕ ಹಿರಿಯ ನಾಯಕರನ್ನು ಹಿಂದಿಕ್ಕಿ ಸಚಿವರಾದರು.

ಮೀಸಲು ಕ್ಷೇತ್ರದಲ್ಲಿ ಯಾವ ಎಸ್ಸಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದನ್ನು ಮೇಲ್ಜಾತಿಯ ಮತಗಳು ನಿರ್ಧರಿಸುತ್ತವೆ ಎಂಬ ಅಂಶವನ್ನು ಇದು ಬದಲಾಯಿಸುವುದಿಲ್ಲ. ಖರ್ಗೆ ಅವರು ತಮ್ಮ ಎಲ್ಲಾ ಚುನಾವಣೆಗಳಲ್ಲಿ ರೆಡ್ಡಿಗಳು ಮತ್ತು ಲಿಂಗಾಯತರು ಪ್ರಾಬಲ್ಯ ಹೊಂದಿರುವ ಮೀಸಲು ಕ್ಷೇತ್ರಗಳಿಂದಗೆದ್ದಿದ್ದಾರೆ. ದಲಿತರು ಮತ್ತು ಇತರ ಕೀಳು ಜಾತಿಗಳ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳದೆ ಅವರು ಮೇಲ್ಜಾತಿಗಳನ್ನು ಹೇಗೆ ಗೆದ್ದರು?

"ಕ್ರಾಂತಿಕಾರಿ ಜಾತಿ ವಿರೋಧಿ ರಾಜಕೀಯವು ಯಶಸ್ವಿಯಾಗಲು ಸಾಧ್ಯವಿಲ್ಲ. ವರ್ಗ ಏಕತೆಯಲ್ಲಿ ನಾನು ಪರಿಹಾರವನ್ನು ಕಂಡುಕೊಂಡಿದ್ದೆ" ಎಂದು ಖರ್ಗೆ ಹೇಳಿದರು", ಉತ್ತರ ಕರ್ನಾಟಕದ ಶುಷ್ಕ ಮತ್ತು ಕಠಿಣ ಹವಾಮಾನದಲ್ಲಿ, ಆ ದಿನಗಳಲ್ಲಿ ಶ್ರೀಮಂತನಾಗಲು ಇರುವ ಏಕೈಕ ಮಾರ್ಗವೆಂದರೆ ಅಪಾರ ಪ್ರಮಾಣದ ಭೂಮಿಯನ್ನು ಹೊಂದಿರುವುದು".

"ಈ ಬಹುತೇಕ ಭೂಮಿಯು ಹಳೆಯ ಭೂಮಾಲೀಕರು ಮತ್ತು ಸಾಮಂತ ಕುಟುಂಬಗಳ ಒಂದು ಸಣ್ಣ ಗುಂಪಿನ ನಿಯಂತ್ರಣದಲ್ಲಿತ್ತು. ಕೇವಲ ದಲಿತರು ಮಾತ್ರವಲ್ಲ, ಎಲ್ಲಾ ಜಾತಿಗಳ ಬಹುಪಾಲು ಜನರು ದಾರುಣವಾಗಿ ಬಡವರಾಗಿದ್ದರು. ಹಿಡುವಳಿದಾರ ರೈತರು ಮತ್ತು ಜೀತದಾಳು ಕಾರ್ಮಿಕರಲ್ಲಿ ಅನೇಕ ದಲಿತರಲ್ಲದವರು ಇದ್ದರು".

ಅಂದಿನ ತಮ್ಮ ರಾಜಕೀಯ ಭಾಷಾಶೈಲಿಯು ಇಂದಿರಾ ಗಾಂಧಿಯವರ 10 ಅಂಶಗಳ ಕಾರ್ಯಕ್ರಮದಿಂದ ರೂಪುಗೊಂಡಿತು ಮತ್ತು ಅವರ ಭಾಷಣಗಳು ಪ್ರಾಥಮಿಕವಾಗಿ ಉತ್ತರ ಕರ್ನಾಟಕವನ್ನು ಆಳಿದ ಸಮಾಜದ ಮೇಲ್ಮಟ್ಟದ ಮೇಲೆ ದಾಳಿ ಮಾಡಿದ್ದವು ಎಂದು ಅವರು ಹೇಳಿದರು. "ಇದು ಜಾತಿಭೇದವಿಲ್ಲದೆ ಬಹುಸಂಖ್ಯಾತ ಮತದಾರರನ್ನು ಹುರಿದುಂಬಿಸಿತು. ಹಿಂದಿನ ರಾಜರು ಮತ್ತು ರಾಜಕುಮಾರರ ರಾಜಧನಗಳನ್ನು ರದ್ದುಗೊಳಿಸುವ ಬಗ್ಗೆ ನಾನು ಮಾತನಾಡಿದಾಗ, ಜನರು ತಕ್ಷಣವೇ ಪ್ರತಿಕ್ರಿಯಿಸಿದ್ದರು" ಎಂದು ಅವರು ಹೇಳಿದರು.

ಬಹುತೇಕರು ಗಾಂಧಿ ಕುಟುಂಬಕ್ಕೆ ಖರ್ಗೆ ಅವರಲ್ಲಿದ್ದ ವಿಧೇಯತೆಯತ್ತ ಬೆರಳು ಮಾಡುತ್ತಾರೆ. ಆದರೆ ಈ ನಮ್ರತೆಯ ಕಾರಣದಿಂದಲೇ ಗಾಂಧಿಗಳು ಇವರನ್ನು ಅನೇಕ ಬಾರಿ ನಿರಾಶೆಗೊಳಿಸಿದರು ಎಂಬುದನ್ನು ಸಾಕ್ಷಿಯಾಗಿ ನೋಡುತ್ತಾರೆ.

ಖರ್ಗೆ ಅವರು ಸ್ವಲ್ಪ ಸಮಯದವರೆಗೆ ಇಂದಿರಾ ಗಾಂಧಿಯವರ ವಿರುದ್ಧ ನಿಂತರು ಮತ್ತು 1979ರಲ್ಲಿ ದೇವರಾಜ್ ಅರಸು ಅವರ ಸಂಯುಕ್ತ ಕಾಂಗ್ರೆಸ್ (ಯುನೈಟೆಡ್) ಗೆ ಸೇರಿದರು ಎಂಬ ಅಂಶವನ್ನು ಅವರು ನಿರ್ಲಕ್ಷಿಸುತ್ತಾರೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿ ಅವರ ಕುಖ್ಯಾತ ಪಾತ್ರಕ್ಕಾಗಿ ಅವರನ್ನು ಕಡೆಗಣಿಸಿದ ನಂತರವೂ ಮತ್ತೆ ಅವರನ್ನು ಪಕ್ಷದ ನಾಯಕತ್ವಕ್ಕೆ ಕರೆತರುವ ಇಂದಿರಾ ಗಾಂಧಿಯವರ ಕ್ರಮಗಳನ್ನು ಧಿಕ್ಕರಿಸಿ ಈವಿಭಜನೆ ಸಂಭವಿಸಿತು.

 

(Photo credit: thenewsminute.com)

ಖರ್ಗೆ ಮತ್ತೆ ಇಂದಿರಾ ಗಾಂಧಿಯವರ ಪಕ್ಷಕ್ಕೆ ಮರಳು ವಹೊತ್ತಿಗೆ, ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು ಮತ್ತು 1980ರ ಚುನಾವಣೆಯಲ್ಲಿ ಕಾಂಗ್ರೆಸ್ (ಯು) ನಾಶವಾಗಿತ್ತು.

ಇಂದಿರಾ ಗಾಂಧಿಯವರ ಆಳ್ವಿಕೆಯ ಕರಾಳ ವರ್ಷಗಳ ಬಗ್ಗೆ ಖರ್ಗೆ ಮಾತನಾಡುವುದು ವಿರಳ. ತುರ್ತು ಪರಿಸ್ಥಿತಿಯ ಕುರಿತು ಇತ್ತೀಚೆಗೆ ನಡೆದ ಚರ್ಚೆಯಲ್ಲಿ ಅವರು ಇಂದಿರಾ ಅವರ ಸಮಾಜವಾದಿ ನೀತಿಗಳತ್ತ ಹೆಚ್ಚು ಒತ್ತು ನೀಡಿದ್ದರು. ಸಂಜಯ್ ಗಾಂಧಿ ಪಕ್ಷಕ್ಕೆ ಮರಳಿದ್ದರಿಂದ ಕಾಂಗ್ರೆಸ್ (ಯು) ಗೆ ಸೇರುವ ಅವರ ನಿರ್ಧಾರವು ಆ ಅವಧಿಯ ಬಗ್ಗೆ ಅವರ ನಿಲುವು ಏನಾಗಿತ್ತು ಎಂಬುದರ ಬಗ್ಗೆ ಇದೊಂದೇ ಒಳನೋಟವನ್ನು ತೋರಿಸುತ್ತದೆ.

ತಮಗೆ ಸಿಕ್ಕಿದ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂಬ ಕಾರಣದಿಂದ ಕೆಲವೊಮ್ಮೆ ತೀವ್ರಗಾಮಿ ಅಂಬೇಡ್ಕರ್ ವಾದಿಗಳು ಇವರಿಗೆ ಹೆಚ್ಚು ಮನ್ನಣೆ ನೀಡುವುದಿಲ್ಲ. ಆದರೆ, ಅವರು ಅರ್ಹರಾಗಿರಲಿ ಅಥವಾ ಇಲ್ಲದಿರಲಿ, ತಮ್ಮಅರ್ಹತೆ-ಅನರ್ಹತೆಗಳನ್ನು ಲೆಕ್ಕಿಸದೆ ಪ್ರತಿ ಅವಕಾಶಗಳನ್ನು ನಿರ್ದಾಕ್ಷಿಣ್ಯವಾಗಿ ಬಾಚಿಕೊಳ್ಳಲು ಹವಣಿಸುವ ಗೋ-ಗೆಟ್ಟರ್ಸ್ (ಹೋಗು-ಬಾಚಿಕೋ) ನಿಲುವುಗಳಿಂದ ಸುತ್ತುವರಿಯಲ್ಪಟ್ಟ ವ್ಯಕ್ತಿಗಳ ನಡುವೆ, ಖರ್ಗೆ ಅಂಥದ್ದನ್ನು ಮಾಡದೆ ಉಳಿದ ನ್ಯಾಯಸಮ್ಮತ ವ್ಯಕ್ತಿಯಾಗಿ ಕಾಣುತ್ತಾರೆ.

ಖರ್ಗೆ ಅವರನ್ನು 'ಆಮೂಲಾಗ್ರ' ಅಂಬೇಡ್ಕರ್ ವಾದಿಯಲ್ಲವೆಂದು ಭಾವಿಸುವವರು ಅಂಬೇಡ್ಕರ್ ಅವರು ತಮ್ಮ ಗುರಿಗಳನ್ನು ಸಾಧಿಸಲು ಕೈಗೊಂಡ ಕೆಲವು 'ಪ್ರಾಯೋಗಿಕ' ಆಯ್ಕೆಗಳನ್ನು ಪರಿಗಣಿಸಬೇಕು.

ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಯಾದ ಅಮೆರಿಕಾದ ವಿದ್ವಾಂಸ ಸ್ಕಾಟ್ಸ್ ಸ್ಟ್ರೌಡ್ ಅವರ ದಿ ಎವಲ್ಯೂಷನ್ ಆಫ್ ಟ್ರಾಗ್ಮಾಟಿಸಮ್ ಇನ್ ಇಂಡಿಯಾ: ಆನ್ಇಂಟಲೆಕ್ಚುವಲ್ ಬಯೋಗ್ರಫಿ ಆಫ್ ಬಿ. ಆರ್. ಅಂಬೇಡ್ಕರ್ ಎಂಬ ಆಸಕ್ತಿದಾಯಕ ಪುಸ್ತಕವು ಈಅಂಶವನ್ನು ಪರಿಶೋಧಿಸುತ್ತದೆ-

ಪುಸ್ತಕದ ಕುರಿತಾದ ಚರ್ಚೆಯಲ್ಲಿ, ಸ್ಟ್ರೌಡ್ ವರದಿಗಾರರೊಬ್ಬರಿಗೆ, ಅಂಬೇಡ್ಕರ್ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತಮ್ಮ ಪ್ರಾಧ್ಯಾಪಕರ ಪ್ರಾಯೋಗಿಕ ವಿಚಾರಗಳನ್ನು ತೆಗೆದುಕೊಂಡು ಅದನ್ನು ಬೌದ್ಧಧರ್ಮದೊಂದಿಗೆ ಸಂಯೋಜಿಸಿ ಭಾರತಕ್ಕೆ ಹೊಸ ಪ್ರಜಾಸತ್ತಾತ್ಮಕ ರಾಜಕೀಯ ಕಾರ್ಯಕ್ರಮವನ್ನು ರೂಪಿಸಿದರು ಎಂದು ಹೇಳಿದರು. ಅವರು ಬೌದ್ಧಧರ್ಮವನ್ನು ತರ್ಕಬದ್ಧತೆಯಿಂದ ಮೂಢನಂಬಿಕೆಗೆ ಸವಾಲು ಹಾಕಲು ಮತ್ತು ಇತರ ಸಮುದಾಯಗಳೊಂದಿಗೆ ಭ್ರಾತೃತ್ವವನ್ನು ಬೆಳೆಸಲು ಬಳಸಿದರು.

ಅಂಬೇಡ್ಕರ್ ಅವರ ರಾಜಕೀಯ ಜೀವನದಲ್ಲಿ ಏನಾದರೂ ವಿಶಿಷ್ಟವಾದದ್ದು ಇದ್ದರೆ, ಅದು ಅವರ ಗುರಿಯನ್ನು ಸಾಧಿಸಲು ಅವರು ಬಳಸಿದ ವಿವಿಧ ವಿಧಾನಗಳು. ಅವರು 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಐಎಲ್ಪಿ) ಯೊಂದಿಗೆ, 1942ರಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದೊಂದಿಗೆ (ಎಸ್ಸಿಎಫ್) ಪ್ರಾರಂಭಿಸಿದರು ಮತ್ತು ತಮ್ಮ ಜೀವನದ ಕೊನೆಯ ತಿಂಗಳುಗಳಲ್ಲಿ ಆರ್ಪಿಐ ಅನ್ನುಸ್ಥಾಪಿಸಿದರು.

ಸ್ಟ್ರೌಡ್ ಹೇಳಿದರು, "ಅವರು ತಮ್ಮ ಮೇಲ್ಜಾತಿಯ ಮಿತ್ರರಿಗೆ ಮತ್ತು ಸ್ವಂತ ಜನರಿಗೆ ಬೇರೆ ಬೇರೆ ಕರೆಗಳನ್ನುನೀಡಿದರು, ಅವರಲ್ಲಿ ಅನೇಕರು ಅನಕ್ಷರಸ್ಥರಾಗಿದ್ದರು, ಅವರಿಗೆ ವಿಭಿನ್ನವಾದ ಮನವಿಯನ್ನು ಮಾಡಿದರು". ಅಂಬೇಡ್ಕರ್ ಅವರ ನಿಲುವುಗಳು ವಿರೋಧಾತ್ಮಕವೆಂದು ತೋರುತ್ತದೆ. ಆದರೆ ಅವು "ನಿರಂತರವಾಗಿ ಬದಲಾಗುತ್ತಿರುವ ಪ್ರಪಂಚದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ" ಆಯ್ಕೆಗಳನ್ನು ಮಾಡುವಲ್ಲಿ ಅವರ ವಾಸ್ತವಿಕ ಚಿಂತನೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

1947ರಲ್ಲಿ, ಅವರು ಕಾಂಗ್ರೆಸ್ ಮತ್ತು ಗಾಂಧಿಯವರ ಬಗ್ಗೆ ಹೆದರಿಕೆ ಹುಟ್ಟಿಸುವ ಪುಸ್ತಕವನ್ನು ಬರೆದ ಕೇವಲ ಎರಡು ವರ್ಷಗಳ ನಂತರ, ಮತ್ತು ಭಾರತವು ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ವಾರಗಳ ಮೊದಲು, ಜವಾಹರಲಾಲ್ ನೆಹರೂ ಅವರು ಅಂಬೇಡ್ಕರ್ ಅವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಲು ಆಹ್ವಾನಿಸಿದರು. ಕೆಲವು ದಿನಗಳ ನಂತರ, ಅವರು ಕಾನೂನು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಭಾರತದ ಹೊಸ ಸಂವಿಧಾನವನ್ನು ರೂಪಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು.

ಅಂಬೇಡ್ಕರ್ ಅವರು ಕಾಂಗ್ರೆಸ್ ಜೊತೆ ಕೆಲಸ ಮಾಡುವುದನ್ನು ವೈರುಧ್ಯವೆಂದು ಪರಿಗಣಿಸಲಿಲ್ಲ, ಬದಲಾಗಿ, ತಮ್ಮ ಪ್ರಜಾಸತ್ತಾತ್ಮಕ ಯೋಜನೆಯನ್ನು ವಿಸ್ತರಿಸುವ ಅವಕಾಶವಾಗಿ ನೋಡಿದರು. ತಾವು ತೀವ್ರವಾಗಿ ಒಪ್ಪದ ಜನರೊಂದಿಗೆ ಕೆಲಸ ಮಾಡುವುದು ಸುಲಭವಾಗಿರಲಿಲ್ಲ, ಆದರೆ ಅಂಬೇಡ್ಕರ್ ಎಂದಿಗೂ ತಮ್ಮ ಬುದ್ಧಿವಂತಿಕೆಯನ್ನು ಕಳೆದುಕೊಂಡಿರಲಿಲ್ಲ. ಅವರು ಹೇಳಿದರು:

"ಹಿಂದೂಗಳು ವೇದಗಳನ್ನು ಬಯಸಿದ್ದರು, ಅದಕ್ಕೆ ಅವರು ಹಿಂದೂ ಅಲ್ಲದ ವ್ಯಾಸನನ್ನು ಕರೆತಂದರು. ಹಿಂದೂಗಳು ಒಂದು ಮಹಾಕಾವ್ಯವನ್ನು ಬಯಸಿದ್ದರು, ಅದಕ್ಕೆ ಅವರು ಅಸ್ಪೃಶ್ಯವಾದ ವಾಲ್ಮೀಕಿಯನ್ನುಅಂಗೀಕರಿಸಿದರು. ಹಿಂದೂಗಳು ಸಂವಿಧಾನವನ್ನು ಬಯಸಿದ್ದರು, ಈಗದನ್ನು ಅವರು ನನಗೆ ವಹಿಸಿದ್ದಾರೆ".

ಅಂದಿನಿಂದ ಕೆಲವು ಅಂಬೇಡ್ಕರ್ ವಾದಿಗಳು ಹಿಂದೂಗಳೊಂದಿಗೂ, ಹಿಂದೂ ಬಲಪಂಥೀಯರೊಂದಿಗೂ ಕೆಲಸ ಮಾಡುವ ಮೂಲಕ ಇದಕ್ಕೆ ಆಮೂಲಾಗ್ರ ವ್ಯಾಖ್ಯಾನವನ್ನು ನೀಡಿದ್ದಾರೆ. ಅಂಬೇಡ್ಕರ್ ಅವರು ಎಂದಿಗೂ ಹಿಂದೂ ಬಲಪಂಥೀಯರೊಂದಿಗೆ ಸಹಕರಿಸಲಿಲ್ಲ ಮತ್ತು ಖರ್ಗೆ ಕೂಡ ಮಾಡಲಿಲ್ಲ.

ಸಾಮಾಜಿಕ ನ್ಯಾಯ: ಹಿಂದುತ್ವಕ್ಕೆ ಮದ್ದು

ಸುಮಾರು 60 ವರ್ಷಗಳ ಹಿಂದೆ, ಖರ್ಗೆಅವರು ಎಡಪಂಥದ ಕಡೆಗೆ ವಾಲುತ್ತಿದ್ದ ಪಕ್ಷವನ್ನುಸೇರಿದರು. ಈ ಪಕ್ಷ ಆ ಪ್ರಬಲ ಬಂಡುಕೋರ ಗುಂಪಿನ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮತ್ತು ಪ್ರಚಾರಕ್ಕಾಗಿ ಕಾರ್ಯಕರ್ತರನ್ನು ಹುಡುಕಲು ಹೆಣಗಾಡುತ್ತಿತ್ತು. ಭೂ ಸುಧಾರಣೆಗಳು, ರಾಜಧನ ನಿರ್ಮೂಲನೆಯನ್ನು ವಿರೋಧಿಸಿದ್ದ ಮತ್ತು ಎಡ ಮತ್ತು ಜಾತಿ ವಿರೋಧಿ ಸಂಘಟನೆಗಳನ್ನು ನಿಗ್ರಹಿಸಲು ಬಯಸಿದ್ದ ಕಾಂಗ್ರೆಸ್ (ಒ) ಹಿಂದುತ್ವವು ಪ್ರಚಲಿತದಲ್ಲಿರದ ಆ ಕಾಲದ ಬಲಪಂಥೀಯ ಪಕ್ಷವಾಗಿತ್ತು.

ಹಿಂದುತ್ವದ ಯುಗದಲ್ಲಿ 2022ರಲ್ಲಿ ಖರ್ಗೆ ಅವರು ಕಾಂಗ್ರೆಸ್ಸಿನ ಉಸ್ತುವಾರಿಯನ್ನು ವಹಿಸಿಕೊಂಡರು. ಆ ಸಮಯದಲ್ಲಿ ಪಕ್ಷವು ಮತ್ತಷ್ಟು ಕುಸಿಯಲಾರದು ಎಂದು ತೋರುತ್ತಿತ್ತು. ಕಳೆದ ಕೆಲವು ವಾರಗಳಲ್ಲಿ ಹೆಚ್ಚಿನ ಉನ್ನತ ನಾಯಕರು ಬಿಜೆಪಿ ಸೇರುತ್ತಿರುವುದರಿಂದ, ಪರಿಸ್ಥಿತಿಯು 1969ರಲ್ಲಿ ಕಾಂಗ್ರೆಸ್ (ಒ) ರಚನೆಗೆ ಕಾರಣವಾದ ಸಂದರ್ಭವನ್ನು ಹೋಲುತ್ತಿದೆ.

ಸುಲಭ ನಾಮನಿರ್ದೇಶನದ ಮೂಲಕ ಈ ಹುದ್ದೆಗೇರಿದ ಇತರರಿಗಿಂತ ಭಿನ್ನವಾಗಿ, ಖರ್ಗೆ ಪಕ್ಷದ ಅಧ್ಯಕ್ಷರಾಗಲು ಹೋರಾಡಬೇಕಾಯಿತು. ಅರ್ಹತೆಯನ್ನು ಹೊರತುಪಡಿಸಿ ಬೇರೆ ಕಾರಣಗಳಿಗಾಗಿ ಅವರನ್ನು ಪ್ರಮುಖ ಹುದ್ದೆಗಳಿಗೆ ಕಡೆಗಣಿಸಲಾಗಿತ್ತು. ಅವರ ಬೆಳವಣಿಗೆಗೆ ಅಡ್ಡಿಯಾಗಿದ್ದ ಜಾತಿವಾದವು ಖರ್ಗೆ ಅವರಿಗೆ ಒಂದು ರೀತಿಯ ನೈತಿಕ ಶಕ್ತಿಯನ್ನು ನೀಡಿತು, ಮತ್ತು ಅದೇ ಅವರ ಹಿಂದೆ ಪಕ್ಷವನ್ನು ಒಗ್ಗೂಡಿಸಿ ನಿಲ್ಲಿಸಿತು.

ಚಂಡಮಾರುತದಲ್ಲಿ ತೀವ್ರ ಹಾನಿಗೀಡಾದ ಹಡಗನ್ನು ಓಡಿಸುವುದು ಸುಲಭವಾಗಿರಲಿಲ್ಲ.

ಅವರು ಅಧಿಕಾರ ವಹಿಸಿಕೊಂಡಾಗ ಸಮಗ್ರ ರಾಜಕೀಯ ವಲಯದ ವ್ಯಾಖ್ಯಾನಕಾರರು ಸಂಶಯಾಕುಲರಾಗಿದ್ದರು. ಅದು ಅವರಿಗೆ ಅರ್ಹತೆಗಳ ಕೊರತೆಯಿದೆ ಎಂದಲ್ಲ. ಗಾಂಧಿ ಕುಟುಂಬ ಕಾಂಗ್ರೆಸ್ಸಿಗಿಂತ ದೊಡ್ಡದಾಗಿರುವ ಕಾರಣ ಖರ್ಗೆ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಯಾರೂ ನಂಬಲಿಲ್ಲ.

ಯಾವುದೋ ಪವಾಡದಿಂದ ಮೋದಿಯನ್ನು ಸೋಲಿಸಲು ಸಾಧ್ಯವಾದರೆ ರಾಹುಲ್ ಗಾಂಧಿಗಿಂತ ಖರ್ಗೆ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸುವುದಾಗಿ ಹಲವಾರು ವಿರೋಧ ಪಕ್ಷಗಳು ಸ್ಪಷ್ಟ ಸಂಕೇತಗಳನ್ನು ರವಾನಿಸಿವೆ. ಇಂದು, ಅವರನ್ನು ಗಾಂಧಿ ಕುಟುಂಬದ ಪ್ರತಿನಿಧಿ ಎಂದು ಕರೆಯುವುದನ್ನು ಮುಂದುವರಿಸುವ ಜನರು ಹೆಚ್ಚಾಗಿ ಆಡಳಿತ ಪಕ್ಷದ ಬೆಂಬಲಿಗರು ಅಥವಾ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಂತಹ ಹೊರಗಿನವರು.

ರಾಷ್ಟ್ರೀಯವಾಗಿ ಮತ್ತು ವಿಶ್ವ ವೇದಿಕೆಯಲ್ಲಿ, ರಾಹುಲ್ ಗಾಂಧಿಯವರು ಬಹುಶಃ ಅತ್ಯಂತ ಸ್ಪಷ್ಟವಾದ ವಿರೋಧಪಕ್ಷದ ನಾಯಕರಾಗಿದ್ದಾರೆ. ಎಂ. ಕೆ. ಗಾಂಧಿಯವರು ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟದಲ್ಲಿ ಅವರ ಕಾಲದಲ್ಲಿ ಇದ್ದಂತೆಯೇ. ಭಾರತೀಯರು ಈ ಹೆಸರನ್ನು, ವಂಶಾವಳಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಖರ್ಗೆ ಅವರು ಇಂದು ಕಾಂಗ್ರೆಸ್ಸಿನಲ್ಲಿ ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ ಮತ್ತು ರಾಹುಲ್ ಗಾಂಧಿಗಿಂತ ಹಲವಾರು ವಿರೋಧ ಪಕ್ಷಗಳಿಗೆ ಹೆಚ್ಚು ಸ್ವೀಕಾರಾರ್ಹರಾಗಿದ್ದಾರೆ. ಅವರು ಯಾವುದೇ ಹಂತದಲ್ಲೂ ಗಾಂಧಿಗಳನ್ನು ಮೀರಿಸುವಂತೆ ಕಾಣಲಿಲ್ಲ. ವಾಸ್ತವವಾಗಿ, ಅವರು ಗಾಂಧಿ ಕುಟುಂಬದೊಂದಿಗಿನ ತಮ್ಮ ಸಾಮೀಪ್ಯವನ್ನು ಪ್ರಕಟ ಮಾಡುವ ಅವಕಾಶವನ್ನು ಎಂದಿಗೂ ತಪ್ಪಿಸಿಕೊಂಡಿಲ್ಲ. ಆದರೆ ಅವರು ಅಧಿಕಾರ ವಹಿಸಿಕೊಂಡ ನಂತರ ಪಕ್ಷದ ಸೈದ್ಧಾಂತಿಕ ನಿಲುವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಾದಲ್ಲಿ, ಅಲ್ಲಿ ಸ್ಪಷ್ಟ ಬದಲಾವಣೆಗಳು ಕಾಣುತ್ತವೆ.

ಗಾಂಧಿಗಳ ಪ್ರತಿನಿಧಿಯಾಗಿ ಆಳ್ವಿಕೆ ನಡೆಸುವುದಕ್ಕಿಂತ ಹೆಚ್ಚಾಗಿ, ಗಾಂಧಿಗಳೊಂದಿಗಿನ ಸಾಮೀಪ್ಯದ ಪ್ರದರ್ಶನವು ಖರ್ಗೆ ಅವರನ್ನು ಅವರ ಪಕ್ಷದ ಒಡನಾಡಿಗಳ ದೂಷಣೆಯಿಂದ ಪಾರು ಮಾಡಿದೆ ಎಂದು ತೋರುತ್ತದೆ. ಆದರೆ, ಒಂದೊಮ್ಮೆ ಈ ರೀತಿಯ ನಡೆಯಲ್ಲಿ ಸೋತ ಕಾಂಗ್ರೆಸ್ಸಿಗರು ಇದ್ದಾರೆ, ಇವರು ಸಾಮಾಜಿಕ ನ್ಯಾಯ ವಿರೋಧಿಗಳಾಗಿದ್ದಾರೆ , ಮತ್ತು ಇಂತಹವರು ಇಲ್ಲಿ ಸಾಕಷ್ಟು ಮಂದಿ ಇದ್ದಾರೆ.

ಕೆಲವು ದಿನಗಳ ಹಿಂದೆ, ಪಕ್ಷದ ಪ್ರಮುಖ ನಾಯಕ ಗೌರವ್ ವಲ್ಲಭ್ ಅವರು ಬಿಜೆಪಿ ಸೇರಿದರು. ಅಂತಹ ಪಕ್ಷಾಂತರಗಳು ಸಾಮಾನ್ಯವಾಗಿವೆ ಮತ್ತು ಇಂಥವನ್ನು ಲಂಚ ಅಥವಾ ಬ್ಲಾಕ್ ಮೇಲ್ ಪರಿಣಾಮವೆಂದು ಭಾವಿಸಲಾಗಿದೆ.

ಆದರೆ ವಲ್ಲಭ್ ಅವರ ಅಧಿಕೃತ ಕಾರಣ ಇನ್ನೂ ಆಘಾತಕಾರಿಯಾಗಿತ್ತು. ಖರ್ಗೆಯವರ ಪುತ್ರ ಪ್ರಿಯಾಂಕ್ ಅವರು ಸನಾತನ ಧರ್ಮದ ವಿರುದ್ಧ ನೀಡಿದ ಹೇಳಿಕೆ ಮತ್ತು ಅಯೋಧ್ಯೆ ದೇವಾಲಯ ಉದ್ಘಾಟನೆಯಿಂದ ದೂರ ಉಳಿಯುವ ಪಕ್ಷದ ನಿರ್ಧಾರದ ವಿರುದ್ಧ ತಮ್ಮ ಪ್ರತಿರೋಧವಿದೆ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ಜಾತಿಗಣತಿ ಮತ್ತು ರಾಮಮಂದಿರದ ಉದ್ಘಾಟನೆಯಂತಹ ವಿಷಯಗಳಲ್ಲಿ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷದ ಕಠಿಣ ನಿಲುವಿನ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಇತರರೂ ಇದ್ದಾರೆ.

ಡಿ. ಕೆ. ಶಿವಕುಮಾರ್ ಅವರು ಜಾತಿಗಣತಿಯ ವಿರುದ್ಧ ಮಾತನಾಡಿದಾಗ ಅವರನ್ನು ಮರಳಿ ದಾರಿಗೆ ತರಲು ಖರ್ಗೆ ಚಾವಟಿ ಬೀಸಬೇಕಾಯಿತು. ದೇವಾಲಯದ ಬಗ್ಗೆ ಪಕ್ಷದ ನಿಲುವನ್ನು ವಿವರಿಸುವ ಸಾರ್ವಜನಿಕ ಹೇಳಿಕೆಗಳನ್ನು ಖರ್ಗೆ ನೀಡುತ್ತಿದ್ದಾಗ, ಕರ್ನಾಟಕದ ಧಾರ್ಮಿಕ ದತ್ತಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾರೆಡ್ಡಿ ಭಿನ್ನ ರಾಗವನ್ನು ಹಾಡಿದರು. ರಾಜ್ಯ ಸರ್ಕಾರದ ಅಡಿಯಲ್ಲಿರುವ ಎಲ್ಲಾ ದೇವಾಲಯಗಳು “ಪ್ರಾಣಪತಿಷ್ಠೆಯ” ಸಮಯದಲ್ಲಿ ಭಗವಾನ್ ರಾಮನಿಗೆ ವಿಶೇಷ ಪ್ರಾರ್ಥನೆಗಳನ್ನು ನಡೆಸುವಂತೆ ರೆಡ್ಡಿ ಆದೇಶಿಸಿದರು. ರಾಜ್ಯದ ಬಹುಪಾಲು ದೇವಾಲಯಗಳು ರಾಮಾಂಕಿತವಾಗಿಲ್ಲ, ಅನೇಕವು ವೈದಿಕವೂ ಅಲ್ಲ.

ರಾಹುಲ್ ಗಾಂಧಿಯ ನೇತೃತ್ವದಲ್ಲಿ 2019ರ ಕಾಂಗ್ರೆಸ್ ಪ್ರಣಾಳಿಕೆಯನ್ನು ಮತ್ತು 'ನ್ಯಾಯ್ ಪತ್ರ' ಎಂದು ಕರೆಯಲಾಗುವ 2024ರ ಪ್ರಣಾಳಿಕೆಯನ್ನು ಹೋಲಿಸುವುದು ಕುತೂಹಲಕಾರಿಯಾಗಿದೆ.

2019 ರ ದಾಖಲೆಯು ರಾಹುಲ್ ಗಾಂಧಿಯವರ ಸಹಿ ಮಾಡಿದ ಮುನ್ನುಡಿಯೊಂದಿಗೆ ಪ್ರಾರಂಭವಾಯಿತು ಮತ್ತು ಅವರ ಛಾಯಾಚಿತ್ರಗಳನ್ನು ಅಂಟಿಸಲಾಯಿತು ಮತ್ತು ಅವರ ಉಲ್ಲೇಖದೊಂದಿಗೆ ಪ್ರಾರಂಭವಾಯಿತು: "ನಾನು ನನ್ನ ಜೀವನದಲ್ಲಿ ಎಂದಿಗೂ ಭರವಸೆಯನ್ನು ಮುರಿಯಲಿಲ್ಲ". ಪ್ರಣಾಳಿಕೆಯು ಪ್ರತಿ ಪುಟದಿಂದಲೂ ರಾಹುಲ್-ಫಾರ್-ಪಿಎಂ ಎಂದು ಕೂಗಿತು.

ರಾಹುಲ್ ಅವರ ಪ್ರಣಾಳಿಕೆಯನ್ನು ಹಿಂದಿಯಲ್ಲಿ ವಿಚಿತ್ರವಾಗಿ ಹೆಸರಿಸಲಾದ ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗವು ನಿರುದ್ಯೋಗವನ್ನು ಉದ್ದೇಶಿಸಿ ಬರೆದ 'ಕಾಮ್' (ಉದ್ಯೋಗ), ನಂತರ ಆರ್ಥಿಕ ನೀತಿಯನ್ನು ಉದ್ದೇಶಿಸಿದ್ದ 'ದಾಮ್' (ಬೆಲೆ) ಇತ್ಯಾದಿ.

ಎಸ್ಸಿ/ಎಸ್ಟಿಗಳ ಸಮಸ್ಯೆಯನ್ನು 'ಸ್ವಾಭಿಮಾನ್' ಅಥವಾ ಆತ್ಮಗೌರವದ ಅಡಿಯ ಆದ್ಯತೆಗಳ ಪಟ್ಟಿಯಲ್ಲಿ ಐಟಂ ಸಂಖ್ಯೆ 38 ಎಂದು ಗುರುತಿಸಲಾಗಿತ್ತು. ಇದು ಪಟ್ಟಿಯಲ್ಲಿ ʼಶಾನ್ʼ ಅಥವಾ ರಾಷ್ಟ್ರೀಯ ಭದ್ರತೆ ಮತ್ತು 'ಗಾಮ್' ಅಥವಾ ಗ್ರಾಮೀಣಾಭಿವೃದ್ಧಿಗಿಂತ ಕೆಳಗಿತ್ತು. ಆದರೆ, ಸಂವಿಧಾನದಲ್ಲಿ ಆದ್ಯತೆಗಳ ಕ್ರಮದಲ್ಲಿ ಸಾಮಾಜಿಕ ನ್ಯಾಯವು ಗ್ರಾಮೀಣಾಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗಿಂತ ಮೇಲಿನದಾಗಿದೆ ಎಂಬುದನ್ನು ಮರೆಯಲಾಗದು.

2024 ರ ದಾಖಲೆಯು ಪ್ರಸ್ತುತ ಅಧ್ಯಕ್ಷರ ಮುನ್ನುಡಿಯೊಂದಿಗೆ ಪ್ರಾರಂಭವಾಗುವುದಿಲ್ಲ ಮತ್ತು ಅದು ಅವರ ಫೋಟೋಗಳೊಂದಿಗೆ ಅಲಂಕೃತಗೊಂಡಿಲ್ಲ. ಇದು ವಿವಿಧ ಹಿತಾಸಕ್ತಿ ಗುಂಪುಗಳೊಂದಿಗಿನ ಚರ್ಚೆಗಳ ಫಲಿತಗಳು ಎಂದು ತೋರುತ್ತದೆ, ಆದರೆ ಖರ್ಗೆ ಅವರ ಸಹಿ ಅದರ ಮೇಲೆ ಎಲ್ಲೆಡೆ ಕಾಣಿಸುತ್ತದೆ.

ದಾಖಲೆಯ ಮೊದಲ ಭಾಗಕ್ಕೆ 'ಸಮಾನತೆ' ಮತ್ತು ಅದರ ಮೊದಲ ಉಪವಿಭಾಗಕ್ಕೆ 'ಸಾಮಾಜಿಕ ನ್ಯಾಯ' ಎಂಬ ಶೀರ್ಷಿಕೆ ನೀಡಲಾಗಿದೆ. ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳಲ್ಲಿ ಅತ್ಯಂತ ದುರ್ಬಲರ ರಾಜಕೀಯ ಆಯ್ಕೆಗಳು ಮತ್ತು ಆರ್ಥಿಕ ಅವಕಾಶಗಳನ್ನು ಆಮೂಲಾಗ್ರವಾಗಿ ಬದಲಾಯಿಸುವ ಮೂರು ಭರವಸೆಗಳನ್ನು ಪ್ರಣಾಳಿಕೆಯು ನೀಡುತ್ತದೆ:

ಜಾತಿಗಣತಿಯ ಭರವಸೆ, ಮೀಸಲಾತಿಯ ಮೇಲಿನ ಶೇಕಡಾ 50ರ ಮಿತಿಯನ್ನು ತೆಗೆದುಹಾಕುವ ಸಾಂವಿಧಾನಿಕ ತಿದ್ದುಪಡಿ, ಎಲ್ಲಾ ಜಾತಿಗಳು ಮತ್ತು ಸಮುದಾಯಗಳಿಗೆ ಆರ್ಥಿಕವಾಗಿ ದುರ್ಬಲ ವರ್ಗಗಳ (ಇ. ಡಬ್ಲ್ಯು. ಎಸ್) ಕೋಟಾವನ್ನು ತೆರೆಯುವುದು.

ಕಾನೂನು ಸುಧಾರಣೆಗಳ ಪ್ರತ್ಯೇಕವಿಭಾಗದಲ್ಲಿ, ಇದು ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರನ್ನು ನೇಮಿಸಲು ಮತ್ತು ಪ್ರಕ್ರಿಯೆಯಲ್ಲಿ ಸಕಾರಾತ್ಮಕ ಕ್ರಮವನ್ನು ಪರಿಚಯಿಸಲು ರಾಷ್ಟ್ರೀಯ ನ್ಯಾಯಾಂಗ ಆಯೋಗವನ್ನು ಸ್ಥಾಪಿಸುವ ಭರವಸೆ ನೀಡುತ್ತದೆ.

ಈ ನ್ಯಾಯಾಲಯಗಳಲ್ಲಿ ಸಾಂಪ್ರದಾಯಿಕವಾಗಿ ಜಾತಿ ವಿರೋಧಿ ಕಾರಣಗಳಿ ಗೆಪ್ರತಿಕೂಲವಾಗಿರುವ ಯಾವುದೇ ಎಸ್ಸಿ, ಎಸ್ಟಿ ಅಥವಾ ಒಬಿಸಿ ನ್ಯಾಯಾಧೀಶರು ಇಲ್ಲ. ಸಾಂವಿಧಾನಿಕ ನ್ಯಾಯಾಲಯಗಳು ಪ್ರಬಲ ನ್ಯಾಯಾಧೀಶರು ಮತ್ತು ವಕೀಲರ ಸಂಬಂಧಿಕರಿಂದ ತುಂಬಿವೆ.

ಆದರೆ ಸರ್ಕಾರ ರಚಿಸುವ ಸಾಧ್ಯತೆಯಿಲ್ಲದ ಪಕ್ಷದ ಪ್ರಣಾಳಿಕೆಯಿಂದ ಏನು ಪ್ರಯೋಜನ?

ವಿರೋಧ ಪಕ್ಷದ ನಾಯಕರು ಪ್ರಧಾನಿಯಾಗಿ ತಮ್ಮನ್ನು ಬೆಂಬಲಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಈ ಸಲಹೆಯು ಹಾಸ್ಯಾಸ್ಪದವಾಗಿದೆ ಎಂದು ಟಿ. ಎನ್. ಎಂ. ಗೆ ತಿಳಿಸಿದರು. "ನಾವು ಅವರ (ಮೋದಿ) ಸಂಖ್ಯೆಯನ್ನು ಕಡಿಮೆ ಮಾಡಿ ನಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಒಳ್ಳೆಯದು" ಎಂದು ಅವರು ಹೇಳಿದರು.

ಬಿಜೆಪಿ ಮತ್ತೊಂದು ಅವಧಿಗೆ ಗೆದ್ದರೆ, ಭಾರತದಲ್ಲಿ ಇನ್ನು ಮುಂದೆ ಚುನಾವಣೆಗಳು ನಡೆಯುವುದಿಲ್ಲ ಎಂದು ಖರ್ಗೆ ಸಾರ್ವಜನಿಕವಾಗಿ ಹೇಳಿದ್ದಾರೆ. ಅವರ ಭವಿಷ್ಯವಾಣಿಯು ಭಾಗಶಃ ನಿಜವಾಗಿದ್ದರೆ, ಅವರ ಮುಂದೆ, ಅವರ ಪಕ್ಷ ಮತ್ತು ದೊಡ್ಡ ವಿರೋಧ ಪಕ್ಷದ ಮುಂದೆ ಇರುವ ಪ್ರಶ್ನೆಯೆಂದರೆ ಅವರು ಅಧಿಕಾರವಿಲ್ಲದೆ ಹೇಗೆ ಬದುಕುತ್ತಾರೆ?

ಹಿಂದುತ್ವವು ಒಂದು ಸಿದ್ಧಾಂತವಾಗಿ ದಲಿತರು, ಹಿಂದುಳಿದ ವರ್ಗಗಳು, ಮಹಿಳೆಯರು, ಲಿಂಗ ಅಸಮ್ಮತಿಯುಳ್ಳವರು, ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಸಿಖ್ಖರು ಮತ್ತು ಬುಡಕಟ್ಟು ಸಮುದಾಯಗಳನ್ನು ಒಳಗೊಳ್ಳುವ ಚೌಕಟ್ಟನ್ನು ಎಂದಿಗೂ ಒದಗಿಸಲು ಸಾಧ್ಯವಿಲ್ಲ. ಈ ಅಂಚಿನಲ್ಲಿರುವ ಪ್ರತಿಯೊಂದು ಗುಂಪುಗಳು ಇಂದು ಹಿಂದುತ್ವದ ಪ್ರಗತಿಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿವೆ.

ಭಾರತದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಎಡಪಕ್ಷವೂ ಇದೆ. ಇದು 'ವರ್ಗ' ರಾಜಕೀಯಕ್ಕೆ 'ಗುರುತು' ತ್ಯಜಿಸಿದರೂ, ಅದರ ನೈಸರ್ಗಿಕ ಕ್ಷೇತ್ರವು ತಮ್ಮ ಗುರುತಿನ ಕಾರಣದಿಂದಾಗಿ ಆರ್ಥಿಕವಾಗಿ ಶೋಷಿತರಾದ ಜನರಿಂದ ಕೂಡಿದೆ.

ಈ ಚಳುವಳಿಗಳು ವಿಭಜಿತವಾಗಿರಬಹುದು, ನಿಜವಾದ ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳಲು ಮತ್ತು ತಮ್ಮದೇ ಆದ ವಿರೋಧಾಭಾಸಗಳನ್ನು ಜಯಿಸಲು ಹೆಣಗಾಡಲು ಮೈಲುಗಳಷ್ಟು ದೂರದಲ್ಲಿರಬಹುದು. ಆದರೆ ಅವರು ಭಾರತದ ಎಲ್ಲ ಪ್ರಗತಿಪರ ಮತ್ತು ಜಾತ್ಯತೀತ ವಾದದ ಬೆನ್ನೆಲುಬು.

ಅಧಿಕಾರವಿಲ್ಲದೆ, ಕಾಂಗ್ರೆಸ್ ಕೂಡ ಭಾರತದಲ್ಲಿ ಇತರ ಪ್ರಗತಿಪರ ಗುಂಪುಗಳಂತೆಯೇ ಬದುಕಬೇಕಾಗುತ್ತದೆ: ಒಂದು ಕಲ್ಪನೆಯಾಗಿ. ಇದು ಮೂಲಭೂತವಾಗಿ ಬ್ರಿಟಿಷರ ಅಡಿಯಲ್ಲಿದ್ದಂತೆ ಒತ್ತಡದ ಗುಂಪಾಗಿ ಹಿಂದಿರುಗುತ್ತದೆ ಮತ್ತು ಅದು ತನ್ನ ಕಾರ್ಯವನ್ನು ಕಡಿತಗೊಳಿಸಬೇಕಾಗುತ್ತದೆ.

ಕಾಂಗ್ರೆಸ್ ನಾಯಕರು ಇಲ್ಲಿಯವರೆಗೆ ಬಂಧನಗಳು ಮತ್ತು ಸೆರೆವಾಸಗಳನ್ನು ಮಾತ್ರ ಎದುರಿಸಿದ್ದಾರೆ, ಅವರು ಈ ಹಾದಿಯಲ್ಲಿ ನಡೆದರೆ, ಅವರು ಪೊಲೀಸ್ ಕ್ರೌರ್ಯವನ್ನು ಸಹ ಎದುರಿಸಬೇಕಾಗ ಬಹುದು. ಅಂತಹ ಅಪಾಯಗಳಿಗೆ ಅವರು ಇನ್ನೂ ಪ್ರತಿರೋಧ ಮಾರ್ಗಗಳನ್ನು ಕಂಡುಕೊಂಡಿಲ್ಲ.

ಹಿಂದುತ್ವದ ಅತಿದೊಡ್ಡ ವೈರುಧ್ಯವೆಂದರೆ ಜಾತಿ. ಹಿಂದೂ ಧರ್ಮದ ಶ್ರೇಣಿಕೃತ ವ್ಯವಸ್ಥೆಯೇ ಬಿಜೆಪಿಯ ಬೃಹತ್ ಹಿಂದೂ ಏಕತೆಯ ಕರೆಯನ್ನುತಡೆಯುವ ಏಕೈಕ ಬಿಂದುವಾಗಿದೆ. ಇದರರ್ಥ, ಇಂದಿನ ಜಾತಿವಿರೋಧಿ ಚಳವಳಿಗಳು ಹಿಂದುತ್ವೋತ್ತರ ಭಾರತದ ಸಾಧ್ಯತೆಯ ಕೀಲಿಯನ್ನುಹೊಂದಿವೆ. ಮತ್ತು ಜಾತಿವಿರೋಧಿ ಚಳವಳಿಯಲ್ಲಿ ದಲಿತರು ಪ್ರಮುಖ ಪಾತ್ರ ವಹಿಸುತ್ತಾರೆ.

ಅವರ ಸಾಮಾಜಿಕ ನ್ಯಾಯ ಯೋಜನೆಯ ಯಶಸ್ಸು ಈಗ ಖರ್ಗೆ ಮತ್ತು ಅವರ ಪಕ್ಷವು ಪ್ರಗತಿಪರ ಚಳುವಳಿಗಳೊಂದಿಗೆ ಎಷ್ಟು ಪರಿಣಾಮಕಾರಿಯಾಗಿ ಸಹಕರಿಸಲು ಸಮರ್ಥವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.

1918ರಲ್ಲಿ ಎಂ. ಕೆ. ಗಾಂಧಿ ಅವರು ಕಾಂಗ್ರೆಸ್ಸಿನ ಅಧಿಕಾರ ವಹಿಸಿಕೊಂಡಾಗ ಮಾಡಿದಂತೆ, ರಾಹುಲ್ ಗಾಂಧಿ ಅವರು ಭಾರತದಲ್ಲಿ ಅಂತ್ಯವಿಲ್ಲದ ಪ್ರವಾಸಗಳಲ್ಲಿ ತೊಡಗಿದ್ದಾರೆ. ಅಧಿಕಾರದಿಂದ ಹೊರಗುಳಿದ ವರ್ಷಗಳಲ್ಲಿ ಕಾಂಗ್ರೆಸ್ ಅನ್ನು ಚಳವಳಿಯಾಗಿ ಪರಿವರ್ತಿಸುವ ಮಹತ್ವವನ್ನು ಅವರು ಅರಿತುಕೊಂಡಂತೆ ತೋರುತ್ತದೆ.

ರೋಹಿತ್ ವೇಮುಲ ಅವರ ನಿಧನದ ನಂತರ, ರಾಹುಲ್ ಗಾಂಧಿ ಅವರು ದೇಶದಾದ್ಯಂತ ದಲಿತ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಅವರೊಂದಿಗೆ ಅನೇಕ ಮುಚ್ಚಿದ ಬಾಗಿಲಿನ ಸಭೆಗಳನ್ನು ಮಾಡಿದ್ದಾರೆ. ಅವರು ತಮ್ಮ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಧಿಕಾ ವೇಮುಲಾರನ್ನು ಪಾರ್ಟಿಗೆ ಆಹ್ವಾನಿಸಿದ್ದರು. ಇದು ವೇಮುಲ ಕುಟುಂಬದೊಂದಿಗೆ ಯಾರೂ ಅನುಸರಿಸದ ಮತ್ತೊಂದು ವಿಷಯವಾಗಿದೆ.

ಮುಚ್ಚಿದ ಬಾಗಿಲುಗಳ ಹಿಂದೆ ಅವರೊಂದಿಗೆ ಸಂವಹನ ನಡೆಸಿದ ದಲಿತ ಬುದ್ಧಿಜೀವಿಗಳು, ಪಕ್ಷದ ಮೂಲ ಗಾಂಧಿಯಂತೆ, ರಾಹುಲ್ ಇನ್ನೂ ಅಂಬೇಡ್ಕರ್ ವಾದಿಗಳ ಜಾತಿವಿರೋಧಿ ಹೋರಾಟದ ತತ್ವಗಳನ್ನು ಅರಗಿಸಿಕೊಂಡಿಲ್ಲ ಎಂದು ಹೇಳುತ್ತಾರೆ.

ಕೆಲವು ತಿಂಗಳ ಹಿಂದೆ ರಾಹುಲ್ ಅವರೊಂದಿಗಿನ ಮಾತುಕತೆಯನ್ನು ಬಹಿರಂಗಪಡಿಸಿದ ಒಬ್ಬರು, "ಅವರು ನನಗೆ ಜಾತಿ ಮತ್ತು ದಲಿತರ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿದರು. ನಾನು ನನ್ನ ತಾಳ್ಮೆಯನ್ನು ಕಳೆದುಕೊಂಡೆ ಮತ್ತು ಖರ್ಗೆ ಅವರೊಂದಿಗೆ ಏಕೆ ಈ ಚರ್ಚೆಗಳನ್ನು ನಡೆಸಿಲ್ಲ ಎಂದು ಕೇಳಿದೆ. ನಾನು ಕೇವಲ 30ರ ಹರೆಯದಲ್ಲಿದ್ದೇನೆ ಮತ್ತು ಖರ್ಗೆ 81ರ ಹರೆಯದಲ್ಲಿದ್ದಾರೆ! "ಎಂದರು.

ಖರ್ಗೆ ಅವರು ಹೊಂದಿರುವ ಎಲ್ಲಾ ಸ್ಥಾನಮಾನದ ಹೊರತಾಗಿಯೂ, ಗಾಂಧಿಗಳಿಗೆ ವಿಧೇಯರಾಗಿರುವ ಅವರ ಪಕ್ಷದ ಸಹೋದ್ಯೋಗಿಗಳು ಅವರನ್ನು ಹಲವಾರು ಬಾರಿ ಕಡೆಗಣಿಸಿದ್ದಾರೆ. ನಾಯಕತ್ವವನ್ನು ಸೃಷ್ಟಿಸುವ ಪಕ್ಷದ ಸಾಂಪ್ರದಾಯಿಕ ಶೈಲಿಯು ಅದನ್ನು ಅತ್ಯಂತ ಕೆಳಮಟ್ಟಕ್ಕೆ ತಂದಿತು. ನ್ಯಾಯಯುತವಾಗಿ, ಖರ್ಗೆ ಅವರ ನಾಯಕತ್ವದ ಬಗ್ಗೆ ಅವರ ದಾರಿಯಲ್ಲಿ ನಿಲ್ಲುವ ಜನರ ಮುಂದೆ ಈ ಪ್ರಶ್ನೆಗಳನ್ನು ಎತ್ತಬೇಕು.

ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ಹಿಂದುತ್ವವು ಮುಂದಿನ ದಶಕಗಳವರೆಗೆ ಭಾರತೀಯ ರಾಜಕೀಯದಲ್ಲಿ ಪ್ರಾಬಲ್ಯವನ್ನು ಮುಂದುವರಿಸುತ್ತದೆ. ಅಂಬೇಡ್ಕರ್ ಅವರು ಸಂವಿಧಾನವನ್ನುಬರೆದಾಗ ಇದ್ದಂತೆಯೇ, ಖರ್ಗೆ ಅವರ ಜಾತಿವಿರೋಧಿ ಪ್ರಣಾಳಿಕೆಯನ್ನು ಭವಿಷ್ಯಕ್ಕೆ ಕೊಂಡೊಯ್ಯಲು ಅವರಿಗೆ ಜೊತೆಗೂಡುವ ಕಾಲುಗಳ ಬೆಂಬಲವಿಲ್ಲ.

ಮೋದಿ ಅವಧಿಯಲ್ಲಿನ ಖರ್ಗೆ ಅವರ ಪ್ರಣಾಳಿಕೆಯ ಚುನಾವಣಾ ಯಶಸ್ಸು ಅವರ ಮುಂದಿನ ವಾರಸುದಾರರು ಯಾರು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾಜಿಕ ನ್ಯಾಯವನ್ನು ಹಿಂದುತ್ವದ ವಿರುದ್ಧ ಒಗ್ಗೂಡಿಸಿ ಮುನ್ನೆಡೆಸುವಂತೆ ಮಾಡಲು ಇದರ ಅವಶ್ಯಕತೆ ಇದೆ.

ಅವರು ಸ್ಪರ್ಧಿಸುವ ನಿರೀಕ್ಷೆಯಿದ್ದ ಕಲಬುರಗಿಯ ಸ್ಥಾನವನ್ನು ಈಗ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನೀಡಲಾಗಿದೆ. ದೊಡ್ಡಮನಿ ಹೊರಮುಖವಾಗಿದ್ದರೆ, ಅವರ ಚುನಾವಣೆಗೆ ತೆರೆಮರೆಯಲ್ಲಿ ಕೆಲಸ ಮಾಡುವ ನಿಜವಾದ ವ್ಯಕ್ತಿ ಪ್ರಿಯಾಂಕ್ ಖರ್ಗೆ.

ಹಿರಿಯ ಖರ್ಗೆ ಅವರು ಈಗ ಪಕ್ಷದಲ್ಲಿ ಯಾರೂ ಎದುರು ಮಾತನಾಡಲು ಸಾಧ್ಯವಾಗದಷ್ಟು ಶಕ್ತಿಶಾಲಿಯಾಗಿದ್ದರೆ, ಕರ್ನಾಟಕ ಘಟಕದಲ್ಲಿನ ಅವರ ಸಹೋದ್ಯೋಗಿಗಳು, ಅವರು ವಂಶಪಾರಂಪರ್ಯ ರಾಜಕೀಯವನ್ನು ಉತ್ತೇಜಿಸುತ್ತಿದ್ದಾರೆ ಎಂದು ಅವರ ಬೆನ್ನಿನ ಹಿಂದೆ ಗೊಣಗುತ್ತಾರೆ. ಅವರು ರಾಜ್ಯದ ಉನ್ನತ ನಾಯಕರ ಸಂಬಂಧಿಕರಿಗೆ ಟಿಕೆಟ್ ಗಳನ್ನು ವಿತರಿಸುವ ಮೂಲಕ ಈ ಕೆಲವು ಧ್ವನಿಗಳನ್ನು ಮೌನಗೊಳಿಸಿದ್ದಾರೆ ಎಂದು ತೋರುತ್ತದೆ.

ಎರಡು ಬಾರಿ ಸಚಿವರಾಗಿದ್ದ ಪ್ರಿಯಾಂಕ್ ಅವರು ಜಾತಿವಿರೋಧಿ ವಿಷಯಗಳ ಬಗ್ಗೆ ತಮ್ಮ ತಂದೆಗಿಂತ ಹೆಚ್ಚು ಬಹಿರಂಗವಾಗಿ ಮಾತನಾಡುತ್ತಾರೆ. ಎಷ್ಟು ಭಯವಾಗುತ್ತದೆಯೆಂದರೆ, ಕಲಬುರಗಿಯಲ್ಲಿ ಖರ್ಗೆ ಅವರ ಹಳೆಯ ಅನುಯಾಯಿಗಳು, ಪ್ರಿಯಾಂಕ್ ತನ್ನ ತಂದೆ ಸೃಷ್ಟಿಸಿದ ಸೂಕ್ಷ್ಮ ಸಾಮಾಜಿಕ ಮೈತ್ರಿಗಳನ್ನು ಹದಗೆಡಿಸಬಹುದು ಎಂದು ಹೆದರುತ್ತಾರೆ.

ಹೊಸ ಪೀಳಿಗೆಯ ಬಹುತೇಕ ಅಂಬೇಡ್ಕರ್ ಅನುಯಾಯಿಗಳಲ್ಲಿ ಪ್ರಿಯಾಂಕ್ ಬಹುಶಃ ತನ್ನ ತಂದೆಗಿಂತ ಹೆಚ್ಚು ಪ್ರಖರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಎರಡನೇ ಅತ್ಯಂತ ಪ್ರಮುಖ ರಾಷ್ಟ್ರೀಯ ಪಕ್ಷದ ಪ್ರಮುಖ ಅಧಿಕಾರ ಸ್ಥಾನದ ಬೆಂಬಲವಿದೆ ಎಂಬುದರ ಕಡೆ ಅವರ ಅನುಯಾಯಿಗಳು ಗಮನಹರಿಸುವುದಿಲ್ಲ.

ಇದು ಭಾರತದ ಇತಿಹಾಸದಲ್ಲಿ ಅಂಚಿನಲ್ಲಿರುವ ಸಮುದಾಯಗಳ ಅನೇಕ ನಾಯಕರು ಅನುಭವಿಸದ ಐಷಾರಾಮ. ಅವರೆಲ್ಲರೂ ಮೊದಲ ತಲೆಮಾರಿನ ಅದ್ಭುತಗಳಾಗಿದ್ದು, ಅವರ ವಾರಸುದಾರರು ತಮ್ಮ ಸವಲತ್ತುಗಳನ್ನು ಆನುವಂಶಿಕವಾಗಿ ಪಡೆಯುವುದನ್ನು ತಡೆಯಲಾಯಿತು. ಪ್ರಕಾಶ್ ಅಂಬೇಡ್ಕರ್ ಅವರು ಬಹುಶಃ ಹೆಸರಾಂತ ಉಪನಾಮ ಹೊಂದಿರುವ ಏಕೈಕ ಪ್ರಮುಖ ದಲಿತ ನಾಯಕರಾಗಿದ್ದಾರೆ. ಆದಿವಾಸಿಗಳಲ್ಲಿ, ಹೇಮಂತ್ ಸೊರೆನ್ ಎಂಬುದು ಮನಸ್ಸಿಗೆ ಬರುವ ಮತ್ತೊಂದು ಹೆಸರು. ಆದರೆ ಈ ನಾಯಕರಿಗೆ ತಮ್ಮ ರಾಜ್ಯಗಳ ಹೊರಗೆ ಬೆಳವಣಿಗೆಗೆ ನಿಜವಾದ ಅವಕಾಶವಿಲ್ಲ.

ಇದು ಕೇವಲ ಒಂದು ರಾಜವಂಶವನ್ನು ಉತ್ತೇಜಿಸುತ್ತದೆ ಎಂಬಕಾರಣಕ್ಕೆ ಖರ್ಗೆ ಅವರು ಖರ್ಗೆ ಪರಂಪರೆಯನ್ನು ಆನುವಂಶಿಕವಾಗಿ ಪಡೆಯುವುದನ್ನುತಡೆಯುವುದು ಬೂಟಾಟಿಕೆಯೇ ಸರಿ. ತಲೆಮಾರುಗಳಿಂದ ಅಸ್ಪೃಶ್ಯತೆಯ ಆಘಾತವನ್ನು ಸಂಚಯಿಸಿಕೊಂಡಿರುವ ದಲಿತ ಸಮುದಾಯಗಳಲ್ಲಿ ಅಂತರ-ಪೀಳಿಗೆಯ ಸಂಪತ್ತನ್ನು ಸೃಷ್ಟಿಸಲು ಸಾಂವಿಧಾನಿಕ ರಕ್ಷಣೆಗಳನ್ನು ವಿನ್ಯಾಸಗೊಳಿಸಲಾಗಿದೆ. ಅದಕ್ಕಾಗಿಯೇ ದಲಿತರು ಆದಾಯದ ಮಿತಿಯಿಲ್ಲದೆ ಸತತ ತಲೆಮಾರುಗಳ ಮೂಲಕ ಮೀಸಲಾತಿಯನ್ನು ಪಡೆಯಬಹುದು. ಇದು ಸಾಮಾಜಿಕ ಬಹಿಷ್ಕಾರವನ್ನು ಪರಿಹರಿಸುವ ನೀತಿಯಾಗಿದೆ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ಪರಿಹರಿಸುವ ನೀತಿಯಲ್ಲ, ಏಕೆಂದರೆ ಗಣ್ಯ ದಲಿತರು ಸಹ ತಮ್ಮ ಪೂರ್ವಜರ ಗಾಯದ ಗುರುತುಗಳನ್ನು ಹೊಂದಿರುತ್ತಾರೆ.

ಪ್ರತ್ಯೇಕ ಮತಾಧಿಕಾರದ ಬೇಡಿಕೆಯನ್ನು ಹಿಂತೆಗೆದುಕೊಳ್ಳುವ ಬದಲು ಗಾಂಧಿ ಮತ್ತು ಕಾಂಗ್ರೆಸ್ ಜೊತೆಗಿನ ಒಡಂಬಡಿಕೆಯನ್ನು ಅಂಬೇಡ್ಕರ್ ಸಾಧಿಸಿದ್ದು ಭಾರತದ ಸಕಾರಾತ್ಮಕ ಕಾರ್ಯನೀತಿ.

ಇದು ದಲಿತರು ಮತ್ತು ಆದಿವಾಸಿಗಳನ್ನು ಎಲ್ಲಾ ಹಂತಗಳಲ್ಲೂ ಚುನಾಯಿತ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವಂತೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದೆ. ಆದರೆ ಇದು ಅಧಿಕಾರದ ಗಣ್ಯ ವಲಯಗಳಲ್ಲಿ ಅವರ ಸಾಮಾಜಿಕ ಬಹಿಷ್ಕಾರವನ್ನು ಖಾತ್ರಿಪಡಿಸಿಲ್ಲ. ಭಾರತೀಯ ರಾಜಕೀಯದಲ್ಲಿ ಅನೇಕ ರಾಜವಂಶಗಳಿವೆ, ಆದರೆ ಅವುಗಳಲ್ಲಿ ಯಾವುದೇ ರಾಷ್ಟ್ರೀಯ ಪ್ರಾಮುಖ್ಯತೆಯ ಒಂದೇ ಒಂದು ದಲಿತ ಅಥವಾ ಆದಿವಾಸಿ ರಾಜವಂಶವಿಲ್ಲ.

ಮಾಯಾವತಿ ತನ್ನ ಸೋದರಳಿಯ ಆಕಾಶ್ ಆನಂದ್ ಅವರಿಗೆ ಬಿಎಸ್ಪಿ ಪಕ್ಷದ ಸಾರಥ್ಯ ವಹಿಸಿಕೊಡುವ ಮೂಲಕ ಆರಂಭ ಮಾಡಿದ್ದಾರೆ. ಒಂದು ದಲಿತ ರಾಜವಂಶ ಇರಬೇಕು ಎಂಬುದು ಹಲವು ಪೀಳಿಗೆಗಳ ದುರಾಸೆಯ ಬೇಡಿಕೆಯಲ್ಲ. ಅದು ಎಲ್ಲರಂತೆ ನಮ್ಮನ್ನೂ ಸಮಾನವಾಗಿ ನಡೆಸಿಕೊಳ್ಳಬೇಕು ಎಂಬ ಹಲವು ಪೀಳಿಗೆಗಳ ಆಗ್ರಹದ ಬಯಕೆಯಾಗಿದೆ.

-----------------------

ದಿ ಕಾರವಾನ್ ಪತ್ರಿಕೆಯ ಹಿರಿಯ ರಾಜಕೀಯ ಪತ್ರಕರ್ತ ಸಾಗರ್ ಮತ್ತು ಬೆಂಗಳೂರಿನ ಎನ್ಎಲ್ಎಸ್ಐಯುನ ಕಾನೂನು ವಿಭಾಗದ ಡಾ. ಅಷ್ನಾ ಸಿಂಗ್ ಅವರು ಈ ಲೇಖನವನ್ನು ಪರಿಶೀಲಿಸಿದ್ದಾರೆ.

-----------------------

www.thenewsminute.com ಹಾಗು ಸುದಿಪ್ತೊ ಮೊಂಡಲ್ ಅವರು ಈ ಲೇಖನವನ್ನು ಕನ್ನಡದಲ್ಲಿ ವಾರ್ತಾಭಾರತಿ ವೆಬ್ ಸೈಟ್ ನಲ್ಲಿ ಹಾಗು ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Contributor - ಸುದಿಪ್ತೊ ಮೊಂಡಲ್

contributor

Contributor - ಇಂಗ್ಲೀಷ್ ನಲ್ಲಿ ಎಡಿಟ್ ಮಾಡಿದವರು : ಧನ್ಯಾ ರಾಜೇಂದ್ರನ್

contributor

Contributor - ಕನ್ನಡ ರೂಪ : ಡಾ. ಟಿ ಎಸ್.‌ ವಿವೇಕಾನಂದ

contributor

Similar News