ಉಳ್ಳಾಲ ತಾಲೂಕಿಗೆ ಬೇಕಿದೆ ಸುಸಜ್ಜಿತ ಮೀನು ಮಾರುಕಟ್ಟೆ

Update: 2024-04-22 06:25 GMT

ಉಳ್ಳಾಲ: ಉಳ್ಳಾಲ ತಾಲೂಕಿನ ತೊಕ್ಕೊಟ್ಟು, ಉಳ್ಳಾಲ, ಮುಡಿಪು ಪರಿಸರದಲ್ಲಿ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನೇ ಅವಲಂಬಿಸಿರುವವರ ಸಂಖ್ಯೆ ಬಹಳ ದೊಡ್ಡದಿದೆ. ಈ ಭಾಗದಲ್ಲಿ ಹೆಚ್ಚಿನ ಜನರು ಮೀನು ವ್ಯಾಪಾರಸ್ಥರೇ ಆಗಿದ್ದಾರೆ. ಸಮುದ್ರ ಸಮೀಪವೇ ಇರುವ ಕಾರಣ ನಾಡದೋಣಿ ಮೀನುಗಾರರು ಸಾಕಷ್ಟಿದ್ದಾರೆ. ಆದರೆ ಸುಸಜ್ಜಿತ ಮೀನು ಮಾರುಕಟ್ಟೆಗಳ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ.

ಒಂದು ಕಾಲದಲ್ಲಿ ಮಂಡಲ ಪಂಚಾಯತ್ ಆಗಿದ್ದ ಉಳ್ಳಾಲ ಈಗ ನಗರಸಭೆ ಹಂತದವರೆಗೆ ಬೆಳೆದು ಇದೀಗ ತಾಲೂಕು ಆಗಿ ಪರಿವರ್ತನೆಗೊಂಡಿದೆ. ಆದರೆ ತಾಲೂಕಿನಲ್ಲಿ ಕುಡಿಯುವ ನೀರು, ಡಂಪಿಂಗ್ ಯಾರ್ಡ್, ಸೂಕ್ತ ಒಳಚರಂಡಿ ಹಾಗೂ ಮಾರುಕಟ್ಟೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬೇಕಿದೆ. ಇಂತಹ ಸಮಸ್ಯೆಗಳ ಪೈಕಿ ಯಾವುದಾದರು ಒಂದು ಪರಿಹಾರದ ಹಂತಕ್ಕೆ ತಲುಪುವಷ್ಟರಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವರ್ಗಾವಣೆಯಿಂದ ಅದು ಮತ್ತ ನನೆಗುದಿಗೆ ಬೀಳುತ್ತದೆ.

ಮೀನುಗಾರಿಕೆ ಇಲ್ಲಿನ ಜನರ ಬದುಕಿಗೆ ದಾರಿಯಾಗಿದೆ. ಆದರೆ ಸೂಕ್ತ ಮೀನು ಮಾರುಕಟ್ಟೆಳಿಲ್ಲ. ಉಳ್ಳಾಲ ಪೇಟೆ ಯಲ್ಲಿ ಓಬಿರಾಯನ ಕಾಲದಲ್ಲಿ ನಿರ್ಮಾಣಗೊಂಡ ಮೀನು ಮಾರುಕಟ್ಟೆಯೊಂದಿದ್ದರೂ, ಅದರಲ್ಲಿ ಮೂಲಭೂತ ಸೌಕರ್ಯ ಗಳ ಕೊರತೆ ಇದೆ.

ಉಳ್ಳಾಲ, ತೊಕ್ಕೊಟ್ಟು, ಮುಡಿಪು ಪರಿಸರದಲ್ಲಿ ಕೂಡ ಮೀನು ವ್ಯಾಪಾರಸ್ಥರು ಜಾಸ್ತಿ ಇರುವ ಕಾರಣ ಸುಸಜ್ಜಿತ ಮೀನು ಮಾರು ಕಟ್ಟೆಯ ಆಯಾ ಪ್ರದೇಶದಲ್ಲೂ ಅಗತ್ಯವಿದೆ.

ಉಳ್ಳಾಲ ನಗರದಲ್ಲಿರುವ ಮಾರುಕಟ್ಟೆ ಎಲ್ಲ ಮೀನು ವ್ಯಾಪಾರಸ್ಥರ ಬಳಕೆಗೆ ಸಿಗುತ್ತಿಲ್ಲ. ಆದ ಕಾರಣ, ಅವರು ನಗರಸಭೆ ಸುತ್ತ ರಸ್ತೆ ಬದಿಯನ್ನೇ ಮೀನು, ಹಣ್ಣು ಹಂಪಲು ಮಾರಾಟಕ್ಕೆ ಆಶ್ರಯಿಸುತ್ತಿದ್ದಾರೆ. ಇದರಿಂದ ಮೀನಿನ ನೀರು ರಸ್ತೆ ಬದಿಯಲ್ಲಿ ಹರಿಯುವುದರಿಂದ ಪರಿಸರದಲ್ಲಿ ದುರ್ವಾಸನೆ ಸಾಮಾನ್ಯವಾಗಿದೆ.

ಮೀನು ಮಾರುಕಟ್ಟೆ ವಿಚಾರ ಉಳ್ಳಾಲ ನಗರ ಸಭೆಯ ಆಡಳಿತಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಚರ್ಚೆ ಯಾಗಿತ್ತು. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಮೀನು ಮಾರಾಟಗಾರರು ಆಗ್ರಹಿಸಿದ್ದಾರೆ.

ತೊಕ್ಕೊಟ್ಟು ದೊಡ್ಡ ಪೇಟೆಯಾಗಿ ಬೆಳೆದಿದ್ದರೂ ಸೌಕರ್ಯಗಳ ವಿಚಾರದಲ್ಲಿ ಹಿಂದುಳಿದಿದೆ. ತೊಕ್ಕೊಟ್ಟುವಿನಲ್ಲಿ ಮೊದಲಿದ್ದ ಮೀನು ಮಾರುಕಟ್ಟೆಯನ್ನು ತೆರವುಗೊಳಿಸಿ ನೂತನ ಮಾರುಕಟ್ಟೆ ನಿರ್ಮಾಣಗೊಂಡು ಹಲವು ವರ್ಷಗಳು ಕಳೆದಿವೆ. ಆದರೆ ಲೋಕಾರ್ಪಣೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೀನು ವ್ಯಾಪಾರಿಗಳು ಮಾರುಕಟ್ಟೆಗೆ ಹೋಗುವ ದಾರಿಯಲ್ಲಿ, ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ.

ಅದೇ ರೀತಿ, ದೇರಳಕಟ್ಟೆ ಪರಿಸರದಲ್ಲಿ ಮೀನು ಮಾರಾಟ ಮಾಡಲು ಸುಸಜ್ಜಿತ ಸ್ಥಳಾವಕಾಶ ಇಲ್ಲದ ಕಾರಣ ಮೀನು ವ್ಯಾಪಾರಸ್ಥರು ರಸ್ತೆ ಬದಿಯಲ್ಲೇ ತಮ್ಮ ಕಾಯಕ ಮುಂದುವರಿಸಿದ್ದಾರೆ. ಇಲ್ಲೂ ಕೂಡ ಎರಡು ದಶಕಗಳ ಹಿಂದೆ ಸ್ಥಾಪಿಸಲಾದ ಮೀನು ಮಾರುಕಟ್ಟೆಯಲ್ಲಿ ಇಬ್ಬರಿಗೆ ಮಾತ್ರ ಮೀನು ಮಾರಾಟ ಮಾಡಲು ಅವಕಾಶ ಇದೆ. ಇದು ಸಾಕಾಗುತ್ತಿಲ್ಲ. ಇಲ್ಲೊಂದು ಸುಸಜ್ಜಿತ ಮೀನು ಮಾರುಕಟ್ಟೆ ಬೇಕಿದೆ. ಆದರೆ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಸೂಕ್ತ ಜಾಗದ ಕೊರತೆಯೂ ಇಲ್ಲಿ ಸಮಸ್ಯೆಯಾಗಿ ಗೋಚರಿಸುತ್ತಿದೆ.

ಸೋಮೇಶ್ವರ ಪುರಸಭೆಯಾಗಿ, ಕೋಟೆಕಾರ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿದಿದೆ. ಈ ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೂ ಸೂಕ್ತ ಮೀನು ಮಾರುಕಟ್ಟೆ ವ್ಯವಸ್ಥೆ ಇಲ್ಲ.

ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೀರಿಯಲ್ಲಿ ಮೀನು ಮಾರಾಟಗಾರರು ಇದ್ದಾರೆ. ಇವರಿಗೆ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಕೋಟೆಕಾರ್ ಪಟ್ಟಣ ಪಂಚಾಯತ್ ಮಾಡಬೇಕಾಗಿದೆ. ಅದೇ ರೀತಿ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿರುವ ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಮೀನು ಮಾರುಕಟ್ಟೆಯ ಸಮಸ್ಯೆ ಇದೆ.

ಉಳ್ಳಾಲ ತಾಲೂಕು ವ್ಯಾಪ್ತಿಯ ಪ್ರಮುಖ ಕೇಂದ್ರಗಳಾಗಿರುವ ಕುತ್ತಾರ್, ಅಸೈಗೋಳಿ, ಮುಡಿಪು ಮುಂತಾದೆಡೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಈ ಪ್ರದೇಶಗಳಲ್ಲೂ ರಸ್ತೆ ಬದಿಯಲ್ಲೇ ಮೀನು ಮಾರಾಟ ನಡೆಯುತ್ತಿದೆ. ಮೀನು ಮಾರುಕಟ್ಟೆ ಆರಂಭಿಸುವಂತೆ ಬಹಳಷ್ಟು ಬೇಡಿಕೆ ಮೀನುಗಾರರು ಮುಂದಿಟ್ಟರೂ ಇದುವರೆಗೆ ಪ್ರಯೋಜನವಾಗಿಲ್ಲ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯ ಮೀನು ಮಾರಾಟಗಾರ ಆಗ್ರಹ.

ಉಳ್ಳಾಲದಲ್ಲಿ ಸದ್ಯ ಮೀನು ಮಾರುಕಟ್ಟೆ ಇದೆ. ತೊಕ್ಕೊಟ್ಟುವಿನಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಆಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಮೀನು ಮಾರುಕಟ್ಟೆ ನಿರ್ಮಿಸುವ ಉದ್ದೇಶ ಇದೆ. ಅದಕ್ಕೆ ಸೂಕ್ತ ಜಾಗ ಗುರುತಿಸುವಿಕೆ ಆಗಬೇಕಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಮೀನು ಮಾರುಕಟ್ಟೆ ನಿರ್ಮಿಸಿದರೆ ಅಲ್ಲಿ ಟೆಂಡರ್ ಜಾಸ್ತಿ ನೀಡ ಬೇಕಾಗುತ್ತದೆ. ಈ ಕಾರಣಕ್ಕೆ ಮೀನು ಮಾರಾಟಗಾರರು ಹೊರಗಡೆ ಮೀನು ಮಾರಾಟ ಮಾಡುವಂತಹ ಸಮಸ್ಯೆಯೂ ಇದೆ. ಇದನ್ನೆಲ್ಲ ಇಲ್ಲಿ ಸರಿದೂಗಿಸಿಕೊಂಡು ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು.

- ಯು.ಟಿ.ಖಾದರ್, ಕ್ಷೇತ್ರದ ಶಾಸಕರು

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಬಶೀರ್ ಕಲ್ಕಟ್ಟ

contributor

Similar News