Madhya Pradesh ಸರಕಾರದ ಪ್ರಚಾರದ ಅಬ್ಬರ: ದಿನಕ್ಕೆ 1.9 ಕೋಟಿ ರೂಪಾಯಿ ವೆಚ್ಚ!
ಪರಿಸರ, ಅಲ್ಪಸಂಖ್ಯಾತರ ಇಲಾಖೆಗಿಂತ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ BJP ಸರಕಾರ
Photo Credit : newslaundry
ಮಧ್ಯಪ್ರದೇಶದ ಯಾವುದೇ ನಗರ ಅಥವಾ ಪಟ್ಟಣದಲ್ಲಿ ಸಂಚರಿಸಿದರೂ ರಾಜ್ಯ ಸರಕಾರದ ಪ್ರಚಾರವೇ ಕಣ್ಣಿಗೆ ಬೀಳುತ್ತದೆ. ರಸ್ತೆ ಜಂಕ್ಷನ್‌ಗಳಲ್ಲಿ ದೊಡ್ಡ ಬ್ಯಾನರ್ ಗಳು, ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತುಗಳು ಮತ್ತು ಸರಕಾರದ ಪ್ರತಿಯೊಂದು ಕಾರ್ಯಕ್ರಮದ ಸುತ್ತ ಪ್ರಾಯೋಜಿತ ಪೋಸ್ಟ್ ಗಳು ಕಂಡುಬರುತ್ತವೆ. ಇವುಗಳಲ್ಲಿ ಹೆಚ್ಚಿನವುಗಳಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಭಾವಚಿತ್ರವಿದೆ. ಈ ಜಾಹೀರಾತುಗಳು ಮಧ್ಯಪ್ರದೇಶಕ್ಕಷ್ಟೇ ಸೀಮಿತವಾಗಿರದೆ, ದಿಲ್ಲಿಯ ಬಸ್ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲೂ ರಾರಾಜಿಸುತ್ತಿವೆ.
ಲೆಕ್ಕಪರಿಶೋಧಿತ ವೆಚ್ಚದ ವಿವರಗಳು ಲಭ್ಯವಿರುವ 2023-24 ಮತ್ತು 2024-25ರ ಎರಡು ವರ್ಷಗಳಲ್ಲಿ, ಮಧ್ಯಪ್ರದೇಶ ಸರಕಾರವು ಜಾಹೀರಾತು ಮತ್ತು ಪ್ರಚಾರ ಶೀರ್ಷಿಕೆಯಡಿಯಲ್ಲೇ ಬರೋಬ್ಬರಿ 1,413.76 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಅಂದರೆ, ಈ ಎರಡು ವರ್ಷಗಳಲ್ಲಿ ಪ್ರತಿದಿನ ಸರಾಸರಿ 1.93 ಕೋಟಿ ರೂಪಾಯಿಗಳನ್ನು ಪ್ರಚಾರಕ್ಕಾಗಿ ಬಳಸಲಾಗಿದೆ. ಈ ಎರಡೂ ವರ್ಷಗಳಲ್ಲಿ ಸರಕಾರವು ಶಾಸಕಾಂಗಕ್ಕೆ ಆರಂಭದಲ್ಲಿ ತಿಳಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಪ್ರಚಾರಕ್ಕಾಗಿ ವ್ಯಯಿಸಿದೆ.
ಪ್ರಸ್ತುತ 2025-26ನೇ ಸಾಲಿನ ಅಂದಾಜನ್ನು ಗಮನಿಸಿದರೆ, ಸಾರ್ವಜನಿಕ ಸಂಪರ್ಕ ಇಲಾಖೆಗೆ ಜಾಹೀರಾತು ಮತ್ತು ಪ್ರಚಾರಕ್ಕಾಗಿ 632.37 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು. ವರ್ಷದ ಮಧ್ಯಭಾಗದ ಪರಿಷ್ಕೃತ ಅಂದಾಜಿನ ವೇಳೆಗೆ ಈ ಮೊತ್ತವನ್ನು 727.93 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇದನ್ನೂ ಸೇರಿಸಿದರೆ, ಮೂರು ವರ್ಷಗಳ ಒಟ್ಟು ವೆಚ್ಚ 2,141.69 ಕೋಟಿ ರೂಪಾಯಿಗೆ ತಲುಪಲಿದ್ದು, ದಿನಕ್ಕೆ ಸರಾಸರಿ 1.95 ಕೋಟಿ ರೂಪಾಯಿ ವೆಚ್ಚ ಮಾಡಿದಂತಾಗುತ್ತದೆ.
ಈ ಹಣವನ್ನು ವೆಚ್ಚ ಮಾಡುವ ‘ಜನಸಂಪರ್ಕ’ ಇಲಾಖೆಯು ಮುಖ್ಯಮಂತ್ರಿಗಳ ಬಳಿಯೇ ಇದೆ.
ಈ ಅವಧಿಯಲ್ಲಿ ಅತ್ಯಂತ ಹೆಚ್ಚು ಪ್ರಚಾರ ವೆಚ್ಚವಾದ ವರ್ಷವೆಂದರೆ ಚುನಾವಣಾ ವರ್ಷ. ಇದನ್ನು ಡಿಸೆಂಬರ್ 2023ರಲ್ಲಿ ಯಾದವ್ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಆಯವ್ಯಯದಲ್ಲಿ ಕಾಯ್ದಿರಿಸಿ, ಹೆಚ್ಚಿನ ಭಾಗವನ್ನು ವೆಚ್ಚ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಬದಲಾದರೂ ಪ್ರಚಾರದ ಈ ಶೈಲಿ ಮಾತ್ರ ಬದಲಾಗಿಲ್ಲ.
ಚುನಾವಣಾ ವರ್ಷದಲ್ಲಿ ಶೇ 59ರಷ್ಟು ಹೆಚ್ಚಾದ ಪ್ರಚಾರ ವೆಚ್ಚ
2023-24ನೇ ಹಣಕಾಸು ವರ್ಷವು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ವರ್ಷವಾಗಿತ್ತು. ಆ ವರ್ಷದ ಆಯವ್ಯಯವನ್ನು ಕೆಲವು ತಿಂಗಳುಗಳ ಮುಂಚಿತವಾಗಿಯೇ ಮಂಡಿಸಲಾಗಿತ್ತು ಮತ್ತು ವರ್ಷದ ಹೆಚ್ಚಿನ ಭಾಗವನ್ನು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಹಿಂದಿನ ಬಿಜೆಪಿ ಸರಕಾರವೇ ನಡೆಸಿತ್ತು.
ಆ ವರ್ಷ ಪ್ರಚಾರದ ವೆಚ್ಚವು ಸಾರ್ವಕಾಲಿಕ ದಾಖಲೆ ಬರೆಯಿತು. 513.59 ಕೋಟಿ ರೂಪಾಯಿ ಬಜೆಟ್ ಅಂದಾಜಿನ ವಿರುದ್ಧ ನಿಜವಾದ ವೆಚ್ಚವು 817.58 ಕೋಟಿ ರೂಪಾಯಿಗೆ ತಲುಪಿತು. ಅಂದರೆ, ಸರಕಾರ ವೆಚ್ಚ ಮಾಡುವುದಾಗಿ ಹೇಳಿದ್ದಕ್ಕಿಂತ ಸುಮಾರು 304 ಕೋಟಿ ರೂಪಾಯಿ, ಅಂದರೆ ಶೇ 59ರಷ್ಟು ಹೆಚ್ಚು ವೆಚ್ಚ ಮಾಡಲಾಗಿತ್ತು. ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಚಾರ ಮತ್ತು ಇತರ ಎಲ್ಲ ವೆಚ್ಚಗಳು ಸೇರಿ 2021-22ರಲ್ಲಿ 285.14 ಕೋಟಿ ರೂಪಾಯಿ ಹಾಗೂ 2022-23ರಲ್ಲಿ 479.17 ಕೋಟಿ ರೂಪಾಯಿ ಆಗಿತ್ತು. ಆದರೆ 2023-24ರಲ್ಲಿ ಕೇವಲ ಪ್ರಚಾರಕ್ಕೆ ಮಾಡಿದ ವೆಚ್ಚವೇ ಈ ಹಿಂದಿನ ವರ್ಷಗಳ ಇಡೀ ಇಲಾಖೆಯ ಒಟ್ಟು ವೆಚ್ಚಕ್ಕಿಂತ ಹೆಚ್ಚಾಗಿತ್ತು.
ಈ ಹಣದ ಹೆಚ್ಚಿನ ಭಾಗ ಮಾಧ್ಯಮಗಳಿಗೆ ಹೋಯಿತು. ಪತ್ರಿಕೆಗಳಿಗೆ ಗರಿಷ್ಠ 319.99 ಕೋಟಿ ರೂಪಾಯಿ ಸಿಕ್ಕರೆ, ದೃಶ್ಯ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ 266.29 ಕೋಟಿ ರೂಪಾಯಿ ಹಂಚಿಕೆಯಾಗಿ, ಇವೆರಡಕ್ಕೂ ಸೇರಿ ಒಟ್ಟು 586.28 ಕೋಟಿ ರೂಪಾಯಿ ವೆಚ್ಚವಾಯಿತು. ‘ವಿಶೇಷ ಸಂದರ್ಭಗಳ ಪ್ರಚಾರ’ ಶೀರ್ಷಿಕೆಯಡಿಯಲ್ಲಿ 190.06 ಕೋಟಿ ರೂಪಾಯಿ ಮತ್ತು ಕಾರ್ಯಕ್ರಮಗಳ ಆಯೋಜನೆ ಹಾಗೂ ನಿರ್ವಹಣೆಗೆ 103.99 ಕೋಟಿ ರೂಪಾಯಿ ವೆಚ್ಚ ಮಾಡಲಾಯಿತು. ಇನ್ನುಳಿದಂತೆ ಜಾಹೀರಾತು ಮತ್ತು ಪ್ರಚಾರ ವೆಚ್ಚಗಳಿಗೆ 30.20 ಕೋಟಿ ರೂಪಾಯಿ, ಮೇಳಗಳು ಮತ್ತು ಪ್ರದರ್ಶನಗಳು ಸೇರಿದಂತೆ ಕ್ಷೇತ್ರ ಪ್ರಚಾರಕ್ಕೆ 9.89 ಕೋಟಿ ರೂಪಾಯಿ ಹಾಗೂ ಫಲಾನುಭವಿಗಳ ಕಲ್ಯಾಣ ಪ್ರಚಾರಕ್ಕೆ 1.60 ಕೋಟಿ ರೂಪಾಯಿ ಬಳಸಲಾಯಿತು.
ಮುಂದಿನ ವರ್ಷವೂ ಈ ವೆಚ್ಚ ಕಡಿಮೆಯಾಗಲಿಲ್ಲ. ಮೋಹನ್ ಯಾದವ್ ಸರಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಆದ 2024-25ರಲ್ಲಿ, ಜಾಹೀರಾತು ಮತ್ತು ಪ್ರಚಾರಕ್ಕಾಗಿ 518.11 ಕೋಟಿ ರೂಪಾಯಿ ಕಾಯ್ದಿರಿಸಲಾಗಿತ್ತು. ಇಲಾಖೆಯ ಪರಿಷ್ಕೃತ ಒಟ್ಟು ಮೊತ್ತ 736.07 ಕೋಟಿ ರೂಪಾಯಿಯಾಗಿತ್ತು. ಈ ಪೈಕಿ ಮುದ್ರಣ ಮಾಧ್ಯಮಕ್ಕೆ 200 ಕೋಟಿ ರೂಪಾಯಿ, ದೃಶ್ಯ ಮಾಧ್ಯಮಕ್ಕೆ 146.39 ಕೋಟಿ ರೂಪಾಯಿ, ವಿಶೇಷ ಸಂದರ್ಭಗಳ ಪ್ರಚಾರಕ್ಕೆ 120.21 ಕೋಟಿ ರೂಪಾಯಿ, ಕಾರ್ಯಕ್ರಮಗಳಿಗೆ 60 ಕೋಟಿ ರೂಪಾಯಿ, ಕ್ಷೇತ್ರ ಪ್ರಚಾರಕ್ಕೆ 10 ಕೋಟಿ ರೂಪಾಯಿ, ಚಿತ್ರ ನಿರ್ಮಾಣ ಮತ್ತು ವಿತರಣೆಗೆ 9.16 ಕೋಟಿ ರೂಪಾಯಿ ಹಾಗೂ ಇಲಾಖೆಯ ಪ್ರಕಟಣೆಗಳಿಗೆ 5.56 ಕೋಟಿ ರೂಪಾಯಿ ನೀಡಲಾಗಿತ್ತು. ಆ ವರ್ಷವೂ ನೈಜ ವೆಚ್ಚವು ಹಂಚಿಕೆಗಿಂತ ಹೆಚ್ಚಾಗಿ 596.18 ಕೋಟಿ ರೂಪಾಯಿಗೆ ತಲುಪಿತು. ಇದು ಬಜೆಟ್‌ಗಿಂತ 78.07 ಕೋಟಿ ರೂಪಾಯಿ ಹೆಚ್ಚಾಗಿತ್ತು.
ಪರಿಷ್ಕೃತ ಅಂದಾಜು 736.07 ಕೋಟಿ ರೂಪಾಯಿಯಷ್ಟಿದ್ದರೂ, ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ವೆಚ್ಚಗಳಲ್ಲಿ ಸುಮಾರು 61 ಕೋಟಿ ರೂಪಾಯಿ ಉಳಿತಾಯ ಮಾಡಿ ಇಲಾಖೆಯ ಒಟ್ಟು ನೈಜ ವೆಚ್ಚವನ್ನು 675.21 ಕೋಟಿ ರೂಪಾಯಿಗೆ ತರಲಾಯಿತು.
ಇಲಾಖೆಯು 2025-26ನೇ ಸಾಲನ್ನು 875.59 ಕೋಟಿ ರೂಪಾಯಿ ಒಟ್ಟು ಬಜೆಟ್‌ನೊಂದಿಗೆ ಪ್ರಾರಂಭಿಸಿತು. ಇದರಲ್ಲಿ 632.37 ಕೋಟಿ ರೂಪಾಯಿ ಜಾಹೀರಾತು ಮತ್ತು ಪ್ರಚಾರಕ್ಕೆ ಮೀಸಲಾಗಿತ್ತು. ವರ್ಷದ ಮಧ್ಯಭಾಗದ ಪರಿಷ್ಕರಣೆಯ ವೇಳೆಗೆ ಪ್ರಚಾರದ ಮೊತ್ತವನ್ನು ಮತ್ತೆ 727.93 ಕೋಟಿ ರೂಪಾಯಿಗೆ ಹೆಚ್ಚಿಸಲಾಯಿತು. ಇದು ಸುಮಾರು 96 ಕೋಟಿ ರೂಪಾಯಿಗಳ ಹೆಚ್ಚಳವಾಗಿದೆ. ಅದೇ ಸಮಯದಲ್ಲಿ, ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ಶೀರ್ಷಿಕೆಗಳನ್ನು ಕಡಿತಗೊಳಿಸುವ ಮೂಲಕ ಇಲಾಖೆಯ ಒಟ್ಟು ಬಜೆಟ್ ಅನ್ನು 875.59 ಕೋಟಿ ರೂಪಾಯಿಯಿಂದ 797.80 ಕೋಟಿ ರೂಪಾಯಿಗೆ ಇಳಿಸಲಾಯಿತು. ಹಿಂದಿನ ವರ್ಷದ ನೈಜ ವೆಚ್ಚಕ್ಕೆ ಹೋಲಿಸಿದರೆ, ಪರಿಷ್ಕೃತ ಪ್ರಚಾರ ಅಂದಾಜು ಶೇ 22ರಷ್ಟು ಹೆಚ್ಚಾಗಿದೆ.
ಈ ಮೂರು ವರ್ಷಗಳಲ್ಲಿ ಇಡೀ ಇಲಾಖೆಗೆ ಒಟ್ಟಾರೆಯಾಗಿ 2,661.94 ಕೋಟಿ ರೂಪಾಯಿ ನೀಡಲಾಗಿದೆ.
ಇತರ ಇಲಾಖೆಗಳಿಗಿಂತ ಪ್ರಚಾರಕ್ಕೇ ದುಪ್ಪಟ್ಟು ವೆಚ್ಚ
ರಾಜ್ಯದ ಶೋಷಿತ ವರ್ಗಗಳಿಗೆ ಸೇವೆ ಸಲ್ಲಿಸುವ ಅಥವಾ ಕೆಲವು ಪ್ರಮುಖ ಇಲಾಖೆಗಳಿಗೆ ಹಂಚಿಕೆಯಾದ ಬಜೆಟ್ ಹಣಕ್ಕೆ ಹೋಲಿಸಿದರೆ, ಪ್ರಚಾರಕ್ಕೆ ಮಾಡಲಾದ ಈ ವೆಚ್ಚವು ದೊಡ್ಡ ಅಂತರವನ್ನು ಎತ್ತಿಹಿಡಿಯುತ್ತದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 2023-24ರಲ್ಲಿ 154.56 ಕೋಟಿ ರೂಪಾಯಿ, 2024-25ರಲ್ಲಿ 156.51 ಕೋಟಿ ರೂಪಾಯಿ ಮತ್ತು 2025-26ರಲ್ಲಿ 157.27 ಕೋಟಿ ರೂಪಾಯಿ, ಅಂದರೆ ಮೂರು ವರ್ಷಗಳಲ್ಲಿ ಒಟ್ಟು 468.34 ಕೋಟಿ ರೂಪಾಯಿ ಸಿಕ್ಕಿದೆ. ಇದು ಪ್ರಚಾರಕ್ಕೆ ಮಾಡಿದ ಒಟ್ಟು ವೆಚ್ಚದ ನಾಲ್ಕನೇ ಒಂದು ಭಾಗಕ್ಕಿಂತಲೂ ಕಡಿಮೆಯಾಗಿದೆ. ಬಹುತೇಕ ಜನರು ಹಳ್ಳಿಗಳಲ್ಲಿ ವಾಸಿಸುವ ಮತ್ತು ಕೃಷಿ ಹಾಗೂ ಸಣ್ಣ ಉದ್ಯಮಗಳನ್ನೇ ನೆಚ್ಚಿಕೊಂಡಿರುವ ಈ ರಾಜ್ಯದಲ್ಲಿ, ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಇಲಾಖೆಗೆ ಮೂರು ವರ್ಷಗಳಲ್ಲಿ ಒಟ್ಟು 443.10 ಕೋಟಿ ರೂಪಾಯಿ (ಕ್ರಮವಾಗಿ 132.98 ಕೋಟಿ, 152.60 ಕೋಟಿ ಮತ್ತು 157.52 ಕೋಟಿ ರೂಪಾಯಿ) ಸಿಕ್ಕಿದೆ. ವಿಮುಕ್ತ, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳ ಕಲ್ಯಾಣ ಇಲಾಖೆಗೆ ಮೂರು ವರ್ಷಗಳಲ್ಲಿ ಒಟ್ಟು 151.20 ಕೋಟಿ ರೂಪಾಯಿ (42.76 ಕೋಟಿ, 48.10 ಕೋಟಿ ಮತ್ತು 60.34 ಕೋಟಿ ರೂಪಾಯಿ) ಲಭಿಸಿದೆ. ಇನ್ನು ಪರಿಸರ ಇಲಾಖೆಗೆ ಸಿಕ್ಕಿರುವುದು ಒಟ್ಟು 100.15 ಕೋಟಿ ರೂಪಾಯಿ (35.21 ಕೋಟಿ, 26.22 ಕೋಟಿ ಮತ್ತು 38.72 ಕೋಟಿ ರೂಪಾಯಿ) ಮಾತ್ರ.
2023-24ರ ಒಂದೇ ವರ್ಷದಲ್ಲಿ ಮುದ್ರಣ ಮಾಧ್ಯಮಗಳ ಜಾಹೀರಾತಿಗಾಗಿಯೇ 319.99 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದು ಆ ವರ್ಷದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಇಡೀ ಬಜೆಟ್‌ಗಿಂತ ದುಪ್ಪಟ್ಟು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಟ್ಟು ನೈಜ ವೆಚ್ಚವಾದ 233.26 ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದೆ.
ಅಲೆಮಾರಿ ಜನಾಂಗಗಳ ಕಲ್ಯಾಣ ಇಲಾಖೆಯ ಮೂರು ವರ್ಷಗಳ ಒಟ್ಟು ಬಜೆಟ್ (151.20 ಕೋಟಿ ರೂಪಾಯಿ), 2023-24ರ ಒಂದೇ ವರ್ಷದಲ್ಲಿ ದೃಶ್ಯ ಮಾಧ್ಯಮಗಳ ಪ್ರಚಾರಕ್ಕಾಗಿ ಸರಕಾರ ಮಾಡಿದ ವೆಚ್ಚಕ್ಕಿಂತ ಕಡಿಮೆಯಾಗಿದೆ. ಪರಿಸರ ಇಲಾಖೆಯ ಮೂರು ವರ್ಷಗಳ ಬಜೆಟ್, ಆ ಒಂದೇ ವರ್ಷದಲ್ಲಿ ‘ವಿಶೇಷ ಸಂದರ್ಭಗಳ ಪ್ರಚಾರ’ಕ್ಕಾಗಿ ಮಾಡಿದ ವೆಚ್ಚದ ಅರ್ಧದಷ್ಟಿದೆ. ಇನ್ನು ಗುಡಿ ಮತ್ತು ಗ್ರಾಮೀಣ ಕೈಗಾರಿಕೆಗಳ ಇಲಾಖೆಯ ಮೂರು ವರ್ಷಗಳ ಬಜೆಟ್, 2023-24ರಲ್ಲಿ ಕೇವಲ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಜಾಹೀರಾತಿಗೆ ಮಾಡಿದ ವೆಚ್ಚಕ್ಕಿಂತ ಕನಿಷ್ಠ 140 ಕೋಟಿ ರೂಪಾಯಿ ಕಡಿಮೆಯಾಗಿದೆ.
ವಿಪರ್ಯಾಸವೆಂದರೆ, ಈ ಹಲವು ಇಲಾಖೆಗಳಿಗೆ ನೀಡಲಾದ ಹಣ ಸಂಪೂರ್ಣವಾಗಿ ಬಳಕೆಯಾಗಿಯೇ ಇಲ್ಲ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2023-24ರಲ್ಲಿ 154.56 ಕೋಟಿ ರೂಪಾಯಿ ಅನುದಾನ ಹೊಂದಿದ್ದರೂ, ಕೇವಲ 10.53 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಇದರ ಪ್ರಮುಖ ಯೋಜನೆಯಾದ ‘ಅಲ್ಪಸಂಖ್ಯಾತ ಬಾಹುಳ್ಯ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ’ಕ್ಕೆ 140 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದರೂ, ಕೇವಲ 70.03 ಲಕ್ಷ ರೂಪಾಯಿ, ಅಂದರೆ ಇಟ್ಟಿದ್ದ ಹಣದಲ್ಲಿ ಶೇ ಒಂದಕ್ಕಿಂತ ಕಡಿಮೆ ವೆಚ್ಚವಾಗಿತ್ತು. ಹಜ್ ಭವನಕ್ಕೆ ಕಾಯ್ದಿರಿಸಿದ್ದ 60 ಲಕ್ಷ ರೂಪಾಯಿ, ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳಿಗೆ ಇಟ್ಟಿದ್ದ 60 ಲಕ್ಷ ರೂಪಾಯಿ ಮತ್ತು ವಕ್ಫ್ ಟ್ರಿಬ್ಯೂನಲ್ ಮೂಲಸೌಕರ್ಯಕ್ಕಾಗಿ ಇಟ್ಟಿದ್ದ 1.60 ಲಕ್ಷ ರೂಪಾಯಿ ಹಣ ಬಳಕೆಯಾಗದೆ ಉಳಿಯಿತು. ಮರುವರ್ಷ, ಇಲಾಖೆಯ 156.51 ಕೋಟಿ ರೂಪಾಯಿ ಅಂದಾಜು ಅನುದಾನವನ್ನು ಪರಿಷ್ಕರಣೆಯ ವೇಳೆ 16.34 ಕೋಟಿ ರೂಪಾಯಿಗೆ ಕಡಿತಗೊಳಿಸಲಾಯಿತು ಮತ್ತು ಅಲ್ಪಸಂಖ್ಯಾತ ಜಿಲ್ಲೆಗಳ ಯೋಜನೆಯ ಅನುದಾನವನ್ನು 140 ಕೋಟಿ ರೂಪಾಯಿಯಿಂದ ಕೇವಲ 2,000 ರೂಪಾಯಿಗೆ ಇಳಿಸಲಾಯಿತು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 2023-24ರ ತನ್ನ ಬಜೆಟ್‌ನಲ್ಲಿದ್ದ 343.04 ಕೋಟಿ ರೂಪಾಯಿಗಳ ಪೈಕಿ 233.26 ಕೋಟಿ ರೂಪಾಯಿಗಳನ್ನು ಮಾತ್ರ ಬಳಸಿಕೊಂಡು, ಸುಮಾರು ಶೇ 32ರಷ್ಟು ಹಣವನ್ನು ಬಳಸದೆ ಉಳಿಸಿತು. 2022-23ರಲ್ಲಿ 185 ಕೋಟಿ ರೂಪಾಯಿ ಅನುದಾನ ಪಡೆದಿದ್ದ ‘ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿ’ ಯೋಜನೆಗೆ 2023-24ರಲ್ಲಿ ಕೇವಲ 3,000 ರೂಪಾಯಿ ನೀಡಲಾಯಿತು. 2024-25ರಲ್ಲೂ ಅದೇ ಮೊತ್ತವನ್ನು ಕಾಯ್ದುಕೊಂಡು, 2025-26ರಲ್ಲಿ ಸಂಪೂರ್ಣವಾಗಿ ಶೂನ್ಯಕ್ಕಿಳಿಸಲಾಯಿತು. ‘ಪಿಎಂ ಗತಿಶಕ್ತಿ ಡೇಟಾ ಸೆಂಟರ್’ ಯೋಜನೆಗೆ 2023-24ರಲ್ಲಿ 40 ಕೋಟಿ ರೂಪಾಯಿ ನೀಡಲಾಗಿತ್ತು. ನಂತರದ ವರ್ಷದಲ್ಲಿ ಇದು 3,000 ರೂಪಾಯಿಗೆ ಕುಸಿದು, ಆ ಬಳಿಕ ರದ್ದಾಯಿತು. ರಾಜ್ಯ ವಿಜ್ಞಾನ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ 2022-23ರಲ್ಲಿ 3 ಕೋಟಿ ರೂಪಾಯಿ ನೀಡಿದ್ದರೆ, ನಂತರದ ಸತತ ಮೂರು ವರ್ಷಗಳ ಕಾಲ ತಲಾ 1,000 ರೂಪಾಯಿ ನೀಡಲಾಗಿದೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಮೂಲಸೌಕರ್ಯಕ್ಕೆ 2022-23ರಲ್ಲಿ 7.99 ಕೋಟಿ ರೂಪಾಯಿ ನೀಡಲಾಗಿದ್ದು, ನಂತರ ಇದನ್ನು ಕೇವಲ 2,000 ರೂಪಾಯಿಗೆ ಕಡಿತಗೊಳಿಸಲಾಯಿತು. ವಿಜ್ಞಾನ ಉದ್ಯಾನವನಗಳಿಗೆ (ಸೈನ್ಸ್ ಪಾರ್ಕ್ಸ್) 2023-24ರಲ್ಲಿ 10.32 ಕೋಟಿ ರೂಪಾಯಿ ಹಂಚಿಕೆಯಾಗಿದ್ದರೆ, 2025-26ರ ವೇಳೆಗೆ ಅದು ಶೂನ್ಯಕ್ಕಿಳಿಯಿತು. ದಾಖಲೆಗಳಲ್ಲಿ ಮಾತ್ರ ಇಲಾಖೆಯ ಹಂಚಿಕೆಯು 343.09 ಕೋಟಿ ರೂಪಾಯಿಯಿಂದ 472.34 ಕೋಟಿ ರೂಪಾಯಿಗೆ, ನಂತರ 497.79 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಪರಿಸರ ಇಲಾಖೆಯು 2023-24ರಲ್ಲಿ ತನಗೆ ಸಿಕ್ಕಿದ್ದ 35.21 ಕೋಟಿ ರೂಪಾಯಿಗಳಲ್ಲಿ ಅರ್ಧದಷ್ಟು, ಅಂದರೆ ಕೇವಲ 17.75 ಕೋಟಿ ರೂಪಾಯಿಗಳನ್ನು ಮಾತ್ರ ವೆಚ್ಚ ಮಾಡಿದೆ. ಅದೂ ಬಂಡವಾಳ ಯೋಜನೆಗಳಿಗೆ ನಗಣ್ಯ ವೆಚ್ಚವಾಗಿದೆ. 2024-25ರ ಬಜೆಟ್ ಅನುದಾನವನ್ನು 38.71 ಕೋಟಿ ರೂಪಾಯಿಯಿಂದ 26.22 ಕೋಟಿ ರೂಪಾಯಿಗೆ ಪರಿಷ್ಕರಣೆ ವೇಳೆ ಕಡಿತಗೊಳಿಸಲಾಯಿತು. 2025-26ರಲ್ಲಿ ಇದಕ್ಕೆ 38.72 ಕೋಟಿ ರೂಪಾಯಿ ನೀಡಲಾಗಿದೆ.
ವಸತಿನಿಲಯಗಳು, ವಿದ್ಯಾರ್ಥಿವೇತನ ಮತ್ತು ವಸತಿ ಪ್ರದೇಶಗಳ ಅಭಿವೃದ್ಧಿಗೆ ಧನಸಹಾಯ ನೀಡುವ ಅಲೆಮಾರಿ ಸಮುದಾಯಗಳ ಕಲ್ಯಾಣ ಇಲಾಖೆಗೆ 2023-24ರಲ್ಲಿ 42.76 ಕೋಟಿ ರೂಪಾಯಿ ನೀಡಲಾಗಿತ್ತು. ನಂತರ ಅದನ್ನು 36.67 ಕೋಟಿ ರೂಪಾಯಿಗೆ ಇಳಿಸಲಾಯಿತು. ಅಂತಿಮವಾಗಿ ಇಲಾಖೆ ವೆಚ್ಚ ಮಾಡಿದ್ದು 25.35 ಕೋಟಿ ರೂಪಾಯಿ ಮಾತ್ರ. ಅಂದರೆ, ಮೂಲ ಅನುದಾನದಲ್ಲಿ 17.41 ಕೋಟಿ ರೂಪಾಯಿ ಹಣ ಬಳಕೆಯಾಗದೆ ಉಳಿಯಿತು.
'ನ್ಯೂಸ್‌ಲಾಂಡ್ರಿ' ಮಧ್ಯಪ್ರದೇಶದ ಮುಖ್ಯಮಂತ್ರಿಗಳಿಗೆ ಈ ಕುರಿತು ಪ್ರಶ್ನೆಗಳನ್ನು ಕಳುಹಿಸಿದೆ. ಮಧ್ಯಪ್ರದೇಶದ ಸಾರ್ವಜನಿಕ ಸಂಪರ್ಕ ಆಯುಕ್ತ ಮನೀಷ್ ಸಿಂಗ್ ಅವರಿಗೂ ಪ್ರಶ್ನೆಗಳನ್ನು ಕಳುಹಿಸಿದ್ದು, ಇಲ್ಲಿಯವರೆಗೆ ಉತ್ತರ ಬಂದಿಲ್ಲ.
ಸೌಜನ್ಯ: newslaundry.com