ʼಕೆನಡಾ ವರ್ಕ್ ಪರ್ಮಿಟ್ʼ: ಅರ್ಜಿ ತಿರಸ್ಕೃತಗೊಂಡರೂ ಪ್ರತಿಭಟಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅಲ್ಲಿಯೇ ಉಳಿಯಬಹುದೇ?

PGWP ಅರ್ಜಿ ತಿರಸ್ಕೃತಗೊಂಡ ನಂತರ ಏನಾಗುತ್ತದೆ?; ಇಲ್ಲಿದೆ ಮಾಹಿತಿ...

Update: 2026-08-15 17:20 IST

Photo Credit : X 

ಪೋಸ್ಟ್-ಗ್ರಾಜುಯೇಷನ್ ವರ್ಕ್ ಪರ್ಮಿಟ್ (PGWP) ಅರ್ಜಿಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಕಳೆದ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಅವರ ಮುಂದೆ ಕಠಿಣ ಸವಾಲೊಂದನ್ನು ತಂದೊಡ್ಡಿದೆ.

ಆಲ್ಬರ್ಟಾ, ಕ್ಯಾಲ್ಗರಿ ಮತ್ತು ಎಡ್ಮಂಟನ್‌ನಲ್ಲಿರುವ 'ಪೋರ್ಟೇಜ್ ಕಾಲೇಜು' ಹಾಗೂ ಅದರ ಹಿಂದಿನ ಪಾಲುದಾರ ಕ್ಯಾಂಪಸ್‌ಗಳಲ್ಲಿ ಸುಮಾರು ಎರಡು ವರ್ಷಗಳ ಶಿಕ್ಷಣ ಮುಗಿಸಿರುವ ಈ ವಿದ್ಯಾರ್ಥಿಗಳು, ಬೋಧನಾ ಶುಲ್ಕ ಮತ್ತು ಜೀವನ ವೆಚ್ಚಕ್ಕಾಗಿ ಸುಮಾರು 30 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಯವರೆಗೆ ಖರ್ಚು ಮಾಡಿದ್ದಾರೆ. ಕೋರ್ಸ್ ಮುಗಿದ ನಂತರ ಕೆನಡಾದಲ್ಲಿ ಕೆಲಸ ಮಾಡುವ ಭರವಸೆಯಲ್ಲಿದ್ದ ಅವರಿಗೆ, ವರ್ಕ್ ಪರ್ಮಿಟ್ ನಿರಾಕರಣೆಯಾಗಿರುವುದು ಸಂಪೂರ್ಣ ಅನಿರೀಕ್ಷಿತವಾಗಿದೆ.

ವಿದ್ಯಾರ್ಥಿಗಳು ಪೂರ್ಣಗೊಳಿಸಿದ ಕೋರ್ಸ್‌ಗಳು ಪಿಜಿಡಬ್ಲ್ಯೂಪಿಗೆ ಅರ್ಹತೆ ಹೊಂದಿವೆಯೇ ಮತ್ತು ಅವು ಕ್ರೆಡಿಟ್ ಆಧಾರಿತವೇ ಎಂಬ ಸಂಶಯಗಳ ಹಿನ್ನೆಲೆಯಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಪೋರ್ಟೇಜ್ ಕಾಲೇಜು, "ವಲಸೆಗೆ ಸಂಬಂಧಿಸಿದ ತೀರ್ಮಾನಗಳನ್ನು ಕೆನಡಾದ ಒಕ್ಕೂಟ ಸಂಸ್ಥೆಯಾದ 'ಇಮಿಗ್ರೇಷನ್, ರೆಫ್ಯೂಜೀಸ್ ಅಂಡ್ ಸಿಟಿಜನ್‌ಶಿಪ್ ಕೆನಡಾ' (IRCC) ತೆಗೆದುಕೊಳ್ಳುತ್ತದೆ" ಎಂದು ತಿಳಿಸಿದೆ. ಅದೇ ವೇಳೆ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸ್ವತಂತ್ರ ವಲಸೆ ಸಲಹೆಗಾರರನ್ನು ಸಂಪರ್ಕಿಸಲು ಸೂಚಿಸಿದೆ.

ಪಿಜಿಡಬ್ಲ್ಯೂಪಿ ಅರ್ಜಿ ತಿರಸ್ಕೃತಗೊಂಡು, ದೇಶದಲ್ಲಿ ಉಳಿಯಲು ಬೇರೆ ಯಾವುದೇ ಕಾನೂನುಬದ್ಧ ಆಧಾರಗಳಿಲ್ಲದವರು ತಕ್ಷಣವೇ ದೇಶ ತೊರೆಯಬೇಕು ಎಂದು ಕೆನಡಾ ಸರ್ಕಾರ ಸ್ಪಷ್ಟಪಡಿಸಿದೆ. ಇಂತಹ ಸಂದರ್ಭದಲ್ಲಿ, ಈ ವಿದ್ಯಾರ್ಥಿಗಳು ತಮ್ಮ ಕಾನೂನುಬದ್ಧ ವಾಸ್ತವ್ಯವನ್ನು ಮುಂದುವರಿಸಲು ಸಾಧ್ಯವೇ? ಇಲ್ಲಿದೆ ಸಂಪೂರ್ಣ ವಿವರ.

PGWP ಅರ್ಜಿ ತಿರಸ್ಕೃತಗೊಂಡ ನಂತರ ಏನಾಗುತ್ತದೆ?:

ಪಿಜಿಡಬ್ಲ್ಯೂಪಿ ಅರ್ಜಿ ತಿರಸ್ಕೃತಗೊಂಡ ಬಳಿಕ, ಕೆನಡಾದಲ್ಲಿ ಉಳಿದುಕೊಳ್ಳಲು ಯಾವುದೇ ಕಾನೂನುಬದ್ಧ ಆಧಾರವಿಲ್ಲದಿದ್ದರೆ ವಿದ್ಯಾರ್ಥಿಗಳು ಕೆಲಸ ಮುಂದುವರಿಸಲು ಸಾಧ್ಯವಿಲ್ಲ. ಅವರು ದೇಶ ತೊರೆಯಬೇಕಾಗುತ್ತದೆ. ಅರ್ಹರಾಗಿದ್ದಲ್ಲಿ, ತಮ್ಮ ಕಾನೂನುಬದ್ಧ ವಾಸ್ತವ್ಯದ ಅವಧಿ ಮುಗಿದ 90 ದಿನಗಳ ಒಳಗೆ 'ಸ್ಟೇಟಸ್ ರಿಸ್ಟೋರೇಶನ್' (ಅಂದರೆ ವಾಸ್ತವ್ಯದ ನವೀಕರಣ) ಗೆ ಅರ್ಜಿ ಸಲ್ಲಿಸಬಹುದು. ಆದರೆ, ಅರ್ಜಿ ತಿರಸ್ಕೃತಗೊಂಡ ತಕ್ಷಣವೇ ವಿದ್ಯಾರ್ಥಿಗಳಿಗೆ ಕೆನಡಾದಲ್ಲಿ ಉಳಿಯಲು ಸ್ವಯಂಚಾಲಿತವಾಗಿ 90 ದಿನಗಳ ಕಾಲಾವಕಾಶ ಸಿಗುವುದಿಲ್ಲ.

ಐಆರ್‌ಸಿಸಿ (IRCC) ನೀಡಿರುವ ಮಾಹಿತಿಯ ಪ್ರಕಾರ, ಈ 90 ದಿನಗಳ ನಿಯಮವು ತಾತ್ಕಾಲಿಕ ವಾಸ್ತವ್ಯದ ಅವಧಿ ಮುಗಿದ ನಂತರ ಅದನ್ನು ನವೀಕರಿಸಿಕೊಳ್ಳಲು ನೀಡಲಾದ ಅವಕಾಶವಾಗಿದೆ. ಇದು ಪಿಜಿಡಬ್ಲ್ಯೂಪಿ ತಿರಸ್ಕೃತಗೊಂಡ ಬಳಿಕ ಸಿಗುವ ಹೆಚ್ಚುವರಿ ಕಾಲಾವಕಾಶವಲ್ಲ.

ವಿದ್ಯಾರ್ಥಿಗಳು ಮೊದಲು ತಮ್ಮ ಸ್ಟಡಿ ಪರ್ಮಿಟ್ ಅಥವಾ ಇತರ ತಾತ್ಕಾಲಿಕ ವಾಸ್ತವ್ಯದ ರಹದಾರಿ ಇನ್ನೂ ಚಾಲ್ತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಪಿಜಿಡಬ್ಲ್ಯೂಪಿ ನಿರಾಕರಣೆಯಾದ ತಕ್ಷಣವೇ ಅವರಲ್ಲಿರುವ ಇತರ ಸಿಂಧುವಾದ ದಾಖಲೆಗಳು ರದ್ದಾಗುವುದಿಲ್ಲ.

ವಿಸಿಟರ್ ಅಥವಾ ಬಿಸಿನೆಸ್ ವೀಸಾ ಸಹಕಾರಿಯಾಗುವುದೇ?:

ವಿಸಿಟರ್ ರೆಕಾರ್ಡ್ ಒಬ್ಬ ವ್ಯಕ್ತಿಗೆ ಕೆನಡಾದಲ್ಲಿ ತಾತ್ಕಾಲಿಕವಾಗಿ ಉಳಿಯಲು ಅನುಮತಿ ನೀಡಬಹುದಾದರೂ, ಅಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಇದನ್ನು ಪಿಜಿಡಬ್ಲ್ಯೂಪಿಗೆ ಪರ್ಯಾಯವಾಗಿ ಬಳಸಲು ಸಾಧ್ಯವಿಲ್ಲ.

ಅಂತೆಯೇ, ಬಿಸಿನೆಸ್ ವೀಸಾ ಹೊಂದಿರುವವರು ನಿರ್ದಿಷ್ಟ ಉದ್ಯಮ ಸಂಬಂಧಿತ ಚಟುವಟಿಕೆಗಳನ್ನು ಮಾತ್ರ ನಡೆಸಬಹುದು. ಬದಲಿಗೆ ಸಾಮಾನ್ಯ ಉದ್ಯೋಗಿಯಾಗಿ ಅಲ್ಲಿನ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸಲು ಅನುಮತಿಯಿರುವುದಿಲ್ಲ. ಹೀಗಾಗಿ ಬಿಸಿನೆಸ್ ವೀಸಾವನ್ನು ಸಹ ವರ್ಕ್ ಪರ್ಮಿಟ್‌ಗೆ ಪರ್ಯಾಯವಾಗಿ ಬಳಸಲಾಗುವುದಿಲ್ಲ.

ಈ ಎರಡೂ ಆಯ್ಕೆಗಳು ತಾತ್ಕಾಲಿಕ ಸ್ವರೂಪದ್ದಾಗಿದ್ದು, ಕೆನಡಾದಲ್ಲಿ ದೀರ್ಘಕಾಲ ಶಿಕ್ಷಣ ಪಡೆಯಲು ಅಥವಾ ಕೆಲಸ ಮಾಡಲು ಯಾವುದೇ ದಾರಿಯನ್ನು ಕಲ್ಪಿಸುವುದಿಲ್ಲ. ಕೇವಲ ದೇಶ ತೊರೆಯುವುದನ್ನು ಮುಂದೂಡುವ ಉದ್ದೇಶದಿಂದ ಇಂತಹ ತಾತ್ಕಾಲಿಕ ವೀಸಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ವಿದ್ಯಾರ್ಥಿಗಳು ಎಚ್ಚರದಿಂದಿರಬೇಕು ಎಂದು ವಲಸೆ ತಜ್ಞರು ಸಲಹೆ ನೀಡಿದ್ದಾರೆ. ಏಕೆಂದರೆ ಈ ವೀಸಾ ಅವಧಿ ಮುಗಿದ ನಂತರ ಅವರು ಮತ್ತೆ ವಲಸೆ ಸಂಬಂಧಿತ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ತಮ್ಮ ವಾಸ್ತವ್ಯದ ಅವಧಿ ಮುಗಿದಿರುವ ವಿದ್ಯಾರ್ಥಿಗಳು ನವೀಕರಣದ ಬಗ್ಗೆ ಯೋಚಿಸಬಹುದು. ಇನ್ನು ಪಿಜಿಡಬ್ಲ್ಯೂಪಿ ನಿರಾಕರಣೆ ಕಾನೂನುಬಾಹಿರ ಎಂದು ಭಾವಿಸುವವರು ತಕ್ಷಣವೇ ನ್ಯಾಯಾಲಯದ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ನಿರಾಕರಣೆಗೊಂಡಿರುವ ಬಹುತೇಕ ವಿದ್ಯಾರ್ಥಿಗಳು ನ್ಯಾಯಾಂಗದ ಮೊರೆ ಹೋಗಿದ್ದಾರೆ.

ಜಲಂಧರ್‌ನಲ್ಲಿ ನೆಲೆಸಿರುವ, ಕೆನಡಾದಲ್ಲೂ ಕಚೇರಿ ಹೊಂದಿರುವ 'ಜೈನ್ ಓವರ್‌ಸೀಸ್ ಕನ್ಸಲ್ಟೆನ್ಸಿ'ಯ ಸುಮಿತ್ ಜೈನ್ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿ, "ಪಿಜಿಡಬ್ಲ್ಯೂಪಿ ನಿರಾಕರಣೆಯಾದ ತಕ್ಷಣ ಸ್ವಯಂಚಾಲಿತವಾಗಿ 90 ದಿನಗಳ ಕಾಲಾವಕಾಶ ಸಿಗುತ್ತದೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳನ್ನು ವಿದ್ಯಾರ್ಥಿಗಳು ನಂಬಬಾರದು. ಪ್ರಸ್ತುತ ತಮ್ಮ ವೀಸಾ ಸ್ಥಿತಿ ಏನಾಗಿದೆ ಎಂಬುದನ್ನು ಸ್ಪಷ್ಟಪಡಿಸಿಕೊಂಡು, ಕಾನೂನುಬದ್ಧ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ಅವರ ಮೊದಲ ಆದ್ಯತೆಯಾಗಬೇಕು" ಎಂದಿದ್ದಾರೆ.

ಕಾನೂನುಬದ್ಧವಾಗಿ ಕೆನಡಾದಲ್ಲಿ ಉಳಿಯಲು ಸಾಧ್ಯವಾಗದ ವಿದ್ಯಾರ್ಥಿಗಳು, ನಿಯಮ ಮೀರಿ ಅಲ್ಲೇ ವಾಸಿಸುವುದಕ್ಕಿಂತ ದೇಶ ತೊರೆಯುವುದು ಸುರಕ್ಷಿತ. ನ್ಯಾಯಾಲಯದ ಮರುಪರಿಶೀಲನೆಯ ಮೂಲಕ ಮುಂದೆ ಪಿಜಿಡಬ್ಲ್ಯೂಪಿ ದೊರೆತರೆ, ಅವರು ಕಾನೂನುಬದ್ಧವಾಗಿಯೇ ಕೆನಡಾಕ್ಕೆ ಹಿಂತಿರುಗಬಹುದು ಎಂದು ಜೈನ್ ತಿಳಿಸಿದ್ದಾರೆ.

►ಅತ್ಯಂತ ಸುರಕ್ಷಿತ ಆಯ್ಕೆ ಯಾವುದು?

ನ್ಯಾಯಾಲಯದ ಮರುಪರಿಶೀಲನೆಗೆ ಸಮಯ ಹಿಡಿಯುವುದರಿಂದ, ಕೆನಡಾದಲ್ಲಿ ಕಾನೂನುಬದ್ಧವಾಗಿ ಶಿಕ್ಷಣ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳು ಅರ್ಹ ಕೋರ್ಸ್‌ಗಳಿಗೆ ಸೇರಿಕೊಳ್ಳುವ ಆಯ್ಕೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಸುಮಿತ್ ಜೈನ್ ಹೇಳಿದ್ದಾರೆ. ಈಗಾಗಲೇ ವೆಚ್ಚ ಮಾಡಿರುವ ಹಣ ಮತ್ತು ಸಮಯವನ್ನು ಹಿಂಪಡೆಯಲು ಸಾಧ್ಯವಿಲ್ಲದಿದ್ದರೂ, ವಿದ್ಯಾರ್ಥಿಗಳು ಶಿಕ್ಷಣ ಮತ್ತು ಅಂತಾರಾಷ್ಟ್ರೀಯ ಅನುಭವವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ, ಹೊಸದಾಗಿ ಸ್ಟಡಿ ಪರ್ಮಿಟ್ ಪಡೆಯಲು ಇದು ಕಾನೂನುಬದ್ಧ ಮಾರ್ಗವಾಗಬಹುದು ಎಂದು ಅವರು ತಿಳಿಸಿದ್ದಾರೆ.

"ಕೆನಡಾದಲ್ಲಿಯೇ ಉಳಿದುಕೊಳ್ಳುವ ಏಕೈಕ ಉದ್ದೇಶದಿಂದ ಯಾವುದೇ ತಾತ್ಕಾಲಿಕ ಕೋರ್ಸ್ ಅಥವಾ ವೀಸಾಗಳನ್ನು ಆಯ್ಕೆ ಮಾಡಿಕೊಂಡು ಮತ್ತೊಂದು ದುಬಾರಿ ತಪ್ಪನ್ನು ಎಸಗಬಾರದು. ಪ್ರಸ್ತುತ ಕೆನಡಾದಲ್ಲಿದ್ದುಕೊಂಡೇ ವಿದ್ಯಾರ್ಥಿ ವೀಸಾಗೆ ಅರ್ಜಿ ಸಲ್ಲಿಸುವವರಿಗೆ ವೀಸಾ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ" ಎಂದು ಜೈನ್ ಹೇಳಿದ್ದಾರೆ. ಭಾರತದಿಂದ ಕೆನಡಾ ವಿದ್ಯಾರ್ಥಿ ವೀಸಾಗೆ ಅರ್ಜಿ ಸಲ್ಲಿಸಿ ಪಡೆಯುವುದು ತುಲನಾತ್ಮಕವಾಗಿ ಕಷ್ಟ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಕೋರ್ಸ್‌ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಕೆನಡಾದ ಸ್ಟಡಿ ಪರ್ಮಿಟ್ ನಿಯಮಗಳನ್ನು ಪೂರೈಸಬೇಕಾಗುತ್ತದೆ. ಇದಕ್ಕಾಗಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದು ಮತ್ತು ಅಗತ್ಯ ಹಣಕಾಸಿನ ಬೆಂಬಲವಿರುವುದನ್ನು ಸಾಬೀತುಪಡಿಸುವುದು ಕಡ್ಡಾಯವಾಗಿದೆ.

ಒಬ್ಬ ವಿದ್ಯಾರ್ಥಿಗೆ ಬೋಧನಾ ಶುಲ್ಕವನ್ನು ಹೊರತುಪಡಿಸಿ, ವಾರ್ಷಿಕ ಜೀವನ ವೆಚ್ಚಕ್ಕಾಗಿ 22,895 ಕೆನಡಿಯನ್ ಡಾಲರ್ (ಸುಮಾರು 15.7 ಲಕ್ಷ ರೂಪಾಯಿ) ಅಗತ್ಯವಿದೆ. ಈ ಮೊತ್ತವನ್ನು ವಿದ್ಯಾರ್ಥಿಗಳು ತಮ್ಮ ಅಥವಾ ತಮ್ಮ ಪ್ರಾಯೋಜಕರ ಖಾತೆಯಲ್ಲಿ ತೋರಿಸಬೇಕಾಗುತ್ತದೆ. ಜೊತೆಗೆ ಮೊದಲ ಸೆಮಿಸ್ಟರ್‌ನ ಬೋಧನಾ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.

ಹೊಸ ಕೋರ್ಸ್‌ನ ಒಂದು ಸೆಮಿಸ್ಟರ್ ಬೋಧನಾ ಶುಲ್ಕ ಸುಮಾರು 8,000 ದಿಂದ 9,000 ಕೆನಡಿಯನ್ ಡಾಲರ್ (ಸುಮಾರು 5.5 ಲಕ್ಷ ರೂಪಾಯಿಯಿಂದ 6.16 ಲಕ್ಷ ರೂಪಾಯಿ) ಇರುತ್ತದೆ.

ಪಿಜಿಡಬ್ಲ್ಯೂಪಿ ಅರ್ಜಿ ತಿರಸ್ಕೃತಗೊಂಡಿರುವ ಆಶಿಶ್ ಬೂರಾ ಎಂಬ ವಿದ್ಯಾರ್ಥಿ ಮಾತನಾಡಿ, ವಿದ್ಯಾರ್ಥಿಗಳು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದರ ಜೊತೆಗೆ ಕೆನಡಾದಲ್ಲಿ ಉಳಿಯಲು ಇತರ ಕಾನೂನುಬದ್ಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಲವರು ಹೊಸ ಅರ್ಹ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅರ್ಹ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳು, ನಿಯಮಾವಳಿಗಳಿಗೆ ಒಳಪಟ್ಟು ಶೈಕ್ಷಣಿಕ ಅವಧಿಯಲ್ಲಿ ವಾರಕ್ಕೆ 24 ಗಂಟೆಗಳ ಕಾಲ ಕ್ಯಾಂಪಸ್ ಹೊರಗೆ ಕೆಲಸ ಮಾಡಲು ಅನುಮತಿಯಿರುತ್ತದೆ. ಆದರೆ, ಪಿಜಿಡಬ್ಲ್ಯೂಪಿ ಅರ್ಜಿ ತಿರಸ್ಕೃತಗೊಂಡ ನಂತರ ನ್ಯಾಯಾಲಯದ ಮರುಪರಿಶೀಲನೆಯ ತೀರ್ಪಿಗೆ ಕಾಯುತ್ತಿರುವ ಅವಧಿಯಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಲು ಅವಕಾಶವಿಲ್ಲ ಎಂದು ಐಆರ್‌ಸಿಸಿ ಸ್ಪಷ್ಟಪಡಿಸಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News