ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಪ್ರದೇಶವೆಂದು ಘೋಷಿಸಲು ಟ್ರಂಪ್ ಬೆದರಿಕೆ: ಇದು ಸಾಧ್ಯವೇ?

Update: 2026-08-17 21:34 IST

 ಡೊನಾಲ್ಡ್ ಟ್ರಂಪ್ | Photo Credit : PTI

ಜಾಗತಿಕವಾಗಿ ಐದನೇ ಒಂದು ಭಾಗದಷ್ಟು ತೈಲ ಮತ್ತು ಅನಿಲ ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ‘ಹಾರ್ಮುಝ್ ಜಲಸಂಧಿ’ಯ ಸ್ಥಿತಿಗತಿ ಮಿಲಿಟರಿ ಹಾಗೂ ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಈ ಜಲಸಂಧಿಯನ್ನು ‘ಶೀಘ್ರದಲ್ಲೇ’ ಅಮೆರಿಕದ ಪ್ರದೇಶವೆಂದು ಘೋಷಿಸುವುದಾಗಿ ಹೇಳಿದ್ದಾರೆ.

ಜೂನ್‌ನಲ್ಲಿ ಉಭಯ ದೇಶಗಳ ನಡುವೆ ಸಹಿ ಮಾಡಲಾದ ಒಪ್ಪಂದದ ಅವಧಿಯು ಆಗಸ್ಟ್ 16ರಂದು ಮುಕ್ತಾಯಗೊಂಡಿದ್ದು, ಇರಾನ್ ಟ್ರಂಪ್ ಅವರ ಈ ಬೆದರಿಕೆಯನ್ನು ‘ಅರ್ಥಹೀನ’ ಎಂದು ತಳ್ಳಿಹಾಕಿದೆ.

ಜಾಗತಿಕ ಆರ್ಥಿಕತೆಯ ಮೇಲಿನ ನಿಯಂತ್ರಣವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಇರಾನ್ ಈ ನೌಕಾ ಮಾರ್ಗವನ್ನು ತಡೆಹಿಡಿದಿದೆ. ಇನ್ನೊಂದೆಡೆ, ಅಮೆರಿಕವು ಇರಾನ್‌ನ ಬಂದರುಗಳ ವಿರುದ್ಧ ಮಿಲಿಟರಿ ನೌಕಾ ದಿಗ್ಬಂಧನವನ್ನು ಮುಂದುವರಿಸಿದ್ದು, ಇರಾನ್ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಯಾರು ಮೊದಲು ಹಿಂದೆ ಸರಿಯುತ್ತಾರೆ ಎಂಬ ಈ ಸವಾಲಿನ ನಡುವೆ ಇರಾನ್ ಜೊತೆಗಿನ ಸಂಭಾಷಣೆ ‘ಚೆಸ್ ಆಟದಂತೆ’ ಎಂದು ಟ್ರಂಪ್ ಹೇಳಿದ್ದರೂ ಫೆಬ್ರವರಿ 28ರಂದು ಪ್ರಾರಂಭವಾದ ಪ್ರಸ್ತುತ ಯುದ್ಧದ ಉದ್ದಕ್ಕೂ ಯುಎಸ್ ಅಧ್ಯಕ್ಷರ ಮಿಲಿಟರಿ ಬೆದರಿಕೆಗಳು ಒಂದು ನಿರ್ದಿಷ್ಟ ಮಾದರಿಯನ್ನೇ ಅನುಸರಿಸಿವೆ. ಇರಾನ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿ, ಕೊನೆಯ ಕ್ಷಣದಲ್ಲಿ ಅವರು ಹಿಂದೆ ಸರಿದ ಹಲವು ಉದಾಹರಣೆಗಳಿವೆ.

ಹಾಗಾದರೆ, ಅಮೆರಿಕವು ನಿಜವಾಗಿಯೂ ಹಾರ್ಮುಝ್ ಜಲಸಂಧಿಯನ್ನು ತನ್ನ ಪ್ರದೇಶವನ್ನಾಗಿ ಮಾಡಲು ಸಾಧ್ಯವೇ?

ಟ್ರಂಪ್ ಹೇಳಿದ್ದೇನು?

“ನಾವು ಇರಾನ್ ಅನ್ನು ಸೋಲಿಸಿದ ನಂತರ ಅದು ಈಗಾಗಲೇ ತೀವ್ರ ಸೋಲನ್ನು ಅನುಭವಿಸುತ್ತಿದೆ. ಶೀಘ್ರದಲ್ಲೇ ನಾನು ಹಾರ್ಮುಝ್ ಜಲಸಂಧಿಯನ್ನು ಅಮೆರಿಕದ ಪ್ರದೇಶವೆಂದು ಘೋಷಿಸುತ್ತೇನೆ” ಎಂದು ನ್ಯೂಯಾರ್ಕ್‌ನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.

ನೌಕಾ ದಿಗ್ಬಂಧನವನ್ನು ಉಲ್ಲೇಖಿಸಿದ ಟ್ರಂಪ್, ಹಾರ್ಮುಝ್ ಜಲಸಂಧಿಯು ಈಗಾಗಲೇ ಅಮೆರಿಕದ ಪ್ರದೇಶವಾಗಿದೆ ಎಂಬ ಸೂಚನೆ ನೀಡಿದರು. “ವಾಸ್ತವವಾಗಿ, ಅದು ಹಾಗೆಯೇ ಇದೆ.

ನಾವು ದಿಗ್ಬಂಧನ ವಿಧಿಸಿದ್ದೇವೆ. ನಾವು ಅನುಮತಿಸದೇ ಯಾವುದೇ ಹಡಗುಗಳು ಅಲ್ಲಿಂದ ಹಾದುಹೋಗಲು ಸಾಧ್ಯವಿಲ್ಲ” ಎಂದಿದ್ದಾರೆ ಅವರು.

ಆದರೆ ಈ ನೌಕಾ ಮಾರ್ಗವು ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್ ಪ್ರತಿಪಾದಿಸುತ್ತಿದೆ. ಅಮೆರಿಕದ ಈ ವಾದಗಳ ನಡುವೆ, ದಿಗ್ಬಂಧನದ ಹೊರತಾಗಿಯೂ ಕೆಲವು ಹಡಗುಗಳು ಜಲಸಂಧಿಯಲ್ಲಿ ಸಂಚರಿಸಿವೆ ಎಂದು ಸಮುದ್ರಯಾನ ಡೇಟಾಗಳು ತೋರಿಸುತ್ತವೆ.

ವಾಷಿಂಗ್ಟನ್ ಡಿಸಿಯಿಂದ ವರದಿ ಮಾಡಿದ Aljazeeraದ ಕಿಂಬರ್ಲಿ ಹ್ಯಾಲ್ಕೆಟ್, “ಯುಎಸ್ ಅಧ್ಯಕ್ಷರು ಇದನ್ನು ಹೇಳುವಾಗ ನಗುತ್ತಿದ್ದರು, ಸ್ವತಃ ಅವರೇ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ.

“ಇವು ಇರಾನ್ ಮತ್ತು ಒಮಾನ್ ದೇಶಗಳ ಪ್ರಾದೇಶಿಕ ಜಲ ಗಡಿಗಳಾಗಿವೆ. ತಮ್ಮ ಎದುರಾಳಿಗಳನ್ನು ಕೆಣಕುವುದು ಅಮೆರಿಕದ ಅಧ್ಯಕ್ಷರ ಅಭ್ಯಾಸ. ಈ ಪ್ರಕರಣದಲ್ಲಿ ಆ ಎದುರಾಳಿ ಇರಾನ್ ಆಗಿದೆ. ನಾವು ಗಮನಿಸಬೇಕಾದ ಅಂಶವೆಂದರೆ, ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕ ಜಾರಿಗೆ ತಂದಿರುವ ನೌಕಾ ದಿಗ್ಬಂಧನವು ಮುಂದುವರಿದಿದೆ. ಈ ವಿಚಾರದಲ್ಲಿ ಯುಎಸ್ ಅಧ್ಯಕ್ಷರು ಹಿಂದೆ ಸರಿಯುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

ಇರಾನ್ ಪ್ರತಿಕ್ರಿಯೆ ಹೇಗಿದೆ?

ಟ್ರಂಪ್ ಅವರ ಹೇಳಿಕೆಗೆ ಹಲವು ಇರಾನ್ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷರನ್ನು ಅಪರಾಧಿ ಮತ್ತು ಹಗುರ ಮನಸ್ಸಿನ ವ್ಯಕ್ತಿ ಎಂದು ಕರೆದಿರುವ ಇರಾನ್ ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥರು, ಅವರ ಹೇಳಿಕೆಗಳನ್ನು “ಅರ್ಥಹೀನ” ಎಂದಿದ್ದಾರೆ. ಅಲ್ಲದೆ, ಹಾರ್ಮುಝ್ ಜಲಸಂಧಿಯು ಇರಾನ್‌ಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಗರೀಬಾಬಾದಿ ಪ್ರತಿಕ್ರಿಯಿಸಿ, “ಟ್ವೀಟ್ ಮಾಡುವ ಮೂಲಕ, ವಿಮಾನವಾಹಕ ನೌಕೆ ತರುವ ಮೂಲಕ, ಆದೇಶ ಹೊರಡಿಸುವ ಮೂಲಕ ಅಥವಾ ಚುನಾವಣಾ ಭಾಷಣದ ಮೂಲಕ ಹಾರ್ಮುಝ್ ಜಲಸಂಧಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

“ಹಾರ್ಮುಝ್ ಜಲಸಂಧಿಯು ಇರಾನ್‌ ಗೆ ಸೇರಿತ್ತು, ಇರಾನ್‌ಗೆ ಸೇರಿದೆ ಮತ್ತು ಇರಾನ್‌ಗೆ ಸೇರಿರುತ್ತದೆ. ಈ ಜಲಸಂಧಿಯನ್ನು ಮುಚ್ಚುವುದು ಮತ್ತು ತೆರೆಯುವುದು ಇರಾನ್‌ನ ಆಜ್ಞೆಯಂತೆ ಮಾತ್ರ ನಡೆಯುತ್ತದೆ. ನೀವು ಸೋಲಿನ ವಾಸ್ತವವನ್ನು ಒಪ್ಪಿಕೊಳ್ಳದೇ ಮತ್ತು ನಿಮ್ಮ ಕಾಲ್ಪನಿಕ ಭ್ರಮೆಗಳನ್ನು ಬಿಡದೇ ಇರುವವರೆಗೆ, ಇರಾನ್ ತನ್ನ ದಿಗ್ಬಂಧನವನ್ನು ಮುಂದುವರಿಸುತ್ತದೆ” ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ಜಲಸಂಧಿಯಲ್ಲಿನ ನೌಕಾಯಾನ ದಟ್ಟಣೆ ನಿರ್ವಹಣೆಯ ಕುರಿತು ಒಪ್ಪಂದಕ್ಕೆ ಬರಲು ಇರಾನ್, ಈ ಮಾರ್ಗದ ಇನ್ನೊಂದು ಕರಾವಳಿ ದೇಶವಾದ ಒಮಾನ್‌ ನೊಂದಿಗೆ ಮಾತುಕತೆ ನಡೆಸುತ್ತಿದೆ. ಟೆಹ್ರಾನ್ ಮತ್ತು ಮಸ್ಕಟ್ ನಡುವಿನ ಮಾತುಕತೆಗಳು “ಶೀಘ್ರದಲ್ಲೇ ಮುಕ್ತಾಯಗೊಳ್ಳಬಹುದು” ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿರುವುದಾಗಿ ಇರಾನಿಯನ್ ಸ್ಟೂಡೆಂಟ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಈ ಜಲಸಂಧಿಯನ್ನು ಮರಳಿ ತೆರೆಯುವುದು ಪ್ರತ್ಯೇಕ ವಿಷಯ ಎಂದಿರುವ ಅರಾಘ್ಚಿ, ನೌಕಾ ದಿಗ್ಬಂಧನ ಹಿಂಪಡೆಯುವುದು ಮತ್ತು ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದು ಸೇರಿದಂತೆ ಜೂನ್ ಒಪ್ಪಂದದಲ್ಲಿ ನೀಡಿದ ಭರವಸೆಗಳಿಗೆ ವಾಷಿಂಗ್ಟನ್ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಇದು ಇರಾನ್‌ನ ಹೊಸ ನಿಲುವಾಗಿದೆ. ಈ ಮೊದಲು ಯುದ್ಧವನ್ನು ಅಂತ್ಯಗೊಳಿಸಲು ವಿಧಿಸಲಾಗಿದ್ದ ಅಮೆರಿಕದ ಈ ಶರತ್ತುಗಳನ್ನು, ಈಗ ಇರಾನ್ ಕೇವಲ ಜಲಸಂಧಿಯನ್ನು ಪುನರಾರಂಭಿಸಲು ಪೂರ್ವಭಾವಿ ಶರತ್ತಾಗಿ ಮುಂದಿಟ್ಟಿದೆ.

ಟ್ರಂಪ್ ಅವರ ಪ್ರತಿಪಾದನೆ ಪ್ರಾಯೋಗಿಕವೇ?

ಮೊದಲನೆಯದಾಗಿ, ಕೇವಲ ಅಧ್ಯಕ್ಷರ ಏಕಪಕ್ಷೀಯ ಅಧಿಕೃತ ಘೋಷಣೆಯಿಂದ ಸಾರ್ವಭೌಮತ್ವ ಬದಲಾಗುವುದಿಲ್ಲ.

ಉದಾಹರಣೆಗೆ, ಪರ್ಷಿಯನ್ ಗಲ್ಫ್‌ ನಲ್ಲಿರುವ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಲು ಯುಎಸ್ ಸೇನೆಯನ್ನು ಕಳುಹಿಸುವುದಾಗಿ ಟ್ರಂಪ್ ಈ ಹಿಂದೆ ಬೆದರಿಕೆ ಹಾಕಿದ್ದರು. ಆದರೆ ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ “ಬೆರಳುಗಳನ್ನು ಟ್ರಿಗ್ಗರ್ ಮೇಲಿಟ್ಟು” ನಿಮಗಾಗಿ ಕಾಯುತ್ತಿದೆ ಎಂದು ತಿರುಗೇಟು ನೀಡಿತ್ತು. ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್ ಅನ್ನು ಸಹ ವಶಪಡಿಸಿಕೊಳ್ಳುವುದಾಗಿ ಟ್ರಂಪ್ ಹಿಂದೆ ಬೆದರಿಕೆ ಹಾಕಿದ್ದರು.

ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಆಡಳಿತದಲ್ಲಿ ಅಸೋಸಿಯೇಟ್ ಡೆಪ್ಯೂಟಿ ಅಟಾರ್ನಿ ಜನರಲ್ ಆಗಿದ್ದ ಬ್ರೂಸ್ ಫೇನ್ ಅವರ ಪ್ರಕಾರ, ಯಾವುದೇ ಪ್ರದೇಶವನ್ನು ಸ್ವತಂತ್ರವಾಗಿ ವಶಪಡಿಸಿಕೊಳ್ಳಲು (ಸ್ವಾಧೀನಪಡಿಸಿಕೊಳ್ಳಲು) ಟ್ರಂಪ್‌ಗೆ ಸಾಂವಿಧಾನಿಕವಾಗಿ ಅಧಿಕಾರವಿಲ್ಲ. “ಲೂಸಿಯಾನ ಖರೀದಿ, ಹವಾಯಿ ಅಥವಾ ಪನಾಮಾ ಕಾಲುವೆಯ ವಿಲೀನ ಅಥವಾ ಸ್ಪ್ಯಾನಿಷ್-ಅಮೆರಿಕನ್ ಯುದ್ಧದ ಅಂತ್ಯದಲ್ಲಿ ಪೋರ್ಟೊ ರಿಕೊ ಅಥವಾ ಫಿಲಿಪೈನ್ಸ್ ಅನ್ನು ಸ್ವಾಧೀನಪಡಿಸಿಕೊಂಡಂತೆ, ಯಾವುದೇ ಪ್ರದೇಶವನ್ನು ಸಂವಿಧಾನಾತ್ಮಕವಾಗಿ ವಿಲೀನಗೊಳಿಸಲು ಸೆನೆಟ್ ಅನುಮೋದಿಸಿದ ಒಪ್ಪಂದ ಅಥವಾ ಕಾನೂನಿನ ಅಗತ್ಯವಿರುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಅವರು ವಿಲೀನಕ್ಕೆ ಮುಂದಾದರೆ, ಅದು “ಯುಎನ್ ಚಾರ್ಟರ್ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಆಕ್ರಮಣಕಾರಿ ಯುದ್ಧದ ಅಪರಾಧವಾಗುತ್ತದೆ” ಎಂದು ಫೇನ್ ಹೇಳಿದ್ದಾರೆ.

ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಕಾನೂನು ತಜ್ಞೆ ಮತ್ತು ಸಹಾಯಕ ಡೀನ್ ನೇಟಲಿ ಕ್ಲೈನ್ ಮಾತನಾಡಿ, “ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಟ್ರಂಪ್ ಅವರ ಈ ಪ್ರತಿಪಾದನೆಗೆ ಮಾನ್ಯತೆ ಸಿಗಬೇಕೆಂದರೆ, ಎರಡನೇ ಮಹಾಯುದ್ಧದ ತಕ್ಷಣವೇ ಜಪಾನ್ ಮೇಲೆ ಅಮೆರಿಕ ಚಲಾಯಿಸಿದ ಅಧಿಕಾರದಂತೆ, ಜಲಸಂಧಿಯ ಮೇಲೆ ಅಮೆರಿಕವು ಆಕ್ರಮಣಕಾರಿ ಶಕ್ತಿಯಾಗಿ ನಿಯಂತ್ರಣ ಸಾಧಿಸಬೇಕಾಗುತ್ತದೆ” ಎಂದು ವಿವರಿಸಿದ್ದಾರೆ.

“ಆದರೆ ಅಂತಹ ಪರಿಸ್ಥಿತಿಯಲ್ಲಿ, ಅಮೆರಿಕವು ಇರಾನ್ ಅಥವಾ ಕನಿಷ್ಠ ಅದರ ಕರಾವಳಿ ಪ್ರದೇಶಗಳ ಮೇಲೆ ಮಿಲಿಟರಿ ನಿಯಂತ್ರಣವನ್ನು ಹೊಂದಿರಬೇಕಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ಇರಾನ್ ಮೇಲಿನ ಟ್ರಂಪ್ ಅವರ ಯುದ್ಧಕ್ಕೆ ಅಮೆರಿಕದಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷವು ತಮ್ಮ ಕನಿಷ್ಠ ಸಂಸದೀಯ ಬಹುಮತವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ರೈಟರ್ಸ್/ಇಪ್ಸೋಸ್ ಜಂಟಿ ಸಮೀಕ್ಷೆಯ ಪ್ರಕಾರ, ಕೇವಲ ಶೇಕಡಾ 35ರಷ್ಟು ಅಮೆರಿಕನ್ನರು ಮಾತ್ರ ಈ ಯುದ್ಧವನ್ನು ಬೆಂಬಲಿಸುತ್ತಿದ್ದಾರೆ.

ಪೆಟ್ರಿಯಾಟ್ ವಿರೋಧಿ ಕ್ಷಿಪಣಿ ತಡೆ ವ್ಯವಸ್ಥೆ ಸೇರಿದಂತೆ ಪ್ರಮುಖ ಯುದ್ಧಸಾಮಗ್ರಿಗಳ ಕೊರತೆಯನ್ನು ವಾಷಿಂಗ್ಟನ್ ಎದುರಿಸುತ್ತಿದೆ ಎಂದು ಹಲವಾರು ಯುಎಸ್ ಮಾಧ್ಯಮಗಳು ವರದಿ ಮಾಡಿವೆ. ಪೆಟ್ರೋಲ್ ಬೆಲೆಯೂ ಏರಿಕೆಯಾಗಿದ್ದು, ಈಗ ಗ್ಯಾಲನ್‌ಗೆ ಸರಾಸರಿ 4 ಡಾಲರ್‌ಗಿಂತ ಹೆಚ್ಚಾಗಿದೆ. ಇದು ಅಮೆರಿಕನ್ನರಿಗೆ ದೊಡ್ಡ ಸಮಸ್ಯೆಯಾಗಿದೆ.

ಕಳೆದ ವಾರ, ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಾತನಾಡಿ, ಯುದ್ಧದಲ್ಲಿ ಟ್ರಂಪ್ ಆಡಳಿತದ ಮೊದಲ ಆದ್ಯತೆ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಗಳನ್ನು ನಿಯಂತ್ರಿಸುವುದಾಗಿದೆ, ಮತ್ತು ಇರಾನ್‌ ನ ಪರಮಾಣು ಶಸ್ತ್ರಾಸ್ತ್ರಗಳ ಓಟವನ್ನು ತಡೆಯುವುದು ಎರಡನೇ ಆದ್ಯತೆಯಾಗಿದೆ ಎಂದು ಹೇಳಿದ್ದರು.

ಗಲ್ಫ್‌ನಲ್ಲಿರುವ ತನ್ನ ನೆರೆಹೊರೆಯ ದೇಶಗಳ ಮೇಲೆಯೂ ಟೆಹ್ರಾನ್ ದಾಳಿ ನಡೆಸಿದ್ದು, ಪ್ರಾದೇಶಿಕ ದೇಶಗಳನ್ನು ಬಳಸಿಕೊಂಡು ವಾಷಿಂಗ್ಟನ್ ಅನ್ನು ಮಾತುಕತೆಯ ಮೇಜಿಗೆ ತರಲು ಇರಾನ್ ಹೀಗೆ ಮಾಡುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಸಮುದ್ರ ಕಾನೂನಿನ ಮೇಲಿನ ಯುಎನ್ ಸಮಾವೇಶ (UNCLOS) ಸೇರಿದಂತೆ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ, ಇರಾನ್ ಕೂಡ ಇಡೀ ಜಲಸಂಧಿಯ ಮೇಲೆ ಪೂರ್ಣ ಪ್ರಮಾಣದ ಸಾರ್ವಭೌಮತ್ವವನ್ನು ಹೊಂದಿಲ್ಲ, ಬದಲಿಗೆ ತನ್ನ ಗಡಿಯ ಸಮೀಪವಿರುವ ಕೆಲವು ಕರಾವಳಿ ಪ್ರದೇಶಗಳ ಮೇಲಷ್ಟೇ ನಿಯಂತ್ರಣ ಹೊಂದಿದೆ.

ಯುಎನ್‌ಸಿಎಲ್‌ಒಎಸ್ (UNCLOS) ಕರಾವಳಿ ದೇಶಗಳ ಪ್ರಾದೇಶಿಕ ಜಲಪ್ರದೇಶದ ಮೇಲಿನ ಸಾರ್ವಭೌಮತ್ವವನ್ನು ಎತ್ತಿಹಿಡಿಯುತ್ತದೆ. ಆದರೆ, ಈ ಪ್ರಾದೇಶಿಕ ಸಮುದ್ರದ ಮಿತಿಯನ್ನು 12 ನೌಟಿಕಲ್ ಮೈಲಿಗಳಿಗೆ (22 ಕಿಮೀ) ಸೀಮಿತಗೊಳಿಸುತ್ತದೆ ಹಾಗೂ ಹಡಗುಗಳು ತಡೆರಹಿತವಾಗಿ ಸಂಚರಿಸುವ ಹಕ್ಕನ್ನು ಹೊಂದಿರುತ್ತವೆ ಎಂದು ಸ್ಪಷ್ಟಪಡಿಸುತ್ತದೆ.

ಹಾರ್ಮುಝ್ ಜಲಸಂಧಿಯು ಇರಾನ್ ಮತ್ತು ಒಮಾನ್ ಕರಾವಳಿಗಳ ನಡುವೆ ಇರುವ ಅಂತಾರಾಷ್ಟ್ರೀಯ ಜಲಮಾರ್ಗವಾಗಿದೆ. ಅತ್ಯಂತ ಕಿರಿದಾದ ಭಾಗದಲ್ಲಿ, ಈ ಜಲಸಂಧಿಯು ಕೇವಲ 21 ನೌಟಿಕಲ್ ಮೈಲಿ (39 ಕಿಮೀ) ಅಗಲವನ್ನು ಹೊಂದಿದೆ. ಹೀಗಾಗಿ, ಎರಡೂ ದೇಶಗಳ 12 ನೌಟಿಕಲ್ ಮೈಲಿಗಳ ಪ್ರಾದೇಶಿಕ ಸಮುದ್ರ ಗಡಿಗಳು ಇಲ್ಲಿ ಒಂದಕ್ಕೊಂದು ಮುಖಾಮುಖಿಯಾಗುತ್ತವೆ.

ಅಮೆರಿಕ ಅಥವಾ ಇರಾನ್ ಎರಡೂ ಸಹ ಯುಎನ್‌ಸಿಎಲ್‌ಒಎಸ್ ಒಪ್ಪಂದಕ್ಕೆ ಅಂಕಿತ ಹಾಕಿಲ್ಲವಾದರೂ, ಅಂತಾರಾಷ್ಟ್ರೀಯ ಜಲಸಂಧಿಗಳ ಕುರಿತ ಈ ನಿಯಮಗಳನ್ನು ಸಾಂಪ್ರದಾಯಿಕ ಕಾನೂನೆಂದೇ ವ್ಯಾಪಕವಾಗಿ ಪರಿಗಣಿಸಲಾಗುತ್ತದೆ.

ಖತರ್ ನ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪೌಲ್ ಮಸ್ಗ್ರೇವ್ ಅವರ ಪ್ರಕಾರ, ಟ್ರಂಪ್ ಅವರು ಪ್ರಮುಖವಾಗಿ ಅಮೆರಿಕದ ಜನರನ್ನು, ವಿಶೇಷವಾಗಿ ತಮ್ಮ ಬೆಂಬಲಿಗರನ್ನು ತಲುಪಲು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

ಟ್ರಂಪ್ ಅಮೆರಿಕದ ರಿಯಾಲಿಟಿ ಟಿವಿಯ ಕೊಡುಗೆಯಾಗಿದ್ದು, ಅಂತಿಮವಾಗಿ ಅವರೊಬ್ಬ ‘ಶೋ ಮ್ಯಾನ್’ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.

“ಇವರು ದೊಡ್ಡದಾಗಿ ಮಾತನಾಡುವ ವ್ಯಕ್ತಿ. ಕೆಲವು ಸಂದರ್ಭಗಳಲ್ಲಿ ನೀವು ಇವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು, ಆದರೆ ಪ್ರತಿಯೊಂದು ಮಾತನ್ನೂ ಅಕ್ಷರಶಃ ತೆಗೆದುಕೊಳ್ಳಬಾರದು” ಎಂದು ಮಸ್ಗ್ರೇವ್ ಎಚ್ಚರಿಸಿದ್ದಾರೆ.

ವಿಶೇಷವಾಗಿ ಈ ಪ್ರಕರಣದಲ್ಲಿ ಟ್ರಂಪ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಈ ಜಲಸಂಧಿಯನ್ನು ಅಮೆರಿಕದ ಪ್ರದೇಶವನ್ನಾಗಿ ಮಾಡುವುದು ಭೌಗೋಳಿಕವಾಗಿ ಮತ್ತು ಕಾನೂನಾತ್ಮಕವಾಗಿ ಅಸಾಧ್ಯ. ಆದರೆ, ತಿಂಗಳುಗಳಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಇರಾನ್ ಮುಂದೆ ಸೋಲನ್ನೊಪ್ಪಿಕೊಳ್ಳಲು ಅಥವಾ ಹಿಂದೆ ಸರಿಯಲು ತಾವು ಸಿದ್ಧವಿಲ್ಲ ಎಂಬುದನ್ನು ಟ್ರಂಪ್ ತಮ್ಮ ಹೇಳಿಕೆಗಳ ಮೂಲಕ ತೋರಿಸುತ್ತಿದ್ದಾರೆ ಎಂದಿದ್ದಾರೆ.

ಸೌಜನ್ಯ: Aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News