ಐಫೋನ್ ಬಳಕೆದಾರರಿಗೆ ಆ್ಯಪಲ್‌ನಿಂದ ಸ್ಪೈವೇರ್ ಎಚ್ಚರಿಕೆ; ಡೇಟಾ ರಕ್ಷಿಸಲು ಹೀಗೆ ಮಾಡಿ!
Photo Credit : @jsrailton
ಸ್ಪೈವೇರ್ ದಾಳಿಯ ಮುನ್ನೆಚ್ಚರಿಕೆ ನೀಡಿದ ಆ್ಯಪಲ್, ಹ್ಯಾಕರ್ ಗಳಿಂದ ತಪ್ಪಿಸಿಕೊಳ್ಳಲು ಕೆಲವು ದಾರಿಗಳನ್ನು ತಿಳಿಸಿದೆ.
ಈ ವಾರ ನೂರಾರು ಗ್ರಾಹಕರಿಗೆ ಹೊಸ ಬೆದರಿಕೆ ಎಚ್ಚರಿಕೆಗಳನ್ನು ಕಳುಹಿಸಿರುವುದಾಗಿ ಆ್ಯಪಲ್ ದೃಢಪಡಿಸಿದೆ. ಬಳಕೆದಾರರ ಐಫೋನ್ ಗಳು ಮತ್ತು ಇತರ ಸಾಧನಗಳನ್ನು ‘ಮರ್ಸೆನರಿ ಸ್ಪೈವೇರ್’ ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದ್ದು, ಈ ಕುರಿತು ಆ್ಯಪಲ್ ಎಚ್ಚರಿಸಿದೆ.
ಆಗಸ್ಟ್ 13ರಂದು ಗುರುವಾರ 110 ದೇಶಗಳ ಐಫೋನ್ ಬಳಕೆದಾರರಿಗೆ ಸ್ಪೈವೇರ್ ಬೆದರಿಕೆ ನೋಟಿಫಿಕೇಶನ್ ಕಳುಹಿಸಿರುವುದಾಗಿ ಆ್ಯಪಲ್ ಹೇಳಿದೆ. ಒಟ್ಟು 150ಕ್ಕೂ ಹೆಚ್ಚು ದೇಶಗಳ ಆ್ಯಪಲ್ ಸಾಧನ ಮಾಲೀಕರಿಗೆ ಬೆದರಿಕೆ ಸಂಬಂಧಿತ ನೋಟಿಫಿಕೇಶನ್ ಕಳುಹಿಸಲಾಗಿದೆ.
ಆ್ಯಪಲ್ ಕಂಪನಿಯ ಅಧಿಕೃತ ವೆಬ್‌ಪುಟದಲ್ಲಿನ ಲೇಖನದಲ್ಲಿರುವ ವಿವರಗಳ ಪ್ರಕಾರ, ಬಳಕೆದಾರರಿಗೆ ಅವರ ಐಫೋನ್‌ನ ಲಾಕ್ ಸ್ಕ್ರೀನ್ ಮೇಲೆ ಪುಶ್ ನೋಟಿಫಿಕೇಶನ್ ಮೂಲಕ ಸ್ಪೈವೇರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ತಮ್ಮ ಆ್ಯಪಲ್ ಖಾತೆಗೆ ಲಾಗಿನ್ ಆಗಿರುವ ಬಳಕೆದಾರರು ಇಮೇಲ್ ಮೂಲಕವೂ ಅಧಿಸೂಚನೆ ಸ್ವೀಕರಿಸಬಹುದು.
“ಆ್ಯಪಲ್ ನಿಮ್ಮ ಐಫೋನ್‌ನ್ನು ಗುರಿಯಾಗಿಸಿಕೊಂಡಿರುವ ಮರ್ಸಿನರಿ ಸ್ಪೈವೇರ್ ದಾಳಿಯನ್ನು ಪತ್ತೆ ಮಾಡಿದೆ. ನಿಮ್ಮ ಡೇಟಾ ಮತ್ತು ಸಾಧನವನ್ನು ರಕ್ಷಿಸಿಕೊಳ್ಳಲು ನೀವು ಈ ಕ್ರಮಗಳನ್ನು ತೆಗೆದುಕೊಳ್ಳಬಹುದು” ಎಂದು ಸಂದೇಶ ನೀಡಲಾಗಿದೆ.
ಸಂಭಾವ್ಯ ಸ್ಪೈವೇರ್ ಸಂತ್ರಸ್ತರು ಮುಂದೇನು ಮಾಡಬೇಕು ಎಂಬುದರ ಕುರಿತು ಪ್ರಮುಖ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವಂತೆ ಆ್ಯಪಲ್ ಬಳಕೆದಾರರಿಗೆ ‘ಸಹಾಯ’ ಪಡೆಯಲು ಅಥವಾ ‘ಲಾಕ್‌ಡೌನ್ ಮೋಡ್’ಗೆ ಹೋಗಲು ಆಯ್ಕೆಗಳನ್ನು ತೋರಿಸಿದೆ. ಹೀಗೆ ಆ್ಯಪಲ್ ಮೇಲೆ ಗುರಿ ಇಟ್ಟಿರುವ ಸ್ಪೈವೇರ್ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಪನಿ ತಿಳಿಸಿಲ್ಲ.
ಸರ್ಕಾರಗಳೂ ಇಂತಹ ರಾಜ್ಯಪೋಷಿತ ಸ್ಪೈವೇರ್ ಹ್ಯಾಕಿಂಗ್ ಕಾರ್ಯಕ್ರಮಗಳನ್ನು ಬಳಕೆದಾರರ ಮೇಲೆ ನಡೆಸುತ್ತವೆ ಎಂಬುದಕ್ಕೆ ಕೆಲ ವರ್ಷಗಳ ಹಿಂದಿನ ಪೆಗಾಸಸ್ ಮಾಲ್‌ವೇರ್‌ನಿಂದ (ಇಸ್ರೇಲಿ NSO ಗ್ರೂಪ್‌ನ ವಿವಾದಾತ್ಮಕ ಪೆಗಾಸಸ್ ಮಾಲ್‌ವೇರ್) ಸಾಕ್ಷ್ಯ ಸಿಕ್ಕಿದೆ.
ಆ್ಯಪಲ್ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ತನ್ನ ಗ್ರಾಹಕರಿಗೆ ತಮ್ಮ ಐಫೋನ್‌ಗಳು, ಐಪ್ಯಾಡ್‌ಗಳು ಅಥವಾ ಮ್ಯಾಕ್‌ಗಳು ಸ್ಪೈವೇರ್‌ನೊಂದಿಗೆ ರಾಜಿ ಮಾಡಿಕೊಂಡಿರಬಹುದು ಎಂದು ಎಚ್ಚರಿಸಿದೆ. ಪ್ರತಿ ಬಾರಿ ಇಂತಹ ಎಚ್ಚರಿಕೆಗಳು ಬಂದಾಗ, ಭಾರತ ಸೇರಿದಂತೆ ವಿಶ್ವದಾದ್ಯಂತ ಸರ್ಕಾರಗಳು ಬಳಸಬಹುದಾದ ಸ್ಪೈವೇರ್‌ಗಳು ಜನರ ಮೇಲೆ ಬೀರುವ ಬೆದರಿಕೆಯ ಬಗ್ಗೆ ಬೆಳಕು ಚೆಲ್ಲುತ್ತವೆ.
ಈಗಿನ ಸಂಭಾವ್ಯ ಸ್ಪೈವೇರ್ ದಾಳಿಗಳೂ ಸರ್ಕಾರದ ವಿಮರ್ಶಕರು ಮತ್ತು ನಾಗರಿಕ ಸಮಾಜದ ಸದಸ್ಯರ ವಿರುದ್ಧ ನಿಯೋಜಿಸಲಾಗುವ ಸರ್ಕಾರಗಳು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾವಲು ತಂತ್ರಜ್ಞಾನಗಳು ಹರಡುತ್ತಿರುವುದನ್ನು ಒತ್ತಿ ಹೇಳುತ್ತಿವೆ. ಆ್ಯಪಲ್ ವಿಚಾರಕ್ಕೆ ಬಂದರೆ, ಭದ್ರತೆ ಮತ್ತು ಗೌಪ್ಯತೆ ಅದರ ಬ್ರ್ಯಾಂಡ್‌ನ ಕೇಂದ್ರಬಿಂದುವಾಗಿದೆ. ಹೀಗಾಗಿ ಸ್ಪೈವೇರ್ ಬಹಳ ಪ್ರಮುಖ ಬೆದರಿಕೆಯಾಗಿದೆ.
ಬಳಕೆದಾರರು ತಿಳಿದುಕೊಳ್ಳಬೇಕಾಗಿರುವುದೇನು?
ಇತ್ತೀಚೆಗೆ ಮರ್ಸೆನರಿ ಸ್ಪೈವೇರ್ ಬಗ್ಗೆ ಆ್ಯಪಲ್ ಕಂಪನಿಯಿಂದ ಬೆದರಿಕೆ ನೋಟಿಫಿಕೇಶನ್ ಸ್ವೀಕರಿಸಿದ್ದೀರಾ? ಹೌದು ಎಂದಾದರೆ, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ:
ಆ್ಯಪಲ್ ಸ್ಪೈವೇರ್ ಬೆದರಿಕೆ ಅಧಿಸೂಚನೆ ನಿಮಗೆ ಕಳುಹಿಸಲಾಗಿದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಲು ನಿಮ್ಮ ಐಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ.
ಐಫೋನ್‌ನ ನೋಟಿಫಿಕೇಶನ್ ನಕಲಿಯಾಗಿರಬಹುದು ಎಂದು ಚಿಂತೆ ಇದ್ದರೆ, ಪರಿಶೀಲಿಸಲು accounts.apple.com ಗೆ ಹೋಗಿ.
ನೋಟಿಫಿಕೇಶನ್ ನಿಜವೆಂದು ದೃಢವಾದ ನಂತರ, ಪೆಗಾಸಸ್ ಶೈಲಿಯ ಮರ್ಸೆನರಿ ಸ್ಪೈವೇರ್‌ನಿಂದ ಸಂಭಾವ್ಯ ಗುರಿಯಾಗಿದ್ದೀರಿ ಎಂದರ್ಥ.
ನೀವು ಸ್ಪೈವೇರ್‌ಗೆ ಗುರಿಯಾಗುವ ನಿಜವಾದ ಅಪಾಯದಲ್ಲಿದ್ದೀರಿ ಎಂದು ಭಾವಿಸಿದರೆ, ನಿಮ್ಮ ಐಫೋನ್ ಅಥವಾ ಐಪ್ಯಾಡ್‌ನಲ್ಲಿ ಆ್ಯಪಲ್‌ನ ಲಾಕ್‌ಡೌನ್ ಮೋಡ್ ಅನ್ನು ಸಕ್ರಿಯಗೊಳಿಸಬಹುದು. Settings ಅಪ್ಲಿಕೇಶನ್ ತೆರೆಯಿರಿ ಮತ್ತು Privacy and Security ಟ್ಯಾಪ್ ಮಾಡಿ. ನಂತರ ಕೆಳಗೆ ಸ್ಕ್ರೋಲ್ ಮಾಡಿದರೆ ಕೊನೆಯಲ್ಲಿ ಲಾಕ್‌ಡೌನ್ ಮೋಡ್ ಕಾಣಿಸುತ್ತದೆ.
ಲಾಕ್‌ಡೌನ್ ಮೋಡ್ ಅನ್ನು ಟ್ಯಾಪ್ ಮಾಡಿ, ಅದನ್ನು ಆನ್ ಮಾಡಿ.
ಲಾಕ್‌ಡೌನ್ ಮೋಡ್ ಸಕ್ರಿಯಗೊಳಿಸುವ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಸಾಧನವನ್ನು ಹೇಗೆ ಸುರಕ್ಷಿತಗೊಳಿಸುವುದು ಎಂಬುದರ ಕುರಿತು ಆ್ಯಪಲ್ ಹೆಚ್ಚುವರಿ ಮಾರ್ಗದರ್ಶನವನ್ನೂ ನೀಡುತ್ತದೆ.
ಗಮನಿಸಿ, ಆ್ಯಪಲ್‌ನ ಬೆದರಿಕೆ ನೋಟಿಫಿಕೇಶನ್ ಸ್ವೀಕರಿಸುವುದರಿಂದ ಮಾತ್ರ ನೀವು ಸ್ಪೈವೇರ್ ಬಳಸಿ ಹ್ಯಾಕ್ ಆಗಿದ್ದೀರಿ ಎಂಬುದು ದೃಢವಾಗುವುದಿಲ್ಲ. ನಿಮ್ಮ ಸಾಧನ ಮತ್ತು ಡೇಟಾವನ್ನು ರಕ್ಷಿಸಲು ನೀವು ತಕ್ಷಣದ ಕ್ರಮ ಕೈಗೊಳ್ಳಬಹುದು.
ಸ್ಪೈವೇರ್ ವಿರುದ್ಧ ಆ್ಯಪಲ್‌ನ ಪ್ರಯತ್ನಗಳು
2025ರಲ್ಲಿ ಐಫೋನ್ 17ರ ಲೈನ್‌ಅಪ್ ಪರಿಚಯಿಸಿದಾಗ ಮತ್ತು ಮೊದಲ ಐಫೋನ್ ಏರ್ ಜೊತೆಗೆ, ಆ್ಯಪಲ್ ತನ್ನ A19 ಮತ್ತು A19 Pro ಚಿಪ್‌ಗಳು, ಆಪರೇಟಿಂಗ್ ಸಿಸ್ಟಂ ಮತ್ತು ಡೆವಲಪ್‌ಮೆಂಟ್ ಟೂಲ್‌ಗಳಲ್ಲಿ ಅತ್ಯಾಧುನಿಕ ಸ್ಪೈವೇರ್ ದಾಳಿಗಳ ವಿರುದ್ಧ ‘ಮೆಮೊರಿ ಇಂಟೆಗ್ರಿಟಿ ಎನ್‌ಫೋರ್ಸ್‌ಮೆಂಟ್’ (MIE) ಎಂದು ಕರೆಯಲಾಗುವ ಹೊಸ ರೀತಿಯ ರಕ್ಷಣೆಯನ್ನು ಪರಿಚಯಿಸಿರುವುದಾಗಿ ಘೋಷಿಸಿತು.
ಸಾಧನದ ಮೆಮೊರಿಯಲ್ಲಿ ಭದ್ರತಾ ದೌರ್ಬಲ್ಯಗಳನ್ನು ಪತ್ತೆಹಚ್ಚಲು ಮತ್ತು ಪ್ಯಾಚ್ ಮಾಡಲು MIE ಅನ್ನು ನಿರ್ಮಿಸಲಾಗಿದೆ. ಹೀಗಾಗಿ ಬೆದರಿಕೆದಾರರು ಸ್ಪೈವೇರ್ ಬಳಸಿ ಐಫೋನ್‌ಗೆ ಧಕ್ಕೆ ತರುವುದು ಕಷ್ಟವಾಗುತ್ತದೆ.
ಇದನ್ನು ಆರಂಭದಲ್ಲಿ ಹಾರ್ಡ್‌ವೇರ್‌ನ ಬಗ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಉದ್ದೇಶದಿಂದ ಪರಿಚಯಿಸಲಾಗಿದ್ದ ಎನ್‌ಹಾನ್ಸ್‌ಡ್ ಮೆಮೊರಿ ಟ್ಯಾಗಿಂಗ್ ಎಕ್ಸ್‌ಟೆನ್ಷನ್ (EMTE) ಮೇಲೆ ನಿರ್ಮಿಸಲಾಗಿದೆ. MIE ಉದ್ಯಮದಲ್ಲೇ ಮೊದಲ ಬಾರಿಗೆ ಪರಿಚಯಿಸಲಾದ ರಕ್ಷಣೆ ಎಂದು ಆ್ಯಪಲ್ ಹೇಳಿಕೊಂಡಿದೆ.
ಈ ನಡುವೆ, ಲಾಕ್‌ಡೌನ್ ಮೋಡ್ ಅನ್ನು 2022ರಲ್ಲಿ iOS 16ರ ಭಾಗವಾಗಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.