ಹಾಲಿನಿಂದ ಗ್ಯಾಸ್, ಹೊಟ್ಟೆ ಉಬ್ಬರಿಸುವಿಕೆ ಬರುತ್ತದೆಯೇ? ವೈದ್ಯರು ನೀಡುವ ಸಲಹೆಗಳೇನು?

Update: 2026-08-03 23:00 IST

Photo Credit: AI

ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ವಿವೇಕ್ ವೀರಂ ರೆಡ್ಡಿ ಅವರ ಪ್ರಕಾರ, ಹಾಲಿನಲ್ಲಿ ಕಂಡುಬರುವ ಸಹಜ ಸಕ್ಕರೆಯಾದ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಹಾಲು ನಿಮಗೆ ಸೂಕ್ತವೇ ಎಂಬುದು ನಿರ್ಧಾರವಾಗುತ್ತದೆ.

ಹಾಲನ್ನು ಬಹಳ ಹಿಂದಿನಿಂದಲೂ ಪೌಷ್ಟಿಕಾಂಶಭರಿತ ಆಹಾರವೆಂದು ಪರಿಗಣಿಸಲಾಗಿದೆ. ಅದರಲ್ಲಿರುವ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಿಗಾಗಿ ಅದನ್ನು ಪ್ರಶಂಸಿಸಲಾಗುತ್ತದೆ. ಆದರೆ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ವಿವೇಕ್ ವೀರಂ ರೆಡ್ಡಿ ಅವರ ಪ್ರಕಾರ, ಹಾಲಿನಲ್ಲಿ ಕಂಡುಬರುವ ಸಹಜ ಸಕ್ಕರೆಯಾದ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಹಾಲು ನಿಮಗೆ ಸೂಕ್ತವೇ ಎಂಬುದು ನಿರ್ಧಾರವಾಗುತ್ತದೆ. ಡಾ. ವಿವೇಕ್ ವೀರಂ ರೆಡ್ಡಿ ಗುಂಟೂರಿನ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್. ಅವರು ಕೆಎಂಸಿ ಮಣಿಪಾಲದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದು, ಎಲ್ಲೂರಿನ ಅಲ್ಲೂರಿ ಸೀತಾರಾಮ ರಾಜು ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಜನರಲ್ ಮೆಡಿಸಿನ್‌ನಲ್ಲಿ ಎಂಡಿ ಪದವಿ ಪಡೆದಿದ್ದಾರೆ.

ಮೂಲ ವಿಡಿಯೊ: https://www.instagram.com/reel/Dbf1XQ3yNMi/?utm_source=ig_web_button_share_sheet

ಎಲ್ಲರೂ ಹಾಲು ಕುಡಿಯಬಹುದೇ?

ಎದೆಹಾಲು ಮತ್ತು ಪ್ರಾಣಿಗಳ ಹಾಲಿನ ನಡುವಿನ ವ್ಯತ್ಯಾಸವನ್ನು ವಿವರಿಸಿರುವ ಅವರು, ಆಗಸ್ಟ್ 1ರಂದು ಪ್ರಕಟಿಸಿರುವ ಪೋಸ್ಟ್‌ನಲ್ಲಿ, "ನಾವು ಚಿಕ್ಕವಯಸ್ಸಿನಲ್ಲಿ ಎದೆಹಾಲು ಸೇವಿಸಿ ಬೆಳೆದಿದ್ದೇವೆ. ಬಹಳಷ್ಟು ಮಂದಿ ದೊಡ್ಡವರಾದ ಮೇಲೆ ಪ್ರಾಣಿಗಳ ಹಾಲು ಸೇವಿಸುತ್ತೇವೆ. ಆದರೆ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಿಮ್ಮ ದೇಹ ಎಷ್ಟು ಲ್ಯಾಕ್ಟೇಸ್ ಕಿಣ್ವವನ್ನು (enzyme) ಉತ್ಪಾದಿಸುತ್ತದೆ ಎಂಬುದನ್ನು ಇದು ಅವಲಂಬಿಸಿರುತ್ತದೆ" ಎಂದು ಹೇಳಿದ್ದಾರೆ.

ಲ್ಯಾಕ್ಟೋಸ್ ಅನ್ನು ಒಡೆಯುವ ಕಿಣ್ವವೇ ಲ್ಯಾಕ್ಟೇಸ್. ದೇಹವು ಈ ಕಿಣ್ವವನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದಿದ್ದರೆ ಜನರಲ್ಲಿ ಲ್ಯಾಕ್ಟೋಸ್ ಅಸಹಿಷ್ಣುತೆ ಬೆಳೆಯಬಹುದು. ಇದರಿಂದ ಹಾಲನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಕೆಲವರಿಗೆ ಮಾತ್ರ ಹಾಲು ಉತ್ತಮ ಏಕೆ?

ವಿವೇಕ್ ವೀರಂ ರೆಡ್ಡಿ ಅವರ ಪ್ರಕಾರ, ಜೆನೆಟಿಕ್ಸ್ ಮತ್ತು ಪೂರ್ವಜರು ಲ್ಯಾಕ್ಟೋಸ್ ಸಹಿಷ್ಣುತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. "ಉತ್ತರ ಭಾರತ ಮತ್ತು ಯುರೋಪ್‌ನ ಅನೇಕ ಮಂದಿ ಐತಿಹಾಸಿಕವಾಗಿ ಹೆಚ್ಚು ಹಾಲು ಸೇವಿಸಿರುವುದರಿಂದ, ಅವರಲ್ಲಿ ಜೀವನಪರ್ಯಂತ ಲ್ಯಾಕ್ಟೋಸ್ ಸಹಿಷ್ಣುತೆ ಹೆಚ್ಚಾಗಿದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣ ಭಾರತೀಯರಲ್ಲಿ ಲ್ಯಾಕ್ಟೋಸ್ ಅಸಹಿಷ್ಣುತೆ ಹೆಚ್ಚಾಗಿದೆ. ಹೀಗಾಗಿ ಕೆಲವರಿಗೆ ಹಾಲು ಕುಡಿದ ನಂತರ ಜೀರ್ಣ ಸಮಸ್ಯೆಗಳು ಕಾಣಿಸಬಹುದು. ಉತ್ತರ ಯುರೋಪಿಯನ್ನರು ಜೀವನಪರ್ಯಂತ ಅತ್ಯಧಿಕ ಪ್ರಮಾಣದಲ್ಲಿ ಲ್ಯಾಕ್ಟೋಸ್ ಸಹಿಷ್ಣುತೆ ಹೊಂದಿದ್ದಾರೆ ಎಂದು ಸಂಶೋಧನೆಗಳು ನಿರಂತರವಾಗಿ ತೋರಿಸಿವೆ. ಆದರೆ ಅನುವಂಶಿಕ ವ್ಯತ್ಯಾಸಗಳಿಂದಾಗಿ ದಕ್ಷಿಣ ಭಾರತೀಯರು ಉತ್ತರ ಭಾರತೀಯರಿಗೆ ಹೋಲಿಸಿದರೆ ಹೆಚ್ಚು ಲ್ಯಾಕ್ಟೋಸ್ ಅಸಹಿಷ್ಣುತೆ (malabsorption) ಹೊಂದಿದ್ದಾರೆ" ಎಂದು ವೈದ್ಯರು ವಿವರಿಸಿದ್ದಾರೆ.

ಅಸಹಿಷ್ಣುತೆಯ ಲಕ್ಷಣಗಳು ಹೇಗಿರುತ್ತವೆ?

"ಹಾಲು ಕುಡಿದ ನಂತರ ಅಹಿತಕರ ಭಾವನೆ ಉಂಟಾದರೆ ಅದು ಹಾಲು ಅನಾರೋಗ್ಯಕರ ಎಂಬ ಅರ್ಥವಲ್ಲ. ಹಾಲು ಕುಡಿದ ಬಳಿಕ ಹೊಟ್ಟೆ ಉಬ್ಬರಿಸುವಿಕೆ, ಗ್ಯಾಸ್, ಹೊಟ್ಟೆಯ ಅಸ್ವಸ್ಥತೆ ಅಥವಾ ಅತಿಸಾರ ಉಂಟಾದರೆ, ಅದು ಹಾಲು ಹಾನಿಕಾರಕ ಎಂಬುದಕ್ಕಿಂತ ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ಸೂಚಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಹಾಲಿನ ಸೇವನೆಯನ್ನು ಕಡಿಮೆ ಮಾಡಿದರೆ ಲಕ್ಷಣಗಳು ಸುಧಾರಿಸುತ್ತವೆಯೇ ಎಂಬುದನ್ನು ಗಮನಿಸುವುದು ಸೂಕ್ತ" ಎಂದು ವೈದ್ಯರು ಹೇಳುತ್ತಾರೆ.

ಅಸಹಿಷ್ಣುತೆಯ ಸಾಮಾನ್ಯ ಲಕ್ಷಣಗಳು

ಹೊಟ್ಟೆ ಉಬ್ಬರಿಸುವಿಕೆ

ಗ್ಯಾಸ್

ಹೊಟ್ಟೆ ನೋವು

ಅತಿಸಾರ

ಹಾಲು ಸೇವನೆ ನಿಲ್ಲಿಸುವುದು ಉತ್ತಮವೇ?

ಹಾಲು ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ವೈದ್ಯರು ಸಲಹೆ ನೀಡುವುದಿಲ್ಲ. "ನೀವು ಕಲಬೆರಕೆ ಇಲ್ಲದ, ಕನಿಷ್ಠ ಸಂಸ್ಕರಿಸಿದ ಹಾಲನ್ನು ಸೇವಿಸುತ್ತಿದ್ದು, ನಿಮ್ಮ ದೇಹ ಅದನ್ನು ಚೆನ್ನಾಗಿ ಸಹಿಸಿಕೊಳ್ಳುತ್ತಿದ್ದರೆ ಹಾಲು ಸೇವನೆ ನಿಲ್ಲಿಸುವ ಅಗತ್ಯವಿಲ್ಲ. ಸಮತೋಲಿತ ಆಹಾರದ ಭಾಗವಾಗಿ ಮಿತವಾಗಿ ಹಾಲನ್ನು ಸೇವಿಸಬಹುದು. ಆದರೆ ಹಾಲು ನಿರಂತರವಾಗಿ ಜೀರ್ಣ ಸಮಸ್ಯೆ ಉಂಟುಮಾಡುತ್ತಿದ್ದರೆ, ಅದರ ಸೇವನೆ ನಿಲ್ಲಿಸುವುದರಿಂದ ಪೌಷ್ಟಿಕಾಂಶದ ಹಿನ್ನಡೆಯಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಸೇವನೆ ನಿಲ್ಲಿಸಿದರೆ ಪೌಷ್ಟಿಕಾಂಶ ಪಡೆಯುವುದು ಹೇಗೆ?

ವೈದ್ಯರ ಪ್ರಕಾರ, ಹಾಲಿನಲ್ಲಿ ಕಂಡುಬರುವ ಅನೇಕ ಪೌಷ್ಟಿಕಾಂಶಗಳನ್ನು ಇತರ ಆಹಾರಗಳಿಂದಲೂ ಪಡೆಯಬಹುದು. "ಬಾದಾಮಿಯಂತಹ ಆಹಾರಗಳಿಂದ ಕ್ಯಾಲ್ಸಿಯಂ ಪಡೆಯಬಹುದು. ಆದರೆ ಅವುಗಳಲ್ಲಿ ಕ್ಯಾಲರಿ ಹೆಚ್ಚಿರುತ್ತದೆ. ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೊಟೀನ್ ಮತ್ತು ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ. ಹಾಲು ಜೀರ್ಣವಾಗದವರಿಗೆ ಇವು ಉತ್ತಮ ಪರ್ಯಾಯವಾಗಿರುತ್ತವೆ" ಎಂದು ಅವರು ವಿವರಿಸಿದ್ದಾರೆ.

ಅವರ ಪ್ರಕಾರ, ಪೂರ್ಣ ಗ್ಲಾಸ್ ಹಾಲು ಕುಡಿಯುವ ಬದಲು ಮೊಸರು, ಪನೀರ್, ಚೀಸ್ ಹಾಗೂ ಹಾಲಿನ ಸಣ್ಣ ಪ್ರಮಾಣವನ್ನು ಸೇವಿಸುವುದು ಉತ್ತಮ. ಎಲ್ಲರಿಗೂ ಒಂದೇ ರೀತಿಯ ಆಹಾರ ಪದ್ಧತಿ ಒಗ್ಗುವುದಿಲ್ಲ. ಹಾಲು ದೇಹಕ್ಕೆ ಸರಿಹೊಂದದಿದ್ದರೆ ಮಿತ ಪ್ರಮಾಣದಲ್ಲಿ ಸೇವಿಸುವುದನ್ನು ಮುಂದುವರಿಸಬಹುದು. ಸ್ವಲ್ಪ ಪ್ರಮಾಣವನ್ನೂ ಸೇವಿಸಲು ಸಾಧ್ಯವಾಗದಿದ್ದರೆ, ಪರ್ಯಾಯ ಪೌಷ್ಟಿಕ ಆಹಾರಗಳು ಸಾಕಷ್ಟಿವೆ.

ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮದಲ್ಲಿನ ಮಾಹಿತಿಯನ್ನು ಆಧರಿಸಿ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇದು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈಯಕ್ತಿಕ ಆರೋಗ್ಯ ಸಮಸ್ಯೆಗಳಿಗಾಗಿ ವಿಶ್ವಾಸಾರ್ಹ ವೈದ್ಯರ ಸಲಹೆ ಪಡೆಯಿರಿ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News