ಹಿಮದಡಿಯಲ್ಲಿ ಸಮಾಧಿಯಾದ ಪರ್ವತಾರೋಹಿಗಳ ಪೀಳಿಗೆ; ಬ್ರಾಡ್ ಪೀಕ್ ದುರಂತದಲ್ಲಿ ಕಳೆದು ಹೋದ ಜ್ಞಾನ

Update: 2026-08-03 23:36 IST

Photo Credit: Social Media

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕರಕೋರಂ ಶ್ರೇಣಿಯಲ್ಲಿರುವ ಜಗತ್‌ಪ್ರಸಿದ್ಧ ‘ಬ್ರಾಡ್ ಪೀಕ್’ ಪರ್ವತದಲ್ಲಿ ಗುರುವಾರ ಸಂಭವಿಸಿದ ಭೀಕರ ಹಿಮಪಾತದಲ್ಲಿ ನೇಪಾಳದ ಖ್ಯಾತ ಪರ್ವತಾರೋಹಿ ನಿರ್ಮಲ್ ಪೂರ್ಜಾ (ನಿಮ್ಸ್‌ದೈ) ಸೇರಿದಂತೆ ಆರು ಮಂದಿ ನೇಪಾಳಿ ಪರ್ವತಾರೋಹಿಗಳು ಮತ್ತು ನಾಲ್ವರು ವಿದೇಶಿ ಪರ್ವತಾರೋಹಿಗಳು ದುರಂತ ಅಂತ್ಯ ಕಂಡಿದ್ದಾರೆ.

ಬ್ರಾಡ್ ಪೀಕ್ ಹಿಮಪಾತವು ಮತ್ತೊಂದು ಪರ್ವತ ದುರಂತವಲ್ಲ. ನೇಪಾಳದ ಮಟ್ಟಿಗೆ ಹೈ ಆಲ್ಟಿಟ್ಯೂಡ್ ಪರ್ವತಾರೋಹಿಗಳ ಕೌಶಲ್ಯ ಮತ್ತು ಅನುಭವದ ಮೇಲೆ ದಶಕಗಳಿಂದ ನಿರ್ಮಿಸಲಾದ ಉದ್ಯಮಕ್ಕೆ ಬಂದ ದೊಡ್ಡ ವಿಪತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕರಕೋರಂ ಶ್ರೇಣಿಯಲ್ಲಿರುವ ಜಗತ್‌ಪ್ರಸಿದ್ಧ ‘ಬ್ರಾಡ್ ಪೀಕ್’ ಪರ್ವತದಲ್ಲಿ ಗುರುವಾರ ಸಂಭವಿಸಿದ ಭೀಕರ ಹಿಮಪಾತದಲ್ಲಿ ನೇಪಾಳದ ಖ್ಯಾತ ಪರ್ವತಾರೋಹಿ ನಿರ್ಮಲ್ ಪೂರ್ಜಾ (ನಿಮ್ಸ್‌ದೈ) ಸೇರಿದಂತೆ ಆರು ಮಂದಿ ನೇಪಾಳಿ ಪರ್ವತಾರೋಹಿಗಳು ಮತ್ತು ನಾಲ್ವರು ವಿದೇಶಿ ಪರ್ವತಾರೋಹಿಗಳು ದುರಂತ ಅಂತ್ಯ ಕಂಡಿದ್ದಾರೆ. ನೇಪಾಳಿ ಪರ್ವತಾರೋಹಣ ನಿರ್ವಾಹಕರು ತಿಳಿಸಿರುವ ಮಾಹಿತಿಯ ಪ್ರಕಾರ, ಒಂದೇ ಅಪಘಾತದಲ್ಲಿ ಅನುಭವಿ, ಅಂತಾರಾಷ್ಟ್ರೀಯವಾಗಿ ಗುರುತಿಸಲಾದ ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ.

“ಈ ದುರಂತವು ಆರು ನೇಪಾಳಿಗಳು ಸೇರಿದಂತೆ 10 ಪರ್ವತಾರೋಹಿಗಳ ಸಾವಿನ ಸುದ್ದಿಯಲ್ಲ. ನೇಪಾಳಿ ಪರ್ವತಾರೋಹಣವು ದಶಕಗಳಿಂದ ವಿಶ್ವ ವೇದಿಕೆಯಲ್ಲಿ ನಿರ್ಮಿಸಿರುವ ಹೆಮ್ಮೆಯ ಪೀಳಿಗೆಯ ಅನುಭವ, ನಾಯಕತ್ವ ಮತ್ತು ದಾಖಲೆಗಳಿಗೆ ಬಿದ್ದ ಹೊಡೆತವಾಗಿದೆ” ಎಂದು ಎಕ್ಸ್‌ಪೆಡಿಶನ್ ಅಪರೇಟರ್ಸ್ ಅಸೋಸಿಯೇಶನ್ ಪ್ರಧಾನಿ ಕಾರ್ಯದರ್ಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಐವರು ಪರ್ವತಾರೋಹಿಗಳನ್ನು ಏಕಕಾಲದಲ್ಲಿ ಕಳೆದುಕೊಳ್ಳುವುದು ದೇಶದ ಪರ್ವತಾರೋಹಣ ಯಾತ್ರೆಯ ಉದ್ಯಮದಲ್ಲಿ ದೀರ್ಘಕಾಲ ಮಾಯದ ಗಾಯವಾಗಿ ಉಳಿಯಲಿದೆ.

ಅಂತಾರಾಷ್ಟ್ರೀಯ ಗುಣಮಟ್ಟದ ಪರ್ವತಾರೋಹಿಗಳನ್ನು ರಾತ್ರೋರಾತ್ರಿ ಸೃಜಿಸಲು ಸಾಧ್ಯವಿಲ್ಲ. ವರ್ಷಗಳ ತರಬೇತಿ, ಪುನರಾವರ್ತಿತ ಪರ್ವತಾರೋಹಣಗಳು ಮತ್ತು ಪ್ರಾಯೋಗಿಕ ಅನುಭವದ ಅಗತ್ಯವಿದೆ. ಹಾಗಿದ್ದರೆ ಭೀಕರ ಹಿಮ ದುರಂತದಲ್ಲಿ ಮೃತಪಟ್ಟವರು ಯಾರು?

ನಿಮ್ಸ್‌ದೈ: ಪರ್ವತಾರೋಹಣ ದಾಖಲೆಗಳನ್ನು ಮರುವ್ಯಾಖ್ಯಾನಿಸಿದವರು

ನಿರ್ಮಲ್ ಪುರ್ಜಾ ಆರು ತಿಂಗಳು ಮತ್ತು ಆರು ದಿನಗಳಲ್ಲಿ 8,000 ಮೀಟರ್‌ಗಿಂತ ಹೆಚ್ಚಿನ ವಿಶ್ವದ ಎಲ್ಲಾ 14 ಶಿಖರಗಳನ್ನು ಏರಿದ ನಂತರ 2019ರಲ್ಲಿ ಜಾಗತಿಕ ಖ್ಯಾತಿ ಪಡೆದಿದ್ದರು. ಅದಕ್ಕೆ ಮೊದಲು ಈ ಸಾಧನೆಗೆ ಏಳು ವರ್ಷಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದ್ದವರ ದಾಖಲೆ ಮುರಿದಿದ್ದರು. ಅವರ ಸಾಧನೆಯನ್ನು ನಂತರ ನೆಟ್‌ಫ್ಲಿಕ್ಸ್ ಚಲನಚಿತ್ರ ‘14 ಪೀಕ್ಸ್: ನಥಿಂಗ್ ಈಸ್ ಇಂಪಾಸಿಬಲ್‌’ನಲ್ಲಿ ದಾಖಲಿಸಲಾಗಿತ್ತು.

ನೇಪಾಳ ಮೂಲದ ಪರ್ವತಾರೋಹಿ ಬ್ರಿಟಿಷ್ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದರು. ವಿಶೇಷ ದೋಣಿ ಸೇವೆಯನ್ನೂ ಸಲ್ಲಿಸಿದ್ದರು. ಹೈ-ಆಲ್ಟಿಟ್ಯೂಡ್ ಪರ್ವತಾರೋಹಣಕ್ಕಾಗಿ ಅವರಿಗೆ 2018ರಲ್ಲಿ ಒಬಿಇ (OBE) ಪ್ರಶಸ್ತಿಯೂ ದೊರೆತಿದೆ. ಹಿಮಾಲಯನ್ ಪರ್ವತಾರೋಹಣದ ಅತಿ ದೊಡ್ಡ ಸಾಧನೆಯಾಗಿರುವ ಮೊದಲ ‘ವಿಂಟರ್ ಆಸ್ಕೆಂಟ್ ಆಫ್ ಕೆ2’ ಪೂರ್ಣಗೊಳಿಸಿದ ಎಲ್ಲಾ ನೇಪಾಳಿಗರ ತಂಡದ ಭಾಗವಾಗಿದ್ದರು ನಿರ್ಮಲ್.

ನಿರ್ಮಲ್ ಅವರು ಮೂಲತಃ ಬ್ರಾಡ್ ಪೀಕ್ ಪರ್ವತಾರೋಹಣ ತಂಡದಲ್ಲಿರಲು ಯೋಜಿಸಿರಲಿಲ್ಲ. ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಅವರು ಹೇಳಿರುವ ಪ್ರಕಾರ, ಪೂರಕ ಆಮ್ಲಜನಕವಿಲ್ಲದೆ ಎಲ್ಲಾ 14 ಎಂಟು ಸಾವಿರ ಮೀಟರ್‌ಗಳ ಪರ್ವತಗಳನ್ನು ಎರಡು ಬಾರಿ ಏರಿದ ಮೊದಲ ವ್ಯಕ್ತಿಯಾಗುವ ದಾಖಲೆ ನಿರ್ಮಿಸಲು ಅವರು ಬ್ರಾಡ್ ಪೀಕ್ ತಂಡ ಸೇರಿದ್ದರು. ಆದರೆ ಅವರ ದೇಹವು ಹಿಮಪಾತ ಸಂಭವಿಸಿದ ಮೂರು ದಿನಗಳ ನಂತರ 5,700 ಮೀಟರ್ ಎತ್ತರದಲ್ಲಿ ಪತ್ತೆಯಾಗಿದೆ.

ನೇಪಾಳ ಕಳೆದುಕೊಂಡ ಐವರು ಪರ್ವತಾರೋಹಿಗಳು ಯಾರು?

ನಿರ್ಮಲ್ ಪುರ್ಜಾ ಅವರಲ್ಲದೆ ಇತರ ಐವರು ಉತ್ತಮ ಗುಣಮಟ್ಟದ ಪರ್ವತಾರೋಹಿಗಳನ್ನು ನೇಪಾಳ ಕಳೆದುಕೊಂಡಿದೆ. ಅವರೆಂದರೆ ಕಿಲಿ ಪೆಂಬಾ ಶೆರ್ಪಾ, ಪುರ್ ಬಹಾದ್ದೂರ್ ಗುರುಂಗ್, ನಿಮಾ ಶೆರ್ಪಾ, ನವಾಂಗ್ ತೆಂಡು ಶೆರ್ಪಾ ಮತ್ತು ಗಯಾಲ್ಜೆನ್ ಶೆರ್ಪಾ. ಕಿಲಿ ಪೆಂಬಾ ಇಮ್ಯಾಜಿನ್ ನೇಪಾಳದ ಪ್ರಮುಖ ಗೈಡ್ ಆಗಿದ್ದರು. ಪುರ್ ಬಹಾದ್ದೂರ್ ಮತ್ತು ನಿಮಾ ಅವರು ನಿರ್ಮಲ್ ಪುರ್ಜಾ ಅವರ ‘ಎಲೈಟ್ ಎಕ್ಸ್‌ಪೆಡ್‌’ನ ಪರ್ವತಾರೋಹಣದ ಅನುಭವಿಗಳು.

ಮಾಧ್ಯಮ ವರದಿಗಳ ಪ್ರಕಾರ, ಗಯಾಲ್ಜೆನ್ ಮತ್ತು ನವಾಂಗ್ ಸೆವೆನ್ ಸಮ್ಮಿಟ್ ಚಾರಣಗಳೊಂದಿಗೆ ಸಂಬಂಧ ಹೊಂದಿದವರು. ಜೊತೆಯಾಗಿ ಅವರು ರೂಟ್ ಪ್ಲಾನಿಂಗ್, ರೋಪ್ ಫಿಕ್ಸಿಂಗ್, ಹೈ-ಆಲ್ಟಿಟ್ಯೂಡ್ ರೆಸ್ಕ್ಯೂ ಮತ್ತು ಪರ್ವತಾರೋಹಣದ ನಾಯಕತ್ವ ವಹಿಸಿದ ವರ್ಷಗಳ ಜ್ಞಾನವನ್ನು ಹೊಂದಿದ್ದರು.

ಕಿಲಿ ಪೆಂಬಾ ಶೆರ್ಪಾ

ಕಿಲಿ ಪೆಂಬಾ ನೇಪಾಳದ ಅತ್ಯಂತ ನಿಪುಣ ಹೈ-ಆಲ್ಟಿಟ್ಯೂಡ್ ಪರ್ವತಾರೋಹಿಗಳಲ್ಲಿ ಒಬ್ಬರು. 2021ರ ಜನವರಿಯಲ್ಲಿ ಅವರು ನಿರ್ಮಲ್ ನಾಯಕತ್ವದಲ್ಲಿ ಕೆ2ನ ಐತಿಹಾಸಿಕ ಮೊದಲ ಚಳಿಗಾಲದ ಆರೋಹಣವನ್ನು ಪೂರ್ಣಗೊಳಿಸಿದ 10 ನೇಪಾಳಿ ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದರು.

ಬ್ರಾಡ್ ಪೀಕ್ ದುರಂತಕ್ಕೆ ಕೆಲವೇ ವಾರಗಳ ಮೊದಲು ಅವರು ನಂಗಾ ಪರ್ಬತ್ ಏರಿ 8,000 ಮೀಟರ್‌ಗಳಿಗಿಂತ ಹೆಚ್ಚಿನ ವಿಶ್ವದ 14 ಶಿಖರಗಳನ್ನು ಹತ್ತಿದ ದಾಖಲೆ ಪೂರ್ಣಗೊಳಿಸಿದ್ದರು. ಆದರೆ ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಬ್ರಾಡ್ ಪೀಕ್‌ನಲ್ಲಿ ಸಾವನ್ನಪ್ಪಿದರು.

ನೇಪಾಳದ ರೋಲ್ವಾಲಿಂಗ್ ಕಣಿವೆಯ ಬೆಡಿಂಗ್‌ನಲ್ಲಿ ಜನಿಸಿದ ಕಿಲಿ ಪೆಂಬಾ 16ನೇ ವಯಸ್ಸಿನಿಂದ ಪರ್ವತಾರೋಹಣ ಪ್ರಾರಂಭಿಸಿದ್ದರು. 2002ರಲ್ಲಿ ಮನಸ್ಲು ಶಿಖರ ಏರಿದ್ದರು. ನಂತರದ ವರ್ಷ ಎವರೆಸ್ಟ್ ತಲುಪಿದರು. 2021ರಲ್ಲಿ ಕಿಲಿ ಪೆಂಬಾ ಮತ್ತು ಮಿಂಗ್ಮಾ ಗಯಾಲ್ಜೆ ಶೆರ್ಪಾ ಮನಸ್ಲುವಿನ ನಿಜವಾದ ಶಿಖರ ಮಾರ್ಗ ಗುರುತಿಸಲು ಸಹಾಯ ಮಾಡಿ ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಿದ್ದರು.

ಯುಕ್ತ ಗುರುಂಗ್

ಯುಕ್ತ ಎನ್ನುವ ಹೆಸರಿನಲ್ಲಿ ಕರೆಯಲಾಗುವ ಪುರ್ ಬಹಾದ್ದೂರ್ ಗುರುಂಗ್ ವಿಶ್ವದ 14 ಎಂಟು ಸಾವಿರ ಮೀಟರ್‌ಗಳ ಶಿಖರಗಳಲ್ಲಿ 12 ಅನ್ನು ಏರಿದ್ದರು. ಪಾಕಿಸ್ತಾನದಲ್ಲಿ ಪ್ರಯಾಣಿಸುವಾಗ ಕೊನೆಯ ಎರಡನ್ನು ಹತ್ತುವ ದಾಖಲೆಯಲ್ಲಿದ್ದರು. ಆರಂಭದಲ್ಲಿ ಅವರು ಕೆ2 ಶಿಖರ ಏರುವ ಯೋಜನೆಯಲ್ಲಿದ್ದರು. ಆದರೆ ಕ್ಲೈಂಟ್ ಒಬ್ಬರ ಕೈ ಮುರಿದಿದ್ದರಿಂದ ಆರೋಹಣ ಮುಂದೂಡಲ್ಪಟ್ಟಿದ್ದು, ಬಳಿಕ ನಿರ್ಮಲ್ ತಂಡವನ್ನು ಸೇರಿಕೊಂಡರು. ಆದರೆ ಹಿಮಪಾತದಿಂದಾಗಿ ಎಲ್ಲಾ 14 ಶಿಖರಗಳನ್ನು ಪೂರ್ಣಗೊಳಿಸುವ ಅವರ ಮಹತ್ವಾಕಾಂಕ್ಷೆ ಕೊನೆಗೊಂಡಿದೆ.

ಗೂರ್ಖಾ ಜಿಲ್ಲೆಯ ಲ್ಯಾಪ್ರಾಕ್‌ನ ಸ್ಥಳೀಯರಾದ ಯುಕ್ತ 2005ರಲ್ಲಿ ಪೋರ್ಟರ್ ಆಗಿ ಪ್ರವಾಸೋದ್ಯಮ ಪ್ರವೇಶಿಸಿದ್ದರು. 2011ರಲ್ಲಿ 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಎವರೆಸ್ಟ್ ಏರಿದರು. ಇದೇ ವರ್ಷ ಮೇ 20ರಂದು ಹತ್ತನೇ ಶಿಖರ ತಲುಪಿದ್ದರು. ಗುರುಂಗ್ ಸಮುದಾಯದಿಂದ ಈ ದಾಖಲೆ ಮಾಡಿದ ಮೊದಲ ಪರ್ವತಾರೋಹಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು. ಮಕಾಲು, ಅನ್ನಪೂರ್ಣ, ಲೋಟ್ಸೆ ಮತ್ತು ಕೆ2ಗಳನ್ನು ಏರಿದ್ದಾರೆ.

ಗ್ಯಾಲು ಶೆರ್ಪಾ

ಗ್ಯಾಲು ಎಂದು ಕರೆಯಲಾಗುವ ಗಯಾಲ್ಜೆನ್ ಶೆರ್ಪಾ ಅನುಭವಿ ಗೈಡ್ ಆಗಿದ್ದರು. 2015ರಲ್ಲಿ ತಮ್ಮ ಪರ್ವತಾರೋಹಣ ವೃತ್ತಿ ಆರಂಭಿಸಿದ್ದರು. ಅವರ ದಾಖಲೆಯಲ್ಲಿ ಎವರೆಸ್ಟ್, ಮನಸ್ಲು, ಕಾಂಚನಜುಂಗಾ, ಚೋಲಾಟ್ಸೆ, ಹಿಮ್ಲುಂಗ್ ಹಿಮಾಲ್, ಲೋಬುಚೆ, ಮೇರಾ ಶಿಖರ ಮತ್ತು ಲೆನಿನ್ ಶಿಖರಗಳು ಸೇರಿವೆ. ಒಂದೇ ಋತುವಿನಲ್ಲಿ ಮೂರು ಬಾರಿ ಕಾಂಚನಜುಂಗಾ ಏರಿದ ಗಿನ್ನೆಸ್ ವಿಶ್ವ ದಾಖಲೆ ಅವರ ಹೆಸರಲ್ಲಿದೆ. ಅನೇಕ ಬಾರಿ ಎವರೆಸ್ಟ್ ಏರಿದ್ದಾರೆ.

ನಿಮಾ ಶೆರ್ಪಾ

ಸಂಖುವಸಭಾದ ಮಕಾಲು ಪ್ರದೇಶದ ನಿಮಾ ಶೆರ್ಪಾ ಕೃಷಿ ಕುಟುಂಬದಲ್ಲಿ ಬೆಳೆದರು. ಎಲೈಟ್ ಎಕ್ಸ್‌ಪೆಡ್ ಪರ್ವತಾರೋಹಣ ತಂಡಕ್ಕೆ ಸೇರುವ ಮೊದಲು ಚಾರಣ ಉದ್ಯಮದಲ್ಲಿದ್ದರು. ಅವರು ಬ್ರಾಡ್ ಪೀಕ್‌ಗೆ ಸೇರುವ ಮೊದಲು ಈ ವರ್ಷ 8,000 ಮೀಟರ್‌ಗಿಂತ ಹೆಚ್ಚಿನ ನಾಲ್ಕು ಪರ್ವತಗಳನ್ನು ಏರಿದ್ದರು. ಇವರ ಮರಣದಿಂದಾಗಿ ಎಲೈಟ್ ಎಕ್ಸ್‌ಪೆಡ್ ತನ್ನ ಸ್ಥಾಪಕ ಮತ್ತು ಯುಕ್ತ ಸೇರಿ ಇಬ್ಬರು ಹಿರಿಯ ನೇಪಾಳಿ ಗೈಡ್‌ಗಳನ್ನು ದುರಂತದಲ್ಲಿ ಕಳೆದುಕೊಂಡಿದೆ.

ನವಾಂಗ್ ಥೆಂಡು

ಬ್ರಾಡ್ ಪೀಕ್ ಹಿಮಪಾತದಲ್ಲಿ ಮೃತಪಟ್ಟ ಅತ್ಯಂತ ಕಿರಿಯ ಪರ್ವತಾರೋಹಿ ನವಾಂಗ್ ಥೆಂಡು ಶೆರ್ಪಾ. 29ನೇ ವಯಸ್ಸಿನಲ್ಲೇ ಅವರು ಎವರೆಸ್ಟ್, ಲೋಟ್ಸೆ, ಮನಸ್ಲು, ಕಾಂಚನಜುಂಗಾ, ಮಕಾಲು ಮತ್ತು ಅಮಾ ಡಬ್ಲಾಮ್ ಶಿಖರಗಳನ್ನು ಏರಿದ್ದರು. 2022ರಲ್ಲಿ ಮೊದಲ ಬಾರಿಗೆ ಎವರೆಸ್ಟ್ ಏರಿದ್ದರು. ನಂತರ ಈ ವರ್ಷದ ಆರಂಭದಲ್ಲಿ ಮಕಾಲು ತಲುಪಿದ್ದರು.

ನವಾಂಗ್ ಪರ್ವತಾರೋಹಣದೊಂದಿಗೆ ಸಂಪರ್ಕ ಹೊಂದಿದ ಕುಟುಂಬದವರು. ಅವರ ತಂದೆ ಮತ್ತು ಮೂವರು ಸಹೋದರರು ಸಹ 8,000 ಮೀಟರ್‌ಗಿಂತ ಹೆಚ್ಚಿನ ಶಿಖರಗಳನ್ನು ಏರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News