ಮೋದಿ ವಲಯದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬಾಲಿವುಡ್ ಪ್ರಚಾರಕರು
newslaundry. com ವರದಿ
Photo Credit : newslaundry.com
2025ರ ಸೆಪ್ಟೆಂಬರ್ 21ರ ಸಾಯಂಕಾಲ, ಮುಂಬೈನ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರಕ್ಕೆ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸುವ ಸಂಗೀತ ಕಾರ್ಯಕ್ರಮಕ್ಕಾಗಿ ಬಾಲಿವುಡ್ ತಾರೆಯರು ಆಗಮಿಸುತ್ತಿದ್ದರು. ಆ ವೇಳೆ ಸಾಧಾರಣ ಬಿಳಿ ಕುರ್ತಾ-ಪೈಜಾಮ ಧರಿಸಿದ್ದ ವ್ಯಕ್ತಿಯೊಬ್ಬರು ಅತ್ತಿಂದಿತ್ತ ಓಡಾಡುತ್ತಾ ಕಾಣಿಸಿಕೊಂಡರು. ಅಲ್ಲಿಗೆ ಬರುತ್ತಿದ್ದ ನಟರನ್ನು ಪ್ರೀತಿಯಿಂದ ಮಾತನಾಡಿಸುತ್ತಾ, ಕೈಹಿಡಿದು ಕರೆ ತರುತ್ತಾ, ಕ್ಯಾಮೆರಾಗಳ ಮುಂದೆ ನಿಲ್ಲಿಸಿ ಮಾಧ್ಯಮಗಳಿಗೆ ಪೋಸ್ ನೀಡಲು ಮಾರ್ಗದರ್ಶನ ಮಾಡುತ್ತಿದ್ದರು. ರಣಬೀರ್ ಕಪೂರ್, ವಿಕ್ಕಿ ಕೌಶಲ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರವೀನಾ ಟಂಡನ್, ಜಾನ್ವಿ ಕಪೂರ್, ರಾಜ್ಕುಮಾರ್ ಹಿರಾನಿ, ಅಶುತೋಷ್ ಗೋವರಿಕರ್ ಸೇರಿದಂತೆ ಸಾಲು ಸಾಲು ಸೆಲೆಬ್ರಿಟಿಗಳು ಅವರ ಸೂಚನೆಯನ್ನು ಪಾಲಿಸುತ್ತಿದ್ದರು.
ಅದೇ ಸಮಯದಲ್ಲಿ ಒಳಗಡೆ ಔಪಚಾರಿಕ ಉದ್ಘಾಟನಾ ಸಮಾರಂಭ ಆರಂಭವಾಗಿತ್ತು. ಆಗ ನೀಲಿ ಬಣ್ಣದ ಕುರ್ತಾ ಧರಿಸಿದ್ದ ಮತ್ತೊಬ್ಬ ವ್ಯಕ್ತಿ ವೇದಿಕೆಯ ಮೇಲೆ ಕಾಣಿಸಿಕೊಂಡರು. ದೀಪ ಬೆಳಗುವ ಮಂಗಳಕರ ಮುಹೂರ್ತದಲ್ಲಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು. ಅವರು ಯಾವುದೇ ಪ್ರಭಾವಿ ರಾಜಕಾರಣಿಯೂ ಆಗಿರಲಿಲ್ಲ ಅಥವಾ ಪ್ರಸಿದ್ಧ ತಾರೆಯೂ ಆಗಿರಲಿಲ್ಲ. ಆದರೂ ಅಧಿಕಾರದ ಕೇಂದ್ರಬಿಂದುವಾಗಿದ್ದ ಆ ವೇದಿಕೆಯಲ್ಲಿ ಅತ್ಯಂತ ಸಹಜವಾಗಿ ಮತ್ತು ಆತ್ಮವಿಶ್ವಾಸದಿಂದ ನಿಂತಿದ್ದರು.
ಹೀಗೆ ಮುಂಚೂಣಿಯಲ್ಲಿ ಕಾಣಿಸಿಕೊಂಡ ಇಬ್ಬರು ವ್ಯಕ್ತಿಗಳೇ ಮಹಾವೀರ್ ಜೈನ್ ಮತ್ತು ಹಿತೇಶ್ ಜೈನ್.
ಇವರಿಬ್ಬರೂ ಸಂಬಂಧಿಕರಲ್ಲ. ಇವರನ್ನು ಜೋಡಿಸಿರುವುದು ಕಳೆದ ಒಂದು ದಶಕದಿಂದ ಬಾಲಿವುಡ್ ಮತ್ತು ಬಿಜೆಪಿಯ ಸಂಪರ್ಕ ಸೇತುವೆಯಾಗಿ ಬೆಳೆದುಬಂದಿರುವ ಭದ್ರವಾದ ವ್ಯವಸ್ಥೆ. ಈ ವ್ಯವಸ್ಥೆಯು ಹಿಂದಿ ಚಿತ್ರರಂಗ ರಾಜಕೀಯ ಶಕ್ತಿಯೊಂದಿಗೆ ಹೇಗೆ ವ್ಯವಹರಿಸಬೇಕು ಮತ್ತು ತನ್ನ ಕಥೆಗಳನ್ನು ಹೇಗೆ ನಿರೂಪಿಸಬೇಕು ಎಂಬುದನ್ನು ಸಂಪೂರ್ಣವಾಗಿ ಮರುರೂಪಿಸಿದೆ.
ಇಬ್ಬರಲ್ಲಿ ಯಾರೂ ಚುನಾಯಿತ ಜನಪ್ರತಿನಿಧಿಗಳಲ್ಲ. ಜನಸಾಮಾನ್ಯರಿಗೆ ಇವರ ಹೆಸರುಗಳೂ ಪರಿಚಿತವಿಲ್ಲ. ಆದರೂ, ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ಮತ್ತು ಆಡಳಿತಾರೂಢ ವ್ಯವಸ್ಥೆಯ ನಡುವೆ ನಡೆದ ಪ್ರತಿಯೊಂದು ಪ್ರಮುಖ ವಿದ್ಯಮಾನಗಳಲ್ಲೂ ಇವರಿಬ್ಬರು ಕಾಣಿಸಿಕೊಂಡಿದ್ದಾರೆ. ಚಲನಚಿತ್ರ ತಾರೆಗಳು ಮತ್ತು ನರೇಂದ್ರ ಮೋದಿ ನಡುವಿನ ಮುಚ್ಚಿದ ಬಾಗಿಲಿನ ಸಭೆಗಳು, RSS ಕಾರ್ಯಕ್ರಮಗಳು, ಮನ್ ಕಿ ಬಾತ್ ಸಂಭ್ರಮಾಚರಣೆಗಳು, ವೇವ್ಸ್ (WAVES) ಶೃಂಗಸಭೆ ಹಾಗೂ ಪ್ರಧಾನಮಂತ್ರಿಯವರ ವ್ಯಕ್ತಿತ್ವದ ಸುತ್ತ ಹೆಣೆಯಲಾದ ಪ್ರಮುಖ ಪ್ರಚಾರ ಅಭಿಯಾನಗಳಲ್ಲಿ ಇವರ ಉಪಸ್ಥಿತಿಯಿರುತ್ತಿತ್ತು. ಚಲನಚಿತ್ರ ರಂಗದ ಗಣ್ಯರು ಇವರನ್ನು ಸಂಪರ್ಕದ ಕೊಂಡಿ ಸೃಷ್ಟಿಸುವ, ಜಾಲವನ್ನು ವಿಸ್ತರಿಸುವ ಮತ್ತು ಬಾಲಿವುಡ್ ನ ಒಂದು ವರ್ಗವು ಸರ್ಕಾರದ ಆಶಯ ಹಾಗೂ ಸೈದ್ಧಾಂತಿಕ ನಿರೂಪಣೆಗಳಿಗೆ ಪೂರಕವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವ ಪ್ರಭಾವಶಾಲಿ ವ್ಯಕ್ತಿಗಳು ಎಂದು ಗುರುತಿಸುತ್ತಾರೆ.
ಇವರನ್ನು ಒಂದು ರೀತಿಯ ಪ್ರಚಾರಕರು ಎಂದೇ ಕರೆಯಬಹುದು. ಆದರೆ ಇವರು RSS ಶೈಲಿಯವರಲ್ಲ, ಬದಲಿಗೆ ಹೊಸ ಮಾದರಿಯ ಪ್ರಚಾರಕರು. ದೇಶದ ಅತ್ಯಂತ ಗ್ಲಾಮರಸ್ ಉದ್ಯಮದೊಳಗೆ ಬಿಜೆಪಿಯ ಆಲೋಚನೆಗಳನ್ನು ಬಿತ್ತರಿಸುವುದನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡವರು. ಇವರ ಬೆಳವಣಿಗೆಯೂ ಆಡಳಿತ ಪಕ್ಷದ ಬೆಳವಣಿಗೆಯ ಜೊತೆಜೊತೆಯಾಗಿಯೇ ಸಾಗಿದೆ.
ಇದೆಲ್ಲಾ ಹೇಗೆ ಸಾಧ್ಯವಾಯಿತು? ಮತ್ತು ಬಾಲಿವುಡ್ನೊಳಗೆ ರಾಜಕೀಯ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಇದು ಏನನ್ನು ಬಹಿರಂಗಪಡಿಸುತ್ತದೆ?
►ಮಹಾವೀರ್ ಜೈನ್: ತಮಗಾಗಿಯೇ ವೇದಿಕೆ ಸೃಷ್ಟಿಸಿಕೊಂಡ ಪ್ರಚಾರಕ
ಮಹಾವೀರ್ ಜೈನ್ (ಪೂರ್ಣ ಹೆಸರು ಮಹಾವೀರ್ ಜೈನ್ ಗೋಗಾಡ್) ಬೆಳೆದದ್ದು ರಾಜಸ್ಥಾನದ ಪಾಲಿಯಲ್ಲಿ. ಅವರ ತಂದೆ ಕೆಲಸದ ನಿಮಿತ್ತ ಬಾಲೋತ್ರಾದಿಂದ ಇಲ್ಲಿಗೆ ವಲಸೆ ಬಂದಿದ್ದರು. ಮುಂಬೈಗೆ ಹೋಗುವ ಮುನ್ನ ಅವರು RSS ನಡೆಸುವ ಸರಸ್ವತಿ ಶಿಶು ಮಂದಿರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಅವರ ಕುಟುಂಬವು ಜವಳಿ ಉದ್ಯಮದಲ್ಲಿದೆ. ಈ ಕೌಟುಂಬಿಕ ಜವಳಿ ವ್ಯವಹಾರವನ್ನು ಹೆಚ್ಚಾಗಿ ಅವರ ಹಿರಿಯ ಸಹೋದರ ಸುರೇಂದ್ರ ಜೈನ್ ನೋಡಿಕೊಳ್ಳುತ್ತಾರೆ. ಸುರೇಂದ್ರ ಜೈನ್ ಅವರು ಮಹಾವೀರ್ ಅವರಿಗೆ ಸಂಬಂಧಿಸಿದ ಕೆಲವು ಕಂಪೆನಿಗಳಲ್ಲೂ ಪಾಲುದಾರರಾಗಿದ್ದಾರೆ.
ಮಹಾವೀರ್ ಅವರ ನಿಕಟ ಸಂಬಂಧಿಯೊಬ್ಬರು ಅವರ ಆಲೋಚನೆಯನ್ನು ಹೀಗೆ ವಿವರಿಸುತ್ತಾರೆ: "ಸಿನಿಮಾ ಎನ್ನುವುದು ಕೇವಲ ಕೆಲವೇ ಗಂಟೆಗಳಲ್ಲಿ ಇಡೀ ಭಾರತದ ಆಲೋಚನಾ ಶಕ್ತಿಯನ್ನು ಬದಲಾಯಿಸಬಲ್ಲ ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂದು ಅವರು ಸದಾ ನಂಬಿದ್ದರು. ಈ ನಂಬಿಕೆಯೇ ಅವರನ್ನು ಚಿತ್ರರಂಗದತ್ತ ಸೆಳೆಯಿತು. ರಾಷ್ಟ್ರೀಯತೆಯ ಸಿನಿಮಾಗಳು ಮತ್ತು ಸಾಮಾಜಿಕ ಸಂದೇಶವಿರುವ ಚಿತ್ರಗಳು ಸಮಾಜದಲ್ಲಿ ಬದಲಾವಣೆ ತರಬಲ್ಲವು ಎಂದು ಅವರು ಬಲವಾಗಿ ನಂಬುತ್ತಾರೆ."
ಅವರ ಸಂಬಂಧಿಯ ಪ್ರಕಾರ, ಮಹಾವೀರ್ ಅವರು ಸ್ವಂತ ಪ್ರಯತ್ನದಿಂದ ಬೆಳೆದವರು. ಆರಂಭದಲ್ಲಿ ಅವರು ದಕ್ಷಿಣ ಭಾರತದ ಸಿನಿಮಾಗಳಿಗೆ ನಟರನ್ನು ಪೂರೈಸುವ ಕಾಸ್ಟಿಂಗ್ ಏಜೆನ್ಸಿಗಳಲ್ಲಿ ಕೆಲಸ ಮಾಡಲು ಶುರು ಮಾಡಿದರು. ಆದರೆ ಅಲ್ಲಿ ವಂಚನೆಗೆ ಒಳಗಾಗಿ ಆ ಉದ್ಯಮ ನಷ್ಟ ಅನುಭವಿಸಿತು. ಬಳಿಕ ಅವರು ನಿಧಾನವಾಗಿ ಚಲನಚಿತ್ರ ನಿರ್ಮಾಣದತ್ತ ಹೆಜ್ಜೆ ಇಟ್ಟರು. ಅವರ ಆರಂಭಿಕ ದಿನಗಳಲ್ಲಿ ಪರಿಚಯವಿದ್ದ ಲೇಖಕರೊಬ್ಬರ ಪ್ರಕಾರ, ಜೈನ್ ಅವರು 2014ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಮೋದಿಯವರ ಪರವಾಗಿ ಪ್ರಚಾರ ಮಾಡಿದ್ದರು ಮತ್ತು ಅವರು ಪ್ರಧಾನಿಯಾಗಬೇಕು ಎಂದು ಬಯಸಿದ್ದರು. "ಆ ದಿನಗಳಲ್ಲೇ ಅವರು ಮೋದಿಯವರನ್ನು ಕೇವಲ ಒಬ್ಬ ರಾಜಕಾರಣಿಯಾಗಿ ನೋಡದೆ, ದೇಶದಲ್ಲಿ ದೊಡ್ಡ ಬದಲಾವಣೆ ತರಬಲ್ಲ ನಾಯಕನಾಗಿ ಕಂಡಿದ್ದರು," ಎನ್ನುತ್ತಾರೆ ಆ ಲೇಖಕ.
ಅವರ ಮೊದಲ ಸಿನಿಮಾ ಈ ಯಾವುದೇ ರಾಜಕೀಯ ಸಿದ್ಧಾಂತಗಳನ್ನು ಒಳಗೊಂಡಿರಲಿಲ್ಲ. ನವಾಝುದ್ದೀನ್ ಸಿದ್ದಿಕಿ ಮತ್ತು ತನಿಷ್ಠಾ ಚಟರ್ಜಿ ನಟಿಸಿದ್ದ 'ದೇಖ್ ಇಂಡಿಯನ್ ಸರ್ಕಸ್' (2011) ಪ್ರಶಂಸೆಗೆ ಪಾತ್ರವಾದ ಸಿನಿಮಾವಾಗಿತ್ತು. ಇದು ಬುಸಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ನ್ಯೂಯಾರ್ಕ್ ನ ಭಾರತೀಯ ಚಲನಚಿತ್ರೋತ್ಸವದಲ್ಲಿ ತೆರೆಕಂಡಿತು. ಅಲ್ಲದೆ ಅತ್ಯುತ್ತಮ ಮಕ್ಕಳ ಚಿತ್ರ ಸೇರಿದಂತೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
ಇದಾದ ನಂತರ ಸುಮಾರು ಏಳು ವರ್ಷಗಳ ಕಾಲ ಜೈನ್ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಿದ್ದರು.
2018ರಲ್ಲಿ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದಾಗ ಮತ್ತೊಂದು ಕಲಾತ್ಮಕ ಸಾಮಾಜಿಕ ಸಿನಿಮಾ ನಿರ್ಮಿಸಲಿಲ್ಲ. ಬದಲಿಗೆ, ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ದಿನಗಳ ಆಧಾರಿತ 32 ನಿಮಿಷಗಳ 'ಚಲೋ ಜೀತೆ ಹೈ' ಚಿತ್ರದ ಮೂಲಕ ವಾಪಸಾದರು. ಈ ಚಿತ್ರವು 2019ರ ಲೋಕಸಭೆ ಚುನಾವಣೆಗೆ ಕೇವಲ ಒಂಭತ್ತು ತಿಂಗಳು ಬಾಕಿ ಇರುವಾಗ ಬಿಡುಗಡೆಯಾಯಿತು.
►ಚಲೋ ಜೀತೆ ಹೈ: ಎಲ್ಲವನ್ನೂ ಬದಲಿಸಿದ ಸಿನಿಮಾ
ಟಿ-ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ನಿರ್ಮಾಣ ಹಾಗೂ ಆನಂದ್ ಎಲ್. ರಾಯ್ ಪ್ರಸ್ತುತಿಯಲ್ಲಿ ಮೂಡಿಬಂದ 'ಚಲೋ ಜೀತೆ ಹೈ' ಸಿನಿಮಾ, ಗುಜರಾತ್ ನ ವಡ್ ನಗರದಲ್ಲಿ ಬೆಳೆಯುವ 'ನಾರು' ಎಂಬ ಹುಡುಗನ ಕಥೆಯನ್ನು ಹೊಂದಿತ್ತು. ಇದು ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಜೀವನದ ಯಶೋಗಾಥೆಯನ್ನು ಬಿಂಬಿಸುವ ಚಿತ್ರವಾಗಿತ್ತು.
2018ರ ಜುಲೈ 11ರಂದು ಈ ಸಿನಿಮಾ ಬಿಡುಗಡೆಯಾದ ನಂತರ ನಡೆದ ಬೆಳವಣಿಗೆಗಳು ಒಂದು ಸಾಮಾನ್ಯ ಚಿತ್ರದ ಯಶಸ್ಸಿನ ಹಾದಿಗಿಂತ ತೀರಾ ಭಿನ್ನವಾಗಿದ್ದವು.
ಚಿತ್ರ ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಯಿತು. ಇದರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಜೆ.ಪಿ. ನಡ್ಡಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ಅನಂತ್ ಕುಮಾರ್ ಹಾಗೂ ಕಿರಣ್ ಖೇರ್ ಸೇರಿದಂತೆ ಹಿರಿಯ ಬಿಜೆಪಿ ಸಚಿವರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಜೈನ್ ಮತ್ತು ಅವರ ತಂಡವನ್ನು ಅಧಿಕೃತವಾಗಿ ಗೌರವಿಸಲಾಯಿತು.
ಮರುದಿನವೇ ಸಂಸತ್ತಿನ ಗ್ರಂಥಾಲಯದ ಸಭಾಂಗಣದಲ್ಲಿ ಮತ್ತೊಂದು ಪ್ರದರ್ಶನ ನಡೆಯಿತು. ಇದರಲ್ಲಿ ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ಸುಮಿತ್ರಾ ಮಹಾಜನ್ ಪಾಲ್ಗೊಂಡಿದ್ದರು. ಲೋಕಸಭೆಯ ಅಧಿಕೃತ ಖಾತೆಯಿಂದ ಈ ಚಿತ್ರವನ್ನು ಪ್ರಚಾರ ಮಾಡಲಾಗಿತ್ತು. ಅಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಚಿತ್ರತಂಡವನ್ನು ಶ್ಲಾಘಿಸಿ ಅಧಿಕೃತ ಸಂದೇಶ ಹೊರಡಿಸಿದ್ದರು.
ಜುಲೈ 29ರಂದು ಮುಂಬೈನಲ್ಲಿ ನಡೆದ ಮೂರನೇ ಪ್ರದರ್ಶನದಲ್ಲಿ ಅಮಿತ್ ಶಾ, ದೇವೇಂದ್ರ ಫಡ್ನವಿಸ್, ಮುಕೇಶ್ ಅಂಬಾನಿ, ಕಂಗನಾ ರಣಾವತ್, ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಮತ್ತು ಸೆನ್ಸಾರ್ ಮಂಡಳಿಯ ಅಂದಿನ ಅಧ್ಯಕ್ಷ ಪ್ರಸೂನ್ ಜೋಶಿ ಭಾಗವಹಿಸಿದ್ದರು.
ಬಿಜೆಪಿ ನಾಯಕರು ವಿವಿಧ ವೇದಿಕೆಗಳಲ್ಲಿ ಈ ಚಿತ್ರವನ್ನು ವ್ಯಾಪಕವಾಗಿ ಪ್ರಚಾರ ಮಾಡಿದರು. ಪಿಯೂಷ್ ಗೋಯಲ್ ಅವರ ಕಚೇರಿಯು ಈ ಬಗ್ಗೆ ಟ್ವೀಟ್ ಮಾಡುವಾಗ ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿ, "ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಎದುರಿಸಿದ ಕಷ್ಟಗಳೇ ಉಜ್ವಲ ಯೋಜನೆಗೆ ಪ್ರೇರಣೆಯಾಗಿರಬಹುದು. ಇಂದು ದೇಶದ 5 ಕೋಟಿ ಮಹಿಳೆಯರಿಗೆ LPG ಸಂಪರ್ಕ ತಲುಪಿದೆ" ಎಂದು ಬರೆದುಕೊಂಡಿತ್ತು.
ಹಲವಾರು ಬಿಜೆಪಿ ನಾಯಕರು 'ನ್ಯೂ ಇಂಡಿಯಾ ಜಂಕ್ಷನ್' ಎಂಬ ಯೂಟ್ಯೂಬ್ ಚಾನೆಲ್ ಗೆ ಈ ಚಿತ್ರವನ್ನು ಶ್ಲಾಘಿಸಿ ಸಂದರ್ಶನ ನೀಡಿದ್ದರು. ನೀಲಿ ಕುರ್ತಾ ಧರಿಸಿದ್ದ ಹಿತೇಶ್ ಜೈನ್ ಅವರ ನೇತೃತ್ವದ 'ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್' ಈ ಚಾನೆಲ್ ಅನ್ನು ನಡೆಸುತ್ತಿತ್ತು. ಸ್ವತಃ ಮಹಾವೀರ್ ಜೈನ್ ಕೂಡ ಇದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಚಿತ್ರ ಮತ್ತು ಪ್ರಧಾನಮಂತ್ರಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.
ಸಿನಿಮಾದ ಪ್ರಚಾರದ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಾ ಹೋಯಿತು. ಮಧ್ಯಪ್ರದೇಶ, ಜಾರ್ಖಂಡ್, ಹರಿಯಾಣ, ಮಹಾರಾಷ್ಟ್ರ ಮತ್ತು ಮಣಿಪುರದಂತಹ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವರು ಸರ್ಕಾರಿ ವಾಹಿನಿಗಳ ಮೂಲಕ ಈ ಚಿತ್ರವನ್ನು ಪ್ರದರ್ಶಿಸಿ ಪ್ರಚಾರ ಮಾಡಿದರು. ಈ ಸಿನಿಮಾ ಸ್ಟಾರ್ ನೆಟ್ವರ್ಕ್ ಚಾನೆಲ್ ಗಳು ಮತ್ತು ಹಾಟ್ಸ್ಟಾರ್ ನಲ್ಲಿ ಪ್ರಸಾರವಾಗಿದ್ದಲ್ಲದೆ, ಡಿಡಿ ನ್ಯಾಷನಲ್ ಹಾಗೂ ದೂರದರ್ಶನದ ಪ್ರಾದೇಶಿಕ ಚಾನೆಲ್ ಗಳಲ್ಲೂ ಬಿತ್ತರವಾಯಿತು. ಮಹಾರಾಷ್ಟ್ರವೊಂದರಲ್ಲೇ 16,000ಕ್ಕೂ ಹೆಚ್ಚು ಶಾಲೆಗಳ ಸುಮಾರು 15 ಲಕ್ಷ ವಿದ್ಯಾರ್ಥಿಗಳಿಗೆ ಈ ಚಿತ್ರವನ್ನು ತೋರಿಸಲಾಗಿತ್ತು. ಕೇವಲ 32 ನಿಮಿಷಗಳ ಲಘು ಚಿತ್ರವೊಂದಕ್ಕೆ ಸಿಕ್ಕ ಅತ್ಯಂತ ಅಪರೂಪದ ಪ್ರಚಾರ ಇದಾಗಿತ್ತು. ಕೊನೆಗೆ ಭಾರತ-ಟಿಬೆಟ್ ಗಡಿ ಪೊಲೀಸರಿಗೂ (ITBP) ಅವರ ಜಾಗೃತಿ ಕಾರ್ಯಕ್ರಮಗಳ ಭಾಗವಾಗಿ ಈ ಚಿತ್ರವನ್ನು ತೋರಿಸಲಾಯಿತು.
ಈ ಚಿತ್ರವು ಮುಂದಿನ ವರ್ಷ ನಡೆದ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ಕೌಟುಂಬಿಕ ಮೌಲ್ಯಗಳ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮಹಾವೀರ್ ಜೈನ್ ಈ ಪ್ರಶಸ್ತಿಯನ್ನು ಖುದ್ದಾಗಿ ಸ್ವೀಕರಿಸಿದರು.
ಇದಾದ ಆರು ವರ್ಷಗಳ ನಂತರ, 2024ರ ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿಯವರ 75ನೇ ಜನ್ಮದಿನದ ಅಂಗವಾಗಿ 'ಚಲೋ ಜೀತೆ ಹೈ' ಚಿತ್ರವನ್ನು ಮರುಬಿಡುಗಡೆ ಮಾಡಲಾಯಿತು. ದೇಶಾದ್ಯಂತ ಇರುವ ಸಿಬಿಎಸ್ಇ ಮಾನ್ಯತೆ ಪಡೆದ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಶಾಲೆಗಳಲ್ಲಿ ಸೆಪ್ಟೆಂಬರ್ 16ರಿಂದ ಅಕ್ಟೋಬರ್ 2ರ ನಡುವೆ ಈ ಚಿತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಶಿಕ್ಷಣ ಸಚಿವಾಲಯವು ಆದೇಶ ಹೊರಡಿಸಿತ್ತು. ಇದರೊಂದಿಗೆ ದೇಶದ 500 ಚಿತ್ರಮಂದಿರಗಳಲ್ಲೂ ಈ ಸಿನಿಮಾ ಏಕಕಾಲಕ್ಕೆ ತೆರೆಕಂಡಿತ್ತು.
ಈ ಎಲ್ಲ ಬೆಳವಣಿಗೆಗಳ ಹಿಂದಿನ ರಹಸ್ಯವನ್ನು ಅವರ ಸಂಬಂಧಿ ಹೀಗೆ ಸಂಕ್ಷಿಪ್ತವಾಗಿ ವಿವರಿಸುತ್ತಾರೆ: "ಚಲೋ ಜೀತೆ ಹೈ ಚಿತ್ರವನ್ನು ನಿರ್ಮಿಸಿದ ನಂತರ, ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರಭಾವಿ ನಾಯಕರೊಂದಿಗೆ ಮಹಾವೀರ್ ಅವರ ಒಡನಾಟ ಖಂಡಿತವಾಗಿಯೂ ಹೆಚ್ಚಾಯಿತು. ಈ ಸಿನಿಮಾ ಮಾಡುವ ಮೊದಲೇ ಅವರಿಗೆ ಬಿಜೆಪಿ ಮತ್ತು RSS ವಲಯದಲ್ಲಿ ಉತ್ತಮ ಸಂಪರ್ಕಗಳಿದ್ದವು. ದೇಶದ ಪ್ರಧಾನಮಂತ್ರಿಯವರ ಬಾಲ್ಯದ ಕುರಿತಾದ ಯೋಜನೆಯನ್ನು ಉನ್ನತ ಮಟ್ಟದ ಚರ್ಚೆಗಳಿಲ್ಲದೆ ಮಾಡಲು ಸಾಧ್ಯವೇ ಇರಲಿಲ್ಲ."
'ಚಲೋ ಜೀತೆ ಹೈ' ಚಿತ್ರವು ಅವರ ಜೀವನದ ಪ್ರಮುಖ ತಿರುವಾಗಿತ್ತು. ಈ ಚಿತ್ರಕ್ಕೂ ಮುನ್ನ ಜೈನ್ ಚಿತ್ರರಂಗದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು. ಆದರೆ ಇದರ ನಂತರ, ಅವರು ಬಾಲಿವುಡ್ ನ ಗಣ್ಯರು ಹಾಗೂ ದಿಲ್ಲಿಯ ಅಧಿಕಾರದ ಕಾರಿಡಾರ್ ಗಳ ನಡುವೆ ಅತ್ಯಂತ ಸುಲಭವಾಗಿ ಸಂಚರಿಸುವ ಪ್ರಭಾವಿ ಸಂಪರ್ಕ ಸೇತುವೆಯಾಗಿ ಬೆಳೆದರು.
►ಸಂಪರ್ಕದ ಜಾಲ
2018ರ ಜುಲೈನಲ್ಲಿ, 'ಚಲೋ ಜೀತೆ ಹೈ' ಚಿತ್ರ ಬಿಡುಗಡೆಯಾಗುವುದಕ್ಕೆ ಎರಡು ದಿನಗಳ ಮೊದಲು ಅವರು ರಾಜ್ಕುಮಾರ್ ಹಿರಾನಿ ಮತ್ತು ಆನಂದ್ ಎಲ್. ರಾಯ್ ಅವರೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿಯಾದರು. 2018ರ ಅಕ್ಟೋಬರ್ ನಲ್ಲಿ ಆಮೀರ್ ಖಾನ್, ರಾಜ್ಕುಮಾರ್ ಹಿರಾನಿ, ರಿತೇಶ್ ಸಿಧ್ವಾನಿ, ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಆನಂದ್ ಎಲ್. ರಾಯ್ ಅವರೊಂದಿಗೆ ದಿಲ್ಲಿಗೆ ತೆರಳಿ ರಾಷ್ಟ್ರ ನಿರ್ಮಾಣದಲ್ಲಿ ಚಿತ್ರರಂಗದ ಪಾತ್ರದ ಕುರಿತು ಮೋದಿಯವರ ಜೊತೆ ಚರ್ಚಿಸಿದರು. 2018ರ ಡಿಸೆಂಬರ್ ನಲ್ಲಿ ಮುಂಬೈನ ರಾಜಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೋದಿಯವರೊಂದಿಗೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್, ಮುಖ್ಯಮಂತ್ರಿ ಫಡ್ನವಿಸ್ ಮತ್ತು ಬಾಲಿವುಡ್ ನ ಪ್ರಮುಖ ತಾರೆಯರ ಜೊತೆ ಜೈನ್ ಕೂಡ ಉಪಸ್ಥಿತರಿದ್ದರು. ಜನವರಿ 2019ರಲ್ಲಿ ಬಾಲಿವುಡ್ ನ ಯುವ ಸೆಲೆಬ್ರಿಟಿಗಳ ತಂಡವೊಂದು ಖಾಸಗಿ ವಿಮಾನದ ಮೂಲಕ ದಿಲ್ಲಿಗೆ ತೆರಳಿ ಪ್ರಧಾನಿಯವರನ್ನು ಭೇಟಿ ಮಾಡಿತು. ಈ ಇಡೀ ಭೇಟಿಯ ಹಿಂದೆ ಜೈನ್ ಅವರೇ ಪ್ರಮುಖ ಸೂತ್ರಧಾರಿಯಾಗಿದ್ದರು ಎಂದು ಚಿತ್ರರಂಗದಲ್ಲಿ ವ್ಯಾಪಕವಾಗಿ ನಂಬಲಾಗಿದೆ.
2019ರ ಸೆಪ್ಟೆಂಬರ್ ನಲ್ಲಿ ಮೋದಿಯವರ 69ನೇ ಜನ್ಮದಿನದಂದು, ಅಕ್ಷಯ್ ಕುಮಾರ್ ಅವರು ಮಹಾವೀರ್ ಜೈನ್ ನಿರ್ಮಾಣದ ಮತ್ತೊಂದು ಚಿತ್ರ 'ಮನ್ ಬೈರಾಗಿ – ಜಬ್ ಮೇ ಮುಜ್ಸೆ ಮಿಲಾ' ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು. ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಜಂಟಿಯಾಗಿ ನಿರ್ಮಿಸಿದ್ದ ಈ ಚಿತ್ರವೂ ಮೋದಿಯವರ ಜೀವನವನ್ನು ಆಧರಿಸಿತ್ತು. ಪೋಸ್ಟರ್ ಬಿಡುಗಡೆಯ ನಂತರ ಪ್ರಧಾನಿಯವರು ಟ್ವಿಟರ್ ಮೂಲಕ ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದರು.
ಪ್ರಮುಖ ನಿರ್ಮಾಣ ಸಂಸ್ಥೆಯೊಂದರ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡುತ್ತಾ, "ಕಳೆದ ಎಂಟು–ಒಂಭತ್ತು ವರ್ಷಗಳಿಂದ ಮಹಾವೀರ್ ಜೈನ್ ಎಲ್ಲೆಡೆ ಕಾಣಿಸಿಕೊಳ್ಳಲು ಶುರು ಮಾಡಿದರು. ಅವರು ದಿಲ್ಲಿಯ ಉನ್ನತ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಕೊನೆಗೂ ಪ್ರಧಾನಿಯವರನ್ನು ಭೇಟಿಯಾಗುವ ಅವಕಾಶವನ್ನು ಯಾರು ತಾನೇ ನಿರಾಕರಿಸುತ್ತಾರೆ? ಯಾರಾದರೂ ಅಂತಹ ಭೇಟಿಗೆ ವ್ಯವಸ್ಥೆ ಮಾಡಿಕೊಟ್ಟರೆ ಹೆಚ್ಚಿನವರು ಒಪ್ಪಿಕೊಳ್ಳುತ್ತಾರೆ. ಮಹಾವೀರ್ ಮಾಡಿದ್ದೂ ಇದನ್ನೇ," ಎಂದಿದ್ದಾರೆ.
ಬಾಲಿವುಡ್ ನ ಮುಂಚೂಣಿಯಲ್ಲಿರುವ ನಿರ್ಮಾಪಕರೊಬ್ಬರು ಇದರ ಕಾರ್ಯವೈಖರಿಯನ್ನು ಹೀಗೆ ವಿವರಿಸುತ್ತಾರೆ: "ಇಂತಹ ಜನರ ತಂತ್ರ ಬಹಳ ಸರಳವಾಗಿರುತ್ತದೆ. ಅವರು ಮೊದಲು ಸಾಮಾನ್ಯ ಫೋನ್ ಕರೆಯೊಂದಿಗೆ ಮಾತುಕತೆ ಆರಂಭಿಸುತ್ತಾರೆ. ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಪ್ರಸ್ತಾಪ ಇಡುತ್ತಾರೆ. ಒಂದು ವೇಳೆ ನೀವು ಬಿಡುವಿಲ್ಲ ಎಂದು ಹೇಳಿದರೂ, ಅವರು ಅತ್ಯಂತ ವಿನಯದಿಂದಲೇ 'ಪರವಾಗಿಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ತೆಗೆದುಕೊಳ್ಳಿ, ನೀವು ಬಿಡುವಿದ್ದಾಗ ಮಾಡೋಣ' ಎನ್ನುತ್ತಾರೆ. ಅವರು ಎಷ್ಟು ವಿನಯದಿಂದ ಆದರೆ ಪಟ್ಟುಬಿಡದೆ ಒತ್ತಾಯಿಸುತ್ತಾರೆ ಎಂದರೆ ಅವರನ್ನು ನಿರಾಕರಿಸುವುದು ಕಷ್ಟವಾಗುತ್ತದೆ. ಅದೇ ಸಮಯದಲ್ಲಿ ನಿರಾಕರಿಸಿದರೆ ಏನಾಗಬಹುದು ಎಂಬ ಆತಂಕ ಸೃಷ್ಟಿಸಲು ಕೆಲವು ಉದಾಹರಣೆಗಳನ್ನು ನಿಮ್ಮ ಕಣ್ಣೆದುರು ತರುತ್ತಾರೆ. ಅವರು ನಮ್ಮನ್ನು ಕೇವಲ ಕೈಗೊಂಬೆ ಎಂದು ನೋಡುತ್ತಾರೆ. ಅವರಿಗೆ ನಮ್ಮ ಮೇಲೆ ಯಾವುದೇ ನಿಜವಾದ ಗೌರವ ಇರುವುದಿಲ್ಲ, ನಮ್ಮ ಹೆಸರನ್ನು ಬಳಸಿಕೊಳ್ಳುವ ಆಸೆ ಮಾತ್ರ ಇರುತ್ತದೆ."
►ಕಾಸ್ಟಿಂಗ್ ಏಜೆನ್ಸಿಯಿಂದ ಅಯೋಧ್ಯೆಯವರೆಗೆ
2024ರ ಜನವರಿಯಲ್ಲಿ ನಡೆದ ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಮಯದಲ್ಲಿ ಜೈನ್ ಅವರ ಪಾತ್ರದ ವ್ಯಾಪ್ತಿ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಿತು. ಅವರು RSS ನ ಹಿರಿಯ ನಾಯಕ ಹಾಗೂ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಅವರೊಂದಿಗೆ ಖುದ್ದಾಗಿ ರಣಬೀರ್ ಕಪೂರ್, ಜಾಕಿ ಶ್ರಾಫ್ ಸೇರಿದಂತೆ ಹಲವರ ಮನೆಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರ ನೀಡಿದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರನ್ನು ಸಂಪರ್ಕಿಸುವಲ್ಲಿಯೂ ಅವರು ಭಾಗಿಯಾಗಿದ್ದರು. ನಂತರ ಮಾಧುರಿ ದೀಕ್ಷಿತ್, ಡಾ. ಶ್ರೀರಾಮ್ ನೆನೆ, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ರಣಬೀರ್ ಕಪೂರ್, ಆಲಿಯಾ ಭಟ್, ಆಯುಷ್ಮಾನ್ ಖುರಾನಾ, ರೋಹಿತ್ ಶೆಟ್ಟಿ ಮತ್ತು ರಾಜ್ಕುಮಾರ್ ಹಿರಾನಿ ಅವರನ್ನು ಖಾಸಗಿ ವಿಮಾನದ ಮೂಲಕ ಅಯೋಧ್ಯೆಗೆ ಕರೆದೊಯ್ಯುವ ಜವಾಬ್ದಾರಿ ವಹಿಸಿಕೊಂಡಿದ್ದರು. ಬಾಲಿವುಡ್ ಗಣ್ಯರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನಡುವಿನ ಭೇಟಿಗೂ ಅವರು ವ್ಯವಸ್ಥೆ ಮಾಡಿದ್ದರು.
2026ರ ಫೆಬ್ರವರಿಯಲ್ಲಿ ಮುಂಬೈನಲ್ಲಿ ನಡೆದ ಎರಡು ದಿನಗಳ RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ರಣಬೀರ್ ಕಪೂರ್, ಕರಣ್ ಜೋಹರ್, ಶಿಲ್ಪಾ ಶೆಟ್ಟಿ, ಜಾಕಿ ಶ್ರಾಫ್, ವಿಕ್ಕಿ ಕೌಶಲ್, ಮಧುರ್ ಭಂಡಾರ್ಕರ್, ಸುಭಾಷ್ ಘಾಯ್, ಪ್ರಸೂನ್ ಜೋಶಿ, ವಿಪುಲ್ ಶಾ, ರವೀನಾ ಟಂಡನ್, ನಿತೇಶ್ ತಿವಾರಿ, ಮನೋಜ್ ಮುಂತಶಿರ್ ಶುಕ್ಲಾ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲೂ ಜೈನ್ ಅವರು ಹಲವು ಚಿತ್ರರಂಗದ ಪ್ರಮುಖರು ಭಾಗವಹಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.
ಸದ್ಯ ಪ್ರಮುಖ ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ OTT ಸಂಸ್ಥೆಯ ಮಾಜಿ ಅಧಿಕಾರಿಯೊಬ್ಬರು ತಮ್ಮ ಅನುಭವವನ್ನು ನ್ಯೂಸ್ಲಾಂಡ್ರಿ ಜತೆ ಈ ರೀತಿ ಹಂಚಿಕೊಂಡಿದ್ದಾರೆ: "ಮುಂಬೈನಲ್ಲಿ ನಡೆದ RSS ಶತಮಾನೋತ್ಸವ ಕಾರ್ಯಕ್ರಮದ ಸಮಯದಲ್ಲಿ ಹಲವು ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದರೂ, ಮೋಹನ್ ಭಾಗವತ್ ಅವರನ್ನು ಗುಪ್ತವಾಗಿ ಭೇಟಿಯಾಗಿದ್ದರು. ಅಂತಹ ಒಬ್ಬ ನಟ ಉಪಸ್ಥಿತರಿದ್ದ ಔತಣಕೂಟದಲ್ಲಿ ನಾನೂ ಇದ್ದೆ. ಅಲ್ಲಿ ಯಾರೋ ಒಬ್ಬರು ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಆ ನಟ ತಕ್ಷಣವೇ ತಡೆದು, 'ದಯವಿಟ್ಟು ನನ್ನ ಫೋಟೋ ತೆಗೆದುಕೊಳ್ಳಬೇಡಿ, ನಾನು ಮುಂಬೈನಲ್ಲೇ ಇಲ್ಲ ಎಂದು ಅವರಿಗೆ ಸುಳ್ಳು ಹೇಳಿದ್ದೇನೆ' ಎಂದರು. ಒಂದು ವೇಳೆ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೂರಲ್ ಆದರೆ, ತಾವು ಸುಳ್ಳು ಹೇಳಿ ಕಾರ್ಯಕ್ರಮದಿಂದ ದೂರ ಉಳಿದಿರುವುದು ಅವರಿಗೆ ಗೊತ್ತಾಗುತ್ತದೆ ಎಂಬ ಭಯ ಆ ನಟನಿಗಿತ್ತು."
ಅಧಿಕಾರ ಕೇಂದ್ರದೊಂದಿಗಿನ ಅವರ ನಿಕಟತೆ ಅವರಿಗೆ ಭಾರೀ ಪ್ರಭಾವ ತಂದುಕೊಟ್ಟಿತ್ತು. ಗೋವಾದಲ್ಲಿ ನಡೆದ 55ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ದಿ ಸಾಬರಮತಿ ರಿಪೋರ್ಟ್' ಚಿತ್ರದ ಪ್ರದರ್ಶನದ ಸಮಯದಲ್ಲಿ, ಜೈನ್ ಅವರು ಚಿತ್ರಮಂದಿರದ ಒಳಗಿನಿಂದಲೇ ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಕರೆ ಮಾಡಿ ಫೋನ್ ಅನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಹಸ್ತಾಂತರಿಸಿದರು. ಪ್ರಮೋದ್ ಸಾವಂತ್ ಅವರು ಏಕ್ತಾ ಕಪೂರ್ ಅವರನ್ನು ವೈಯಕ್ತಿಕವಾಗಿ ಶ್ಲಾಘಿಸಿ, "ವಾಸ್ತವಾಂಶಗಳನ್ನು ಮುನ್ನೆಲೆಗೆ ತಂದಿದ್ದಕ್ಕಾಗಿ" ಧನ್ಯವಾದ ಅರ್ಪಿಸಿದರು. ನಂತರ ಆ ಚಿತ್ರವನ್ನು ಗೋವಾದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಲಾಯಿತು.
ಜೈನ್ ಮೂಲಕ ಮೊದಲ ಬಾರಿಗೆ ಮೋದಿಯವರಿಗೆ ಪರಿಚಯವಾದ ಬಾಲಿವುಡ್ ಪ್ರಮುಖರಲ್ಲಿ ವಿಕ್ರಾಂತ್ ಮಸ್ಸೆ ಮತ್ತು ರಾಜ್ಕುಮಾರ್ ಹಿರಾನಿ ಕೂಡ ಸೇರಿದ್ದಾರೆ. ಇವರು 2024ರ ಜೂನ್ನಲ್ಲಿ ನಡೆದ ಪ್ರಧಾನಮಂತ್ರಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಪಾಲ್ಗೊಂಡಿದ್ದರು. 2025ರ ಸೆಪ್ಟೆಂಬರ್ ನಲ್ಲಿ ಜೈನ್ ಅವರು ಅಹಮದಾಬಾದ್ ನಲ್ಲಿ ನಡೆದ 'ಅದಾನಿ ಗ್ರೀನ್ ಟಾಕ್ಸ್' ಕಾರ್ಯಕ್ರಮಕ್ಕೆ ಮಸ್ಸೆ ಅವರನ್ನು ಕರೆದೊಯ್ದಿದ್ದರು. ಅಲ್ಲಿ ಗೌತಮ್ ಅದಾನಿ ಅವರು '12th Fail' ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟನನ್ನು ಸಾರ್ವಜನಿಕವಾಗಿ ಶ್ಲಾಘಿಸಿದರು.
ಮಸ್ಸೆ ಅವರೊಂದಿಗಿನ ಸಂಬಂಧ ಕೇವಲ ರೆಡ್ ಕಾರ್ಪೆಟ್ ಗಳು ಮತ್ತು ಪ್ರಮಾಣವಚನ ಸಮಾರಂಭಗಳಿಗಷ್ಟೇ ಸೀಮಿತವಾಗಿಲ್ಲ. ಜೈನ್ ಪ್ರಸ್ತುತ ರವಿಶಂಕರ್ ಗುರೂಜಿ ಅವರ ಜೀವನಾಧಾರಿತ 'ವೈಟ್' ಎಂಬ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊಲಂಬಿಯಾದ ಐದು ದಶಕಗಳ ಸುದೀರ್ಘ ಅಂತರ್ಯುದ್ಧವನ್ನು ಕೊನೆಗೊಳಿಸುವಲ್ಲಿ ರವಿಶಂಕರ್ ವಹಿಸಿದ ಪಾತ್ರದ ಸುತ್ತ ಈ ಚಿತ್ರ ಸಾಗುತ್ತದೆ. ಇದರಲ್ಲಿ ವಿಕ್ರಾಂತ್ ಮಸ್ಸೆ ಆಧ್ಯಾತ್ಮಿಕ ಗುರುವಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು 2019ರ ಬಾಲಾಕೋಟ್ ವೈಮಾನಿಕ ದಾಳಿಯ ಪ್ರೇರಣೆಯ ಸಿನಿಮಾ 'ಫೈಟರ್' ಖ್ಯಾತಿಯ ಸಿದ್ಧಾರ್ಥ್ ಆನಂದ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸಲಾಗುತ್ತಿದೆ.
ಜೈನ್ ಮತ್ತು ಅವರ ಪತ್ನಿ ನೀತು ಅವರು ರವಿಶಂಕರ್ ಗುರೂಜಿ ಅವರ ನಿಕಟ ಅನುಯಾಯಿಗಳು. ಈ ಸಂಪರ್ಕ ಕೇವಲ ವೈಯಕ್ತಿಕ ನಂಬಿಕೆಗೆ ಮಾತ್ರ ಸೀಮಿತವಾಗಿಲ್ಲ. ಲೋಕಸಭೆ ಚುನಾವಣೆಗಳು ಬಿರುಸಿನಿಂದ ನಡೆಯುತ್ತಿದ್ದ 2024ರ ಮೇ 3ರಂದು ರವಿಶಂಕರ್ ಮತ್ತು ವಿಕ್ರಾಂತ್ ಮಸ್ಸೆ ಇಬ್ಬರೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದ 'ವಿಕಸಿತ್ ಭಾರತ್ ಅಂಬಾಸಿಡರ್ ಯುವ ಸಂವಾದ' ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿ, ಸುಮಾರು 4,000 ಹೊಸ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಹಿತೇಶ್ ಜೈನ್ ಅವರ 'ಬ್ಲೂಕ್ರಾಫ್ಟ್' ಸಂಸ್ಥೆಯು ಆಯೋಜಿಸಿತ್ತು. ಆ ಸಂವಾದದಲ್ಲಿ ರವಿಶಂಕರ್ ಅವರು ಅಯೋಧ್ಯೆಯ ರಾಮಮಂದಿರವನ್ನು ಉಲ್ಲೇಖಿಸಿ, ಮೋದಿ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು. ಜೈನ್ ಅವರ ಸಿನಿಮಾದಲ್ಲಿ ರವಿಶಂಕರ್ ಪಾತ್ರ ಮಾಡುತ್ತಿರುವ ನಟ, ಅದೇ ರವಿಶಂಕರ್ ಅವರೊಂದಿಗೆ ಬ್ಲೂಕ್ರಾಫ್ಟ್ ಆಯೋಜಿಸಿದ ಸರ್ಕಾರಿ ಅಭಿಯಾನದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
'ಚಲೋ ಜೀತೆ ಹೈ' ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ನಲ್ಲಿ ಮಹಾವೀರ್ ಜೈನ್ ಅವರ ಪ್ರಭಾವ ವೇಗವಾಗಿ ಬೆಳೆದಿದ್ದಲ್ಲದೆ, ಅವರು ಹಲವಾರು ಹೊಸ ಕಂಪೆನಿಗಳನ್ನೂ ಆರಂಭಿಸಿದ್ದಾರೆ.
ಕಂಪೆನಿಗಳು ಮತ್ತು ಬ್ಲೂಕ್ರಾಫ್ಟ್ ನಡುವಿನ ಸಂಪರ್ಕ
ಸಾರ್ವಜನಿಕವಾಗಿ ಲಭ್ಯವಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA) ದಾಖಲೆಗಳ ಪ್ರಕಾರ, ಮಹಾವೀರ್ ಜೈನ್ ಅವರು ಹಲವು ಚಲನಚಿತ್ರ ಕಂಪೆನಿಗಳನ್ನು ಆರಂಭಿಸಿದ್ದು, ಇವುಗಳಲ್ಲಿ ರಾಜಕೀಯ ಸಂಪರ್ಕ ಹೊಂದಿರುವ ಹಲವು ಉದ್ಯಮಿಗಳು ಹಾಗೂ ಹಣಕಾಸುದಾರರು ಬಂಡವಾಳ ಹೂಡಿದ್ದಾರೆ.
ಮಹಾವೀರ್ ಜೈನ್, ಅವರ ಪತ್ನಿ ನೀತು ಮತ್ತು ಸಹೋದರ ಸುರೇಂದ್ರ ಅವರು ನಿರ್ದೇಶಕರಾಗಿರುವ 'ಸನ್ ಡಯಲ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು 2012ರಲ್ಲಿ ಆರಂಭವಾಗಿತ್ತು. ಈ ಸಂಸ್ಥೆಯು 2014 ಮತ್ತು 2017ರ ನಡುವೆ ಶೂನ್ಯ ಆದಾಯವನ್ನು ವರದಿ ಮಾಡಿತ್ತು. 'ಚಲೋ ಜೀತೆ ಹೈ' ಚಿತ್ರದ ನಂತರ ಕಂಪೆನಿಯ ಆದಾಯವು ತೀವ್ರವಾಗಿ ಏರಿಕೆಯಾಗಿದ್ದು, 2019–20ರ ವೇಳೆಗೆ 14.98 ಕೋಟಿ ರೂ. ತಲುಪಿತ್ತು. ಆ ಬಳಿಕ ಮತ್ತೆ ಕುಸಿತ ಕಂಡಿದೆ.
ಎಪ್ರಿಲ್ 2022ರಲ್ಲಿ ಆರಂಭವಾದ 'ಮಹಾವೀರ್ ಜೈನ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು 2023–24ರಲ್ಲಿ ಕೇವಲ 201 ರೂ. ಆದಾಯ ವರದಿ ಮಾಡಿತ್ತು. ಆದರೆ 2024–25ರ ವೇಳೆಗೆ ಇದರ ಆದಾಯ 4.49 ಕೋಟಿ ರೂ.ಗಿಂತಲೂ ಅಧಿಕವಾಗಿತ್ತು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ 'ಮಹಾವೀರ್ ಜೈನ್ ಫಿಲ್ಮ್ಸ್' ಸಂಸ್ಥೆಯೊಂದಿಗೆ ಕೈಜೋಡಿಸಿದ ವ್ಯಕ್ತಿ ಯಾರು ಎಂಬುದು. ಅವರು ಬ್ಲೂಕ್ರಾಫ್ಟ್ ಸಂಸ್ಥೆಯ ಪ್ರಮುಖ ವ್ಯಕ್ತಿ ಹಾಗೂ ಹಿತೇಶ್ ಜೈನ್ ಅವರ ಸಹೋದರನಾಗಿರುವ ಸುಜಿತ್ ಜೈನ್.
ಈ ಕಂಪೆನಿಗಳಿಗೆ ಸಂಬಂಧಿಸಿದ ಇತರ ಹೂಡಿಕೆದಾರರು ಮತ್ತು ನಿರ್ದೇಶಕರಲ್ಲಿ ಮುಂಬೈ ಬಿಜೆಪಿ ಸಹ-ಖಜಾಂಚಿ ಕವಿನ್ ಶಾ ಅವರ ಪತ್ನಿ ಜೈನಾ ಕವಿನ್ ಶಾ, ಎನಾಮ್ ಹೋಲ್ಡಿಂಗ್ಸ್ ಅಧ್ಯಕ್ಷ ವಲ್ಲಭ್ ಬನ್ಸಾಲಿ ಅವರ ಪುತ್ರ ಸರಳ್ ಬನ್ಸಾಲಿ, ಮೋತಿಲಾಲ್ ಓಸ್ವಾಲ್ ಫ್ಯಾಮಿಲಿ ಟ್ರಸ್ಟ್ನ ಸದಸ್ಯರು, ಜೆರೋಧಾ ಸಂಸ್ಥೆಯ ನಿಖಿಲ್ ಕಾಮತ್ ಮತ್ತು ಹೂಡಿಕೆದಾರ ಅಭಿಜೀತ್ ಪೈ ಸಹ-ಸ್ಥಾಪಿಸಿರುವ 'ಗೃಹಾಸ್ ಪ್ರಾಪ್ಟೆಕ್ LLP', ಮುನೋತ್ ಉದ್ಯಮ ಸಮೂಹದ ಗೌತಮ್ ಮುನೋತ್ ಹಾಗೂ ಎಬಿ ಕನ್ಸ್ಟ್ರಕ್ಷನ್ ಮತ್ತು ಸ್ಪೈಸಿ ಎಂಟರ್ಟೈನ್ಮೆಂಟ್ ಸಂಸ್ಥೆಯ ದೇವ್ ಗೋವಿಂದ್ ಬಿನಾನಿ ಸೇರಿದ್ದಾರೆ.
ನೀತು ಜೈನ್ ಮತ್ತು ಸುರೇಂದ್ರ ಜೈನ್ ಅವರನ್ನು ಟ್ರಸ್ಟಿಗಳನ್ನಾಗಿ ಒಳಗೊಂಡು 2021ರಲ್ಲಿ ನೋಂದಾಯಿಸಲಾದ 'ಚೇಂಜ್ ವಿದಿನ್ ಫೌಂಡೇಶನ್', ಪ್ರಧಾನಿ ಮೋದಿ ಅವರು ಆರಂಭಿಸಿದ 'ಚೇಂಜ್ ವಿದಿನ್' ಉಪಕ್ರಮದ ಪ್ರತಿಬಿಂಬದಂತಿದೆ. ಬಾಲಿವುಡ್ ತನ್ನ ಕಥೆ ಹೇಳುವ ವಿಧಾನ ಮತ್ತು ಸಾಂಸ್ಕೃತಿಕ ದಿಕ್ಕನ್ನು ಬದಲಾಯಿಸಿಕೊಳ್ಳುವ ಬದ್ಧತೆಯಾಗಿ ಈ ಉಪಕ್ರಮವನ್ನು ನಂತರದ ದಿನಗಳಲ್ಲಿ ಬಿಂಬಿಸಲಾಯಿತು.
2023ರ ಗುರುಪೂರ್ಣಿಮೆಯ ಸಂದರ್ಭದಲ್ಲಿ ಜೈನ್ ಅವರು ತಮಗೆ ಪ್ರೇರಣೆಯಾದ ಗುರುಗಳ ಪಟ್ಟಿಯೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಪ್ರಧಾನಿ ಮೋದಿ, ರವಿಶಂಕರ್ ಗುರೂಜಿ, ಆಮೀರ್ ಖಾನ್, ಸೂರಜ್ ಬರ್ಜಾತ್ಯಾ, ರಾಜ್ಕುಮಾರ್ ಹಿರಾನಿ, ಜೆರೋಧಾದ ನಿಖಿಲ್ ಕಾಮತ್, ಮೋತಿಲಾಲ್ ಓಸ್ವಾಲ್, ವಲ್ಲಭ್ ಬನ್ಸಾಲಿ ಮತ್ತು ಜಿಯೋ ಸ್ಟುಡಿಯೋಸ್ನ ಸಿಇಒ ಜ್ಯೋತಿ ದೇಶಪಾಂಡೆ ಅವರ ಹೆಸರುಗಳಿದ್ದವು. ಕೆಲವರ ಪ್ರಕಾರ ಇದು ಕೇವಲ ಗುರುಗಳ ಪಟ್ಟಿಯಾಗಿರದೆ, ಅವರ ಪ್ರಭಾವಿ ಸಂಪರ್ಕ ಜಾಲದ ನಕ್ಷೆಯಾಗಿತ್ತು.
ಈ ಕುರಿತು ಪ್ರತಿಕ್ರಿಯೆ ಕೇಳಿದಾಗ ಮಹಾವೀರ್ ಜೈನ್ ಅವರು, "ನಾನು ಮಾಧ್ಯಮಗಳಿಂದ ದೂರವಿರಲು ಬಯಸುತ್ತೇನೆ. ನನ್ನ ಸಿನಿಮಾಗಳು ಬಿಡುಗಡೆಯಾಗುವ ಸಮಯದಲ್ಲಿ ಮಾತ್ರ ನಾನು ಅವುಗಳ ಬಗ್ಗೆ ಮಾತನಾಡುತ್ತೇನೆ. ಈ ವಿಷಯದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ," ಎಂದಿದ್ದಾರೆ.
►ಹಿತೇಶ್ ಜೈನ್: ತೆರೆಮರೆಯ ಸೂತ್ರಧಾರ
ಮಹಾವೀರ್ ಜೈನ್ ಅವರನ್ನು ಮೃದು ಸ್ವಭಾವದ, ವ್ಯವಹಾರ ಚತುರ ಎಂದು ಗುರುತಿಸಿದರೆ, ಉದ್ಯಮದ ಒಳಗಿನವರ ಪ್ರಕಾರ ಹಿತೇಶ್ ಜೈನ್ ಅವರಿಗಿಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿ. ಅವರು ತೆರೆಮರೆಯಿಂದಲೇ ಕೆಲಸ ಮಾಡುತ್ತಾರೆ. ಕಾನೂನು ವ್ಯವಸ್ಥೆ, ರಾಜಕೀಯ ರಚನೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಏಕಕಾಲಕ್ಕೆ ತಮ್ಮ ಪ್ರಭಾವ ಹೊಂದಿದ್ದಾರೆ.
ಹಿತೇಶ್ ಜೈನ್ ಒಬ್ಬ ವಕೀಲ, ಬಿಜೆಪಿ ಪದಾಧಿಕಾರಿ ಹಾಗೂ ಮೋದಿ ಸರ್ಕಾರದ ಅತ್ಯಂತ ಪ್ರಭಾವಶಾಲಿ ಮತ್ತು ತೆರೆಮರೆಯ ಸಂವಹನ ವೇದಿಕೆಯಾಗಿರುವ 'ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್'ನ ಸಹ-ಸ್ಥಾಪಕರಾಗಿದ್ದಾರೆ.
ಅವರು ಪುಣೆಯ RSS ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕುಟುಂಬದಿಂದ ಬಂದವರು. ಅವರ ತಂದೆ ಎಸ್. ಕೆ. ಜೈನ್ ಅಲ್ಲಿನ ಪ್ರಸಿದ್ಧ ವಕೀಲರಾಗಿದ್ದರು. ಹಿತೇಶ್ ಅವರು ಸಿಂಬಯೋಸಿಸ್ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, 1996ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಎಲ್ಎಲ್ಎಂ ಪೂರ್ಣಗೊಳಿಸಿದರು. 1998ರಲ್ಲಿ ಮುಂಬೈಗೆ ವಲಸೆ ಬಂದ ಅವರು ಬಾಂಬೆ ಹೈಕೋರ್ಟ್ನಲ್ಲಿ ವಕೀಲ ವೃತ್ತಿ ಆರಂಭಿಸಿದರು. ಹಲವು ಪ್ರಮುಖ ಕಾನೂನು ಸಂಸ್ಥೆಗಳಲ್ಲಿ ಕೆಲಸ ಮಾಡಿದ ನಂತರ, ಡಿಸೆಂಬರ್ 2018ರಲ್ಲಿ 'ಪರಿಣಾಮ್ ಲಾ ಅಸೋಸಿಯೇಟ್ಸ್' ಸಂಸ್ಥೆಯನ್ನು ಸ್ಥಾಪಿಸಿದರು.
ಅವರ ನಿಜವಾದ ಏಳಿಗೆಯಾಗಿದ್ದು ರಾಜಕೀಯದ ಮೂಲಕವೇ.
2016ರಲ್ಲಿ ಹಿತೇಶ್ ಜೈನ್ ಅವರು ರಾಜೇಶ್ ಜೈನ್ ಅವರೊಂದಿಗೆ ಸೇರಿ 'ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್' ಅನ್ನು ಸ್ಥಾಪಿಸಿದರು. ನಂತರ 2020ರಲ್ಲಿ ಅವರನ್ನು ಮುಂಬೈ ಬಿಜೆಪಿ ಘಟಕದ ಉಪಾಧ್ಯಕ್ಷ ಹಾಗೂ ವಕ್ತಾರರನ್ನಾಗಿ ನೇಮಿಸಲಾಯಿತು. ಆದರೆ ಪಕ್ಷದಲ್ಲಿ ಅಧಿಕೃತ ಜವಾಬ್ದಾರಿ ಸಿಗುವ ಬಹಳ ಮೊದಲೇ ಅವರು ಬಾಲಿವುಡ್ ಮತ್ತು ಬಿಜೆಪಿಯ ಉನ್ನತ ವಲಯದ ನಡುವೆ ಪ್ರಮುಖ ಸಂಪರ್ಕ ಸೇತುವೆಯಾಗಿ ಬೆಳೆದಿದ್ದರು.
2018ರಿಂದ ಚಲನಚಿತ್ರ ರಂಗ ಮತ್ತು ರಾಜಕೀಯ ಶಕ್ತಿಗಳು ಒಟ್ಟಿಗೆ ಸೇರಿದ ಪ್ರತಿಯೊಂದು ಪ್ರಮುಖ ಸಂದರ್ಭಗಳಲ್ಲೂ ಇವರ ಪಾತ್ರ ಎದ್ದು ಕಾಣುತ್ತಿತ್ತು. ಡಿಸೆಂಬರ್ 2018ರ ರಾಜಭವನ ಸಭೆ, ದಿಲ್ಲಿಯ ಪ್ರಧಾನಿ ನಿವಾಸದಲ್ಲಿ ನಡೆದ ಗಣ್ಯರ ಸಭೆಗಳು ಹಾಗೂ ವೇವ್ಸ್ (WAVES) ಶೃಂಗಸಭೆಯ ಉಪಸಮಿತಿಯಲ್ಲಿ ಇವರು ಕೆಲಸ ಮಾಡಿದರು. ಆ ವೇಳೆ ಮಹಾವೀರ್ ಜೈನ್ ಬಾಲಿವುಡ್ ನಟರೊಂದಿಗೆ ಸಮನ್ವಯ ಸಾಧಿಸುತ್ತಿದ್ದರು. 2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಪರವಾಗಿ ಬೆಂಬಲ ಕೋರಲು ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಬಾಲಿವುಡ್ ಗಣ್ಯರ ನಡುವೆ ನಡೆದ ಮುಚ್ಚಿದ ಬಾಗಿಲಿನ ಸಭೆಯ ಆಯೋಜನೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಈ ಸಭೆಯಲ್ಲಿ ರಿತೇಶ್ ಸಿಧ್ವಾನಿ, ಭೂಷಣ್ ಕುಮಾರ್, ಪ್ರಸೂನ್ ಜೋಶಿ, ಕೈಲಾಶ್ ಖೇರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು ಮತ್ತು ಮಹಾವೀರ್ ಜೈನ್ ಕೂಡ ಉಪಸ್ಥಿತರಿದ್ದರು.
ತಮ್ಮ 'ಪರಿಣಾಮ್ ಲಾ ಅಸೋಸಿಯೇಟ್ಸ್' ಸಂಸ್ಥೆಯ ಮೂಲಕ ಹಿತೇಶ್ ಜೈನ್ ಮನರಂಜನಾ ಉದ್ಯಮದಲ್ಲಿ ಭದ್ರವಾದ ಹಿಡಿತ ಸಾಧಿಸಿದರು. ಇವರ ಕಾನೂನು ಸಂಸ್ಥೆಯು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೊ ಸಂಸ್ಥೆಗಳ ಪ್ರಮುಖ ಪ್ರಾಜೆಕ್ಟ್ಗಳಾದ ಗನ್ಸ್ ಅಂಡ್ ಗುಲಾಬ್ಸ್, ಫರ್ಜಿ, ದಿ ಫ್ಯಾಮಿಲಿ ಮ್ಯಾನ್, ರಾಣಾ ನಾಯ್ಡು ಮತ್ತು ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಮುಂತಾದವುಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದೆ. ಅಬಂಡೆನ್ಶಿಯಾ ಎಂಟರ್ಟೈನ್ಮೆಂಟ್, ಡಿ2ಆರ್ ಫಿಲ್ಮ್ಸ್ ಮತ್ತು ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಈ ಜಾಲ ಮಾರ್ಗದರ್ಶನ ನೀಡಿದೆ. ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕೆ. ಎಲ್. ರಾಹುಲ್, ಕಪಿಲ್ ಶರ್ಮಾ ಮತ್ತು ಗುರು ರಾಂಧವಾ ಅವರ ವಾಣಿಜ್ಯ ಒಪ್ಪಂದಗಳು ಹಾಗೂ ಲೈಸೆನ್ಸಿಂಗ್ ಕೆಲಸಗಳನ್ನೂ ಈ ಸಂಸ್ಥೆಯೇ ನಿರ್ವಹಿಸಿದೆ.
►ಕಾನೂನು, ಸಿನಿಮಾ ಕ್ರೆಡಿಟ್ಸ್ ಮತ್ತು 'ಹಿತಾಸಕ್ತಿ ಸಂಘರ್ಷ'
ಹಿತೇಶ್ ಜೈನ್ ಅವರ ಹೆಸರು ಸಿನಿಮಾಗಳ ಆರಂಭದ ಕ್ರೆಡಿಟ್ಸ್ನಲ್ಲೂ ಕಾಣಿಸಿಕೊಳ್ಳಲಾರಂಭಿಸಿತು. ಆರ್ಟಿಕಲ್ 370 ರದ್ದತಿಯನ್ನು ಆಧರಿಸಿದ ಮತ್ತು ಮೋದಿ ಹಾಗೂ ಅಮಿತ್ ಶಾ ಅವರ ಪಾತ್ರಗಳನ್ನು ಒಳಗೊಂಡಿದ್ದ 'ಆರ್ಟಿಕಲ್ 370' ಸಿನಿಮಾದ ಆರಂಭದಲ್ಲಿ ಇವರಿಗೆ ವಿಶೇಷ ಧನ್ಯವಾದ ಅರ್ಪಿಸಲಾಗಿತ್ತು. ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಚಿತ್ರದಲ್ಲೂ ಇವರ ಹೆಸರು ಕಾಣಿಸಿಕೊಂಡಿತ್ತು. 'ಬ್ರಹ್ಮಾಸ್ತ್ರ' ಮತ್ತು 'ರಾಮ್ ಸೇತು' ಚಿತ್ರಗಳಲ್ಲೂ ಇವರ ಹೆಸರನ್ನು ಉಲ್ಲೇಖಿಸಲಾಗಿತ್ತು ಹಾಗೂ 'ದಿ ಸಾಬರಮತಿ ರಿಪೋರ್ಟ್' ಚಿತ್ರದಲ್ಲಿ ಇವರ ಕಾನೂನು ಸಂಸ್ಥೆಗೆ ಧನ್ಯವಾದ ಹೇಳಲಾಗಿತ್ತು.
'ಆರ್ಟಿಕಲ್ 370' ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಬ್ಲೂಕ್ರಾಫ್ಟ್ ಸಂಸ್ಥೆಯು 'Article 370: Undoing the Unjust, A New Future for J&K' ಎಂಬ ಪುಸ್ತಕವನ್ನು ಪ್ರಕಟಿಸಿತು. ಅದರಲ್ಲಿ, "ಆರ್ಟಿಕಲ್ 370 ರದ್ದತಿಯನ್ನು ಖಚಿತಪಡಿಸುವ ಮೂಲಕ ಪ್ರಧಾನಿ ಮೋದಿ ಇತಿಹಾಸದ ಹಾದಿಯನ್ನೇ ಬದಲಾಯಿಸಿದರು ಮತ್ತು ಬಿಜೆಪಿಯ ದಶಕಗಳ ಹಳೆಯ ಬದ್ಧತೆಯನ್ನು ಈಡೇರಿಸಿದರು" ಎಂದು ಬರೆಯಲಾಗಿತ್ತು. ಇದೇ ವೇಳೆ ಮಹಾವೀರ್ ಅವರ ಪತ್ನಿ ನೀತು ಜೈನ್ ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿ, ವಿಶೇಷವಾಗಿ ಹಿತೇಶ್ ಜೈನ್ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಈ ಹಂತದಲ್ಲಿ ಸಿನಿಮಾ, ಪುಸ್ತಕ ಮತ್ತು ಅವುಗಳ ಹಿಂದಿರುವ ವ್ಯಕ್ತಿಗಳು ಒಂದೇ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿ ಮಾರ್ಪಟ್ಟಿದ್ದರು.
ಹೆಸರು ಹೇಳಲಿಚ್ಛಿಸದ ಸೆನ್ಸಾರ್ ಮಂಡಳಿಯ (CBFC) ಸದಸ್ಯರೊಬ್ಬರು ಈ ವ್ಯವಸ್ಥೆಯಲ್ಲಿನ ಗೊಂದಲಗಳ ಬಗ್ಗೆ ಮಾತನಾಡುತ್ತಾ, "ಹಿತೇಶ್ ಜೈನ್ ಸರ್ಕಾರದ ಪರವಾಗಿ ಸೆನ್ಸಾರ್ ಮಂಡಳಿಯ ಪ್ರಕರಣಗಳನ್ನು ನಿಭಾಯಿಸುತ್ತಾರೆ. ಈ ಹಿಂದೆ ಅವರು ಸಾಮಾನ್ಯ ವಕೀಲರಾಗಿದ್ದರು, ಆದರೆ ಈಗ ಇದ್ದಕ್ಕಿದ್ದಂತೆ ಪ್ರಭಾವಶಾಲಿಯಾಗಿದ್ದಾರೆ. ಅವರು ಮುಂಬೈ ಬಿಜೆಪಿಯ ಪದಾಧಿಕಾರಿಯಾಗಿದ್ದು, ಒಂದು ರೀತಿಯಲ್ಲಿ ಲಾಬಿಗಾರರಾಗಿ ಬದಲಾಗಿದ್ದಾರೆ. ಸೆನ್ಸಾರ್ ಮಂಡಳಿಯ ಪ್ರಕರಣಗಳಿಗೆ ಕೇವಲ *5,000 ರಿಂದ 6,000 ರೂ.*ಗಳಷ್ಟು ಕಡಿಮೆ ಸಂಭಾವನೆ ಸಿಗುತ್ತದೆಯಾದರೂ ಅವರು ಈ ವಾದಗಳನ್ನು ನಡೆಸುತ್ತಾರೆ. ಇದರೊಂದಿಗೆ ಹಲವು ಸಿನಿಮಾಗಳ ಆರಂಭದಲ್ಲೂ ಅವರ ಹೆಸರು ಕಾಣಿಸಿಕೊಳ್ಳುತ್ತದೆ. ಇಲ್ಲಿ ಹಿತಾಸಕ್ತಿಗಳ ಸಂಘರ್ಷ (conflict of interest) ಎದ್ದು ಕಾಣುತ್ತದೆ. ಉದಾಹರಣೆಗೆ, ನಾನೇ ಒಬ್ಬ ನಿರ್ಮಾಪಕನಾಗಿದ್ದು ನನ್ನ ಸಿನಿಮಾ ಪ್ರಮಾಣೀಕರಣಕ್ಕೆ ಹೋದಾಗ, ನನ್ನ ಸ್ವಂತ ಚಿತ್ರಕ್ಕೆ ನಾನೇ ಹೇಗೆ ಪ್ರಮಾಣಪತ್ರ ನೀಡಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
"ಬಿಜೆಪಿಯ ಪದಾಧಿಕಾರಿಯಾಗಿರುವ, ಸೆನ್ಸಾರ್ ಮಂಡಳಿಯ ಪ್ರಕರಣಗಳನ್ನು ನಿಭಾಯಿಸುವ, ಸ್ವಂತ ಕಾನೂನು ಸಂಸ್ಥೆ ನಡೆಸುವ ಮತ್ತು ಯಾವುದೇ ರಾಜಕೀಯ ಒಲವಿಲ್ಲದ ಸ್ವತಂತ್ರ ಸಂಸ್ಥೆಯಾದ ಭಾರತೀಯ ಕಾನೂನು ಆಯೋಗದ ಸದಸ್ಯರಾಗಿರುವ ಒಬ್ಬರೇ ವ್ಯಕ್ತಿ ಈ ಎಲ್ಲಾ ಜವಾಬ್ದಾರಿಗಳನ್ನು ಏಕಕಾಲದಲ್ಲಿ ಹೇಗೆ ನಿಭಾಯಿಸಲು ಸಾಧ್ಯ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ" ಎಂದು ಆ ಸದಸ್ಯರು ಹೇಳಿದ್ದಾರೆ.
2019ರ ಚುನಾವಣೆಯ ಸಂದರ್ಭದಲ್ಲಿ ವಿವೇಕ್ ಒಬೆರಾಯ್ ನಟನೆಯ 'ಪಿಎಂ ನರೇಂದ್ರ ಮೋದಿ' ಚಿತ್ರವು ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ತಡೆಯಲ್ಪಟ್ಟಾಗ, ಹಿತೇಶ್ ಜೈನ್ ಅವರು ಚುನಾವಣಾ ಆಯೋಗದ ಮುಂದೆ ನಿರ್ಮಾಪಕರ ಪರವಾಗಿ ವಾದ ಮಂಡಿಸಿದ್ದರು. ಈ ಸಿನಿಮಾ ಸಂಪೂರ್ಣ ವಾಣಿಜ್ಯ ಉದ್ದೇಶದ್ದಾಗಿದ್ದು, ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದರು. ಆ ಸಮಯದಲ್ಲಿಯೇ ಅವರು ಬಿಜೆಪಿಯ ಸಕ್ರಿಯ ಪದಾಧಿಕಾರಿಯಾಗಿ ಪ್ರಧಾನಿಯವರ ಜೊತೆ ಬಾಲಿವುಡ್ ಗಣ್ಯರ ಭೇಟಿಗೆ ವ್ಯವಸ್ಥೆ ಮಾಡುತ್ತಿದ್ದರು ಮತ್ತು ಬ್ಲೂಕ್ರಾಫ್ಟ್ ಮೂಲಕ ಸರ್ಕಾರದ ಪ್ರಚಾರ ಅಭಿಯಾನಗಳನ್ನು ಮುನ್ನಡೆಸುತ್ತಿದ್ದರು.
ಕಳೆದ ಕೆಲವು ವರ್ಷಗಳಲ್ಲಿ ಹಿತೇಶ್ ಜೈನ್ ಏಕಕಾಲಕ್ಕೆ ನಿರ್ವಹಿಸಿದ ಜವಾಬ್ದಾರಿಗಳನ್ನು ಗಮನಿಸಿದರೆ ಅವರ ಪ್ರಭಾವದ ಆಳ ತಿಳಿಯುತ್ತದೆ. ಅವರು ಮುಂಬೈ ಬಿಜೆಪಿಯ ಉಪಾಧ್ಯಕ್ಷ ಮತ್ತು ವಕ್ತಾರರಾಗಿದ್ದರು. ಪ್ರಧಾನಿ ಮೋದಿ ಮತ್ತು ಸರ್ಕಾರದ ಆಶಯಗಳನ್ನು ಪ್ರಚಾರ ಮಾಡುವ ಬ್ಲೂಕ್ರಾಫ್ಟ್ ಸಂಸ್ಥೆಯ ಸಹ-ಸ್ಥಾಪಕ ಹಾಗೂ ಪ್ರಮುಖ ಮುಖ್ಯಸ್ಥರಾಗಿದ್ದರು. ಚಲನಚಿತ್ರ ನಿರ್ಮಾಪಕರು ಸೆನ್ಸಾರ್ ಮಂಡಳಿಯ ತೀರ್ಮಾನಗಳನ್ನು ಕೋರ್ಟ್ ನಲ್ಲಿ ಪ್ರಶ್ನಿಸಿದಾಗ, ಮಂಡಳಿಯ ಪರವಾಗಿ ವಾದಿಸುವ ವಕೀಲರೂ ಆಗಿದ್ದರು. ಬಿಜೆಪಿ-RSS ಸಿದ್ಧಾಂತಗಳಿಗೆ ಪೂರಕವಾಗಿರುವ ಸಿನಿಮಾಗಳ ಆರಂಭದ ಕ್ರೆಡಿಟ್ಸ್ನಲ್ಲಿ ಇವರ ಹೆಸರು ರಾರಾಜಿಸುತ್ತಿತ್ತು. ಇವರ ಕಾನೂನು ಸಂಸ್ಥೆಯು ಚಲನಚಿತ್ರ ನಿರ್ಮಾಣ ಸಂಸ್ಥೆಗಳು ಮತ್ತು OTT ವೇದಿಕೆಗಳಿಗೆ ಸಲಹೆ ನೀಡುತ್ತಿತ್ತು. ಇವೆಲ್ಲದರ ನಡುವೆ ಎಪ್ರಿಲ್ 2025ರಲ್ಲಿ ಅವರನ್ನು ಭಾರತೀಯ ಕಾನೂನು ಆಯೋಗದ ಪೂರ್ಣಾವಧಿ ಸದಸ್ಯರನ್ನಾಗಿ ನೇಮಿಸಲಾಯಿತು. ಯಾವುದೇ ರಾಜಕೀಯ ಸಂಪರ್ಕ ಇರಬಾರದ ಈ ಸಂಸ್ಥೆಗೆ ಸೇರಿದ ಅವರು, ಕೇವಲ ಆರು ತಿಂಗಳೊಳಗೆ ಯಾವುದೇ ಸಾರ್ವಜನಿಕ ಕಾರಣಗಳನ್ನು ನೀಡದೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದರು. ಈ ಪ್ರತಿಯೊಂದು ಪಾತ್ರಗಳೂ ವೈಯಕ್ತಿಕವಾಗಿ ಕಾನೂನುಬದ್ಧವಾಗಿಯೇ ಕಾಣಿಸಬಹುದು. ಆದರೆ ಒಟ್ಟಾರೆಯಾಗಿ ನೋಡಿದಾಗ, ಭಾರತದಲ್ಲಿ ಒಂದು ಸಿನಿಮಾ ಬಿಡುಗಡೆಯಾಗಲು ಹಾದುಹೋಗಬೇಕಾದ ನಿಯಂತ್ರಣ, ರಾಜಕೀಯ ಮತ್ತು ಸೃಜನಶೀಲತೆಯ ಎಲ್ಲಾ ಪ್ರಮುಖ ಹಂತಗಳಲ್ಲೂ ಒಬ್ಬನೇ ವ್ಯಕ್ತಿ ಭದ್ರವಾಗಿ ನೆಲೆ ನಿಂತಿರುವುದು ಸ್ಪಷ್ಟವಾಗುತ್ತದೆ.
►'ಪಂಜಾಬ್ 95' ಮತ್ತು ಸಚಿವಾಲಯದ ಸಭೆ
ನಿಯಂತ್ರಣ ವ್ಯವಸ್ಥೆಯಲ್ಲಿ ಜೈನ್ ಅವರ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಅತ್ಯಂತ ಗಮನಾರ್ಹ ವಿದ್ಯಮಾನವು 'ಸತ್ಲುಜ್' ಚಲನಚಿತ್ರದ ಸಂದರ್ಭದಲ್ಲಿ ಕಂಡುಬಂದಿದೆ. ಈ ಹಿಂದೆ 'ಪಂಜಾಬ್ 95' ಎಂದು ಹೆಸರಿಡಲಾಗಿದ್ದ, ದಿಲ್ಜಿತ್ ದೋಸಾಂಜ್ ನಟನೆಯ ಈ ಸಿನಿಮಾ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನವನ್ನು ಆಧರಿಸಿದೆ. ಪ್ರಸೂನ್ ಜೋಶಿ ಅಧ್ಯಕ್ಷರಾಗಿದ್ದ ಸೆನ್ಸಾರ್ ಮಂಡಳಿಯಿಂದ ಈ ಚಿತ್ರ ಭಾರೀ ಕತ್ತರಿ ಪ್ರಯೋಗವನ್ನು ಎದುರಿಸಬೇಕಾಯಿತು. ವರದಿಗಳ ಪ್ರಕಾರ, ಈ ಕಾರಣಕ್ಕಾಗಿಯೇ ಚಿತ್ರವನ್ನು ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಹಿಂಪಡೆಯಲಾಗಿತ್ತು ಮತ್ತು ಇತ್ತೀಚೆಗೆ ಝೀ5 OTT ವೇದಿಕೆಯು ಇದನ್ನು ಡಿಲೀಟ್ ಮಾಡಿದೆ.
ಚಿತ್ರದ ನಿರ್ಮಾಪಕರಾದ ರೋನಿ ಸ್ಕ್ರೂವಾಲಾ ಮತ್ತು ಹನಿ ಟ್ರೆಹಾನ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದಾಗ, 'ಪರಿಣಾಮ್ ಲಾ' ಸಂಸ್ಥೆಯು ಸೆನ್ಸಾರ್ ಮಂಡಳಿಯ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಒಳಗಿನ ವಿದ್ಯಮಾನಗಳನ್ನು ಬಲ್ಲ ಮೂಲಗಳ ಪ್ರಕಾರ, ಜೈನ್ ಅವರ ಪ್ರಭಾವ ಇಲ್ಲಿಗೆ ನಿಲ್ಲಲಿಲ್ಲ. ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ದಿಲ್ಲಿಯಲ್ಲಿ ನಡೆಸಿದ ಸಭೆಗೆ ಸ್ಕ್ರೂವಾಲಾ ಮತ್ತು ಟ್ರೆಹಾನ್ ಅವರನ್ನು ಕರೆಸಿದ್ದರು. ಈ ಸಭೆಯು ಕೇವಲ ಅಧಿಕಾರಿ ಮತ್ತು ನಿರ್ಮಾಪಕರ ನಡುವೆ ಮಾತ್ರ ನಡೆಯಬೇಕಿತ್ತು. ಆದರೆ ಸ್ಕ್ರೂವಾಲಾ ಮತ್ತು ಟ್ರೆಹಾನ್ ಸಚಿವಾಲಯದ ಸಭಾಂಗಣಕ್ಕೆ ತಲುಪಿದಾಗ, ಅಲ್ಲಿ ಈಗಾಗಲೇ ಹಿತೇಶ್ ಜೈನ್ ಉಪಸ್ಥಿತರಿದ್ದುದನ್ನು ನೋಡಿ ಆಶ್ಚರ್ಯಚಕಿತರಾದರು.
ಸಭೆಯ ಅವಧಿಯಲ್ಲಿ ಚಲನಚಿತ್ರಕ್ಕೆ ಪ್ರಸೂನ್ ಜೋಶಿ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವುದರಿಂದ ಅವರೊಂದಿಗೆ ಏನಾದರೂ ವೈಯಕ್ತಿಕ ಭಿನ್ನಾಭಿಪ್ರಾಯವಿದೆಯೇ ಎಂದು ಸಚಿವಾಲಯದ ಅಧಿಕಾರಿ ನಿರ್ಮಾಪಕರನ್ನು ಪ್ರಶ್ನಿಸಿದರು. ಅಂತರರಾಷ್ಟ್ರೀಯ ಮಟ್ಟದ ಬಿಡುಗಡೆಯನ್ನು ಹಿಂಪಡೆಯಲು ನಿರ್ಮಾಪಕರು ಒಪ್ಪಿಕೊಂಡಿರುವುದರಿಂದ, ಚಿತ್ರದ ದೇಶೀಯ ಬಿಡುಗಡೆಗೆ ಸುಲಭವಾಗುವಂತೆ ಪ್ರಯತ್ನಿಸಲಾಗುವುದು ಎಂದೂ ಅವರಿಗೆ ತಿಳಿಸಲಾಯಿತು. ಸಭೆಯಲ್ಲಿ ಜೈನ್ ಅವರ ಉಪಸ್ಥಿತಿ ಸ್ಕ್ರೂವಾಲಾ ಮತ್ತು ಟ್ರೆಹಾನ್ ಅವರಿಗೆ ತೀವ್ರ ಅಸಮಾಧಾನ ಉಂಟುಮಾಡಿತ್ತು. ಸಭೆಯ ನಂತರ ಅವರು ಅಧಿಕಾರಿಯ ಬಳಿ ತಮ್ಮ ಮುಜುಗರವನ್ನು ವ್ಯಕ್ತಪಡಿಸಿದರು. ಆದರೂ ಅಸಹಾಯಕರಾಗಿದ್ದರಿಂದ ಅವರಿಗೆ ಬೇರೆ ದಾರಿಯಿರಲಿಲ್ಲ.
ನ್ಯೂಸ್ಲಾಂಡ್ರಿ ಸಂಸ್ಥೆಯು ಈ ವಿಷಯವನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ಈ ವರದಿ ಪ್ರಕಟವಾಗುವವರೆಗೂ ಸಂಬಂಧಪಟ್ಟವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಹೇಳಿದೆ.
ಮುಂಚೂಣಿಯಲ್ಲಿರುವ ಚಲನಚಿತ್ರ ನಿರ್ದೇಶಕರೊಬ್ಬರು ಈ ಬಗ್ಗೆ ಹೇಳುತ್ತಾ, "ಆಡಳಿತ ಪಕ್ಷವು ಚಲನಚಿತ್ರ ಉದ್ಯಮದೊಳಗೆ ಪ್ರವೇಶಿಸಲು ಮತ್ತು ಚಿತ್ರಗಳ ಸೃಜನಶೀಲ ವಿಷಯ ಹಾಗೂ ಕಥಾಹಂದರವನ್ನು ನಿಯಂತ್ರಿಸಲು ಸೆನ್ಸಾರ್ ಮಂಡಳಿಯು ಒಂದು ಪ್ರವೇಶ ದ್ವಾರವಾಗಿ ಬದಲಾಗಿದೆ. ಹಿತೇಶ್ ಜೈನ್ ಸೆನ್ಸಾರ್ ಮಂಡಳಿಯ ವಕೀಲರಾಗಿದ್ದಾರೆ ಮತ್ತು ಅವರ ಕಂಪೆನಿಯಾದ ಪರಿಣಾಮ್ ಲಾ ಅದರ ಬಹುತೇಕ ಪ್ರಕರಣಗಳನ್ನು ನಿಭಾಯಿಸುತ್ತದೆ. ಯಾವುದೇ ನಿರ್ಮಾಪಕರು ಸ್ವತಂತ್ರ ಅಥವಾ ಭಿನ್ನವಾದ ಸಿನಿಮಾ ಮಾಡಲು ಪ್ರಯತ್ನಿಸಿದರೆ, ಆ ಚಿತ್ರದಿಂದ ಸರ್ಕಾರಕ್ಕೆ ಏನು ಪ್ರಯೋಜನ ಎಂದು ಸೆನ್ಸಾರ್ ಮಂಡಳಿ ಮತ್ತು ಇಂತಹ ಅಧಿಕಾರ ಕೇಂದ್ರಗಳು ಪ್ರಶ್ನಿಸುತ್ತವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ತಮ್ಮ ಪ್ರಾಜೆಕ್ಟ್ ತಡೆಯಲ್ಪಟ್ಟಿದ್ದ ಮತ್ತೊಬ್ಬ ನಿರ್ದೇಶಕರು ವ್ಯಂಗ್ಯವಾಗಿ, "ಕೆಲವೊಮ್ಮೆ ನನ್ನ ಸಿನಿಮಾ ಯಾವುದೇ ಅಡೆತಡೆಯಿಲ್ಲದೆ ಬಿಡುಗಡೆಯಾಗಬೇಕಾದರೆ, ನಾನು ನನ್ನ ವಕೀಲರನ್ನು ಬದಲಾಯಿಸಿ ಪರಿಣಾಮ್ ಲಾ ಸಂಸ್ಥೆಗೆ ಹೋಗಬೇಕು ಎನಿಸುತ್ತದೆ. ಇಲ್ಲದಿದ್ದರೆ ಪರಿಣಾಮ ಪೂರಕವಾಗಿರುವುದಿಲ್ಲ. ಈ ದಿನಗಳಲ್ಲಿ, ಪರಿಣಾಮ್ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವವರಿಗೆ ಮಾತ್ರ ಧನಾತ್ಮಕ ಪರಿಣಾಮ ಸಿಗುತ್ತಿರುವಂತೆ ಕಾಣುತ್ತಿದೆ" ಎಂದಿದ್ದಾರೆ.
ಸೃಜನಶೀಲ ಸ್ವಾತಂತ್ರ್ಯ ಧಕ್ಕೆಯಾಗಿರುವ ಬಗ್ಗೆ ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರು ಮಾತನಾಡುತ್ತಾ, "ಸಿನಿಮಾಟೋಗ್ರಾಫ್ ಕಾಯ್ದೆಯ ಪ್ರಕಾರ, ಸೆನ್ಸಾರ್ ಮಂಡಳಿಯು ಪ್ರತಿ ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ ಸಭೆಗಳನ್ನು ನಡೆಸಬೇಕು. ಆದರೆ ಕಳೆದ ಏಳು ವರ್ಷಗಳಿಂದ ಮಂಡಳಿಯ ಒಂದೇ ಒಂದು ಸಭೆಯೂ ನಡೆದಿಲ್ಲ. ಮಂಡಳಿಯು ಕೇವಲ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದೆ. ಪ್ರಸೂನ್ ಜೋಶಿ ಅವರನ್ನು 2017ರಲ್ಲಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಮತ್ತು ಉಳಿದ ಸದಸ್ಯರನ್ನು ಅದೇ ಸಮಯದಲ್ಲಿ ಮೂರು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ನಮ್ಮ ಅಧಿಕಾರಾವಧಿ 2020ರ ವೇಳೆಗೆ ಕೊನೆಗೊಂಡಿದ್ದರೂ, ಅವರು ಅದರ ನಂತರವೂ ಅಧ್ಯಕ್ಷರಾಗಿ ಮುಂದುವರಿದಿದ್ದರು. ಇಡೀ ಸೆನ್ಸಾರ್ ಮಂಡಳಿಯು ಅವರ ಇಚ್ಛೆಯಂತೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಅವರು ಇತರ ಸದಸ್ಯರ ಮಾತು ಕೇಳುವುದನ್ನು ನಿಲ್ಲಿಸಿದ್ದರು ಮತ್ತು ಮಂಡಳಿಯ ಕಾರ್ಯವೈಖರಿ ಸಂಪೂರ್ಣವಾಗಿ ಅಪಾರದರ್ಶಕವಾಗಿತ್ತು. ಈ ಪ್ರಕ್ರಿಯೆಯಲ್ಲಿ ಭಾರತೀಯ ಚಿತ್ರರಂಗದ ಸೃಜನಶೀಲ ಸ್ವಾತಂತ್ರ್ಯಕ್ಕೆ ಧಕ್ಕೆಯಾಯಿತು. ಮಂಡಳಿಯ ಒಳಗಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ ಎರಡನ್ನೂ ತಪ್ಪುದಾರಿಗೆಳೆಯಲಾಯಿತು" ಎಂದು ವಿವರಿಸಿದ್ದಾರೆ.
ನಂತರದ ಬೆಳವಣಿಗೆಯಲ್ಲಿ ಜೋಶಿ ಅವರನ್ನು ಮಂಡಳಿಯಿಂದ ಬದಲಾಯಿಸಲಾಯಿತು ಮತ್ತು ಮೇ 2, 2026ರಂದು ಅವರನ್ನು ಪ್ರಸಾರ ಭಾರತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
►ಬೇರೆಯವರ ನಿರ್ದೇಶನದಂತೆ ಚಿತ್ರಕಥೆಗಳನ್ನು ಮತ್ತೆ ಬರೆಯಲಾಯಿತೇ?
ಹೆಸರು ಹೇಳಲಿಚ್ಛಿಸದ ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರೊಬ್ಬರು, ಚಲನಚಿತ್ರದ ಸೆಟ್ ಗಳಲ್ಲಿ ಈ ರಾಜಕೀಯ ಅಧಿಕಾರವು ವಾಸ್ತವವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. "ತಮ್ಮ ಸಿನಿಮಾಗಳಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಗಳನ್ನು ಅಥವಾ ಅವರ ದೃಶ್ಯಗಳನ್ನು ಸೇರಿಸುವಂತೆ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಆದೇಶಿಸಲು ಸೆನ್ಸಾರ್ ಮಂಡಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದೂ, ಇಂತಹ ಬೆಳವಣಿಗೆಗಳು ನಡೆಯುತ್ತಿವೆ ಮತ್ತು ನಿರ್ಮಾಪಕರು ಹಾಗೂ ನಿರ್ದೇಶಕರು ಇದಕ್ಕೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. 'ಸಿತಾರೆ ಝಮೀನ್ ಪರ್' ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯೊಂದನ್ನು ಸೇರಿಸುವಂತೆ ಸೆನ್ಸಾರ್ ಮಂಡಳಿಯು 'ಆಮೀರ್ ಖಾನ್ ಫಿಲ್ಮ್ಸ್' ಸಂಸ್ಥೆಗೆ ಸೂಚಿಸಿತ್ತು ಎನ್ನಲಾಗಿದೆ. ಆರಂಭದಲ್ಲಿ ಆಮೀರ್ ಖಾನ್ ಇದನ್ನು ವಿರೋಧಿಸಿದ್ದರೂ, ಕೊನೆಗೆ ಆ ಹೇಳಿಕೆಯನ್ನು ಸೇರಿಸಬೇಕಾಯಿತು" ಎಂದಿದ್ದಾರೆ ಆ ನಿರ್ದೇಶಕರು.
ಚಿತ್ರದ ಕಥಾಹಂದರಕ್ಕೆ ಹೆಚ್ಚಿನ ವಿಶ್ವಾಸಾರ್ಹತೆ ತಂದುಕೊಡುವ ಸಲುವಾಗಿ 'ಧುರಂಧರ್ 2' ಸಿನಿಮಾದಲ್ಲಿ ಮೋದಿಯವರ ಭಾಷಣವನ್ನು ಸೇರಿಸಲಾಗಿತ್ತು ಎಂದು ಆ ಚಲನಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
"ಇದೇ ರೀತಿ, 'ದಿ ಸಾಬರಮತಿ ರಿಪೋರ್ಟ್' ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದ ನಂತರ ಕೆಲವು ನಿರ್ದಿಷ್ಟ ದೃಶ್ಯಗಳನ್ನು ಸೇರಿಸುವಂತೆ ನಿರ್ದೇಶಕ ರಂಜನ್ ಚಂದೇಲ್ ಅವರಿಗೆ ಸೂಚಿಸಲಾಯಿತು. ಅವರು ಇದಕ್ಕೆ ನಿರಾಕರಿಸಿದಾಗ, ಯೋಜನೆಯಿಂದ ಹೊರನಡೆಯುವಂತೆ ಅವರಿಗೆ ತಿಳಿಸಲಾಯಿತು. ನಂತರ ಆ ದೃಶ್ಯಗಳನ್ನು ಸೇರಿಸಲು ಮತ್ತೊಬ್ಬ ನಿರ್ದೇಶಕರನ್ನು ಕರೆತರಲಾಯಿತು. ಇಂತಹ ಪದ್ಧತಿಗಳು ಬಾಲಿವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ" ಎಂದು ಅವರು ಹೇಳಿದ್ದಾರೆ.
►ಬ್ಲೂಕ್ರಾಫ್ಟ್ ಕೊಂಡಿ
ಹಿತೇಶ್ ಜೈನ್ ಅವರ ಸಹೋದರ ಸುಜಿತ್ ಜೈನ್ ಇಬ್ಬರೂ ವ್ಯಕ್ತಿಗಳ ಸಂಪರ್ಕ ಜಾಲದ ಕೇಂದ್ರಬಿಂದುವಾಗಿದ್ದಾರೆ. ಅವರು 'ಮಹಾವೀರ್ ಜೈನ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯಲ್ಲಿ ಪಾಲುದಾರರಾಗಿಯೂ ಮತ್ತು ಬ್ಲೂಕ್ರಾಫ್ಟ್ ಸಂಸ್ಥೆಯ ಪ್ರಮುಖ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಲೂಕ್ರಾಫ್ಟ್ ನ ಮುಂಬೈ ಕಚೇರಿಯು ಸುಜಿತ್ ಜೈನ್ ಅವರಿಗೆ ಸೇರಿದ ಲೋಧಾ ಸುಪ್ರಿಮಸ್ ಸಂಕೀರ್ಣದ ಆವರಣದಲ್ಲೇ ನಡೆಯುತ್ತಿದೆ. ರಾಜೇಶ್ ಜೈನ್ ಬ್ಲೂಕ್ರಾಫ್ಟ್ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ಹಿಂದೆ ಸರಿದ ನಂತರ, ಅವರ ಜಾಗಕ್ಕೆ ಹಿತೇಶ್ ಜೈನ್ ಅವರ ಸಂಬಂಧಿ ಪಂಕಜ್ ಜೈನ್ ಅವರನ್ನು ನೇಮಿಸಲಾಯಿತು.
ಎಪ್ರಿಲ್ 2025ರಲ್ಲಿ ಹಿತೇಶ್ ಜೈನ್ ಅವರನ್ನು ಭಾರತೀಯ ಕಾನೂನು ಆಯೋಗದ ಪೂರ್ಣಾವಧಿ ಸದಸ್ಯರನ್ನಾಗಿ ನೇಮಿಸಲಾಯಿತು. ಆದರೆ ಆರು ತಿಂಗಳೊಳಗಾಗಿ ಯಾವುದೇ ಬಹಿರಂಗ ಕಾರಣಗಳಿಲ್ಲದೆ ಅವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದರು. ಇದೇ ಸಮಯದಲ್ಲಿ ಹಿರೇನ್ ಜೋಶಿ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳು ಹರಡಿ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷವು ಇವರಿಬ್ಬರಿಗೂ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೂ ನಂಟಿದೆ ಎಂದು ಸಾರ್ವಜನಿಕವಾಗಿ ಆರೋಪಿಸಿತ್ತು. ಇವು ವಿರೋಧ ಪಕ್ಷಗಳ ಆರೋಪಗಳಾಗಿದ್ದು, ಜೈನ್ ಅಥವಾ ಜೋಶಿ ಅವರ ಮೇಲಿನ ಯಾವುದೇ ತಪ್ಪುಗಳು ಇದುವರೆಗೆ ಸಾಬೀತಾಗಿಲ್ಲ.
ಕಾನೂನು ಆಯೋಗದಲ್ಲಿದ್ದ ಅಲ್ಪಾವಧಿಯಲ್ಲಿ ಜೈನ್ ಅವರು ಮೋದಿ ಸರ್ಕಾರವನ್ನು ಟೀಕಿಸಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಅಭಯ್ ಓಕಾ ಮತ್ತು ಜಸ್ಟಿಸ್ ಮದನ್ ಲೋಕೂರ್ ಅವರನ್ನು ಸಾರ್ವಜನಿಕವಾಗಿ ಖಂಡಿಸಿ ಗಮನ ಸೆಳೆದಿದ್ದರು. ಜೈನ್ ಅವರೇ ಸ್ವತಃ ರಾಜಕೀಯ ಲಾಬಿ ಮತ್ತು ಮೋದಿ ಪರ ಪ್ರಚಾರಗಳಲ್ಲಿ ಬಹಿರಂಗವಾಗಿ ತೊಡಗಿಸಿಕೊಂಡಿರುವುದನ್ನು ಗಮನಿಸಿದ ವಿಶ್ಲೇಷಕರಿಗೆ ಇದು ಒಂದು ದೊಡ್ಡ ವಿಪರ್ಯಾಸವಾಗಿ ಕಂಡಿತ್ತು.
ಹಿರಿಯ ಚಲನಚಿತ್ರ ನಿರ್ಮಾಪಕರೊಬ್ಬರು ಇವರಿಬ್ಬರು ಸೃಷ್ಟಿಸಿರುವ ಇಡೀ ವ್ಯವಸ್ಥೆಯನ್ನು ಹೀಗೆ ಸಂಕ್ಷಿಪ್ತವಾಗಿ ವಿವರಿಸುತ್ತಾರೆ: "ಹಿತೇಶ್ ಜೈನ್ ಮತ್ತು ಮಹಾವೀರ್ ಜೈನ್ ಅವರನ್ನು ಬಾಲಿವುಡ್ ನ ಶಕ್ತಿ ಕೇಂದ್ರಗಳಾಗಿ ನೋಡಲಾಗುತ್ತಿದೆ. ಕಳೆದ ಏಳು–ಎಂಟು ವರ್ಷಗಳಿಂದ ಚಲನಚಿತ್ರ ನಿರ್ಮಾಪಕರು ಹಾಗೂ ನಟರನ್ನು ಒಂದು ನಿರ್ದಿಷ್ಟ ಸಿದ್ಧಾಂತವನ್ನು ಬಿಂಬಿಸುವ ಯೋಜನೆಗಳೊಂದಿಗೆ ಜೋಡಿಸುವ ಕೆಲಸವನ್ನು ಇವರೇ ಮಾಡುತ್ತಿದ್ದಾರೆ. ದಿಲ್ಲಿ ಅಥವಾ ಸಚಿವಾಲಯದ ಮಟ್ಟದಲ್ಲಿ ಯಾರಿಗಾದರೂ ತಮ್ಮ ಸಮಸ್ಯೆಗಳು ಬಗೆಹರಿಯಬೇಕಿದ್ದರೆ, ಇವರನ್ನೇ ಸಂಪರ್ಕಿಸಬೇಕು ಎಂಬುದು ಎಲ್ಲರಿಗೂ ಗೊತ್ತು. ಇವರನ್ನು ನಿರಾಕರಿಸಿದರೆ ಉದ್ಯಮದಲ್ಲಿ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು ಎಂಬ ಭಯದಿಂದಾಗಿ ಯಾರೂ ಇವರ ಮಾತನ್ನು ಮೀರುವುದಿಲ್ಲ. ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಅವರ ಜನಪ್ರಿಯತೆ ಹಾಗೂ ಕಲೆಯ ಆಧಾರದ ಮೇಲೆ ಮೌಲ್ಯವಿರುತ್ತದೆ. ಧರ್ಮಾ, ಮ್ಯಾಡಾಕ್, ಯಶ್ ರಾಜ್ ಅವರಂತಹ ನಿರ್ಮಾಣ ಸಂಸ್ಥೆಗಳು ಈಗಾಗಲೇ ತಮ್ಮದೇ ಆದ ಪ್ರೇಕ್ಷಕರನ್ನು ಹೊಂದಿವೆ. ಆದರೆ ಒಮ್ಮೆ ಇಂತಹ ಜಾಲದ ಭಾಗವಾದ ನಂತರ, ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾದ ಒತ್ತಡ ಸೃಷ್ಟಿಯಾಗುತ್ತದೆ. ಚಿತ್ರರಂಗದಲ್ಲಿಯೇ ಒಗ್ಗಟ್ಟಿನ ಕೊರತೆಯಿದೆ."
►ಚಿತ್ರರಂಗದ ಪ್ರಮುಖರು ಏನನ್ನುತ್ತಾರೆ?
ಚಲನಚಿತ್ರ ನಿರ್ಮಾಪಕರೊಬ್ಬರು ಈ ಬಗ್ಗೆ ಮಾತನಾಡುತ್ತಾ, "ಕಳೆದ ಕೆಲವು ವರ್ಷಗಳಲ್ಲಿ ಪ್ರಚಾರದ ರಾಜಕೀಯ ಮತ್ತು ಸೆನ್ಸಾರ್ಶಿಪ್ ತೀರಾ ಮಿತಿಮೀರಿದೆ. ಸ್ವತಂತ್ರ ಧ್ವನಿ ಹೊಂದಿರುವ ಚಲನಚಿತ್ರ ನಿರ್ಮಾಪಕರನ್ನು ನಿರಂತರವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಅಧಿಕಾರದಲ್ಲಿರುವವರ ಜೊತೆ ಕೈಜೋಡಿಸಿದವರು ಇದರ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಕಲಿನಾ ವಿಶ್ವವಿದ್ಯಾಲಯಕ್ಕೆ ನಸೀರುದ್ದೀನ್ ಶಾ ಅವರಿಗೆ ನೀಡಲಾಗಿದ್ದ ಆಮಂತ್ರಣ ರದ್ದಾಗಿದ್ದು, ದಿಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಜಾವೇದ್ ಅಖ್ತರ್ ಮತ್ತು ಶಬಾನಾ ಅಜ್ಮಿ ಅವರ ಆಮಂತ್ರಣಗಳನ್ನು ಹಿಂಪಡೆದಿದ್ದು ಇದರ ಸ್ಪಷ್ಟ ಸಂಕೇತಗಳಾಗಿವೆ. ಕೊನೆಗೆ ಚಲನಚಿತ್ರ ನಿರ್ಮಾಪಕ ಹನಿ ಟ್ರೆಹಾನ್ ಅವರನ್ನು ಹಿಂದೂ ಕಾಲೇಜಿನ ಕಾರ್ಯಕ್ರಮವೊಂದರಿಂದ ಹೊರಗಿಡಲಾಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಖ್ಯಾತ ಕಾಸ್ಟಿಂಗ್ ನಿರ್ದೇಶಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ, "ಇಂದು ಚಿತ್ರರಂಗದಲ್ಲಿ ಉಳಿದುಕೊಳ್ಳಬೇಕಾದರೆ ಆಡಳಿತ ವ್ಯವಸ್ಥೆಯ ಕೃಪಾಕಟಾಕ್ಷದಲ್ಲಿರಬೇಕು ಎಂಬ ವಾತಾವರಣ ಸೃಷ್ಟಿಯಾಗಿದೆ. ಚಿತ್ರರಂಗದಲ್ಲಿ ಸ್ವಯಂ ಸೆನ್ಸಾರ್ಶಿಪ್ ಎಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ, ಸಾರ್ವಜನಿಕ ಆಕ್ರೋಶಕ್ಕೆ ಹೆದರಿ ಕೆಲವು ಮುಖ್ಯವಾಹಿನಿಯ ನಟರು ಉಸ್ಮಾನ್ ಅಥವಾ ಸಲೀಮ್ ಎಂಬ ಹೆಸರಿನ ಪಾತ್ರಗಳನ್ನು ಮಾಡಲು ಹಿಂಜರಿಯುತ್ತಿದ್ದಾರೆ. ಮುಸ್ಲಿಂ ಪಾತ್ರಗಳನ್ನು ನಕಾರಾತ್ಮಕವಾಗಿ ಬಿಂಬಿಸುವುದು ಇತ್ತೀಚಿನ ದಿನಗಳಲ್ಲಿ ಹಲವು ಚಲನಚಿತ್ರ ನಿರ್ಮಾಪಕರಿಗೆ ಸುರಕ್ಷಿತ ಮಾರ್ಗವಾಗಿ ಪರಿಣಮಿಸಿದೆ. ಹೀಗೆ ಮಾಡುವುದರಿಂದ ಚಿತ್ರದ ಬಿಡುಗಡೆ ಸುಲಭವಾಗುತ್ತದೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲಿಂಗ್ ಹಾಗೂ ಬಹಿಷ್ಕಾರದ ಅಭಿಯಾನಗಳಿಂದ ಬಚಾವಾಗಬಹುದು ಎಂದು ಅವರು ನಂಬಿದ್ದಾರೆ" ಎಂದಿದ್ದಾರೆ.
OTT ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, "ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ಕೆಲಸ ಮಾಡಲೇಬೇಕು. ಯಾರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಲು ಅಥವಾ ಬಹಿಷ್ಕಾರದ ಕರೆಗಳನ್ನು ಎದುರಿಸಲು ಬಯಸುವುದಿಲ್ಲ. ಚಿತ್ರರಂಗದ ಜನರು ಇದರಿಂದ ತೀವ್ರವಾಗಿ ಪ್ರಭಾವಿತರಾಗಿದ್ದಾರೆ. ತಮಗೆ ನಷ್ಟವಾಗಬಹುದು ಎಂಬ ಭಯದಿಂದ ಅವರು ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ತಳೆಯುತ್ತಿಲ್ಲ. ನೈತಿಕವಾಗಿ ಇದು ಸರಿಯಲ್ಲದಿರಬಹುದು, ಆದರೆ ಪ್ರಾಯೋಗಿಕವಾಗಿ ಅವರನ್ನು ದೂಷಿಸುವುದು ಕಷ್ಟ. ಯಾರೂ ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಇಂತಹ ಪ್ರವೃತ್ತಿಗಳು ಮತ್ತಷ್ಟು ಬಲಗೊಳ್ಳುತ್ತಾ ಹೋಗುತ್ತವೆ."
ಪ್ರಶಸ್ತಿ ವಿಜೇತ ನಿರ್ದೇಶಕರೊಬ್ಬರು ಇಡೀ ಪರಿಸ್ಥಿತಿಯನ್ನು ಹೀಗೆ ವಿಶ್ಲೇಷಿಸುತ್ತಾರೆ: "ನಟರ ವೃತ್ತಿಜೀವನವು ಅವರ ಜನಪ್ರಿಯತೆ ಮತ್ತು ಸಾರ್ವಜನಿಕರ ಒಪ್ಪಿಗೆಯ ಮೇಲೆ ಆಧಾರಿತವಾಗಿರುವುದರಿಂದ ಅವರು ಅತ್ಯಂತ ಅಸಹಾಯಕರಾಗಿದ್ದಾರೆ. ತಮ್ಮ ರಾಜಕೀಯ ಅಥವಾ ಸಾಮಾಜಿಕ ಸಿದ್ಧಾಂತಗಳ ಕಾರಣದಿಂದಾಗಿ ಅನೇಕ ಪ್ರತಿಭಾವಂತರು ಚಿತ್ರರಂಗದಲ್ಲಿ ನಿಶ್ಶಬ್ದವಾಗಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮುಕ್ತವಾಗಿ ಮಾತನಾಡುತ್ತಿದ್ದ ಹನ್ಸಲ್ ಮೆಹ್ತಾ ಮತ್ತು ವಿಶಾಲ್ ಭಾರದ್ವಾಜ್ ಅವರಂತಹ ನಿರ್ದೇಶಕರು ಈಗ ಬಹುತೇಕ ಮೌನಕ್ಕೆ ಶರಣಾಗಿದ್ದಾರೆ. ಸ್ವತಃ ಅನುರಾಗ್ ಕಶ್ಯಪ್ ಅವರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಸಿನಿಮಾ ಮಾಡುವುದು ಎಷ್ಟು ಕಷ್ಟವಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸ್ವತಂತ್ರವಾಗಿ ಆಲೋಚಿಸುವ ಚಿತ್ರರಂಗದ ಯುವ ಪೀಳಿಗೆ ಈಗ ಸಂಪೂರ್ಣವಾಗಿ ಅಸಹಾಯಕತೆಯನ್ನು ಅನುಭವಿಸುತ್ತಿದೆ."
ಈ ವರದಿ ಸರಣಿಯ ಕೊನೆಯ ಭಾಗದಲ್ಲಿ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಎಲ್ಲಿಂದ ಬಂತು, ಅದನ್ನು ಯಾರು ನಿಯಂತ್ರಿಸುತ್ತಾರೆ ಮತ್ತು ಅದರ ಕಾರ್ಯವೈಖರಿ ಹೇಗಿದೆ ಎಂಬುದರ ಬಗ್ಗೆ ವಿವರ ಇರಲಿದೆ.
ಹಿಂದಿನ ವರದಿ: