ಅಮೆರಿಕದ ಕೇಂದ್ರೀಯ ಬ್ಯಾಂಕ್ US ಫೆಡ್ ರಿಸರ್ವ್ ಗೆ ರಘುರಾಮ್ ರಾಜನ್ ಸೇರಿ ಮೂವರು ಭಾರತೀಯರ ಆಯ್ಕೆ ಸಾಧ್ಯತೆ
ರಘುರಾಮ್ ರಾಜನ್ , ರಾಜ್ ಚೆಟ್ಟಿ , ಆಶಾ ಶರ್ಮಾ | Photo Credit : X \ @bsindia
ಅಮೆರಿಕದ ಫೆಡರಲ್ ರಿಸರ್ವ್ ಗೆ ಹೊಸ ಚಿಂತನೆಯನ್ನು ತರುವ ಉದ್ದೇಶದಿಂದ ಫೆಡರಲ್ ರಿಸರ್ವ್ ಅಧ್ಯಕ್ಷ ಕೆವಿನ್ ವಾರ್ಷ್ ಘೋಷಿಸಿದ ಐದು ಕಾರ್ಯಪಡೆಗಳ ಭಾಗವಾಗಿ ಹೊಸ ನೇಮಕಾತಿಗಳು ಆಗುತ್ತಿವೆ.
ಅಮೆರಿಕದ ಫೆಡರಲ್ ರಿಸರ್ವ್ ಅನೇಕ ವರ್ಷಗಳ ಹೆಚ್ಚಿನ ಹಣದುಬ್ಬರದ ನಂತರ ಹಣಕಾಸು ನೀತಿ ನಿರೂಪಣೆಯನ್ನು ಪುನರ್ರೂಪಿಸುವ ಗುರಿಯೊಂದಿಗೆ ವ್ಯಾಪಕ ಸುಧಾರಣಾ ಕ್ರಮದ ಭಾಗವಾಗಿ ತನ್ನ ಬ್ಯಾಲೆನ್ಸ್ ಶೀಟ್ ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ಇಬ್ಬರು ಭಾರತೀಯ ಮೂಲದ ತಜ್ಞರಾದ ದಿಲ್ಲಿ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿ ಹಾಗೂ ಹಿರಿಯ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕರಾದ ಆಶಾ ಶರ್ಮಾ ಅವರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ.
ಹೊಸದಾಗಿ ನೇಮಕಗೊಂಡ ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಕೆವಿನ್ ವಾರ್ಷ್ ಘೋಷಿಸಿದ ಐದು ಕಾರ್ಯಪಡೆಗಳ ಭಾಗವಾಗಿ ಈ ನೇಮಕಾತಿಗಳು ಆಗುತ್ತಿವೆ.
ಈ ಕಾರ್ಯಪಡೆಯಲ್ಲಿ ಮಾಜಿ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಮರ್ವಿನ್ ಕಿಂಗ್, ಮಾಜಿ ವಾಲ್ಮಾರ್ಟ್ ಸಿಇಒ ಡೌಗ್ ಮೆಕ್ಮಿಲ್ಲನ್, ನೊಬೆಲ್ ಪ್ರಶಸ್ತಿ ವಿಜೇತ ಥಾಮಸ್ ಸಾರ್ಜೆಂಟ್ ಮತ್ತು ಸಿಲಿಕಾನ್ ವ್ಯಾಲಿ ವೆಂಚೂರ್ ಕ್ಯಾಪಿಟಲಿಸ್ಟ್ ಮಾರ್ಕ್ ಆಂಡ್ರೀಸೆನ್ ಅವರೂ ಸೇರಿದ್ದಾರೆ.
“ಒಂದು ಸಂಸ್ಥೆಯಾಗಿ ನಮ್ಮ ಕಾರ್ಯಕ್ಷಮತೆಯನ್ನು ತೀಕ್ಷ್ಣಗೊಳಿಸಲು ವಿವಿಧ ವಿಭಾಗಗಳ ಅತ್ಯುತ್ತಮ ವ್ಯಕ್ತಿಗಳು ನಮ್ಮೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಗುರಿ ನೇರವಾಗಿದೆ. ನಮ್ಮ ಉದ್ದೇಶಗಳನ್ನು ಸಾಧಿಸಲು ಫೆಡ್ ಅತ್ಯುತ್ತಮ ಸ್ಥಾನದಲ್ಲಿದೆ ಎಂದು ಖಚಿತಪಡಿಸಿಕೊಳ್ಳುವುದು” ಎಂದು ಕೆವಿನ್ ಹೇಳಿದ್ದಾರೆ.
►ರಘುರಾಮ್ ರಾಜನ್ ಏಕೆ ಮುಖ್ಯ?
ಫೆಡ್ ಅಧ್ಯಕ್ಷರು ರಘುರಾಮ್ ರಾಜನ್ ಅವರ ನಿರ್ದಿಷ್ಟ ಪಾತ್ರವನ್ನು ವಿವರಿಸಿಲ್ಲ. ಆದರೆ, ಐದು ವರ್ಷಗಳಿಗೂ ಹೆಚ್ಚು ಕಾಲ ಫೆಡರಲ್ ರಿಸರ್ವ್ನ ಗುರಿಗಿಂತ ಹೆಚ್ಚಿನ ಮಟ್ಟದಲ್ಲಿರುವ ಹಣದುಬ್ಬರದ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಚಿಂತನೆಯನ್ನು ತರಲು ಕಾರ್ಯಪಡೆಗಳನ್ನು ರಚಿಸಲಾಗಿದೆ.
ಪಿಟಿಐ ವರದಿಯ ಪ್ರಕಾರ, ರಘುರಾಮ್ ರಾಜನ್ ಅವರು ಹಾರ್ವರ್ಡ್ ಅರ್ಥಶಾಸ್ತ್ರಜ್ಞ ಕರೆನ್ ಡೈನಾನ್ ಮತ್ತು ಮಾಜಿ ಫೆಡರಲ್ ರಿಸರ್ವ್ ಗವರ್ನರ್ ಜೆರೆಮಿ ಸ್ಟೈನ್ ಅವರೊಂದಿಗೆ ಬ್ಯಾಲೆನ್ಸ್ ಶೀಟ್ ನೀತಿ ಕಾರ್ಯಪಡೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಸಮಿತಿಯು ಫೆಡರಲ್ ರಿಸರ್ವ್ನ ಪ್ರಸ್ತುತ ಬ್ಯಾಲೆನ್ಸ್ ಶೀಟ್ ಆಡಳಿತದ ವೆಚ್ಚಗಳು, ಲಾಭಗಳು ಮತ್ತು ಸಾಂಸ್ಥಿಕ ಪರಿಣಾಮಗಳನ್ನು ಪರಿಶೀಲಿಸಲಿದೆ. ಇದರಲ್ಲಿ ಆಸ್ತಿ (Asset) ಹೊಂದಾಣಿಕೆ ಹಾಗೂ ಹಣಕಾಸು ನೀತಿ ಅನುಷ್ಠಾನದಲ್ಲಿ ಅದರ ಪಾತ್ರವೂ ಸೇರಿದೆ.
"ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿದ್ದಾರೆ ಎಂದು ನಾನು ನಂಬಿರುವ 15 ಜನರನ್ನು ಸಂಪರ್ಕಿಸಿದ್ದೇನೆ. ಪಾರದರ್ಶಕತೆ ಮತ್ತು ಹೊಸ ಆಲೋಚನೆಗಳತ್ತ ಇದು ಮೊದಲ ಹೆಜ್ಜೆಯಾಗಿದೆ. ಈ ಸಮಿತಿಗಳು ಸಂವಹನ, ಬ್ಯಾಲೆನ್ಸ್ ಶೀಟ್ ನೀತಿ, ಆರ್ಥಿಕ ದತ್ತಾಂಶದ ಬಳಕೆ, ಉತ್ಪಾದಕತೆ ಮತ್ತು ಉದ್ಯೋಗಗಳು ಹಾಗೂ ಹಣದುಬ್ಬರ ಚೌಕಟ್ಟು ಎಂಬ ಐದು ಪ್ರಮುಖ ಕ್ಷೇತ್ರಗಳನ್ನು ಪರಿಶೀಲಿಸಲಿವೆ" ಎಂದು ಕೆವಿನ್ ಹೇಳಿದ್ದಾರೆ.
ಹಣಕಾಸು ನೀತಿಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ಐದು ವರ್ಷಗಳಿಂದ ನಮ್ಮನ್ನು ಕಾಡುತ್ತಿರುವ ಅಧಿಕ ಹಣದುಬ್ಬರದ ಸಮಸ್ಯೆಯನ್ನು ಹಿಂದಕ್ಕೆ ತಳ್ಳುವುದು ಮುಖ್ಯ ಉದ್ದೇಶವಾಗಿದೆ ಎಂದು ಕೆವಿನ್ ಸೆನೆಟರ್ಗಳಿಗೆ ತಿಳಿಸಿದ್ದಾರೆ.
2013ರಿಂದ 2016ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ರಘುರಾಮ್ ರಾಜನ್ ಅವರು ಆರ್ಥಿಕ ಸ್ಥಿರತೆ ಮತ್ತು ಹಣಕಾಸು ನೀತಿಯ ಕುರಿತಾದ ತಮ್ಮ ಕೆಲಸಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಭಾರತದ ಕೇಂದ್ರೀಯ ಬ್ಯಾಂಕ್ (RBI) ಅನ್ನು ಮುನ್ನಡೆಸುವ ಮೊದಲು ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ ಹಾಗೂ ಸಂಶೋಧನಾ ನಿರ್ದೇಶಕರಾಗಿದ್ದರು. ಜಾಗತಿಕ ಸ್ಥೂಲ ಆರ್ಥಿಕ ಸಮಸ್ಯೆಗಳ ಕುರಿತು ಪ್ರಭಾವಶಾಲಿ ಧ್ವನಿಯಾಗಿದ್ದಾರೆ.
►ಸಮಿತಿಯಲ್ಲಿರುವ ಇತರ ಭಾರತೀಯರು
ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿ ಅವರು ಮೆಕ್ಮಿಲ್ಲನ್ ಮತ್ತು ಚಿಕಾಗೊ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಕೆವಿನ್ ಮರ್ಫಿ ಅವರೊಂದಿಗೆ ಡೇಟಾ ಟಾಸ್ಕ್ ಫೋರ್ಸ್ ಅನ್ನು ನೇತೃತ್ವ ವಹಿಸಲಿದ್ದಾರೆ. ಈ ಕಾರ್ಯಪಡೆಯು ಫೆಡರಲ್ ರಿಸರ್ವ್ಗೆ ಆರ್ಥಿಕತೆಯ ಬಗ್ಗೆ ಉತ್ತಮ ಮತ್ತು ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಆರ್ಥಿಕ ದತ್ತಾಂಶವನ್ನು ಹೆಚ್ಚು ನಿಖರವಾಗಿ ಹಾಗೂ ವೇಗವಾಗಿ ಬಳಸುವ ಸುಧಾರಣೆಗಳತ್ತ ಕೆಲಸ ಮಾಡಲಿದೆ. ಅಮೆರಿಕದಲ್ಲಿ ಆರ್ಥಿಕ ಚಲನಶೀಲತೆ, ಅಸಮಾನತೆ ಮತ್ತು ಕಾರ್ಮಿಕ ಮಾರುಕಟ್ಟೆಗಳನ್ನು ಅಧ್ಯಯನ ಮಾಡಲು ದೊಡ್ಡ ಆಡಳಿತಾತ್ಮಕ ಹಾಗೂ ನೈಜ-ಸಮಯದ (Real-time) ದತ್ತಾಂಶವನ್ನು ಬಳಸಿದ ಮೊದಲಿಗರಲ್ಲಿ ಚೆಟ್ಟಿ ಹೆಸರುವಾಸಿಯಾಗಿದ್ದಾರೆ.
ಮೈಕ್ರೋಸಾಫ್ಟ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಹಾಗೂ ಎಕ್ಸ್ಬಾಕ್ಸ್ನ ಸಿಇಒ ಆಗಿರುವ ವಿಸ್ಕಾನ್ಸಿನ್ನಲ್ಲಿ ಜನಿಸಿದ ಆಶಾ ಶರ್ಮಾ ಅವರು ವೆಂಚೂರ್ ಕ್ಯಾಪಿಟಲಿಸ್ಟ್ ಆಂಡ್ರೀಸೆನ್ ಮತ್ತು ಸ್ಟ್ಯಾನ್ಫರ್ಡ್ ಅರ್ಥಶಾಸ್ತ್ರಜ್ಞ ಚಾರ್ಲ್ಸ್ ಐ. ಜೋನ್ಸ್ ಅವರೊಂದಿಗೆ ಉತ್ಪಾದಕತೆ ಮತ್ತು ಉದ್ಯೋಗ ಕಾರ್ಯಪಡೆಯಲ್ಲಿ ಕೆಲಸ ಮಾಡಲಿದ್ದಾರೆ. ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ಸಾಮಾನ್ಯ ಉದ್ದೇಶದ ತಂತ್ರಜ್ಞಾನಗಳು ಉತ್ಪಾದಕತೆ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಬೀರುವ ಪರಿಣಾಮದ ಕುರಿತು ಈ ಸಮಿತಿ ಗಮನಹರಿಸಲಿದೆ.
ಮಾಹಿತಿ ಕೃಪೆ: NDTV