ಭಾರತದಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಕಾರಣವೇನು?
Photo Credit : scroll.in
ಭಾರತದಲ್ಲಿ ನಡೆಯುವ ಒಟ್ಟು ಹೆರಿಗೆಗಳ ಪೈಕಿ ಕಾಲು ಭಾಗಕ್ಕಿಂತ ಹೆಚ್ಚು ಹೆರಿಗೆಗಳು ಈಗ ಸಿಸೇರಿಯನ್ (C-section) ಶಸ್ತ್ರಚಿಕಿತ್ಸೆಯ ಮೂಲಕವೇ ನಡೆಯುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಶಸ್ತ್ರಚಿಕಿತ್ಸಾ ಹಸ್ತಕ್ಷೇಪದ ಪ್ರಮಾಣ ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ತುರ್ತು ಪ್ರಸೂತಿ ಆರೈಕೆಯ ಸೌಲಭ್ಯಗಳು ಉತ್ತಮಗೊಂಡಿರುವುದೂ ಈ ಹೆಚ್ಚಳಕ್ಕೆ ಒಂದು ಕಾರಣ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೆಚ್ಚಿನ ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದರಿಂದ, ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಗಂಭೀರ ಪರಿಸ್ಥಿತಿಗಳನ್ನು ಗುರುತಿಸಲು ವೈದ್ಯರಿಗೆ ಸಾಧ್ಯವಾಗುತ್ತಿದೆ. ಆದರೆ, ಅನಗತ್ಯ ಸಿಸೇರಿಯನ್ ಹೆರಿಗೆಗಳಿಗೆ ಆಸ್ಪತ್ರೆಗಳ ಒತ್ತಡ ಮತ್ತು ವಾಣಿಜ್ಯೀಕರಣವೇ ಕಾರಣ ಎಂದು ಅವರು ಹೇಳುತ್ತಾರೆ.
ಆರನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS-6) ಪ್ರಕಾರ, ದೇಶದಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣವು 2019–21ರಲ್ಲಿ ಶೇಕಡಾ 21.5 ರಷ್ಟಿದ್ದು, 2023–24ರ ವೇಳೆಗೆ ಶೇಕಡಾ 27.2ಕ್ಕೆ ಏರಿಕೆಯಾಗಿದೆ. ದೇಶದ ಒಟ್ಟು ಹೆರಿಗೆಗಳಲ್ಲಿ ಐದರಲ್ಲಿ ಮೂರು ಭಾಗದಷ್ಟು ಹೆರಿಗೆಗಳು ನಡೆಯುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣವು ಶೇಕಡಾ 17ರಷ್ಟಿದೆ. ಇದು ಜಾಗತಿಕವಾಗಿ ಒಪ್ಪಿತವಾಗಿರುವ ಸೂಕ್ತ ಮಟ್ಟಕ್ಕೆ ಹತ್ತಿರದಲ್ಲಿದೆ ಎಂದು ಗಡ್ಚಿರೋಲಿ ಜಿಲ್ಲೆಯ ಆರೋಗ್ಯ ಸಂಸ್ಥೆಯೊಂದರ ಸಂದರ್ಶಕ ಬೋಧಕರಾದ ಕ್ರಾಂತಿ ವೋರಾ ತಿಳಿಸಿದ್ದಾರೆ. ಇದು ಸರ್ಕಾರಿ ಆಸ್ಪತ್ರೆಗಳಲ್ಲಿನ ತುರ್ತು ಪ್ರಸೂತಿ ಆರೈಕೆ ಸಾಮರ್ಥ್ಯ ಸುಧಾರಿಸಿರುವುದನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳ ಪೈಕಿ ಶೇಕಡಾ 54ರಷ್ಟು ಹೆರಿಗೆಗಳು ಸಿಸೇರಿಯನ್ ಮೂಲಕವೇ ಆಗುತ್ತಿವೆ. ಆದರೆ, ಸಿಸೇರಿಯನ್ ಹೆರಿಗೆಗಳ ಪ್ರಮಾಣವು ಶೇಕಡಾ 10ಕ್ಕಿಂತ ಹೆಚ್ಚಿದ್ದರೆ ಅದು ತಾಯಿ ಅಥವಾ ನವಜಾತ ಶಿಶುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಯಾವುದೇ ಕೊಡುಗೆ ನೀಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) 2015ರ ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಹೆರಿಗೆ ನೋವು ಬರದೇ ಇರುವುದು, ಭ್ರೂಣದ ತೊಂದರೆಗಳು (ಫೀಟಲ್ ಡಿಸ್ಟ್ರೆಸ್), ಪ್ಲಾಸೆಂಟಾ ಪ್ರೀವಿಯಾ ಮತ್ತು ಮಗು ಅಡ್ಡ ಅಥವಾ ತಲೆಕೆಳಗಾಗಿರುವುದು ಸಿಸೇರಿಯನ್ ಹೆರಿಗೆಯನ್ನು ಅನಿವಾರ್ಯವಾಗಿಸಬಹುದು ಎಂದು ಮುಂಬೈನ ಸೂರ್ಯ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಸುಚಿತ್ರಾ ಪಂಡಿತ್ ಹೇಳಿರುವುದಾಗಿ ಇಂಡಿಯಾಸ್ಪೆಂಡ್ ವರದಿ ಉಲ್ಲೇಖಿಸಿದೆ. ಇದರೊಂದಿಗೆ, ಅವಳಿ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳ ಗರ್ಭಧಾರಣೆ, ತೀವ್ರ ರಕ್ತದೊತ್ತಡ (ಪ್ರಿ-ಎಕ್ಲಾಂಪ್ಸಿಯಾ), ಈ ಹಿಂದಿನ ಹೆರಿಗೆಗಳು ಸಿಸೇರಿಯನ್ ಆಗಿರುವುದು ಹಾಗೂ ಗರ್ಭಿಣಿಯರಲ್ಲಿನ ಬೊಜ್ಜು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳೂ ಶಸ್ತ್ರಚಿಕಿತ್ಸೆಗೆ ಕಾರಣವಾಗಬಹುದು.
ಸಿಸೇರಿಯನ್ ಹೆರಿಗೆಯ ಅಗತ್ಯವನ್ನು ನಿರ್ಧರಿಸಲು ವಿಶ್ವ ಆರೋಗ್ಯ ಸಂಸ್ಥೆಯು 'ರಾಬ್ಸನ್ ವರ್ಗೀಕರಣ' (Robson classification) ಎಂಬ 10 ಪ್ರಸೂತಿ ಮಾನದಂಡಗಳ ಪರಿಶೀಲನಾ ಪಟ್ಟಿಯನ್ನು ಶಿಫಾರಸು ಮಾಡುತ್ತದೆ. ಇದು ಗರ್ಭಧಾರಣೆಯ ಇತಿಹಾಸ ಮತ್ತು ಗರ್ಭಾವಸ್ಥೆಯ ಅವಧಿ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ.
ಸುರಕ್ಷಿತ ಶಸ್ತ್ರಚಿಕಿತ್ಸೆ ನಡೆಸಲು ಅಥವಾ ಶಸ್ತ್ರಚಿಕಿತ್ಸೆಯ ನಂತರದ ತೊಂದರೆಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯಗಳಿಲ್ಲದ ಕಡೆಗಳಲ್ಲಿ ಸಿಸೇರಿಯನ್ ಮಾಡುವುದರಿಂದ ತೀವ್ರ ಆರೋಗ್ಯ ಸಮಸ್ಯೆಗಳು, ಅಂಗವೈಕಲ್ಯ ಅಥವಾ ಸಾವು ಸಂಭವಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
►ವೈದ್ಯಕೀಯ ಅನಿವಾರ್ಯತೆ
ಕಿಂಡರ್ಗಾರ್ಟನ್ ಶಿಕ್ಷಕಿಯಾಗಿರುವ 35 ವರ್ಷದ ಹರ್ಷದಾ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಮೊದಲ ಬಾರಿಗೆ ಐವಿಎಫ್ (IVF) ತಂತ್ರಜ್ಞಾನದ ಮೂಲಕ ಗರ್ಭ ಧರಿಸಿದ್ದರು. ಅದು ಹೆಚ್ಚಿನ ಅಪಾಯದ ಗರ್ಭಧಾರಣೆಯಾಗಿದ್ದರಿಂದ ವೈದ್ಯರು ಸಿಸೇರಿಯನ್ ಹೆರಿಗೆಗೆ ಶಿಫಾರಸು ಮಾಡಿದ್ದರು. ಆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದು ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಧನಾತ್ಮಕ ಅನುಭವದಿಂದಾಗಿ, ಅವರು ಒಂದು ವರ್ಷದ ನಂತರ ತಮ್ಮ ಎರಡನೇ ಗರ್ಭಧಾರಣೆಯ ಸಂದರ್ಭದಲ್ಲೂ ಅದೇ ಖಾಸಗಿ ಚಾರಿಟಬಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಹೆರಿಗೆಯ ದಿನದಂದು ಅವರಿಗೆ ತೀವ್ರ ರಕ್ತದೊತ್ತಡ ಕಾಣಿಸಿಕೊಂಡಿದ್ದರಿಂದ ವೈದ್ಯರು ಮತ್ತೊಮ್ಮೆ ಸಿಸೇರಿಯನ್ ಮಾಡಲು ಸೂಚಿಸಿದರು. ಆದರೆ, ಸಾಮಾನ್ಯ ಶಸ್ತ್ರಚಿಕಿತ್ಸೆಯಾಗಬಹುದು ಅಂದುಕೊಂಡಿದ್ದು ತಕ್ಷಣವೇ ತುರ್ತು ವೈದ್ಯಕೀಯ ಪರಿಸ್ಥಿತಿಯಾಗಿ ಮಾರ್ಪಟ್ಟಿತು. ಶಸ್ತ್ರಚಿಕಿತ್ಸೆಯ ನಂತರ ತೀವ್ರ ರಕ್ತಸ್ರಾವವನ್ನು ನಿಯಂತ್ರಿಸಲು ವೈದ್ಯರಿಗೆ ಸಾಧ್ಯವಾಗದ ಕಾರಣ, ಅವರು ಗರ್ಭಾಶಯವನ್ನು ತೆಗೆದುಹಾಕುವ ನಿರ್ಧಾರ (ಹಿಸ್ಟರೆಕ್ಟಮಿ) ಮಾಡಿದರು ಎಂದು ಹರ್ಷದಾ ವಿವರಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ಕಾಮಾಲೆ ರೋಗ ಕಾಣಿಸಿಕೊಂಡಿದ್ದರಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತು. ಖಾಸಗಿ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಗರ್ಭಾಶಯವನ್ನು ತೆಗೆದುಹಾಕಿದ್ದರಿಂದ ಹರ್ಷದಾ ಅವರು ನಿರೀಕ್ಷಿತ ವಯಸ್ಸಿಗಿಂತ ಮುಂಚಿತವಾಗಿಯೇ ಮೆನೋಪಾಸ್ ಗೆ ಒಳಗಾಗಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಯ ದೈಹಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಇಂದಿಗೂ ಎದುರಿಸುತ್ತಿದ್ದಾರೆ.
ಐವಿಎಫ್ ಚಿಕಿತ್ಸೆ, ಎರಡೂ ಹೆರಿಗೆಗಳು ಮತ್ತು ಅದರ ನಂತರದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಈ ಕುಟುಂಬ ಒಟ್ಟು 6 ಲಕ್ಷ ರೂ.ಗೂ ಅಧಿಕ ವೈದ್ಯಕೀಯ ವೆಚ್ಚವನ್ನು ಭರಿಸಿದ್ದು, ಇದಕ್ಕಾಗಿ ಸಾಲ ಮಾಡಬೇಕಾಗಿ ಬಂದಿದೆ. "ನಾವು ವೈದ್ಯರನ್ನು ನಂಬಿ ಅವರು ಹೇಳಿದಂತೆ ಮಾಡಿದೆವು. ಇಂದು ನಾವು ಇನ್ನೂ ಆ ಸಾಲವನ್ನು ತೀರಿಸುತ್ತಿದ್ದೇವೆ ಮತ್ತು ನಾನು ನನ್ನ ಜೀವನದ ಕೊನೆಯವರೆಗೂ ಈ ನೋವಿನೊಂದಿಗೆ ಬದುಕಬೇಕಾಗಿದೆ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಗರ್ಭಿಣಿಯರ ಆರೋಗ್ಯದ ಸ್ಥಿತಿಗತಿಗಳು ಗಣನೀಯವಾಗಿ ಬದಲಾಗಿವೆ ಎಂದು ಕ್ರಾಂತಿ ವೋರಾ ಮತ್ತು ಸುಚಿತ್ರಾ ಪಂಡಿತ್ ತಿಳಿಸಿದ್ದಾರೆ. ಮಹಿಳೆಯರು ತಡವಾದ ವಯಸ್ಸಿನಲ್ಲಿ ಮಕ್ಕಳನ್ನು ಹೆರುತ್ತಿರುವುದು, ಐವಿಎಫ್ನಂತಹ ಸಂತಾನೋತ್ಪತ್ತಿ ಚಿಕಿತ್ಸೆಗಳು ಹೆಚ್ಚಾಗಿರುವುದು ಹಾಗೂ ಬೊಜ್ಜು, ಮಧುಮೇಹ, ರಕ್ತದೊತ್ತಡ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಸಂತಾನೋತ್ಪತ್ತಿ ಪ್ರಮಾಣ ಕುಸಿಯುತ್ತಿರುವುದರಿಂದ ಕುಟುಂಬಗಳು ಸಾಮಾನ್ಯವಾಗಿ ಒಂದು ಅಥವಾ ಇಬ್ಬರು ಮಕ್ಕಳನ್ನು ಮಾತ್ರ ಹೊಂದುತ್ತಿವೆ. ಹೀಗಾಗಿ ಪ್ರತಿ ಗರ್ಭಧಾರಣೆಯೂ ಕುಟುಂಬಕ್ಕೆ ಅತ್ಯಂತ ಮೌಲ್ಯಯುತವಾಗುತ್ತಿದ್ದು, ಯಾವುದೇ ರೀತಿಯ ಅಪಾಯವನ್ನು ಎದುರಿಸಲು ಪೋಷಕರು ಮತ್ತು ವೈದ್ಯರು ಸಿದ್ಧರಿರುವುದಿಲ್ಲ ಎಂದು ವೋರಾ ಹೇಳಿದ್ದಾರೆ.
"ಒಮ್ಮೆ ಸಿಸೇರಿಯನ್ ಹೆರಿಗೆಯಾದರೆ, ಮುಂದಿನ ಗರ್ಭಧಾರಣೆಯಲ್ಲೂ ಸಿಸೇರಿಯನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ" ಎಂದು ಹೇಳಿರುವ ವೋರಾ, ಇದು ಸರಪಳಿಯಂತೆ ಮುಂದುವರಿಯಲಿದ್ದು, ಇಂದಿನ ಹೆಚ್ಚಿನ ಸಿಸೇರಿಯನ್ ಪ್ರಮಾಣವು ಭವಿಷ್ಯದಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ ಎಂದಿದ್ದಾರೆ.
ಹೆಚ್ಚುತ್ತಿರುವ ಗರ್ಭಿಣಿಯರ ವಯಸ್ಸು, ಹೆಚ್ಚಿನ ಅಪಾಯದ ಗರ್ಭಧಾರಣೆಗಳು, ಹಿಂದಿನ ಸಿಸೇರಿಯನ್ ಹೆರಿಗೆಗಳು ಮತ್ತು ಗರ್ಭಿಣಿಯರೇ ಸ್ವತಃ ಯೋಜಿತ ಶಸ್ತ್ರಚಿಕಿತ್ಸೆಗೆ ವಿನಂತಿಸುವುದು ಸಿಸೇರಿಯನ್ ಪ್ರಮಾಣ ಹೆಚ್ಚಾಗಲು ಕಾರಣ ಎಂದು ಪಂಡಿತ್ ಅಭಿಪ್ರಾಯಪಟ್ಟಿದ್ದಾರೆ.
ಇದರೊಂದಿಗೆ, ಪ್ರಸೂತಿ ವೈದ್ಯಕೀಯ ಪದ್ಧತಿಯು ಈಗ ರಕ್ಷಣಾತ್ಮಕ ಶೈಲಿಗೆ ಬದಲಾಗುತ್ತಿದೆ. ಹೆರಿಗೆಯ ಸಮಯದಲ್ಲಿ ಯಾವುದೇ ತೊಂದರೆಗಳಾದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಅಥವಾ ರೋಗಿಗಳ ಕಡೆಯವರಿಂದ ಸಂಘರ್ಷ ಉಂಟಾಗಬಹುದು ಎಂಬ ಭಯದಲ್ಲೇ ವೈದ್ಯರು ಕೆಲಸ ಮಾಡುವಂತಾಗಿದೆ ಎಂದು ವೋರಾ ಹೇಳಿದ್ದಾರೆ.
►ಸಿಸೇರಿಯನ್ ಹೆರಿಗೆಗಳು ಜೀವ ಉಳಿಸುವುದನ್ನು ನಿಲ್ಲಿಸಿದಾಗ...
ವೈದ್ಯಕೀಯವಾಗಿ ಅಗತ್ಯವಿದ್ದಾಗ ಸಿಸೇರಿಯನ್ ಹೆರಿಗೆಗಳು ತಾಯಿ ಮತ್ತು ನವಜಾತ ಶಿಶುವಿನ ಸಾವು ಹಾಗೂ ಇತರ ಗಂಭೀರ ತೊಂದರೆಗಳನ್ನು ತಡೆಯಬಲ್ಲವು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ರಾಜ್ಯವಾರು ದತ್ತಾಂಶಗಳ ವಿಶ್ಲೇಷಣೆಯನ್ನು ಗಮನಿಸಿದರೆ, ಸಿಸೇರಿಯನ್ ಹೆರಿಗೆಗಳ ಪ್ರಮಾಣ ಹೆಚ್ಚಾದ ತಕ್ಷಣ ತಾಯಿ ಮತ್ತು ಮಗುವಿನ ಆರೋಗ್ಯ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂದರ್ಥವಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಉದಾಹರಣೆಗೆ, ದೇಶದಲ್ಲೇ ಅತ್ಯಂತ ಹೆಚ್ಚು ಸಿಸೇರಿಯನ್ ಹೆರಿಗೆ ಪ್ರಮಾಣ ಹೊಂದಿರುವ ತೆಲಂಗಾಣದಲ್ಲಿ (ಶೇ. 62.2) 2022–24ರ ಅವಧಿಯಲ್ಲಿ ಪ್ರತಿ 1 ಲಕ್ಷ ಹೆರಿಗೆಗಳಲ್ಲಿ ಸಂಭವಿಸುವ ತಾಯಂದಿರ ಮರಣ ಪ್ರಮಾಣ (MMR) 48 ರಷ್ಟಿತ್ತು. ಇದಕ್ಕೆ ಹೋಲಿಸಿದರೆ, ಕಡಿಮೆ ಸಿಸೇರಿಯನ್ ಪ್ರಮಾಣ ಹೊಂದಿರುವ ತಮಿಳುನಾಡು (ಶೇ. 47) ಮತ್ತು ಕೇರಳದಲ್ಲಿ (ಶೇ. 41) ತಾಯಂದಿರ ಮರಣ ಪ್ರಮಾಣವು ಕ್ರಮವಾಗಿ 25 ಮತ್ತು 24 ರಷ್ಟಿದ್ದು, ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಮರಣ ಪ್ರಮಾಣ ಹೊಂದಿರುವ ರಾಜ್ಯಗಳಾಗಿವೆ.
ಶೇ. 52ರಷ್ಟು ಸಿಸೇರಿಯನ್ ಪ್ರಮಾಣ ಹೊಂದಿರುವ ಆಂಧ್ರಪ್ರದೇಶದಲ್ಲಿ ಈ ಹೆಚ್ಚಳಕ್ಕೆ ವೈದ್ಯಕೀಯ, ಆರೋಗ್ಯ ವ್ಯವಸ್ಥೆ ಮತ್ತು ಸಾಮಾಜಿಕ ಅಂಶಗಳೇ ಕಾರಣ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ರಾಜ್ಯಮಟ್ಟದ ಸಂಶೋಧನೆಯ ಪ್ರಕಾರ, ವೈದ್ಯರು ಯಾವುದೇ ಅಪಾಯವನ್ನು ಎದುರಿಸಲು ಸಿದ್ಧರಿಲ್ಲದಿರುವುದು, ಸಮಯದ ಒತ್ತಡ ಹಾಗೂ ಯುವ ಪ್ರಸೂತಿ ವೈದ್ಯರಲ್ಲಿ ಸಾಮಾನ್ಯ ಹೆರಿಗೆ ಮಾಡಿಸುವಲ್ಲಿ ಆತ್ಮವಿಶ್ವಾಸದ ಕೊರತೆ ಕಂಡುಬಂದಿದೆ. ಇದರೊಂದಿಗೆ, ಕುಟುಂಬದ ಒತ್ತಡ, ಹೆರಿಗೆ ನೋವಿನ ಭಯ ಮತ್ತು ನಿರ್ದಿಷ್ಟ ದಿನದಂದೇ ಹೆರಿಗೆಯಾಗಬೇಕು ಎಂಬ ಆಸೆಯೂ ಸಿಸೇರಿಯನ್ ಹೆಚ್ಚಳಕ್ಕೆ ಕಾರಣವಾಗಿದೆ.
ಸರ್ಕಾರಿ ಆಸ್ಪತ್ರೆಗಳು (ಶೇ. 26.6) ಮತ್ತು ಖಾಸಗಿ ಆಸ್ಪತ್ರೆಗಳ (ಶೇ. 63) ನಡುವಿನ ಈ ಭಾರೀ ವ್ಯತ್ಯಾಸವು, ನೈಜ ವೈದ್ಯಕೀಯ ಅಗತ್ಯಗಳ ಜೊತೆಗೆ ವೈದ್ಯಕೀಯೇತರ ಹಾಗೂ ಮಾರುಕಟ್ಟೆ ಆಧಾರಿತ ಅಂಶಗಳೂ ಇದಕ್ಕೆ ಪ್ರಮುಖ ಕಾರಣ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ರಾಸ್-ವೆರಿಫಿಕೇಶನ್ ವ್ಯವಸ್ಥೆಯ ಮೂಲಕ ಹಾಗೂ ಖಾಸಗಿ ಆಸ್ಪತ್ರೆಗಳ ಶಸ್ತ್ರಚಿಕಿತ್ಸೆಗಳು ನಿಗದಿತ ವೈದ್ಯಕೀಯ ಮಾನದಂಡಗಳ ಪ್ರಕಾರ ನಡೆದಿವೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾ ಕಾರ್ಯಪಡೆ ಸಮಿತಿಗಳ ಮೂಲಕ ಸಿಸೇರಿಯನ್ ಆಡಿಟ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇದರೊಂದಿಗೆ, ನೈಸರ್ಗಿಕ ಹೆರಿಗೆಗಳನ್ನು ಪ್ರೋತ್ಸಾಹಿಸಲು ನರ್ಸ್-ಮಿಡ್ವೈಫ್ (ಸೂಲಗಿತ್ತಿ) ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. 14 ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜಿಸಲಾಗಿರುವ 60 ತರಬೇತಿ ಪಡೆದ ಮಿಡ್ವೈಫ್ಗಳಿಂದಾಗಿ ಸಿಸೇರಿಯನ್ ಪ್ರಮಾಣದಲ್ಲಿ ಶೇ. 6ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.
ಇದಲ್ಲದೆ, ಸರ್ಕಾರಿ ವಲಯದ ಎಲ್ಲಾ ಪ್ರಸೂತಿ ತಜ್ಞರಿಗೆ ವರ್ಕ್ಶಾಪ್ಗಳ ಮೂಲಕ 'ಅಸಿಸ್ಟೆಡ್ ವೆಜೈನಲ್ ಬರ್ತ್' ತಂತ್ರಜ್ಞಾನಗಳ ತರಬೇತಿ ನೀಡಲಾಗಿದೆ. ಗರ್ಭಿಣಿಯರಿಗಾಗಿ ಹೆರಿಗೆ ತರಗತಿಗಳು ಮತ್ತು ಆಪ್ತಸಮಾಲೋಚನೆಗಳನ್ನು ಆರಂಭಿಸಲಾಗಿದೆ. ಅನಗತ್ಯ ಸಿಸೇರಿಯನ್ ಹೆರಿಗೆಗಳನ್ನು ತಡೆಯಲು ಕ್ಲಿನಿಕಲ್ ಮಾರ್ಗದರ್ಶನ, ಆಡಿಟ್ ಮತ್ತು ಶಸ್ತ್ರಚಿಕಿತ್ಸಾ ಸುರಕ್ಷತಾ ಪ್ರೋಟೋಕಾಲ್ಗಳನ್ನು ಒಳಗೊಂಡ 'ಸಿ-ಸೇಫ್' (C-SAFE) ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ.
ಹೆಚ್ಚಿನ ತಾಯಂದಿರ ಮರಣ ಪ್ರಮಾಣವಿರುವ ರಾಜ್ಯಗಳಲ್ಲೂ ಸಿಸೇರಿಯನ್ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚೇ ಇದೆ. ಶೇ. 19.5ರಷ್ಟು ಸಿಸೇರಿಯನ್ ಹೆರಿಗೆ ನಡೆಯುವ ಉತ್ತರ ಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ತಾಯಂದಿರ ಮರಣ ಪ್ರಮಾಣ (ಪ್ರತಿ ಲಕ್ಷಕ್ಕೆ 154 ಸಾವುಗಳು) ಇದೆ. ಶೇ. 16ರಷ್ಟು ಸಿಸೇರಿಯನ್ ಹೊಂದಿರುವ ಮಧ್ಯಪ್ರದೇಶದಲ್ಲಿ ಮರಣ ಪ್ರಮಾಣ 135 ರಷ್ಟಿದೆ.
ಕರ್ನಾಟಕದ ಸಿಸೇರಿಯನ್ ಪ್ರಮಾಣವು (ಶೇ. 46) ತಮಿಳುನಾಡಿಗೆ ಹೋಲಿಸಬಹುದಾದ ಮಟ್ಟದಲ್ಲಿದ್ದರೂ, ಇಲ್ಲಿನ ತಾಯಂದಿರ ಮರಣ ಪ್ರಮಾಣ 73 ರಷ್ಟಿದ್ದು, ಇದು ತಮಿಳುನಾಡಿಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಅದೇ ರೀತಿ, ಶೇ. 45 ಮತ್ತು ಶೇ. 47ರಷ್ಟು ಸಿಸೇರಿಯನ್ ಪ್ರಮಾಣ ಹೊಂದಿರುವ ಪಶ್ಚಿಮ ಬಂಗಾಳ ಹಾಗೂ ಪಂಜಾಬ್ಗಳಲ್ಲಿ ತಾಯಂದಿರ ಮರಣ ಪ್ರಮಾಣ ಕ್ರಮವಾಗಿ 94 ಮತ್ತು 77 ರಷ್ಟಿದೆ.
"ನಮ್ಮ ಉದ್ದೇಶ ಸಿಸೇರಿಯನ್ ಹೆರಿಗೆಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲ, ಬದಲಿಗೆ ಶಸ್ತ್ರಚಿಕಿತ್ಸೆಯ ನಿಜವಾದ ಅಗತ್ಯವಿರುವ ಮಹಿಳೆಯರಿಗೆ ಮಾತ್ರ ಅದು ಸಿಗುವಂತೆ ಮಾಡುವುದು" ಎಂದು ಗಾಂಧಿನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ಮಾಜಿ ನಿರ್ದೇಶಕ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ದಿಲೀಪ್ ಮಾವಲಂಕರ್ ಹೇಳಿದ್ದಾರೆ. "ಒಂದು ಹಂತದ ನಂತರ, ತಾಯಿ ಮತ್ತು ಮಗುವಿನ ಉಳಿವಿನ ಪ್ರಮಾಣವು ಶಸ್ತ್ರಚಿಕಿತ್ಸೆಗಳ ಸಂಖ್ಯೆಗಿಂತ ಹೆಚ್ಚಾಗಿ ಅವರಿಗೆ ಸಿಗುವ ಚಿಕಿತ್ಸೆಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ" ಎಂದು ಅವರು ತಿಳಿಸಿದ್ದಾರೆ.
"ಉತ್ತಮ ಪ್ರಗತಿ ಸಾಧಿಸಿರುವ ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳು ಈಗಾಗಲೇ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಯಲ್ಲಿ ಉತ್ತಮ ಫಲಿತಾಂಶಗಳನ್ನು ಕಂಡಿವೆ" ಎಂದು ಯುನಿಸೆಫ್ನ ಪ್ರಸೂತಿ ಮತ್ತು ನವಜಾತ ಶಿಶು ಆರೋಗ್ಯ ವಿಭಾಗದ ಸಲಹೆಗಾರ ಎನ್.ಎಸ್. ಅಯ್ಯರ್ ಹೇಳಿದ್ದಾರೆ. "ಹೆಚ್ಚುತ್ತಿರುವ ಸಿಸೇರಿಯನ್ ಪ್ರಮಾಣವು ಆರೋಗ್ಯ ಸುಧಾರಣೆಯ ಬದಲಿಗೆ ಪ್ರಸ್ತುತ ಪ್ರಸೂತಿ ಸೇವೆಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಕಿಕ್ಕಿರಿದ ರೆಫರಲ್ ಆಸ್ಪತ್ರೆಗಳು, ಮಿಡ್ವೈಫ್ ಗಳ ಕೊರತೆ ಮತ್ತು ಹೆರಿಗೆ ನೋವಿನ ಸಮಯದಲ್ಲಿ ನಿರಂತರ ಬೆಂಬಲ ಸಿಗದಿರುವುದು ಇದಕ್ಕೆ ಕಾರಣವಾಗಿರಬಹುದು" ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗಳಿಗೆ ದಾಖಲಾದಾಗ ಮತ್ತು ಆರೋಗ್ಯ ಸಮಸ್ಯೆಗಳನ್ನು ಮೊದಲೇ ಗುರುತಿಸಿದಾಗ ಸಿಸೇರಿಯನ್ ಪ್ರಮಾಣ ತುಸು ಹೆಚ್ಚಾಗುವುದು ಸಹಜ. ಆದರೆ, ಈ ಪ್ರಮಾಣವು ಶೇ. 10ರಿಂದ 15ರಷ್ಟನ್ನು ದಾಟಿದ ನಂತರ, ಅದನ್ನು ಕೇವಲ ವೈದ್ಯಕೀಯ ಸಮಸ್ಯೆಗಳ ಕಾರಣ ನೀಡಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾವಲಂಕರ್ ಹೇಳಿದ್ದಾರೆ.
"ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಸ್ವಲ್ಪ ವಿನಾಯಿತಿ ನೀಡಿದರೂ, ಗರಿಷ್ಠ ಶೇ. 20ರಷ್ಟು ಹೆರಿಗೆಗಳಿಗೆ ಮಾತ್ರ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ನಿಜವಾದ ಅಗತ್ಯವಿರಬಹುದು. ಆದರೆ, ಪ್ರಸ್ತುತ ಭಾರತದ ಖಾಸಗಿ ವಲಯದಲ್ಲಿ ನಡೆಯುತ್ತಿರುವ ಪ್ರತಿ ಐದು ಸಿಸೇರಿಯನ್ ಹೆರಿಗೆಗಳ ಪೈಕಿ ಮೂರು ಹೆರಿಗೆಗಳು ವೈದ್ಯಕೀಯವಾಗಿ ಅನಗತ್ಯವಾಗಿವೆ" ಎಂದು ಜನ್ ಸ್ವಾಸ್ಥ್ಯ ಅಭಿಯಾನದ ರಾಷ್ಟ್ರೀಯ ಸಹ-ಸಂಚಾಲಕ ಅಭಯ್ ಶುಕ್ಲಾ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಅತಿ ಹೆಚ್ಚು ಸಿಸೇರಿಯನ್ ಹೆರಿಗೆ ಪ್ರಮಾಣ ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಪ್ರಮಾಣ ಶೇ. 90ರಷ್ಟಿದ್ದರೆ, ಪಶ್ಚಿಮ ಬಂಗಾಳದಲ್ಲಿ ಶೇ. 88 ಮತ್ತು ತೆಲಂಗಾಣದಲ್ಲಿ ಶೇ. 84ರಷ್ಟಿದೆ.
ಹೆಚ್ಚುತ್ತಿರುವ ಸಿಸೇರಿಯನ್ ಪ್ರಮಾಣವು ಕೇವಲ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ ಎಂದು ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಮಹಿಳೆಯರ ಲೈಂಗಿಕ ಹಾಗೂ ಪ್ರಸವ ಆರೋಗ್ಯ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಪುಣೆ ಮೂಲದ ಸಮ್ಯಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ. ಅನೇಕ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ, ಸಾಂಸ್ಥಿಕ ಹೆರಿಗೆಗಳು ಈಗ ಖಾಸಗಿ ಹೆರಿಗೆ ಆಸ್ಪತ್ರೆಗಳತ್ತ ಮುಖ ಮಾಡಿವೆ. ಅಲ್ಲಿ ಮಹಿಳೆಯರಿಗೆ ಹೆರಿಗೆಯನ್ನು ಹೆಚ್ಚಿನ ಅಪಾಯದ ಘಟನೆಯಾಗಿ ಬಿಂಬಿಸಿ, ಶಸ್ತ್ರಚಿಕಿತ್ಸೆ ಅನಿವಾರ್ಯ ಎಂಬಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಗರ್ಭಧಾರಣೆಯ ತೊಂದರೆಗಳ ಬಗೆಗಿನ ಭಯ ಮತ್ತು ಆತಂಕವನ್ನು ಬಳಸಿಕೊಂಡು ಮಹಿಳೆಯರನ್ನು ಶಸ್ತ್ರಚಿಕಿತ್ಸೆಯ ಹೆರಿಗೆಯತ್ತ ಪ್ರೇರೇಪಿಸಲಾಗುತ್ತಿದೆ ಎಂದು ಪವಾರ್ ಹೇಳಿದ್ದಾರೆ.
ಇದು ಅಂಕಿ-ಅಂಶಗಳಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತದಾದ್ಯಂತ ನಗರ ಪ್ರದೇಶಗಳಲ್ಲಿ ನಡೆಯುವ ಒಟ್ಟು ಹೆರಿಗೆಗಳಲ್ಲಿ ಶೇ. 40.5ರಷ್ಟು ಸಿಸೇರಿಯನ್ ಮೂಲಕ ನಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಶೇ. 22.8ರಷ್ಟಿದೆ.
ಇದಲ್ಲದೆ, 2018ರಲ್ಲಿ 51 ದೇಶಗಳಲ್ಲಿ ನಡೆದ ಅಧ್ಯಯನದ ಪ್ರಕಾರ, ಸಾಮಾನ್ಯ ಹೆರಿಗೆಯ ಮೂಲಕ ಜನಿಸಿದ ಶಿಶುಗಳಿಗೆ ಹೋಲಿಸಿದರೆ, ಸಿಸೇರಿಯನ್ ಮೂಲಕ ಜನಿಸಿದ ಶಿಶುಗಳಿಗೆ ಹೆರಿಗೆಯಾದ ಮೊದಲ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ಸಿಗುವ ಸಾಧ್ಯತೆ ಅರ್ಧಕ್ಕಿಂತಲೂ ಕಡಿಮೆಯಿರುತ್ತದೆ ಎಂದು ಇಂಡಿಯಾಸ್ಪೆಂಡ್ 2018ರ ಆಗಸ್ಟ್ನಲ್ಲಿ ವರದಿ ಮಾಡಿದೆ. ಅರಿವಳಿಕೆಯ ಪ್ರಭಾವದಿಂದ ಹೊರಬರುವುದು, ಶಸ್ತ್ರಚಿಕಿತ್ಸೆಯ ಗಾಯದಿಂದ ಚೇತರಿಸಿಕೊಳ್ಳುವುದು ಮತ್ತು ಮಗುವನ್ನು ಸುರಕ್ಷಿತವಾಗಿ ಹಿಡಿದುಕೊಳ್ಳಲು ಇತರರ ಸಹಾಯ ಬೇಕಾಗುವುದು ಸೇರಿದಂತೆ ಹಲವು ಸವಾಲುಗಳನ್ನು ಸಿಸೇರಿಯನ್ ಆದ ಮಹಿಳೆಯರು ಎದುರಿಸಬೇಕಾಗುತ್ತದೆ ಎಂದು ಅಧ್ಯಯನವು ಉಲ್ಲೇಖಿಸಿದೆ.
ಮೊದಲ ಗಂಟೆಯಲ್ಲೇ ಎದೆಹಾಲು ಉಣಿಸುವುದು ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಅತ್ಯಂತ ಮುಖ್ಯವಾಗಿದೆ. ಮೊದಲ ಎದೆಹಾಲು ಅತ್ಯಂತ ಪೌಷ್ಟಿಕಾಂಶಯುಕ್ತವಾಗಿದ್ದು, ನವಜಾತ ಶಿಶುವನ್ನು ರೋಗಗಳಿಂದ ರಕ್ಷಿಸುವ ರೋಗನಿರೋಧಕ ಶಕ್ತಿಯನ್ನು (ಕೊಲೊಸ್ಟ್ರಮ್) ಹೊಂದಿರುತ್ತದೆ. ಹೆರಿಗೆಯಾದ ತಕ್ಷಣ ಅಥವಾ ಒಂದು ಗಂಟೆಯೊಳಗೆ ಮಗುವಿಗೆ ಹಾಲುಣಿಸಲು ಶಿಫಾರಸು ಮಾಡಲಾಗುತ್ತದೆ. ಕೇವಲ ಕೆಲವು ಗಂಟೆಗಳ ಕಾಲ ವಿಳಂಬ ಮಾಡಿದರೂ ಅದು ಶಿಶು ಮರಣದ ಅಪಾಯವನ್ನು ಹೆಚ್ಚಿಸಬಹುದು ಎಂದು ಇಂಡಿಯಾಸ್ಪೆಂಡ್ 2019ರ ವರದಿಯಲ್ಲಿ ತಿಳಿಸಿದೆ.
►ಹೆಚ್ಚುತ್ತಿರುವ ವೆಚ್ಚಗಳು
ಹೆಚ್ಚಿನ ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದರಿಂದ ಮತ್ತು ಸಿಸೇರಿಯನ್ ಹೆರಿಗೆಗಳ ಪ್ರಮಾಣ ನಿರಂತರವಾಗಿ ಏರುತ್ತಿರುವುದರಿಂದ, ಭಾರತದ ಅನೇಕ ಕುಟುಂಬಗಳಿಗೆ, ಪ್ರಮುಖವಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿರುವವರಿಗೆ, ಹೆರಿಗೆ ವೆಚ್ಚವು ಭಾರೀ ಹೊರೆಯಾಗಿ ಪರಿಣಮಿಸಿದೆ.
ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಲು ಸರಾಸರಿ 39,000 ರೂ.ಗೂ ಹೆಚ್ಚು ವೆಚ್ಚವಾಗುತ್ತದೆ. ಇದು ಸರ್ಕಾರಿ ಆಸ್ಪತ್ರೆಯ ಹೆರಿಗೆ ವೆಚ್ಚಕ್ಕೆ ಹೋಲಿಸಿದರೆ 17 ಪಟ್ಟು ಹೆಚ್ಚಾಗಿದೆ. ಇತ್ತೀಚೆಗೆ 2026ರ ಜೂನ್ ನಲ್ಲಿ ಇಂಡಿಯಾಸ್ಪೆಂಡ್ ವರದಿ ಮಾಡಿರುವ ಪ್ರಕಾರ, ಈ ಭಾರೀ ವೈದ್ಯಕೀಯ ವೆಚ್ಚದಿಂದಾಗಿ ಅನೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕುತ್ತಿವೆ, ಆಸ್ತಿ ಮಾರಿಕೊಳ್ಳುತ್ತಿವೆ ಅಥವಾ ಆಹಾರ ಮತ್ತು ಶಿಕ್ಷಣದಂತಹ ಇತರ ಅತ್ಯಗತ್ಯ ವೆಚ್ಚಗಳನ್ನು ಕಡಿತಗೊಳಿಸುತ್ತಿವೆ.
2018 ಮತ್ತು 2025ರ ನಡುವೆ, ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆಯ ಸರಾಸರಿ ವೆಚ್ಚ ಶೇಕಡಾ 73ರಷ್ಟು ಹೆಚ್ಚಾಗಿದ್ದರೆ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಶೇಕಡಾ 63ರಷ್ಟು ಏರಿಕೆಯಾಗಿದೆ. ಸಿಸೇರಿಯನ್ ಹೆರಿಗೆಗಳ ಪ್ರಮಾಣ ಹೆಚ್ಚಿರುವ ರಾಜ್ಯಗಳಲ್ಲೇ ಖಾಸಗಿ ಆಸ್ಪತ್ರೆಗಳ ಹೆರಿಗೆ ವೆಚ್ಚವೂ ಅತ್ಯಂತ ದುಬಾರಿಯಾಗಿದೆ. ತೆಲಂಗಾಣದಲ್ಲಿ ಖಾಸಗಿ ಆಸ್ಪತ್ರೆಯ ಹೆರಿಗೆ ವೆಚ್ಚ 53,355 ರೂ. ಆಗಿದ್ದು, ಇದು ಸರ್ಕಾರಿ ಆಸ್ಪತ್ರೆಯ ವೆಚ್ಚಕ್ಕಿಂತ (1,714 ರೂ.) 31 ಪಟ್ಟು ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಹೆರಿಗೆಯ ವೆಚ್ಚ ಸುಮಾರು 70,000 ರೂ. ಆಗಿದ್ದು, ಇದು ಸರ್ಕಾರಿ ಆಸ್ಪತ್ರೆಯ ವೆಚ್ಚಕ್ಕಿಂತ ಸುಮಾರು 50 ಪಟ್ಟು ಹೆಚ್ಚಾಗಿದೆ.
ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳು ತಾಯಂದಿರ ಮರಣ ಪ್ರಮಾಣವನ್ನು ಯಶಸ್ವಿಯಾಗಿ ತಗ್ಗಿಸಿದ್ದು, ಈಗ ಅಲ್ಲಿನ ಪ್ರಸೂತಿ ಆರೈಕೆಯು ಒಂದು ದೊಡ್ಡ ಮಾರುಕಟ್ಟೆಯಾಗಿ ಬದಲಾಗಿದೆ ಎಂದು ಅಯ್ಯರ್ ತಿಳಿಸಿದ್ದಾರೆ. ಇಲ್ಲಿ ಬಹುತೇಕ ಹೆರಿಗೆಗಳು ಆಸ್ಪತ್ರೆಗಳಲ್ಲೇ ನಡೆಯುತ್ತಿದ್ದು, ಖಾಸಗಿ ಆಸ್ಪತ್ರೆಗಳ ಪಾತ್ರವೇ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲೇ ಹೆರಿಗೆಯಾಗುವ ಪ್ರಕ್ರಿಯೆ ಸರ್ವವ್ಯಾಪಿಯಾದ ನಂತರ, ಮುಂದಿನ ಬೆಳವಣಿಗೆಯು ಕೇವಲ ಚಿಕಿತ್ಸೆಯ ಲಭ್ಯತೆಯ ಮೇಲೆ ಆಧಾರಪಟ್ಟಿರುವುದಿಲ್ಲ. ಬದಲಿಗೆ, ಹೆಚ್ಚಿನ ವೈದ್ಯಕೀಯ ಹಸ್ತಕ್ಷೇಪ, ವಿಶೇಷ ಆರೈಕೆ ಮತ್ತು ದುಬಾರಿ ಸೇವೆಗಳ ಮೂಲಕವೇ ಈ ಮಾರುಕಟ್ಟೆ ವಿಸ್ತರಿಸುತ್ತದೆ ಎಂದು ಅವರು ವಾದಿಸಿದ್ದಾರೆ.
“ಮೊದಲಿಗೆ ಮತ್ತು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ-ಖಾಸಗಿ ಆರೋಗ್ಯ ವಿಮೆ ಯೋಜನೆಗಳನ್ನು ಜಾರಿಗೆ ತಂದಿದ್ದು ಇದೇ ರಾಜ್ಯಗಳು” ಎಂದು ಶುಕ್ಲಾ ಹೇಳಿದ್ದಾರೆ. ಸರ್ಕಾರವು ಜನರು ಖಾಸಗಿ ವಲಯಕ್ಕೆ ಹೋಗಲು ಸಬ್ಸಿಡಿ ನೀಡಿತು. ಇದು ಮಾರುಕಟ್ಟೆಯನ್ನು ವಿಸ್ತರಿಸಿತು ಮತ್ತು ಜನರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿತು. ಈ ಯೋಜನೆಗಳು ಸೇವೆಗಳ ಬಳಕೆಯನ್ನು ಹೆಚ್ಚಿಸಿದರೂ, ಮತ್ತೊಂದೆಡೆ ಖಾಸಗಿ ವಲಯದ ಪ್ರಸೂತಿ ಆರೈಕೆಯ ಬೆಳವಣಿಗೆಯನ್ನು ತೀವ್ರಗೊಳಿಸಿದವು. ಈ ಖಾಸಗಿ ಆಸ್ಪತ್ರೆಗಳಲ್ಲೇ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಸರ್ಕಾರಿ ಆಸ್ಪತ್ರೆಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
►ಶಸ್ತ್ರಚಿಕಿತ್ಸೆಗೆ ಹೆಚ್ಚುತ್ತಿರುವ ಒತ್ತಡ
ಖಾಸಗಿ ಆಸ್ಪತ್ರೆಗಳಲ್ಲಿನ ಹೆಚ್ಚಿನ ಸಿಸೇರಿಯನ್ ಪ್ರಮಾಣವನ್ನು ಕೇವಲ ವೈದ್ಯಕೀಯ ಅಗತ್ಯಗಳಿಂದ ಸಮರ್ಥಿಸಲು ಸಾಧ್ಯವಿಲ್ಲ. ಇದು ಹೆರಿಗೆ ಆರೈಕೆ ವಲಯದಲ್ಲಿ ಹೆಚ್ಚುತ್ತಿರುವ ವಾಣಿಜ್ಯೀಕರಣವನ್ನು ಪ್ರತಿಬಿಂಬಿಸುತ್ತದೆ ಎಂದು ಶುಕ್ಲಾ ವಾದಿಸಿದ್ದಾರೆ.
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಗರ್ಭಿಣಿಯರಿಗೆ ಖಾಸಗಿ ಹೆರಿಗೆ ಕೇಂದ್ರಗಳೇ ಅನಿವಾರ್ಯ ಆಯ್ಕೆಯಾಗುತ್ತಿವೆ ಎಂದು ಪವಾರ್ ವಿವರಿಸಿದ್ದಾರೆ. ಅಲ್ಲಿನ ವೈದ್ಯರು ಮತ್ತು ರೆಫರಲ್ ಜಾಲಗಳು ಹೆರಿಗೆಯ ಅಪಾಯಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ, ಸಿಸೇರಿಯನ್ ಹೆರಿಗೆಯೇ ಸುರಕ್ಷಿತ ಆಯ್ಕೆ ಎಂದು ಮಹಿಳೆಯರು ನಂಬುವಂತೆ ಮಾಡುತ್ತಿದ್ದಾರೆ.
ಆಸ್ಪತ್ರೆಗಳ 'ಸಮಯದ ಲೆಕ್ಕಾಚಾರ' ಕೂಡ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯ ಹೆರಿಗೆಗೆ ನಿರಂತರ ನಿಗಾ, ಬೆಂಬಲ ಮತ್ತು ವೀಕ್ಷಣೆಗಾಗಿ 6 ರಿಂದ 12 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗಬಹುದು. ಆದರೆ, ಸಿಸೇರಿಯನ್ ಹೆರಿಗೆಯು ಮೊದಲೇ ಯೋಜಿತವಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ.
ಆರೋಗ್ಯ ವ್ಯವಸ್ಥೆಯಿಂದ ಸಾಂಪ್ರದಾಯಿಕ ತರಬೇತಿ ಪಡೆದ ಸೂಲಗಿತ್ತಿಯರ (ಮಿಡ್ವೈಫ್) ವ್ಯವಸ್ಥೆ ಬಹುತೇಕ ಕಣ್ಮರೆಯಾಗಿರುವುದರಿಂದ ಈ ಸವಾಲು ಮತ್ತಷ್ಟು ತೀವ್ರಗೊಂಡಿದೆ ಎಂದು ಅಯ್ಯರ್ ತಿಳಿಸಿದ್ದಾರೆ. ಹಿಂದೆ, ಹೆರಿಗೆ ನೋವಿನ ಸಮಯದಲ್ಲಿ ಮಹಿಳೆಯರ ಮೇಲೆ ನಿಗಾ ಇಡಲು ಮತ್ತು ಹೆರಿಗೆಗೆ ಬೆಂಬಲ ನೀಡಲು ಮಿಡ್ವೈಫ್ಗಳು ಮತ್ತು ಅನುಭವ ಹೊಂದಿದ ನರ್ಸ್ಗಳು ಪ್ರಮುಖ ಪಾತ್ರ ವಹಿಸುತ್ತಿದ್ದರು. ಇಂದು ಹೆರಿಗೆಗಳು ಹೆಚ್ಚಾಗಿ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ವಿಶೇಷ ಹೆರಿಗೆ ಆಸ್ಪತ್ರೆಗಳಲ್ಲೇ ನಡೆಯುತ್ತಿವೆ. ಅಲ್ಲಿ ವೈದ್ಯರು ಕಡಿಮೆ ಸಿಬ್ಬಂದಿ ಮತ್ತು ಕಿಕ್ಕಿರಿದ ಹೆರಿಗೆ ಕೋಣೆಗಳ ನಡುವೆಯೇ ಹೆಚ್ಚಿನ ಸಂಖ್ಯೆಯ ರೋಗಿಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಇದೆ.
ಅನೇಕ ದೇಶಗಳಲ್ಲಿ ಸಾಮಾನ್ಯ ಹೆರಿಗೆಗಳನ್ನು ನರ್ಸ್ಗಳು ಮತ್ತು ಮಿಡ್ವೈಫ್ಗಳೇ ಮಾಡಿಸುತ್ತಾರೆ. ಭಾರತದಲ್ಲೂ ಇಂತಹ ಹೆಚ್ಚಿನ ನಿಗಾ ಪ್ರಕ್ರಿಯೆಯನ್ನು ತರಬೇತಿ ಪಡೆದ ನರ್ಸಿಂಗ್ ಸಿಬ್ಬಂದಿಯೇ ಮಾಡಬಹುದು ಎಂದು ವೋರಾ ಹೇಳಿದ್ದಾರೆ. "ಸಾಮಾನ್ಯ ಹೆರಿಗೆಗೆ ಕಡಿಮೆ ಸಂಪನ್ಮೂಲ ಸಾಕಾಗುತ್ತದೆ, ಆದರೆ ಹೆಚ್ಚಿನ ತಾಳ್ಮೆ ಮತ್ತು ಸಮಯದ ಅಗತ್ಯವಿರುತ್ತದೆ." ಹೆರಿಗೆಯ ಸಮಯದಲ್ಲಿ ಯಾವುದೇ ಕ್ಷಣದಲ್ಲಿ ಹಠಾತ್ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂಬ ಆತಂಕ ಇರುವುದರಿಂದ ಪ್ರಸೂತಿ ತಜ್ಞರೇ ಹೆರಿಗೆಯ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಣಕಾಸಿನ ಲಾಭಗಳು ಕೂಡ ಈ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಪ್ರಸ್ತುತ ಚಾಲ್ತಿಯಲ್ಲಿರುವ ಶುಲ್ಕ ಪದ್ಧತಿಯು ಸಾಮಾನ್ಯ ಹೆರಿಗೆಗಿಂತ ಸಿಸೇರಿಯನ್ಗೆ ಹೆಚ್ಚಿನ ಹಣವನ್ನು ನೀಡುವುದರಿಂದ, ಶಸ್ತ್ರಚಿಕಿತ್ಸೆಗೆ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಮಾವಲಂಕರ್ ವಾದಿಸಿದ್ದಾರೆ. ಗುಜರಾತ್ನಲ್ಲಿ ಈ ಹಿಂದೆ ನಡೆದಿದ್ದ ಪ್ರಯೋಗವೊಂದನ್ನು ಉಲ್ಲೇಖಿಸಿದ ಅವರು, ಹೆರಿಗೆ ನಾರ್ಮಲ್ ಆಗಲಿ ಅಥವಾ ಸಿಸೇರಿಯನ್ ಮೂಲಕವೇ ಆಗಲಿ ಖಾಸಗಿ ಆಸ್ಪತ್ರೆಗಳಿಗೆ ಒಂದೇ ನಿಗದಿತ ಮೊತ್ತವನ್ನು ಪಾವತಿಸಿದಾಗ, ಅಲ್ಲಿ ಶಸ್ತ್ರಚಿಕಿತ್ಸಾ ಹೆರಿಗೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಗ್ರಾಮೀಣ ಭಾಗದ ಖಾಸಗಿ ಆಸ್ಪತ್ರೆಗಳಲ್ಲೂ ಇದೇ ರೀತಿಯ ವಾಣಿಜ್ಯ ವ್ಯವಸ್ಥೆ ಇದೆ ಎಂದು ಪವಾರ್ ವಿವರಿಸಿದ್ದಾರೆ. ಬಿಎಎಂಎಸ್ (BAMS) ಮತ್ತು ಬಿಎಚ್ಎಂಎಸ್ (BHMS) ವೈದ್ಯರು ನಡೆಸುವ ಹೆರಿಗೆ ಕೇಂದ್ರಗಳು ಮೂಲಸೌಕರ್ಯ, ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ತಜ್ಞ ವೈದ್ಯರ ಸಮಾಲೋಚನೆಗಾಗಿ ಭಾರೀ ಹೂಡಿಕೆ ಮಾಡಿರುತ್ತವೆ. ಈ ವೆಚ್ಚವನ್ನು ವಸೂಲಿ ಮಾಡಲು ಅವುಗಳ ಮೇಲೆ ಆರ್ಥಿಕ ಒತ್ತಡ ಇರುತ್ತದೆ.
ಸೌಜನ್ಯ: scroll.in