'ಅವಳ್ಕೊಪ್ಪಂ' | ನಟಿಯ ಮೇಲಿನ ದೌರ್ಜನ್ಯ ಪ್ರಕರಣ, ಸಂತ್ರಸ್ತೆಯ ಹೋರಾಟಕ್ಕೆ ಜತೆಯಾಗಿ ನಿಂತ ಪತ್ರಕರ್ತನೊಬ್ಬನ ತನಿಖಾ ಪ್ರಯಾಣ
ಆರ್. ರೋಷಿಪಾಲ್
ಮಲಯಾಳಂ ಸುದ್ದಿ ವಾಹಿನಿ ರಿಪೋರ್ಟರ್ ಚಾನೆಲ್‌ನ ಪತ್ರಕರ್ತ ಆರ್. ರೋಷಿಪಾಲ್ ಬರೆದಿರುವ ಕೃತಿ 'ಅವಳ್ಕೊಪ್ಪಂ: ಒರು ಮಾಧ್ಯಮ ಪ್ರವರ್ತಕನ್ಡೆ ಅನ್ವೇಷಣಯಾತ್ರಾ' (ಅರ್ಥ: ಅವಳೊಂದಿಗೆ: ಒಬ್ಬ ಪತ್ರಕರ್ತನ ತನಿಖಾ ಪ್ರಯಾಣ). ಕೇರಳದ ಪ್ರಖ್ಯಾತ ಪ್ರಕಾಶನ ಸಂಸ್ಥೆಯಾದ ಡಿಸಿ ಬುಕ್ಸ್ ಹೊರತಂದಿರುವ ಈ ಪುಸ್ತಕವು, ಇಡೀ ಭಾರತೀಯ ಚಿತ್ರರಂಗ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದ 2017ರಲ್ಲಿ ಕೊಚ್ಚಿಯಲ್ಲಿ ನಡೆದ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಅದರ ಬೆನ್ನಲ್ಲೇ ಆರಂಭವಾದ ಸುದೀರ್ಘ ನ್ಯಾಯಾಂಗ ಹೋರಾಟದ ತೆರೆಮರೆಯ ಕಟು ವಾಸ್ತವಗಳನ್ನು ಅತ್ಯಂತ ನಿಷ್ಠುರವಾಗಿ ಅನಾವರಣಗೊಳಿಸುತ್ತದೆ.
ಈ ಸೂಕ್ಷ್ಮ ಮತ್ತು ಹೈ-ಪ್ರೊಫೈಲ್ ಪ್ರಕರಣವನ್ನು ಅದರ ಆರಂಭದ ದಿನದಿಂದಲೇ ಅತ್ಯಂತ ಹತ್ತಿರದಿಂದ ಗಮನಿಸಿ, ನಿರಂತರವಾಗಿ ವರದಿ ಮಾಡಿದ್ದ ರೋಷಿಪಾಲ್, ಈ ಕೃತಿಯಲ್ಲಿ ಕೇವಲ ಕೋರ್ಟ್ ದಾಖಲೆಗಳಲ್ಲೇನಿದೆ ಅಥವಾ ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ಏನಿದೆ ಎಂಬುದನ್ನು ಮಾತ್ರ ಹೇಳಿ ನಿಲ್ಲಿಸಿಲ್ಲ. ಬದಲಿಗೆ, ಸಮಾಜದ ಅತ್ಯಂತ ಪ್ರಭಾವಿ, ಶ್ರೀಮಂತ ಮತ್ತು ಕ್ರೂರ ಶಕ್ತಿಗಳ ವಿರುದ್ಧ ಒಬ್ಬಂಟಿ ಹೆಣ್ಣುಮಗಳು ನಡೆಸಿದ ದಿಟ್ಟ ಹೋರಾಟವನ್ನು, ಅದರ ಹಿಂದೆ ಕೆಲಸ ಮಾಡಿದ ವ್ಯವಸ್ಥಿತ ಪಿತೂರಿಗಳನ್ನು ಒಂದು ರೋಮಾಂಚಕ ರಾಜಕೀಯ-ಸಾಮಾಜಿಕ ಥ್ರಿಲ್ಲರ್ ನಂತೆ ಓದುಗರ ಮುಂದೆ ಇಟ್ಟಿದ್ದಾರೆ.
2017ರ ಫೆಬ್ರವರಿ ತಿಂಗಳು. ಕೊಚ್ಚಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟಿಯೊಬ್ಬರ ಮೇಲೆ ನಡೆದ ದೌರ್ಜನ್ಯದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದಾಗ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಆರಂಭದಲ್ಲಿ ಇದೊಂದು ಕೇವಲ ಸಾಮಾನ್ಯ ಕ್ರಿಮಿನಲ್ ಗ್ಯಾಂಗ್ ನ ಕೃತ್ಯ ಎಂದು ಬಿಂಬಿಸಲು ಪ್ರಯತ್ನಿಸಲಾಯಿತಾದರೂ, ತನಿಖೆ ಮುಂದುವರಿಯುತ್ತಿದ್ದಂತೆ ಚಿತ್ರರಂಗದ ಜನಪ್ರಿಯ ನಟ ದಿಲೀಪ್ ಅವರ ಹೆಸರು ಈ ಕೃತ್ಯದಲ್ಲಿ ಕೇಳಿಬಂತು. ಹಗೆತನ ಸಾಧಿಸಲು ಈ ಕೃತ್ಯ ಎಸಗಲು ಆತ ಕೊಟೇಷನ್ ನೀಡಿದ್ದ ಎಂಬುದು ಬಹಿರಂಗವಾಯಿತು. ಅಲ್ಲಿಂದ ಆರಂಭವಾದದ್ದು ಹಣ, ಅಧಿಕಾರ, ಸಿನಿಮಾ ಗ್ಲಾಮರ್ ಮತ್ತು ರಾಜಕೀಯ ಪ್ರಭಾವಗಳ ಬಲವಾದ ಮೈತ್ರಿಕೂಟ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವ ಜಾಲ.
ರೋಷಿಪಾಲ್ ಅವರು ತಮಗಿದ್ದ ವೃತ್ತಿಪರ ಮಿತಿಗಳು ಮತ್ತು ಬೆದರಿಕೆಗಳ ನಡುವೆಯೂ ಈ ಇಡೀ ಜಾಲದ ಒಳಸುಳಿಗಳನ್ನು ಹೇಗೆ ಭೇದಿಸಿದರು ಎಂಬುದೇ ಈ ಪುಸ್ತಕದ ಮುಖ್ಯ ಕಥಾವಸ್ತು. ಪುಸ್ತಕದ ಶೀರ್ಷಿಕೆ 'ಅವಳ್ಕೊಪ್ಪಂ' (ಅವಳೊಂದಿಗೆ) ಎನ್ನುವ ಹೆಸರೇ ಸೂಚಿಸುವಂತೆ, ಇದು ಸಂತ್ರಸ್ತೆಯ ಪರವಾಗಿ ನಿಲ್ಲುವ ಮತ್ತು ಆಕೆಯ ನ್ಯಾಯಕ್ಕಾಗಿ ಹೋರಾಡುವ ಬದ್ಧತೆಯ ಘೋಷಣೆಯಾಗಿದೆ.
ಈ ಪುಸ್ತಕದಲ್ಲಿ ಲೇಖಕರು ಚಿತ್ರರಂಗ ಮತ್ತು ರಾಜಕೀಯದ ನೆರಳಿನಲ್ಲಿ ನಡೆಯುವ ವ್ಯವಸ್ಥಿತ ಪಿತೂರಿಗಳನ್ನು ಯಾವುದೇ ಮುಲಾಜಿಲ್ಲದೆ ಬಯಲು ಮಾಡಿದ್ದಾರೆ. ಮಲಯಾಳಂ ಚಿತ್ರರಂಗದ ಉನ್ನತ ಮಟ್ಟದ ಸಂಘಟನೆಗಳು, ಪ್ರಭಾವಿ ನಟರು, ನಿರ್ದೇಶಕರು ಮತ್ತು ಉದ್ಯಮಿಗಳು ಆರೋಪಿಯನ್ನು ರಕ್ಷಿಸಲು ಹಾಗೂ ಇಡೀ ಪ್ರಕರಣವನ್ನು ಹಾದಿ ತಪ್ಪಿಸಲು ಹೇಗೆ ಒಟ್ಟಾಗಿ ನಿಂತರು ಎಂಬುದನ್ನು ಲೇಖಕರು ಸಾಕ್ಷ್ಯಾಧಾರಗಳೊಂದಿಗೆ ವಿವರಿಸುತ್ತಾರೆ. ಸಂತ್ರಸ್ತೆಯನ್ನು ಸಾರ್ವಜನಿಕವಾಗಿ ಅಪರಾಧಿಯನ್ನಾಗಿ ಬಿಂಬಿಸಲು, ಆಕೆಯ ಚಾರಿತ್ರ್ಯ ಹರಣ ಮಾಡಲು ಸೃಷ್ಟಿಯಾದ ನಕಲಿ ಕಥೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ವ್ಯವಸ್ಥಿತ ಪ್ರಚಾರ ತಂತ್ರಗಳನ್ನು ಇಲ್ಲಿ ತೀಕ್ಷ್ಣವಾಗಿ ಪ್ರಶ್ನಿಸಲಾಗಿದೆ. ಸಿನಿಮಾ ರಂಗದ ಸೋಗಲಾಡಿತನ ಮತ್ತು ಅದರೊಳಗಿನ ಕರಾಳ ಮಾಫಿಯಾವನ್ನು ರೋಷಿಪಾಲ್ ಇಲ್ಲಿ ಬಯಲು ಮಾಡಿದ್ದಾರೆ.
ಇದು ಕೇವಲ ಅಪರಾಧಿಗಳ ವಿರುದ್ಧದ ಹೋರಾಟವಲ್ಲ; ಬದಲಿಗೆ, ನಮ್ಮ ಇಡೀ ಸಾರ್ವಜನಿಕ ಮತ್ತು ಸಾಂಸ್ಥಿಕ ವ್ಯವಸ್ಥೆಯ ವೈಫಲ್ಯದ ದರ್ಶನವಾಗಿದೆ ಎಂದು ರೋಷಿಪಾಲ್ ವಾದಿಸುತ್ತಾರೆ. ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲಬೇಕಾದ ಕಾನೂನಿನ ಲೋಪದೋಷಗಳು, ತನಿಖಾ ಹಂತದಲ್ಲಿ ಉನ್ನತ ಮಟ್ಟದಿಂದ ಎದುರಾದ ರಾಜಕೀಯ ಒತ್ತಡಗಳು, ಸಾಕ್ಷಿಗಳು ಉಲ್ಟಾ ಹೊಡೆದ ಘಟನೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಹೂಡಿದ ತಂತ್ರಗಳನ್ನು ಪುಸ್ತಕದಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ. ವ್ಯವಸ್ಥೆಯು ಹೇಗೆ ಪ್ರಭಾವಿ ಮತ್ತು ಶ್ರೀಮಂತ ವ್ಯಕ್ತಿಗಳ ಕೈಗೊಂಬೆಯಾಗಬಹುದು ಎಂಬುದಕ್ಕೆ ಈ ಪ್ರಕರಣವನ್ನು ಲೇಖಕರು ಅತ್ಯಂತ ಪ್ರಮುಖ ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ.
ಒಬ್ಬ ಹಿರಿಯ ಪತ್ರಕರ್ತನಾಗಿ ರೋಷಿಪಾಲ್ ಅವರು ತಮ್ಮದೇ ವೃತ್ತಿಬಾಂಧವರ ಮತ್ತು ಮಾಧ್ಯಮ ಸಂಸ್ಥೆಗಳ ದ್ವಂದ್ವ ನೀತಿಯನ್ನು ಟೀಕಿಸಲು ಹಿಂಜರಿದಿಲ್ಲ. ಟಿಆರ್‌ಪಿ ಮತ್ತು ಸಂಚಲನ ಮೂಡಿಸುವ ಮಾಧ್ಯಮಗಳ ಒಂದು ದೊಡ್ಡ ವರ್ಗ ಹೇಗೆ ಸಂತ್ರಸ್ತೆಯ ಖಾಸಗಿತನವನ್ನು ಹರಾಜಿಗಿಟ್ಟಿತು ಮತ್ತು ಆರೋಪಿಯ ಪರವಾಗಿ ಸಹಾನುಭೂತಿ ಮೂಡಿಸಲು ಪ್ರಯತ್ನಿಸಿತು ಎಂಬುದನ್ನು ಅವರು ವಿಷಾದದಿಂದ ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ತನಿಖೆ ದಾರಿ ತಪ್ಪದಂತೆ ನೋಡಿಕೊಳ್ಳುವಲ್ಲಿ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ 'ರಿಪೋರ್ಟರ್ ಟಿವಿ'ಯಂತಹ ಕೆಲವು ಮಾಧ್ಯಮಗಳು ವಹಿಸಿದ ಪ್ರಾಮಾಣಿಕ ಪಾತ್ರವನ್ನು ಅವರು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.
ಲೇಖಕರು ತಮ್ಮ ಸ್ವಂತ ಅನುಭವಗಳನ್ನು ಬರೆದಿರುವುದರಿಂದ, ಒಬ್ಬ ಪತ್ರಕರ್ತ ಸುದ್ದಿಮನೆಯಿಂದಾಚೆಗೆ ಎದುರಿಸುವ ಒತ್ತಡ ಮತ್ತು ಸವಾಲುಗಳ ಬಗ್ಗೆಯೂ ಓದುಗರಿಗೆ ಪರಿಚಯವಾಗುತ್ತದೆ. ಈ ಸೂಕ್ಷ್ಮ ಪ್ರಕರಣದ ಸತ್ಯವನ್ನು ಸಾರ್ವಜನಿಕರ ಮುಂದೆ ತರುವಾಗ ರೋಷಿಪಾಲ್ ಮತ್ತು ಅವರ ಸಹೋದ್ಯೋಗಿಗಳು ಎದುರಿಸಿದ ಜೀವಬೆದರಿಕೆಗಳು, ಕಾನೂನು ನೋಟೀಸುಗಳು, ಸಿನಿಮಾ ರಂಗದಿಂದ ಎದುರಾದ ಬಹಿಷ್ಕಾರಗಳು ಮತ್ತು ನಿರಂತರ ಮಾನಸಿಕ ಒತ್ತಡಗಳು ಇಲ್ಲಿ ದಾಖಲಾಗಿವೆ. ಪ್ರಭಾವಿ ಶಕ್ತಿಗಳ ವಿರುದ್ಧ ರಾಜಿ ಮಾಡದೆ, ದಿಟ್ಟತನದಿಂದ ಕೆಲಸ ನಿರ್ವಹಿಸುವುದು ಎಷ್ಟು ಅಪಾಯಕಾರಿ ಮತ್ತು ಒಂಟಿತನದಿಂದ ಕೂಡಿರುತ್ತದೆ ಎಂಬುದನ್ನು ಲೇಖಕರು ನೋವಿನೊಂದಿಗೆ ಹಂಚಿಕೊಂಡಿದ್ದಾರೆ. ಇದು ಕೇವಲ ವೃತ್ತಿಯಲ್ಲ, ಅದೊಂದು ಸಾಮಾಜಿಕ ಬದ್ಧತೆ ಎಂಬುದನ್ನು ಅವರ ನಡೆ ಸಾಬೀತುಪಡಿಸುತ್ತದೆ.
ಆರ್. ರೋಷಿಪಾಲ್ ಅವರ ಬರವಣಿಗೆಯ ಶೈಲಿ ಅತ್ಯಂತ ತೀಕ್ಷ್ಣವಾಗಿದ್ದು, ಓದುಗರನ್ನು ಸೆಳೆದುಕೊಳ್ಳುವಂತಿದೆ. ತನಿಖಾ ಪತ್ರಕರ್ತನಿಗೆ ಇರಬೇಕಾದ ಪುರಾವೆ-ಆಧಾರಿತ ವಸ್ತುನಿಷ್ಠತೆ ಮತ್ತು ಸಂತ್ರಸ್ತೆಯ ಕಡೆಗಿನ ಅಪಾರ ಮಾನವೀಯ ಸಹಾನುಭೂತಿಯನ್ನು ಅವರು ಇಲ್ಲಿ ಅತ್ಯಂತ ಸಮತೋಲನದಿಂದ ಕಾಯ್ದುಕೊಂಡಿದ್ದಾರೆ. ಪುಸ್ತಕದುದ್ದಕ್ಕೂ ಬರುವ ಅವರ ವೈಯಕ್ತಿಕ ಡೈರಿ ನೋಟ್ಸ್‌ಗಳು, ತನಿಖಾ ಅಧಿಕಾರಿಗಳೊಂದಿಗಿನ ಸಂಭಾಷಣೆಗಳು ಮತ್ತು ನ್ಯಾಯಾಲಯದ ಒಳಗೆ ನಡೆದ ಘಟನೆಗಳ ವಿವರಣೆಗಳು ಓದುಗರಿಗೆ ಆ ಘಟನಾ ಸ್ಥಳದಲ್ಲೇ ಇರುವಂತಹ ಅನುಭವವನ್ನು ನೀಡುತ್ತವೆ. ಜಟಿಲವಾದ ಕಾನೂನು ಪ್ರಕ್ರಿಯೆಗಳನ್ನು ಸಾಮಾನ್ಯ ಓದುಗರಿಗೂ ಅರ್ಥವಾಗುವ ಅತ್ಯಂತ ಸರಳ ಭಾಷೆಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, 'ಅವಳ್ಕೊಪ್ಪಂ' ಕೃತಿ ಸಂತ್ರಸ್ತೆಯ ಹೋರಾಟದ ಕಥೆಯ ಜತೆಗೆ ಮಲಯಾಳಂ ಸಿನಿಮಾ ಜಗತ್ತು, ಹಣದ ಪ್ರಭಾವ ಮತ್ತು ರಾಜಕಾರಣದ ನಡುವಿನ ಜಟಿಲ ಹಾಗೂ ಕರಾಳ ಸಂಬಂಧಗಳ ಬಗ್ಗೆಯೂ ಹೇಳುತ್ತದೆ. ನ್ಯಾಯಕ್ಕಾಗಿ ಹೋರಾಡುತ್ತಿರುವಾಗ ಸಂತ್ರಸ್ತೆಯ ಜತೆಗೆ ನಿಂತು ಆಕೆಗೆ ಧೈರ್ಯ ತುಂಬಿದ ಒಬ್ಬ ಸಹೋದರನಂತೆ ಇಲ್ಲಿ ರೋಷಿಪಾಲ್ ಕಾಣುತ್ತಾರೆ. ಈ ಪ್ರಕರಣದಲ್ಲಿ 2025ರಲ್ಲಿ ದಿಲೀಪ್ ಖುಲಾಸೆಯಾದಾಗ ಕೋರ್ಟ್ ಆವರಣದಲ್ಲಿ ಅವರ ಅಭಿಮಾನಿಗಳು ಸಿಹಿತಿಂಡಿ ಹಂಚಿ, ರೋಷಿಪಾಲ್ ಅವರನ್ನು ತೀವ್ರವಾಗಿ ಲೇವಡಿ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲೇ ವರದಿಗಾರಿಕೆ ಮಾಡುತ್ತಿದ್ದ ರೋಷಿಪಾಲ್ ಮತ್ತೆ ಮತ್ತೆ ಹೇಳಿದ್ದು, "ನಾವು ಅವಳೊಂದಿಗೆ ಇದ್ದೇವೆ (ಅವಳ್ಕೊಪ್ಪಮಾಣ್), ನಾವು ಎಂದಿಗೂ ಸಂತ್ರಸ್ತೆಯ ಪರವಾಗಿಯೇ ಇದ್ದೇವೆ" ಎಂಬುದಾಗಿತ್ತು. ಈ ಬದ್ಧತೆಯೇ ಇಡೀ ಕೃತಿಗೆ ಒಂದು ವಿಶಿಷ್ಟವಾದ ತೂಕವನ್ನು ತಂದುಕೊಟ್ಟಿದೆ.