×
Ad

ಹವಾಮಾನ ವೈಪರೀತ್ಯ ತೀವ್ರಗೊಳ್ಳುತ್ತಿದ್ದರೂ ಭಾರತದಲ್ಲಿ ಬಿಸಿಗಾಳಿಯಿಂದ ಸಂಭವಿಸಿದ ಸಾವಿನ ನಿಖರ ಲೆಕ್ಕ ಸಿಗದಿರುವುದೇಕೆ?

Update: 2026-07-07 21:38 IST

Photo Credit : PTI 

ಯುರೋಪ್ ಜೂನ್ ತಿಂಗಳಲ್ಲಿ ತನ್ನ ಅತ್ಯಂತ ಭೀಕರ ಬಿಸಿಗಾಳಿಗೆ ಸಾಕ್ಷಿಯಾಗಿದ್ದು, ಫ್ರಾನ್ಸ್, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್‌ನಲ್ಲಿ ಅಂದಾಜು 3,700ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ಸಂಭವಿಸಿವೆ. ಜೂನ್ 20ರಿಂದ 28ರವರೆಗೆ ಮುಂದುವರಿದಿದ್ದ ಈ ಬಿಸಿಗಾಳಿಯು ಯುರೋಪ್ ಇತಿಹಾಸದಲ್ಲೇ ಅತ್ಯಂತ ಕೆಟ್ಟದಾಗಿದ್ದು, ತಾಪಮಾನದ ಏರಿಕೆಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಮೂಲಸೌಕರ್ಯಗಳಿಗೆ ಹಾನಿಯಾಗಿತ್ತು. ಅಷ್ಟೇ ಅಲ್ಲದೆ, ಅಲ್ಲಿನ ಆರೋಗ್ಯ ವ್ಯವಸ್ಥೆಯೂ ಸಂಪೂರ್ಣವಾಗಿ ಕೆಟ್ಟು ಹೋಗಿತ್ತು. ಈ ತೀವ್ರತರವಾದ ಬಿಸಿಲಿಗೆ ಹವಾಮಾನ ವೈಪರೀತ್ಯವೇ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಫುಟ್‌ಬಾಲ್ ವಿಶ್ವಕಪ್‌ನ ಸಹ ಆತಿಥ್ಯ ವಹಿಸಿರುವ ಅಮೆರಿಕ ಕೂಡ ಭೀಕರ ಬಿಸಿಗಾಳಿಯನ್ನು ಎದುರಿಸುತ್ತಿದೆ. ವಾತಾವರಣದಲ್ಲಿ ಬಿಸಿ ಗಾಳಿಯು ದೀರ್ಘಕಾಲದವರೆಗೆ ಒಂದೇ ಕಡೆ ಉಳಿದುಕೊಳ್ಳುವ 'ಹೀಟ್ ಡೋಮ್' ಪರಿಸ್ಥಿತಿಯೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜುಲೈ ನಾಲ್ಕರ ವಾರಾಂತ್ಯದ ಅವಧಿಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ.

ಪಾಶ್ಚಿಮಾತ್ಯ ದೇಶಗಳ ಈ ಬಿಸಿಗಾಳಿಯು ಭಾರತದ ಪರಿಸ್ಥಿತಿಯೊಂದಿಗೆ ಹೋಲಿಸಿದರೆ ಭಾರತದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗಿದ್ದು, ದೀರ್ಘಕಾಲ ಇರುತ್ತದೆ ಮತ್ತು ಪ್ರತಿ ವರ್ಷ ಕೋಟ್ಯಂತರ ಜನರು ಇದಕ್ಕೆ ತುತ್ತಾಗುತ್ತಾರೆ. ಯುರೋಪ್‌ನಂತೆ ತೀವ್ರ ತಾಪಮಾನದ ಅವಧಿಯಲ್ಲಿ ಸಂಭವಿಸುವ ಹೆಚ್ಚುವರಿ ಸಾವುಗಳನ್ನು ಅಂದಾಜಿಸುವ ಸಮಗ್ರ ವ್ಯವಸ್ಥೆ ಭಾರತದಲ್ಲಿ ಇಂದಿಗೂ ಇಲ್ಲ. ಇದರಿಂದಾಗಿ ಹೆಚ್ಚುತ್ತಿರುವ ತಾಪಮಾನಕ್ಕೆ ಬಲಿಯಾಗುತ್ತಿರುವ ಜನರ ನಿಖರವಾದ ಸಂಖ್ಯೆ ಯಾರಿಗೂ ತಿಳಿಯುವುದೂ ಇಲ್ಲ.

►ಭಾರತದಲ್ಲಿ ಬಿಸಿಗಾಳಿಯಿಂದ ಉಂಟಾದ ಸಾವಿನ ನಿಖರ ಲೆಕ್ಕ ಪತ್ತೆ ಹಚ್ಚುವುದು ಕಷ್ಟವೇಕೆ?

ಸಾವು ಸಂಭವಿಸಿದಾಗ ಬಿಸಿಲನ್ನು ಸಾವಿನ ಕಾರಣ ಎಂದು ಗುರುತಿಸುವುದು ತೀರಾ ವಿರಳ ಮತ್ತು ಮರಣ ಪ್ರಮಾಣಪತ್ರದಲ್ಲಿ ಇದು ದಾಖಲಾಗುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಬಿಸಿಗಾಳಿಯನ್ನು ಕೇವಲ ಒಂದು ಪ್ರಚೋದಕ ಅಂಶವಾಗಿ ನೋಡಲಾಗುತ್ತದೆಯೇ ಹೊರತು ನೇರ ಕಾರಣವೆಂದಲ್ಲ. ಬಿಸಿಲಿನಿಂದಾಗಿ ಮೃತಪಡುವ ಜನರು ಸಾಮಾನ್ಯವಾಗಿ ಬೇರೆ ಕಾಯಿಲೆಗಳನ್ನು ಹೊಂದಿರುತ್ತಾರೆ. ತೀವ್ರವಾದ ಬಿಸಿಲು ಈ ಕಾಯಿಲೆಗಳನ್ನು ಮತ್ತಷ್ಟು ಉಲ್ಬಣಗೊಳಿಸುವ ಗುಪ್ತ ಪ್ರಚೋದಕವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, ಅತಿಯಾದ ಶಾಖದಿಂದಾಗಿ ದುರ್ಬಲ ಹೃದಯದ ಮೇಲೆ ಒತ್ತಡ ಬಿದ್ದು ಸಾವು ಸಂಭವಿಸಿದರೆ, ಮರಣ ಪ್ರಮಾಣಪತ್ರದಲ್ಲಿ 'ಹೃದಯಾಘಾತ' ಎಂದೇ ದಾಖಲಿಸಲಾಗುತ್ತದೆ.

ಬಿಸಿಲಿನಿಂದಾಗುವ ಸಾವಿಗೆ ನೀಡಲಾಗಿರುವ ಅತ್ಯಂತ ಸೀಮಿತ ವ್ಯಾಖ್ಯಾನವೇ ಈ ಗೊಂದಲಕ್ಕೆ ಪ್ರಮುಖ ಕಾರಣ. ಸದ್ಯದ ಅಧಿಕೃತ ಡೇಟಾ ಪ್ರಕಾರ, ಕೇವಲ ಬಿಸಿಲಾಘಾತದಿಂದ ಸಂಭವಿಸಿದ ಸಾವುಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿದೆಯೇ ಹೊರತು, ಬಿಸಿಲಿನಿಂದ ಉಂಟಾಗುವ ಇತರ ಆರೋಗ್ಯ ಸಮಸ್ಯೆಗಳಿಂದಾಗುವ ಸಾವುಗಳನ್ನಲ್ಲ. ಇದರೊಂದಿಗೆ, ಇನ್ನೂ ಡಿಜಿಟಲ್ ರೂಪಕ್ಕೆ ಬಾರದ ಗ್ರಾಮೀಣ ದಾಖಲೆಗಳು ಮತ್ತು ದೇಶದ ಒಟ್ಟು ಆರೋಗ್ಯ ಸೇವೆಯ ಮೂರನೇ ಎರಡರಷ್ಟು ಪಾಲನ್ನು ಹೊಂದಿರುವ ಖಾಸಗಿ ಆರೋಗ್ಯ ವಲಯದ ದತ್ತಾಂಶಗಳು ಈ ಅಧಿಕೃತ ಲೆಕ್ಕದಲ್ಲಿ ಸೇರುವುದಿಲ್ಲ. ಹಾಗಾಗಿ, ಬೇರೆ ಬೇರೆ ಮೂಲಗಳು ತಮ್ಮದೇ ಆದ ವ್ಯಾಖ್ಯಾನಗಳ ಮೂಲಕ ನೀಡುವ ಅಂದಾಜುಗಳಲ್ಲಿ ಭಾರೀ ವ್ಯತ್ಯಾಸಗಳು ಕಂಡುಬರುತ್ತವೆ.

ದತ್ತಾಂಶಗಳನ್ನು ನಿಖರವಾಗಿ ಪತ್ತೆಹಚ್ಚುವುದು ಮತ್ತು ನಿರ್ದಿಷ್ಟ ದಿನದ ತಾಪಮಾನಕ್ಕೆ ಅನುಗುಣವಾಗಿ ಬಿಸಿಲಿನ ಸಾವುಗಳನ್ನು ಹೋಲಿಕೆ ಮಾಡುವುದರಿಂದ ನೀತಿ ನಿರೂಪಕರಿಗೆ ಬಲವಾದ ಸಾಕ್ಷ್ಯಗಳು ಸಿಗುತ್ತವೆ. ಇದು ಬಿಸಿಗಾಳಿಯ ಸಾವುಗಳನ್ನು ಕಡಿಮೆ ಮಾಡಲು ಸೂಕ್ತವಾದ ಶಾಖ ನಿರ್ವಹಣಾ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಯುರೋಪಿಯನ್ನರಿಗಿಂತ ಭಾರತೀಯರು ಅತಿಯಾದ ಶಾಖಕ್ಕೆ ಹೆಚ್ಚು ಒಗ್ಗಿಕೊಂಡಿದ್ದಾರೆ ಎಂಬ ಸಾಮಾನ್ಯ ನಂಬಿಕೆಯಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಕೋನದಿಂದ ಇದು ಎಷ್ಟು ನಿಜ?

ಈ ನಂಬಿಕೆ ಸಂಪೂರ್ಣವಾಗಿ ನಿಜವಲ್ಲ. ಭಾರತೀಯರು ಜೈವಿಕವಾಗಿ ಬಿಸಿಲಿಗೆ ತಕ್ಕಂತೆ ವಿಕಸನಗೊಂಡಿಲ್ಲ ಆದರೆ, ಕಾಲಾನಂತರದಲ್ಲಿ ಅದಕ್ಕೆ ಹೊಂದಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ.

ಭಾರತವು ಇತಿಹಾಸದಿಂದಲೂ ಉಷ್ಣ ಹವಾಮಾನವನ್ನು ಹೊಂದಿದೆ. ಹೀಗಾಗಿ, ಬಿಸಿಲು ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದ್ದು, ಅದಕ್ಕೆ ತಕ್ಕಂತೆ ಇಲ್ಲಿನ ಹವ್ಯಾಸಗಳು ಮತ್ತು ಮೂಲಸೌಕರ್ಯಗಳು ಬೆಳೆದುಬಂದಿವೆ. ಗಾಳಿಯಾಡುವ ಮನೆಗಳ ವಿನ್ಯಾಸ, ಕೂಲರ್‌ಗಳು, ಫ್ಯಾನ್‌ಗಳು, ಹೆಚ್ಚುತ್ತಿರುವ ಹವಾನಿಯಂತ್ರಣ ವ್ಯವಸ್ಥೆ ಹಾಗೂ ಮಣ್ಣಿನ ಮಡಕೆಗಳಂತಹ ಸಾಂಪ್ರದಾಯಿಕ ತಂಪಾಗಿಸುವ ವಿಧಾನಗಳು ಇದರಲ್ಲಿ ಸೇರಿವೆ.

ಇನ್ನೊಂದೆಡೆ, ಯುರೋಪ್ ಎಂದಿಗೂ ಬಿಸಿಲಿಗೆ ತಕ್ಕಂತೆ ನಿರ್ಮಾಣಗೊಂಡ ದೇಶವಲ್ಲ. ಅಲ್ಲಿನ ಹವಾಮಾನವು ಹೊಂದಿಕೊಳ್ಳುವ ವೇಗಕ್ಕಿಂತಲೂ ಹೆಚ್ಚು ವೇಗವಾಗಿ ಈಗ ತಾಪಮಾನ ಏರುತ್ತಿದೆ. ಇದೇ ಕಾರಣಕ್ಕೆ ಯುರೋಪಿನ ಬಿಸಿಗಾಳಿಗಳು ಅತ್ಯಂತ ಭೀಕರವಾಗಿ ಪರಿಣಮಿಸುತ್ತಿವೆ.

ಕೇವಲ ಜೈವಿಕ ವಿಕಸನವು ಬಿಸಿಲಿನ ವಿರುದ್ಧ ಹೆಚ್ಚಿನ ರಕ್ಷಣೆ ನೀಡುವುದಿಲ್ಲ. ಇಲ್ಲಿ ಕೇವಲ ತಾಪಮಾನದ ಸಂಖ್ಯೆಯಷ್ಟೇ ಸಂಪೂರ್ಣ ಚಿತ್ರಣವನ್ನು ನೀಡುವುದಿಲ್ಲ. ಆದ್ದರಿಂದಲೇ ಈಗಿನ ಹವಾಮಾನ ಮುನ್ಸೂಚನೆಗಳು ನಮಗೆ ಭಾಸವಾಗುವ ತಾಪಮಾನವನ್ನು ವರದಿ ಮಾಡುತ್ತವೆ.

ಇದರಲ್ಲಿ ಮುಖ್ಯವಾದ ಮತ್ತೊಂದು ಅಂಶವೆಂದರೆ 'ವೆಟ್-ಬಲ್ಬ್' ತಾಪಮಾನ. ಇದು ಬಿಸಿಲಿನ ಜೊತೆಗೆ ಗಾಳಿಯಲ್ಲಿನ ತೇವಾಂಶವನ್ನೂ ಅಳೆಯುತ್ತದೆ. ದೇಹವನ್ನು ತಂಪಾಗಿಸುವ ನೈಸರ್ಗಿಕ ಪ್ರಕ್ರಿಯೆಯಾದ ಬೆವರು ಆವಿಯಾಗಬೇಕಾದರೆ ವಾತಾವರಣವು ಒಣಗಿರಬೇಕು. ಆದರೆ ತೇವಾಂಶ ಹೆಚ್ಚಾದಾಗ ಬೆವರು ಆವಿಯಾಗುವುದು ಕಡಿಮೆಯಾಗುತ್ತದೆ. ಆದ್ದರಿಂದ, ಒಣ ಹವಾಮಾನಕ್ಕೆ ಹೋಲಿಸಿದರೆ ತೇವಾಂಶವಿರುವ ಕರಾವಳಿ ಪ್ರದೇಶಗಳಲ್ಲಿ ಅದೇ ತಾಪಮಾನವು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಬಿಸಿಲಿಗೆ ಎಷ್ಟೇ ಹೊಂದಿಕೊಂಡಿದ್ದರೂ ಸಹ, 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ವೆಟ್-ಬಲ್ಬ್ ತಾಪಮಾನಕ್ಕೆ ದೀರ್ಘಕಾಲ ಸಿಲುಕುವುದು ಪ್ರಾಣಕ್ಕೇ ಕುತ್ತು ತರಬಹುದು.

►ಇಂದು ಭಾರತದಲ್ಲಿ ಬಿಸಿಗಾಳಿಗೆ ಹೆಚ್ಚು ತುತ್ತಾಗುವ ಜನ ಯಾರು?

ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರು ತಾಪಮಾನ ಏರಿಕೆಯಿಂದ ನೇರವಾಗಿ ತೊಂದರೆಗೆ ಒಳಗಾಗುವ ಅತ್ಯಂತ ಅಪಾಯದ ವಲಯದಲ್ಲಿದ್ದಾರೆ. ರೈತರು, ಕಟ್ಟಡ ಕಾರ್ಮಿಕರು, ದಿನಗೂಲಿ ನೌಕರರು, ಬೀದಿಬದಿ ವ್ಯಾಪಾರಿಗಳು ಮತ್ತು ಡೆಲಿವರಿ ಬಾಯ್ಸ್ ಈ ಪಟ್ಟಿಯಲ್ಲಿ ಪ್ರಮುಖರು. ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ವಿಷಯವೆಂದರೆ, ಇವರೆಲ್ಲರೂ ಕಡಿಮೆ ಆದಾಯದ ಗುಂಪಿಗೆ ಸೇರಿದವರಾಗಿದ್ದು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವುದರಿಂದ ಯಾವುದೇ ಸುರಕ್ಷತಾ ನಿಯಮಗಳ ವ್ಯಾಪ್ತಿಗೆ ಬರುವುದಿಲ್ಲ. ವೇತನ ಸಹಿತ ರಜೆ ಇಲ್ಲದ ಕಾರಣ ಮತ್ತು ದಿನದ ಕೂಲಿ ಕಳೆದುಕೊಳ್ಳಲು ಸಾಧ್ಯವಿಲ್ಲದ ಕಾರಣ, ಇಂತಹ ಕಾರ್ಮಿಕರು ಯಾವುದೇ ರಕ್ಷಣೆಯಿಲ್ಲದೆ ಅಪಾಯಕಾರಿ ಬಿಸಿಲಿನಲ್ಲೇ ಕೆಲಸ ಮಾಡಲು ಅನಿವಾರ್ಯವಾಗಿ ಒತ್ತಾಯಿಸಲ್ಪಡುತ್ತಾರೆ.

ಸಂಶೋಧನೆಗಳ ಪ್ರಕಾರ ಹಸುಗೂಸುಗಳು, ವೃದ್ಧರು, ಗರ್ಭಿಣಿಯರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಬಿಸಿಗಾಳಿಯಿಂದಾಗುವ ಸಾವಿನ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ.

ಭೌಗೋಳಿಕವಾಗಿಯೂ ಈ ಅಪಾಯ ಕೆಲವು ಕಡೆ ಕೇಂದ್ರಿಕೃತವಾಗಿದೆ. 2026ರ ಮರಣ ಪ್ರಮಾಣ ಕುರಿತ ಅಧ್ಯಯನವೊಂದರ ಪ್ರಕಾರ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಈ ಐದು ರಾಜ್ಯಗಳಲ್ಲೇ ದೇಶದ ಒಟ್ಟು ಬಿಸಿಗಾಳಿಯಿಂದ ಉಂಟಾದ ಸಾವುಗಳ ಶೇಕಡಾ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಬಡತನವೇ ಇದಕ್ಕೆಲ್ಲಾ ಮೂಲ ಕಾರಣ. ತಂಪು ವಾತಾವರಣ ಅಥವಾ ವಿಶ್ರಾಂತಿಯನ್ನು ಕೊಂಡುಕೊಳ್ಳಲು ಆರ್ಥಿಕ ಶಕ್ತಿಯಿಲ್ಲದವರೇ ಇಲ್ಲಿ ಅತಿ ದೊಡ್ಡ ಅಪಾಯವನ್ನು ಎದುರಿಸುತ್ತಿದ್ದಾರೆ.

►ಕಳೆದ ದಶಕದಲ್ಲಿ ಭಾರತದ ವಿವಿಧ ನಗರ ಮತ್ತು ರಾಜ್ಯಗಳಲ್ಲಿ 'ಶಾಖ ನಿಯಂತ್ರಣ ಯೋಜನೆಗಳನ್ನು' (HAPs) ಹೆಚ್ಚಾಗಿ ಅಳವಡಿಸಿಕೊಳ್ಳಲಾಗಿದೆ. ಈ ಪ್ರಯತ್ನಗಳಿಂದ ನಾವು ಕಲಿತ ಪಾಠಗಳೇನು?

ಭಾರತದಲ್ಲಿ ಈಗ ಹಲವಾರು ಶಾಖ ನಿಯಂತ್ರಣ ಯೋಜನೆಗಳು ಜಾರಿಯಲ್ಲಿವೆ. ಇವುಗಳಲ್ಲಿ ಮುಂಚೂಣಿ ಮುನ್ಸೂಚನೆ ವ್ಯವಸ್ಥೆಗಳು, ತಂಪು ಕೇಂದ್ರಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು ಹಾಗೂ ಶಾಲೆ ಮತ್ತು ಹೊರಾಂಗಣ ಕೆಲಸದ ಸಮಯದ ಬದಲಾವಣೆಗಳು ಸೇರಿವೆ. ಈ ವಿಧಾನವು ಹೆಚ್ಚು ಪರಿಣಾಮಕಾರಿಯಾಗಿದ್ದು, ಕಡಿಮೆ ವೆಚ್ಚದ್ದಾಗಿದೆ. 2013ರಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಅಹಮದಾಬಾದ್‌ ನ ಶಾಖ ನಿಯಂತ್ರಣ ಯೋಜನೆಯ ಮೌಲ್ಯಮಾಪನದ ಪ್ರಕಾರ, ಇದರಿಂದ ವರ್ಷಕ್ಕೆ 1,000ಕ್ಕೂ ಹೆಚ್ಚು ಸಾವುಗಳನ್ನು ತಡೆಯಲಾಗಿದೆ ಎಂದು ಅಂದಾಜಿಸಲಾಗಿದೆ.

ಇದರೊಂದಿಗೆ, 'ಪ್ಯಾರಾಮೆಟ್ರಿಕ್ ಹೀಟ್ ಇನ್ಶೂರೆನ್ಸ್'ನಂತಹ ಹೊಸ ತಂತ್ರಜ್ಞಾನದ ಆಸ್ತ್ರಗಳೂ ಮುಂಚೂಣಿಗೆ ಬರುತ್ತಿವೆ. ಮಹಿಳಾ ಕಾರ್ಮಿಕರಿಗಾಗಿ 'ಸೇವಾ' (SEWA) ಸಂಸ್ಥೆಯು ತಂದಿರುವ ಇಂತಹ ಒಂದು ವಿಮಾ ಯೋಜನೆಯು, ಸತತ ಮೂರು ದಿನ ತಾಪಮಾನವು ನಿಗದಿತ ಮಿತಿಗಿಂತ ಹೆಚ್ಚಾದಾಗ ಕಾರ್ಮಿಕರ ಆ ದಿನದ ವೇತನ ನಷ್ಟವನ್ನು ಭರಿಸುತ್ತದೆ. ಈ ಕಾರ್ಯಕ್ರಮವು ದೇಶದ 22 ಜಿಲ್ಲೆಗಳ ಸುಮಾರು 50,000 ಮಹಿಳೆಯರನ್ನು ತಲುಪಿದೆ.

ಇಲ್ಲಿರುವ ಅತಿ ದೊಡ್ಡ ಲೋಪವೆಂದರೆ ಯೋಜನೆಗಳ ಅನುಷ್ಠಾನ. ಬಿಸಿಲಿನ ಮುನ್ಸೂಚನೆಯ ಮುನ್ನೆಚ್ಚರಿಕೆಗಳು ಬಂದ ತಕ್ಷಣ ದಿನಗೂಲಿ ಕಾರ್ಮಿಕರು ತಮ್ಮ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ, ಏಕೆಂದರೆ ಅದು ಅವರ ಜೀವನೋಪಾಯದ ಪ್ರಶ್ನೆಯಾಗಿರುತ್ತದೆ. ಆದ್ದರಿಂದ, ಮುನ್ನೆಚ್ಚರಿಕೆಗಳ ಜೊತೆಗೆ ತಳಮಟ್ಟದಲ್ಲಿ ಕಡ್ಡಾಯ ನಿಯಮಗಳನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಬಿಸಿಲಿನ ಸಾವುಗಳನ್ನು ಕಡಿಮೆ ಮಾಡಲು, ಇಂಗಾಲದ ಡೈಆಕ್ಸೈಡ್‌ಗಿಂತಲೂ ಅತ್ಯಂತ ಕಡಿಮೆ ಅವಧಿಯಲ್ಲಿ ಭೂಮಿಯನ್ನು ಸಾವಿರಾರು ಪಟ್ಟು ಹೆಚ್ಚು ಬಿಸಿ ಮಾಡುವ 'ಬ್ಲ್ಯಾಕ್ ಕಾರ್ಬನ್'ನಂತಹ ಅಲ್ಪಾವಧಿ ಹವಾಮಾನ ಮಾಲಿನ್ಯಕಾರಕಗಳನ್ನು ನಿಯಂತ್ರಿಸಬೇಕಾಗಿದೆ. ಇಂತಹ ಕ್ರಮಗಳು ಕೇವಲ ಬಿಸಿಲಿನ ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಬದಲಿಗೆ, ಶಾಖದ ಒತ್ತಡದ ಮೂಲ ಕಾಯಿಲೆಯನ್ನು ಗುಣಪಡಿಸಲು ಸಹಾಯ ಮಾಡುತ್ತವೆ.

►ಹವಾಮಾನ ವೈಪರೀತ್ಯದಿಂದಾಗಿ ಬಿಸಿಗಾಳಿಯ ತೀವ್ರತೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಭಾರತವು ಮುಂದಿನ ದಶಕದಲ್ಲಿ ಯಾವ ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಭಾರತದಲ್ಲಿ ಬಿಸಿಲನ್ನು ಹೆಚ್ಚಾಗಿ ಕೇವಲ ಒಂದು ಆಯಾ ಕಾಲದ ಸಮಸ್ಯೆ ಎಂದೇ ನೋಡಲಾಗುತ್ತಿದೆ. ಪ್ರವಾಹ ಮತ್ತು ಚಂಡಮಾರುತಗಳಂತೆ ಇದನ್ನು ಭಾರತದ ವಿಪತ್ತು ಕಾನೂನಿನಡಿಯಲ್ಲಿ ಇಂದಿಗೂ 'ಅಧಿಕೃತ ವಿಪತ್ತು' ಎಂದು ಘೋಷಿಸಿಲ್ಲ. ಇದರಿಂದಾಗಿ ಬಿಸಿಗಾಳಿಯ ನಿರ್ವಹಣೆಗೆ ನಿರ್ದಿಷ್ಟ ಪರಿಹಾರ ನಿಧಿ ಸಿಗುತ್ತಿಲ್ಲ. ಬಿಸಿಲನ್ನು ನಿರಂತರ ಸಾರ್ವಜನಿಕ ಆರೋಗ್ಯದ ಆಪತ್ತು ಎಂದು ಪರಿಗಣಿಸುವುದೆಂದರೆ ಬಿಸಿಲಿನ ಸಾವುಗಳ ನಿಖರ ವ್ಯಾಖ್ಯಾನ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವುದು. ಧನಸಹಾಯದ ಯೋಜನೆಗಳಿಗೆ ಸಕ್ರಿಯವಾಗಿ ಆದ್ಯತೆ ನೀಡುವುದು, ಹೊರಾಂಗಣ ಕಾರ್ಮಿಕರಿಗೆ ವಿಶ್ರಾಂತಿ ಮತ್ತು ನೀರಿನ ಸೌಲಭ್ಯವನ್ನು ಖಚಿತಪಡಿಸುವುದು ಹಾಗೂ ನಗರಗಳಲ್ಲಿ ನೆರಳು, ಮರಗಳು ಮತ್ತು ಸೂರ್ಯನ ಶಾಖವನ್ನು ಪ್ರತಿಫಲಿಸುವ ಛಾವಣಿಗಳ ಮೂಲಕ ನಗರಗಳನ್ನು ತಂಪಾಗಿಸುವುದಾಗಿದೆ.

ಭಾರತವು ಮತ್ತೊಂದು ಮಾರ್ಗವನ್ನೂ ಅನುಸರಿಸಬಹುದು. ಅದುವೇ ಅಲ್ಪಾವಧಿ ಹವಾಮಾನ ಮಾಲಿನ್ಯಕಾರಕಗಳನ್ನು ಕಡಿತಗೊಳಿಸುವುದು. ಇವು ಇಂಗಾಲದ ಡೈಆಕ್ಸೈಡ್‌ಗಿಂತ ಹಲವು ಪಟ್ಟು ಹೆಚ್ಚು ಭೂಮಿಯನ್ನು ಬಿಸಿ ಮಾಡುತ್ತವೆಯಾದರೂ, ವಾತಾವರಣದಲ್ಲಿ ಕೇವಲ ಕಡಿಮೆ ಅವಧಿಯವರೆಗೆ ಮಾತ್ರ ಉಳಿಯುತ್ತವೆ. ಆದ್ದರಿಂದ, ಇವುಗಳನ್ನು ಕಡಿಮೆ ಮಾಡುವುದರಿಂದ ಶತಮಾನಗಳವರೆಗೆ ಕಾಯುವ ಅಗತ್ಯವಿಲ್ಲದೆ, ಕೆಲವೇ ವರ್ಷಗಳಲ್ಲಿ ಭೂಮಿಯ ತಾಪಮಾನ ಏರಿಕೆಯ ವೇಗವನ್ನು ತಗ್ಗಿಸಬಹುದು. ಯುಎನ್‌ಇಪಿ-ಡಬ್ಲ್ಯೂಎಂಒ ಮೌಲ್ಯಮಾಪನದ ಪ್ರಕಾರ, ಈ ಮಾಲಿನ್ಯಕಾರಕಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಂಡರೆ 2050ರ ವೇಳೆಗೆ ಸುಮಾರು 0.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯನ್ನು ತಡೆಯಬಹುದು. ಇದರರ್ಥ ಕೋಟ್ಯಂತರ ಬಿಸಿಲಿನ ಸಾವುಗಳನ್ನು ತಪ್ಪಿಸಬಹುದಾಗಿದೆ. ಆದ್ದರಿಂದ, ಹವಾಮಾನ ಸ್ನೇಹಿ ರೆಫ್ರಿಜರೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಬ್ಲ್ಯಾಕ್ ಕಾರ್ಬನ್ ಅನ್ನು ನಿಯಂತ್ರಿಸುವುದರಿಂದ ನಮ್ಮ ಜೀವಿತಾವಧಿಯಲ್ಲೇ ದೊಡ್ಡ ಪರಿಹಾರವನ್ನು ಕಾಣಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News